ದ್ವಿತೀಯ ಪಿಯುಸಿ ಕನ್ನಡ ಬೆಳಗು ಜಾವ ನೋಟ್ಸ್ ಪ್ರಶ್ನೋತ್ತರಗಳು, 2nd Puc Kannada Belagu Java Notes Question and Answer Summery Guide Extract Mcq Pdf Download in Kannada Medium Karnataka State Syllabus 2025 ಬೆಳಗು ಜಾವ ಪದ್ಯದ ಸಾರಾಂಶ pdf ಬೆಳಗು ಜಾವ notes ಬೆಳಗು ಜಾವ ಭಾವಾರ್ಥ belagu java class 12 belagu java kannada notes class 12 2nd puc kannada notes kseeb solutions for class 12 kannada poem 7 notes ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ pdf belagu java kannada poem lyrics.
೭. ಬೆಳಗು ಜಾವ
– ದ. ರಾ. ಬೇಂದ್ರೆ

ಕವಿ ಪರಿಚಯ:
20ನೇಶತಮಾನದ ಅತ್ಯಂತ ಶ್ರೇಷ್ಠಕವಿ ಎಂಬ ಪಟ್ಟವನ್ನು ನಿರ್ವಿವಾದವಾಗಿ ಪಡೆದುಕೊಂಡವರು ಅಂಬಿಕಾತನಯದತ್ತ ಎಂದೇ ಪ್ರಸಿದ್ಧರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು (1896-1981). ಬೇಂದ್ರೆಯವರ ಪ್ರತಿಭೆ ಆಸಾದೃಶವಾದುದು. ನವೋದಯ ಸಾಹಿತ್ಯ ಪ್ರಕಾರಕ್ಕೆ ಇವರು ಸಲ್ಲಿಸಿದ ಕಾಣಿಕೆ ಅದ್ವಿತೀಯವಾದುದು ಉತ್ತರ ಕರ್ನಾಟಕದ ಆಡುಭಾಷೆಯನ್ನು ಮತ್ತು ಜಾನಪದ ಕಾವ್ಯಗಳನ್ನು ಬಳಸಿಕೊಂಡು ಕವಿತೆಯಲ್ಲಿ ಸಹಜತೆಯನ್ನು ಕಾವ್ಯಾನುಭವವನ್ನು ಗರಿಷ್ಠಮಟ್ಟದಲ್ಲಿ ಸಹೃದಯರು ಅನುಭವಿಸುವಂತೆ ಕವಿತೆಗಳನ್ನು ರಚಿಸಿದ್ದು ಇವರ ವೈಶಿಷ್ಟ್ಯವಾಗಿದೆ. ಇವರ ಭಾಷಾಶಕ್ತಿ, ಶಬ್ದಗಳಿಗೆ ನೂತನ ಅರ್ಥ ಸ್ಪುರಿಸುವಂತೆ ಪ್ರಯೋಗ ಮಾಡುವ ಬಗೆ ಇವುಗಳು ಚೇತೋಹಾರಿಯೆನಿಸುತ್ತದೆ. ಬೇಂದ್ರೆಯವರು ಕಾವ್ಯ ನಾಟಕ, ವಿಮರ್ಶೆ, ಪ್ರಬಂಧ, ಸಂಶೋಧನಾ ಸಾಹಿತ್ಯ ಪ್ರಕಾರಗಳಿಗೆ ತಮ್ಮ ಕಾಣಿಕೆಯನ್ನು ಸಲ್ಲಿಸಿದ್ದಾರೆ. ‘ಗಂಗಾವತರಣ’, ‘ನಾಕುತಂತಿ’, ‘ಸೂರ್ಯಪಾನ’, ‘ಹೃದಯ ಸಮುದ್ರ’, ‘ನಾದಲೀಲೆ’, ‘ಒಲವೆ ನಮ್ಮ ಬದುಕು. ‘ಅರಳು-ಮರಳು’, ‘ಗರಿ’, ‘ಉಯ್ಯಾಲೆ’ ಮುಂತಾದ ಕವಿತಾ ಸಂಕಲನಗಳನ್ನು ಹೊರತಂದಿದ್ದಾರೆ. ಇವರು ನವೋದಯ ಸಾಹಿತ್ಯ ದಲ್ಲಿ – ಭಾವಗೀತೆಯ ಪ್ರಕಾರದಲ್ಲಿ ತಂದಷ್ಟು ಛಂದೋವೈವಿಧ್ಯ ಮತ್ತು ವಸ್ತುವೈವಿಧ್ಯವನ್ನು ಇತರ ಯಾವ ಕವಿಯೂ ತರಲಿಲ್ಲವೆಂಬುದು ತುಂಬ ಗಮನಾರ್ಹವಾಗಿದೆ. ಧಾರವಾಡ ಇವರ ನೆಲೆಯಾಗಿತ್ತು. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕಗಳ ಸಹೃದಯರನ್ನು ವಿಮರ್ಶಕರನ್ನು ಇವರ ಕೃತಿಗಳು ಸೂರೆಗೊಂಡವು. ‘ಸಾಹಿತ್ಯದ ವಿರಾಟ್ ಸ್ವರೂಪʼ, ‘ಸಾಯೋ ಆಟ’, ‘ಜಾತ್ರೆ’ – ಇವು ಇವರ ಇನ್ನಿತರ ಕೃತಿಗಳು. 1958ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1968ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ 1974ರಲ್ಲಿ ಜ್ಞಾನಪೀಠ ಪ್ರಶಸ್ತಿ ಇವರಿಗೆ ಸಂದಿವೆ.
ಆಕರ: ‘ಮುಕ್ತಕಂಠ’,
(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು
೧. ಬಲೆ ಬೀಸಿ ಬಂದ, ಅಗೋ ಬೆಳಕು-ಬೇಟೆಗಾರ.
ದ.ರಾ. ಬೇಂದ್ರೆಯವರು ರಚಿಸಿರುವ ‘ಬೆಳಗು ಜಾವ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಬೆಳಕಿನ ಆಗಮನವನ್ನು ಕುರಿತು ಕವಿ ಈ ಮೇಲಿನಂತೆ ವರ್ಣಿಸಿದ್ದಾರೆ.
ಮೂಡಲದ ಕಣ್ಣು ತೆರೆಯುವಾಗ ಬಾನೆಲ್ಲ ಕೆಂಪೇರುವುದು. ಬಾನು ಮೊದಲಿಗೆ ಕೆಂಪಾಗಿ ಅರುಣೋದಯ ವಾಗುವುದನ್ನು ಸೂಚಿಸಿದ ನಂತರ ನಿಧಾನವಾಗಿ ಆಕಾಶ ಬೆಳಕು ಕಾಣುವುದು. ಇದನ್ನು ಕವಿ ಬೆಳಕಿನ ಬೇಟೆಗಾರನು ಗುಡಿಗೋಪುರದ ಮೇಲೆಲ್ಲಾ ಬಲೆಬೀಸಿ ಬರುವುದಕ್ಕೆ ಸಮೀಕರಿಸಿ, ಬೆಳಗುಜಾವದ ಆರಂಭವನ್ನು ಈ ಮೇಲಿನ ವಾಕ್ಯದಲ್ಲಿ ವರ್ಣಿಸಿದ್ದಾರೆ. ‘ಬೆಳಕಿನ-ಬೇಟೆಗಾರ’ ಎಂಬ ಹೋಲಿಕೆ ವಿಶೇಷ ಪ್ರಯೋಗವಾಗಿರುವುದನ್ನು ಗಮನಿಸಬಹುದು.
೨. ತುಂಬಿರುವ ತನಕ ತುಂತುಂಬಿ ಕುಡಿಯಬೇಕು.
ಅಂಬಿಕಾತನಯದತ್ತ ಕಾವ್ಯನಾಮದ ವರಕವಿ ದ.ರಾ. ಬೇಂದ್ರೆಯವರು ರಚಿಸಿರುವ ‘ಬೆಳಗು ಜಾವ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಮಲಗಿ ಹುಸಿನಿದ್ದೆಗೈಯುತ್ತಿರುವ ಯುವ ಮನಸ್ಸುಗಳನ್ನು ಎಚ್ಚರಿಸಿದ ಕವಿಯು ‘ಈ ತುಂಬಿ ಬಾಳು’ ಎಂದರೆ ದುಂಬಿಯಂತೆ ಅಲ್ಲಿಂದಿಲ್ಲಿಗೆ ಹಾರುವ ಜೀವನದ ಮಜಲಿಗೆ ಹೋಲಿಸಿ, ಅದನ್ನು ಸಿಕ್ಕಾಗ ಸಿಕ್ಕಷ್ಟನ್ನು ತುಂಬಿತುಂಬಿ ಕುಡಿಯುವಂತೆ ಬುದ್ಧಿಮಾತು ಹೇಳಿದ್ದಾರೆ. ನಾಳೆ ಹೇಗೋ ಏನೋ ಎಂಬುದು ಯಾರಿಗೂ ಅರಿವಿರದು. ಇರುವಾಗ ಕೈಗೆ ಸಿಕ್ಕಷ್ಟನ್ನು ಮೊಗೆಮೊಗೆದು ಅನುಭವಿಸಿ, ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂಬ ಸಂದೇಶವನ್ನು ಕವಿಯು ಈ ಮೇಲಿನ ವಾಕ್ಯದಲ್ಲಿ ನೀಡಿದ್ದಾರೆ.
