ದ್ವಿತೀಯ ಪಿಯುಸಿ ಕನ್ನಡ ಪಗೆಯಂ ಬಾಲಕನೆಂಬರೇ ನೋಟ್ಸ್ | 2nd Puc Kannada Pageyam Balakanembare Notes

ದ್ವಿತೀಯ ಪಿಯುಸಿ ಕನ್ನಡ ಪಗೆಯಂ ಬಾಲಕನೆಂಬರೇ ನೋಟ್ಸ್ ಪ್ರಶ್ನೋತ್ತರಗಳು, 2nd Puc Pageyam BalakanembareKannada Notes Question and Answer Summery Guide Extract Mcq Pdf Download in Kannada Medium Karnataka State Syllabus 2025 ಪಗೆಯಂ ಬಾಲಕನೆಂಬರೇ ಭಾವಾರ್ಥ pageyam balakanembare kannada question answer ಪಗೆಯಂ ಬಾಲಕನೆಂಬರೇ Question answer pageyam balakanembare kannada 2nd puc pageyam balakanembare summary in kannada pdf download kseeb solutions for class 12 kannada poem 4 notes ಪಗೆಯಂ ಬಾಲಕನೆಂಬರೇ summary 2nd PUC Kannada notes ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ pdf Kannada 2nd PUC Notes.

೦೪. ಪಗೆಯಂ ಬಾಲಕನೆಂಬರೇ

– ಪುಲಿಗೆರೆ ಸೋಮನಾಥ

Pageyam Balakanembare
Pageyam Balakanembare

ಕವಿ ಪರಿಚಯ

ಧಾರವಾಡ ಜಿಲ್ಲೆಯ ‘ಪುಲಿಗೆರೆ’ ಎಂಬ ಊರಿನ ಸೋಮನಾಥನು ಪುಲಿಗೆರೆ ಸೋಮನಾಥನೆಂದೇ ಖ್ಯಾತನಾಗಿದ್ದಾನೆ. ಪುಲಿಗೆರೆಯು ಈಗ ಲಕ್ಷ್ಮೇಶ್ವರ ಎಂಬ ಹೆಸರನ್ನು ಹೊಂದಿದೆ. ಹದಿನಾರನೇ ಶತಮಾನದಲ್ಲಿದ್ದ ಈ ಕವಿಯು ಪುಲಿಗೆರೆಯ ಸೋಮೇಶ್ವರನ ಮಹಾಭಕ್ತನಾಗಿದ್ದನು. ಆದ್ದರಿಂದಲೇ ತನ್ನ ಪ್ರತಿ ಪದ್ಯಗಳ ಕೊನೆಯಲ್ಲಿ ‘ಹರಹರಾ ಶ್ರೀಚೆನ್ನಸೋಮೇಶ್ವರ’ ಎಂಬ ಅಂಕಿತವನ್ನು ಕಾಣಿಸಿದ್ದಾನೆ. ಈತ ರಚಿಸಿರುವ ಕಾವ್ಯಕ್ಕೂ ‘ಸೋಮೇಶ್ವರ ಶತಕ’ ಎಂಬ ಹೆಸರನ್ನೇ ಇರಿಸಿದ್ದಾನೆ. ಕನ್ನಡ ಶತಕ ಸಾಹಿತ್ಯದಲ್ಲೇ ಸೋಮನಾಥನ ಈ ಕೃತಿಗೆ ಅತ್ಯಂತ ಮಹತ್ತ್ವದ ಸ್ಥಾನವಿದೆ. ಇದರ ಅನೇಕ ಪದ್ಯಗಳು ಜನಸಾಮಾನ್ಯರ ಬಾಯಿಯಲ್ಲಿ ನಲಿದಾಡುತ್ತಿರುತ್ತವೆ. ನೀತಿಬೋಧೆ, ಸ್ವತಂತ್ರ ಲೋಕಾನುಭವ, ಸ್ಪೋಪಜ್ಞತೆಯಿಂದ ಈ ಪದ್ಯಗಳು ಮನಸೆಳೆಯುತ್ತವೆ.

ಆಕರ: ‘ಸೋಮೇಶ್ವರ ಶತಕ’.

(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು

೧. ಕೆಲವಂ ಬಲ್ಲವರಿಂದ ಕಲ್ತು.

ಪುಲಿಗೆರೆ ಸೋಮನಾಥನು ರಚಿಸಿರುವ ‘ಸೋಮೇಶ್ವರ ಶತಕ’ದ ಪದ್ಯವಾದ ‘ಪಗೆಯಂ ಬಾಲಕನೆಂಬರೇ’ದ ಆರಂಭದ ಮಾತುಗಳಿವು. ಮನುಷ್ಯ ತಿಳಿವಳಿಕೆಯ ಮೂಲಕ ಸರ್ವಜ್ಞತೆಯನ್ನು ಹೊಂದಬೇಕು. ಹಲವು ಹಳ್ಳಗಳು ಸೇರಿ ಸಮುದ್ರವಾಗುವಂತೆ ಹಲವು ಮೂಲಗಳಿಂದ ವಿಚಾರವನ್ನು ತಿಳಿದುಕೊಳ್ಳಬೇಕೆಂಬುದನ್ನು ವಿವರಿಸುತ್ತಾ ಕವಿಯು ಈ ಮೇಲಿನ ವಾಕ್ಯವನ್ನು ಹೇಳಿರುವನು. ನಮಗೆ ತಿಳಿದಿರದ ವಿಚಾರವನ್ನು ವಿಷಯತಜ್ಞರಾದ ಪಂಡಿತರಿಂದ ಕೇಳಿ ತಿಳಿದು ಕೊಳ್ಳಬೇಕೆಂದು ಕವಿ ಈ ಮೇಲಿನ ವಾಕ್ಯದ ಮೂಲಕ ಸೂಚಿಸಿದ್ದಾನೆ.

೨. ಆಪತ್ತಿನೊಳ್ ಮಣಿದು ನೋಡದ ಬಂಧುವೇತಕೆ?

ಪುಲಿಗೆರೆ ಸೋಮನಾಥನ ‘ಸೋಮೇಶ್ವರ ಶತಕ’ ದಿಂದಾಯ್ದ ‘ಪಗೆಯಂ ಬಾಲಕನೆಂಬರೇ’ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ಸಕಾಲಕ್ಕೆ ಒದಗುವ ಸಹಾಯವು ಮಾತ್ರ ಉಪಯುಕ್ತವೆಂಬುದನ್ನು ವಿವರಿಸುತ್ತಾ ಕವಿ ಈ ಮೇಲಿನ ಮಾತನ್ನು ಹೇಳಿರುವನು.

ಬಂಧುವಾದವನು ಆಪತ್ತಿನ ಕಾಲದಲ್ಲಿ ಬಂದು ಕಷ್ಟ-ಸುಖಗಳನ್ನು ವಿಚಾರಿಸಿಕೊಂಡು ನೆರವಿಗೆ ಬರಬೇಕು. ಅದು ಬಿಟ್ಟು ಸುಖವಿರುವಾಗ ಮಾತ್ರ ಬಂದು ಭೇಟಿ ಮಾಡಿ ಸಂತೋಷಿಸುವುದು, ಕಷ್ಟಬಂದಾಗ ತಿರುಗಿಯೂ ನೋಡದ ಹೊರಗುಳಿಯುವವನು ಬಂಧುವೇ ಅಲ್ಲ. ನಿಜವಾದ ಬಂಧು ಯಾರೆಂದರೆ ಕಷ್ಟದಲ್ಲಿ ಜೊತೆಗಿರುವವನು ಮಾತ್ರ ಎಂಬುದು ಪುಲಿಗೆರೆ ಸೋಮನಾಥನ ಅಭಿಪ್ರಾಯವಾಗಿದೆ.

೨. ಚೇಳ್ ಚಿಕ್ಕದೆಂದಳ್ಕರಿಂ ತೆಗೆಯಲ್ ಕಚ್ಚದೇ?

ಪುಲಿಗೆರೆ ಸೋಮನಾಥನ ‘ಸೋಮೇಶ್ವರ ಶತಕ’ ದಿಂದಾಯ್ದ ‘ಪಗೆಯರ ಬಾಲಕನೆಂಬರೇ’ ಎಂಬ ಕಾವ್ಯಭಾಗದಲ್ಲಿ ಕವಿಯು ಈ ಮೇಲಿನ ವಾಕ್ಯವನ್ನು ಹೇಳಿದ್ದಾನೆ.

ದುಷ್ಟತನ ಚಿಕ್ಕದಾಗಿದ್ದರೂ ಅದರಿಂದ ಅಪಾಯವೇ. ಅದನ್ನು ನಿರ್ಲಕ್ಷಿಸುವಂತಿಲ್ಲ. ಶತ್ರುವನ್ನು ಬಾಲಕನೆಂದು ಅಲಕ್ಷ್ಯ ಮಾಡಿದರೆ ಅಪಾಯಕ್ಕೆ ಈಡಾಗಬಹುದು, ಚೇಳು ಚಿಕ್ಕದೆಂದು ಪ್ರೀತಿಯಿಂದ ಕೈಯಲ್ಲಿ ಹಿಡಿದುಕೊಂಡರೆ ಅದು ಕುಟುಕದೆ ಬಿಡದು. ಆದ್ದರಿಂದ ಚಿಕ್ಕದಿರಲಿ, ದೊಡ್ಡದಿರಲಿ ಅಪಾಯ ತರುವ ಸಂಗತಿಗಳಿಂದ ದೂರವಿದ್ದು, ಆ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಸೋಮನಾಥ ಕವಿಯು ನೀತಿಬೋಧ ಮಾಡಿರುವನು.

೪. ಪಗೆಯಂ ಬಾಲಕನೆಂಬರೇ?

ಈ ಮೇಲಿನ ವಾಕ್ಯವನ್ನು ಪುಲಿಗೆರೆ ಸೋಮನಾಥನು ರಚಿಸಿರುವ ‘ಸೋಮೇಶ್ವರ ಶತಕʼ ದಿಂದ ಆಯ್ದುಕೊಳ್ಳಲಾಗಿದ್ದು ಇದೇ ಈ ಕಾವ್ಯಭಾಗದ ಶೀರ್ಷಿಕೆಯೂ ಆಗಿರುವುದನ್ನು ಗಮನಿಸಬಹುದು.

