ದ್ವಿತೀಯ ಪಿಯುಸಿ ಕನ್ನಡ ಧಣಿಗಳ ಬೆಳ್ಳಿಲೋಟ ನೋಟ್ಸ್, 2nd Puc Kannada Dhanigala Bellilota Notes Dhanigala Bellilota Question and Answer Pdf Download ಧಣಿಗಳ ಬೆಳ್ಳಿಲೋಟ summary in kannada pdf dhanigala bellilota kannada summary pdf download dhanigala bellilota kannada notes 2nd puc ಧಣಿಗಳ ಬೆಳ್ಳಿಲೋಟ essay in kannada ಧಣಿಗಳ ಬೆಳ್ಳಿಲೋಟ notes ಧಣಿಗಳ ಬೆಳ್ಳಿಲೋಟ ಪಾಠ 2nd puc kannada notes
೫. ಧಣಿಗಳ ಬೆಳ್ಳಿಲೋಟ
– ಎಚ್. ನಾಗವೇಣಿ

ಲೇಖಕರ ಪರಿಚಯ:
ಡಾ. ಎಚ್. ನಾಗವೇಣಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮುಖ್ಯ ಗ್ರಂಥಪಾಲಕರಾಗಿದ್ದಾರೆ. ‘ಗಾಂಧಿ ಬಂದ’ ಎಂಬ ಇವರ ಮೊದಲ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ. ‘ನಾಕನೇ ನೀರು’, ‘ಮೀಯುವ ಆಟ’, ‘ವಸುಂಧರೆಯ ಗ್ಯಾನ’ ಇವರ ಪ್ರಮುಖ ಕೃತಿಗಳು. ರತ್ನಮ್ಮ ಹೆಗ್ಗಡೆ ಕಥಾಪ್ರಶಸ್ತಿ, ಆರ್ಯಭಟ ಪ್ರಶಸ್ತಿಗಳೂ ಇವರಿಗೆ ಸಂದಿವೆ. ಹೊಸಕಥನ ವಿಧಾನವನ್ನು ಸೃಷ್ಟಿಸಿಕೊಂಡಿರುವ ನಾಗವೇಣಿಯವರು ದಕ್ಷಿಣ ಕನ್ನಡ ಜಿಲ್ಲೆಯ ಅಪೂರ್ವ ಪ್ರತಿಭೆಯೆಂದು ಹೊಸಗನ್ನಡ ಸಾಹಿತ್ಯದಲ್ಲಿ ಗಮನ ಸೆಳೆದಿದ್ದಾರೆ. ಭೂಮಿ, ಪರಿಸರ, ಕಡಲು, ಪಶುಪಕ್ಷಿಗಳನ್ನು ತಮ್ಮ ಕುಟುಂಬದ ಸದಸ್ಯರೆಂಬಂತೆ ತಮ್ಮ ಕಥನಗಳಲ್ಲಿ ಆಪ್ತವಾಗಿ ಚಿತ್ರಿಸಿರುವುದು ಇವರ ವೈಶಿಷ್ಟ್ಯವಾಗಿದೆ. ‘ಧಣಿಗಳ ಬೆಳ್ಳಿಲೋಟ’ ಕಥೆಯಲ್ಲಿಯೂ ಇದಕ್ಕೆ ನಿದರ್ಶನವನ್ನು ನೋಡಬಹುದು.
ಆಕರ: ‘ಮೀಯುವ ಆಟ’.
(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು
೧. ಅವಕ್ಕೂ ಚಿನ್ನಮ್ಮನ ಪುಟ್ಟ ಸಂಸಾರದ ಬಗ್ಗೆ ಅದೆಷ್ಟು ಪ್ರೀತಿ ವಾತ್ಸಲ್ಯ.
ಡಾ. ಎಚ್. ನಾಗವೇಣಿಯವರು ಬರೆದಿರುವ ‘ಧಣಿಗಳ ಬೆಳ್ಳಿಲೋಟ’ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಅಯ್ದುಕೊಂಡಿದೆ. ಶಾಂಭವಿ ಹೊಳೆಯ ಬಗ್ಗೆ ನಿರೂಪಕಿ ಈ ಮಾತನ್ನು ಹೇಳಿದ್ದಾರೆ.
ಶಾಂಭವಿ ಹೊಳೆಯು ಚಿನ್ನಮ್ಮನ ಕುಟುಂಬಕ್ಕೆ ಮಾಡಿರುವ ಉಪಕಾರವನ್ನು ವಿವರಿಸುವ ಸಂದರ್ಭದಲ್ಲಿ ಈ ಮೇಲಿನ ವಾಕ್ಯವನ್ನು ಲೇಖಕಿ ಹೇಳಿರುವರು. ಚಿನ್ನಮ್ಮನ ಸಂಸಾರಕ್ಕೆ ಶಾಂಭವಿ ಹೊಳೆಯು ಮೀನುಗಳನ್ನು ಒದಗಿಸುತ್ತಿತ್ತು. ತಾನು ಹರಿದು ಬರುವಾಗ ಸೆರಗಂಚಿನ ತೋಟಗಳಿಂದ ತೆಂಗಿನಕಾಯಿ-ಸೌದೆಗಳನ್ನು ತಂದು ಕುದುಪನ ಕಣ್ಣಿಗೆ ಬೀಳಿಸುತ್ತಿತ್ತು. ಕೆಲವು ಮಳೆಗಾಲದಲ್ಲಿ ಪಾತ್ರೆ-ಪಗಡಿ, ಕೋಳಿ-ಕುರಿ, ಏಣಿ-ದೋಣಿ, ರೀಪು-ಪಕ್ಕಾಸುಗಳನ್ನು ಹೊತ್ತು ತಂದು ಹಾಕುತ್ತಿದ್ದ ಶಾಂಭವಿ ಹೊಳೆಗೆ ಚಿನ್ನಮ್ಮನ ಪುಟ್ಟ ಸಂಸಾರದ ಬಗ್ಗೆ ತುಂಬಾ ಪ್ರೀತಿವಾತ್ಸಲ್ಯಗಳಿದ್ದವೆಂದು ಲೇಖಕಿ ವಿವರಿಸಿದ್ದಾರೆ. ಈ ಹೊಳೆಯಿಂದಾಗಿಯೇ ಚಿನ್ನಮ್ಮನ ಕುಟುಂಬ ಅಪವಾದಕ್ಕೆ ಸಿಕ್ಕಿಕೊಳ್ಳುವಂತಾದುದು ಕಥೆಯ ಮುಂದಿನ ಬೆಳವಣಿಗೆಯಲ್ಲಿ ಗಮನಿಸುತ್ತೇವೆ.
೨. ಕಾವಿಗೆ ಕೂತ ಹೇಂಟೆಯಂತೆ – ಒಡಲು ಯಾವತ್ತೂ ವ್ಯಗ್ರ-ಪ್ರಕ್ಷುಬ್ಧ,
ಡಾ. ಎಚ್. ನಾಗವೇಣಿಯವರು ರಚಿಸಿರುವ ‘ಧಣಿಗಳ ಬೆಳ್ಳಿಲೋಟ’ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಶ್ರಾವಣ ಮಾಸದ ನಾಲ್ಕನೇ ದಿನ ಚಿನ್ನಮ್ಮನ ಮಗ ಗುಡ್ಡ ಶಾಂಭವಿ ಹೊಳೆಯ ದಡದಲ್ಲಿ ಕುಳಿತು ಧಣಿಗಳ ಮನೆಯ ಮುಸುರೆ ಪಾತ್ರಗಳನ್ನು ತಿಕ್ಕುತ್ತಿದ್ದಾಗ ಶಾಂಭವಿ ಹೊಳೆಯು ರಭಸದಿಂದ ಹರಿಯುತ್ತಿದ್ದ ಬಗೆಯನ್ನು ಲೇಖಕರು ಮೇಲಿನ ವಾಕ್ಯದ ಮೂಲಕ ವಿವರಿಸಿದ್ದಾರೆ. ಅಪಾಢ-ಶ್ರಾವಣ-ಭಾದ್ರಪದ ಮಾಸಗಳಲ್ಲಿ ಮಳೆ ಹೆಚ್ಚು ಸುರಿಯುವ ಕಾರಣ ನದಿಯು ಮೈಮಂಬಿ ಹರಿಯುತ್ತದೆ. ಅದರ ರಭಸ ವ್ಯಗ್ರ-ಪ್ರಕ್ಷುಬ್ಧವಾದ್ದರಿಂದ ಲೇಖಕಿಯು ಅದನ್ನು ಕಾವಿಗೆ ಕೂತಿರುವ ಹೇಂಟೆಗೆ ಹೋಲಿಸಿದ್ದಾರೆ. ಕಾವಿಗೆ ಕುಳಿತಿರುವ ಕೋಳಿಗೆ ಕೋಪ ಹೆಚ್ಚು ಅದರಂತೆಯೇ ಶಾಂಭವಿ ಹೊಳೆಯೂ ಪ್ರಕ್ಷುಬ್ಧವಾಗಿ ಹರಿಯುತ್ತಿತ್ತಂಬ ಹೋಲಿಕೆ ಚೆನ್ನಾಗಿದೆ ಎನ್ನಬಹುದು.
೩. ‘ಗದ್ದೆಯಲ್ಲಿ ಬಿತ್ತುವುದನ್ನು ಮರಳಿ ದಿನ್ನೆ ಮೇಲೆ ಬಿತ್ತಿದೆಯಲ್ಲವ ಮಾರಾಯ…?’
ಶ್ರೀಮತಿ ಎಚ್. ನಾಗವೇಣಿ ಅವರು ಬರೆದಿರುವ ‘ಧಣಿಗಳ ಬೆಳ್ಳಿಲೋಟ’ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಧಣಿಗಳಾದ ವೆಂಕಪ್ಪಯ್ಯನವರು ಪ್ರತಿವರ್ಷವೂ ಹೊಳೆಯ ನೀರು ಬೇಸಿಗೆಯಲ್ಲಿ ಬತ್ತಿದಾಗ ತಮ್ಮ ಗದ್ದೆ-ತೋಟದ ಅಂಚನ್ನು ಮೂರಾಲ್ಕು ಅಡಿ ಎತ್ತರಿಸುತ್ತಿದ್ದರೂ ಮಳೆಗಾಲದಲ್ಲಿ ಅದು ಕೊಚ್ಚಿ ಹೋಗಿ ಹೊಳೆ ಪಾಲಾಗುತ್ತಿತ್ತು. ಹೊಳೆಯು ತನ್ನ ಜಾಗವನ್ನು ಮಳೆಗಾಲದಲ್ಲಿ ಆಕ್ರಮಿಸಿಕೊಂಡು ಬಿಡುತ್ತಿದ್ದುದರಿಂದ ವೆಂಕಪ್ಪಯ್ಯನವರ ಶ್ರಮವೆಲ್ಲಾ ಹೊಳೆಯಲ್ಲಿ ಹುಣಿಸೆಹಣ್ಣು ಹಿಂಡಿದಂತಾಗುತ್ತಿತ್ತು. ವೆಂಕಪ್ಪಯ್ಯ ಬಿರುಬೇಸಿಗೆಯಲ್ಲಿ ಗದ್ದೆಯಂಚನ್ನು ಎತ್ತರಿಸುವುದನ್ನು ಕಂಡು ತೆಪ್ಪಗಿರುತ್ತಿದ್ದ ಹೊಳೆ, ಮಳೆಗಾಲ ಬಂದೊಡನೆ “ಗದ್ದೆಯಲ್ಲಿ ಬಿತ್ತುವುದನ್ನು ಮರಳ ಮೇಲೆ ಬಿತ್ತಿದೆಯಲ್ಲವೆ ಮಾರಾಯ?” ಎಂದು ವೆಂಕಪ್ಪಯ್ಯನವರ ಪೆದ್ದುತನವನ್ನು ಅಣಕಿಸಿ ಆ ಎತ್ತರವನ್ನು ಕೆಡವಿ ಹಾಕುತ್ತಿತ್ತೆಂಬುದನ್ನು ವರ್ಣಿಸಿರುವ ಸಂದರ್ಭವಿದಾಗಿದೆ. ಹೊಳೆಯ ಶಕ್ತಿಯ ಮುಂದೆ ಹುಲುಮಾನವರಾದ ವೆಂಕಪ್ರಯ್ಯನವರ ಪ್ರಯತ್ನ ವಿಫಲವಾದುದು.
೪. ಆತನ ಈಜಿಗೆ ಮೀನುಗಳೇ ನಾಚಬೇಕು.
ಡಾ. ಎಚ್. ನಾಗವೇಣಿಯವರು ಬರೆದಿರುವ ‘ಧಣಿಗಳ ಬೆಳ್ಳಿಲೋಟ’ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಕುದುಪ-ಚಿನ್ನಮ್ಮರ ಏಕಮಾತ್ರ ಪುತ್ರನಾದ ಗುಡ್ಡ ರಭಸದಿಂದ ಹರಿಯುತ್ತಿರುವ ಶಾಂಭವಿ ಹೊಳೆಯ ಅಂಚಿನಲ್ಲಿ ಧಣಿಗಳ ಮುಸುರೆ ಪಾತ್ರೆಗಳನ್ನು ತೊಳೆಯುತ್ತಾ ಕುಳಿತಿದ್ದ ಹಿಂದಿನ ದಿನ ರಾತ್ರಿಯ ಹರಿಕಥೆ ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾ ಅವನು ನಗುನಗುತ್ತಾ ಪಾತ್ರೆ ತೊಳೆಯುತ್ತಿರುವಾಗ ಕಾಲಡಿಯ ಮಣ್ಣು ಕುಸಿದು, ಪಾತ್ರೆಗಳ ಸಮೇತ ಗುಡ್ಡ ನೀರಿಗೆ ಬಿದ್ದನು. ಅವನು ಚಿಕ್ಕವನಾದರೂ ಚೆನ್ನಾಗಿ ಈಜು ಬಲ್ಲವನಾಗಿದ್ದ. ಆತನ ಈಜಿಗೆ ಮೀನುಗಳೇ ನಾಚಬೇಕು. ಹಾಗೆ ಈಜಿ ದಡ ಸೇರಿದವನು ತಂದೆಯ ಬಳಿ ಬಂದು ಪಾತ್ರೆಗಳು ನೀರು ಪಾಲಾದ ವಿಚಾರವನ್ನು ತಿಳಿಸಿದನು.
೫. ಧಣಿಯವರು ಎಂದಾದರೂ ಒಕ್ಕಲು ಮಕ್ಕಳನ್ನು ನಂಬಿದ್ದುಂಟೆ?
