ದ್ವಿತೀಯ ಪಿಯುಸಿ ಕನ್ನಡ ಹಬ್ಬಲಿ ಅವರ ರಸಬಳ್ಳಿ ನೋಟ್ಸ್ ಪ್ರಶ್ನೋತ್ತರಗಳು, 2nd Puc Habbali Avara Rasaballi Kannada Notes Question And Answer Summery Guide Extract Mcq Pdf Download in Kannada Medium Karnataka State Syllabus 2025 ಹಬ್ಬಲಿ ಅವರ ರಸಬಳ್ಳಿ Notes ಹಬ್ಬಲಿ ಅವರ ರಸಬಳ್ಳಿ question answer Habbali Avara Rasaballi in Kannada Summary 2nd puc kannada 6th chapter notes kseeb solutions for class 12 kannada poem 6 notes ಹಬ್ಬಲಿ ಅವರ ರಸಬಳ್ಳಿ ಭಾವಾರ್ಥ.
ಹಬ್ಬಲಿ ಅವರ ರಸಬಳ್ಳಿ
– ಜನಪದ

ಕವಿ ಪರಿಚಯ
‘ಗರತಿಯ ಹಾಡು’ ಜನಪದ ತ್ರಿಪದಿಗಳ ಸಂಗ್ರಹವಾಗಿದ್ದು ಇವುಗಳನ್ನು ಅಜ್ಞಾತ ಕವಿಗಳು ರಚಿಸಿದ್ದಾರೆ. ಇದು ಯಾರು, ಯಾವಾಗ ರಚಿಸಿರಬಹುದೆಂದು ನಿಖರವಾಗಿ ಹೇಳಲಾಗದ ಸಾಮೂಹಿಕ ಸೃಷ್ಟಿಯ ರಚನೆಗಳು. ಜನಪದ ಸಾಹಿತ್ಯದಲ್ಲಿ ತ್ರಿಪದಿ ಪ್ರಕಾರಕ್ಕೆ ಮಹತ್ತ್ವದ ಸ್ಥಾನವಿದೆ. ಈ ಪ್ರಕಾರವು ತುಂಬಾ ಜನಪ್ರಿಯವಾದುದು. ಗೇಯ ಗುಣವನ್ನು ಪ್ರಧಾನವಾಗುಳ್ಳ ಈ ರಚನೆಗಳು ಸಾವಿರಾರು ವರ್ಷಗಳಷ್ಟು ಹಿಂದಿನ ಜನರ ಸಂಸ್ಕೃತಿಯನ್ನು ಬಿತ್ತರಿಸುತ್ತವೆ.
ಆಕರ: ‘ಗರತಿಯ ಹಾಡು’.
(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು
೧. ಬಂಗಾರ ನಿನಗ ಸ್ಥಿರವಲ್ಲ
ಈ ಮೇಲಿನ ವಾಕ್ಯವನ್ನು ‘ಹಬ್ಬಲಿ ಅವರ ರಸಬಳ್ಳಿ’ ಎಂಬ ಜನಪದ ತ್ರಿಪದಿಗಳ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಶ್ರೀಮಂತಿಕೆ ಬಂದಾಗ ಕೆಲವರಿಗೆ ತುಂಬಾ ಜಂಭ. ಬಡವರನ್ನು ಬೈಯುವುದು-ಜರೆಯುವುದು ಮುಂತಾಗಿ ಕ್ರೂರವಾಗಿ ವರ್ತಿಸುತ್ತಾರೆ. ಆದ್ದರಿಂದ ಇಲ್ಲಿ ಜನಪದ ಕವಿಯು ಬಂಗಾರದ ಬಳೆತೊಟ್ಟು ಬಡವರನ್ನು ಬೈಯಬೇಡ. ಬಂಗಾರ ನಿನಗೆ ಸ್ಥಿರವಲ್ಲ. ಮಧ್ಯಾಹ್ನದ ಬಿಸಿಲು ಸ್ವಲ್ಪ ಹೊತ್ತಿನ ನಂತರ ಜಾರಿಹೋಗುವಂತೆ ಶ್ರೀಮಂತಿಕೆಯು ನಮ್ಮಿಂದ ದೂರಾಗುತ್ತದೆ. ಅಶಾಶ್ವತವಾದ ಶ್ರೀಮಂತಿಕೆ ಬಂದಾಗ ಡಂಬಾಚಾರವೇಕೆ? ಎಂದಿನಂತೆಯೇ ಮಾನವೀಯತೆಯಿಂದ ವರ್ತಿಸೆಂಬ ನೀತಿಬೋಧಯನ್ನು ಇಲ್ಲಿ ಮಾಡಿದ್ದಾನೆ.
೨. ಹಿತ್ತಾಳೆಗಿಂತ ಬಲುಹೀನ
‘ಹಬ್ಬಲಿ ಅವರ ರಸಬಳ್ಳಿ’ ಎಂಬ ಜನಪದ ತ್ರಿಪದಿಯಿಂದ ಆಯ್ದುಕೊಂಡಿರುವ ವಾಕ್ಯವಿದು. ನಾವು ಉತ್ತಮರ ಸ್ನೇಹವನ್ನೇ ಮಾಡಬೇಕೆಂದು ಉಪದೇಶಿಸಿರುವ ಈ ತ್ರಿಪದಿಯು ಉತ್ತಮರ ಸ್ನೇಹದಿಂದ ನಮ್ಮ ವ್ಯಕ್ತಿತ್ವವು ಪುಟವಿಟ್ಟಿ ಬಂಗಾರದಂತಾಗುತ್ತದೆ. ಅದೇ ನಾವು ತಪ್ಪಿ ನಡೆದು ಹೀನರ ಸ್ನೇಹವನ್ನು ಮಾಡಿದರೆ ನಾವು ಹಿತ್ತಾಳೆಗಿಂತಲೂ ಹೀನಸ್ಥಿತಿಗೆ ತಲುಪುತ್ತೇವೆಂಬ ಎಚ್ಚರಿಕೆಯ ಮಾತು ಇಲ್ಲಿದೆ .ಬಂಗಾರ ಉತ್ತಮ. ಅದಕ್ಕೆ ಹೋಲಿಸಿದಾಗ ಹಿತ್ತಾಳೆಹೀನ ಎಂಬ ಭಾವನೆ ಇಲ್ಲಿದೆ. ಅದಕ್ಕಿಂತಲೂ ನಮ್ಮ ವ್ಯಕ್ತಿತ್ವದ ಘನತೆ ಹೆಚ್ಚುವುದು ಉತ್ತಮರ ಗೆಳೆತನದಿಂದ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
೩. ನೀ ತಂಪ ನನ್ನ ತವರೀಗಿ.
ಹೆಣ್ಣುಮಗಳೊಬ್ಬಳು ತನ್ನ ತಾಯಿಯನ್ನು ನೆನೆದು ಹೇಳಿರುವ ಈ ಮೇಲಿನ ವಾಕ್ಯವನ್ನು ‘ಹಬ್ಬಲಿ ಅವರ ರಸಬಳ್ಳಿ’ ಎಂಬ ಜನಪದ ತ್ರಿಪದಿಗಳ ಸಂಕಲನದಿಂದ ಸ್ವೀಕರಿಸಲಾಗಿದೆ. ತವರಿನಲ್ಲಿ ತಾಯಿ ಇದ್ದರೆ ಮಾತ್ರ ತಂಪು-ನೆಮ್ಮದಿ ಎಂಬುದಾಗಿ ಇಲ್ಲಿನ ಹೆಣ್ಣುಮಗಳು ಅಭಿಪ್ರಾಯಪಟ್ಟಿದ್ದಾಳೆ. ಬೇಸಿಗೆಯ ದಿನಗಳಲ್ಲಿ ತಂಪನ್ನು ನೀಡುವುದು ಬೇವಿನಮರ ಅದರಂತೆಯೇ ಭೀಮರತಿ ಯೆಂಬ ಹೊಳೆಯೂ ತಂಪೇ, ತವರಿನಲ್ಲಿ ತಾಯಿ ಇದ್ದರೆ ತವರುಮನೆ ತಂಪಾಗಿರುವುದು ಎಂಬುದು ಇಲ್ಲಿನ ಆಶಯವಾಗಿದೆ.
೪. ಜ್ಯೋತಿ ನಿನ್ನಾರ ಹೋಲರ.