ಶತ್ರುವನ್ನು ಬಾಲಕನೆಂದು ಕಡೆಗಣಿಸಬಾರದು. “ಇನ್ನು ಚಿಕ್ಕ ಬಾಲಕ ತಾನೆ? ಆತ ನಮಗೇನು ಮಾಡಿಯಾನು” ಎಂದು ಉದಾಸೀನ ಮಾಡಿದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ಚಿಕ್ಕವನಿರಲಿ, ದೊಡ್ಡವನಿರಲಿ ಶತ್ರು ತತ್ರಾವೇ. ಅವರ ಬಗ್ಗೆ ನಿರ್ಲಕ್ಷ್ಯ ತಾಳದೆ ಎಚ್ಚರದಿಂದ ಇರುವುದು ಅಗತ್ಯವೆಂದು ಕವಿ ನೀತಿಬೋಧೆ ಮಾಡಿರುವನು.

೫. ಲೋಕದೊಳ್ ಮಡಿಯೇ ನಿರ್ಮಲ ಚಿತ್ತವೈ.

ಈ ಮೇಲಿನ ವಾಕ್ಯವನ್ನು ಪುಲಿಗೆರೆ ಸೋಮನಾಥನ ‘ಸೋಮೇಶ್ವರ ಶತಕ’ ದಿಂದಾಯ್ದ ʼಪಗೆಯಂ ಬಾಲಕನೆಂಬರೇʼ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.

ಕೆಟ್ಟದ್ದನ್ನು ಒಳ್ಳೆಯದರ ಜೊತೆಗಿಟ್ಟಿ ಮಾತ್ರಕ್ಕೆ ಅದರ ಕೆಟ್ಟ ಗುಣ ದೂರಾಗುವುದಿಲ್ಲವೆಂಬುದನ್ನು ವಿವರಿಸುವಾಗ ಕವಿ ಈ ಮಾತನ್ನು ಹೇಳಿದ್ದಾನೆ. ಪಾಪಕಾರ್ಯಗಳಲ್ಲಿ ತೊಡಗಿದವನು ಪಂಚತೀರ್ಥಗಳಲ್ಲಿ ಮಿಂದ ಮಾತ್ರಕ್ಕೆ ಶುಚಿಯೆನಿಸುವುದಿಲ್ಲ. ಬೇವನ್ನು ಬೆಲ್ಲದ ಪಾನಕದೊಳಿಟ್ಟ ಮಾತ್ರಕ್ಕೆ ಅದರ ಕಹಿ ಗುಣ ದೂರಾಗಿ ಸಿಹಿಯಾಗುವುದೆ? ಆದ್ದರಿಂದ ಮನಸ್ಸಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದೇ ನಿಜವಾದ ಮಡಿ. ಇತರ ಮಡಿಯ ಆಚರಣೆಗಳೆಲ್ಲವೂ ಅರ್ಥಹೀನವೆಂದು ಕವಿಯು ವಿವರಿಸಿದ್ದಾನೆ.

ಹೆಚ್ಚುವರಿ ಪ್ರಶ್ನೆಗಳು:

೬. ಸನ್ನೆ ಸಾವಿರ ಕಾಲಾಳಿನ ಸತ್ವವೈ.

ಪುಲಿಗೆರೆ ಸೋಮನಾಥನು ಬರೆದಿರುವ ‘ಸೋಮೇಶ್ವರ ಶತಕ’ ದಿಂದಾಯ್ದ ‘ಪಗೆಯಂ ಬಾಲಕನೆಂಬರೇ’ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ತೆಗೆದುಕೊಳ್ಳಲಾಗಿದೆ.

ಗಾತ್ರದಲ್ಲಿ ಚಿಕ್ಕದಾಗಿದ್ದರೂ ವಸ್ತುವಿನ ಗುಣ ಮತ್ತು ಸತ್ವ ಮುಖ್ಯವೆಂಬುದು ಕವಿಯ ಅಭಿಪ್ರಾಯವಾಗಿದೆ. ಇದನ್ನು ಪ್ರತಿವಾದಿಸುತ್ತ ಕವಿಯು ‘ಸನ್ನೆ’ ಅಂದರೆ ಮೀಟುಗೋಲು ನೋಡಲು ಚಿಕ್ಕ ಆಕಾರದ್ದಾಗಿರುತ್ತವೆ. ಆದರೆ ಭಾರವಾದ ವಸ್ತುವನ್ನು ದೂರ ಸರಿಸಲು ಸನ್ನೆಯೇ ಬೇಕೇ ಹೊರತು ದೊಡ್ಡಮರದಿಂದ ಸಾಧ್ಯವಿಲ್ಲ. ಗಾತ್ರದಲ್ಲಿ ದೊಡ್ಡದಾಗಿರುವ ಮರದ ಗಾತ್ರ-ಶಕ್ತಿ ಇಲ್ಲಿ ನಿಷ್ಟ್ರಯೋಜಕ, ಆಕಾರದಲ್ಲಿ ಚಿಕ್ಕದಾಗಿರುವ ಸನ್ನೆಯು ಇಲ್ಲಿ ಪ್ರಯೋಜನಕಾರಿ ಮತ್ತು ಸಾವಿರ ಕಾಲಾಳಿನ ಬಲಕ್ಕೆ ಅವರ ಸತ್ವ ಸಮನೆಂದು ಕವಿಯು ಅಭಿಪ್ರಾಯಪಟ್ಟಿದ್ದಾನೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದು ಇಲ್ಲಿರುವ ನೀತಿಯಾಗಿದೆ.

೭. ಪಲವುಂ ಪಳ್ಳ ಸಮುದ್ರವೈ.

ಪುಲಿಗೆರೆ ಸೋಮನಾಥನು ಬರೆದಿರುವ ‘ಸೋಮೇಶ್ವರ ಶತಕ’ದಿಂದಾಯ್ದ ‘ಪಗೆಯಂ ಬಾಲಕನೆಂಬರೇ’ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.

ಮನುಷ್ಯ ಸರ್ವಜ್ಞನೆನಿಸಿಕೊಳ್ಳಬೇಕಾದರೆ ಹಲವು ಮೂಲಗಳಿಂದ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂಬುವನ್ನು ವಿವರಿಸುವಾಗ ಕವಿಯು ಈ ಮಾತನ್ನು ಹೇಳಿದ್ದಾನೆ. ಸಮುದ್ರವೆಂಬುದು ಹಲವು ಹಳ್ಳಗಳು ಸೇರಿ ಆಗಿರುತ್ತದೆ. ಅದೇ ರೀತಿ ಜ್ಞಾನಸಾಗರವು ಹಲವು ಮೂಲಗಳಿಂದ ಬಂದು ಕೂಡಿಕೊಳ್ಳಬೇಕು. ಕೆಲವು ಬಲ್ಲವರಿಂದ, ಕೆಲವು ಶಾಸ್ತ್ರಗಳಿಂದ, ಕೆಲವು ಮಾಡುವವರಿಂದ, ಕೆಲವು ಸುಜ್ಞಾನದಿಂದ, ಇನ್ನು ಕೆಲವನ್ನು ಸಜ್ಜನರಿಂದ ಅರಿಯಬೇಕಾಗುತ್ತದೆ. ಹೀಗೆ ಹಲವು ದಿಕ್ಕಿನಿಂದ ಬರುವ ಜ್ಞಾನದಿಂದ ಮನುಷ್ಯ ಸರ್ವಜ್ಞನೆನಿಸಿಕೊಳ್ಳುತ್ತಾನೆ. ಅದೇ ರೀತಿ ವಿಶಾಲವಾದ ಸಮುದ್ರವೂ ಹಲವು ಹಳ್ಳಿಗಳಿಂದಲೇ ಆಗಿರುತ್ತವೆಂಬುದನ್ನು ವಿವರಿಸಿರುವ ಸಂದರ್ಭವಿದಾಗಿದೆ.

೮. ತೃಣವೇ ಪರ್ವತವಲ್ಲವೇ?

ಪುಲಿಗೆರೆ ಸೋಮನಾಥನ ‘ಸೋಮೇಶ್ವರ ಶತಕ’ದಲ್ಲಿನ ಈ ಸುಪ್ರಸಿದ್ದ ಮಾತನ್ನು ಕವಿಯೇ ಹೇಳಿದ್ದಾನೆ. ಕವ್ವ ಕಾಲದಲ್ಲಿ ಒಂದು ಹುಲ್ಲುಕಡ್ಡಿಯಷ್ಟು ಸಹಾಯ ದೊರೆತರೂ ಅದು ಪರ್ವತದಷ್ಟು ದೊಡ್ಡದೆಂಬುದನ್ನು ಕವಿ ಇಲ್ಲಿ ವಿವರಿಸಿದ್ದಾರೆ.

ಸಹಾಯ ಚಿಕ್ಕದಿರಲಿ, ದೊಡ್ಡದಿರಲಿ ಅದರ ಪ್ರಮಾಣ ಮುಖ್ಯವಲ್ಲ. ಸಕಾಲಕ್ಕೆ ಒದಗುವ ಸಹಾಯವು ಎಲ್ಲದಕ್ಕಿಂತಲೂ ದೊಡ್ಡದು. ಅದಕ್ಕೆ ಬೆಲೆ ಕಟ್ಟಲಾಗದು ಚಿಕ್ಕಪುಟ್ಟ ಸಹಾಯಗಳು ನಮಗೆ ಭರವಸೆಯನ್ನು ತುಂಬುತ್ತವೆ. ಆದ್ದರಿಂದ ಕವಿಯು ಕಷ್ಟ ಕಾಲದಲ್ಲಿ ಒದಗಿಬಂದ ಹುಲ್ಲುಕಡ್ಡಿ ಕೂಡ ಪರ್ವತದ ಸಮಾನವಾಗಿ ಕಾಣುತ್ತದೆ ಎಂದು ಹೇಳುತ್ತಾನೆ.

(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ).

೧. ಹಲವು ಹಳ್ಳಗಳು ಸೇರಿ ಏನಾಗುತ್ತದೆ?

ಸಮುದ್ರ

೨. ನಿಷ್ಠಯೋಜಕನಾದ ಮಗ ಯಾರು?

ಮುಪ್ಪಿನಲ್ಲಿ ತಂದೆ ತಾಯಿಗಳನ್ನು ಸಲುಹದ ಮಗ̳

೩. ಹಗೆಯನ್ನು ಏನೆಂದು ಉಪೇಕ್ಷಿಸಬಾರದೆಂದು ಸೋಮನಾಥನು ಹೇಳಿದ್ದಾನೆ?

ಬಾಲಕ

೪. ವೀರನಾದವನು ಏನನ್ನು ಬಲ್ಲವನಾಗಿರಬೇಕೆಂದು ಸೋಮನಾಥನು ಹೇಳಿದ್ದಾನೆ?

ಇರಿಯಲು

೫. ಯಾರನ್ನು ಯೋಗಿ ಎನ್ನಬಹುದು?

ಅರಿಷಡ್ವರ್ಗಗಳನ್ನು ಗೆಲ್ಲಬಲ್ಲವ

ಹೆಚ್ಚುವರಿ ಪ್ರಶ್ನೆಗಳು

೬. ಯಾವುದನ್ನು ಚಿಕ್ಕದೆಂದು ಮುಟ್ಟಬಾರದು?