ಡಾ. ಎಚ್. ನಾಗವೇಣಿಯವರು ಬರೆದಿರುವ ‘ಧಣಿಗಳ ಬೆಳ್ಳಿಲೋಟ’ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಗುಡ್ಡ ಮುಸುರೆ ಪಾತ್ರೆಗಳೆಲ್ಲಾ ಹೊಳೆ ಪಾಲಾದವೆಂದು ಬಂದು ಹೇಳಿದಾಗ ಕುದುಪ ಹೊಳೆಯಲ್ಲಿ ಮುಳುಗಿ ಸಿಕ್ಕ ಪಾತ್ರಗಳನ್ನೆಲ್ಲ ಜಾಲಾಡಿ ತಂದನು. ಕೊನೆಯಲ್ಲಿ ಏನು ಮಾಡಿದರೂ ಧಣಿಗಳ ಮನೆಯ ಬೆಳ್ಳಿಲೋಟ ಪತ್ತೆಯಾಗಲಿಲ್ಲ. ಚನ್ನಮ್ಮ-ಕುಡುವ-ಗುಡ್ಡರ ಕಣ್ಣೀರು ಹೊಳೆಯನ್ನು ಸೇರಿತೇ ವಿನಾ ಅನ್ಯ ಪ್ರಯೋಜನವಾಗಲಿಲ್ಲ. ಆಕಾಶ-ಭೂಮಿಯನ್ನು ಒಂದುಮಾಡುವಂತೆ ಮಳೆ ಸುರಿಯುತ್ತಿದ್ದುದರಿಂದ ಅಸಹಾಯಕನಾದ ಕುದುಪ ಧಣಿಗಳ ಮನೆಯಂಗಳದಲ್ಲಿ ನಿಂತು ಬೆಳ್ಳಿಲೋಟಿ ಕಣ್ಮರೆಯಾದ ವಿಷಯ ತಿಳಿಸಿದ. ಧಣಿಗಳು ಎಂದೂ ಒಕ್ಕಲು ಮಕ್ಕಳನ್ನು ನಂಬುವುದಿಲ್ಲ. ಇದರಿಂದಾಗಿ ಕುದುಪನ ಕುಟುಂಬವೇ ಬೆಳ್ಳಿಲೋಟವನ್ನು ಲಪಟಾಯಿಸಿದೆಯೆಂಬ ಅಪಾದನೆಯನ್ನು ಹೊರಬೇಕಾಗಿ ಬಂತು. ಆಸಹಾಯಕ ಸ್ಥಿತಿಯಲ್ಲಿರುವ ಬಡವರನ್ನು ಯಾರೂ ನಂಬದೆ, ಅನುಮಾನದಿಂದಲೇ ಕಾಣುವ ಸಿರಿವಂತರ ನಡೆವಳಿಕೆಯನ್ನು ಲೇಖಕಿ ಈ ಮೇಲಿನ ಮಾತಿನ ಮೂಲಕ ವ್ಯಂಗ್ಯವಾಡಿದ್ದಾರೆ.
೬. ಮೂರು ಬೇಸಿಗೆಯವರೆಗೆ ಚಿನ್ನಮ್ಮನ ದುಡಿತಕ್ಕೆ ಪಡಿಯಿಲ್ಲ.
ಡಾ. ಎಚ್. ನಾಗವೇಣಿಯವರು ಬರೆದಿರುವ ‘ಧಣಿಗಳ ಬೆಳ್ಳಿಲೋಟ’ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಕುದುಪನ ಕುಟುಂಬವೇ ಬೆಳ್ಳಿಲೋಟವನ್ನು ಅಪಹರಿಸಿದೆಯೆಂದು ತೀರ್ಮಾನಿಸಿದ ಧಣಿಯು ಮುಸುರೆ ಪಾತ್ರ ತಿಕ್ಕುತ್ತಿದ್ದ ಗುಡ್ಡನ ಬಾಯಿಬಿಡಿಸಲು ಅಂಗಳದ ಹೊಂಗಾರೆ ಮರಕ್ಕೆ ಆತನನ್ನು ಕಟ್ಟಿ ಮಳೆಯಲ್ಲೇ ತೆಂಗಿನ ಕೊತ್ತಳಿಗೆಯಲ್ಲಿ ಬಡಿಯುತ್ತಿದ್ದರು. ತನ್ನ ಕರುಳ ಕುಡಿಯ ಚೀರಾಟ-ನರಳಾಟ ನೋಡಲಾಗದ ಚಿನ್ನಮ್ಮ ಧಣಿಗಳ ಕಾಲಿಗೆ ಬಿದ್ದು ತನ್ನ ಮಗನನ್ನು ಬಿಟ್ಟು ಬಿಡುವಂತೆಯೂ ತಾನು ವರ್ಷಾನುಗಟ್ಟಲೆ ಪಡಿಯಿಲ್ಲದೆ ಆ ಬೆಳ್ಳಿಲೋಟಿದ ಹಣವನ್ನು ದುಡಿದು ತೀರಿಸುವುದಾಗಿಯೂ ಅಳುತ್ತಾ ಬೇಡಿಕೊಂಡಳು. ಆಗ ಧಣಿಗಳು ಗುಡ್ಡನಿಗೆ ಹೊಡೆಯುವುದನ್ನು ನಿಲ್ಲಿಸಿ, ಚಿನ್ನಮ್ಮನಿಗೆ ಮೂರು ಬೇಸಿಗೆವರೆಗೆ ಪಡಿಯಿಲ್ಲದೆ ದುಡಿಯುವ ಕರಾರು ವಿಧಿಸಿದರು. ಬೆಳ್ಳಿಲೋಟ ಕಣ್ಮರೆಯಾದುದಕ್ಕೆ ಬಡವರು ಹೊರ ಬೇಕಾಗಿ ಬಂದ ಕಳ್ಳತನದ ಆಪಾದನೆ, ಹಿಂಸೆ ಮತ್ತು ಧಣಿಗಳ ಕೌಶ್ಯವನ್ನು ಲೇಖಕಿ ಇಲ್ಲಿ ಚಿತ್ರಿಸಿದ್ದಾರೆ.
೭. ಪಾವಕ್ಕಿ ಕಮ್ಮಿ ಮಾಡಿದರೆ ಸುಮ್ಮನೆ ಇರಿಯೇನೋ ನೀನು?
ಡಾ. ಎಚ್. ನಾಗವೇಣಿಯವರು ಬರೆದಿರುವ ‘ಧಣಿಗಳ ಬೆಳ್ಳಿಲೋಟ’ ಎಂಬ ಸಣ್ಣಕಥೆಯಲ್ಲಿ ಧಣಿಗಳಾದ ವೆಂಕಪ್ಪಯ್ಯ ಕುದುಪನಿಗೆ ಈ ಮೇಲಿನ ಮಾತನ್ನು ಹೇಳುತ್ತಾರೆ.
ಹೊಳೆಯಿಂದ ಹೂಳೆತ್ತಿ ತೆಂಗಿನಮರದ ಬುಡಕ್ಕೆ ಸುರಿಯುವ ಕೆಲಸದಲ್ಲಿ ಕುದುಪ-ಚಿನ್ನಮ್ಮರು ತೊಡಗಿದ್ದರು. ಮೂಳೆ ಮುರಿದು ಹೋಗುವಂತಹ ಈ ಕೆಲಸದ ನಡುವೆ ಸುಸ್ತಾದ ಕುದುಪ ಒಂದರೆಕ್ಷಣ ನೀರಲ್ಲಿ ಕುಸಿದು ಕುಳಿತಾಗ ಧಣಿಗಳು ಸಿಟ್ಟು ನೆತ್ತಿಗೇರಿತು. ಅವರು ಕುದುಪನನ್ನು ಗದರಿಸುತ್ತಾ “ಎದ್ದೇಳೋ ಮೂರ್ಕಾಸಿನವ… ಪಡಿ ಅಳೆಯುವಾಗ ಪಾವಕ್ಕಿ ಕಮ್ಮಿ ಮಾಡಿದರೆ ಸುಮ್ಮನೆ ಇರ್ತಿಯೇನೋ ನೀನು” ಎಂದು ಬೈಯ್ದರು. ಮೊದಲೇ ಬೆಳ್ಳಿಲೋಟದ ಆಪಾದನೆಯಿಂದ ಬಸವಳಿದಿದ್ದ ಚಿನ್ನಮ್ಮನ ಕುಟುಂಬಕ್ಕೆ ಈ ಬಿಡುವಿಲ್ಲದ ದುಡಿತ, ಬೈಗುಳಗಳಿಂದ ಇನ್ನಷ್ಟು ನೋವಾಗುತ್ತದೆ. ಅವರಿಬ್ಬರ ಅಸಹಾಯಕ ಕಣ್ಣೀರು ಹೊಳೆಗೆ ಸೇರುತ್ತದೆ.
೮. ಇದೇ ಲೋಟವಲ್ಲವೇ…. ತನ್ನ ಬೆವರಿನ ಬೆಲೆ ಕಳೆದದ್ದು.
ಡಾ. ಎಚ್. ನಾಗವೇಣಿಯವರು ಬರೆದಿರುವ ‘ಧಣಿಗಳ ಬೆಳ್ಳಿಲೋಟ’ ಎಂಬ ಸಣ್ಣಕಥೆಯಲ್ಲಿ ಬೆಳ್ಳಿಲೋಟವನ್ನು ಕೈಯಲ್ಲಿ ಹಿಡಿದುಕೊಂಡು ಚಿನ್ನಮ್ಮ ತನ್ನಲ್ಲಿಯೇ ಹೇಳಿಕೊಳ್ಳುವ ಮಾತುಗಳಿವು.
ಹೊಳೆಯಲ್ಲಿ ಹೂಳೆತ್ತುವಾಗ ಸಿಕ್ಕಿದ ಬೆಳ್ಳಿಲೋಟವನ್ನು ಕುದುಪನ ಕೈಯಿಂದ ಕಿತ್ತುಕೊಂಡ ಚಿನ್ನಮ್ಮ ಅದನ್ನು ತಿರುಗಿಸಿ ತಿರುಗಿಸಿ ನೋಡಿದಳು. ಅವಳಿಗೆ ಆ ಲೋಟದ ಪರಿಚಯ ಚೆನ್ನಾಗಿತ್ತು. ತನ್ನ ಕುಟುಂಬವನ್ನು ಕಷ್ಟಕ್ಕೀಡುಮಾಡಿದ ಆ ಬೆಳ್ಳಿಲೋಟಿದ ಮೇಲೆ ಕೋಪ ಉಕ್ಕಿತು. “ಇದೇ ಲೋಟವಲ್ಲವೆ…. ತನ್ನ ಬೆವರಿನ ಬೆಲೆ ಕಳೆದದ್ದು. ಕಳ್ಳತನದ ಕಿರೀಟವನ್ನು ತನ್ನ ಮುರುಕಲು ಗುಡಿಸಲ ಚಾವಣಿಗೆ ಜೋಡಿಸಿದ್ದು” ಎಂದು ಕೋಪ ಕೆರಳಿತು. ಈ ಬೆಳ್ಳಿಲೋಟದಿಂದಾಗಿ ತನ್ನ ಕುಟುಂಬ ಉಂಡ ನೋವು, ಅವಮಾನ ಪಟ್ಟಿಪಾಡು, ಪರಿತಾವಗಳೆಲ್ಲವೂ ನೆನಪಿಗೆ ಬಂದು ಕೋಪದಿಂದ ನೀರಿನ ಮಡುವಿಗೆ ಆ ಲೋಟವನ್ನು ಎಸೆದುಬಿಟ್ಟಳು. ಬೆಳ್ಳಿಲೋಟಿ ತಂದ ಕಷ್ಟಕ್ಕೆ ಚಿನ್ನಮ್ಮ ಅದರ ಮೇಲೆ ತೋರುವ ಕೋಪದ ಪ್ರತಿಕ್ರಿಯೆ ಇಲ್ಲಿ ಚಿತ್ರಿತವಾಗಿದೆ.
ಹೆಚ್ಚುವರಿ ಪ್ರಶ್ನೆಗಳು:
೯. ಹೊಳೆಯ ಆಳ ಮಡುವತ್ತ ಬೆಳ್ಳಿಲೋಟವನ್ನು ಎಸೆದೇಬಿಟ್ಟಳು!
ಡಾ. ಎಚ್. ನಾಗವೇಣಿಯವರು ಬರೆದಿರುವ ‘ಧಣಿಗಳ ಬೆಳ್ಳಿಲೋಟ’ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಕಥೆಯ ಕೊನೆಯ ಭಾಗದಲ್ಲಿ ಲೇಖಕಿಯೇ ಈ ಮಾತನ್ನು ಹೇಳಿದ್ದಾರೆ. ತಮ್ಮ ಕುಟುಂಬವನ್ನು ಕಳ್ಳತನದ ಆಪಾದನೆಗೆ ನೂಕಿದ ಬೆಳ್ಳಿಲೋಟ ಕೆರೆಯ ಹೂಳೆತ್ತುವಾಗ ದೊರೆತರೂ ಚಿನ್ನಮ್ಮ ಅದನ್ನು ಧಣಿಗಳ ಕೈಗೊಪ್ಪಿಸಿ ಕಳ್ಳತನದಿಂದ ಅಪವಾದದಿಂದ ಪಾರಾಗುವ ಅವಕಾಶವಿತ್ತು. ಆದರೆ ಚಿನ್ನಮ್ಮನಿಗೆ ಈ ಆಪಾದನೆಯ ಮೂಲಕ ತಮ್ಮ ಕುಟುಂಬ ಅನುಭವಿಸಿದ ಸಂಕಟ-ನೋವು ಮುಖ್ಯವಾಗಿ ಕಂಡು, ಅದನ್ನು ಮತ್ತೆ ಹೊಳೆಯ ಆಳವಾದ ಮಡುವತ್ತ ಎಸೆದುಬಿಡುತ್ತಾಳೆ. ಚಿನ್ನಮ್ಮನ ಈ ಪ್ರತಿಭಟನೆಯ ನಿರ್ಧಾರವನ್ನು ವಿವರಿಸುತ್ತಾ ನಿರೂಪಕಿಯೇ ಈ ಮೇಲಿನ ಮಾತನ್ನು ಆಡಿದ್ದಾರೆ.