‘ಹಬ್ಬಲಿ ಅವರ ರಸಬಳ್ಳಿ’ ಎಂಬ ಜನಪದ ತ್ರಿಪದಿಯಿಂದ ಆಯ್ದ ಈ ಮೇಲಿನ ವಾಕ್ಯವನ್ನು ಜಾನಪದ ಕವಯಿತ್ರಿಯೊಬ್ಬಳು ಹಾಡಿರುವಳು. ತನ್ನ ತಾಯಿಗಿಂತ ಹೆಚ್ಚಿನದು ಯಾವುದೂ ಇಲ್ಲ ಎಂಬುದನ್ನು ಹೇಳುವ ಸಂದರ್ಭವಿದಾಗಿದೆ. ಯಾರು ಜೊತೆಗಿದ್ದರೂ ಅದು ತಾಯಿಯ ಇರುವಿಕೆಗೆ ಸರಿಸಾಟಿಯಿಲ್ಲ. ಆದ್ದರಿಂದಲೇ ‘ತಾಯಿಗಿಂತ ಬಂಧುವಿಲ್ಲ’ ಎಂಬ ಮಾತು ಚಾಲ್ತಿಯಲ್ಲಿರುವುದು. ಸಾವಿರಕೊಳ್ಳಿ ಒಲೆಯಲ್ಲಿ ಉರಿದರೂ ಅದು ಮನೆಯನ್ನು ಬೆಳಗುವ ಜ್ಯೋತಿಗೆ ಸಮನಲ್ಲ. ಅದರಂತೆಯೇ ಯಾರು ಜೊತೆಗಿದ್ದರೂ ತಾಯಿಯ ಜೊತೆಗಿದ್ದಂತಾಗದು ಎಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿದೆ.
೫. ಹಬ್ಬಲಿ ಅವರ ರಸಬಳ್ಳಿ,
ಈ ಮೇಲಿನ ವಾಕ್ಯವನ್ನು ಇದೇ ಹೆಸರಿನ ಜನಪದ ತ್ರಿಪದಿಗಳ ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ. ಹೆಣ್ಣು ತನ್ನ ತವರಿಗೆ ಶುಭವನ್ನು ಹಾರೈಸುವ ಸಂದರ್ಭವಿದಾಗಿದೆ. ಹಾಲನ್ನು ಕುಡಿದ ತವರಿನ ಋಣ ತೀರಿಸುವುದು ಅಸಾಧ್ಯವಾದ ಕೆಲಸ. ಆದರೂ ಹೆಣ್ಣುಮಗಳೊಬ್ಬಳಿಗೆ ಏನಾದರೂ ಹಾರೈಸಬೇಕೆಂಬ ಬಯಕೆಯಿದೆ. ಆದರೆ ಏನೆಂದು ಹಾರೈಸುವುದೆಂಬುದೇ ಸಮಸ್ಯೆ. ಆದ್ದರಿಂದ ಆಕೆ ತನ್ನ ತವರಿನ ವಂಶವು ಹೊಳೆದಂಡೆಯಲ್ಲಿ ಹಬ್ಬಿ ಬೆಳೆಯುವ ಗರಿಕೆಯ ಕುಡಿಯಂತೆ ವಿಶಾಲವಾಗಿ ಹಬ್ಬಿ ಬೆಳೆಯಲೆಂದು ಮನದುಂಬಿ ಹಾರೈಸಿದ್ದಾಳೆ.
ಹೆಚ್ಚುವರಿ ಪ್ರಶ್ನೆಗಳು
೬. ನೀರಿಲ್ಲದ ಕೆರೆಗೆ ಕರುಬಂದು.
‘ಹಬ್ಬಲಿ ಅವರ ರಸಬಳ್ಳಿ’ ಎಂಬ ಜನಪದ ತ್ರಿಪದಿಯಿಂದ ಆಯ್ದುಕೊಂಡಿರುವ ಈ ಮೇಲಿನ ವಾಕ್ಯವನ್ನು ಹೆಣ್ಣು ಮಗಳೊಬ್ಬಳು ತನ್ನ ಮನಸ್ಸಿಗೆ ಹೇಳಿಕೊಂಡಿದ್ದಾಳೆ. ತಾಯಿ-ತವರು ಎರಡೂ ಹೆಣ್ಣುಮಕ್ಕಳಿಗೆ ತುಂಬಾ ಪ್ರೀತಿ-ನೆಮ್ಮದಿಗಳನ್ನು ನೀಡುವ ಸಂಗತಿಗಳು. ತಾಯಿ ಇದ್ದರೆ ಮಾತ್ರವೇ ತವರಿಗೆ ಒಂದು ಅರ್ಥ, ತಾಯಿಯಿಲ್ಲದ ತವರನ್ನು ಯಾವ ಹೆಣ್ಣುಮಗಳೂ ಬಯಸುವುದಿಲ್ಲ. ಆದ್ದರಿಂದ ಇಲ್ಲಿ ಹೆಣ್ಣುಮಗಳೊಬ್ಬಳು ತನ್ನ ಮನಕ್ಕೆ ತಾಯಿಯಿಲ್ಲದ ತವರಿಗೆ ಹೋಗಬೇಡವೆಂದು ಕೇಳಿಕೊಳ್ಳುತ್ತಿದ್ದಾಳೆ. ನೀರಿಲ್ಲದೆ ಕೆರೆಗೆ ಬಾಯಾರಿದ ಕರು ಬಂದಂತೆ ತಾಯಿಯಿಲ್ಲದ ತವರಿಗೆ ಹೋಗುವುದು ಎಂಬ ಅಭಿಪ್ರಾಯ ಅವಳದ್ದಾಗಿದೆ.
೭. ಬಡತನವೆಲ್ಲ ಬಯಲಾಗ.
‘ಹಬ್ಬಲಿ ಅವರ ರಸಬಳ್ಳಿ’ ಎಂಬ ಜನಪದ ತ್ರಿವದಿಗಳಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಮಕ್ಕಳಿಂದ ಸಿಗುವ ಆನಂದವು ನಮ್ಮ ಬಡತನವನ್ನು ಮರೆಸುವ ಶಕ್ತಿ ಹೊಂದಿದೆ ಎಂಬುದಾಗಿ ಜಾನಪದ ಕವಿಗಳು ಹೇಳಿದ್ದಾರೆ. ಬಡತನವೆಂದು ಮಕ್ಕಳನ್ನು ಬಡಿಯಬಾರದು. ಮಕ್ಕಳು ನಮ್ಮ-ತೊಡೆಯ ಮೇಲೆ ಆಡುತ್ತಿದ್ದರೆ ಬಡವರೆಂಬುದೇ ಮರೆತುಹೋಗುತ್ತದೆ. ಅಷ್ಟರಮಟ್ಟಿನ ಆನಂದ ನಮಗೆ ಮಕ್ಕಳಿಂದ ದೊರೆಯುತ್ತದೆ. ಮಗುವಿನ ನಗುವಿಗೆ ಬಡತನವನ್ನು ಮರೆಸುವ ಶಕ್ತಿಯಿರುತ್ತದೆಂಬುದನ್ನು ವಿವರಿಸುವಾಗ ಕವಿ ಹೀಗೆ ಹೇಳಿದ್ದಾರೆ. ಮಕ್ಕಳು ನಮ್ಮ ಬದುಕಿನಲ್ಲಿ ವಹಿಸುವ ಪಾತ್ರ ಅತ್ಯಂತ ಮುಖ್ಯವಾದುದು. ಆದ್ದರಿಂದ ಕಷ್ಟದಲ್ಲಿದ್ದೇವೆಂದು ಮಕ್ಕಳನ್ನು ಹೊಡೆದು-ಬಡಿದು ಮಾಡಬಾರದೆಂಬುದು ಕವಿಯ ಅಭಿಪ್ರಾಯವಾಗಿದೆ.
೮. ಬಾಳ ಮರುಗ್ಯಾಳ ಮನದಾಗ.
‘ಹಬ್ಬಲಿ ಅವರ ರಸಬಳ್ಳಿ’ ಎಂಬ ಜನಪದ ತ್ರಿಪದಿಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ತಾಯಿಯನ್ನು ನಿಂದಿಸುವ ತನ್ನ ತಮ್ಮನಿಗೆ ಕವಿ ಹೇಳಿರುವ ಬುದ್ಧಿಮಾತಿದಾಗಿದೆ. ಬುದ್ದಿಗೇಡಿಯಂತೆ ಹೆತ್ತ ತಾಯಿಯನ್ನು ನಿಂದಿಸಬೇಡ. ವಯೋವೃದ್ಧಳಾದ ಆಕೆಯನ್ನು ಬೈಯ್ದರೆ ಆಕೆ ಮನದಲ್ಲೇ ತುಂಬಾ ಮರುಗಬಹುದು. ತಂದೆ-ತಾಯಿಯರನ್ನು ನಿಂದಿಸುವುದು ತರವಲ್ಲ ಎಂಬ ನೀತಿಮಾತನ್ನು ಈ ಮೇಲಿನ ಮಾತು ಒಳಗೊಂಡಿದೆ.
(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ):
೧. ಉತ್ತಮರ ಗೆಳೆತನ ಹೇಗೆ ಇರಬೇಕು?
ಪುತ್ತಳಿ ಬಂಗಾರದಂತೆ
೨. ಮಂದಿ ಮಕ್ಕಳೊಂದಿಗೆ ಹೇಗಿರಬೇಕು?
ಚೆಂದಾಗಿ ಹೊಂದಿಕೊಂಡಿರಬೇಕು
೩. ಎಂತಹ ನೆರೆಯವರು ಇರಬೇಕು?
ಬುದ್ಧಿವಂತರ
೪. ಬ್ಯಾಸಗಿ ದಿವಸಕ್ಕೆ ಯಾವ ಮರ ತಂಪು?
ಬೇವು
೫. ತಾಯಿಯನ್ನು ಯಾವುದಕ್ಕೆ ಹೋಲಿಸಲಾಗಿದೆ?
