ದ್ವಿತೀಯ ಪಿಯುಸಿ ಕನ್ನಡ ಪತ್ರಲೇಖನ | 2nd Puc Kannada Patralekhana

ದ್ವಿತೀಯ ಪಿಯುಸಿ ಕನ್ನಡ ಪತ್ರಲೇಖನ 2nd Puc Kannada Patralekhana official letter writing in kannada 2nd puc patralekhana kannada 2nd puc patralekhana kannada pdf download 2nd puc kannada letter writing pdf informal letter in kannada leave letter in kannada ರಜೆ ಪತ್ರ ಕನ್ನಡದಲ್ಲಿ ರಜೆ ಕೋರಿ ಶಿಕ್ಷಕರ ರಜೆ ಪತ್ರ Leave letter in kannada ವೈಯಕ್ತಿಕ ಪತ್ರ ಲೇಖನ ಖಾಸಗಿ ಪತ್ರ ಲೇಖನ ವೈಯಕ್ತಿಕ ಪತ್ರ ಲೇಖನ ಖಾಸಗಿ ಪತ್ರ ಕನ್ನಡ pdf ಪತ್ರ ಲೇಖನಗಳು pdf vyavaharika patra in kannada official letter writing in kannada 2nd puc kannada workbook answers grammar

೧೧. ಪತ್ರಲೇಖನ

Patralekhana
Patralekhana

ಪತ್ರ ಲೇಖನವು 4 ಅಂಕಗಳ ಪ್ರಶ್ನೆಯಾಗಿದ್ದು ಒಂದು ವೈಯಕ್ತಿಕ ಹಾಗೂ ಒಂದು ವ್ಯಾವಹಾರಿಕ ಪತ್ರವನ್ನು ಕೊಟ್ಟು, ಯಾವುದಾದರೂ ಒಂದನ್ನು ಉತ್ತರಿಸಲು ಕೇಳಲಾಗುವುದು. ಪತ್ರಲೇಖನವು ಸರಳವಾದ ಭಾಷೆಯಲ್ಲಿ ಸ್ಪಷ್ಟವಾದ ನಿರೂಪಣೆಯಲ್ಲಿರಬೇಕು. ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ, ಪತ್ರವು ಓದುವವರಿಗೆ ನೇರವಾಗಿ ವಿಷಯಗಳು ಅರ್ಥವಾಗುವಂತಿರಬೇಕು, ದಿನಾಂಕ, ವಿಳಾಸಗಳು, ಪತ್ರದ ಒಡಲು, ಸಂಬೋಧನೆ, ಎಲ್ಲವೂ ಬರೆಯುವವರ ಸೌಲಭ್ಯವನ್ನು ಎತ್ತಿ ತೋರುವಂತಿರಬೇಕು. ಪತ್ರವು ಒಳಗೊಳ್ಳಬೇಕಾದ ಬಹುಮುಖ್ಯ ಅಂಶಗಳು ಈ ಮುಂದಿನಂತಿವೆ:

  1. ದಿನಾಂಕ
  2. ವಿಳಾಸಗಳು
  3. ಸಂಬೋಧನೆ
  4. ವಿಷಯ
  5. ಪತ್ರದ ಒಡಲು
  6. ಮುಕ್ತಾಯ
  7. ಸಹಿ

ಪತ್ರ ಬರೆಯುವಾಗ ಯಾರಿಗೆ ಯಾವ ಸಂಬೋಧನೆ ಬಳಸಲಾಗುವುದೆಂದು ಈ ಕೆಳಗೆ ನೀಡಲಾಗಿದೆ:

  1. ತಂದೆಗೆ : ತೀರ್ಥರೂಪರಿಗೆ
  2. ತಾಯಿಗೆ : ಮಾತೃಶ್ರೀಯವರಿಗೆ
  3. ಹಿರಿಯರಿಗೆ : ತೀರ್ಥರೂಪ ಸಮಾನರಾದ
  4. ಕಿರಿಯರಿಗೆ : ಚಿರಂಜೀವಿ
  5. ಗೆಳೆಯ/ಗೆಳತಿಯರಿಗೆ : ಪ್ರೀತಿಯ/ಪ್ರಿಯ
  6. ಅಣ್ಣನಿಗೆ : ಆಗ್ರಜನಿಗೆ/ಅಣ್ಣನಿಗೆ
  7. ಅಕ್ಕನಿಗೆ : ಅಗ್ರಜೆಗೆ/ಅಕ್ಕನಿಗೆ
  8. ಅಧಿಕಾರಿಗಳಿಗೆ : ಮಾನ್ಯರೆ/ಗೌರವಾನ್ವಿತರೆ
  9. ಇತರೆ ವ್ಯಾವಹಾರಿಕ ಪತ್ರಗಳಲ್ಲಿ : ಮಾನ್ಯರೆ

ಪರೀಕ್ಷೆಯಲ್ಲಿ ಕೇಳಲಾಗುವ ವ್ಯಾವಹಾರಿಕ ಮತ್ತು ವೈಯಕ್ತಿಕ ಪತ್ರದ ಕೆಲವು ಮಾದರಿಗಳನ್ನು ನಿಮ್ಮ ಅಭ್ಯಾಸಕ್ಕಾಗಿ ಈ ಮುಂದೆ ನೀಡಲಾಗಿದೆ.