೩. ಮರಣ ಬಂದೀತು ಕ್ಷಣವು ಉರುಳಿ.
ಗಾರುಡಿಗ ಕವಿ ದ.ರಾ. ಬೇಂದ್ರೆಯವರ ‘ಬೆಳಗು ಜಾವ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಬೆಳಗು ಮೂಡಿರುವಾಗ ಹುಸಿನಿದ್ದೆ ಬಿಟ್ಟು ದುಡಿಮೆಯಲ್ಲಿ ಕ್ರಿಯಾಶೀಲರಾಗಬೇಕೆಂದು ಹೇಳಿರುವ ಕವಿಯು, ಯೌವನ-ಉತ್ಸಾಹ-ಹುರುಪುಗಳೆಲ್ಲವೂ ಸ್ವಲ್ಪ ಕಾಲಮಾತ್ರ ಇರುವುದು. ಅವುಗಳಿದ್ದಾಗ ದುಡಿದು ಸಂಪಾದಿಸಬೇಕು, ಬದುಕನ್ನು ಸಂಪೂರ್ಣವಾಗಿ ಆಸ್ವಾದಿಸಬೇಕು. ಜೀವನ ಒಂದು ನದಿಯ ರೀತಿ ಅಲ್ಲಿ ಪ್ರವಾಹದ ಏರುಪೇರು ಆಘಾತಗಳಿರುವುದು ಸಹಜ. ಯಾವಾಗ ಮರಣ ಬಂದು ಅಮರಿಕೊಳ್ಳುವುದೋ ಯಾರಿಗೂ ತಿಳಿಯದು. ಈಗ ಇದ್ದವರು ಇನ್ನೊಂದು ಕ್ಷಣದಲ್ಲಿ ಇಲ್ಲವಾಗಬಹುದು. ಆದುದರಿಂದ ಸಾವು ಬರುವ ಮುನ್ನ ಈ ಬದುಕಿನ ಸುಂದರ ಸಂಗತಿಗಳನ್ನು ಅನುಭವಿಸಿ ಆನಂದಿಸಬೇಕೆಂದು ಕವಿ ಕಿವಿಮಾತು ಹೇಳಿದ್ದಾರೆ.
೪. ಬರಲುಂಟೆ ಸುಗ್ಗಿ ಮತ್ತೆ?
ದ.ರಾ. ಬೇಂದ್ರೆಯವರು ಬರೆದಿರುವ ಬೆಳಗು ಜಾವ’ ಕವಿತೆಯ ವಾಕ್ಯವಿದು. ಜೀವನದಲ್ಲಿ ಸುಗ್ಗಿ ಸಂತಸದ ಕಾಲ ಮತ್ತೆ ಬರಬಹುದೇ? ಎಂದು ಕವಿಯು ಪ್ರಶ್ನಿಸಿರುವ ಸಂದರ್ಭವಿದಾಗಿದೆ.
ಮುಪ್ಪು-ಮರಣಗಳು ಆವರಿಸಿದ ನಂತರ ಪುನಃ ಯೌವನ ತಿರುಗಿ ಬರಲಾರದು. ಋತು ಬದಲಾಗಬಹುದು. ಆಕಾಶ ಮತ್ತೆ ಬೆಳಕಿನಿಂದ ಪ್ರಜ್ವಲಿಸಬಹುದು, ಮರಗಳು ಮತ್ತೆ ಚಿಗುರಿ ಹಸಿರು ಹೊತ್ತು ಮೆರೆಯಬಹುದು – ಇವೆಲ್ಲವೂ ಋತು ನಿಯಮದ ಸಾಮಾನ್ಯ ಸಂಗತಿಗಳು. ಪ್ರಕೃತಿಯಲ್ಲಿ ಸುಗ್ಗಿ ಮತ್ತೆ ಬರಬಹುದು, ಆದರೆ ಬದುಕಿನಲ್ಲಿ ಯೌವನದ ಸುಗ್ಗಿ ಒಮ್ಮೆ ಮಾತ್ರವೇ ಬಂದು ಹೋಗುವಂತದ್ದು. ಹೋದ ಮೇಲೆ ತಿರುಗಿ ಬರಲಾರದು.
೫. ಮುಳುಗಿರಲಿ ಮುಪ್ಪು ಚಿಂತನದಿ.
ಅಂಬಿಕಾತನಯದತ್ತರು ಬರೆದಿರುವ ಬೆಳಗು ಜಾವ’ ಕವಿತೆಯ ಅಂತ್ಯದಲ್ಲಿ ಈ ಮೇಲಿನ ವಾಕ್ಯವನ್ನು ಕಾಣಬಹುದಾಗಿದೆ.
ಮರಣ-ಮುಪ್ಪಿನ ಚಿಂತೆಯ ಅಗತ್ಯವಿಲ್ಲ, ಏಕೆಂದರೆ ಇದು ಹರೆಯ ತುಂಬಿರುವ ಹೊತ್ತು. ಹೀಗಿರುವ ಹರೆಯ ಪುನಃ ಸಿಗಲಾರದು. ಮುಪ್ಪು ಬರುವ ಕಾಲಕ್ಕೆ ಬಂದೇ ಬರುತ್ತದೆ. ಈಗಲೇ ಏಕೆ ಅದರ ಚಿಂತೆ? ಮುಪ್ಪು ಬಂದೇ ಬರುತ್ತದೆ. ಅದನ್ನು ತಪ್ಪಿಸಲು ಯಾರಿಂದಲೂ ಅಸಾಧ್ಯ. ಆದ್ದರಿಂದ ಮುಪ್ಪು ಮುಳುಗಿರಲಿ ಚಿಂತನದಿ’ ಎಂದು ಹೇಳುವುದರ ಮೂಲಕ ಬದುಕನ್ನು ಸ್ವೀಕರಿಸಬೇಕಾದ, ಅನುಭವಿಸಬೇಕಾದ ಬಗೆಯನ್ನು ಕವಿ ಇಲ್ಲಿ ತಿಳಿಸಿಕೊಟ್ಟಿರುತ್ತಾರೆ.
ಹೆಚ್ಚುವರಿ ಪ್ರಶ್ನೆಗಳು:
೬. ಅವರು ಬರಲಿಕ್ಕು ಇಲ್ಲ ಮರಳಿ.
ದ.ರಾ. ಬೇಂದ್ರೆಯವರು ಬರೆದಿರುವ ಬೆಳಗು ಜಾವ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಈ ಜೀವನವನ್ನು ನದಿಯ ಹರಿವಿಗೆ ಕವಿ ಹೋಲಿಸಿದ್ದಾರೆ. ನದಿಯಲ್ಲಿ ಪ್ರವಾಹ ಯಾವಾಗ ಬೇಕಾದರೂ ಬರಬಹುದು. ಅದೇ ರೀತಿ ನಮ್ಮ ಬದುಕಿನಲ್ಲಿ ಯಾವಾಗ ಬೇಕಾದರೂ ಮರಣ ಬರಬಹುದು. ಸತ್ತು ಇಲ್ಲಿಂದ ಹೋದಮೇಲೆ ತಿರುಗಿ ಇಲ್ಲಿಗೆ ಬರಲಾಗದು. ಈಗ ಸತ್ತು ಇಲ್ಲಿಂದ ಹೋಗಿರುವ ಯಾರೂ ಇಲ್ಲಿಗೆ ಮರಳಿ ಬಂದಿಲ್ಲ. ಹಾಗಾಗಿ ಇಲ್ಲಿರುವಷ್ಟು ಕ್ಷಣವು ಇಲ್ಲಿನ ಬದುಕನ್ನು ತುಂಬಿ ತುಂಬಿ ಅನುಭವಿಸುವುದು ಒಳ್ಳೆಯದೆಂದು ಕವಿ ಕರೆಯಿತ್ತಿರುವ ಸಂದರ್ಭವಿದಾಗಿದೆ.
೭. ಬಾನ್ ಹೊಗರಲುಂಟು ಮರ ಚಿಗುರಲುಂಟು.
ದ.ರಾ. ಬೇಂದ್ರೆಯವರು ಬರೆದಿರುವ ‘ಬೆಳಗು ಜಾವ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಪ್ರಕೃತಿಯದು ಚಕ್ರಾಕಾರದ ಚಲನೆ. ಆಕಾಶದಲ್ಲಿ ಕತ್ತಲಾಗಿದ್ದರೂ ಪುನಃ ಅಲ್ಲಿ ಬೆಳಕು ಮೂಡಿ ಅದು ಪ್ರಕಾಶಿಸುತ್ತದೆ. ಅದೇ ರೀತಿ ಒಣಗಿದ ಮರ ಪುನಃ ಚಿಗುರುತ್ತದೆ. ಪ್ರಕೃತಿಯಲ್ಲಿ ಇದು ಸರ್ವೆಸಾಮಾನ್ಯವಾದ ವ್ಯಾಪಾರ. ಆದರೆ ಮನುಷ್ಯನ ಬದುಕಿನಲ್ಲಿ ಇಂತಹ ಅವಕಾಶವಿಲ್ಲ ಎಂಬುದನ್ನು ವಿವರಿಸುವಾಗ ಕವಿಯು ಈ ಮೇಲಿನ ಮಾತನ್ನು ಆಡಿದ್ದಾರೆ.