ಜ್ಯೋತಿಗೆ
೬. ಹೆಣ್ಣುಮಕ್ಕಳ ದುಃಖವನ್ನು ಯಾರು ಬಲ್ಲರು?
ಹೆತ್ತತಾಯಿ
೭. ಗರತಿಯು ಹಾಲುಂಡ ತವರಿಗೆ ಏನೆಂದು ಹರಸುತ್ತಾಳೆ?
ತವರಿನ ರಸಬಳ್ಳಿಯು ಹೊಳೆದಂಡೆಯ ಗರಿಕೆಯ ಕುಡಿಯಂತೆ ಹಬ್ಬಿ ಬೆಳೆಯಲೆಂದು
ಹೆಚ್ಚುವರಿ ಪ್ರಶ್ನೆಗಳು
೮. ನೀರಿಲ್ಲದ ಕೆರೆಗೆ ಬಂದು ತಿರುಗಿ ಹೋಗುವುದು ಏನು?
ಕರು
೯. ಸುಟ್ಟು ಸುಣ್ಣದ ಹರಳಾದದ್ದು ಯಾವುದು?
ದೇಹ
೧೦. ಬಡತನ ಬಂದರ ಯಾರನ್ನು ಬಡಿಯಬೇಡವೆಂದು ಜನಪದರು ಹೇಳುತ್ತಾರೆ?
ಮಕ್ಕಳು
೧೧. ಹೆಣ್ಣು ಮಕ್ಕಳ ದುಃಖ ಹೆತ್ತವ್ವ ಬಲ್ಲಳು।
ಹುತ್ತದ ಒಳಗಿರೋ ಸರುಪನ ಬೇಗೆಯ।
ನೆತ್ತಿ ಮೇಲಿರುವ ಶಿವಬಲ್ಲ|| – ಈ ಪದ್ಯದಲ್ಲಿ ಹೆಣ್ಣುಮಕ್ಕಳ ಬಗೆಗೆ ಏನನ್ನು ಹೇಳಲಾಗಿದೆ?
ಹೆಣ್ಣುಮಕ್ಕಳ ದುಃಖ ತಾಯಿಗೆ ಮಾತ್ರ ಅರ್ಥವಾಗುತ್ತದೆ.
೧೨. ಹಿತ್ತಾಳೆಗಿಂತ ಬಲುಹೀನ ಯಾವುದು?
ಹೀನರೊಂದಿಗೆ ಗೆಳತನ
(ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ)
೧. ಬಡತನ ಹೇಗೆ ಬದಲಾಯಿತು?
ಮಧ್ಯಾಹ್ನದ ಬಿಸಿಲು ಹೊರಳಿದಂತೆ, ಸಿರಿತನವು ದೂರವಾದಾಗ ಬಡತನವು ಬಯಲಾಗುವುದು.
೨. ಇದ್ದಷ್ಟು ಬುದ್ಧಿಯನ್ನು ಹೇಗೆ ಕಳೆದುಕೊಳ್ಳುತ್ತಾರೆ?
ದುಷ್ಟರ ಸಹವಾಸವನ್ನು ಮಾಡಬಾರದು. ಮಾಡಿದರೆ ಇದ್ದಷ್ಟು ಬುದ್ದಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ.
೩. ಹಡೆದವ್ವನನ್ನು ಯಾವಾಗ ನೆನೆಯಬೇಕು?
ಊರೆಲ್ಲ ಮಲಗಿದ ಮೇಲೆ, ಬೆಳ್ಳಿಚುಕ್ಕಿ ಹೊರಡುವ ಏಕಾಂತದ ಸಮಯದಲ್ಲಿ ಹೆತ್ತವ್ವನನ್ನು ನೆನಪು ಮಾಡಿಕೊಳ್ಳಬೇಕು.
೪. ಹಡೆದ ತಂದೆ – ತಾಯಿಯ ಮಹತ್ವ ತಿಳಿಸಿರಿ.
ಹೆತ್ತ ತಂದೆ-ತಾಯಿ ಎಂದರೆ ಅಂಗಡಿಯಲ್ಲಿ ಸಿಗುವ ವಸ್ತುಗಳಲ್ಲ. ಒಂದು ವೇಳೆ ಉಂಗುರ-ಉಡುದಾರಗಳು ಹಾಳಾದರೆ ಸರಿಪಡಿಸಿಕೊಳ್ಳಬಹುದು. ತಂದೆ-ತಾಯಿಯರನ್ನು ಕಳೆದುಕೊಂಡರೆ ಮತ್ತೆ ತರಲಾಗದು.
೫. ಹಿತ್ತಾಳೆಗಿಂತ ಬಲುಹೀನ ಯಾವುದು?
ಹೀನರೊಂದಿಗೆ ಗೆಳೆತನವನ್ನು ಮಾಡಿದರೆ ನಮ್ಮ ವ್ಯಕ್ತಿತ್ವವು ಹಿತ್ತಾಳೆಗಿಂತಲೂ ಬಲುಹೀನ ಎನಿಸಿಕೊಳ್ಳುತ್ತದೆ.
ಹೆಚ್ಚುವರಿ ಪ್ರಶ್ನೆಗಳು
೬. ಕಣ್ಣೆಂಜಲ, ಬಾಯೆಂಜಲು ಯಾವುದು?
ಕಣ್ಣೆಂಜಲ ಕಾಡಿಗೆ, ಬಾಯೆಂಜಲ ವೀಳ್ಯ
(ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):
೧. ‘ಬಂಗಾರ ನಿನಗ ಸ್ಥಿರವಲ್ಲ’ ಎಂಬ ಮಾತಿನ ಸ್ವಾರಸ್ಯವನ್ನು ವಿವರಿಸಿರಿ.
ಬಡತನ ಸಿರಿತನಗಳಾವುವೂ ಶಾಶ್ವತವಲ್ಲ ಎಂಬುದರ ಅರಿವಿದ್ದೂ ಮನುಷ್ಯ ಸಿರಿತನಕ್ಕೆ ಹಂಬಲಿಸುತ್ತಾನೆ. ಅಲ್ಲದೆ ಸಿರಿತನವು ಬಂದಾಗ ತಲೆತಿರುಗಿದಂತೆ ವರ್ತಿಸುತ್ತಾನೆ. ಬಂಗಾರವನ್ನು ಮೈಮೇಲೆ ಹೇರಿಕೊಂಡು ಬಡವರನ್ನು, ಅವರ ಆಸಹಾಯಕತೆಯನ್ನು ಅಣಕಿಸಿ ಬೀಗುತ್ತಾನೆ. ಆದ್ದರಿಂದಲೇ ಜಾನಪದರು ‘ಬಂಗಾರ ನಿನಗೆ ಸ್ಥಿರವಲ್ಲ’ ಎಂಬ ಮಾತನ್ನು ಒತ್ತಿ ಹೇಳಿದ್ದಾರೆ. ಸಿರಿತನ-ಬಂಗಾರ ಇವೆಲ್ಲವೂ ದೊರೆತಷ್ಟೇ ವೇಗವಾಗಿ ನಮ್ಮಿಂದ ದೂರಾಗಿ, ಬಡತನ ಕಾಲೂರಬಹುದು. ಮಧ್ಯಾಹ್ನದ ಉರಿಬಿಸಿಲು ಸ್ವಲ್ಪ ಹೊತ್ತಿನಲ್ಲಿ ಕಣ್ಮರೆಯಾಗಿ ನೆರಳು ಆವರಿಸುವಂತೆ, ಬಡತನ ದೂರಾಗಬಹುದು. ಆದ್ದರಿಂದ ಸಿರಿತನ ಬಂದಾಗ ಬೀಗದೆ, ಜಂಭದಿಂದ ವರ್ತಿಸದೆ, ಎಲ್ಲರೊಂದಿಗೆ ಪ್ರೀತಿ-ಸಾಮರಸ್ಯದಿಂದ ಬಾಳುವುದು ಮುಖ್ಯ ಎಂಬ ಮಾತನ್ನು ‘ಬಂಗಾರ ನಿನಗೆ ಸ್ಥಿರವಲ್ಲ’ ಎಂಬ ಸ್ವಾರಸ್ಯಕರ ಮಾತಿನ ಮೂಲಕ ಅಭಿವ್ಯಕ್ತಿಸಿದ್ದಾರೆ.
೨. ಜನಪದರು ಹೇಳುವಂತೆ ನಮ್ಮ ನೆರೆಹೊರೆಯವರು ಹೇಗಿರಬೇಕು?