ಸೂಚನೆ: ಯಾವುದೇ ಪತ್ರ ಲೇಖನದಲ್ಲಿ ಹೆಸರು ನಮೂದಿಸಬಾರದು; ಸಂಕೇತಾಕ್ಷರಗಳನ್ನು ಮಾತ್ರ ಬಳಸಬೇಕು.

ಉದಾ: ಅ.ಬ.ಕ., ಕ.ಬ.ಡ.

೧. ವಿದ್ಯುಚ್ಛಕ್ತಿಯ ಸಮರ್ಪಕ ಸರಬರಾಜನ್ನು ಕೋರಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಬರೆದ ಪತ್ರ.

ದಿನಾಂಕ: ನವೆಂಬರ್ 19, 2023

ಇವರಿಂದ:

ಅ.ಬ.ಕ

ಮಿಂಚೇರಿ, ಆಣೂರು- ಅಂಚೆ

ತಾ।। ಆಲ್ದೂರು, ಜಿ।। ಚಿಕ್ಕಮಗಳೂರು.

ಇವರಿಗೆ:

ಕಾರ್ಯನಿರ್ವಾಹಕ ಅಭಿಯಂತರರು

ವಿದ್ಯುತ್ ಸರಬರಾಜು ನಿಗಮ ನಿಯಮಿತ,

ಚಿಕ್ಕಮಗಳೂರು 577101.

ಮಾನ್ಯರೆ,

ವಿಷಯ: ಅಸಮರ್ಪಕ ವಿದ್ಯುತ್ ವ್ಯವಸ್ಥೆಯನ್ನು ಕುರಿತು.

ಈ ಮೇಲ್ಕಂಡ ವಿಷಯವನ್ನು ಕುರಿತು, ಕೆಲವು ದಿನಗಳಿಂದ ಮೇಲ್ಕಾಣಿಸಿದ ವಿಳಾಸದ ನಮ್ಮ ಊರಿನಲ್ಲಿ ವಿದ್ಯುತ್ ಪೂರೈಕೆಯು ಸಮಂಜಸವಾಗಿಲ್ಲ. ಪದೇ ಪದೇ ವಿದ್ಯುತ್ ಕಡಿತ, ವೋಲ್ವೇಜಿನ ಏರಿಳಿತಗಳಿಂದಾಗಿ ಗೃಹಕೃತ್ಯಗಳಿಗೆ, ವ್ಯಾಸಂಗಕ್ಕೆ ತೀವ್ರ ಅಡಚಣೆಯುಂಟಾಗಿದೆ. ಈ ಅವ್ಯವಸ್ಥೆಯನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.

ವಂದನೆಗಳೊಡನೆ,

ತಮ್ಮ ವಿಶ್ವಾಸಿ,

ಸಹಿ/-

(ಅ.ಬ.ಕ)

೨. ಪುಸ್ತಕಗಳನ್ನು ಅಂಚೆಯ ಮೂಲಕ ಕಳುಹಿಸುವಂತೆ ಪುಸ್ತಕಾಲಯಕ್ಕೆ ಬರೆಯುವ ಪತ್ರ,

ದಿನಾಂಕ: ಏಪ್ರಿಲ್ 25, 2024

ಇವರಿಂದ:

ಅ.ಬ.ಕ

ಮನಂ. 28. ʼಬೆಳದಿಂಗಳುʼ

ಥಣಿಸಂದ್ರ, ಶಿವರಾಮಕಾರಂತ ನಗರ – ಅಂಚೆ

ಬೆಂಗಳೂರು – 560077

ಇವರಿಗೆ:

ವ್ಯವಸ್ಥಾಪಕರು

ಅಂಕಿತ ಪ್ರಕಾಶನ ಮತ್ತು ಪುಸ್ತಕ ಮಳಿಗೆ,

ಗಾಂಧೀಬಜಾರ್, ಬಸವನಗುಡಿ,

ಬೆಂಗಳೂರು – 560004.

ಮಾನ್ಯರೆ,

ವಿಷಯ: ಅಂಚೆಯ ಮೂಲಕ ಪುಸ್ತಕಗಳನ್ನು ಪಡೆಯುವ ಬಗ್ಗೆ.