೧೦. ‘ನನ್ನಪ್ಪ ಮದುವೆಯಲ್ಲಿ ಕೊಟ್ಟ ಬೆಳ್ಳಿಲೋಟವನ್ನು ನುಂಗಿತನಾ…’
ಎಚ್. ನಾಗವೇಣಿ ಅವರು ಬರೆದಿರುವ ‘ಧಣಿಗಳ ಬೆಳ್ಳಿಲೋಟ’ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಬೆಳ್ಳಿಲೋಟ ಸಿಗಲಿಲ್ಲವೆಂದು ಕುದುಪ ಮತ್ತವನ ಕುಟುಂಬದವರು ಧಣಿಗೆ ತಿಳಿಸಿದಾಗ, ಧಣಿಪತ್ನಿಯು ಕುದುಪನನ್ನುದ್ದೇಶಿಸಿ ಈ ಮೇಲಿನ ಮಾತನ್ನು ಹೇಳುತ್ತಾರೆ. ಎಲ್ಲ ಪಾತ್ರೆಗಳೂ ದೊರೆತಿವೆ. ಆದರೆ ಬೆಳ್ಳಿಲೋಟ ಸಿಗಲಿಲ್ಲವೆಂಬ ಮಾತನ್ನು ನಂಬದ ಧಣಿಪಕ್ಷಿಯು “ಇಷ್ಟು ದಿನ ನಮ್ಮ ಮುಸುರೆ ಪಾತ್ರೆಗಳನ್ನು ನುಂಗದ ಹೊಳೆ, ಇವತ್ತು ನನ್ನನ್ನ ಮದುವೆಯಲ್ಲಿ ಕೊಟ್ಟ ಬೆಳ್ಳಿ ಲೋಟವನ್ನು ನುಂಗಿತನಾ?” ಎಂದು ಪ್ರಶ್ನಿಸುತ್ತಾರೆ. ಕುದುಪನ ಕುಟುಂಬದವರೇ ಅದನ್ನು ನುಂಗಿರಬಹುದು ಎಂಬುದು ಅವರ ಆರೋಪವಾಗಿದೆ. ಧಣಿಪತ್ನಿಯ ಈ ಮಾತಿನಲ್ಲಿ ಅಡಕವಾಗಿರುವ ವ್ಯಂಗ್ಯ ಅತ್ಯಂತ ಮುಖ್ಯವಾಗಿದೆ.
೧೧. ‘ಇಷ್ಟೇನಾ ಪಾತ್ರೆ….. ಇನ್ಯಾವುದಾದರೂ ಮುಳುಗಿದ್ದನಾ…?’
ಡಾ. ಎಚ್. ನಾಗವೇಣಿ ಅವರು ಬರೆದಿರುವ ‘ದಣಿಗಳ ಬೆಳ್ಳಿಲೋಟಿ’ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ತೊಳೆಯುತ್ತಿದ್ದ ಮುಸುರೆ ಪಾತ್ರೆಗಳ ಸಮೇತ ನೀರುಪಾಲಾದ ಗುಡ್ಡ, ಮೀನಿನಂತೆ ಈಜಿ ಮೇಲೆ ಬಂದವನೆ ಓಡಿಹೋಗಿ ತನ್ನಪ್ಪನನ್ನು ಕರೆತರುತ್ತಾನೆ. ನಡೆದ ಅಚಾತುರ್ಯದಿಂದ ಕಂಗಾಲಾದ ಕುದುಪನು ಧಣಿಗಳ ಕೋಪದ ಪರಿಣಾಮವನ್ನು ಊಹಿಸಿ, ಕೋಮಣಾಲಂಕೃತನಾಗಿ ನೀರಿಗೆ ಧುಮುಕಿ ಕೆಲವು ಪಾತ್ರಗಳನ್ನು ಹುಡುಕಿ ತೆಗೆಯುತ್ತಾನೆ. ಎಲ್ಲಾ ಪಾತ್ರೆಗಳು ದೊರೆತವೆ? ಅಥವಾ ಇನ್ನು ಬಾಕಿ ಇದೆಯೇ? ಎಂಬುದು ಆತನಿಗೆ ಗೊತ್ತಿಲ್ಲ, ಆದ್ದರಿಂದ ಮುಸುರೆ ಪಾತ್ರೆಗಳ ಒಡೆಯನಾದ ಗುಡ್ಡನನ್ನು ಉದ್ದೇಶಿಸಿ “ಇಷ್ಟೇನಾ ವಾತ್ರೆ….. ಇನ್ಯಾವುದಾದರೂ ಮುಳುಗಿದೆಯೆ?” ಎಂದು ಪ್ರಶ್ನಿಸುವ ಸಂದರ್ಭವಿದಾಗಿದೆ. ಯಾವುದಾದರೂ ಪಾತ್ರೆ ಸಿಗದಿದ್ದರೆ ಧಣಿಗಳ ಕೋಪಕ್ಕೆ ಬಲಿಯಾಗಬೇಕಾದೀತೆಂಬ ಭಯ-ಆತಂಕ ಅವನ ಮಾತಿನಲ್ಲಿ ಅಡಕವಾಗಿರುವುದನ್ನು ಗುರುತಿಸಬಹುದು.
೧೨. ‘ನಮ್ಮ ಊರ ಕೋಡ್ಡಬ್ಟು ದೈವದ ಆಣೆಯಿದೆ…’
ಡಾ. ಎಚ್. ನಾಗವೇಣಿಯವರು ಬರೆದಿರುವ ‘ಧಣಿಗಳ ಬೆಳ್ಳಿಲೋಟ’ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಬೆಳ್ಳಿಲೋಟವನ್ನು ಚಿನ್ನಮ್ಮನ ಕುಟುಂಬವೇ ಅಪಹರಿಸಿರಬಹುದೆಂದು ಯೋಚಿಸಿದ ಧಣಿಗಳು ಗುಡ್ಡನ ಬಾಯಿ ಬಿಡಿಸಲು, ಸುರಿವ ಮಳೆಯಲ್ಲೇ ಅವನನ್ನು ಹೊಂಗಾರೆ ಮರಕ್ಕೆ ಕಟ್ಟಿ ಹಾಕುತ್ತಾರೆ. ಅರೆಬೆತ್ತಲು ಮಾಡಿ ತೆಂಗಿನ ಕೊತ್ತದಿಂದ ಹೊಡೆಯುತ್ತಾರೆ. ಮಗ ನೋವಿನಿಂದ ಚೀರಾಡುವುದನ್ನು ಕಂಡ ಚಿನ್ನಮ್ಮನ ಕರುಳು ಚುರುಕ್ಕೆನ್ನುತ್ತವೆ. ತಕ್ಷಣವೇ ಆಗ ಧಣಿಗಳನ್ನುದ್ದೇಶಿಸಿ “ಮಗನ ಮೇಲೆ ಕೈ ಮಾಡಿದರೆ ನಮ್ಮ ಊರ ಕೋಡ್ಡಬ್ಟು ದೈವದ ಆಣೆಯಿದೆ” ಎಂದು ಹೇಳಿ, ಬೆಳ್ಳಿಲೋಟದ ಹಣವನ್ನು ತಾನು ಪಡಿಯಿಲ್ಲದೆ ದುಡಿದು ತೀರಿಸುವುದಾಗಿ ಹೇಳುತ್ತಾಳೆ. ಅವಳು ಹಾಗೆ ಹೇಳಿದ ಮೇಲಷ್ಟೇ ಧಣಿಯು ಹೊಡೆಯುವುದನ್ನು ನಿಲ್ಲಿಸುವುದು. ದೇವರ ಆಣೆ ಹಾಕಿ ಮಗನನ್ನು ಹೊಡೆತದಿಂದ ಪಾರುಮಾಡುವ ತಾಯಿಯ ಮಮತೆಯನ್ನು ಈ ಸಂದರ್ಭವು ಸೊಗಸಾಗಿ ಅಭಿವ್ಯಕ್ತಪಡಿಸಿದೆ.
(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ).
೧. ಧಣಿಗಳ ಮನೆಯ ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆ ಯಾವುದು?
ಶಾಂಭವಿ ಹೊಳೆ
೨. ಗುಡ್ಡ ಹೊಳೆಯಲ್ಲಿ ಯಾವ ಆಟ ಆಡುತ್ತಿದ್ದನು?
ಮರಿಮೀನುಗಳನ್ನು ಹಿಡಿಯುವ
೩. ಧಣಿಗಳ ಹೆಸರೇನು?
ವೆಂಕಪ್ಪಯ್ಯ
೪. ಬೆಳ್ಳಿಲೋಟ ಲಪಟಾಯಿಸಿದ ಅಪವಾದವನ್ನು ಯಾರ ಮೇಲೆ ಹೊರಿಸಲಾಯಿತು?
ಚಿನ್ನಮ್ಮನ ಕುಟುಂಬದ
೫. ಧಣಿ ಎಂದಿಗೂ ಯಾರನ್ನು ನಂಬುವುದಿಲ್ಲ?
ಒಕ್ಕಲು ಮಕ್ಕಳನ್ನು
೬. ಧಣಿಗಳು ಹೊಳೆಯ ಹೂಳೆತ್ತಲು ಯಾರಿಗೆ ಸೂಚಿಸಿದರು?
ಕುದುಪ-ಚಿನ್ನಮ್ಮರಿಗೆ
೭. ಬೆಳ್ಳಿಲೋಟಿ ವಿನನ್ನು ಕಳೆದುಕೊಂಡಿತ್ತು?
ಹೊಳಪನ್ನು
೮. ಧಣಿಗಳ ದಾಂಪತ್ಯಕ್ಕೆ ಯಾವುದು ಮೂಕಸಾಕ್ಷಿಯಾಗಿತ್ತು?
ಈ) ಬೆಳ್ಳಿ ಲೋಟ
ಹೆಚ್ಚುವರಿ ಪ್ರಶ್ನೆಗಳು:
೯. “ತಮಗೆ ಸಿಕ್ಕಿದ ಬೆಳ್ಳಿಲೋಟವನ್ನು ಚಿನ್ನಮ್ಮ ಮತ್ತೆ ಹೊಳೆಯ ಮಡುವಿಗೆ ಎಸೆದು, ಹೊಳೆಯ ನೀರಲ್ಲೊಮ್ಮೆ ಸಂಪೂರ್ಣವಾಗಿ ಮುಳುಗಿ ಎದ್ದು ನಿಂತಳು” – ಈ ಸಾಲುಗಳಲ್ಲಿ ವ್ಯಕ್ತವಾಗಿರುವ ಅಂಶವನ್ನು ಗುರುತಿಸಿ.
ಅಪವಾದದಿಂದ ಮುಕ್ತಳಾದ ಭಾವ
೧೦. ಹೂಳೆತ್ತುವ ಕೆಲಸದ ಒತ್ತಡ ಯಾವ ರೀತಿಯದು?
ಮೂಳೆ ಮುರಿದು ಹೋಗುವಂತದ್ದು
೧೧. “ಏಯ್ ಮೂರ್ಕಾಸಿನ ಹಡಬೆ…. ಇಷ್ಟೇನಾ ಪಾತ್ರೆ…. ಇನ್ಯಾವುದಾದರೂ ಮುಳುಗಿದ್ದನಾ….?
– ಈ ಮಾತನ್ನು ಹೇಳಿದವರು ಯಾರು?
ಕುದುಪ
೧೨. ಹೊಳೆ ಯಾವುದಕ್ಕೆ ಹೊಂಚುಹಾಕುತ್ತಿರುತ್ತದೆ?
ದರೆಯನ್ನು ಕೆಡವಲು
೧೩. “ಇದೆಲ್ಲ ಸಾಕು ಮಾರಾಯ, ಯಾವತ್ತೂ ನಮ್ಮ ಮುಸುರೆ ಪಾತ್ರೆಗಳನ್ನು ನುಂಗದ ಹೊಳೆ ಇವತ್ತು ನನ್ನಪ್ಪ ಮದುವೆಯಲ್ಲಿ ಕೊಟ್ಟ ಬೆಳ್ಳಿಲೋಟವನ್ನು ನುಂಗಿತನಾ…”
– ಈ ಮಾತು ಕೆಳಗಿನ ಯಾವ ಹೇಳಿಕೆಯನ್ನು ಸಮರ್ಥಿಸುತ್ತದೆ?
ಕುದುಪನ ಕುಟುಂವದ ಮೇಲಿನ ಅವಿಶ್ವಾಸ
೧೪. ಚಿನ್ನಮ್ಮ ಧಣಿಗಳ ಬೆಳ್ಳಿಲೋಟವನ್ನು ಎಲ್ಲಿಗೆ ಎಸೆದಳು?
ಹೊಳೆಯ ಆಳ ಮಡುವತ್ತ
೧೫. “ಎಲವೋ ಹುಲು ಮಾನವ ವೆಂಕಪ್ಪಯ್ಯ, ಸುತ್ತಲ ನಾಕೂರಲ್ಲಿರುವ ಯಾವನೇ ಶ್ಯಾನುಭೋಗ ಉಗ್ರಾಣಿಯನ್ನಾದರೂ ಕರೆತಂದು ನನ್ನೆದುರು ಸರಪಳಿ ಎಳೆಸು, ಅವೆಲ್ಲವೂ ನನ್ನದಲ್ಲದಿದ್ದರೆ ಕೇಳು ಮತ್ತೆ…”
‘ಧಣಿಗಳ ಬೆಳ್ಳಿಲೋಟ’ ಗದ್ಯದ ಈ ಸಾಲುಗಳು ಕೆಳಗಿನ ಯಾವ ಹೇಳಿಕೆಯನ್ನು ಸಮರ್ಥಿಸುತ್ತದೆ?
ಪ್ರಕೃತಿಯ ಮೇಲಿನ ಮನುಷ್ಯನ ದಬ್ಬಾಳಿಕೆ
೧೬. “ಆಷಾಢ-ಶ್ರಾವಣ-ಭಾದ್ರಪದ ಮಾಸದಲ್ಲಿ ನದಿಯ ಒಡಲೆಂದರೆ ಎಂಥದ್ದು! ಕಾವಿಗೆ ಕೂತ ಹೇಂಟೆಯಂತೆ – ಒಡಲು ಯಾವತ್ತೂ ವ್ಯಗ್ರ-ಪ್ರಕ್ಷುಬ್ಧ” – ಲೇಖಕಿ ಯಾವ ನದಿಗೆ ಈ ರೀತಿ ಹೋಲಿಸಿದ್ದಾರೆ?
ಶಾಂಭವಿ
೧೭. “ಏಯ್ ಮೂರ್ಕಾಸಿನ ಹಡಬೆ…. ಇಷ್ಟೇನಾ ಪಾತ್ರೆ…. ಇನ್ಯಾವುದಾದರೂ ಮುಳುಗಿದ್ದನಾ….?”