ಚೇಳು

೭. ಯಾವಾಗ ಮಳೆ ಬಂದರೆ ಪ್ರಯೋಜನವಿಲ್ಲ?

ಪೃರು ಒಣಗಿದ ಮೇಲೆ

೮. ಎಂತಹ ಧನ ವ್ಯರ್ಥವಾಗುತ್ತದೆ?

ಅನುಭವಿಸಲಾಗದ

೯. ಜ್ಞಾನವನ್ನು ಸಂಪಾದಿಸಿದಾಗ ಮನುಷ್ಯ ಏನಾಗುತ್ತಾನೆ?

ಸರ್ವಜ್ಞ

೧೦. ಸಾಕುವುದಕ್ಕೆ ವಿಶ್ವಾಸಿಯಲ್ಲದ ಜಂತು ಯಾವುದು?

ಹಾವು

೧೧. ಉಪಾಯಬಲ್ಲ ಒಬ್ಬನು ಎಷ್ಟು ಜನರಿಗೆ ಸಮಾನನಾಗುತ್ತಾನೆ?

ಕೋಟಿ

೧೨. ಅರೆಯನ್ನು ಸೀಳಲು ಬಳಸುವ ಸಾಧನ ಯಾವುದು?

ಚಾಣ

೧೩. ಸನ್ನೆ ಎಂತಹ ಸತ್ವವನ್ನೊಳಗೊಂಡಿದೆ?

ಸಾವಿರ ಕಾಲಾಳಿನ

೧೪. ಪಕ್ಷಿಯನ್ನು ಸಾಕುತ್ತೇನೆಂದು ಯಾವ ಪಕ್ಷಿಯನ್ನು ಸಂಪ್ರೀತಿಯಿಂದ ಸಾಕುವುದಿಲ್ಲ?

ಗೂಬೆಮರಿಯನ್ನು

೧೫. ಲೋಕದಲ್ಲಿ ನಿಜವಾದ ಮಡಿ ಯಾವುದು?

ನಿರ್ಮಲವಾದ ಚಿತ್ತ

೧೬. ಪುಲಿಗೆರೆ ಸೋಮನಾಥನ ಅಂಕಿತ ಯಾವುದು?

ಹರಿಹರಾ ಶ್ರೀ ಚೆನ್ನಸೋಮೇಶ್ವರ

೧೭. ರಾಜನಾದವನು ಏನನ್ನು ತೊರೆಯಬೇಕು?

ಕೋಪ

(ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):

೧. ಯಾರಿಂದ ಯಾವುದನ್ನು ಹೇಗೆ ಕಲಿಯಬೇಕೆಂದು ಸೋಮನಾಥನು ಹೇಳಿದ್ದಾನೆ?

ಕೆಲವನ್ನು ಬಲ್ಲವರಿಂದ, ಕೆಲವನ್ನು ಶಾಸ್ತ್ರ ಓದುವುದರಿಂದ, ಇನ್ನು ಕೆಲವನ್ನು ಇತರರು ಆಚರಿಸುವುದನ್ನು ನೋಡಿ ಕಲಿತುಕೊಳ್ಳಬೇಕೆಂದು ಸೋಮನಾಥನು ಹೇಳಿದ್ದಾನೆ.

೨. ಧನ ಮತ್ತು ಸುತನ ವಿಷಯದಲ್ಲಿ ಸೋಮನಾಥನ ಅಭಿಪ್ರಾಯವೇನು?

ನಾವು ಅನುಭವಿಸಲು ಸಾಧ್ಯವಿಲ್ಲದ ಧನವಿದ್ದು ಪ್ರಯೋಜನವಿಲ್ಲ, ಅಂತೆಯೇ ಮುಪ್ಪಿನಲ್ಲಿ ತಂದೆ-ತಾಯಿಗಳನ್ನು ಸಲಹದ ಮಗ ನಿಷ್ಪ್ರಯೋಜಕ ಎಂಬುದಾಗಿ ಸೋಮನಾಥನು ಅಭಿಪ್ರಾಯ ಪಟ್ಟಿರುವನು.

೩. ರಾಜ ಮತ್ತು ಮಂತ್ರಿಗಳಿಗೆ ಯಾವ ಅರ್ಹತೆಗಳಿರಬೇಕೆಂದು ಸೋಮನಾಥನು ಹೇಳಿದ್ದಾನೆ?

ಸೋಮನಾಥನು ಹೇಳಿರುವಂತೆ ರಾಜನಾದವನು ಇತರರು ಏನೆಂದರೂ ಕೋಪಿಸಿಕೊಳ್ಳದವನಾಗಿರಬೇಕು. ನಾನು ಬಗೆಯ ಚಮತ್ಕಾರಗಳನ್ನು ಬಲ್ಲವನು ಮಂತ್ರಿಯಾಗಬೇಕು.

೪. ಶುಚಿ ಮತ್ತು ಸ್ವಾದಗಳನ್ನು ಕುರಿತು ಸೋಮನಾಥನ ಅಭಿಪ್ರಾಯಗಳೇನು?

ಶುಚಿ ಎಂಬುದು ವ್ಯಕ್ತಿಯ ಅಂತರಂಗಕ್ಕೆ ಸಂಬಂಧಿಸಿದ್ದು. ಹೊಟ್ಟೆಯಲ್ಲಿ ಕೆಸರನ್ನು ತುಂಬಿಕೊಂಡು ದೇಹವನ್ನು ತೊಳೆದರೆ ಅದು ಹೋಗದು. ಹಾಗೇ ಬೆಲ್ಲದ ಪಾನಕದಲ್ಲಿ ಬೇವಿನ ಬೀಜವನ್ನು ಅದ್ದಿದ ಮಾತ್ರಕ್ಕೆ ಅದು ತನ್ನ ಕಹಿಯ ಗುಣವನ್ನು ಬಿಡದು. ಆದ್ದರಿಂದ ಲೋಕದಲ್ಲಿ ನಿರ್ಮಲ ಚಿತ್ರವೇ ಶುಚಿತ್ರ ಎಂದು ಸೋಮನಾಥ ಹೇಳಿದ್ದಾನೆ.

ಹೆಚ್ಚುವರಿ ಪ್ರಶ್ನೆಗಳು

೫. ಚಾಣ ಮತ್ತು ಸನ್ನೆ ಇವುಗಳ ಉಪಯೋಗವೇನು?

ಚಾಣದಿಂದ ಬಂಡೆಯನ್ನು ಸೀಳಬಹುದು ಮತ್ತು ಸನ್ನೆಯಿಂದ ಭಾರವಾದ ವಸ್ತುವನ್ನು ಎತ್ತಿ ದೂರ ಸರಿಸಬಹುದು.

೬. ಮಳೆ ಮತ್ತು ಬಂಧುಗಳ ವಿಚಾರದಲ್ಲಿ ಸೋಮನಾಥ ಕವಿ ಏನು ಹೇಳಿದ್ದಾನೆ?

ಪೈರು ಒಣಗುತ್ತಿರುವಾಗ ಬಾರದ ಮಳೆಯು ಆಮೇಲೆ ಬಂದರೆ ಪ್ರಯೋಜನವಿಲ್ಲ. ಅದೇ ರೀತಿ ಆಪತ್ಕಾಲದಲ್ಲಿ ಮಣಿದು ಬಂದು ನೋಡದ ಬಂಧುಗಳು ಇದ್ದೂ ಪ್ರಯೋಜನವಿಲ್ಲ ಎಂಬುದು ಸೋಮನಾಥ ಕವಿಯ ಅಭಿಪ್ರಾಯವಾಗಿದೆ.

೭. ವೀರ ಮತ್ತು ಯೋಗಿಗೆ ಯಾವ ಗುಣಗಳಿರಬೇಕು?

ಇರಿಯಲು ಬಲ್ಲವನು ಅಂದರೆ ಹೋರಾಡಬಲ್ಲವನು ವೀರನಾಗಬೇಕು. ಆರಿಷಡ್ವರ್ಗಗಳನ್ನು ಗೆಲ್ಲಬಲ್ಲವನು ಯೋಗಿಯಾಗಬೇಕು ಎಂದು ಕವಿಯು ವೀರ ಮತ್ತು ಯೋಗಿಗೆ ಇರಬೇಕಾದ ಗುಣಗಳನ್ನು ಕುರಿತು ಹೇಳಿದ್ದಾನೆ.

(ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):

೧. ಜ್ಞಾನವನ್ನು ಹೊಂದುವ ಮಾರ್ಗ ಯಾವುದೆಂಬುದನ್ನು ಕವಿ ಹೇಗೆ ವಿವರಿಸಿದ್ದಾನೆ

ಜ್ಞಾನವೆಂಬುದು ಹುಟ್ಟಿನಿಂದ ಬರುವುದಿಲ್ಲ. ಅದೊಂದು ಸಮುದ್ರವಿದ್ದಂತೆ, ಹಲವು ತೊರೆಗಳು ಬಂದು ಸೇರಿ ಸಮುದ್ರವಾಗುವಂತೆ ಮನುಷ್ಯ ಜ್ಞಾನವನ್ನು ನಾನಾ ಮೂಲೆಗಳಿಂದ ಸಂಪಾದಿಸಿಕೊಂಡು ಸರ್ವಜ್ಞನಾಗಬೇಕೆಂದು ಕವಿ ತಿಳಿಸಿರುವನು. ಕೆಲವು ವಿಚಾರಗಳನ್ನು ಬಲ್ಲ ವಿದ್ವಾಂಸರಿಂದ ಕೇಳಿ ತಿಳಿದುಕೊಳ್ಳಬೇಕಾಗುವುದು. ಮತ್ತೆ ಕೆಲವು ಸಂಗತಿಗಳು ಸಜ್ಜನರ ಸಹವಾಸದಿಂದ ಅರಿವಿಗೆ ಬರುತ್ತದೆ. ಹೀಗೆ ಒಂದೊಂದು ಮೂಲದಿಂದ ಒಂದೊಂದು ಸಂಗತಿಯನ್ನು ಅರಿಯುತ್ತಾ ನಮ್ಮ ಜ್ಞಾನವನ್ನು ಹಿಗ್ಗಿಸಿಕೊಳ್ಳಬೇಕೆಂಬುದನ್ನು ಸೋಮನಾಥ ಕವಿಯು ವಿವರಿಸಿ ಹೇಳಿದ್ದಾನೆ.

೨. ಸಕಾಲಕ್ಕೆ ಒದಗುವ ಸಹಾಯವೇ ಶ್ರೇಷ್ಠ ಎಂಬುದನ್ನು ಕವಿ ಹೇಗೆ ತಿಳಿದಿದ್ದಾನೆ?