ತಮ್ಮಲ್ಲಿ ಈ ಕೆಳಕಂಡ ಪುಸ್ತಕಗಳಿದ್ದಲ್ಲಿ ಅವುಗಳ ಒಂದೊಂದು ಪ್ರತಿಯನ್ನು ಮೇಲಿರುವ ನನ್ನ ವಿಳಾಸಕ್ಕೆ ವಿ.ಪಿ.ಪಿ. ಮೂಲಕ ಕಳುಹಿಸಿಕೊಟ್ಟಲ್ಲಿ, ನಾನು ಅವುಗಳ ಹಣವನ್ನು ಸಲ್ಲಿಸಿ ಪಡೆದುಕೊಳ್ಳುತ್ತೇನೆ.

ಪುಸ್ತಕಗಳು ಲೇಖಕರು

  1. ಕರ್ವಾಲೋ (ಕಾದಂಬರಿ) – ಕೆ.ಪಿ. ಪೂರ್ಣಚಂದ್ರ ತೇಜಸ್ವಿ
  2. ವಚನಭಾರತ – ಎ.ಆರ್. ಕೃಷ್ಣಶಾಸ್ತ್ರಿ
  3. ಇಗೋ ಕನ್ನಡ (ನಿಘಂಟು) – ಜಿ. ವೆಂಕಟಿಸುಬ್ಬಯ್ಯ
  4. ಕನ್ನಡ ಮಧ್ಯಮ ವ್ಯಾಕರಣ – ತೀ.ನಂ. ಶ್ರೀಕಂಠಯ್ಯ
  5. ಶಕುಂತಲೋಪಾಖ್ಯಾನ (ಕವಿತೆಗಳು) – ಎಂ.ಆರ್. ಕಮಲ
  6. ಕನ್ನಡ ಶಬ್ದಕೋಶ – ಅ.ರಾ. ಮಿತ್ರ
  7. ಆಕಾಶಮಲ್ಲಿಗೆಯ ಘಮ (ಕಥೆಗಳು) – ಎಲ್.ಜಿ. ಮೀರಾ

ತಮ್ಮ ಉತ್ತರದ ನಿರೀಕ್ಷೆಯಲ್ಲಿರುವೆ

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

ಸಹಿ/-

(ಅ.ಬ.ಕ)

೩. ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಗೆಳೆಯ/ಗೆಳತಿಯನ್ನು ಆಹ್ವಾನಿಸಿ ಬರೆದ ಪತ್ರ.

ಚಿಕ್ಕಮಗಳೂರು

ದಿನಾಂಕ: ಜನವರಿ 1, 2024

ಪ್ರೀತಿಯ ಗೆಳೆಯ ಕ.ಬ.ಡ.ನಿಗೆ,

ನಿನ್ನ ಗೆಳತಿಯಾದ ಅ.ಬ.ಕ. ಮಾಡುವ ವಂದನೆಗಳು, ನಾನು ಇಲ್ಲಿ ನನ್ನ ಅಭ್ಯಾಸದೊಂದಿಗೆ ಆರಾಮದಿಂದ ಇರುವೆನು. ನೀನೂ ಕೂಡಾ ಆರಾಮ ಇರುವಿ ಎಂದು ಭಾವಿಸಿರುವೆನು ಮತ್ತು ನಿನಗೂ ಗೆಳತಿಯರಿಗೂ ಹೊಸ ವರ್ಷದ ಶುಭಾಶಯಗಳು.

ಈಗ ಪತ್ರ ಬರೆಯಲು ಕಾರಣವೇನೆಂದರೆ ನಮ್ಮ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನವು ಬರುವ ದಿನಾಂಕ 12-1-2024ರಂದು ನಡೆಯಲಿದೆ. ಅಂದು ಬೆಳಿಗೆ 10 ಗಂಟೆಗೆ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಾದ ನಮಗೆ ಬೀಳ್ಕೊಡುಗೆ ಸಮಾರಂಭವಿದೆ. ನಂತರ ಮಧ್ಯಾಹ್ನ 2-30ಕ್ಕೆ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಲಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆ. ಮುತ್ತಖ್ಯ ಅತಿಥಿಗಳಾಗಿ ಖ್ಯಾತ ಕವಿ ಶ್ರೀ ಚೆನ್ನವೀರ ಕಣವಿಯವರು ಆಗಮಿಸಲಿದ್ದಾರೆ. ನಂತರ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸಿರುವೆ ನಮ್ಮ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ನೀನು ತಪ್ಪದೇ ಬರಬೇಕೆಂದು ವಿನಂತಿಸುವೆನು.

ವಂದನೆಗಳೊಂದಿಗೆ,

ಇಂತಿ ನಿನ್ನ ಗೆಳತಿ

ಅ.ಬ.ಕ

ಇವರಿಗೆ:

ಕ.ಬ.ಡ.