೮. ಹುಸಿ ನಿದ್ದೆಗಿದ್ದೆ ಸಾಕು.
ದ.ರಾ. ಬೇಂದ್ರೆಯವರು ಬರೆದಿರುವ ‘ಬೆಳಗು ಜಾವ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಹುಸಿ ನಿದ್ದೆ ಮಾಡುತ್ತಿರುವ ಮಕ್ಕಳನ್ನು ಕವಿಯು ಬದುಕಿನ ಸವಿರಸವನ್ನು ಕುಡಿಯಲು ಎಬ್ಬಿಸುತ್ತಿದ್ದಾರೆ. ಆದರೆ ನಿದ್ದೆಯನ್ನು ನಟಿಸುತ್ತಿರುವ ಮಕ್ಕಳಿಗೆ ಅವರ ಕೂಗು ಕೇಳುತ್ತಿಲ್ಲ. ನಿದ್ದೆ ಬಂದಂತೆ ನಟಿಸುತ್ತಿರುವವರನ್ನು ಉದ್ದೇಶಿಸಿ ಕವಿಯು ‘ಹುಸಿನಿದ್ದೆಗಿದ್ದೆ ಸಾಕು’ ಮೇಲೇಳಿ ಎಂದಿದ್ದಾರೆ. ನಿದ್ದೆ ಬಂದವರನ್ನು ಎಬ್ಬಿಸಬಹುದು, ಆದರೆ ನಿದ್ದೆ ಬಂದಂತೆ ನಟಿಸುವವರನ್ನು ಎಬ್ಬಿಸುವುದು ಕಷ್ಟ. ಹಾಗಾಗಿ ಕವಿಯು ಸುಳ್ಳು ನಿದ್ದೆಯನ್ನು ನಟಿಸದೆ ಮೇಲೆದ್ದು ಬದುಕನ್ನು ತುಂಬಿತುಂಬಿ ಕುಡಿಯಬೇಕೆಂದು ಕರೆಯಿತ್ತಿರುವ ಸಂದರ್ಭವಿದಾಗಿದೆ.
(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ).
೧. ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವರು ಯಾರು?
ಅ) ಮಾರ/ಮನ್ನಥ
೨. ಬೇಟೆಗಾರ ಯಾರು?
ಬೆಳಕು/ಸೂರ್ಯ
೩. ಹುಸಿನಿದ್ದೆ ಸಾಕು ಎಂದು ಕವಿ ಯಾರಿಗೆ ಹೇಳುತ್ತಾರೆ?
ಎಚ್ಚರಿದ್ದು ಮಲಗಿ ನಿದ್ರಿಸುತ್ತಿರುವ ಎಳೆಯರಿಗೆ
೪. ಯಾವುದಕ್ಕೆ ಸೆಳವಿದೆಯೆಂದು ಕವಿ ಹೇಳುತ್ತಾರೆ?
ಜೀವನದ ನದಿಗೆ
೫. ಕವಿಯ ಪ್ರಕಾರ ಯಾವುದು ಮತ್ತೆ ಚಿಗುರುತ್ತದೆ?
ಮರ
೬. ಯಾವುದು ಚಿಂತನದಿ ಮುಳುಗಿರಲಿ ಎಂದು ಕವಿ ಆಶಿಸುತ್ತಾರೆ?
ಮುಪ್ಪು
ಹೆಚ್ಚುವರಿ ಪ್ರಶ್ನೆಗಳು:
7. “ಈ ತುಂಬಿಬಾಳು, ತುಂಬಿರುವ ತನಕ, ತುಂತುಂಬಿ ಕುಡಿಯಬೇಕು” – ಇಲ್ಲಿ ʼತುಂಬಿಬಾಳು’ ಪದ ಏನನ್ನು ಸೂಚಿಸುತ್ತದೆ?
ದುಂಬಿಯ ಬದುಕು
೮. ಜಗವು ಯಾವುದಕ್ಕೆ ಸೋತಿದೆ?
ನಿಷೆಯಿಳಿದ ಉಷೆಯ ಎಳೆನಗುವಿಗೆ
೯. ಕ್ಷಣ ಉರುಳಿದರೆ ಏನಾಗಬಹುದೆಂದು ಕವಿ ಹೇಳುತ್ತಾರೆ?
ಮರಣವು ಉರುಳಿ ಬರಬಹುದು
೧೦. ಅಂಗಡಿಯ ಕದವನ್ನು ಯಾವಾಗ ತೆರೆಯಬೇಕೆಂದು ಕವಿ ಹೇಳಿರುವರು?
ಈ ಕ್ಷಣ
(ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):
೧. ಬೆಳಕು-ಬೇಟೆಗಾರ ಹೇಗೆ ಬರುತ್ತಾನೆ?
ಬೆಳಕಿನ ಬೇಟೆಗಾರನು ಗುಡಿಗೋಪುರಗಳಿಗೆ ಬಲೆಯನ್ನು ಬೀಸಿ ಬರುತ್ತಾನೆ.
೨. ಕವಿ ಬೇಂದ್ರೆ ಮಕ್ಕಳಿಗೆ ಬಾಳಿನ ಬಗ್ಗೆ ಕೊಡುವ ಸಂದೇಶವೇನು?
ಮಕ್ಕಳು ನಿದ್ದೆಯನ್ನು ಬಿಟ್ಟು ಮೇಲೆದ್ದು ಈ ತುಂಬಿಬಾಳನ್ನು ತುಂತುಂಬಿ ಕುಡಿಯಬೇಕು ಎಂದಿದ್ದಾರೆ ಕವಿ,
೩. ಹುಸಿನಿದ್ದೆ ಸಾಕು, ಎದ್ದೇಳಿ ಎಂದು ಕವಿ ಮಕ್ಕಳಿಗೆ ಹೇಳಲು ಕಾರಣವೇನು?
ಹುಸಿನಿದ್ದೆ ಮಾಡುತ್ತ, ಕನಸು ಕಟ್ಟುತ್ತಾ ಯೌವನವನ್ನು ಜೀವನವನ್ನು ವ್ಯರ್ಥ ಮಾಡಿಕೊಳ್ಳಬಾರದೆಂಬ ಕಾರಣದಿಂದ ಕವಿಯು ಹುಸಿ ನಿದ್ದೆ ಸಾಕು, ಎದ್ದೇಳಿ ಎಂದು ಮಕ್ಕಳಿಗೆ ಹೇಳಿರುವರು.
೪. ಕವಿಯ ಪ್ರಕಾರ ಮುಪ್ಪು ಮತ್ತು ಹರೆಯದ ನಡುವಿನ ವ್ಯತ್ಯಾಸವೇನು?
ಕವಿಯ ಪ್ರಕಾರ ಹರೆಯವು ದುಡಿಮೆಗೆ-ಜೀವನೋತ್ಸಾಹಕ್ಕೆ ಸಂಕೇತ, ಮುಪ್ಪು ಚಿಂತನೆಗೆ ದಾರಿ.
೫. ಬಾನು ಮತ್ತು ಮರದ ನಿತ್ಯನೂತನತೆಯ ಬಗ್ಗೆ ಕವಿ ಏನು ಹೇಳಿದ್ದಾರೆ?
ಬಾನು ಮತ್ತೆ ಪ್ರಕಾಶಮಾನವಾಗಿ ಬೆಳಗಬಹುದು, ಅಂತೆಯೇ ಮರವು ಮತ್ತೆ ಚಿಗುರಿ ನಿಲ್ಲಬಹುದೆಂಬುದು ಕವಿಯ ಅಭಿಪ್ರಾಯವಾಗಿದೆ.
ಹೆಚ್ಚುವರಿ ಪ್ರಶ್ನೆಗಳು:
೬. ಮಾರನ ಬಾಣ, ಹೆದೆಗಳ ವಿಶೇಷವೇನು?
ಮನ್ಮಥ(ಮಾರ)ನ ಬಾಣವು ಹೂವಿನ ಬಾಣವಾಗಿರುತ್ತದೆ ಮತ್ತು ಬಿಲ್ಲಿನ ಹೆದೆಯು ಜೇನ್ನೋಣಗಳಿಂದ ರಚಿಸಲ್ಪಟ್ಟಿರುತ್ತವೆ.
೭. ಮಕ್ಕಳಿಗೆ ಏನೆಂದು ಕೂಗು ಕೇಳಿತು?
ಮಕ್ಕಳಿಗೆ “ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು. ಈ ತುಂಬಿಬಾಳು, ತುಂಬಿರುವ ತನಕ ತುಂತುಂಬಿ ಕುಡಿಯಬೇಕು” ಎಂಬ ಕೂಗು ಕೇಳಿ ಬಂತು.
(ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):
೧. ಮಾನವನ ಜೀವನದ ಸಾರ್ಥಕತೆ ಎಲ್ಲಿದೆಯೆಂದು ಕವಿ ಬೇಂದ್ರೆ ಹೇಳಿದ್ದಾರೆ?
‘ಬೆಳಗು ಜಾವ’ ಕವಿತೆಯಲ್ಲಿ ಕವಿ ಬೇಂದ್ರೆಯವರು ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಕರೆಕೊಟ್ಟಿದ್ದಾರೆ. ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವನ, ಮುಪ್ಪುಗಳೆಲ್ಲವೂ ಹಂತಹಂತವಾಗಿ ಬರುವ ಸಂಗತಿಗಳು, ಬಾಲ್ಯದಲ್ಲಿ ಬೆರಗಿನಿಂದ ಸುತ್ತಮುತ್ತಲ ವಿಸ್ಮಯವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಾ ಬೆಳೆಯುತ್ತೇವೆ. ಯೌವನವೆಂದರೆ ಅದು ಮೋಜಿನ ಸಮಯವಲ್ಲ, ಕವಿಯ ಪ್ರಕಾರ ದುಡಿಯುವ, ದಣಿಯುವ ಸಮಯ. ಇಂತಹ ಹೊತ್ತಿನಲ್ಲಿ ನಿದ್ದೆಮಾಡುತ್ತಾ ಕನಸುಕಾಣುತ್ತಾ ಕುಳಿತುಕೊಳ್ಳುವುದು ತರವಲ್ಲ. ಮುಪ್ಪು ಬರುವ ಮುನ್ನ ದುಡಿಮೆಯಲ್ಲಿ ಸಾರ್ಥಕ್ಯವನ್ನು ಕಾಣಬೇಕು. ಮುಪ್ಪು ಬಂದನಂತರ ಹಿಂದಿನ ದಿನಗಳ ಕನವರಿಕೆ ಮಾತ್ರ ಉಳಿಯುತ್ತದೆ. ಸಾವಿನ ಚಿಂತೆ ಆವರಿಸುತ್ತದೆ. ಆದ್ದರಿಂದ ಯೌವನವು ಬಹು ಅಮೂಲ್ಯ ಕ್ಷಣವಾದ್ದರಿಂದ ಅದನ್ನು ವ್ಯರ್ಥಗೊಳಿಸದೆ ಸಾರ್ಥಕವಾಗಿ ಬಳಸಿಕೊಳ್ಳುವಂತೆ ಕವಿ ಕರೆಯಿತ್ತಿದ್ದಾರೆ.
೨. ಜೀವನದ ಉದ್ದೇಶ ಮತ್ತು ಆದರ್ಶಗಳನ್ನು ಹೇಗೆ ಸಫಲಗೊಳಿಸಿಕೊಳ್ಳಬೇಕು ಎಂದು ಬೇಂದ್ರೆ ಕರೆ ಕೊಡುತ್ತಾರೆ?
ಬೇಂದ್ರೆಯವರ ‘ಬೆಳಗು ಜಾವ’ ಕವಿತೆಯು ಜೀವನದ ಉದ್ದೇಶ ಮತ್ತು ಆದರ್ಶಗಳನ್ನು ಸಫಲಗೊಳಿಸಿಕೊಳ್ಳ ಬೇಕೆಂಬ ಕರೆಯನ್ನು ಎಳೆಯರಿಗೆ ಇತ್ತಿದೆ. ಕವಿತೆಯ ಆರಂಭದ ಚರಣವು ಬೆಳಕಿನ ಆಗಮನದ ವರ್ಣನೆಗೆ ಮೀಸಲಾಗಿದೆ. ಉಳಿದ ಭಾಗದಲ್ಲಿ ಕವಿ ಮಲಗಿ ನಿದ್ರಿಸುತ್ತಿರುವವರನ್ನು ಎಚ್ಚರಗೊಳಿಸಿದ್ದಾರೆ. ಬೆಳಗು ಕ್ರಿಯಾಶೀಲತೆಯ ಸಂಕೇತ, ರಾತ್ರಿಯೆಲ್ಲಾ ನಿದ್ದೆಯ ವಿಶ್ರಾಂತಿಯಲ್ಲಿ ಮೈಮರೆತವರಿಗೆ ಹೊಸ ಚೈತನ್ಯವನ್ನು ತುಂಬಿ ದೈನಂದಿನ ಕ್ರಿಯೆಗೆ ಪ್ರೋತ್ಸಾಹಿಸುತ್ತದೆ. ಆದ್ದರಿಂದ ಬೆಳಕಿನಲ್ಲಿ ಎದ್ದು ಕತ್ತಲಾಗುವ ಮುನ್ನ ದುಡಿಮೆಯ ಉದ್ದೇಶವನ್ನು ಸಾರ್ಥಕ್ಯದಿಂದ ಪೂರೈಸಿಕೊಳ್ಳಿರೆಂದು ಕವಿ ಕರೆಯಿತ್ತಿದ್ದಾರೆ. ಇಲ್ಲಿ ಬೆಳಗು ಯೌವನದ, ಆದರ್ಶಗಳ ಸಂಕೇತವಾದರೆ, ಇರುಳು ಮುಪ್ಪಿನ ಸಂಕೇತವಾಗಿದೆ. ಇರುವ ಯೌವನವನ್ನು ಕನಸುಕಾಣುತ್ತಾ ಹಾಳುಮಾಡಿಕೊಳ್ಳದೆ ದುಡಿದು ಗಳಿಸುವುದರ ಮುಖೇನ ಸಫಲಗೊಳಿಸಿಕೊಳ್ಳಿರೆಂದು ಕವಿಯು ಇಲ್ಲಿ ಎಚ್ಚರಿಸಿದ್ದಾರೆ.
೩. ‘ಬೆಳಗು ಜಾವ’ ಕವನದ ಮೂಲಕ ಕವಿ ಬೇಂದ್ರೆ ಹೇಳಿರುವ ವಿಚಾರಗಳಾವುವು?
‘ಬೆಳಕು ಜಾವ’ ಕವನದ ಮೂಲಕ ಕವಿ ನಮ್ಮ ಬದುಕಿನ ಮಹತ್ತ್ವದ ವಿಚಾರಗಳ ಕಡೆಗೆ ಗಮನ ಸೆಳೆದಿದ್ದಾರೆ. ಬೆಳಕು ಮತ್ತು ಬೆಳಗು ಎರಡೂ ಅಭಿನ್ನವಾದಂತೆ ಅದು ಕ್ರಿಯಾಶೀಲತೆಯ ಸಂಕೇತವೂ ಹೌದು. ಬೆಳಗು ಹೊಸ ಹುರುಪನ್ನು ಚೈತನ್ಯವನ್ನು ತಂದಿರುವಾಗ ಅದನ್ನು ಸಾರ್ಥಕಪಡಿಸಿಕೊಳ್ಳಬೇಕು. ಯೌವನವು ನಮ್ಮ ಬದುಕಿನ ಬೆಳಕು. ಯೌವನದಲ್ಲಿ ದುಡಿದುಗಳಿಸುವ ಶಕ್ತಿ ದೇಹಕ್ಕಿರುತ್ತದೆ. ಆದ್ದರಿಂದ ನಿದ್ದೆಯಿಂದ ಮೇಲೆದ್ದು ದುಡಿಯಬೇಕಾಗಿದೆ. ಮುಪ್ಪು ಬಂದೇ ಬರುತ್ತದೆ. ಅದನ್ನು ತಪ್ಪಿಸಲಾಗದು. ಬೆಳಗು-ಕತ್ತಲು, ಒಣಗುವುದು-ಚಿಗುರುವುದು ಇವೆಲ್ಲವೂ ಪ್ರಕೃತಿಯಲ್ಲಿ ಸಹಜ. ಆದರೆ ಮನುಷ್ಯನ ಜೀವನ ಬಾಲ್ಯ, ಯೌವನ, ಮುಪ್ಪು ಎಂಬ ಮುಮ್ಮುಖ ಚಲನೆಯಲ್ಲಿ ಸಾಗುವುದೇ ವಿನಹ ಹಿಮ್ಮುಖವಾಗಿ ಚಲಿಸಲಾರದು. ಆದ್ದರಿಂದ ಜೀವನ ನದಿಯ ಪ್ರವಾಹ ಬಂದು ಅಪ್ಪಳಿಸುವ ಮುನ್ನ ಮರಣ ಬರುವ ಮುನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಬೇಕೆಂದು ಬೇಂದ್ರೆ ತಿಳಿಸಿದ್ದಾರೆ.
೪. ಬಾಳಿನ ಅಶಾಶ್ವತತೆ ಮತ್ತು ಪ್ರಕೃತಿಯ ನಿತ್ಯನೂತನತೆಯ ಗುಣವನ್ನು ‘ಬೆಳಗು ಜಾವ’ ಕವನದಲ್ಲಿ ಕವಿ ಹೇಗೆ ವಿವರಿಸಿದ್ದಾರೆ?