ಜನಪದರು ನಮ್ಮ ನೆರೆಹೊರೆಯಲ್ಲಿ ಎಂತಹವರಿರಬೇಕೆಂಬುದನ್ನು ವಿವರಿಸಿ ಹೇಳಿದ್ದಾರೆ. ಅವರ ಅಭಿಪ್ರಾಯದಂತೆ ನಮಗೆ ಬುದ್ದಿವಂತರ ನೆರೆ ಇರಬೇಕು. ನಮ್ಮ ಅಕ್ಕಪಕ್ಕದಲ್ಲಿರುವ ಬುದ್ದಿವಂತರ ಬದುಕಿನ ಕ್ರಮವನ್ನು ಅನುಸರಿಸಿ ನಾವೂ ಬದುಕನ್ನು ಬುದ್ದಿವಂತಿಕೆಯಿಂದ ನಿಭಾಯಿಸಬಹುದು. ಅದಲ್ಲದೆ, ನರೆಯಲ್ಲಿ ದುಷ್ಟರು, ಕುಲಗೇಡಿಗಳಿದ್ದಲ್ಲಿ ನಾವು ಇರುವ ಅಲ್ಪಸ್ವಲ್ಪ ಬುದ್ದಿಯನ್ನೂ ಕಳೆದುಕೊಂಡು ಅವರ ಗುಣಗಳನ್ನೇ ಬಯಸುವ ರೀತಿಯನ್ನೇ ಕಲಿತುಕೊಳ್ಳಬಹುದು. ಆದ್ದರಿಂದ ನಾವು ವಾಸಿಸುವ ಪರಿಸರದಲ್ಲಿ ಬುದ್ದಿವಂತರ ನೆರೆಯಿರುವುದು ಮುಖ್ಯವೆಂದು ಜನಪದರು ತಿಳಿಯ ಹೇಳಿದ್ದಾರೆ.
೩. ಹೆಣ್ಣು ಮಕ್ಕಳ ದುಃಖವನ್ನು ಬಲ್ಲವರು ಯಾರು? ಹೇಗೆ?
ಹೆಣ್ಣುಮಕ್ಕಳ ದುಃಖ ಅರ್ಥವಾಗುವುದು ಹೆತ್ತ ತಾಯಿಗೆ ಮಾತ್ರ, ಏಕೆಂದರ ಆಕೆಯೂ ಒಬ್ಬ ಹೆಣ್ಣು. ತನ್ನ ಮಗಳು ಅನುಭವಿಸುವ ಕಷ್ಟ-ದುಃಖ-ನೋವುಗಳನ್ನು ಸ್ವಾನುಭವದಿಂದ ಅರಿಯಬಲ್ಲಳು ಮತ್ತು ಸಹಾನುಭೂತಿಯಿಂದ ಕಾಣುವ ಕರುಳು ಆಕೆಯದಾಗಿದೆ. ತಂದೆಗಾಗಲಿ ಅಥವ ಗಂಡ-ಮಕ್ಕಳಿಗಾಗಲಿ ಒಂದು ಹೆಣ್ಣಿನ ಕಷ್ಟಗಳು ಸಂಪೂರ್ಣವಾಗಿ ಅರ್ಥವಾಗುವುದೇ ಇಲ್ಲ. ಹಡೆದ ತಾಯಿ ಮಾತ್ರ ಮಗಳ ಪ್ರತಿಯೊಂದು ಕಷ್ಟವನ್ನು ಅರ್ಥಮಾಡಿಕೊಳ್ಳುವ ಶಕ್ತಿಯುಳ್ಳವಳಾಗಿರುತ್ತಾಳೆ. ತಲೆಯ ಮೇಲಿರುವ ಸರ್ಪದ ಬೇಗೆ ಅರ್ಥವಾಗುವುದು ಅದನ್ನು ಹೊತ್ತಿರುವ ಶಿವನಿಗೆ ಮಾತ್ರ. ಅದರಂತೆಯೇ ಹೆಣ್ಣನ್ನು ಹೆತ್ತ ತಾಯಿಗೆ ಮಾತ್ರ ಹೆಣ್ಣುಮಕ್ಕಳ ದುಃಖದ ಅರಿವಾಗುತ್ತದೆ.
೪. ಗರತಿಯು ತವರಿಗೆ ಏನೆಂದು ಹರಸುತ್ತಾಳೆ?
ಗರತಿಗೆ ತಾನು ಹಾಲುಂಡು ಬೆಳೆದ ತವರಿಗೆ ಏನಾದರೂ ಹಾರೈಸಿ ಹಾಡಬೇಕೆಂಬ ಬಯಕಿಯಿದೆ. ಏನೇ ಮಾಡಿದರೂ ತವರಿನ ಋಣ ತೀರಿಸಲು ಸಾಧ್ಯವಾಗದು. ಆದರೂ ತನ್ನ ತವರಿಗೆ ಶುಭವನ್ನು ಹರಸಬೇಕೆಂಬ ಬಯಕೆ ಆಕೆಯದು. ಆದ್ದರಿಂದ ಆಕೆಯು ಎಲ್ಲಾ ಹರಕೆಗಳಿಗಿಂತಲೂ ಮಿಗಿಲಾದ ತವರಿನ ವಂಶವೃದ್ಧಿಯ ಸಂಗತಿಯನ್ನು ಹರಸಿದ್ದಾಳೆ. ಹೊಳೆದಂಡೆಯಲ್ಲಿ ಗರಿಕೆಯ ಕುಡಿಯು ಎಲ್ಲೆಂದರಲ್ಲಿ ಸಮೃದ್ಧವಾಗಿ ಬೆಳೆದು ಹಬ್ಬಿಕೊಂಡಿರುತ್ತವೆ. ಇದೇ ರೀತಿಯಲ್ಲಿ ತನ್ನ ವಂಶದ ರಸಬಳ್ಳಿಯೂ ಹಬ್ಬಿ ವ್ಯಾಪಿಸಲಿ ಎಂದಾಕೆ ಹೃದಯ ತುಂಬ ಹರಸುತ್ತಾಳೆ. ತವರಿನ ಬಗ್ಗೆ ಆಕೆಗಿರುವ ಪ್ರೀತಿ-ಕೃತಜ್ಞತೆಗಳು ಇಲ್ಲಿ ಎದ್ದು ಕಾಣುತ್ತದೆ.
ಹೆಚ್ಚುವರಿ ಪ್ರಶ್ನೆಗಳು
೫. ಜನಪದರು ಬಾಳಿ ಬದುಕಿದ ರೀತಿಯನ್ನು ತ್ರಿಪದಿಗಳ ಹಿನ್ನೆಲೆಯಲ್ಲಿ ವಿವರಿಸಿ.
ಜನಪದರು ಅತ್ಯಂತ ಮೌಲ್ಯಯುತವಾದ ಜೀವನವನ್ನು ನಡೆಸಿದ್ದಾರೆಂಬುದನ್ನು ಅವರ ತ್ರಿಪದಿಗಳಿಂದ ಅರಿಯಬಹುದು. ಶ್ರೀಮಂತಿಕೆ ಬಂದಾಗ ಆಹಂಕಾರ ಪಡದೆ ಬಡತನ ಬಂದರೆ ಕುಗ್ಗದೆ ಇರುವುದನ್ನು ಅವರು ಬಲ್ಲವರಾಗಿದ್ದರು. ಉತ್ತಮರ ಗೆಳೆತನ ಮಾಡಬೇಕು. ನಾಲ್ಕು ಜನರೊಂದಿಗೆ ಹೊಂದಿಕೊಂಡು ಬಾಳಬೇಕು, ಬುದ್ದಿವಂತರು ನೆರೆಯಲ್ಲಿರಬೇಕು. ತಾಯಿ-ತವರಿನ ಬಗ್ಗೆ ಅಪಾರವಾದ ಅಭಿಮಾನ ಹೊಂದಿರುವುದು – ಇವೇ ಮುಂತಾದ ಮೌಲ್ಯಗಳನ್ನು ಅವರ ಬದುಕಿನಲ್ಲಿ ಕಾಣಬಹುದು. ತಂದೆ-ತಾಯಿ ಎಂದರೆ ಹಣಕೊಟ್ಟು ಕೊಳ್ಳುವ ವಸ್ತುವಲ್ಲ. ವೃದ್ಧರನ್ನು ನೋಯಿಸದೆ ಗೌರವದಿಂದ ನಡೆಸಿಕೊಳ್ಳಬೇಕು ಎಂಬಿತ್ಯಾದಿ ಗುಣಗಳನ್ನು ಅವರು ತ್ರಿಪದಿಗಳಲ್ಲಿ ಪ್ರಕಟಿಸಿದ್ದಾರೆ.
೬. ಜನಪದರು ತಾಯಿ-ತವರಿನ ಬಗೆಗೆ ಇರಿಸಿಕೊಂಡ ಪ್ರೀತಿ ಎಂತಹುದು?