ಸಹಾಯ ಅಗತ್ಯವಿದ್ದಾಗ ಮಾತ್ರವೇ ಉಪಯೋಗಕ್ಕೆ ಬರುತ್ತದೆ. ಬೇಕಾದಷ್ಟು ಧನವಿದ್ದರೂ ಅದನ್ನು ಅನುಭವಿಸುವ ಆಯುಷ್ಯವಿಲ್ಲದಿದ್ದರೆ ಆ ಧನ ವ್ಯರ್ಥ. ಅಂತೆಯೇ ಮಗನಾದವನು ಮುಪ್ಪಿನಲ್ಲಿ ತಂದೆ ತಾಯಿಗಳನ್ನು ಸಲಹದಿದ್ದರೆ ನಿಷ್ಟ್ರಯೋಜಕನೆನಿಸಿಕೊಳ್ಳುತ್ತಾನೆ. ಪೈರು ಒಣಗುವ ಸಮಯದಲ್ಲಿ ಮಳೆ ಬಂದರೆ ಪ್ರಯೋಜನಕಾರಿ. ಇದೇ ರೀತಿ ನಿಜವಾದ ಬಂಧುವಾದವನು ಕಷ್ಟಕಾಲದಲ್ಲಿ ನೆರವಿಗೆ ಬರಬೇಕು. ಯಾವ ಸಹಾಯವೇ ಆಗಲಿ ಅಗತ್ಯವಿದ್ದಾಗ ಒದಗಿದರೆ ಅದಕ್ಕೆ ಬೆಲೆಯಿರುತ್ತದೆ. ಸಕಾಲಕ್ಕೆ ಒದಗಿದ ಒಂದು ಹುಲ್ಲುಕಡ್ಡಿಯಷ್ಟು ಸಹಾಯಕ್ಕೂ ಪರ್ವತದಷ್ಟು ಬೆಲೆಯಿರುತ್ತದೆಂಬುದು ಕವಿ ಸೋಮನಾಥನ ಖಚಿತ ಅಭಿಪ್ರಾಯವಾಗಿದೆ.

೩. ಯಾವ ಯಾವ ಸಂಗತಿಗಳನ್ನು ಉಪೇಕ್ಷಿಸಬಾರದಾಗಿ ಸೋಮನಾಥನು ತಿಳಿಸಿದ್ದಾನೆ?

ಬೇವು ಎಂದಿಗೂ ಸಿಹಿಯಾಗುವುದಿಲ್ಲ. ಅದರಂತೆಯೇ ದುಷ್ಟರೆಂದೂ ಒಳ್ಳೆಯ ಗುಣ ತೋರುವುದಿಲ್ಲವಾದ್ದರಿಂದ ಅವರ ಬಗ್ಗೆ ಎಚ್ಚರದಿಂದಿರಬೇಕು. ಉಪೇಕ್ಷೆಯಿಂದಿರಬಾರದೆಂದು ಕವಿ ಸೋಮನಾಥನು ಅಭಿಪ್ರಾಯ ಪಟ್ಟಿರುವನು. ಚೇಳು ಚಿಕ್ಕದೆಂದು ಪ್ರೀತಿಯಿಂದ ಕೈಯಲ್ಲಿ ಹಿಡಿದುಕೊಂಡರೆ ಅದು ಕುಟುಕದೆ ಬಿಡುವುದಿಲ್ಲ. ಹಾವಿಗೆ ಹಾಲೆರೆದು ಪೋಷಿಸಿದ ಮಾತ್ರಕ್ಕೆ ಅದು ನಮ್ಮೊಂದಿಗೆ ವಿಶ್ವಾಸವನ್ನು ತೋರುವುದಿಲ್ಲ. ಅಂತೆಯೇ ಪಕ್ಷಿ ಸಾಕುವ ಅಪೇಕ್ಷೆಯಿಂದ ಗೂಗೆ ಮರಿಯನ್ನು ಯಾರೂ ಸಲಹುವುದಿಲ್ಲ. ಇವುಗಳಂತೆಯೇ ಶತ್ರುವನ್ನು ಇನ್ನೂ ಬಾಲಕನೆಂದು ಉಪೇಕ್ಷಿಸಬಾರದೆಂದು ಸೋಮನಾಥನು ವಿವರಿಸಿ ಹೇಳಿದ್ದಾನೆ.

೪. ವೀರ, ಮಂತ್ರಿ, ರಾಜ, ಯೋಗಿಗೆ ಇರಬೇಕಾದ ಅರ್ಹತೆಗಳೇನು?

ವೀರನಾದವನಿಗೆ ಆಯುಧವನ್ನು ಕೈಯಲ್ಲಿ ಹಿಡಿದುಕೊಂಡು ಶತ್ರುಗಳನ್ನು ಇರಿದು ಕೊಲ್ಲುವ ಕ್ಷಾತ್ರ ಗುಣವಿರಬೇಕು. ನಾನಾ ಬಗೆಯ ಚಮತ್ಕಾರವನ್ನು ಅರಿತವನು ಮಂತ್ರಿಯಾಗಲು ಯೋಗ್ಯನಾದವನು. ಅಂತೆಯೇ ರಾಜನಾದವನು ಯಾರು ಏನೇ ಬೈಯ್ದರೂ, ನಿಂದಿಸಿದರೂ ಕೋಪ ಮಾಡಿಕೊಳ್ಳದೆ ತಾಳ್ಮೆಯಿಂದಿರಬೇಕು ಮತ್ತು ಎಲ್ಲರೂ ಯೋಗಿಗಳಾಗಲು ಸಾಧ್ಯವಿಲ್ಲ. ಯಾರು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ಗೆಲ್ಲಬಲ್ಲನೋ ಆತನನ್ನು ಯೋಗಿ ಎನ್ನಬಹುದೆಂದು ಸೋಮನಾಥನು ವೀರ, ಮಂತ್ರಿ, ರಾಜ ಮತ್ತು ಯೋಗಿಗಳಿಗಿರಬೇಕಾದ ಗುಣಗಳ ವಿವರ ನೀಡಿದ್ದಾನೆ.

೫. ನಿರ್ಮಲಚಿತ್ತದ ಅಗತ್ಯವನ್ನು ಸೋಮನಾಥ ಕವಿ ಹೇಗೆ ನಿರೂಪಿಸಿದ್ದಾನೆ?

ಸೋಮನಾಥನು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದೇ ನಿಜವಾದ ಮಡಿ ಎಂಬುದನ್ನು ಒತ್ತಿ ಹೇಳಿದ್ದಾನೆ. ಹೊಟ್ಟೆಯೊಳಗೆ ಕಸ-ಹೊಲಸನ್ನು ತುಂಬಿಕೊಂಡು ದೇಹದ ಮೇಲ್ಬಾಗವನ್ನು ತೊಳೆದ ಮಾತ್ರಕ್ಕೆ ಶುದ್ದರೆನಿಸುವುದಿಲ್ಲ. ಅದರಂತೆಯೇ ಕಡುಪಾಪಿಯಾದವನು ಪುಣ್ಯತೀರ್ಥಗಳಲ್ಲಿ ಸ್ನಾನ ಮಾಡಿದ ಮಾತ್ರಕ್ಕೆ ಶುಚಿಯಾಗುವುದಿಲ್ಲ. ಕಾಗೆಗಳು ಕೂಡ ನದಿಯಲ್ಲಿ ಮೀಯುವುದಿಲ್ಲವೆ? ಬೆಲ್ಲದ ಪಾನಕದಲ್ಲಿ ಅದ್ದಿದ್ದ ಮಾತ್ರಕ್ಕೆ ಬೇವು ತನ್ನ ಕಹಿಗುಣವನ್ನು ಬಿಟ್ಟು ಕೊಡುವುದಿಲ್ಲ, ಇದೇ ರೀತಿ ಮನಸ್ಸಿನಲ್ಲಿ ಕೆಟ್ಟ ವಿಚಾರಗಳನ್ನು ಇಟ್ಟುಕೊಂಡವನು ಮೇಲ್ನೋಟಕ್ಕೆ ಎಷ್ಟೇ ಸ್ವಚ್ಛವಾಗಿ ಕಾಣಿಸಿದರೂ ಆತ ಶುಚಿಯಲ್ಲ. ಮನಸ್ಸಿನ ಶುದ್ಧತೆಯೇ ನಿಜವಾದ ಮಡಿ ಎಂದು ಸೋಮನಾಥನು ಪ್ರತಿಪಾದಿಸಿರುವನು.

ಭಾಷಾಭ್ಯಾಸ

೧. ʼಪʼಕಾರವು ʼಹʼಕಾರವಾಗುವುದಕ್ಕೆ ಉದಾಹರಣೆಗಳು:

ಪಲವು > ಹಲವು; ಪಳ್ಳ > ಹಳ್ಳ; ಪಾಲು > ಹಾಲು; ಪೋಣೆ > ಹೊಣೆ: ಪಗೆ > ಹಗೆ ಮೊದಲಾದ ಪ್ರಯೋಗಗಳಲ್ಲಿ ಇದನ್ನು ಗಮನಿಸಬಹುದು.

ಉದಾಹರಣೆಗಳು:

ಪಾವು > ಹಾವು

ಪಶು > ಹಸು

ಪಸುರ್‌ > ಹಸಿರು

ಪಾರ್ವ > ಹಾರುವ

ಪಿಂತಿಲ್‌ > ಹಿತ್ತಿಲು

ಹಿತ್ತಿಲ್‌ > ಹಿತ್ತಿಲು

ಪನಿ > ಹನಿ

ಪಾಡು > ಹಾಡು

ಹಸುರ್‌ > ಹಸುರು (ಹಸಿರು)

ಪತ್ತಿ > ಹತ್ತಿ

ಪಿಂತಿಲ್‌ > ಹಿಂತಿಲ್

೨) ಇವುಗಳ ತತ್ಸಮ ರೂಪಗಳನ್ನು ತಿಳಿಸಿ: ಗೂಗೆ, ಜೋಗಿ, ಬೀರ, ಧರೆ.

ಗೂಗೆ – ಗೂಬೆ ಜೋಗಿ – ಯೋಗಿ

ಬೀರ – ವೀರ ಧರೆ – ಧರಾ

೩) ನಾನಾರ್ಥಗಳನ್ನು ಗಮನಿಸಿ:

ನರ – ಮನುಷ್ಯ ದೇಹದ ನರ (ಸಂಜ್ಞಾ ವಾಹಕ)

ತೊರೆ – ಹೊಳೆ, ತೈಜಿಸು

ಅರಿ – ವೈರಿ, ತಿಳಿ

ಮಡಿ – ನಿರ್ಮಲ, ಸಾಯಿ

ತೆರಿ – ತೆರಿಗೆ, ರೀತಿ, ದಂಡ, ಕನ್ಯಾಶುಲ್ಕ.