ದ.ರಾ. ಬೇಂದ್ರೆಯವರ ‘ಬೆಳಗು ಜಾವ’ ಕವಿತೆಯು ಪ್ರಕೃತಿಯ ನಿತ್ಯನೂತನತೆಯನ್ನು ಸಾರುವುದರ ಜೊತೆಜೊತೆಗೆ ಮನುಷ್ಯನ ಬಾಳಿನ ಅಶಾಶ್ವತೆಯನ್ನು ವಿವರಿಸುತ್ತದೆ. ಬೆಳಗಾಗುವುದು. ಕತ್ತಲಾಗುವುದು, ಋತುವಿಗೆ ತಕ್ಕಂತೆ ಮರ ಹಣ್ಣಾಗುವುದು, ಉದುರುವುದು, ಚಿಗುರುವುದು ಇವೆಲ್ಲವೂ ಪ್ರಕೃತಿಯ ನಿತ್ಯ ವ್ಯಾಪಾರಗಳು. ಮತ್ತೆ ಮತ್ತೆ ಹೊಸತನದಿಂದ ಮೈತುಂಬಿಕೊಳ್ಳುವುದು ಪ್ರಕೃತಿಯ ಲಕ್ಷಣ. ಕವಿ ಇದನ್ನು ಮರದ ಉದಾಹರಣೆಯ ಮೂಲಕ ದೃಢಪಡಿಸಿದ್ದಾರೆ. ಆದರೆ ಮನುಷ್ಯನ ಬದುಕು ಶಾಶ್ವತವಾದುದಲ್ಲ. ಜೀವನದ ನದಿಯಲ್ಲಿ ಯಾವಾಗ ಬೇಕಾದರೂ ಪ್ರವಾಹದ ಅಲೆ ಬಂದು ಅಪ್ಪಳಿಸಬಹುದು. ಏರುಪೇರುಗಳಾಗಬಹುದು. ಅದರಂತೆಯೇ ಯಾವ ಗಳಿಗೆಯಲ್ಲಿ ಬೇಕಾದರೂ ಸಾವು ಬಂದು ಮೇಲೆರಗಬಹುದು. ಮನುಷ್ಯನ ಜೀವನ ಅಶಾಶ್ವತ, ಪ್ರಕೃತಿ ಮಾತ್ರವೇ ಶಾಶ್ವತ-ನಿತ್ಯನೂತನ ಎಂದು ಕವಿ ಬೇಂದ್ರೆಯವರು ವಿವರಿಸಿ ಹೇಳಿದ್ದಾರೆ.
ಹೆಚ್ಚುವರಿ ಪ್ರಶ್ನೆಗಳು:
೫. ಕವಿಯು ಅಂಗಡಿಯ ಕದವ ಈ ಕ್ಷಣಕೆ ತೆರೆಯ ಹೇಳಲು ಕಾರಣಗಳೇನು?
ಕವಿ ದ.ರಾ. ಬೇಂದ್ರೆಯವರು ‘ಬೆಳಗು ಜಾವ’ ಕವಿತೆಯಲ್ಲಿ ನಿದ್ದೆಯಲ್ಲಿರುವವರನ್ನು ಎಬ್ಬಿಸಿ. ಅಂಗಡಿಯ ಕದವನ್ನು ಈ ಕ್ಷಣವೇ ತೆರೆಯಬೇಕೆಂದು ಒತ್ತಾಯಿಸಿದ್ದಾರೆ. ಜೀವನ ಅಲ್ಪಾವಧಿಯದು. ಅದನ್ನು ವ್ಯರ್ಥವಾಗಿ ಕಳೆದರೆ ತಿರುಗಿ ಬದುಕುವ ಅವಕಾಶ ನಮಗಿಲ್ಲ. ಅಲ್ಲದೆ ಸಾವು ಯಾವಾಗ ಬೇಕಾದರೂ ಬಂದು ನಮ್ಮನ್ನು ಕೊಂಡೊಯ್ಯಬಹುದು. ಅದಕ್ಕೂ ಮುನ್ನ ಈ ಜೀವನದ ಸವಿಯನ್ನು ಸೊಬಗನ್ನು ತುಂಬಿತುಂಬಿ ಕುಡಿಯಬೇಕಾಗಿರುವುದರಿಂದ ಅಂಗಡಿಯ ಕದವನ್ನು (ಬದುಕಿನ ವ್ಯಾಪಾರ) ಈ ಕ್ಷಣವೇ ತೆರೆದು, ವ್ಯಾಪಾರವನ್ನು ಆರಂಭಿಸಬೇಕೆಂದು ಕವಿಯು ಹೇಳಿರುವರು.
೬. ಕವಿ ವರ್ಣಿಸುವ ಮೂಡಲವು ಕಣ್ಣು ತೆರೆದಾಗಿನ ಚಟುವಟಿಕೆಗಳೇನು? ವಿವರಿಸಿ.
ಮೂಡಲವು ಕಣ್ಣು ತೆರೆದಾಗ ನಕ್ಷತ್ರವು ಜಾರಿಹೋಗಿ, ಕತ್ತಲೆಲ್ಲಾ ಸೋರಿ ಹೋಗಿ ಬಾನಬಣ್ಣವು ಹೆಚ್ಚಾಗಿ ಪ್ರಕಾಶಿಸುತ್ತದೆ. ಆಗ ಮನ್ಮಥನು ತನ್ನ ಜೇನ್ನೋಣದ ಹೆದೆಗೆ ಹೂಬಾಣವನ್ನು ಹೂಡಿ ‘ಝಂ’ ಎಂದು ಬಿಡುತ್ತಾನೆ. ಆಗ ಬೆಳಕು ಎಂಬ ಬೇಟೆಗಾರನು ಗುಡಿಯ ಗೋಪುರಕ್ಕೆ ಬಲೆ ಬೀಸಿ ಬರುವನು. ಇದು ಬೆಳಗಿನ ಜಾವದ ಆರಂಭದ ಚಟುವಟಿಕೆಗಳೆಂದು ಕವಿ. ದ.ರಾ. ಬೇಂದ್ರೆಯವರು ವರ್ಣಿಸಿದ್ದಾರೆ. ಕತ್ತಲು ಕಳೆದು ಬೆಳಕು ಜಗತ್ತನ್ನು ಪ್ರವೇಶಿಸುವ ಬಗೆಯ ಸುಂದರವಾದ ವರ್ಣನೆಯು ಇಲ್ಲಿದೆ. ಬಾನು ಬಣ್ಣಗಟ್ಟುವ ಬಗೆ ಸೊಗಸಾಗಿ ಮೂಡಿ ಬಂದಿದೆ.
ಭಾಷಾಭ್ಯಾಸ
೧. ಈ ಕವನದಲ್ಲಿ ಬರುವ ಪ್ರಾಸಪದಗಳನ್ನು ಗಮನಿಸಿ:
ಕಣ್ಣ – ಬಣ್ಣ
ಮಾರ – ಬೇಟೆಗಾರ
ಸವಿಗೆ – ಕಿವಿಗೆ
ಸಾಕು – ಬೇಕು
ಕೇಳಿ – ಹೇಳಿ
ಉರುಳಿ – ಮರಳಿ
ಮತ್ತೆ – ಹೊತ್ತೆ
ಹೊಗರಲುಂಟು – ಚಿಗುರಲುಂಟು
೨. ಕವನದಲ್ಲಿ ಬರುವ ಜೋಡುನುಡಿಗಳನ್ನು ಆರಿಸಿ ಬರೆಯಿರಿ:
ಉದಾ: ಹೂಬಾಣ
ಗುಡಿಗೋಪುರ.
ಕೆಳಗಿನ ಪದ್ಯಗಳ ಭಾವಾರ್ಥವನ್ನು ಬರೆಯಿರಿ:
೧. ಯಾವಾಗೊ ಕೋಳಿ ಕೂಗಿಹುದು ಏಳಿ, ತಡವೇಕೆ ಪಾನಕೇಳಿ
ಮೊದಲಾಗಲೀಗ, ಅಂಗಡಿಯ ಕದವ ಈ ಕ್ಷಣಕೆ ತೆರೆಯ ಹೇಳಿ
ಜೀವನದ ನದಿಗೆ ಸೆಳವಿಹುದು, ಮರಣ ಬಂದೀತು ಕ್ಷಣವು ಉರುಳಿ
ಹೋದವರು ತಿರಗಿ ಬಂದಾರೆ, ಅವರು ಬರಲಿಕ್ಕು ಇಲ್ಲ ಮರಳಿ
ವರಕವಿ ಎಂದೇ ಪ್ರಸಿದ್ಧರಾಗಿರುವ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ರಚಿಸಿರುವ ‘ಬೆಳಗು ಜಾವ’ ಎಂಬ ಕವಿತೆಯಿಂದ ಈ ಮೇಲಿನ ಚರಣಗಳನ್ನು ಆಯ್ದುಕೊಳ್ಳಲಾಗಿದೆ.