ಜನಪದರ ಬದುಕಿನಲ್ಲಿ ತಾಯಿ-ತವರಿಗೆ ಇನ್ನಿಲ್ಲದ ಮಹತ್ತ್ವವಿದೆ. ಪ್ರಸ್ತುತ ಪದ್ಯಭಾಗವನ್ನೇ ಗಮನಿಸುವುದಾದರೆ, ಜಾನಪದ ಕವಯಿತ್ರಿಯೊಬ್ಬಳು ಹೆಣ್ಣುಮಕ್ಕಳ ದುಃಖವನ್ನು ತಾಯಿಯಾದವಳು ಬಲ್ಲಳೆಂದು ಅಭಿಪ್ರಾಯಪಟ್ಟಿದ್ದಾಳೆ. ವಯಸ್ಸಾದ ತಾಯಿಯನ್ನು ಬೈಯಬಾರದೆಂಬುದು ಆಕೆಯ ಆಶಯ. ವಯಸ್ಸಾದ ವೃದ್ಧ ತಾಯಿಯನ್ನು ನೋಯಿಸಬಾರದು. ತಾಯಿಯಿಲ್ಲದ ತವರನ್ನು ಸ್ಮರಿಸಲೂ ಆಕೆ ಸಿದ್ಧಳಿಲ್ಲ. ತಾಯಿಯಿಲ್ಲದ ತವರಿಗೆ ಹೋಗದಿರು ಎಂದು ಮನಸ್ಸಿಗೆ ಬುದ್ದಿ ಹೇಳುವುದರಲ್ಲೂ ತಾಯಿ ಮತ್ತು ತವರಿನ ಬಗೆಗಿನ ಅಭಿಮಾನವೇ ವ್ಯಕ್ತವಾಗಿದೆ. ತಾಯಿ ಎಂದರೆ ಜ್ಯೋತಿ ಸ್ವರೂಪ, ತವರಿಗೆ ಹೋಗಲು – ತಾಯಿಯ ನೆನಪು ಮಾಡಿಕೊಳ್ಳಲು ಸಮಯದ ನಿರ್ದಿಷ್ಟತೆಯ ಪ್ರಶ್ನೆಯನ್ನೇ ಆಕೆ ನೋಡುವುದಿಲ್ಲ. ಬೆಳ್ಳಿಚುಕ್ಕಿ ಹೊರಡುವ ವೇಳೆಯಲ್ಲಿ ತಾಯವ್ವನನ್ನು ನೆನವುದಾಗಿ ಜಾನಪದ ಕವಯಿತ್ರಿ ಹೇಳಿದ್ದಾಳೆ. ಹಾಲುಂಡ ತವರು ಗರಿಕೆಯ ಕುಡಿಯಂತೆ ಹಬ್ಬಿ ಬೆಳೆಯಲೆಂದೂ ಹಾರೈಸಿದ್ದಾಳೆ.
ಭಾಷಾಭ್ಯಾಸ:
೧) ನಾನಾರ್ಥಗಳನ್ನು ಗಮನಿಸಿ:
ನೆರೆ – ಚೆನ್ನಾಗಿ, ಸೇರು; ಹೊಳೆ – ನದಿ, ಕಾಂತಿ; ನೆನೆ – ಸ್ಮರಿಸು, ತೊಯ್ದು – ಮುಂತಾದ ಪದಗಳನ್ನು ಗಮನಿಸಿ.
೨) ಸಮಾನಾರ್ಥಕ ಪದಗಳನ್ನು ಗಮನಿಸಿ:
ದೇಹ – ಶರೀರ, ಕಾಯ; ಸರ್ಪ – ಹಾವು, ಉರಗ – ಇವುಗಳಂತೆ ಪಠ್ಯವನ್ನಾಧರಿಸಿ ಐದು ಪದಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ.
ಬಂಗಾರ – ಚಿನ್ನ, ಆಭರಣ, ಒಡವೆ
ನೀರು – ಜಲ, ಸಲಿಲ
ನಂದಿ – ಬಸವ, ಎತ್ತು
ಶಿವ – ಹರ, ಶೂಲಿ
ಮರ – ವೃಕ್ಷ, ತರು.
ಕೆಳಗಿನ ಪದ್ಯದ ಭಾವಾರ್ಥವನ್ನು ಬರೆಯಿರಿ:
೧. ಹಾಲುಂಡ ತವರೀಗಿ ಏನೆಂದು ಹರಸಲಿ।
ಹೊಳೆದಂಡಿಲಿರುವ ಕರಕೀಯ| ಕುಡಿಯಂಗ|
ಹಬ್ಬಲಿ ಅವರ ರಸಬಳ್ಳಿ||
ಜನಪದ ತ್ರಿಪದಿಗಳಿಂದ ಈ ಮೇಲಿನ ಪದ್ಯವನ್ನು ಆಯ್ದುಕೊಳ್ಳಲಾಗಿದೆ. ಜಾನಪದ ಕವಯಿತ್ರಿಯೊಬ್ಬಳು ತನ್ನ ತವರನ್ನು ನೆನೆದು, ತವರಿಗೆ ಹರಸಿರುವ ಪರಿಯನ್ನು ಈ ಪದ್ಯದಲ್ಲಿ ಕಾಣಬಹುದು. ಹಾಲನ್ನು ಕುಡಿದು ಬೆಳೆದ ನನ್ನ ತವರನ್ನು ಏನೆಂದು ಹರಸಲಿ? ಎಂದು ಪ್ರಶ್ನಿಸಿರುವ ಆಕೆಯು ಹೊಳೆಯ ದಡದಲ್ಲಿ ಗರಿಕೆಯ ಕುಡಿಯು ಸಮೃದ್ಧವಾಗಿ ಬೆಳೆದು ಹಬ್ಬಿರುತ್ತದೆ. ಆ ಗರಿಕೆಯ ಚಿಗುರಿನಂತೆಯೇ ನನ್ನ ತವರೆಂಬ ರಸಬಳ್ಳಿಯೂ ಸಮೃದ್ಧವಾಗಿ ಹಬ್ಬಿ ಹರಡಿಕೊಳ್ಳಲಿ ಎಂದು ಆಕೆ ಹರಸುತ್ತಾಳೆ.
ತವರಿನ ಋಣವೆಂಬುದು ತುಂಬಾ ದೊಡ್ಡದು ಮತ್ತು ಅಗಾಧವಾದುದು. ಅದನ್ನು ತೀರಿಸುವ ಬಯಕೆ ಹೆಣ್ಣುಮಕ್ಕಳಿಗೆ ಸರ್ವೆಸಾಮಾನ್ಯ. ಆದ್ದರಿಂದಲೇ ಇಲ್ಲಿ ಹೆಣ್ಣುಮಗಳೊಬ್ಬಳು ತವರು ಬೆಳೆಯಲೆಂದು ಆಶಿಸಿ, ಗರಿಕೆಯ ಕುಡಿಯ ಹಾಗೆ ಬೆಳೆಯಲೆಂದು ಹರಸಿದ್ದಾಳೆ. ಅವಳ ಈ ಹಾರೈಕೆಯಲ್ಲಿ ತವರಿಗೆ ಬಗೆಗಿನ ಪ್ರೀತಿಯು ಸೊಗಸಾಗಿ ವ್ಯಕ್ತಗೊಂಡಿದೆ.
ಪದ್ಯದ ಸಾರಾಂಶ ಮತ್ತು ವಿಮರ್ಶೆ
ಜನಪದ ತ್ರಿಪದಿಗಳಲ್ಲಿ ತಾಯಿ-ತವರು ಬಡತನ-ಸಿರಿತನ ಮುಂತಾದ ವಿಚಾರಗಳ ಅಭಿವೃಕ್ತಿಯಿದೆ ಪಾಕ್ಕಳನ್ನು ಲಾಲಿಸುವ ಪಾಲಿಸುವ ಸುಂದರವಾದ ವಾತ್ಸಲ್ಯ ಗೀತೆಗಳಿವೆ.
೧. ಬಂಗಾರ ಬಳೆಯಿಟ್ಟು ಬೈಬ್ಯಾಡ ಬಡವರನು|
ಬಂಗಾರ ನಿನಗ ಸ್ಥಿರವಲ್ಲ| ಮಧ್ಯಾನದ|
ಬಿಸಿಲು ಹೊಳ್ಳೋದು ತಡವಲ್ಲ||
ಶ್ರೀಮಂತಿಕೆ ಬಂದಾಗ ಬಂಗಾರದ ಬಳೆಯನ್ನು ಕೈಗೆ ತೊಟ್ಟು, ಬಡತನದಲ್ಲಿರುವವರ ಅಸಹಾಯಕತೆಯನ್ನ ನಿಂದಿಸಬಾರದು, ಬೈಯಬಾರದು. ಬಂಗಾರ ಯಾರಲ್ಲೂ ಸ್ಥಿರವಾಗಿರುವುದಿಲ್ಲ. ಅದು ಬಂದಷ್ಟೇ ವೇಗವಾಗಿ ನಮ್ಮಿಂದ ದೂರಾಗಬಹುದು. ಮಧ್ಯಾಹ್ನದ ಬಿಸಿಲು ಸ್ವಲ್ಪ ಹೊತ್ತು ಇರುತ್ತದೆ. ಬಿಸಿಲಿಳಿದು ನೆರಳು ಬರುವಂತೆ, ಶ್ರೀಮಂತಿಕೆ ಹೋಗಿ ಮತ್ತೆ ಬಡತನವು ಬರಬಹುದು. ಹೀಗಿರುವಾಗ ಶ್ರೀಮಂತಿಕೆ ಇದೆಯೆಂದು ಬೀಗಿ ಬಡವರನ್ನು ಬಯ್ಯುವುದು ಸರಿಯಲ್ಲ ಶ್ರೀಮಂತಿಕೆ ಅಶಾಶ್ವತವೆಂದು ತಿಳಿದಿದ್ದರೂ ಬೀಗುವುದೇಕೆಂದು ಜಾನಪದರು ಪ್ರಶ್ನಿಸಿದ್ದಾರೆ.