೪) ಇವುಗಳ ಗುಣವಾಚಕಗಳನ್ನು ಗುರುತಿಸಿ: ಗೂಗೆಮರಿ, ಹೆಮ್ಮರ, ಕಡುಪಾಪ.

ಗೂಗೆಮರಿ – ‘ಮರಿ’ ಗುಣವಾಚಕ

ಹೆಮ್ಮರ – ‘ಹಿರಿದು’ ಗುಣವಾಚಕ

ಕಡುಪಾಪ – ‘ಕಡು’ ಗುಣವಾಚಕ.

ಕೆಳಗಿನ ಪದ್ಯಗಳ ಭಾವಾರ್ಥವನ್ನು ಬರೆಯಿರಿ:

೧. ಕೆಲವಂ ಬಲ್ಲವರಿಂದ ಕಲ್ಲು ಕೆಲವಂ ಶಾಸ್ತ್ರಂಗಳಂ ಕೇಳುತಂ।

ಕೆಲವಂ ಮಾಳವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ।।

ಕೆಲವಂ ಸಜ್ಜನ ಸಂಘದಿಂದಲರಿಯಲ್ ಸರ್ವಜ್ಞನಪ್ಪಂ ನರಂ ।

ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥

ಪುಲಿಗೆರೆ ಸೋಮನಾಥನು ಬರೆದಿರುವ ‘ಸೋಮೇಶ್ವರ ಶತಕ’ ಎಂಬ ಜನಪ್ರಸಿದ್ದ ಕೃತಿಯಿಂದ ಈ ಮೇಲಿನ ಪದ್ಯವನ್ನು ಆಯ್ದುಕೊಳ್ಳಲಾಗಿದೆ.

ಜ್ಞಾನ ಸಂಪಾದನೆಯಿಂದ ‘ಸರ್ವಜ್ಞ’ ನೆನಿಸಿಕೊಳ್ಳಬೇಕಾದುದು ಮನುಷ್ಯನ ಮುಖ್ಯವಾದ ಗುರಿ. ಆದರೆ ಜ್ಞಾನದ ಮೂಲ ಯಾವುದೆಂಬುದನ್ನು ನಾವು ತಿಳಿದಿರಬೇಕು ಎಂಬುದನ್ನು ವಿವರಿಸಲು ಕವಿಯು ಈ ಪದ್ಯವನ್ನು ರಚಿಸಿದ್ದಾನೆ.

“ಕೆಲವು ವಿಚಾರಗಳನ್ನು ನಾವು ಅವನ್ನು ಬಲ್ಲವರಿಂದ ಕಲಿತುಕೊಳ್ಳುತ್ತೇವೆ. ಇನ್ನು ಕೆಲವನ್ನು ಆಯಾ ವಿಚಾರಕ್ಕೆ ಸಂಬಂಧಿಸಿದ ಶಾಸ್ತ್ರ ವಿಚಾರಗಳನ್ನು ಕೇಳುತ್ತ ಕಲಿಯುತ್ತೇವೆ. ಇನ್ನು ಕೆಲವನ್ನು ಬೇರೆಯವರು ಮಾಡುವುದನ್ನು ನೋಡಿ ಕಲಿಯುತ್ತೇವೆ. ಸುಜ್ಞಾನದಿಂದ ಕೆಲವನ್ನು ಅರಿಯುತ್ತೇವೆ. ಮತ್ತೆ ಕೆಲವೊಂದನ್ನು ಸಜ್ಜನರ ಸಂಘದಿಂದ ಅರಿತುಕೊಳ್ಳುತ್ತೇವೆ. ಹೀಗೆ ನಾನಾ ಮೂಲಗಳಿಂದ ಜ್ಞಾನ ಸಂಪಾದಿಸಿ ‘ಸರ್ವಜ್ಞ’ ನೆನೆಸಿಕೊಳ್ಳುತ್ತೇವೆ. ಹಲವು ಹಳ್ಳಗಳು ಸೇರಿದರೆ ಸಮುದ್ರ ವಾಗುತ್ತದೆ. ಅದೇ ರೀತಿ ಹಲವು ದಿಕ್ಕಿನ ಜ್ಞಾನದಿಂದ ಸರ್ವಜ್ಞತೆ ಪ್ರಾಪ್ತವಾಗುತ್ತದೆ ಎಂಬುದು ಕವಿ ಸೋಮನಾಥನ ಅಭಿಪ್ರಾಯವಾಗಿದೆ.

ಎಲ್ಲಿಂದಲಾದರೂ ಸರಿಯೇ, ಕಲಿಯಬೇಕೆಂಬ ಹಂಬಲವುಳ್ಳವನು ಕಲಿತು ಜ್ಞಾನ ಸಂಪಾದಿಸಲು ಸಿದ್ಧನಿರಬೇಕು. ಕುಳಿತಲ್ಲಿಯೇ ಎಲ್ಲವೂ ಲಭ್ಯವಾಗುವುದಿಲ್ಲ.

೨. ಉಣದಿರ್ಪಾ ಧನಮಿರ್ದೊಡೇನು ಸುತನಿರ್ದೇಂ ಮುಪ್ಪಿನಲ್ಲಾಗದಾ।

ಒಣಗರಿಗೆ ಬಾರದಿರ್ದ ಮಳೆ ತಾಂ ಬಂದೇನಾಪತ್ತಿನೊಳ್।।

ಮಣಿದುಂ ನೋಡದ ಬಂಧುವೇತಕೆಣಿಸಲ್ ಕಾಲೋಚಿತಕ್ಕೆದಿದಾ।

ತೃಣವೇ ಪರ್ವತವಲ್ಲವೇ ಹರಹರಾ ಶ್ರೀಚೆನ್ನಸೋಮೇಶ್ವರಾ।।

‘ಸೋಮೇಶ್ವರ ಶತಕ’ವೆಂಬುದು ಕನ್ನಡದ ಜನಪ್ರಿಯ ಕೃತಿಗಳಲ್ಲೊಂದು. ಪುಲಿಗೆರೆಯ ಸೋಮನಾಥನೆಂಬ ಕವಿಯು ಈ ಕಾವ್ಯವನ್ನು ರಚಿಸಿದ್ದಾನೆ. ಈ ಕಾವ್ಯದಿಂದಾಯ್ದ ‘ಪಗೆಯಂ ಬಾಲಕನೆಂಬರೇ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಮವನ್ನು ಸ್ವೀಕರಿಸಲಾಗಿದೆ.

ನಮ್ಮ ಕಷ್ಟಕಾಲದಲ್ಲಿ ಒದಗಿ ಬರುವ ಪುಟ್ಟ ಸಹಾಯವೂ ದೊಡ್ಡ ಪರ್ವತದಷ್ಟು ದೊಡ್ಡ ಸಹಾಯವೆನಿಸುತ್ತದೆ. ಅಗತ್ಯಕ್ಕೆ ಒದಗದ ಯಾವೂದಿದ್ದೂ ವ್ಯರ್ಥವೆಂಬುದನ್ನು ವಿವರಿಸುವ ಸಂದರ್ಭವನ್ನು ಪ್ರಸ್ತುತ ಪದ್ಯದಲ್ಲಿ ಚಿತ್ರಿಸಲಾಗಿದೆ.

“ಅನುಭವಿಸದ ಹಣವಿದ್ದು ಉಪಯೋಗವಿಲ್ಲ. ಮುಪ್ಪಿನ ಕಾಲದಲ್ಲಿ ತಂದೆ-ತಾಯಿಯರನ್ನು ನೋಡಿಕೊಳ್ಳದ ಮಗನಿದ್ದು ವ್ಯರ್ಥ. ಪೈರು ಒಣಗಿಹೋಗುತ್ತಿರುವಾಗ ಬಾರದ ಮಳೆ ಆಮೇಲೆ ಬಂದರೆ ಅನುಪಯುಕ್ತ. ಇದೇ ರೀತಿ ಆಪತ್ತಿನ ಸಮಯದಲ್ಲಿ ವೈರತ್ವವನ್ನು ಮರೆತು ಸಹಾಯಕ್ಕೆ ಧಾವಿಸದ ಬಂಧುಗಳಿದ್ದು ಪ್ರಯೋಜನವಿಲ್ಲ. ಆಪತ್ಕಾಲದಲ್ಲಿ ಒದಗಿದ ಹುಲ್ಲುಕಡ್ಡಿಯಷ್ಟು ಸಹಾಯವೂ ಪರ್ವತಕ್ಕೆ ಸಮಾನವೆನಿಸುತ್ತದೆ” ಎಂಬುದು ಈ ಪದ್ಮದ ಸಾರಾಂಶವಾಗಿದೆ.

ಉಪಯೋಗಕ್ಕೆ ಬರುವ ಹಣ, ಮಗ, ಮಳೆ, ಬಂಧುಗಳು ನಮ್ಮ ಬದುಕಿಗೆ ಆಸರೆಯಾಗುತ್ತಾರೆ. ನಿರುಪಯುಕ್ತವೆನಿಸಿದ ಈ ಯಾವುದಕ್ಕೂ ಬೆಲೆಯಿರುವುದಿಲ್ಲ. ಇದ್ದೂ ಇಲ್ಲದ ಸ್ಥಿತಿಗೆ ಇವು ಉದಾಹರಣೆ ಎಂಬುದನ್ನು ಕವಿಯು ಇಲ್ಲಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.

೩. ಚಿಗುರೆಂದುಂ ಮೆಲೆ ಬೇವು ಸ್ವಾದವಹುದೇ ಚೇಳ್ ಚಿಕ್ಕದೆಂದಳ್ಳರಿಂನ|

ತೆಗೆಯಲ್ ಕಚ್ಚಿದ ಪಾಲನೂಡಿ ಫಣಿಯಂ ಸಾಕಲೆ ವಿಶ್ವಾಸಿಯೇ।।

ಖಗಮಂ ಸಾಕುವೆನೆಂದು ಗೂಗೆಮರಿಯಂ ಸಂಪ್ರೀತಿಯಂದೋವರೇ|

ಪಗೆಯಂ ಬಾಲಕನೆಂಬರೇ ಹರಹರಾ ಶ್ರೀಚೆನ್ನಸೋಮೇಶ್ವರಾ।।

ಕವಿ ಪುಲಿಗೆರೆ ಸೋಮನಾಥನು ರಚಿಸಿರುವ ‘ಸೋಮೇಶ್ವರ ಶತಕ’ವೆಂಬ ಜನಪ್ರಿಯ ಕೃತಿಯಿಂದ ಸ್ವೀಕರಿಸಲಾಗಿರುವ ‘ಪಗೆಯಂ ಬಾಲಕನೆಂಬರೇ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಆಯ್ಕೆಮಾಡಿಕೊಳ್ಳಲಾಗಿದೆ.