ನಿದ್ದೆಗೈಯುತ್ತಿರುವ ಯುವಕರನ್ನು ಕವಿಯು ಎಚ್ಚರಗೊಳಿಸುತ್ತಿರುವ ಸಂದರ್ಭವಿದಾಗಿದೆ. ಯೌವನವಿರುವಾಗ ಎದ್ದು ಬದುಕನ್ನು ಸವಿಯಲೆಂಬ ಆಸೆ ಕವಿಯದು. ಆದರೆ ಬೆಳಗು ಜಾವ ಮೂಡಿದ್ದರೂ ನಿದ್ದೆಯಲ್ಲಿ ಮೈಮರೆತಿದ್ದಾರೆ ಕಿರಿಯರು. ಆದ್ದರಿಂದ ಕವಿಯು “ಕೋಳಿ ಕೂಗಿಯಾಗಿದೆ. ಇನ್ನಾದರೂ ತಡಮಾಡದೆ ಜೀವನದ ರಸ(ಅನುಭವ)ವನ್ನು (ಪಾನಕೇಳಿ) ಕುಡಿಯಲು ಎದ್ದೇಳಿ. ಯೌವನವಿರುವುದು ದುಡಿದು ಸಂಪಾದಿಸಲು. ಜೀವನವೆಂಬ ನದಿಯಲ್ಲಿ ಯಾವಾಗಲೂ ಸೆಳೆತ ಜಾಸ್ತಿ. ಈಗ ಬದುಕಿದ್ದವರು ಇನ್ನೊಂದು ಗಳಿಗೆಯಲ್ಲಿ ಸಾವನ್ನಪ್ಪಬಹುದು. ಯಾವಾಗ ಯಾರಿಗೆ ಹೇಗೆ ಸಾವು ಬಂದೆರಗುತ್ತದೆಂಬುದು ತಿಳಿಯದು. ಸಾವನ್ನಪ್ಪಿದ ಮೇಲೆ ಈ ಭೂವನದ ಬದುಕು ಅಂತ್ಯಗೊಂಡಂತೆ. ಸತ್ತ ಮೇಲೆ ತಿರುಗಿ ಇಲ್ಲಿಗೆ ಬಂದವರು ಯಾರೂ ಇಲ್ಲ. ಹಾಗೆ ಬರುವುದು ಸಾಧ್ಯವೂ ಇಲ್ಲ” ಎಂದಿದ್ದಾರೆ. ಸಾವು ಬರುವ ಮುನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬ ಅಪೇಕ್ಷೆ ಕವಿಯದಾಗಿದೆ.
೨. ಏಳು ಚಿನ್ನ ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ
ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ
ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ, ಝಂ ಎಂದು ಬಿಟ್ಟ ಮಾರ
ಗುಡಿಗೋಪುರಕ್ಕು, ಬಲೆ ಬೀಸಿ ಬಂದ, ಅಗೊ ಬೆಳಕು-ಬೇಟೆಗಾರ.
ವರಕವಿಯೆಂದೆ ಖ್ಯಾತರಾದ ಡಾ। ದ.ರಾ. ಬೇಂದ್ರೆಯವರು ರಚಿಸಿರುವ ‘ಬೆಳಗು ಜಾವ’ ಎಂಬ ಕವಿತೆಯಿಂದ ಈ ಮೇಲಿನ ಪದ್ಮಭಾಗವನ್ನು ಸ್ವೀಕರಿಸಲಾಗಿದೆ.
ಬೆಳಕು ಮೂಡಿದ ವಿವರಗಳನ್ನು ಒದಗಿಸುತ್ತಲೇ ಕರ್ತವ್ಯ ಮರೆತು ಮಲಗಿ ನಿದ್ರಿಸುತ್ತಿರುವ ಎಳೆಯರನ್ನು ಎಚ್ಚರಿಸುವ ಸಂದರ್ಭವನ್ನು ಕವಿ ಇಲ್ಲಿ ವಿವರಿಸುತ್ತಿದ್ದಾರೆ. ಪದ್ಯದ ಮೊದಲ ನಾಲ್ಕು ಸಾಲುಗಳು ಇವಾಗಿವ
“ಬೆಳಗಾಗಿರುವುದರಿಂದ ನಿದ್ದೆಯಿಂದ ಮೇಲೇಳು, ಮೂಡಲವು ಸೂರ್ಯೋದಯದ ಮೂಲಕ ಕಣ್ಣು ತೆರೆದಿದೆ. ಈ ಕಾರಣ ರಾತ್ರಿಯೆಲ್ಲ ಹೊಳೆಯುತ್ತಿದ್ದ ನಕ್ಷತ್ರಗಳೀಗ ಜಾರಿವೆ. ಕತ್ತಲು ಸೋರಿಹೋಗಿದೆ. ಬೆಳಕಿನಿಂದ ಆಗಸದ ಬಣ್ಣ ಅಧಿಕಗೊಂಡಿದೆ. ಮನ್ಮಥನು ತನ್ನ ಜೇನಿನ ಹೆದೆಗೆ ಹೂಬಾಣವನ್ನು ಹೂಡಿ, ಝೇಂಕಾರದೊಂದಿಗೆ ಪ್ರಯೋಗಿಸಿದ್ದಾನೆ. ಬೆಳಕು ಎಂಬ ಬೇಟೆಗಾರನು ಗುಡಿಗೋಪುರದ ಮೇಲೆಲ್ಲಾ ಬಲೆ ಬೀಸಿ ಬಂದಾಯ್ತು” ಎಂಬುದು ಈ ಪದ್ಯದ ಭಾವಾರ್ಥವಾಗಿದೆ. ಬೆಳಗಿನ ಆಗಮನದ ಸೊಬಗನ್ನು ಕವಿ ಬೇಂದ್ರೆಯವರು ಇಲ್ಲಿ ಮನೋಜ್ಞವಾಗಿ ವರ್ಣಿಸಿದ್ದಾರೆ. ಆಕಾಶದ ಬಣ್ಣವನ್ನು ವರ್ಧಿಸುತ್ತಾ ಗುಡಿಗೋಪುರದ ಮೇಲೆ ಬೆಳಕೆಂಬ ಬಲೆಯನ್ನು ಬೀಸಿ ಬರುವ ಬೇಟೆಗಾರನೆಂದು ಕವಿಯು ಸೂರ್ಯೋದಯವನ್ನು ವರ್ಣಿಸಿರುವಲ್ಲಿ ಅವರ ಕವಿತ್ವದ ಪ್ರತಿಭೆ ಮಿಂಚಿರುವುದೇ ಇಲ್ಲಿನ ಸ್ವಾರಸ್ಯವಾಗಿದೆ.
೩. ನಿಶೆಯಿಳಿದ ಉಷೆಯ, ಎಳನಗೆಯ ಬಗೆಗೆ, ಸೋತಿರಲು ಜಗವು ಸವಿಗೆ
ಕಣ್ಣಿದಿರು ಒಂದು, ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ.
ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು
ಈ ತುಂಬಿಬಾಳು, ತುಂಬಿರುವ ತನಕ, ತುಂತುಂಬಿ ಕುಡಿಯಬೇಕು.
‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ।। ದ.ರಾ. ಬೇಂದ್ರೆಯವರು ಬರೆದಿರುವ ‘ಬೆಳಗು ಜಾವ’ ಎಂಬ ಸಾನೆಟ್ಟಿನಿಂದ ಈ ಮೇಲಿನ ಪದ್ಯಗುಚ್ಛವನ್ನು ಸ್ವೀಕರಿಸಲಾಗಿದೆ. ನಿದ್ದೆಯಲ್ಲಿ ಮುಳುಗಿ, ಕನಸು ಕಾಣುತ್ತಿರು ವಾಗಲೇ ಬೆಳಗುಜಾವ ತರುವ ಕರ್ತವ್ಯದ ಕರೆಯ ಕೂಗನ್ನು ವಿವರಿಸುವ ಸಂದರ್ಭವನ್ನು ಈ ಪದ್ಯಭಾಗವು ಒಳಗೊಂಡಿದೆ.
“ಕತ್ತಲು ಕಳೆದ ಬೆಳಗಿನ ಜಾವದ ಉಷಾಕಿರಣವು ಹೊಮ್ಮಿಸಿದ ಎಳೆಯ ನಗೆಯ ರೀತಿಗೆ ಜಗವು ಮನಸೋತಿದೆ. ನಿದ್ದೆಯಲ್ಲಿ ಕನಸುಕಂಡು ಸುಖಿಸುತ್ತಿರುವಾಗಲೇ ಮಕ್ಕಳ ಕಿವಿಗೆ ಕೂಗು ಕೇಳಿಸಿತು. ಮಕ್ಕಳೇ ಕೇಳಿ, ಸಾಕಿನ್ನು ಹುಸಿನಿದ್ದೆ, ಜೀವನಾನುಭವವೆಂಬ ರಸ ಕುಡಿಯಲು ಸಿದ್ದರಾಗಿ. ದುಂಬಿಯು ಹೂವಿಂದ ಹೂವಿಗೆ ಹಾರಿ ಮಕರಂದವನ್ನು ಸಂಗ್ರಹಿಸುವಂತೆ ನಾವೂ ಬದುಕಿನಲ್ಲಿ ಚಟುವಟಿಕೆಯಿಂದಿದ್ದು ಅನುಭವವನ್ನು ಮೊಗೆಮೊಗೆದು ತುಂಬಿಕೊಳ್ಳಬೇಕು” ಎಂಬುದು ಕವಿತೆಯ ಸಾರಾಂಶ. ಇಲ್ಲಿ ‘ತುಂಬಿ’ ಎಂಬ ಶಬ್ದವನ್ನು ಶ್ಲೇಷಾರ್ಥದಲ್ಲಿ ಬಳಸಿರುವುದು ವಿಶೇಷ.