೨. ಬಡತನ ಬಂದರ ಬಡಿಬ್ಯಾಡ ಬಾಲರನ|
ಅಡ್ಯಾಡಿ ಬಂದು ತೊಡಿಮ್ಯಾಲ| ಆಡಿದರು|
ಬಡತನವೆಲ್ಲ ಬಯಲಾಗೆ||
ಬಡತನವಿದೆಯೆಂದು ಮನೆಯಲ್ಲಿರುವ ಮಕ್ಕಳನ್ನು ಹಿಡಿದು ಬಡಿಯಬಾರದು. ಬಡತನವನ್ನು ತಂದವರು ಅವರಲ್ಲ ಬಡತನದ ನೋವನ್ನು ಮರೆಸುವ ಶಕ್ತಿ ಮಕ್ಕಳಿಗಿದೆ. ನಾವು ದುಃಖ-ಚಿಂತೆಯಲ್ಲಿರುವಾಗ ಮಕ್ಕಳು ಆಡುತ್ತಾ ಬಂದು ತೊನೆಯ ಮೇಲೆ ಕುಳಿತು ಬಾಲಲೀಲೆಗಳನ್ನು ಪ್ರದರ್ಶಿಸಿದರೆ ಸಾಕು. ನಮ್ಮ ಬಡತನದ ಚಿಂತೆ ದುಃಖ ಕಷ್ಟ-ನೋವುಗಳೆಲ್ಲವೂ ಓಡಿ ಹೋಗುತ್ತವೆ. ಇಂತಹ ಶಕ್ತಿಯಿರುವ ಬಾಲರನ್ನು ಬಡತನವೆಂದು ಬಡಿಯುವುದು ತರವಲ್ಲ ಎಂಬುದಾಗಿ ಜಾನಪದ ಕವಿಯು ನೀತಿಬೋಧೆ ಮಾಡಿರುವನು.
೩. ಉತ್ತಮರ ಗೆಳೆತನ ಪುತ್ಥಳಿ ಬಂಗಾರು|
ಮತ್ತಹೀನರ ಗೆಳೆತನ| ಮಾಡಿದರ|
ಹಿತ್ತಾಳೆಗಿಂತ ಬಲುಹೀನು||
ಸಹವಾಸವೆಂಬುದು ತುಂಬ ಮುಖ್ಯ ನಾವು ಯಾರೊಂದಿಗೆ ಸ್ನೇಹ ಬೆಳೆಸುತ್ತೇವೆನ್ನುವುದರ ಮೇಲೆ ನಮ್ಮ ವ್ಯಕ್ತಿತ್ವರ ಬೆಳವಣಿಗೆ ಅವಲಂಬಿಸಿರುತ್ತದೆ. ಆದ್ದರಿಂದ ಜಾನಪದರು ಉತ್ತಮರ ಗೆಳೆತನ ಮಾಡಿದರೆ ನಮ್ಮ ವ್ಯಕ್ತಿತ್ವಕ್ಕೆ ಆಪ್ಪಟ ಬಂಗಾರರ ಬೆಲೆ ಲಭಿಸುತ್ತದೆ. ಅದನ್ನು ಬಿಟ್ಟು ಬುದ್ದಿಹೀನರೊಂದಿಗೆ ಗೆಳತನ ಮಾಡಿದರೆ ನಾವು ಹಿತ್ತಾಳೆ ಎಂಬ ಲೋಹಕ್ಕಿಂತಲು ಬಲುಹೀನರಾಗುತ್ತೇವೆ ಎಂದಿದ್ದಾರೆ. ಉತ್ತಮರ ಗೆಳೆತನ ಮುಖ್ಯ ಎಂಬ ಆಶಯವಿಲ್ಲಿದೆ.
೪. ಮಂದಿಮಕ್ಕಳೊಳಗ ಛೆಂದಾಗೊಂದಿರಬೇಕ|
ನಂದೀಯ ಶಿವನ ದಯದಿಂದ| ಹೋಗಾಗ |
ಮಂದಿ ಬಾಯಾಗ ಇರಬೇಕು||
ಸಮಾಜದಲ್ಲಿ ಹೊಂದಾಣಿಕೆಯಿಂದ ಬದುಕುವುದು ಮುಖ್ಯವೆಂಬ ಅಂಶವನ್ನು ಈ ತ್ರಿಪದಿಯಲ್ಲಿ ಕವಿಯ ವಿವರಿಸಿದ್ದಾನೆ. ವ್ಯಕ್ತಿಯು ಬದುಕಿರುವಾಗ ತನ್ನ ಅಕ್ಕಪಕ್ಕದ ಜನರೊಂದಿಗೆ, ಮಕ್ಕಳು ಮರಿಗಳೊಂದಿಗೆ ಚೆನ್ನಾಗಿ ಹೊಂದಿಕೊಂಡ ಬಾಳುವುದು ಮುಖ್ಯ. ಒಂಟಿಯಾಗಿರುವುದು ಅಸಾಧ್ಯ ಚೆನ್ನಾಗಿ ಹೊಂದಿಕೊಂಡಿರುವ ಮನುಷ್ಯನನ್ನು ಆತನ ಮರಣದ ನಂತರವೂ ಜನ ಸ್ಮರಿಸುತ್ತಾರೆ. ದೇವರ ದಯದಿಂದ ನಾವು ಸತ್ತ ಮೇಲೂ ನಾಲ್ಕು ಜನರ ಬಾಯಲ್ಲಿ ಬದುಕಿರುವ ಸಾರ್ಥಕ ಜೀವನ ನಮ್ಮದಾಗಬೇಕೆಂಬ ಆಶಯವಿಲ್ಲಿದೆ.
೫. ಇದ್ದರ ಇರಬೇಕು ಬುದ್ಧಿವಂತರ ನೆರೆಯು|
ಖುದ್ದರಗೇಡಿ ಕುಲಗೇಡಿ| ನೆರೆಯಿದ್ದು|
ಇದ್ದುಟ್ಟು ಬುದ್ದಿ ಕಳಕೊಂಡು||
ನಾವು ಬದುಕುತ್ತಿರುವ ವಾತಾವರಣದಲ್ಲಿ ಅಕ್ಕಪಕ್ಕದಲ್ಲಿ ಎಂತಹ ಜನರಿರುತ್ತಾರೆಂಬುದು ಅತಿಮುಖ್ಯ. ಬುದ್ಧಿವಂತರು ನಮ್ಮ ನೆರೆಯಲ್ಲಿ ವಾಸಿಸಿದರೆ ಅವರಿಂದ ಉಪಯೋಗವಾಗುವುದು. ಅದಲ್ಲದೆ, ದುಷ್ಟರಾದವರು ನಮ್ಮ ನೆರೆಯಲ್ಲಿದ್ದರೆ ನಾವು ಇರುವ ಒಳ್ಳೆಯ ಬುದ್ದಿಯನ್ನೂ ಕಳೆದುಕೊಂಡು ಅವರಂತೆಯೇ ದುಷ್ಟಬುದ್ದಿ ಬೆಳೆಸಿಕೊಳ್ಳುತ್ತೇವೆ. ಆದ್ದರಿಂದ ಒಳ್ಳೆಯ ನೆರೆಯವರ ಸಹವಾಸ ಸದಾ ಅಗತ್ಯ.
೬. ಹುಟ್ಟುವಾಗ ತರಲಿಲ್ಲ ಹೋಗುವಾಗೊಯ್ಯಲಾರೆ|
ಸುಟ್ಟು ಸುಟ್ಟು ಸುಣ್ಣದ್ದರಳಾಯ್ತು| ದೇಹವು|
ಕಷ್ಟವನು ಬಿಡಿಸೊ ಸೃಷ್ಟಿಗೊಡೆಯ।।
ಕಷ್ಟದಿಂದ ಪಾರುಮಾಡಬೇಕೆಂದು ಸೃಷ್ಟಿಗೊಡೆಯನಾದ ದೇವರಲ್ಲಿ ಜಾನಪದ ಕವಿಯು ಮೊರೆಯಿಡುವ ಚಿತ್ರಣವು ಈ ತ್ರಿಪದಿಯಲ್ಲಿದೆ. ಹುಟ್ಟುವ ಮೊದಲು ಈ ದೇಹವಿರಲಿಲ್ಲ, ಭೂಮಿಯ ಮೇಲೆ ಹುಟ್ಟಿದ ಮೇಲಷ್ಟೇ ಈ ದೇಹ ದೊರೆತಿರುವುದು. ಅದೇ ರೀತಿ ಸತ್ತಾಗಲೂ ಈ ದೇಹವನ್ನು ಭೂಮಿಯ ಮೇಲೆ ಬಿಟ್ಟು ಹೋಗುತ್ತೇವೆಯೇ ಹೊರತು ಹೊತ್ತುಕೊಂಡು ಹೋಗುವುದಿಲ್ಲ. ಆದರೆ ಹುಟ್ಟಿದಾಗಿನಿಂದ ಸಾಯುವವರೆಗಿನ ಅವಧಿಯಲ್ಲಿ ಜೀವನ ನಡೆಸಲೇಬೇಕಿರುವುದರಿಂದ ಆ ಬದುಕಿನಲ್ಲಿ ಕಷ್ಟಗಳು ಬಂದಾಗ ಬಿಡಿಸಿ ಸಲಹಬೇಕೆಂದು ಜಾನಪದ ಕವಿಯು ದೇವರನ್ನು ಪ್ರಾರ್ಥಿಸಿರುವನು.