ಶತ್ರು ಚಿಕ್ಕವನಿರಲೀ ದೊಡ್ಡವನಾಗಿರಲೀ ಅವನು ಶತ್ರುವೇ. ಶತ್ರುವಿನಿಂದ ಯಾವಾಗ ಬೇಕಾದರೂ ಅಪಾಯ ಒದಗಬಹುದು. ಇದರ ಬಗ್ಗೆ ಸದಾ ಎಚ್ಚರದಿಂದ ಇರಬೇಕೇ ಹೊರತು ಅವರು ಚಿಕ್ಕವರು, ಏನುತಾನೆ ಮಾಡಬಲ್ಲರು? ಎಂಬ ನಿರ್ಲಕ್ಷ್ಯದಿಂದ ಇರುವುದು ತರವಲ್ಲ ಎಂಬುದನ್ನು ಕವಿಯು ವಿವರಿಸಿರುವ ಸಂದರ್ಭವಿದಾಗಿದೆ.

“ಚಿಗುರಾಗಿದೆಯೆಂದು ಬೇವನ್ನು ತಿನ್ನಲು ರುಚಿಸುವುದೇ? ಚೇಳು ಇನ್ನೂ ಚಿಕ್ಕದೆಂದು ಕೈಯಿಂದ ತೆಗೆದ ಕಚ್ಚದಿರುವುದೇ? ಹಾಲನ್ನು ಕುಡಿಸಿ ಸಾಕಿದ ಮಾತ್ರಕ್ಕೆ ಹಾವು ವಿಶ್ವಾಸಾರ್ಹವಾಗುವುದೆ? ಪಕ್ಷಿಯನ್ನು ಸಾಕುತ್ತೇನೆಂದ ಯಾರಾದರೂ ಗೂಬೆಮರಿಯನ್ನು ಸಾಕುವರೆ? ಶತ್ರುವನ್ನು ಯಾರಾದರೂ ಬಾಲಕನೆಂದು ಉಪೇಕ್ಷಿಸುವರೇ? ಹರಹದ ಶ್ರೀಚೆನ್ನಸೋಮೇಶ್ವರಾ” ಎಂಬುದು ಪ್ರಸ್ತುತ ಪದ್ಯದ ಭಾವಾರ್ಥವಾಗಿದೆ.

ಅಪಾಯವೆಂಬುದು ಶತ್ರುವಿನಿಂದ ಯಾವಾಗ ಎರಗಿ ಮೈಮೇಲೆ ಬೀಳುತ್ತದೋ ಅರಿವಾಗದು. ಆದ್ದರಿಂದ ಶತ್ರುಗಳ ಬಗ್ಗೆ ಎಚ್ಚರವಿರಬೇಕೇ ಹೊರತು, ಚಿಕ್ಕವರೆಂಬ ಉಪೇಕ್ಷೆ ಸಲ್ಲವೆಂಬ ಸ್ವಾರಸ್ಯವನ್ನೂ, ತಾತ್ಪರ್ಯವನ್ನೂ ಈ ಪದ್ಮ ಒಳಗೊಂಡಿದೆ.

ಪದ್ಯಗಳ ಸಾರಾಂಶ ಮತ್ತು ವಿಮರ್ಶೆ:

೧. ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ|

ಕೆಲವಂ ಮಾಳ್ವವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ॥

ಕೆಲವಂ ಸಜ್ಜನ ಸಂಘದಿಂದಲರಿಯಲ್ ಸರ್ವಜ್ಞನಪ್ಪಂ ನರಂ|

ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನಸೋಮೇಶ್ವರಾ॥

ಇದು ಅತ್ಯಂತ ಜನಪ್ರಿಯವಾದ ಪದ್ಯಗಳಲ್ಲೊಂದು. ಮನುಷ್ಯ ತಿಳಿವಳಿಕೆಯನ್ನು ಬಹುಮೂಲಗಳಿಂದ ಪಡೆದು. ಸರ್ವಜ್ಞನೆನಿಸುತ್ತಾನೆ. ಅನೇಕ ತೊರೆಗಳು ಬಂದು ಸೇರಿ ಒಂದು ದೊಡ್ಡ ಸಮುದ್ರವಾಗುವಂತೆ, ಮನುಷ್ಯನು ಕೆಲವು ವಿಷಯಗಳನ್ನು ಅದನ್ನು ಚೆನ್ನಾಗಿ ಬಲ್ಲ ಪಂಡಿತರಿಂದಲೂ ಕೆಲವನ್ನು ಶಾಸ್ತ್ರಗ್ರಂಥಗಳನ್ನು ಓದುವ ಮೂಲಕವೂ, ಇನ್ನು ಕೆಲವನ್ನು ‘ಇತರರ ಆಚರಣೆಯ ಅನುಕರಣೆಯಿಂದಲೂ, ಕೆಲವನ್ನು ಸ್ವಬುದ್ಧಿಯಿಂದಲೂ, ಮತ್ತೆ ಕೆಲವನ್ನು ಸುಜನರ ಸಹವಾಸದಿಂದಲೂ ತಿಳಿದುಕೊಳ್ಳುವುದರಿಂದ ಸರ್ವಜ್ಞತೆಯನ್ನು ಮನುಷ್ಯ ಸಾಧಿಸಬಹುದೆಂದು ಸೋಮನಾಥನು ಹೇಳಿರುವನು,

ಶಬ್ಧಾರ್ಥ: ಕೆಲವಂ – ಕೆಲವನ್ನು; ಬಲ್ಲವ – ತಿಳಿದವರು, ಪಂಡಿತ; ಕಲ್ಲು – ಕಲಿತು; ಶಾಸ್ತ್ರ – ಸಂಪ್ರದಾಯ, ಆಚರಣೆ, ನಿಯಮ, ಮತ, ವಿಜ್ಞಾನ ಮುಂತಾದವುಗಳ ಬಗೆಗೆ ಬರೆದ ಗ್ರಂಥ; ಮಾಳ್ವವ – ಆಚರಿಸುವವ, ಮಾಡುವವ; ಸುಜ್ಞಾನ – ಉತ್ತಮವಾದ ತಿಳಿವಳಿಕೆ; ಸಜ್ಜನರ ಸಂಘ – ಒಳ್ಳೆಯವರ, ವಿವೇಕವುಳ್ಳವರ ಸಹವಾಸ; ಆರಿಯಲ್ – ತಿಳಿದುಕೊಳ್ಳಲು; ಸರ್ವಜ್ಞನಪ್ಪಂ – ಎಲ್ಲವನ್ನೂ ತಿಳಿಯಬಲ್ಲವನಾಗುವ; ನರ – ಮನುಷ್ಯ; ಪಲವು – ಹಲವು; ಪಳ್ಳ – ಹಳ್ಳ, ಸಣ್ಣ ಜಲಪ್ರದೇಶ.

೨. ಉಣದಿರ್ಪಾ ಧನಮಿರ್ದೊಡೇನು ಸುತನಿರ್ದೇಂ ಮುಪ್ಪಿನಲ್ಲಾಗದಾ।

ಒಣಗಲ್ಪೈರಿಗೆ ಬಾರದಿರ್ದ ಮಳೆ ತಾಂ ಬಂದೇನಾಪತ್ತಿನೊಳ್।।

ಮಣಿದುಂ ನೋಡದ ಬಂಧುವೇತಕೆಣಿಸಲ್ ಕಾಲೋಚಿತಕ್ಕೈದಿದಾ।

ತೃಣವೇ ಪರ್ವತವಲ್ಲವೇ ಹರಹರಾ ಶ್ರೀಚೆನ್ನಸೋಮೇಶ್ವರಾ।

ಆಗತ್ಯಬಿದ್ದಾಗ ಸಕಾಲದಲ್ಲಿ ಪ್ರಯೋಜನಕ್ಕೆ ಬಾರದ ವಸ್ತು-ಸಂಗತಿ-ವ್ಯಕ್ತಿಗಳಿಂದ ಯಾವ ಉಪಯೋಗವೂ ಇಲ್ಲವೆಂಬುದನ್ನು ಸೋಮೇಶ್ವರ ಹಲವು ಉದಾಹರಣೆಗಳ ಮೂಲಕ ಇಲ್ಲಿ ವಿವರಿಸಿ ಹೇಳಿದ್ದಾನೆ. ಹಣವಿರುವುದು ಉಪಯೋಗಿಸುವುದಕ್ಕೆ, ಉಪಯೋಗಕ್ಕೆ ಬಾರದ ಧನದಿಂದ ಲಾಭವಿಲ್ಲ. ಅಂತೆಯೇ ಮಗ ಮುಪ್ಪಿನಲ್ಲಿ ತಂದೆ-ತಾಯಿಯನ್ನು ಸಲಹಬೇಕು. ಸಲಹದಿರುವ ಮಗನಿದ್ದು ಉಪಯೋಗವಿಲ್ಲ. ಮಳೆ ಸಕಾಲದಲ್ಲಿ ಬಂದರೆ ಪ್ರಯೋಜನವಿದೆಯೇ ಹೊರತು (ಪೈರು ಒಣಗುತ್ತಿರುವಾಗ ಸುರಿದರೆ ಲಾಭವೇ ಹೊರತು), ಬೇರೆ ಸಮಯದಲ್ಲಿ ಸುರಿವುದು ವ್ಯರ್ಥ, ಅದರಂತೆಯೇ ಕಷ್ಟಕಾಲದಲ್ಲಿ ಬಂದು ವಿಚಾರಿಸಿ ಕೊಳ್ಳುವವನೇ ನಿಜವಾದ ನಂಟ, ಕಷ್ಟಕ್ಕೊದಗಿಬಾರದ ನೆಂಟ ನಿಷ್ಪ್ರಯೋಜಕ. ಸಮಯಕ್ಕೆ ದೊರೆತ ಹುಲ್ಲುಕಡ್ಡಿಯಷ್ಟು ಸಹಾಯ ಕೂಡ ಅಲ್ಪದ್ದೆನಿಸದೆ ಮಹತ್ತರವೆನಿಸುವುದೆಂದು ಕವಿ ಹೇಳಿದ್ದಾನೆ.