ದುಂಬಿಯು ಜೇನು ಸಂಗ್ರಹಿಸಲು ಎಲ್ಲೆಲ್ಲೋ ಹಾರಾಡಿ, ಶ್ರಮಿಸಿ ಜೇನನ್ನು ಸಂಗ್ರಹಿಸಿಡುತ್ತದೆ. ಅದರಂತೆಯೇ ನಾವು ಜೀವನದಲ್ಲಿ ಶ್ರಮಪಟ್ಟು ಕೂಡಿಡಬೇಕು. ಆನಂದವನ್ನು ನಮಗೆ ಸಾಧ್ಯವಾದಷ್ಟು ಅನುಭವಿಸಬೇಕು. ಬರಿದೇ ಮಲಗಿ ನಿದ್ರಿಸಿದರೆ ಆಗುವುದಿಲ್ಲ. ನಿದ್ದೆಯಿಂದ ಎದ್ದು ಶ್ರಮದಲ್ಲಿ ತೊಡಗಿಸಿಕೊಳ್ಳಬೇಕೆಂಬ ಸಂದೇಶವನ್ನು ಬೆಳಗಿನಜಾವ ಸೂಚಿಸುತ್ತಿದೆ ಎಂಬಂತೆ ಕವಿ ವರ್ಣಿಸಿರುವುದು ಇಲ್ಲಿನ ಸ್ವಾರಸ್ಯವಾಗಿದೆ
ಕವಿತೆಯ ಸಾರಾಂಶ ಮತ್ತು ವಿಮರ್ಶೆ
ದ.ರಾ. ಬೇಂದ್ರೆಯವರ ‘ಬೆಳಗು ಜಾವ’ ಎಂಬ ಈ ಕವಿತೆಯು ಅತ್ಯಂತ ಪ್ರಸಿದ್ಧವಾದ ಗೀತೆಯಾಗಿದೆ. ‘ಬೆಳಗು’ ಎಂಬ ಬೆಳಕು ಉದಯಿಸಿ ನಮ್ಮ ಬಾಳನ್ನು ಬೆಳಗುವುದನ್ನೂ ಯೌವನವೆಂಬ ಮಾನವ ಜೀವನದ ಬೆಳಗಿನಲ್ಲಿ ಕ್ರಿಯಾಶೀಲರಾಗಿ ಬದುಕಿನ ಸಫಲತೆಯನ್ನು ಅನುಭವಿಸಬೇಕೆಂಬುದನ್ನೂ ಕವಿ ಸುಂದರವಾಗಿ ಈ ಕವಿತೆಯನ್ನು ನಿರೂಪಿಸಿದ್ದಾರೆ.
೧. ಏಳು ಚಿನ್ನ ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ
ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ
ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ, ಝಂ ಎಂದು ಬಿಟ್ಟ ಮಾರ
ಗುಡಿಗೋಪುರಕ್ಕು, ಬಲೆ ಬೀಸಿ ಬಂದ, ಆಗೊ ಬೆಳಕು-ಬೇಟೆಗಾರ.
ಕವಿತೆಯ ಆರಂಭದಲ್ಲಿ ಮಲಗಿ ನಿದ್ರಿಸುವ ಯೌವನಿಗರನ್ನು-ಯುವಕರನ್ನು ‘ಏಳು’ ಎಂದು ಎಚ್ಚರಿಸುತ್ತಿದ್ದಾರೆ. ಹಿರಿಯ ಜೀವವೊಂದು ಕಿರಿಯರನ್ನು ಪ್ರೀತಿಯಿಂದ ‘ಏಳು ಚಿನ್ನ’ ಎಂದು ಎಬ್ಬಿಸಿದಂತಿದೆ. ಬೆಳಗಾದರೂ ಮಲಗಿ ನಿದ್ರಿಸುವುದು ತರವಲ್ಲ, ಬೆಳಗು ಬರುವುದೇ ನಾವು ದೈನಂದಿನ ದುಡಿತದಲ್ಲಿ ತೊಡಗಲು. ಆದ್ದರಿಂದ ಕವಿಯು ಬೆಳಗಾಗಿದೆ ಮೇಲೇಳು. ಮೂಡಲವು ಕಣ್ಣು ತೆರೆದಿದೆ ಎಂದಿದ್ದಾರೆ. ಮೂಡಲದ ಕಣ್ಣು ತೆರೆಯುವುದೆಂದರೆ ರವಿಯು ಮೂಡುವ ಸೂಚನೆಯಾಗಿ ಅಲ್ಲಿ ಬೆಳಕು ಕಾಣಿಸಿರುವುದು. ಸೂರ್ಯೋದಯವಾಗುತ್ತಿರುವುದರಿಂದ ರಾತ್ರಿಯೆಲ್ಲ ಮಿನುಗುತ್ತಿದ್ದ ನಕ್ಷತ್ರಗಳು ಜಾರಿ ಪಕ್ಕಕ್ಕೆ ಸರಿದಿವೆ. ಕತ್ತಲೆಲ್ಲ ಸೋರಿಹೋಗಿದೆ. ಕತ್ತಲನ್ನು ಮೀರಿದ ಬೆಳಕು ಉದಯಿಸುತ್ತಿರುವುದರಿಂದ ಬಾನು ಬಣ್ಣಗಟ್ಟಿದೆ ಎಂದು ಕವಿ ಬೆಳಗು ಜಾವದ ಆರಂಭವನ್ನು ಸುಂದರವಾಗಿ ಸೂಚಿಸಿದ್ದಾರೆ.
ಬೆಳಕಿನ ಬೇಟೆಗಾರನ ಆಗಮನವಾಗಿದೆ. ಅವನೇ ಮಾರ ಅಥವಾ ಮನ್ಮಥ. ಆತ ತನ್ನ ಜೇನಿನಂತಹ ಹೆದೆಗೆ ಹೂವಿನ ಬಾಣವನ್ನು ಹೂಡಿ ‘ಝಂ’ ಎಂದು ಪ್ರಯೋಗಿಸಿದ್ದಾನೆ. ಅದರ ಪರಿಣಾಮವಾಗಿ ಬೆಳಗು ಗುಡಿಗೋಪುರದ ಮೇಲೂ ಹಾದು ಬಂದಿದೆ. ಇದು ಬೆಳಕಿನ ಬೇಟೆಗಾರನ ಆಗಮನದ ಪರಿ ಎಂದು ಕವಿ ವರ್ಣಿಸಿದ್ದಾರೆ.
೨. ನಿಶೆಯಿಳಿದ ಉಷೆಯ, ಎಳನಗೆಯ ಬಗೆಗ, ಸೋತಿರಲು ಜಗವು ಸವಿಗೆ
ಕಣ್ಣಿದಿರು ಒಂದು, ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ.
ಮಕ್ಕಳಿರ ಕೇಳಿ, ರದ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು
ಈ ತುಂಬಿಬಾಳು, ತುಂಬಿರುವ ತನಕ, ತುಂತುಂಬಿ ಕುಡಿಯಬೇಕು
ಬೆಳಗಿನ ಜಾವದ ಸವಿಗೆ ಜಗವು ಸೋತು ಶರಣಾಗಿದೆ ಎಂದು ಕವಿ ಹೇಳಿದ್ದಾರೆ. ನಿಶೆ ಇಳಿದು ಉಷೆಯು ಮೂಡಿ ಎಳೆಬಿಸಿಲಿನ ನಗುವನ್ನು ಸೂಸಿದೆ. ಈ ಎಳೆನಗೆಯಂತಹ ಬಿಸಿಲಿನ ರೀತಿಗೆ ಜಗವು ಸೋತಿದೆ ಎನ್ನುತ್ತಾರೆ ಕವಿ. ಬೆಳಗಿನ ಜಾವಣ ಸಕ್ಕರೆ ನಿದ್ದೆಯಲ್ಲಿ ಬೀಳುವ ಕನಸು ಅತ್ಯಂತ ಸುಂದರವಾಗಿರುತ್ತದೆ, ಆದರೆ ಅಷ್ಟರಲ್ಲಿ ಬೆಳಗು ಆಗಮಿಸಿ ಮಕ್ಕಳೇ ಎಳಿ, ಜೀವನಾನುಭವವೆಂಬ ರಸ ಕುಡಿಯಲು ಸಿದ್ದರಾಗಿ ದುಂಬಿಯು ಹೂವಿಂದ ಹೂವಿಗೆ ಹಾರಿ ಮಕರಂದವನ್ನು ಸಂಗ್ರಹಿಸುವಂತೆ ನಾವೂ ಬದುಕಿನಲ್ಲಿ ಚಟುವಟಿಕೆಯಿಂದಿದ್ದು ಅನುಭವವನ್ನು ಮೊಗೆಮೊಗೆದು ತುಂಬಿಕೊಳ್ಳಬೇಕು ಎಂದು ಕವಿ ಹೇಳಿದ್ದಾರೆ. ಇಲ್ಲಿ ‘ತುಂಬಿ’ ಎಂಬ ಶಬ್ದವನ್ನು ಶ್ಲೇಷಾರ್ಥದಲ್ಲಿ ಬಳಸಿರುವುದು ವಿಶೇಷ.