– ಎಂದು ಕುದುಪ ಮಗನಿಗೆ ಹೇಳಿದ್ದು
ಸಿಟ್ಟಿನಿಂದ
೧೮. “ಆ ಸಂಕಟವುಂಡ ಜೀವಕ್ಕೆ ಏನನಿಸಿತೋ ಆ ಕ್ಷಣ! ಚಿನ್ನಮ್ಮ ತಟ್ಟನೆ ಪೂರ್ವಾಭಿಮುಖವಾಗಿ ನಡೆದಳು. ಆ ಹೊಳೆಯಲ್ಲಿ ಹತ್ತು ಹೆಜ್ಜೆ ಹಾಕಿ ಹನ್ನೊಂದನೇ ಹೆಜ್ಜೆಯಡಿ ನಿಂತವಳು…. ಅತ್ತ ದೂರದಲ್ಲಿದ್ದ ಹೊಳೆಯ ಆಳ ಮಡುವತ್ತ ಬೆಳ್ಳಿಲೋಟವನ್ನು ಎಸೆದೇಬಿಟ್ಟಳು!” – ಈ ಗದ್ಯಭಾಗದ ಹಿನ್ನೆಲೆಯಲ್ಲಿ ‘ಸಂಕಟವುಂಡ ಜೀವ’ ಯಾವುದು?
ಚಿನ್ನಮ್ಮ
೧೯. “ಗದ್ದೆಯಲ್ಲಿ ಬಿತ್ತುವುದನ್ನು ಮರಳದಿನ್ನೆ ಮೇಲೆ ಬಿತ್ತಿದೆಯಲ್ಲವ ಮಾರಾಯ..?” – ಶಾಂಭವಿ ಹೊಳೆಯ ಈ ಮಾತಿನ ಆರ್ಥವೇನು?
ವೆಂಕಪ್ಪಯ್ಯನ ಪೆದ್ದುತನ
೨೦. “ಇದೆಲ್ಲ ಸಾಕು ಮಾರಾಯ, ಯಾವತ್ತೂ ನಮ್ಮ ಮುಸುರೆ ಪಾತ್ರೆಗಳನ್ನು ನುಂಗದ ಹೊಳೆ ಇವತ್ತು ನನ್ನಪ್ಪ ಮದುವೆಯಲ್ಲಿ ಕೊಟ್ಟ ಬೆಳ್ಳಿಲೋಟವನ್ನು ನುಂಗಿತನಾ…” – ಈ ಮಾತು ಕೆಳಗಿನ ಯಾವ ಹೇಳಿಕೆಯನ್ನು ಸಮರ್ಥಿಸುತ್ತದೆ?
ಬೆಳ್ಳಿಲೋಟವನ್ನು ಕುದುಪನ ಕುಟುಂಬವೇ ಕದ್ದಿರಬಹುದು ಎಂಬ ವ್ಯಂಗ್ಯ
೨೧. “ಗದ್ದೆಯಲ್ಲಿ ಬಿತ್ತುವುದನ್ನು ಮರಳದಿನ್ನೆ ಮೇಲೆ ಬಿತ್ತಿದೆಯಲ್ಲವ ಮಾರಾಯ..?’ – ‘ಧಣಿಗಳ ಬೆಳ್ಳಿಲೋಟ’ ಕತೆಯ ಈ ಸಾಲು ಕೆಳಗಿನ ಯಾವುದಕ್ಕೆ ಸಮರ್ಥನೆ ಒದಗಿಸುತ್ತದೆ?
ವೆಂಕಪ್ಪಯ್ಯನ ಪೆದ್ದುತನ
೨೨. “ಆ ಸಂಕಟವುಂಡ ಜೀವಕ್ಕೆ ಏನನಿಸಿತೋ ಆ ಕ್ಷಣ! ಚಿನ್ನಮ್ಮ ತಟ್ಟನೆ ಪೂರ್ವಾಭಿಮುಖವಾಗಿ ನಡೆದಳು. ಆ ಹೊಳೆಯಲ್ಲಿ ಹತ್ತು ಹೆಜ್ಜೆ ಹಾಕಿ ಹನ್ನೊಂದನೇ ಹೆಜ್ಜೆಯಡಿ ನಿಂತವಳು…. ಅತ್ತ ದೂರದಲ್ಲಿದ್ದ ಹೊಳೆಯ ಆಳ ಮಡುವತ್ತ ಬೆಳ್ಳಿಲೋಟವನ್ನು ಎಸೆದೇಬಿಟ್ಟಳು!”
– ‘ಧಣಿಗಳ ಬೆಳ್ಳಿಲೋಟ’ ಗದ್ಯದ ಈ ಸಾಲುಗಳು ಕೆಳಗಿನ ಯಾವ ಹೇಳಿಕೆಯನ್ನು ಸಮರ್ಥಿಸುತ್ತದೆ?
ಉಳ್ಳವರ ಮೇಲಿನ ಆಕ್ರೋಶ
೨೩. “ಮುಂಜಾನೆ ಚಿನ್ನಮ್ಮ ಎಂದಿನಂತೆ ಹೊಳೆಯ ಸೆರಗಲ್ಲಿ ಮುಸುರೆ ಪಾತ್ರೆಗಳನ್ನು ರಾಶಿ ಹಾಕಿ ಕೂತು, ಪಕ್ಕದಲ್ಲಿ ಬೂದಿಯ ಗೆರಟೆಯನ್ನಿರಿಸಿಕೊಂಡು ಹೊಳೆಯ ‘ಗುಣವಾಚನ’ಕ್ಕೆ ತೊಡಗಿದ್ದಳು.” – ಈ ವಾಕ್ಯದಲ್ಲಿ ‘ಗುಣವಾಚನ’ ಎಂದರೇನು?
ಬೈಗುಳ
೨೪. “ಮಳೆಗಾಲ ಬಂದರೆ ಸಾಕು ಈ ಬಿಕನಾಸಿ ಹೊಳೆ ಊರಿಡೀ ತನ್ನ ಸೆರಗನ್ನೇ ಹಾಸಿಬಿಡುತ್ತದೆ…. ಎಷ್ಟಗಲ ಸೆರಗು ಹಾಸಿದರೂ ಇನ್ನಷ್ಟು ದೂರಕ್ಕೆ ಹಾಸಬೇಕೆಂಬ ಚಟ ಇದಕ್ಕೆ….” – ಈ ಸಾಲುಗಳು ಇದಕ್ಕೆ ಸಂಬಂಧಿಸಿದೆ.
ಶಾಂಭವಿ ಹೊಳೆಗೆ
೨೫. ಎದ್ದೇಳೋ ಮೂರಾಸಿನವ…. ಪಡಿ ಆಳೆಯುವಾಗ ಪಾವಕ್ಕಿ ಕಮ್ಮಿ ಮಾಡಿದರೆ ಸುಮ್ಮನೆ ಇರ್ತಿಯೇನೋ ನೀನು?” – ಈ ಹೇಳಿಕೆ ಕೆಳಗಿನ ಯಾವುದನ್ನು ಸಮರ್ಥಿಸುತ್ತದೆ?
ವೆಂಕಪ್ಪನ ಅಹಂಕಾರ
೨೬. “ಇದೆಲ್ಲ ಸಾಕು ಮಾರಾಯ, ಯಾವತ್ತೂ ನಮ್ಮ ಮುಸುರೆ ಪಾತ್ರೆಗಳನ್ನು ನುಂಗದ ಹೊಳೆ ಇವತ್ತು ನನ್ನಪ್ಪ ಮದುವೆಯಲ್ಲಿ ಕೊಟ್ಟ ಬೆಳ್ಳಿ ಲೋಟವನ್ನು ನುಂಗಿತನಾ…” – ಎಂದು ದಣಿಪತ್ನಿಯು ಚೀರಿದ್ದರ ಅರ್ಥವೆಂದರೆ
ಚಿನ್ನಮ್ನನ ಕುಟುಂಬವೆ ಬೆಳ್ಳಿ ಲೋಟವನ್ನು ಅಪಹರಿಸಿದೆಯೆಂಬುದು
(ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):
೧. ಮುಂಜಾನೆ ಚಿನ್ನಮ್ಮ ಯಾವ ಕೆಲಸದಲ್ಲಿ ತೊಡಗಿದ್ದಳು?
ಮುಂಜಾನೆ ಚಿನ್ನಮ್ಮ ಎಂದಿನಂತೆ ಹೊಳೆಯ ಸೆರಗಲ್ಲಿ ಮುಸುರೆ ಪಾತ್ರೆಗಳನ್ನು ರಾಶಿ ಹಾಕಿಕೊಂಡು ಕುಳಿತು ತೊಳೆಯುತ್ತ ಹೊಳೆಯ ‘ಗುಣವಾಚನ’ಕ್ಕೆ ತೊಡಗಿದ್ದಳು.
೨. ನದಿಯ ಒಡಲು ಯಾವಾಗ ಪ್ರಕ್ಷುಬ್ಧವಾಗಿರುತ್ತದೆ?
ಆಷಾಢ-ಶ್ರಾವಣ-ಭಾದ್ರಪದ ಮಾಸದಲ್ಲಿ ನದಿಯ ಒಡಲು ಕಾವಿಗೆ ಕೂತ ಹೇಂಟೆಯಂತೆ ಯಾವತ್ತೂ ವ್ಯಗ್ರ – ಉಪ್ರಕ್ಷುಬ್ಧ
೩. ಧಣಿಗಳು ಹೊಳೆಯನ್ನು ಹೇಗೆ ಮೂದಲಿಸುತ್ತಿದ್ದರು?
ಧಣಿಗಳು ಹೊಳೆಯನ್ನು “ಮಳೆಗಾಲ ಬಂದರೆ ಸಾಕು ಈ ಬಿಕನಾಸಿ ಹೊಳೆ ಊರಿಡೀ ತನ್ನ ಸೆರಗನ್ನೇ ಹಾಸಿಬಿಡುತ್ತದೆ. ಎಷ್ಟಗಲ ಸೆರಗು ಹಾಸಿದರೂ ಇನ್ನಷ್ಟು ದೂರಕ್ಕೆ ಹಾಸಬೇಕೆಂಬ ಚಟ ಇದಕ್ಕೆ” ಎಂದು ಮೂದಲಿಸುತ್ತಿದ್ದರು.
೪. ಮುಸುರೆ ಪಾತ್ರೆಗಳ ‘ಒಡೆಯ’ ಏನೆಂದು ಯೋಚಿಸಿದನು?
ಬೆಳ್ಳಿಲೋಟ ನಾಪತ್ತೆಯಾದ ವಿಷಯ ತಿಳಿದ ಧಣಿಗಳ ಅರ್ಭಟವು ಮಳೆಯ ಅರ್ಭಟದಂತೆಯೆ ಏರಿತು. ಅವರು ಕುದುಪನ ಕುಟುಂಬವೇ ಅದನ್ನು ಅಪಹರಿಸಿದೆ ಎಂದು ಯೋಚಿಸಿದರು.
೫. ಧಣಿಪತ್ನಿ ಬೆಳ್ಳಿಲೋಟವನ್ನು ಹೇಗೆ ಪರಿಚಯಿಸಿದ್ದಾಳೆ?
ಧಣಿಪತ್ನಿಯು ಆ ಬೆಳ್ಳಿಲೋಟವನ್ನು ಮದುವೆಯಲ್ಲಿ ತಮ್ಮಪ್ಪ ಕೊಟ್ಟಿದ್ದೆಂದೂ, ಅದರ ಮೇಲಿನ ಹೂಬಳ್ಳಿಯನ್ನು ಈ ಕಾಲದಲ್ಲಿ ಯಾವ ಆಚಾರಿ ತಾನೆ ಮಾಡಿಯಾನು? ತನ್ನ ಅಪ್ಪ ಕುಡ್ಲದ ರಥಬೀದಿಯ ನರಸಿಂಹಾಚಾರಿ ಕೈಯಲ್ಲಿ ಮಾಡಿಸಿದ್ದೆಂದೂ ಹೇಳುತ್ತಿದ್ದರು.
೬. ಧಣಿಯ ಬಡಿತದಿಂದ ಗುಡ್ಡ ಬಂಧಮುಕ್ತನಾದುದು ಹೇಗೆ?
ಚಿನ್ನಮ್ಮ ಕಣ್ಣೀರು ಸುರಿಸುತ್ತಾ ಧಣಿಗಳ ಪಾದದ ಮೇಲೆ ಬಿದ್ದಳು. ತಾನು ಆ ಬೆಳ್ಳಿಲೋಟಿದ ಹಣವನ್ನು ವರ್ಷಾನುಗಟ್ಟಲೆ ಪಡಿಯಿಲ್ಲದೆ ದುಡಿದು ತೀರಿಸುವೆನೆಂದು ಹೇಳಿದ ಮೇಲೆ ಗುಡ್ಡ ಬಂಧಮುಕ್ತನಾದುದು.
೭. ಕುದುಪನು ಹನಿಗಣ್ಣಾಗಲು ಕಾರಣವೇನು?
ಹೊಳೆಯ ಹೂಳಿನಲ್ಲಿ ಸಿಕ್ಕಿದ ಬೆಳ್ಳಿಲೋಟವನ್ನು ನೋಡಿದಾಗ ಕುದುಪನಿಗೆ “ಈ ಲೋಟದಿಂದಾಗಿ ತಾನೆಷ್ಟು ಅವಮಾನದ ಮಾತುಗಳನ್ನು ಧಣಿಗಳ ಪತ್ನಿಯ ಕೊಳಕು ಬಾಯಿಂದ ಕೇಳಿಬಿಟ್ಟೆ” ಎಂದು ಹನಿಗಣ್ಣಾಯಿತು.
ಹೆಚ್ಚುವರಿ ಪ್ರಶ್ನೆಗಳು:
೮. ಯಾವ ಯಾವ ವಸ್ತುಗಳು ನೀರು ಪಾಲಾದವು?
ಧಣಿಗಳ ಮನೆಯ ಎರಡು ಕಂಚಿನ ಕೊಳಗ, ಎರಡು ಹಿತ್ತಾಳೆ ಗಿಂಡಿ, ಹತ್ತು ಹಿತ್ತಾಳೆ ಲೋಟ, ಆರು ಮರದ ಸೌಟು, ಎರಡು ಹಿತ್ತಾಳೆ ಸೌಟು, ಹತ್ತು ಕಂಚಿನ ಬಟ್ಟಲು, ಎಂಟು ಹಿತ್ತಾಳೆ ತಟ್ಟೆ, ಒಂದು ಬಾಣಲೆ ಹಾಗೂ ಬೆಳ್ಳಿಯ ಒಂದು ಲೋಟ – ಈ ಎಲ್ಲವೂ ನೀರು ಪಾಲಾಗಿದ್ದವು.
೯. ಚಿನ್ನಮ್ಮನ ಕುಟುಂಬದೊಂದಿಗೆ ಶಾಂಭವಿ ಹೊಳೆಗೆ ಇದ್ದ ಒಡನಾಟ ಎಂತಹುದು?