ಶಬ್ಧಾರ್ಥ: ಉಣದಿರ್ಪ – ಅನುಭೋಗಿಸಲಾಗದ; ಧನ – ಹಣ, ಸಂಪತ್ತು; ಸುತನಿರ್ದೇಂ – ಮಗನಿದ್ದರೇನು; ಆಪತ್ತಿನೊಳ್ – ಕಷ್ಟಕಾಲದಲ್ಲಿ; ಮಣಿದು – ಸೋತು; ಎಣಿಸಲ್ – ಲೆಕ್ಕಮಾಡಿ ನೋಡಲು, ಆಲೋಚನೆ ಮಾಡಿ ನೋಡಲು; ಕಾಲೋಚಿತಕ್ಕೆ – ಸಮಯಕ್ಕೆ ಸರಿಯಾಗಿ: ಐದಿದಾ – ಒದಗಿ ಬಂದ; ತೃಣ – ಹುಲ್ಲು.

೩. ಚಿಗುರೆಂದು ಮೆಲೆ ಬೇವು ಸ್ವಾದವಹುದೇ ಚೇಳ್ ಚಿಕ್ಕದೆಂದಳ್ಳರಿಂ|

ತೆಗೆಯಲ್ ಕಚ್ಚದೆ ಪಾಲನೂಡಿ ಫಣಿಯಂ ಸಾಕಲ್ಕೆ ವಿಶ್ವಾಸಿಯೇ।।

ಖಗಮಂ ಸಾಕುವೆನೆಂದು ಗೂಗೆಮರಿಯಂ ಸಂಪ್ರೀತಿಯಂದೋವರೇ?

ಪಗೆಯಂ ಬಾಲಕನೆಂಬರೇ ಹರಹರಾ ಶ್ರೀಚೆನ್ನಸೋಮೇಶ್ವರಾ।

ಸಣ್ಣ ಹುಡುಗ ನಮಗೇನು ಮಾಡಬಲ್ಲನೆಂದು ಶತ್ರುವಾದವನನ್ನು ಎಂದಿಗೂ ಅಲಕ್ಷ್ಯ ಮಾಡಬಾರದು. ದುಷ್ಟರನ್ನು ಅವನ ದುಷ್ಟಗುಣದ ಕಾರಣದಿಂದ ದೂರವಿಡಬೇಕೆಂದು ಕವಿ ಸೋಮನಾಥ ಈ ಪದ್ಯದಲ್ಲಿ ವಿವರಿಸಿದ್ದಾನೆ. ಬೇವಿನ ಎಲೆಯನ್ನು ಚಿಗುರೆಂದು ತಿಂದರೆ ಸಿಹಿಯಾಗಿರುವುದೆ? ಚೇಳನ್ನು ಚಿಕ್ಕದೆಂದು ಪ್ರೀತಿಯಿಂದ ಹಿಡಿದುಕೊಂಡರೆ ಅದು ಕುಟುಕದಿರುತ್ತದೆಯೆ? ಹಾವಿಗೆ ಹಾಲನ್ನು ಕುಡಿಸಿ ಪೋಷಿಸಿದರೆ ಅದು ನಮಗೆ ವಿಶ್ವಾಸವನ್ನು ತೋರುತ್ತದೆಯೆ? ಹಕ್ಕಿ ಸಾಕುವ ಅಪೇಕ್ಷೆಯಿಂದ ಯಾರಾದರೂ ಗೂಬೆಮರಿಯನ್ನು ಅಕ್ಕರೆಯಿಂದ ಸಾಕುವರೆ? ಅದೇ ರೀತಿ ಶತ್ರುವನ್ನು ಕೂಡ ಬಾಲಕನೆಂದು ಅಲಕ್ಷ್ಯ ಮಾಡುತ್ತಾರೆಯೇ? ಎಂದು ಪ್ರಶ್ನಿಸುವ ಮೂಲಕ ಶತ್ರುಗಳ ವಿಚಾರದಲ್ಲಿ ಎಚ್ಚರದಿಂದಿರಬೇಕೆಂದು ಕವಿ ಹೇಳಿದ್ದಾನೆ.

ಶಬ್ಧಾರ್ಥ: ಚಿಗುರು – ಕುಡಿ. ಪಲ್ಲವ; ಮೆಲೆ – ತಿನ್ನಲು; ಸ್ವಾದ – ರುಚಿ, ಸವಿ, ಸ್ವಾರಸ್ಯ; ಅಳ್ಕರಿಂ – ಅಕ್ಕರೆಯಿಂದ, ಪ್ರೀತಿಯಿಂದ; ಪಾಲನೂಡು – ಹಾಲನ್ನು ಉಣಿಸಲು; ಫಣಿ – ಸರ್ವ (ಪಣ ಎಂದರೆ ಹೆಡೆ, ಫಣಿ ಎಂದರೆ ಹೆಡೆಯುಳ್ಳ ಹಾವು); ಖಗ – ಪಕ್ಷಿ; ಗೂಗೆ-ಗೂಬೆ; ಸಂಪ್ರೀತಿ – ಮುದ್ದಿನಿಂದು; ಓವರೇ – ಸಲಹುವರೇ, ಪಗೆ – ಹಗೆ.

೪. ಅರೆಯಂ ಸೀಳುವೊಡಾನೆ ಮೆಟ್ಟಲಹುದೇ ಚಾಣಂಗಳಿಂದಲ್ಲದೇ|

ಕಿರುದಾಗಿರ್ದೊಡದೇನುಪಾಯಪರನೋರ್ವ೦ ಕೋಟಿಗೀಡಕ್ಕು ಹೆ।।

-ಮ್ಮರನಿರ್ದೇನದರಿಂದಲೆತ್ತಬಹುದೇ ಬಲ್ದಾರಮಂ ಸನ್ನೆ ಸಾ|

ವಿರ ಕಾಲಾಳಿನ ಸತ್ವವೈ ಹರಾಹರಾ ಶ್ರೀಚೆನ್ನಸೋಮೇಶ್ವರಾ।।

ದೇಹಬಲಕ್ಕಿಂತ ಸೂಕ್ಷ್ಮಮತಿಗಳ ಬುದ್ದಿಬಲ ಮುಖ್ಯವೆಂಬುದನ್ನು ಕವಿ ಇಲ್ಲಿ ನಿರೂಪಿಸಿದ್ದಾನೆ. ಬಂಡೆಯನ್ನು ಸೀಳಬೇಕಾದರೆ ಸಣ್ಣದಾಗಿರುವ ಉಕ್ಕಿನ ಉಳಿಯಿಂದ ಸಾಧ್ಯವೇ ಹೊರತು, ದೊಡ್ಡ ಶರೀರವುಳ್ಳ ಆನೆಯ ತುಳಿತದಿಂದ ಅಸಾಧ್ಯ. ಉಪಾಯ ಬಲ್ಲವನು ಒಬ್ಬನೇ ಆದರೂ ಆತ ಸಾಮಾನ್ಯರಾದ ಕೋಟಿ ಜನರಿಗೆ ಸರಿಸಮಾನವಿದ್ದಂತೆ. ಅತಿ ಭಾರದ ವಸ್ತುವನ್ನು ಮೇಲೆತ್ತ ಬೇಕಾದರೆ ದೊಡ್ಡ ಮರದಿಂದ ಸಾಧ್ಯವಿಲ್ಲ. ಭಾರವನ್ನೆತ್ತುವುದಕ್ಕಾಗಿ ಉಪಯೋಗಿಸುವ ಸನ್ನೆಗೆ (ಮೀಟುಗೋಲಿಗೆ) ಸಾವಿರ ಮಂದಿಯಷ್ಟು ಬಲವಿರುತ್ತದೆ. ಆದ್ದರಿಂದ ದೇಹದ ಗಾತ್ರಕ್ಕಿಂತ, ಯುಕ್ತಿ ಮತ್ತು ಶಕ್ತಿಗೆ ಪ್ರಾಮುಖ್ಯತೆ ಕೊಡಬೇಕೆಂಬುದು ಕವಿಯ ಆಶಯವಾಗಿದೆ.

ಶಬ್ಧಾರ್ಥ: ಅರೆ – ಬಂಡೆ; ಸೀಳುವೊಡೆ – ಸೀಳಬೇಕಾದರೆ; ಆನೆ ಮೆಟ್ಟಲಹುದೇ – ಆನೆ ತುಳಿದರಾದೀತೇ?; ಚಾಣ – ಉಳಿ, ಟಿಂಕ; ಕಿರು – ಚಿಕ್ಕದಾದ; ಉಪಾಯಪರ – ಉಪಾಯವನ್ನು ಬಲ್ಲವನು; ಓರ್ವ೦ – ಒಬ್ಬನು; ಈಡು – ಸಮಾನ; ಹೆಮ್ಮರ – ಹಿರಿದಾದ ಮರ; ಬಲ್ಭಾರಮಂ – ಬಲು ಭಾರವಾದುದನ್ನು; ಸನ್ನೆ – ಮೀಟುಗೋಲು; ಕಾಲಾಳು – ಚತುರಂಗ ಬಲದಲ್ಲಿ ಒಂದು ಸೈನ್ಯ.

೫. ಇರಿಯಲ್ಪಲ್ಲೊಡೆ ವೀರನಾಗು ಧರೆಯೊಳ್ ನಾನಾ ಚಮತ್ಕಾರಮಂ।

ಅರಿಯಲ್ಬಲ್ಲೊಡೆ ಮಂತ್ರಿಯಾಗು ವಿಭುವಾಗಾರೆಂದೊಡಂ ಕೋಪಮಂ।।

ತೊರೆಯಲ್ಬಲ್ಲೊಡೆ ಯೋಗಿಯಪ್ಪುದರಿಷಡ್ವರ್ಗಂಗಳಂ ಗೆಲ್ಲೊಡೇ|

ತೆರ ಬಲ್ಲರ್ಪೊಣೆಯಪ್ಪುದೈ ಹರಹರಾ ಶ್ರೀಚೆನ್ನಸೋಮೇಶ್ವರಾ।।

ಪ್ರತಿಯೊಂದು ಕೆಲಸಕ್ಕೂ ಅದನ್ನು ನಿರ್ವಹಿಸುವ ಸಾಮರ್ಥ್ಯವಿರುವುದು ಮುಖ್ಯವೆಂಬುದನ್ನು ಕವಿ ಸೋಮನಾಥ ಈ ಪದ್ಯದಲ್ಲಿ ತಿಳಿಸಿದ್ದಾನೆ. ಅವನ ಅಭಿಪ್ರಾಯದಂತೆ ಯುದ್ಧ ಮಾಡುವುದಕ್ಕೆ ತಿಳಿದಿರುವವನೇ ಸೈನಿಕ ಅಥವಾ ಭಟನಾಗ ಬೇಕು. ನಾನಾ ವಿಧವಾದ ಬುದ್ದಿವಂತಿಕೆಯ ಚಮತ್ಕಾರಗಳನ್ನು ತಿಳಿದಿರುವವನು ಮಂತ್ರಿಯಾಗಬೇಕು. ಯಾರು ಏನೆಂದರೂ ಕೋಪಿಸಿಕೊಳ್ಳದೆ ತಾಳ್ಮೆಯಿಂದಿರುವವನೇ ದೊರೆಯಾಗಬೇಕು. ಕಾಮ-ಕ್ರೋಧ ಮೊದಲಾದ ಅರಿಷಡ್ವರ್ಗವನ್ನು ಗೆಲ್ಲುವ ಸಾಮರ್ಥ್ಯ ಉಳ್ಳವನೇ ಯೋಗಿಯಾಗಬೇಕು. ತನ್ನ ಕೈಯಿಂದ ದಂಡ ತರುವ ಯೋಗ್ಯತೆಯುಳ್ಳವನೇ ಮತ್ತೊಬ್ಬರು ಮಾಡುವ ಸಾಲಕ್ಕೆ ಹೊಣೆಯಾಗಬೇಕು ಎಂಬುದಾಗಿ ಕವಿ ಈ ಪದ್ಯದಲ್ಲಿ ನೀತಿ ಹೇಳಿದ್ದಾನೆ.