೭. ಬ್ಯಾಸಗಿ ದಿವಸಕ ಬೇವಿನ ಮರ ತಂಪು|
ಭೀಮರತಿಯೆಂಬ ಹೊಳಿ ತಂಪು ಹಡೆದಮ್ಮ|
ನೀ ತಂಪ ನನ್ನ ತವರೀಗಿ||
ತಾಯಿಯಿರುವ ತವರುಮನೆಯನ್ನು ನೆನೆದು ಹೆಣ್ಣುಮಗಳೊಬ್ಬಳು ಹಾಡಿರುವ ತ್ರಿಪದಿಯಿದು, ಬೇಸಗೆಯ ದಿನಗಳಲ್ಲಿ ಉಷ್ಣತೆಯು ಹೆಚ್ಚು ಆಗ ಬೇವಿನ ಮರಗಳಿದ್ದರೆ ಅದರಿಂದ ಬರುವ ತಂಪು ಹವೆಯು ಉಷ್ಣತೆಯನ್ನು ನಿವಾರಿಸುತ್ತದೆ. ಅದೇ ರೀತಿ ಬೇಸಿಗೆಯಲ್ಲಿ ಭೀಮರತಿ ಎಂಬ ಹೊಳೆಯ ನೀರೂ ತಂಪನ್ನು ಎರೆಯುತ್ತದೆ. ಇವುಗಳಂತೆಯೇ ತವರಿನಲ್ಲಿರುವ ತಾಯಿಯ ನೆನಪು ಕೂಡ ಮಗಳಿಗೆ ತಂಪಾಗಿ ಕಂಡಿದೆ. ಅಮ್ಮನ ನೆನಪೇ ತಂಪೆಂಬ ಭಾವ ಇಲ್ಲಿ ಸೊಗಸಾಗಿ ಮೂಡಿಬಂದಿದೆ.
೮. ಕಣ್ಣೆಂಜಲ ಕಾಡೀಗಿ ಬಾಯೆಂಜಲ ವೀಳ್ಯಾವ|
ಯಾರೆಂಜಲುಂಡು ನನಮನವೆ| ಹಡೆದೌವ್ನ|
ಬಾಯೆಂಜಲುಂಡು ಬೆಳೆದೇನ||
ತಾಯಿ ತನ್ನ ಮಗುವಿಗೆ ಇತರರ ದೃಷ್ಟಿತಾಗಬಾರದೆಂದು (ಕಣ್ಣೆಂಜಲು) ಕಾಡಿಗೆಯನ್ನು ಹಣೆಗೆ ಕೆನ್ನೆಗೆ ಹಚ್ಚಿ ಮಗುವನ್ನು ಕಾಪಾಡುತ್ತಾಳೆ. ಹಾಗೆಯೇ ಎಲೆಯಡಿಕೆಯ ಉಗುಳಿನಿಂದ ಥ ಎಂದು ಉಗುಳಿ ದೃಷ್ಟಿ ತೆಗೆದಿರುತ್ತಾಳೆ, ಅವಳಿಟ್ಟ ಕಣ್ಣೆಂಜಲು, ಉಗುಳೆಂಜಲನ್ನು ಉಂಡು ಮಗು ಬೆಳೆಯುತ್ತದಾದ್ದರಿಂದ ಇಲ್ಲಿ ಕವಿಯು ತಾನು ತಾಯಿಯ ಎಂಜಲುಂಡು ಬೆಳೆದೆನೆಂದು ಹೇಳಿಕೊಂಡಿರುವುದನ್ನು ಗಮನಿಸಬಹುದು. ತಾಯಿ ಮಕ್ಕಳ ನಡುವೆ ಎಂಜಲಿನ ಭೇದವಿಲ್ಲ. ಬದಲಿಗೆ ‘ಎಂಜಲು’ ಅವರಿಬ್ಬರನ್ನು ಬಂಧಿಸಿದೆ ಎನ್ನಬಹುದು.
೯. ಯಾರು ಇದ್ದರು ನನ್ನ ತಾಯವ್ವನ್ನೋಲರ|
ಸಾವಿರಕೊಳ್ಳಿ ಒಲಿಯಾಗು| ಇದ್ದರು|
ಜ್ಯೋತಿ ನಿನ್ನ್ಯಾರ ಹೋಲರ||
ತಾಯಿಗಿಂತ ದೊಡ್ಡ ಬಂಧು ಇನ್ನೊಬ್ಬರಿಲ್ಲ. ಆದ್ದರಿಂದ ಅವಳ ಸ್ಥಾನವನ್ನು ಬೇರೆ ಯಾರಿಗೂ ತುಂಬಲು ಸಾಧ್ಯವಿಲ್ಲ. ಯಾರಿದ್ದರೂ ತಾಯಿ ಇದ್ದಂತೆ ಆಗುವುದಿಲ್ಲ. ಒಲೆಯೊಳಗೆ ಸಾವಿರ ಕೊಳ್ಳಿ ಧಗಧಗನೆ ಉರಿಯುತ್ತಿರಬಹುದು, ಆದರೆ ಅವು ಮನೆಯನ್ನು ಬೆಳಗುವ ಹಣತೆಯ ಜ್ಯೋತಿಗೆ ಸರಿಸಾಟಿಯಲ್ಲ, ಅದರಂತೆಯೇ ನಮ್ಮ ಬಾಳನ್ನು ತಾನುರಿದು ಬೆಳಗುವ ತಾಯಿಗೆ ಇನ್ಯಾರು ಹೋಲಿಕೆಯಾಗವೆಂಬ ತ್ರಿಪದಿಯು ಅತ್ಯಂತ ಸುಂದರವಾಗಿದೆ.
೧೦. ಹೆಣ್ಣು ಮಕ್ಕಳ ದುಃಖ ಹೆತ್ತವ್ವ ಬಲ್ಲಳು|
ಹುತ್ತದ ಓಳಗಿರೋ ಸರುಪನ| ಬೇಗೆಯ|
ನೆತ್ತಿ ಮೇಲೆರುವ ಶಿವಬಲ್ಲ||
ಹೆಣ್ಣು ಮಕ್ಕಳ ದುಃಖವನ್ನು ತಾಯಿ ಮಾತ್ರವೇ ಅರ್ಥಮಾಡಿಕೊಳ್ಳಬಲ್ಲಳು, ತಂದೆಗಾಗಲಿ-ಗಂಡನಿಗಾಗಲಿ ಹೆಣ್ಣುಮಕ್ಕಳ ಮಚುವ ತೀವ್ರತೆಯ ಅರಿವಾಗುವುದಿಲ್ಲ. ತನ್ನ ತಲೆಯ ಮೇಲಿರುವ ಸರ್ಪದ ವಿಷದ ಬೇಗೆಯ ಅರಿವು ಶಿವನಿಗಾಗುವಂತೆ, ಹೆಣ್ಣಿನ ದುಃಖ ಹೆತ್ತ ತಾಯಿಗೆ ಮಾತ್ರವೇ ಅರ್ಥವಾಗುವುದೆಂದು ಇಲ್ಲಿ ಹೇಳಲಾಗಿದೆ.
೧೧. ತಾಯನ್ನ ನೆನೆಯೂದು ಯಾಯಾಳಿ ಯಾಹೊತ್ತು|
ಊರೆಲ್ಲ ಉಂಡು ಮಲಗಾಗ| ಬೆಳ್ಳಿಚಿಕ್ಕಿ|
ಹೊಂಡಾಗ, ಹಡೆದನ್ನ ನೆನದೇನ||
ಹೆತ್ತ ತಾಯಿಯು ಸದಾ ಸ್ಮರಣೀಯಳು. ಅವಳನ್ನು ನೆನಪಿಸಿಕೊಳ್ಳಲು ಕಾಲದ ಪರಿಮಿತಿಯಿರುವುದಿಲ್ಲ, ಯಾವ ವೇಳೆ ಯಾವ ಸ್ಥಳದಲ್ಲಾದರೂ ನೆನಪಿಸಿಕೊಳ್ಳಬಹುದು. ಆದರೂ ಇಲ್ಲಿ ಜಾನಪದ ಕವಯಿತ್ರಿಯು ಊರೆಲ್ಲ ಉಂಡು ಮಲಗಿದ ಮೇಲೆ, ಬೆಳ್ಳಿ, ಚಿಕ್ಕಿ ಮೂಡುವ ಸಮಯದಲ್ಲಿ ತಾನು ತನ್ನ ಹಡೆದವ್ವನನ್ನು ನೆನೆಯುವುದಾಗಿ ಹೇಳಿದ್ದಾಳೆ. ಬಹುಶಃ ಬಿಡುವಿರದ ಮಡಿತದಲ್ಲಿ ಅವಳಿಗೆ ಸಮಯ ದೊರೆತಿರುವುದಿಲ್ಲ. ಆದ್ದರಿಂದ ಊರೆಲ್ಲ ನಿದ್ರಿಸಿದ ಮೇಲೆ ಏಕಾಂತದಲ್ಲಿ ತಾಯಿಯನ್ನು ನೆನೆವುದಾಗಿ ಹೇಳಿಕೊಂಡಿದ್ದಾಳೆ.