ಚಿನ್ನಮ್ಮನ ಕುಟುಂಬಕ್ಕೆ ಶಾಂಭವಿ ಹೊಳೆಯು ತಾನು ಹರಿದು ಬರುವಾಗ ಪಾತ್ರೆ-ಪಗಡಿ, ಕೋಳಿ-ಕುರಿ-ಎಣಿ-ದೋಣಿ, ರೀಪು ಪುಕ್ಕಾಸು, ಪುಡಿ ಮೀನು ಮುಂತಾದವುಗಳನ್ನು ತಂದು ಒದಗಿಸಿ ತನ್ನ ವಾತ್ಸಲ್ಯವನ್ನು ತೋರುತ್ತಿತ್ತು. ಆದರೆ ಈ ಹೊಳೆಯೇ ಬೆಳ್ಳಿಲೋಟವನ್ನು ನುಂಗುವ ಮೂಲಕ ಕಳ್ಳತನದ ಅಪವಾದವನ್ನು ಚಿನ್ನಮ್ಮನ ಕುಟುಂಬಕ್ಕೆ ತಂದೊಡ್ಡುತ್ತವೆ.
೧೦. ಹೊಳೆಯಿಂದ ಉಂಟಾಗುವ ಉಪಟಳಕ್ಕೆ ಧಣಿಗಳು ಕೈಗೊಳ್ಳುತ್ತಿದ್ದ ಪರಿಹಾರೋಪಾಯವೇನು?
ಹೊಳೆಯ ಉಪಟಳವನ್ನು ತಾಳಲಾರದೆ ಧಣಿಗಳು ಪ್ರತಿವರ್ಷವೂ ಹೊಳೆಯು ಸೊರಗುವ ಕಾಲಕ್ಕೆ ತಮ್ಮ ಮೇಲುಸ್ತುವಾರಿಯಲ್ಲಿ ನದಿ ಸೆರಗನ್ನು ಒಂದಷ್ಟು ಪಕ್ಕಕ್ಕೆ ದೂಡುವಂತೆ ಪಾದೇಕಲ್ಲು- ಮುರಕಲ್ಲಿನ ಗಟ್ಟಿ ಅಡಿಪಂಚಾಂಗ ಹಾಕಿಸಿ, ನದಿಯ ಸೆರಗಿಗೂ – ತೋಟಕ್ಕೂ ನಡುವೆ ದರೆ ಎಬ್ಬಿಸಿ ಎತ್ತರಿಸುತ್ತಿದ್ದರು.
೧೧. ಮಳೆಗಾಲದಲ್ಲಿ ಹೊಳೆ ಹೇಗೆ ಕಿರಿಕಿರಿ ಎಬ್ಬಿಸುತ್ತದೆ?
ಹೊಳೆಗೆ ಬಾಯಿಯಿಲ್ಲದಿದ್ದರೂ ಮಳೆಗಾಲ ಬಂದೊಡನೆ ಬರಿ ಕ್ರಿಯೆಯಲ್ಲೇ ತನ್ನ ವ್ಯಾಪ್ತಿ, ತನ್ನ ಪರಿಹಾರ, ತನ್ನ ಬಲ ಎಷ್ಟೆಂಬುದನ್ನು ಧಣಿಗಳಿಗೆ ಮನವರಿಕೆ ಮಾಡಿ ಅವರಿಗೆ ಕಿರಿಕಿರಿ ಉಂಟುಮಾಡುತ್ತಿತ್ತು.
ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):
೧. ಚಿನ್ನಮ್ಮ ಮತ್ತು ಆಕೆಯ ಕುಟುಂಬಕ್ಕೆ ಹೊಳೆಯ ಬಗ್ಗೆ ಅಸಹನೆ ಉಂಟಾಗಲು ಕಾರಣವೇನು?
ಶಾಂಭವಿ ಹೊಳೆ ಮತ್ತು ಚಿನ್ನಮ್ಮನ ಕುಟುಂಬಕ್ಕೆ ಉತ್ತಮ ಬಾಂಧವ್ಯವಿತ್ತು. ಹೊಳೆ ತಾನು ಹರಿದು ಬರುವಾಗೆಲ್ಲ ಚಿನ್ನಮ್ಮನ ಕುಟುಂಬಕ್ಕೆ ಏನೇನೋ ಅಗತ್ಯ ವಸ್ತುಗಳನ್ನು ಹೊತ್ತುತಂದಿತ್ತು ದೊರೆಯುತ್ತಿತ್ತು. ಆದರೆ ಬೆಳ್ಳಿಲೋಟವು ಹೊಳೆಯಲ್ಲಿ ಸೇರಿದ್ದರಿಂದ ಚಿನ್ನಮ್ಮನ ಕುಟುಂಬವು ಕಳ್ಳತನದ ಆಪಾದನೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಎಳೆಯ ಬಾಲಕ ಗುಡ್ಡ ಧಣಿಯಿಂದ ಹೊಡೆತ ತಿನ್ನುತ್ತಾನೆ. ಚಿನ್ನಮ್ಮ ಬೆಳ್ಳಿಲೋಟದ ಹಣ ತೀರುವವರೆಗೂ, ಅಂದರೆ ಮುಂದಿನ ಮೂರು ಬೇಸಿಗೆವರೆಗೂ ಪಡಿಯಿಲ್ಲದೆ ದುಡಿಯಬೇಕಾದ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾಳೆ. ಚಿನ್ನಮ್ಮನ ಕುಟುಂಬದ ಬೆವರಿಗೆ ಬೆಲೆಯಿಲ್ಲದಾಗುತ್ತದೆ. ಈ ಎಲ್ಲ ಕಾರಣದಿಂದ ಚಿನ್ನಮ್ಮನ ಕುಟುಂಬಕ್ಕೆ ಹೊಳೆಯ ಮೇಲೆ ಆಸಹನೆ ಹೆಚ್ಚುತ್ತದೆ.
೨. ಧಣಿ ಹಾಗೂ ಹೊಳೆಯ ನಡುವಿನ ಸಮರವನ್ನು ಚಿತ್ರಿಸಿ.
ಹೊಳೆಯು ವೆಂಕಪ್ಪಯ್ಯವನರ ತೆಂಗಿನ ತೋಟದ ಅಂಚನ್ನು ಮಳೆಗಾಲದಲ್ಲಿ ಕೊಚ್ಚಿಹಾಕಿ ಬಿಡುತ್ತಿದ್ದರಿಂದ ವೆಂಕಪ್ಪಯ್ಯನವರು ಮಳೆಗಾಲದಲ್ಲಿ ಆಡಿದ್ದೇ ಆಟ, ಹೂಡಿದ್ದೇ ಊಟ ಎಂದಾಡುವ ಹೊಳೆಯನ್ನು “ಮಳೆಗಾಲ ಬಂದರೆ ಸಾಕು ಈ ಬಿಕನಾಸಿ ಹೊಳೆ ಊರಿಡೀ ತನ್ನ ಸೆರಗನ್ನೇ ಹಾಸಿಬಿಡುತ್ತದೆ …. ಎಷ್ಟಗಲ ಸೆರಗು ಹಾಸಿದರೂ ಇನ್ನಷ್ಟು ದೂರಕ್ಕೆ ಹಾಸಬೇಕೆಂಬ ಚಟ ಇದಕ್ಕೆ” ಎಂದು ಹೊಳೆಯನ್ನು ಯಾವಾಗಲೂ ಮೂದಲಿಸುತ್ತಿದ್ದರು. ಮಳೆಗಾಲದಲ್ಲಿ ಹೊಳೆ ತನ್ನ ವ್ಯಾಪ್ತಿ, ತನ್ನ ಪರಿಹಾರ ತನ್ನ ಬಲ ಎಷ್ಟೆಂಬುದನ್ನು ಮನವರಿಕೆ ಮಾಡಿ ಧಣಿಗಳಿಗೆ ಕಿರಿಕಿರಿ ಮೂಡಿಸುತ್ತಿತ್ತು. ಪ್ರತಿವರ್ಷ ವೆಂಕಪ್ಪಯ್ಯ ಗದ್ದೆಯಂಚನ್ನು ನಾಲೈದು ಅಡಿ ಏರಿಸಿದ್ದರೂ, ಬೇಸಿಗೆಯಲ್ಲಿ ಅದನ್ನು ನೋಡಿಕೊಂಡು ಸುಮ್ಮನಿರುತ್ತಿದ್ದ ಹೊಳೆ, ಮಳೆಗಾಲದಲ್ಲಿ ಮತ್ತೆ ಆ ಅಂಚನ್ನು ಕಡುವುತ್ತಿತ್ತು. ಬೇಸಿಗೆಯಲ್ಲಿ ವೆಂಕಪ್ಪಯ್ಯ ಹೊಳೆಯ ಸೆರಗನ್ನು ಒತ್ತರಿಸಿಕೊಂಡು ಗದ್ದೆ ಬದುವನ್ನು ಎತ್ತರಿಸುವುದೂ ಮಳೆಗಾಲದಲ್ಲಿ ಹೊಳೆ ಅದನ್ನು ಕೊಚ್ಚಿಕೊಂಡು ಹೋಗುವುದೂ ಅವರಿಬ್ಬರ ನಡುಪಿ ಮಾಮೂಲು ಸಮರವಾಗಿತ್ತು.
೩. ಮುಸುರೆ ಪಾತ್ರೆಗಳು ನೀರುಪಾಲಾದುದು ಹೇಗೆ? ಅವುಗಳನ್ನು ಮೇಲೆತ್ತಲು ಮಾಡಿದ ಪ್ರಯತ್ನಗಳೇನು?
ಗುಡ್ಡ ತೋಟದ ಅಂಚು ಮೆತ್ತಗಾಗಿರುವುದನ್ನು ಅರಿಯದೆ ಅಲ್ಲೇ ಕುಳಿತು ಮುಸುರೆ ಪಾತ್ರಗಳನ್ನು ತೊಳೆಯುತ್ತಾ ತಾನು ಕೇಳಿದ್ದ ಹರಿಕಥೆಯೊಳಗಣ ಉಪಕಥೆಗಳನ್ನು ನೆನಪಿಸಿಕೊಳ್ಳುತ್ತಿರುವಾಗ ಕಾಲಡಿಯ ಮಣ್ಣು ಕುಸಿದು ಕ್ಷಣಮಾತ್ರದಲ್ಲಿ ಗುಡ್ಡನ ಸಮೇತ ಧಣಿಗಳ ಮನೆಯ ಪಾತ್ರೆ, ಸೌಟು, ಕೊಳಗ, ತಪ್ಪಲೆ, ಬೆಳ್ಳಿಲೋಟ ಎಲ್ಲವೂ ನೀರುಪಾಲಾದವ ಗುಡ್ಡ ಈಜಿಕೊಂಡು ಮೇಲೆ ಬಂದವನು ಅಳುತ್ತಾ ತನ್ನಪ್ಪ ಕುದುಪನತ್ತ ದಾವಿಸಿ ನಡೆದ ಸಂಗತಿಯನ್ನು ವಿವರಿಸಿದ. ಧಣಿಗಳಿಗೆ ಈ ವಿಚಾರ ತಿಳಿದರೆ ಅವರ ಸಿಟ್ಟಿನ ಭರಕ್ಕೆ ತಾವೆಲ್ಲವೂ ಹೊಳೆಯ ಪಾಲಾಗುವುದು ಖಂಡಿತ ಎಂದು ಯೋಚಿಸಿದ ಕುದುಪ ಹೊಳೆಯಲ್ಲಿ ಮುಳುಗಿ ನೆಲಕಚ್ಚಿರುವ ಪಾತ್ರೆಗಳನ್ನು ಜಾಲಾಡಿದೆ. ಎರಡು ಕಂಚಿನ ಕೊಳಗ, ಒತ್ತಾಳೆ ಗಿಂಡಿ, ಹತ್ತು ಹಿತ್ತಾಳೆ ಲೋಟಿ, ಆರು ಮರದ ಸೌಟು, ಎರಡು ಹಿತ್ತಾಳೆ ಸೌಟು, ಹತ್ತು ಕಂಚಿನ ಬಟ್ಟಲು, ಎಂಟು ಹಿತ್ತಾಳೆ ತಟ್ಟಿ ಒಂದು ಬಾಣಲೆಗಳು ಸಿಕ್ಕವು. ಆದರೆ ಏನು ಮಾಡಿದರೂ ಧಣಿಗಳ ಮನೆಯ ಬೆಳ್ಳಿಲೋಟಿ ಪತ್ತೆಯಾಗಲಿಲ್ಲ. ಕುದುಪನ ಕುಟುಂಬವೇ ಅದನ್ನು ಅಪಹರಿಸಿದೆಯೆಂಬ ಆಪಾದನೆಗೆ ಒಳಗಾಗಬೇಕಾಯಿತು.
೪. ಬೆಳ್ಳಿಲೋಟ ಮತ್ತೆ ಕಂಡಾಗ ಧಣಿಯಲ್ಲಿ ಆತಂಕ, ಗಾಬರಿ, ಭಯ ಉಂಟಾಗಲು ಕಾರಣವೇನು?
ಕುದುಪ ಯಾವುದೋ ಲೋಟವನ್ನು ಚಿನ್ನಮ್ಮನ ಕೈಗೆ ಕೊಡುವುದನ್ನು ಮೌನವಾಗಿಯೇ ದಿಟ್ಟಿಸಿದ್ದ ಧಣಿ ವೆಂಕಪ್ಪಯ್ಯನವರು ಅದು ಯಾರದೋ ಮನೆಯ ಲೋಟವನ್ನು ಹೊಳೆ ಹೊತ್ತು ತಂದಿರಬಹುದೆಂದು ಯೋಚಿಸಿದ್ದರು. ಆದರೆ ಅವರು ಕಿರುಗಣ್ಣಿನಿಂದ ಗಮನಿಸಿದಾಗ ಅವರ ಎದೆ ಬಡಿತ ಲಯ ತಪ್ಪತೊಡಗಿತು. ಅವರ ಒಡಲ ಸಮಸ್ತವ್ಯವಹಾರಗಳೂ ಒಂದರೆಗಳಿಗೆ ಸ್ತಬ್ಧಗೊಂಡಿತು. ಚಿನ್ನಮ್ಮ ತನ್ನ ಕೈಯಲ್ಲಿ ಲೋಟವನ್ನು ಹಿಡಿದುಕೊಂಡು ತಿರುಗಿಸುತ್ತಿದ್ದರೆ ಧಣಿಗಳಿಗೆ ತಮ್ಮನ್ನೇ ತಿರುಗಿಸಿದಂತಾಯ್ತು ಏಕೆಂದರೆ ಆಕೆ ಕೈಯಲ್ಲಿದ್ದುದು ತಮ್ಮ ಮನೆಯದೇ ಬೆಳ್ಳಿಲೋಟವೆಂಬ ಅರಿವು ಅವರಿಗೆ ಬಂತು. ಅದರ ಕಂಠ ಏಳು ಎಸಳುಗಳ ದೊಡ್ಡ ಹೂವಿನಂತಿರುವುದು, ಕಳೆದ ನಲವತ್ತು ವಸಂತಗಳಿಂದ ತಮ್ಮ ದಾಂಪತ್ಯ ಜೀವನಕ್ಕೆ ಮೂಕ ಸಾಕ್ಷಿಯಾಗಿದ್ದ ಲೋಟಿವಿದು ಎಂಬ ಅರಿವು ಮೂಡಿ ಅವರು ಭೀತರಾದರು. ಕುಡುಪ-ಚಿನ್ನಮ್ಮ-ಗುಡ್ಡರ ಮೇಲೆ ಕಳ್ಳತನದ ಆಪಾದನೆ ಹೊರಿಸಿದ್ದ ತಮ್ಮ ಕ್ರೂರ-ಅಮಾನವೀಯ ವರ್ತನೆಯನ್ನು ನೆನೆದು ಅವರು ಆತಂಕದಿಂದ ನಡುಗಿದರು.