೩. ಯಾವಾಗೊ ಕೋಳಿ ಕೂಗಿಹುದು ಏಳಿ, ತಡವೇಕೆ ಪಾನಕೇಳಿ
ಮೊದಲಾಗಲೀಗ, ಅಂಗಡಿಯ ಕದವ ಈ ಕ್ಷಣಕೆ ತೆರೆಯ ಹೇಳಿ
ಜೀವನದ ನದಿಗೆ ಸೆಳವಿಹುದು, ಮರಣ ಬಂದೀತು ಕ್ಷಣವು ಉರುಳಿ
ಹೋದವರು ತಿರಗಿ ಬಂದಾರೆ, ಅವರು ಬರಲಿಕ್ಕು ಇಲ್ಲ ಮರಳಿ.
ಸಾಮಾನ್ಯವಾಗಿ ಕೋಳಿ ಕೂಗಿದಾಗ ಎಲ್ಲರೂ ಬೆಳಗಾಯಿತೆಂದು ಮೇಲೇಳುವುದು ರೂಢಿ. ಆದರೆ ಯುವಕರು ಕೋಳಿ ಕೂಗಿ ಎಷ್ಟೋ ಹೊತ್ತಾದರೂ ಮಲಗಿಯೇ ಇರುವರಾದ್ದರಿಂದ ಕವಿಯು ಯಾವಾಗಲೋ ಕೋಳಿ ಕೂಗಿದ್ದಾಯ್ತು ಎದ್ದೇಳಿ, ಜೀವನದ ರಸ (ಅನುಭವ) ವನ್ನು ಕುಡಿಯಲು (ಅನುಭವಿಸಲು) ಸಿದ್ದರಾಗಿ ಎಂದು ಕವಿ ಹೇಳುತ್ತಾರೆ. ಬದುಕು ಎಂಬ ಅಂಗಡಿಯ ಬಾಗಿಲನ್ನು ಈ ಕ್ಷಣವೇ ತೆರೆದು ಕಾರ್ಯಪ್ರವೃತ್ತರಾಗಬೇಕೆಂದಿದ್ದಾರೆ. ಜೀವನವೆಂಬ ನದಿಗೆ ಪ್ರವಾಹ ಬರಬಹುದು ಅಂದರೆ ಯಾವಾಗಬೇಕಾದರೂ ಸಾವು ಪ್ರವಾಹದೋಪಾದಿಯಲ್ಲಿ ಬಂದು ನಮ್ಮನ್ನು ಸೆಳೆದೊಯ್ಯ ಬಹುದು. ಮರಣ ಬಂದ ಮೇಲೆ ಬದುಕಲು ಅವಕಾಶವಿಲ್ಲ. ಸತ್ತವರು ಈ ಭೂಮಿಗೆ ಹಿಂದಿರುಗಿ ಬಾರರು. ಆದ್ದರಿಂದ ಸಾವು ಬರುವ ಮೊದಲು ಯೌವನವನ್ನು ಸಾರ್ಥಕಪಡಿಸಿಕೊಳ್ಳಲು ದುಡಿಮೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮವೆಂಬುದು ಕವಿಯ ಅಭಿಪ್ರಾಯವಾಗಿದೆ.
೪. ಬಾನ್ ಹೊಗರಲುಂಟು, ಮರ ಚಿಗುರಲುಂಟು, ಬರಲುಂಟೆ ಸುಗ್ಗಿ ಮತ್ತೆ?
ಮುಳುಗಿರಲಿ ಮುಪ್ಪು ಚಿಂತನದಿ, ತಾನು ಹರೆಯಕ್ಕೆ ಬೇರೆ ಹೊತ್ತೆ?
ಆಕಾಶ ಮತ್ತೆ ಮತ್ತೆ ಪ್ರಕಾಶಿಸಬಹುದು, ಒಣಗಿದ ಮರ ಮತ್ತೆ ಚಿಗುರಬಹುದು, ಸುಗ್ಗಿಯೂ ಮತ್ತೆ ಮತ್ತೆ ಬರಬಹುದು, ಬಾರದಿರಬಹುದು. ಆದರೆ ಯೌವನದ ಕಾಲ ಕಳೆದು ಹೋದರೆ ಹಿಂದಿರುಗಿ ಬರುವುದಿಲ್ಲ. ಆದ್ದರಿಂದ ಮುಪ್ಪು ಬಂದು ಆವರಿಸುವ ಚಿಂತೆಯಿರಲಿ, ಯೌವನವು ಇನ್ನೊಮ್ಮೆ ಸಿಗುವುದಿಲ್ಲವೆಂಬ ಎಚ್ಚರವಿರಲಿ. ಈಗ ಹರೆಯ ಇರುವುದರಿಂದ ಉಳಿದೆಲ್ಲ ಚಿಂತೆಯನ್ನು ಬಿಟ್ಟು ದುಡಿಯಲು ಮುಂದಾಗಿ, ಯೌವನದ ಸಾರ್ಥಕತೆಯನ್ನು ಅನುಭವಿಸಬೇಕೆಂದು ಕವಿ ಕರೆಯಿತ್ತಿದ್ದಾರೆ.
ಶಬ್ದಾರ್ಥ: ಮೂಡಲ – ಪೂರ್ವ; ತಮ – ಕತ್ತಲು; ಮಿಗಿಲು – ಅಧಿಕ; ಹದೆ – ಬಿಲ್ಲಿನ ಹಗ್ಗ; ಮಾರ – ಮನ್ಮಥ, ಕಾಮ; ನಿಶೆ – ಕತ್ತಲು; ಉಷೆ – ಮುಂಜಾವು; ಬಗೆ – ರೀತಿ; ತುಂಬಿ – ದುಂಬಿ, ಪೂರ್ಣವಾದ; ಸೆಳವು-ರಭಸ; ಹೊಗರು-ಪ್ರಕಾಶ, ಕಾಂತಿ.
ಟಿಪ್ಪಣಿ:
ಇವನು ಬ್ರಹ್ಮನ ಮಗ. ಮನ್ಮಥ, ಮದನ, ಕಾಮದೇವ ಇವು ಈತನ ಇತರ ಹೆಸರುಗಳು. ಈತನ ಪತ್ನಿ ರತಿ. ಅರವಿಂದ, ಅಶೋಕ, ಚೂತ, ನವಮಲ್ಲಿಕಾ, ನೀಲೋತ್ಸಲ ಎಂಬ ಹೂಬಾಣಗಳು ಈತನಲ್ಲಿರುವ ಪಂಚಶರಗಳು. ಒಮ್ಮೆ ಈತ ಶಿವನನ್ನು ಸಂಸಾರಕ್ಕೆಳೆಯಲು ಮಾಡಿದ ಪ್ರಯತ್ನದಿಂದ ಶಿವನ ಸಿಟ್ಟಿಗೆ ಒಳಗಾಗಿ ಆತನ ಹಣೆಗಣ್ಣಿನ ಕಿಚ್ಚಿನಿಂದ ಸುಟ್ಟು ಹೋದನು. ಇದರಿಂದಾಗಿಯೇ ಮನ್ಮಥನಿಗೆ ಅನಂಗ ಎಂಬ ಹೆಸರೂ ಇದೆ.
ಹೊಂದಿಸಿ ಬರೆಯುವುದಕ್ಕೆ ಬೇಕಾದ ಮಾಹಿತಿ:
- ಬೆಳಗು ಜಾವ – ದ. ರಾ. ಬೇಂದ್ರೆ
- ಬೆಳಗು ಜಾವ – ಮುಕ್ತಕಂಠ
- ಮುಕ್ತಕಂಠ – ದ. ರಾ. ಬೇಂದ್ರೆ
- ದ.ರಾ. ಬೇಂದ್ರೆ – ಅಂಬಿಕಾತನಯದತ್ತ
- ದ.ರಾ. ಬೇಂದ್ರೆ – ಸಾಧನಕೇರಿ
- ದ.ರಾ. ಬೇಂದ್ರೆ – ಸಾಹಿತ್ಯದ ವಿರಾಟ್ ಸ್ವರೂಪ
- ದ.ರಾ. ಬೇಂದ್ರೆ – ಜ್ಞಾನಪೀಠ ಪ್ರಶಸ್ತಿ
- ಬೆಳಗು ಜಾವ – ಸುನೀತ
- ಮಾರ – ಮನ್ಮಥ/ ಕಾಮದೇವ/ ಮದನ/ ಬ್ರಹ್ಮನ ಮಗ
- ಸಖಿಗೀತ – ದ.ರಾ. ಬೇಂದ್ರೆ
- ಬೆಳಕು-ಬೇಟೆಗಾರ – ಸೂರ್ಯ