ಶಬ್ಧಾರ್ಥ: ಇರಿ – ಕೊಲ್ಲು, ಚುಚ್ಚು, ತಿವಿ; ಧರೆ – ಭೂಮಿ; ಚಮತ್ಕಾರ – ಸೋಜಿಗ, ವಿಸ್ಮಯ, ಚತುರತೆ; ಅರಿ – ತಿಳಿದುಕೋ; ವಿಭು – ಪ್ರಭು; ತೊರೆ – ಸೃಜಿಸು; ಯೋಗಿ – ಚಿತ್ತವೃತ್ತಿ ನಿರೋಧ ಮಾಡಬಲ್ಲವನು, ಯತಿ; ಅರಿಷಡ್ವರ್ಗಗಳು – ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು; ಪೊಣೆ – ಹೊಣೆ.

೬. ಪೊಡೆಯೊಳ್ ತುಂಬಿರೆ ಪಂಕ ಮೇಲೆ ತೊಳೆಯಲ್ ತಾಂ ಶುದ್ದನೇನಪ್ಪನೇ|

ಕಡುಪಾಪಂ ಬಲು ಮಿಯಲಾತ ಶುಚಿಯೇ ಕಾಕಾಳಿ ತಾಂ ಮೀಯದೆ॥

ಗುಡಪಾನಂಗಳೊಳದ್ದೆ ಬೇವಿನ ಫಲಂ ಸ್ವಾದಪ್ಪುದೇ ಲೋಕದೊಳ್|

ಮಡಿಯೇ ನಿರ್ಮಲ ಚಿತ್ತವೈ ಹರಹರಾ ಶ್ರೀಚೆನ್ನಸೋಮೇಶ್ವರಾ॥

ಮೇಲೆ ಕಾಣುವ ಥಳುಕುಬಳುಕಿಗಿಂತ ಒಳಗಿನ ಅಂತಃಸತ್ವ ಗುಣ ಮುಖ್ಯವೆಂಬುದನ್ನು ಕವಿ ಇಲ್ಲಿ ವಿವರಿಸಿದ್ದಾನೆ. ಹೊಟ್ಟೆಯಲ್ಲಿ ಕಲ್ಮಷವನ್ನು ತುಂಬಿಕೊಂಡು ಮೇಲೆ ತೊಳೆದ ಮಾತ್ರಕ್ಕೆ ಪರಿಶುದ್ದವಾಗುವುದೆ? ವಿಪರೀತ ಕೆಟ್ಟ ಕೆಲಸ ಮಾಡಿ ಪಾಪಗಳಲ್ಲಿ ತೊಡಗಿರುವವನು ಅನೇಕ ತೀರ್ಥಸ್ನಾನಗಳನ್ನು ಮಾಡಿದರೆ ಶುದ್ಧನಾಗುವನೆ? ಕಾಗೆಗಳ ಗುಂಪು ಸ್ಥಾನ ಮಾಡುವುದಿಲ್ಲವೆ? ಬೇವಿನ ಹಣ್ಣನ್ನು ಬೆಲ್ಲದ ಪಾನಕದಲ್ಲಿ ಅದ್ದಿಟ್ಟರೆ ಅದರ ಕಷಿಯು ಹೋಗಿ ಸಿಹಿಯಾಗುವುದೆ? ಆದ್ದರಿಂದ ನಿಜವಾದ ‘ಮಡಿ’ ಎಂದರೆ ಮನಸ್ಸನ್ನು ಶುದ್ಧವಾಗಿಟ್ಟುಕೊಂಡಿರುವುದು. ಹೊರನೋಟಕ್ಕೆ ಶುಚಿಯಾಗಿರುವುದರಿಂದ ಯಾವ ಉಪಯೋಗವೂ ಇಲ್ಲ ಎಂಬುದನ್ನು ಕವಿ ಹಲವು ಉದಾಹರಣೆಗಳ ಮೂಲಕ ವಿವರಿಸಿದ್ದಾನೆ.

ಶಬ್ಧಾರ್ಥ: ಪೊಡೆ – ಹೊಟ್ಟಿ; ಪಂಕ – ಕೆಸರು; ಮೀಯ್ – ಸ್ಥಾನಮಾಡು; ಕಾಕಾಳಿ – ಕಾಗೆಗಳ ಗುಂಪು; ಗುಡಪಾನಂ – ಬೆಲ್ಲದ ಪಾನಕ; ಮಡಿ – ನೈರ್ಮಲ್ಯ, ಪರಿಶುದ್ಧತೆ; ಚಿತ್ತ-ಮನಸ್ಸು,

ಟಿಪ್ಪಣಿ

೧. ಶತಕ ಸಾಹಿತ್ಯ

ನೂರು ಪದ್ಯಗಳಿಂದ ಕೂಡಿದ ಗ್ರಂಥವನ್ನು ಶತಕ ಎಂಬ ಹೆಸರಿನಿಂದ ಕರೆಯುತ್ತಾರೆ. ಇದು ಕಂದ, ವೃತ್ತ, ಪಟ್ಟಿದಿ, ಸಾಂಗತ್ಯ ಮುಂತಾದ ಛಂದಸ್ಸಿನಲ್ಲಿ ರಚಿತವಾಗಿರುತ್ತವೆ. ಇದೊಂದು ಆತ್ಮನಿಷ್ಠವಾದ, ಭಾವನಿಷ್ಠವಾದ ಒಂದು ಕಾವ್ಯ ಪ್ರಕಾರ. ಮಹಾಕಾವ್ಯ, ಖಂಡಕಾವ್ಯಗಳಂತೆ ವಸ್ತುನಿಷ್ಠವಲ್ಲ, ಕಥಾವಸ್ತುವನ್ನೊಳಗೊಂಡಿರುವುದಿಲ್ಲ. ಕವಿಯ ಮನೋಲಹರಿ ಹರಿದಂತೆ ಹಲವಾರು ಸಂದರ್ಭಗಳಲ್ಲಿ ರಚಿತವಾದ ಪದ್ಯಗಳು ಒಂದು ವಿಷಯದ ವಿಕಸೂತ್ರಕ್ಕೆ ಒಳಗಾಗಿರುತ್ತವೆ. ಈ ಕಾರಣದಿಂದಲೇ ಪ್ರಾಚೀನನಕಾಲದ ಭಾವಗೀತೆಗಳೆಂದು ವಿದ್ವಾಂಸರು ಗುರುತಿಸಿದ್ದಾರೆ.

ಜ್ಞಾನ, ವೈರಾಗ್ಯ, ನೀತಿಗಳನ್ನು ಪ್ರತಿಪಾದಿಸುವುದು ಶತಕಗಳ ಸಾಮಾನ್ಯ ಲಕ್ಷಣವೆನ್ನಬಹುದು. ನೂರು ಪದ್ಯಗಳಿಂದ ಕೂಡಿದ ಗ್ರಂಥವನ್ನು ಶತಕವೆಂದು ಕರೆಯುವ ವಾಡಿಕೆ ಇದ್ದರೂ ಕನ್ನಡದಲ್ಲಿ ನೂರರಿಂದ ನೂರಿಪ್ಪತ್ತೆಂಟ ಪದ್ಯಗಳಿರುವ ಶತಕಗಳೂ ಕಂಡುಬರುತ್ತವೆ. ಕನ್ನಡದಲ್ಲಿ ನಾನೂರಕ್ಕೂ ಹೆಚ್ಚು ಶತಕಗಳಿವೆಯೆಂದು ಸಾಹಿತ್ಯ ಚರಿತ್ರಕಾರರ ಅಭಿಪ್ರಾಯಪಟ್ಟಿದ್ದಾರೆ. ನಾಗವರ್ಮಾಚಾರ್ಯನ (ಸು. 1071) ‘ಚಂದ್ರ ಚೂಡಾಮಣಿ ಶತಕ’ ಕನ್ನಡದ ಮೊತ್ತಮೊದಲನೆಯ ಶತಕ ಗ್ರಂಥ. ಎಷ್ಟೋ ಶತಕಗಳ ಕರ್ತೃ ಯಾರೆಂಬ ವಿಚಾರ ತಿಳಿದುಬಂದಿಲ್ಲ, ಹರಿಹರ, ಪುಲಿಗೆರೆ ಸೋಮನಾಥ, ದೇವರಾಜ ರತ್ನಾಕರವರ್ಣಿ ಮುಂತಾದ ಕವಿಗಳು ಜನಪ್ರಿಯವಾದ ಶತಕಗಳನ್ನು ರಚಿಸಿದವರು. ಬಹುಪಾಲು ಕನ್ನಡ ಶತಕಗಳು ಸ್ತೋತ್ರ ದೈವನಾಮಾವಳಿಯಿಂದ ತುಂಬಿ ಸಾಹಿತ್ಯದ ಪರಿಧಿಯಿಂದಾಚೆ ಉಳಿದಿವೆ.

ಹೊಂದಿಸಿ ಬರೆಯುವುದಕ್ಕೆ ಬೇಕಾದ ಮಾಹಿತಿ:

  • ಪಗೆಯಂ ಬಾಲಕನೆಂಬರೇ – ಪುಲಿಗೆರೆ ಸೋಮನಾಥ
  • ಪಗೆಯಂ ಬಾಲಕನೆಂಬರೇ – ಸೋಮೇಶ್ವರ ಶತಕ
  • ಸೋಮೇಶ್ವರ ಶತಕ – ಪುಲಿಗೆರೆ ಸೋಮನಾಥ
  • ಪುಲಿಗೆರೆ ಸೋಮನಾಥ – ಹರಹರಾ ಶ್ರೀಚೆನ್ನಸೋಮೇಶ್ವರಾ
  • ಪಗೆಯಂ ಬಾಲಕನೆಂಬರೇ – ಶತಕ

Leave a Comment