೫. ಚಿನ್ನಮ್ಮ ಬೆಳ್ಳಿಲೋಟವನ್ನು ಮತ್ತೆ ಹೊಳೆಗೆ ಎಸೆಯಲು ಕಾರಣವೇನು? ವಿಶ್ಲೇಷಿಸಿ.
ಬೆಳ್ಳಿಲೋಟ ಮಣ್ಣಿನಲ್ಲಿ ದೊರೆತಾಗ ಕುದುಪನಿಗೆ ಅತ್ಯಂತ ಸಂತೋಷವಾಗುತ್ತದೆ. ಹೆಂಡತಿಯ ಕೈಯಿಂದ ಅದನ್ನು ಹಿಂಪಡೆದು ಧಣಿಗಳ ಕೈಗಿಡಬೇಕೆಂದು ಕಾತುರನಾಗುತ್ತಾನೆ. ಆದರೆ ಚಿನ್ನಮ್ಮಳ ಮನೋವ್ಯಾಪಾರದಲ್ಲಿ ನಡೆಯುತ್ತಿರುವ ಸಂಗತಿಗಳೇ ಬೇರೆ. ಆಕೆಯ ಒಡಲಲ್ಲಿ ಅನೇಕ ಭಾವನೆಗಳು ತಾಕಲಾಟಿ ನಡೆಸುತ್ತವೆ. ತನ್ನನ್ನು ಕಷ್ಟಕ್ಕೆ ನೂಕಿದ, ತನ್ನ ಕುಟುಂಬದ ಮೇಲೆ ಕಳ್ಳತನದ ಕಿರೀಟವನ್ನು ಹೊರಿಸಿದ ಲೋಟದ ಮೇಲೆ ಆಕೆಗೆ ವಿಪರೀತ ಕೋಪ ಬರುತ್ತದೆ. ಲೋಟ ಬೆಳ್ಳಿಯದಾದರೇನಂತೆ ಗುಣ ಮಣ್ಣಿಗಿಂತಲೂ ಕೀಳು ಎಂದು ಆಕೆ ಯೋಚಿಸುತ್ತಾಳೆ. ಈ ಬೆಳ್ಳಿಲೋಟದಿಂದಾಗಿ ತನ್ನ ಕುಟುಂಬ ಇದುವರೆಗೆ ಅನುಭವಿಸಿದ ನೋವು, ಉಂಡ ಅವಮಾನ, ಪಟ್ಟ ಪರಿತಾಪಗಳೆಲ್ಲ ಚಿನ್ನಮ್ಮನ ಚಿತ್ರದಿಂದ ಮುಂಚೂಣಿಗೆ ಬಂದು ಆಕೆಯ ಯೋಚನಾಶಕ್ತಿ-ವಿವೇಚನಾ ಶಕ್ತಿಯನ್ನೇ ಕ್ಷಣಕಾಲ ಕಸಿದುಕೊಳ್ಳುತ್ತದೆ. ನೇರವಾಗಿ ನದಿಯತ್ತ ನಡೆದವಳೇ ಮತ್ತೆ ಲೋಟವನ್ನು ನದಿಯ ನೀರಿಗೆ ಎಸೆದುಬಿಡುತ್ತಾಳೆ. ತನ್ನ ಕಷ್ಟಕ್ಕೆ ಕಾರಣವಾದ ಲೋಟದ ಬಗ್ಗೆ ಚಿನ್ನಮ್ಮ ತೋರುವ ಪ್ರತಿಭಟನೆಯಿದು.
ಬೆಳ್ಳಿಲೋಟವನ್ನು ಧಣಿಗಳಿಗೆ ಹಿಂದಿರುಗಿಸಿದ್ದರೆ ಅವಳ ಕುಟುಂಬ ಆಪಾದನೆಯಿಂದ ಪಾರಾಗಬಹುದಿತ್ತು ನಿಜ. ಆದರೆ ಅದುವರೆಗೆ ಅನುಭವಿಸಿದ ಸಂಕಟಕ್ಕೆ ಪರಿಹಾರವೇನು? ಲೋಟಿ ಕದ್ದ ಅಪಾದನೆ, ಪರಿತಾಪಗಳಿಂದ ಇಡೀ ಕುಟುಂಬ ಅನುಭವಿಸಿದ ಯಾತನೆಗೆ ಬೆಲೆ ಕಟ್ಟುವವರು ಯಾರು? ತನ್ನ ಕುಟುಂಬ ಅಪಾದನಾ ಮುಕ್ತವಾಗುವುದಕ್ಕಿಂತ ತಮ್ಮನ್ನು ಸಂಕಷ್ಟಕ್ಕೀಡುಮಾಡಿದ ಲೋಟವನ್ನು ಮತ್ತೆ ನೀರಿಗೆ ಎಸೆಯುವ ಮೂಲಕ ತನ್ನ ರೋಷವನ್ನು ಹೊರಹಾಕುತ್ತಾಳೆ. ಧಣಿಗಳನ್ನು ಎದುರಿಸಲಾಗದ ಅಸಹಾಯಕತೆ ಈ ರೂಪದಲ್ಲಿ ಹೊರಹೊಮ್ಮುವುದರಿಂದ ಚಿನ್ನಮ್ಮ ಬೆಳ್ಳಿಲೋಟಿ ಸಿಕ್ಕಾಗ ತನ್ನ ಕುಟುಂಬದ ಮೇಲಿನ ಅಪಾದನೆ ಹೋಗುವಂತಹ ಅವಕಾಶ ಸಿಕ್ಕಿದರೂ ಅವಳು ಅದನ್ನು ತಿರಸ್ಕಾರದಿಂದ ಕಾಣುತ್ತಾಳೆಂದು ಅಭಿಪ್ರಾಯ ಪಡಬಹುದು.
ಹೆಚ್ಚುವರಿ ಪ್ರಶ್ನೆಗಳು:
೬. ತಮ್ಮ ಕುಟುಂಬದ ಮೇಲಿನ ಅಪವಾದವನ್ನು ನಿವಾರಿಸಿಕೊಳ್ಳುವ ಅವಕಾಶವಿದ್ದರೂ ಚಿನ್ನಮ್ಮ ಆ ಸಾಧ್ಯತೆಯನ್ನು ನಿರಾಕರಿಸಲು ಕಾರಣವೇನು?
ಚಿನ್ನಮ್ಮ ಕೆರೆಯ ಹೂಳೆತ್ತುವಾಗ ಕೈಗೆ ಸಿಕ್ಕಿದ ಬೆಳ್ಳಿಲೋಟವನ್ನು ಧಣಿಗಳ ಕೈಗೊಪ್ಪಿಸಿ ತಮ್ಮ ಕುಟುಂಬದ ಮೇಲಿನ ಅಪವಾದವನ್ನು ನಿವಾರಿಸಿಕೊಳ್ಳುವ ಅವಕಾಶವಿದ್ದರೂ ಅದನ್ನು ಲೆಕ್ಕಿಸದೆ ಬೆಳ್ಳಿಲೋಟವನ್ನು ಹೊಳೆಯ ಆಳದ ಮಡುವತ್ತ ಎಸೆದುಬಿಡುತ್ತಾಳೆ. ಇದಕ್ಕೆ ಮುಖ್ಯ ಕಾರಣ ಆ ಬೆಳ್ಳಿಲೋಟಿ ತಮ್ಮ ಕುಟುಂಬದ ಮೇಲೆ ಕಳ್ಳತನದ ಆಪಾದನೆಯನ್ನು ಹೊರಿಸಿದ್ದು ಒಂದಾದರೆ, ಎಷ್ಟೇ ಪ್ರಾಮಾಣಿಕವಾಗಿ ದುಡಿದರೂ ಧಣಿಗಳು ತಮ್ಮ ಒಕ್ಕಲು ಮಕ್ಕಳನ್ನು ನಂಬದೆ ಕಳ್ಳತನದ ಮುಳ್ಳಿನ ಕಿರೀಟವನ್ನು ಚಿನ್ನಮ್ಮನ ಕುಟುಂಬದ ಮೇಲೆ ಹೊರೆಸಿದ್ದು, ಬಡವರ ಬೆವರಿನ ಬೆಲೆಯಿಂದಲೇ ತಮ್ಮ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳುವ ಧಣಿಗಳು ಬಡವರ ವಿಚಾರದಲ್ಲಿ ತಳೆದ ನಿಲುವು ಚಿನ್ನಮ್ಮನ ಕುಟುಂಬವನ್ನು ನೋಯಿಸುತ್ತದೆ. ಈ ಎಲ್ಲ ವರ್ತನೆಗಳಿಂದ ಬೇಸತ್ತ ಚಿನ್ನಮ್ಮ ತನ್ನ ಆಪಾದನೆಯಿಂದ ಪಾರಾಗುವುದಕ್ಕಿಂತ ಅತ್ಮಾಭಿಮಾನಕ್ಕಾದ ನೋವನ್ನು ದೊಡ್ಡದಾಗಿ ಭಾವಿಸಿ, ಅದಕ್ಕೆ ತನ್ನ ಪ್ರತಿಭಟನೆಯನ್ನು ಬೆಳ್ಳಿಲೋಟ ಎಸೆಯುವ ಮೂಲಕ ದಾಖಲಿಸುತ್ತಾಳೆ.
೭. ಚಿನ್ನಮ್ಮನ ಕುಟುಂಬ ಹೊಳೆಯ ಬಗ್ಗೆ ಆಸಹನೆ ಹೊಂದಬಾರದೆಂದು ಲೇಖಕಿ ಬಯಸುವುದೇಕೆ? ವಿವರಿಸಿ.
ಶಾಂಭವಿ ಹೊಳೆಯು ‘ಧಣಿಗಳ ಬೆಳ್ಳಿಲೋಟ’ ಕತೆಯಲ್ಲಿ ಒಂದು ಜೀವಂತ ಪಾತ್ರವಾಗಿರುವುದನ್ನು ಗಮನಿಸಬಹುದು. ಚಿನ್ನಮ್ಮನ ಕುಟುಂಬಕ್ಕೆ ಹೊಳೆಯು ಧಣಿಗಳ ಬೆಳ್ಳಿಲೋಟವನ್ನು ನುಂಗಿಹಾಕುವ ಮೂಲಕ ತಮ್ಮ ಮೇಲೆ ಕಳ್ಳತನದ ಅಪಾದನೆಯನ್ನು ಹೊರಿಸಿದೆ ಎಂದು ಅದರ ಮೇಲೆ ಕೋಪ. ಅಲ್ಲದೆ ಬೆಳ್ಳಿಲೋಟದ ಹಣ ತೀರುವವರೆಗೂ ಮುಂದಿನ ಮೂರು ವರ್ಷಗಳ ಕಾಲ ಪಡಿಯಿಲ್ಲದೆ ದುಡಿಯಬೇಕಾದ ಸಂಕಷ್ಟ, ಆಪಾದನೆ-ಬೆವರಿಗೆ ತಕ್ಕ ಪ್ರತಿಫಲ ದೊರೆಯದಿರುವ ಸ್ಥಿತಿ, ಬಡತನ, ಅಸಹಾಯಕತೆ ಎಲ್ಲವೂ ಚಿನ್ನಮ್ಮನ ಕುಟುಂಬವು ಹೊಳೆಯ ಬಗ್ಗೆ ಅಸಹನೆ ಹೊಂದುವಂತೆ ಮಾಡಿದೆ. ಆದರೆ ಲೇಖಕಿಯು ಚಿನ್ನಮ್ಮನ ಕುಟುಂಬ ಹೊಳೆಯ ಬಗ್ಗೆ ಅಸಹನೆ ಹೊಂದಬಾರದೆಂದು ಬಯಸುತ್ತಾರೆ. ಆ ಹೊಳೆಯೇನು ಬೇಕೆಂದೇ ಚಿನ್ನಮ್ಮನ ಕುಟುಂಬಕ್ಕೆ ಅಂತಹ ಅಪಮಾನವನ್ನು ಎಳೆದು ತಂದು ಹಾಕಿದೆಯೆ? ಹೊಳೆಗೂ ಚಿನ್ನಮ್ಮನ ಪುಟ್ಟ ಸಂಸಾರದ ಬಗ್ಗೆ ಪ್ರೀತಿ ವಾತ್ಸಲ್ಯಗಳಿವೆ. ಕಾಳಜಿ, ಅನುಕಂಪಗಳಿವೆ.
ಕಥೆಯ ಸಾರಾಂಶ ಮತ್ತು ವಿಮರ್ಶೆ:
ಎಂತಹ ಬಿರುಮಳೆಯಲ್ಲಾದರೂ ಹೊಳೆ ಕುದುಪನ ಗಾಳದ ಬಾಯಿಗೆ ಒಂದಷ್ಟು ತರುಮೀನುಗಳನ್ನು ಸಿಕ್ಕಿಸುತ್ತದೆ. ಹಾಗೆಯೇ ತಾನು ಹರಿದು ಬರುವಾಗಲೆಲ್ಲ ತನ್ನ ಸೆರಗ೦ಚಿನಲ್ಲಿರುವ ತೋಟಗಳಿಂದ ಆಗಾಗ್ಗೆ ಒಂದಿಷ್ಟು ಸೌದೆ-ತೆಂಗಿನಕಾಯಿಗಳನ್ನು ಹೊತ್ತು ತಂದು ಕುದುಪನ ಕಣ್ಣಿಗೆ ಬೀಳುವಂತೆ ಮಾಡುತ್ತದೆ. ಪಾತ್ರೆ-ಪಗಡಿ, ಕೋಳಿ-ಕುರಿ, ವಿಣೆ-ದೋಣಿ, ರೀಪು- ಪಕ್ಕಾಸುಗಳನ್ನು ಹೊತ್ತುತಂದು ಚಿನ್ನಮ್ಮ-ಕುದುಪರ ಮಡಿಲಿಗೆ ಸುರಿಯುತ್ತದೆ. ಚಿನ್ನಮ್ಮನ ಕುಟುಂಬದೊಂದಿಗೆ ಇಷ್ಟೊಂದು ಒಡನಾಟವಿಟ್ಟುಕೊಂಡಿರುವ ಹೊಳೆಯ ಬಗೆಗೆ ಬೆಳ್ಳಿಲೋಟದ ಕಾರಣಕ್ಕಾಗಿ ಆಸಹನೆ ಸಲ್ಲದೆಂಬುದು ಲೇಖಕಿಯ ಅಭಿಪ್ರಾಯ. ಮುಂದೆ ಹೊಳೆ ತಾನು ನುಂಗಿದ ಬೆಳ್ಳಿಲೋಟವನ್ನು ಕುದುಪನ ಕೈಗೆ ಸಿಗುವಂತೆ ಮಾಡುವುದನ್ನು ಕಾಣಬಹುದು.