೧೨. ತಾಯವ್ನ ಬೈಬ್ಯಾಡ ತಿಳಿಗೇಡಿ ನನ್ನ ತಮ್ಮ|
ಬಾಳದಿನದಾಕಿ ಹಡೆದವ್ವನ| ಬೈದರ|
ಭಾಳ ಮರುಗ್ಯಾಳ ಮನದಾಗ||
ಅಣ್ಣ ಅಥವಾ ಅಕ್ಕ ತನ್ನ ತಮ್ಮನಿಗೆ ಹೇಳಿರುವ ಬುದ್ಧಿಮಾತಿದು. ಸಾಮಾನ್ಯವಾಗಿ ಚಿಕ್ಕವರಲ್ಲಿ ವಯೋವೃದ್ಧರ ಬಗ್ಗೆ ಸಲ್ಲದ ತಾತ್ಕಾರವಿರುತ್ತದೆ. ಮಾತುಮಾತಿಗೂ ವಯಸ್ಸಾದ ತಂದೆ ತಾಯಿಯರನ್ನು ದೂಷಿಸುತ್ತಲೇ ಇರುತ್ತಾರೆ. ಆದ್ದರಿಂದ ತಮ್ಮನಿಗೆ ‘ತಾಯಿಯನ್ನು ಬುದ್ದಿಯಿಲ್ಲದವನಂತೆ ಬಯ್ಯಬೇಡ. ಆಕೆ ಬಹುವರ್ಷ ಬಾಳಿದ ಹಿರಿಯ ಜೀವ. ಚಿಕ್ಕವನಾದ ನೀನು ಬೈದರ ಮನಸ್ಸಿಗೆ ತುಂಬಾ ದುಃಖವಾಗಿ ಆಕೆ ಕೊರಗಬಹುದೆಂದು’ ಬುದ್ದಿ ಹೇಳುವ ಸಂದರ್ಭವಿದಾಗಿದೆ.
೧೩. ತಾಯಿಲ್ಲದ ತವರಿಗಿ ಹೋಗದಿರು ನನ ಮನವೆ|
ನೀರಿಲ್ಲದ ಕೆರಿಗೆ ಕರು ಬಂದು ತಿರುಗಾಗ|
ಆಗ ನೋಡವರ ದುಃಖಗಳ||
ತಾಯಿಯಿದ್ದರೆ ಮಾತ್ರ ತವರಿಗೆ ಅರ್ಥ, ತಾಯಿಯಿಲ್ಲದ ತವರಿನಲ್ಲಿ ಮಗಳಿಗೆ ಯಾವ ಪ್ರೀತಿ ಆದರಗಳೂ ದೊರೆಯವು. ದೊರೆತರೂ ತಾಯಿ ಪ್ರೀತಿಯನ್ನು ಅವು ನೀಡವು. ಆದ್ದರಿಂದ ಹೆಣ್ಣುಮಗಳೊಬ್ಬಳು ತನ್ನ ಮನಸ್ಸಿಗೆ ತಾಯಿಯಿಲ್ಲದ ತವರಿಗೆ ಹೋಗಬೇಡವೆಂದು ಬೇಡಿಕೊಳ್ಳುತ್ತಿದ್ದಾಳೆ. ತಾಯಿಯಿಲ್ಲದ ತವರುಮನೆಗೆ ಹೋಗುವುದೆಂದರೆ ನೀರಿಲ್ಲದ ಕೆರೆಗೆ ಬಾಯಾರಿದ ಕರು ಬಂದು ನಿರಾಸೆ-ದುಃಖದಿಂದ ಹಿಂದಿರುಗಿದಂತೆಂದು ಆಕೆ ಹೇಳಿರುವಳು.
೧೪. ಉಂಗೂರ ಉಡದಾರ ಮುರಿದರ ಮಾಡಿಸಬಹುದು|
ಮಡದಿ ಸತ್ತರ ತರಬಹುದು| ಹಡೆದಂಥ|
ತಂದಿ ತಾಯೆಲ್ಲಿ ಸಿಕ್ಕಾರು||
ತಂದೆ-ತಾಯಿಗಳು ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳಲ್ಲ. ನಾವು ತೊಟ್ಟುಕೊಳ್ಳುವ ಉಂಗುರ ಮುರಿದುಹೋದರೆ ಅಥವಾ ಸೊಂಟದ ಉಡುದಾರ ಕಿತ್ತುಹೋದರೆ ಸರಿಮಾಡಿಸಿಕೊಂಡು ಮತ್ತೆ ಧರಿಸಬಹುದು, ಆದರೆ ತಂದೆ-ತಾಯಿಗಳನ್ನು ಕಳೆದುಕೊಂಡರೆ ತಿರುಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅವರಿರುವಾಗಲೇ ಪ್ರೀತಿಯಿಂದ ಅವರ ಆರೈಕೆ ಮಾಡಬೇಕೆಂಬ ಆಶಯ ಈ ತ್ರಿಪದಿಯಲ್ಲಿದೆ.
೧೫. ಹಾಲುಂಡ ತವರೀಗಿ ಏನೆಂದು ಹರಸಲಿ|
ಹೊಳೆದಂಡಿಲಿರುವ ಕರಕೀಯ। ಕುಡಿಯಂಗ|
ಹಬ್ಬಲಿ ಅವರ ರಸಬಳ್ಳಿ||
ಅತ್ಯಂತ ಜನಪ್ರಿಯವಾದ ತ್ರಿಪದಿಯಿದು. ತವರಿಗೆ ಒಳ್ಳಿತನ್ನು ಬಯಸುವ ಹೆಣ್ಣು ಮಗಳೊಬ್ಬಳ ಹೃದಯ ವೈಶಾಲ್ಯತೆ ಇಲ್ಲಿ ಅನಾವರಣಗೊಂಡಿವೆ. ಹಾಲನ್ನು ಕುಡಿಸಿ ನನ್ನನ್ನು ಬೆಳೆಸಿದ ತವರಿಗೆ ನಾನು ಏನೆಂದು ಹಾರೈಸಲಿ ಎಂದು ಪ್ರಶ್ನಿಸಿಕೊಳ್ಳುವ ಇಲ್ಲಿನ ಹೆಣ್ಣುಮಗಳು ಅಂತಿಮವಾಗಿ ಹೊಳೆದಂಡೆಯಲ್ಲಿ ಸಮೃದ್ಧವಾಗಿ ಹಬ್ಬಿ ಬೆಳೆಯುವ ಗರಿಕೆಯ ಕುಡಿಯ ಹಾಗೆ ತನ್ನ ತವರಿನ ವಂಶವೂ ಬೆಳೆಯಲಿ ಎಂದು ಮನಸ್ಸು ತುಂಬಿ ಹಾರೈಸಿದ್ದಾಳೆ.
ಶಬ್ದಾರ್ಥ: ಬಯಲಾಗೆ – ಕಡಿಮೆಯಾಗು; ಪುತ್ಥಳಿ – ವಿಗ್ರಹ, ಬೊಂಬೆ; ನೆರೆಯ – ಅಕ್ಕಪಕ್ಕದ; ಎಂಜಲು – ಉಂಡುಬಿಟ್ಟ ಆಹಾರ; ಹೋಲು – ಹೋಲಿಕೆ; ಕೊಳ್ಳಿ – ಉರಿಯುವ ಕಟ್ಟಿಗೆಯ ತುಂಡು; ನೆನೆ – ಸ್ಮರಿಸು; ಯಾಳಿ – ಸಮಯ; ಸಂಪದ – ಸಂಪತ್ತು; ಖುದ್ದರಗೇಡಿ – ಮಹಾದುಷ್ಟ.
ಹೊಂದಿಸಿ ಬರೆಯುವುದಕ್ಕೆ ಬೇಕಾದ ಮಾಹಿತಿ:
ಹಬ್ಬಲಿ ಅವರ ರಸಬಳ್ಳಿ – ಜನಪದ
ಹಬ್ಬಲಿ ಅವರ ರಸಬಳ್ಳಿ – ಗರತಿಯ ಹಾಡು
ಹಬ್ಬಲಿ ಅವರ ರಸಬಳ್ಳಿ – ತ್ರಿಪದಿ
ಹಾಲುಂಡ ತವರೀಗ – ಜನಪದ
ಗರತಿಯ ಹಾಡು – ಜನಪದ
ಹಬ್ಬಲಿ ಅವರ ರಸಬಳ್ಳಿ – ಹಲಸಂಗಿ ಗೆಳೆಯರು
ಹಬ್ಬಲಿ ಅವರ ರಸಬಳ್ಳಿ – ಮೌಖಿಕ ಸಾಹಿತ್ಯ
ಉತ್ತಮರ ಗೆಳೆತನ – ಪುತ್ಥಳಿ ಬಂಗಾರದಂತೆ
ಹಿತ್ತಾಳೆಗಿಂತ ಬಲುಹೀನ – ಮತ್ತಹೀನರ ಗೆಳೆತನ