ಶಾಂಭವಿ ನದಿಯು ಈ ಕಥೆಯಲ್ಲಿ ಬಹುಮುಖ್ಯ ಪಾತ್ರವಹಿಸಿದೆ. ನದಿಯ ಅಂಚಿನಲ್ಲಿ ವೆಂಕಪ್ಪಯ್ಯನವರ ಸಂಸಾರ. ಅವರ ಮನೆಯಲ್ಲಿ ಕೆಲಸಕ್ಕಿರುವ, ಅವರ ಅಧೀನದಲ್ಲಿ ಬದುಕನ್ನು ನಡೆಸುವ ಚಿನ್ನಮ್ಮನ ಸಂಸಾರ – ಇವಿಷ್ಟು ಕಥಾಪಾತ್ರಗಳು, ಚಿನ್ನಮ್ಮ ಅವಳ ಗಂಡ ಕುದುಪ ಮತ್ತು ಎಂಟು ವರ್ಷದ ಏಕೈಕ ಮಗ ಗುಡ್ಡ ಇವರುಗಳೇ ಧಣಿ ವೆಂಕಪ್ಪಯ್ಯನ ಮನೆಯಲ್ಲಿ ಕೆಲಸಕ್ಕಿದ್ದವರು. ಚಿನ್ನಮ್ಮ ಶಾಂಭವಿ ಹೊಳೆಯನ್ನು ಬೈಯುತ್ತಾ ಮುಸುರೆ ಪಾತ್ರೆಗಳನ್ನು ತಿಕ್ಕುತ್ತಿರುವುದರೊಂದಿಗೆ ಕಥೆ ಆರಂಭಗೊಂಡಿದೆ. ರಭಸದಿಂದ ಸುರಿಯುವ ಮಳೆಯಲ್ಲೂ ಹೊಳೆ ಕುದುಪನ ಗಾಳಕ್ಕೆ ಪುಡಿಮೀನು ಸಿಗಿಸಬಲ್ಲುದು. ತಾನು ಹರಿದು ಬರುವಾಗ ತನ್ನ ಸೆರಗಂಚಿನಲ್ಲಿರುವ ತೋಟಿಗಳಿಂದ ತೆಂಗಿನಕಾಯಿ-ಸೌದೆಕಟ್ಟಿಗೆಗಳನ್ನು ತಂದು ಕುದುಪನ ದೃಷ್ಟಿಗೆ ಬೀಳಿಸುತ್ತಿತ್ತು. ಇನ್ನು ಕೆಲವೊಮ್ಮೆ ಪಾತ್ರೆ-ಪಗಡಿ, ಕೋಳಿ-ಕುರಿ, ಏಣಿ-ದೋಣಿ, ರೀಪು-ಪಕ್ಕಾಸುಗಳನ್ನು ಹೊತ್ತುತಂದು ಚಿನ್ನಮ್ಮ-ಕುದುಪರ ಮಡಿಲಿಗೆ ಸುರಿಯುತ್ತಿತ್ತು. ಇಂತಹ ಹೊಳೆಯನ್ನು ಚಿನ್ನಮ್ಮ ಬಾಯಿಗೆ ಬಂದಂತೆ ಬಯ್ಯುವುದೇ?
ಚಿನ್ನಮ್ಮ ಹೊಳೆಯನ್ನು ಬೈಯಲು ಕಾರಣ ಧಣಿಗಳ ಮನೆಯ ಬೆಳ್ಳಿಲೋಟವನ್ನು ಹೊಳೆ ನುಂಗಿಹಾಕಿದ್ದು, ಕೆಲವು ತಿಂಗಳುಗಳ ಹಿಂದೆ ಚಿನ್ನಮ್ಮನ ಮಗ ಗುಡ್ಡ ರಭಸದಿಂದ ಹರಿಯುತ್ತಿರುವ ಹೊಳೆಯಂಚಿನ ಗದ್ದೆ ಬದುವಿನಲ್ಲಿ ಕುಳಿತು ಧಣಿಗಳ ಮನೆಯ ಮುಸುರೆ ಪಾತ್ರೆಗಳನ್ನು ತಿಕ್ಕುತ್ತಿದ್ದ. ಆಡುವ ವಯಸ್ಸಿನ ಹುಡುಗನಾದ್ದರಿಂದ ಮುಸುರೆ ಪಾತ್ರೆಗಳಲ್ಲಿ ಚಿಕ್ಕಚಿಕ್ಕ ಮೀನುಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದ. ಅವನು ಕುಳಿತಿದ್ದ ಗದ್ದೆಯ ಅಂಚು ಕುಸಿದು ಅವನು-ಅವನೊಂದಿಗೆ ಮುಸುರೆ ಪಾತ್ರೆಗಳೆಲ್ಲ ಹೊಳೆ ಪಾಲಾಯಿತು. ಮೀನು ನಾಚುವಂತೆ ಈಜುಬಲ್ಲವನಾಗಿದ್ದ ಗುಡ್ಡ ಹೊಳೆಪಾಲಾದ ಪಾತ್ರೆಗಳನ್ನು ಹುಡುಕಿ ಹಿಡಿಯಲು ಪ್ರಯತ್ನಿಸಿದನಾದರೂ ಫಲಕಾರಿಯಾಗಲಿಲ್ಲ. ಆನಂತರ ಅಳುತ್ತಾ ಧಣಿಗಳ ತೋಟದಲ್ಲಿ ತೆಂಗಿನಬುಡ ಬಿಡಿಸುವ ಕಾಯಕದಲ್ಲಿ ಮಗ್ನನಾಗಿದ್ದ ತನ್ನಪ್ಪ ಕುದುಪನ ಬಳಿಹೋಗಿ ನಡೆದ ಸಂಗತಿಯನ್ನು ತಿಳಿಸಿದ. ಕುದುಪನಿಗೆ ಮಗನ ಮಾತು ಕೇಳಿ ಎದೆಬಡಿತವೇ ಸ್ತಬ್ದಗೊಂಡಂತಾಯಿತು. ಧಣಿಗಳಿಗೆ ವಿಷಯ ತಿಳಿದರೆ ಅವರ ಸಿಟ್ಟಿನ ಭರಕ್ಕೆ ತಾವೆಲ್ಲರೂ ಹೊಳೆಪಾಲಾದೇವೆಂಬ ಭಯದಿಂದ ಹೊಳೆಗೆ ಹಾರಿ ಪಾತ್ರೆಗಳನ್ನು ಹುಡುಕತೊಡಗಿದನು. ಸಾಕಷ್ಟು ಪಾತ್ರೆಗಳು ಸಿಕ್ಕಿದರೂ ಧಣಿಗಳ ಮನೆಯ ಬೆಳ್ಳಿ ಲೋಟಿ ಮಾತ್ರ ಸಿಗಲಿಲ್ಲ. ಮನೆಯೊಡತಿ ಪಾತ್ರೆ ತೊಳೆಯಲು ಕೊಡುವಾಗಲೇ ಬೆಳ್ಳಿಲೋಟಿ ತನ್ನ ತಂದೆ ತನಗೆ ಮದುವೆಯಲ್ಲಿ ಕೊಟ್ಟಿದ್ದರೆಂದೂ, ಅದರ ಮೈಮೇಲಿನ ಹೂಬಳ್ಳಿಯನ್ನು ಈ ಕಾಲದಲ್ಲಿ ಯಾವ ಆಚಾರಿಯೂ ಮಾಡುವುದಿಲ್ಲ, ಆದ್ದರಿಂದ ಜೋಪಾನವೆಂದು ಮತ್ತೆಮತ್ತೆ ಹೇಳಿಕೊಟ್ಟಿದ್ದರು. ಈಗ ಆ ಲೋಟವೇ ಸಿಗುತ್ತಿಲ್ಲ! ಎಷ್ಟು ಬಾರಿ ಹೊಳೆಯಲ್ಲಿ ಮುಳುಗೆದ್ದರೂ ಕುದುಪನಿಗೆ ಬೆಳ್ಳಿಲೋಟ ಸಿಗಲಿಲ್ಲ. ಅಸಹಾಯಕರಾಗಿ ಕಣ್ಣೀರು ಸುರಿಸುತ್ತಾ ಚಿನ್ನಮ್ಮನ ಸಂಸಾರ ಧಣಿಗಳ ಅಂಗಳಕ್ಕೆ ಬಂದು ನಿಂತು ಬೆಳ್ಳಿಲೋಟದ ವಿಷಯ ತಿಳಿಸಿತು. ಕುದುಪನ ಕುಟುಂಬವೇ ಲೋಟವನ್ನು ಅಪಹರಿಸಿದೆಯೆಂಬ ಅಪವಾದವನ್ನು ಹೊತ್ತುಕೊಳ್ಳಬೇಕಾಯಿತು.
“ಯಾವತ್ತೂ ನಮ್ಮ ಮುಸುರೆ ಪಾತ್ರೆಗಳನ್ನು ನುಂಗದ ಹೊಳೆ ಇವತ್ತು ನನ್ನಪ್ಪ ಮದುವೆಯಲ್ಲಿ ಕೊಟ್ಟ ಬೆಳ್ಳಿಲೋಟವನ್ನು ನುಂಗಿತಾ?” ಎಂದು ಧಣಿಪತ್ನಿಯು ಚೀರಾಡಿದರು. ಹೊಳೆ ಮತ್ತು ಮಳೆಯ ಆರ್ಭಟ ಹೆಚ್ಚಿದಂತೆ ಧಣಿಯ ಆರ್ಭಟವೂ ಸೇರಿತು. ಕೈಕಾಲು ಹಿಡಿದು ಬೇಡಿಕೊಂಡರೂ, ನಿಜಸ್ಥಿತಿಯನ್ನು ವಿವರಿಸಿದರೂ ಧಣಿಗಳು ಒಪ್ಪಲಿಲ್ಲ. ಅಂಗಳದ ಹೊಂಗಾರೆ ಮರಕ್ಕೆ ಗುಡ್ಡನನ್ನು ಕಟ್ಟಿ ತೆಂಗಿನ ಬರಲಿನಿಂದ ಬಡಿದರು. ಚಿನ್ನಮ್ಮ ತನ್ನ ಕರುಳಕುಡಿಯ ಚೀರಾಟ ನೋಡಲಾರದೆ ದೈವದ ಆಣೆ ಮಾಡಿ, ತಾನು ಆ ಬೆಳ್ಳಿಲೋಟದ ಹಣವನ್ನು ವರ್ಷಾನುಗಟ್ಟಲೆ ಸಂಬಳವಿಲ್ಲದೆ ದುಡಿದು ತೀರಿಸುವೆನೆಂದು ಅಳುತ್ತಾ ಬೇಡಿಕೊಂಡಳು. ಮುಂದಿನ ಮೂರು ವರ್ಷ ಚಿನ್ನಮ್ಮ ಪುಕ್ಕಟೆ ದುಡಿಯಬೇಕೆಂಬ ಕರಾರಿನನ್ವಯ ಗುಡ್ಡನನ್ನು ಬಿಟ್ಟರು. ಅಂದಿನಿಂದ ಚಿನ್ನಮ್ಮ ಒಂಥರಾ ಮುಚ್ಚಳಾಗಿದ್ದಾಳೆ. ಹೊಳೆಯನ್ನು ಬೈದೇ ಬೈಯುವಳು.
ಇದೆಲ್ಲಾ ನಡೆದು ಒಂಬತ್ತು ತಿಂಗಳು ಕಳೆದವು ಧಣಿಗಳು ಕುದುಪನ ಕೈಯಲ್ಲಿ ಬತ್ತಿಹೋದ ಹೊಳೆಯಿಂದ ಹೂಳೆತ್ತಿ ತಂದು ತೆಂಗಿನತೋಟಕ್ಕೆ ಹಾಕಿಸುತ್ತಿದ್ದಾರೆ. ಅಲ್ಲಿಯೇ ಚಿನ್ನಮ್ಮ ಮುಸುರೆ ತಿಕ್ಕುತ್ತಾ ಕುಳಿತಿರುವಳು. ಕೆಲಸ ಮುಗಿಸಿ ತಾನೂ ಹೂಳೆತ್ತುವ ಕೆಲಸಕ್ಕೆ ಕೈಜೋಡಿಸುವಳು. ಧಣಿಗಳ ಸಿಡುಕು, ಬೈಗುಳಿ, ಪ್ರತಿಫಲವಿಲ್ಲದ ದುಡಿಮೆಯ ಕಷ್ಟ, ಜೊತೆಗೆ ಕಳ್ಳರೆಂಬ ಅಪವಾದ ಎಲ್ಲವೂ ಚಿನ್ನಮ್ಮನ ಅಸಹನೆಯನ್ನು ಹೆಚ್ಚಿಸಿವೆ. ಸೂರನ ಶಾಖ, ಧಣಿಗಳ ಬೈಗುಳ ಎಲ್ಲವನ್ನೂ ಶಪಿಸುತ್ತಾ ಗಂಡ-ಹೆಂಡಿರಿಬ್ಬರೂ ಬೆವರು ಸುರಿಸುತ್ತಾ ಮಣ್ಣನ್ನು ಹೊರುತ್ತಿರುವಾಗ ಮಣ್ಣಿನಾಳದಲ್ಲಿ ಬೆಳ್ಳಿಲೋಟ ಕಾಣಿಸಿ ಕುದುಪ ಮೂರ್ಚೆ ಹೋಗುವಂತಾಯಿತು. ನಿಧಾನವಾಗಿ ಮಣ್ಣಿನಿಂದ ತೆಗೆದು ನೀರಿನಲ್ಲಿ ತೊಳೆತೊಳೆದು ನೋಡಿದ ತಮ್ಮನ್ನು ಒಂಬತ್ತು ತಿಂಗಳ ಕಾಲ ಅವವಾದ-ಕಷ್ಟಗಳಿಗೆ ನೂಕಿದ ಬೆಳ್ಳಿಲೋಟವನ್ನು ಕಂಡು ಅವನಿಗೆ ಜೀವ ಬಂದಂತಾಯಿತು. ದೂರದಿಂದಲೇ ಧಣಿಗಳು ಕುಡುವ ಬೆಳ್ಳಿಲೋಟ ತೊಳೆಯುವುದನ್ನೂ ಚಿನ್ನಮ್ಮನ ಕೈಗೆ ಕೊಡುವುದನ್ನೂ ಮೌನದಿಂದಲೇ ನೋಡಿದರು. ಲೋಟವನ್ನು ಕದ್ದ ಅಪವಾದವನ್ನು ಕುದುಪನ ಸಂಸಾರದ ಮೇಲೆ ಹೊರೆಸಿದ್ದ ತಮ್ಮ ಪಾಪದ ನಡೆವಳಿಕೆಯಿಂದ ಅವರಿಗೆ ಸಂಕಟವಾಯಿತು. ಏನೂ ಮಾತಾಡದೆ ಚಿನ್ನಮ್ಮಕೈಯಲ್ಲಿ ಹಿಡಿದು ತಿರುತಿರುಗಿಸಿ ನೋಡುತ್ತಿದ್ದ ಬೆಳ್ಳಿಲೋಟವನ್ನೇ ದಿಟ್ಟಿಸಿದರು.
ಬೆಳ್ಳಿಲೋಟವನ್ನು ಕೈಯಲ್ಲಿ ಹಿಡಿದಿದ್ದ ಚಿನ್ನಮ್ಮಳ ಒಡಲೊಳಗೆ ಅದೆಷ್ಟೋ ಭಾವನೆಗಳು ಸುಳಿಸುಳಿದು ಬಂದವು. ಇದೇ ಲೋಟವಲ್ಲವೇ ತಮ್ಮ ಕುಟುಂಬವನ್ನು ಎಷ್ಟೆಲ್ಲಾ ಸಂಕಷ್ಟಕ್ಕೀಡು ಮಾಡಿದ್ದು ಕಳ್ಳತನದ ಆಪಾದನೆ ಹೊರೆಸಿದ್ದು, ತನ್ನ ಬೆವರಿನ ಬೆಲೆಯನ್ನು ಕಿತ್ತುಕೊಂಡಿದ್ದು – ಹೀಗೆ ಅನೇಕ ಆಲೋಚನೆಗಳು ಅವಳ ವಿವೇಚನಾ ಶಕ್ತಿ-ಆಲೋಚನಾ ಶಕ್ತಿಗಳನ್ನೇ ಕಸಿದುಕೊಂಡವು ಹಿಂದೆ-ಮುಂದೆ ಯೋಚಿಸದೆ ಆ ಲೋಟವನ್ನು ಪುನಃ ನೀರಿಗೆಸೆದು ನಿರಾಳವಾಗುವಳು. ತನ್ನನ್ನು ತನ್ನ ಕುಟುಂಬವನ್ನು ನೋಯಿಸಿದ್ದ ಲೋಟವನ್ನು ನೀರಿಗೆಸೆಯುವ ಮೂಲಕ ಮನಸ್ಸಿನೊಳಗಿದ್ದ ಸಂಕಟಗಳನ್ನೆಲ್ಲ ಹೊರಹಾಕುವಳು. ಅವಳ ಕೋಪವಿರುವುದು ಹೊಳೆಯ ಮೇಲಲ್ಲ, ಧಣಿಗಳ ಬೆಳ್ಳಿಲೋಟದ ಮೇಲೆ, ನಿಸರ್ಗದೊಂದಿಗಿನ ಸಂಘರ್ಷಕ್ಕಿಂತಲೂ ಮನುಷ್ಯನೊಂದಿಗಿನ ಸಂಘರ್ಷ ಅಮಾನವೀಯ ಎಂಬುದನ್ನು ಕಥೆ ನವುರಾಗಿ ಚಿತ್ರಿಸಿದೆ.
ಶಬ್ದಾರ್ಥ: ಬೈಗಳ-ಕೆಟ್ಟ ಮಾತು, ನಿಂದನೆ; ಇಂಗು-ಒಣಗು, ಬತ್ತು; ಸೆರಗು – ಅಂಚು; ಗರಟೆ – ತೆಂಗಿನ ಚಿಪ್ಪು; ಹಡಬೆ – ಒಂದು ಬೈಗಳದ ಪದ; ಗಾಳ – ಮೀನು ಹಿಡಿಯುವ ಕೊಕ್ಕು; ಆಟಿ – ಸೋಣ-ಆಷಾಢ ಶ್ರಾವಣ (ಆಟಿ-ಆಷಾಢ, ಸೋಣ-ಶ್ರಾವಣ); ರೀಪು – ವಕ್ಕಾಸು – ಮನೆಯ ಮೇಲಾವಣಿಗೆ ಹಾಕುವ ಮರದ ಸಾಮಗ್ರಿಗಳು; ನಾಕು – ನಾಲ್ಕು; ಹೇಂಟೆ – ಹೆಣ್ಣುಕೋಳಿ; ತೋಡು-ಕಾಲುವೆ, ಚಿಕ್ಕಹೊಳೆ; ಹೂಟ – ಪಿತೂರಿ, ಏರ್ಪಾಟು; ಬಿಕನಾಸಿ – ದರಿದ್ರ, ಭಿಕ್ಷುಕ, ಕ್ಷುದ್ರ; ಉಗ್ರಾಣಿ – ಗ್ರಾಮ ಸಹಾಯಕ (ಶಾನುಭೋಗರ ಸಹಾಯಕ); ಉಪಟಳ – ಹಿಂಸೆ, ತೊಂದರೆ; ದರೆ – ದಿಣ್ಣೆ, ತಿಟ್ಟು; ಜಡಿಮಳೆ – ಎಡೆಬಿಡದೆ ಸುರಿವ ಮಳೆ; ದೇವಳ – ದೇವಾಲಯ; ತುಳುವ ಹಲಸು – ಹಲಸಿನ ಒಂದು ಜಾತಿ, ಅಂಬಲಿ ಹಲಸು, ಬಿಳುವ; ಸೌಟು – ದೊಡ್ಡ ಚಮಚ; ಪೋರ – ಹುಡುಗ, ಬಾಲಕ; ಕೋಮಣ – ಲಂಗೋಟಿ, ಕೌಪೀನ; ಚೊಂಬು – ತಂಬಿಗೆ; ದಾರಂದ – ಬಾಗಿಲು; ಪಡಿ – ಅಕ್ಕಿ ಧಾನ್ಯರೂಪದಲ್ಲಿ ಕೊಡುವ ದಿನಗೂಲಿ; ಕೊತ್ತಳಿಗೆ – ತೆಂಗಿನ ಮರದ ದಿಂಡು; ಹೂಳು – ಹೊಳೆಯ ತಳಭಾಗದ ಕೆಸರು; ಬುಗುಡಿ – ಕಿವಿಯಲ್ಲಿ ಧರಿಸುವ ಆಭರಣ; ಪಾವು – ಅಳತೆಯ ಸಾಧನ; ತಾಕತ್ತು – ಶಕ್ತಿ; ಮೂತಿ – ತುದಿ, ಮೋರೆ; ಕುಣಿಕೆ – ಸರಿಗಂಟು; ಕಾರು – ಕಕ್ಕು, ಹೊರಹಾಕು; ದಿಗಿಣ – ನೆಗೆತ, ಯಕ್ಷಗಾನದ ನೆಗೆತ; ಮೋರೆ – ಮುಖ; ವಲ್ಲಿ – ಉತ್ತರೀಯ, ಬಳ್ಳಿ; ನೊರೆಕಾಯಿ – ಇದನ್ನು ಪಾತ್ರೆ ಉಜ್ಜಲು, ಬಟ್ಟೆಯನ್ನು ಶುದ್ದೀಕರಿಸಲು, ಆಭರಣ ಶುಚಿಗೊಳಿಸಲು ಬಳಸುತ್ತಾರೆ. ಮಲೆನಾಡಿನಲ್ಲಿ ಇದನ್ನು ಅಂಟುವಾಳಕಾಯಿ ಎಂದು ಕರೆಯುತ್ತಾರೆ.
ಟಿಪ್ಪಣಿಗಳು
೧. ಶಾಂಭವಿ ಹೊಳೆ:
‘ಧಣಿಗಳ ಬೆಳ್ಳಿಲೋಟ’ ಕಥೆಯಲ್ಲಿ ಶಾಂಭವಿ ಹೊಳೆಯೂ ಪ್ರಮುಖ ಪಾತ್ರವಾಗಿ ಚಿತ್ರಿತಗೊಂಡಿದೆ. ಚಿನ್ನಮ್ಮನ ಸಂಸಾರ ಮತ್ತು ಧಣಿಗಳ ಸಂಸಾರ ಈ ನದಿಯ ದಡದಲ್ಲೇ ವಾಸವಾಗಿದೆ. ಬೆಳ್ಳಿಲೋಟವನ್ನು ತನ್ನೊಡಲೊಳಗೆ ಬಚ್ಚಿಟ್ಟುಕೊಳ್ಳುವ ಮತ್ತು ಮುಂದೆ ಅದನ್ನು ಕುದುಪನಿಗೆ ನೀಡುವ ಶಾಂಭವಿ ಹೊಳೆ ಪ್ರಕೃತಿಯ ದೈವಿಕ ಸ್ವರೂಪವಾಗಿದೆ. ಕುದುಪನ ಸಂಸಾರಕ್ಕೆ ನಾನಾ ಬಗೆಯಲ್ಲಿ ಆಸರೆಯಾಗುವ ಈ ನದಿಯು ಜೀವಂತ ಪಾತ್ರದಂತೆ ಚಿತ್ರಣಗೊಂಡಿದೆ.
೨. ಚಿನ್ನಮ್ಮ:
ಈ ಕಥೆಯ ಪ್ರಮುಖ ಪಾತ್ರ ಚಿನ್ನಮ್ಮ ಧಣಿಗಳ ಮನೆಗೆಲಸದವಳು. ಇವಳು ಬೆಳ್ಳಿಲೋಟವನ್ನು ನುಂಗಿಹಾಕಿದ ಕಾರಣ ಹೊಳೆಯನ್ನು ಬೈಯುವುದರೊಂದಿಗೆ ಕತೆ ಆರಂಭವಾಗುವುದು. ಕಳ್ಳತನದ ಆಪಾದನೆಯನ್ನು ಹೊತ್ತುಕೊಂಡು ಅವಮಾನ, ಅಸಹಾಯಕತೆಯಿಂದ ಹುಚ್ಚಿಯಂತಾಗಿರುತ್ತಾಳೆ. ಬೆಳ್ಳಿಲೋಟ ಸಿಕ್ಕಿದರೂ ಅದನ್ನು ಧಣಿಗಳಿಗೆ ಹಿಂದಿರುಗಿಸದೆ ಹೊಳೆಗೆ ಎಸೆಯುವ ಮೂಲಕ ಆಕ್ರೋಶವನ್ನು ತೋಡಿಕೊಳ್ಳುತ್ತಾಳೆ.
೩. ಕುದುಪ:
ಚಿನ್ನಮ್ಮನ ಗಂಡನಾದ ಕುದುಪ ಧಣಿಗಳ ಮನೆಯ ನಿಷ್ಠಾವಂತ ಆಳು. ಗದ್ದೆ ಕೆಲಸದ ಮೇಲುಸ್ತುವಾರಿ ಇವನದು. ಬೆಳ್ಳಿಲೋಟ ನೀರಿನಲ್ಲಿ ಮುಳುಗಿದಾಗ ಹೆದರಿ ನದಿಯ ತಳವನ್ನೆಲ್ಲ ಶೋಧಿಸುವನು. ಕಳ್ಳತನದ ಆಪಾದನೆಯನ್ನು ಮೌನವಾಗಿ ವಿಧಿಲಿಖಿತವೆಂಬಂತೆ ಸಹಿಸುವನು. ಮಣ್ಣಿನಲ್ಲಿ ಬೆಳ್ಳಿಲೋಟ ಸಿಕ್ಕಾಗ ಆಪಾದನೆಯಿಂದ ಮುಕ್ತರಾಗಬಹುದೆಂಬ ಸಂತೋಷದಲ್ಲಿರುವನು. ಆದರೆ ಅವನ ಸಂತೋಷ ಅಲ್ಪಕಾಲದ್ದು.
ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿರಿ:
೧. ಧಣಿಗಳ ಮನೆಯ ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆ………….
ಶಾಂಭವಿ
೨. ಧಣಿಗಳ ಹೆಸರು………..
ವೆಂಕಪ್ಪಯ್ಯ
೩. ದಣಿಗಳ ದಾಂಪತ್ಯಕ್ಕೆ………….. ಮೂಕಸಾಕ್ಷಿಯಾಗಿತ್ತು.
ಬೆಳ್ಳಿಲೋಟ
೪. ಬೆಳ್ಳಿಲೋಟ……………… ಕಳೆದುಕೊಂಡಿತ್ತು.
ಬಣ್ಣ ಮತ್ತು ಗಾಂಭೀರ್ಯ
೫. ಬೆಳ್ಳಿಲೋಟ………….ರಥಬೀದಿಯಲ್ಲಿರುವ ನರಸಿಂಹಾಚಾರಿಯಲ್ಲಿ ಮಾಡಿಸಿದ್ದು.
ಕುಡ್ಲ
೬. ಹೊಳೆಯ ಸೆರಗಲ್ಲಿ ಮುಸುರೆ ಪಾತ್ರೆಗಳನ್ನು ರಾಶಿ ಹಾಕಿ ಕೂತಿದ್ದವರು.………..
ಚಿನ್ನಮ್ಮ
೭. ಚಿನ್ನಮ್ಮನ ಮಗನ ಹೆಸರು……….
ಗುಡ್ಡ
೮. ಗುಡ್ಡನ ತಂದೆಯ ಹೆಸರು……………
ಅಥವಾ
ಚಿನ್ನಮ್ಮನ ಗಂಡನ ಹೆಸರು……………
ಕುದುಪ
೯. ಧಣಿ ಎಂದಿಗೂ………….ಮಕ್ಕಳನ್ನು ನಂಬುವುದಿಲ್ಲ.
ಒಕ್ಕಲು
೧೦. ಹೊಳೆ……………….. ಕೆಡವಲು ಹೊಂಚು ಹಾಕುತ್ತಿರುತ್ತದೆ.
ಧರೆಯನ್ನು