ನಂ. 302, ಎರಡನೇ ಮಹಡಿ

ರಾಮಲೀಲಾ ಅಪಾರ್ಟ್ ಮೆಂಟ್

ವಾಜಪೇಯಂ ಗಾರ್ಡನ್

ಅಶೋಕನಗರ, ಬೆಂಗಳೂರು – 50

೪. ಶೈಕ್ಷಣಿಕ ಪ್ರವಾಸಕ್ಕೆ ಹೋಗಲು ಅನುಮತಿ ಕೋರಿ ತಂದೆ/ತಾಯಿ/ಪೋಷಕರಿಗೆ ಪತ್ರ ಬರೆಯಿರಿ.

ಬೆಳಗಾವಿ

ದಿನಾಂಕ: ಡಿಸೆಂಬರ್ 15, 2023

ತೀರ್ಥರೂಪರಿಗೆ ಮಾಡುವ ನಮಸ್ಕಾರಗಳು ಮತ್ತು ಬೇಡುವ ಆಶೀರ್ವಾದಗಳು. ಇಲ್ಲಿ ನಾನು ಕ್ಷೇಮವಾಗಿದ್ದೇನೆ. ನಿಮ್ಮ ಮತ್ತು ತಾಯಿಯವರ ಕ್ಷೇಮಕ್ಕೆ ಪತ್ರ ಬರೆಯಿರಿ.

ನಮ್ಮ ಕಾಲೇಜಿನಲ್ಲಿ ಅಧ್ಯಾಪಕರು ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಿದ್ದಾರೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು ಕೂಡಲಸಂಗಮ, ಹಂಪಿ, ಬಿಜಾಪುರದ ಗೋಳಗುಮ್ಮಟ ಮತ್ತಿತರ ಅನೇಕ ಸ್ಥಳಗಳಿಗೆ ಮೂರು ದಿನಗಳ ಪ್ರವಾಸ ನಿಗದಿಯಾಗಿದೆ. ನನಗೂ ನನ್ನ ಸಹಾಧ್ಯಾಯಿಗಳೊಂದಿಗೆ ಈ ಪ್ರವಾಸದಲ್ಲಿ ಭಾಗವಹಿಸುವ ಆಸೆ. ತಾವು ದಯಮಾಡಿ ಒಪ್ಪಿಗೆ ನೀಡಿ ಪ್ರವಾಸಭಕ್ಕೆ ರೂ. 2000ಗಳನ್ನು ಕಳುಹಿಸಿಕೊಡಬೇಕಾಗಿ ಬೇಡಿಕೊಳ್ಳುತ್ತೇನೆ. ಇದರಿಂದಾಗಿ ನನ್ನ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಮಾಡಿಕೊಳ್ಳುವುದಿಲ್ಲವೆಂಬ ಭರವಸೆ ನೀಡುತ್ತೇನೆ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿರುವೆ.

ನಮಸ್ಕಾರಗಳೊಂದಿಗೆ,

ತಮ್ಮ ಪ್ರೀತಿಯ

ಅ.ಬ.ಕ

ಇವರಿಗೆ:

ಕ.ಬ.ಡ

ಅಚ್ಯುತ್ ನೆಸ್ಟ್ ಅಪಾರ್ಟ್‌ ಮೆಂಟ್

5ನೇ ಮಹಡಿ

ಉಲ್ಲಾಳ ಮುಖ್ಯ ರಸ್ತೆ, ಬೆಂಗಳೂರು,

೫. ನಿಮ್ಮ ಪರೀಕ್ಷಾ ಸಿದ್ಧತೆಯನ್ನು ತಿಳಿಸಿ ಪೋಷಕರಿಗೆ/ಗೆಳೆಯನಿಗೆ ಪತ್ರ ಬರೆಯಿರಿ.

ಬೆಳಗಾವಿ

ದಿನಾಂಕ: ಡಿಸೆಂಬರ್ 27, 2023

ಪ್ರೀತಿಯ ಗೆಳತಿ ಕ.ಬ.ಡ.ಳಿಗೆ

ನಮಸ್ಕಾರಗಳು ಮತ್ತು ಕ್ಷೇಮದ ಹಾರೈಕೆಗಳು, ನಿನ್ನ ಕ್ಷೇಮ ಸಮಾಚಾರ ಮತ್ತು ವ್ಯಾಸಂಗದ ಬಗ್ಗೆ ಪತ್ರ ಬರೆಯುವೆಯೆಂದು ಭಾವಿಸುತ್ತೇನೆ.

ಜನವರಿ ಮೂರನೆಯ ವಾರ ನಮಗೆ ಪೂರ್ವಸಿದ್ದತಾ ಪರೀಕ್ಷೆಗಳು ಆರಂಭ ಅಂತಿಮ ವಾರ್ಷಿಕ ಪರೀಕ್ಷೆಗಾಗಿ ಪೂರ್ವಾಭ್ಯಾಸವಿದು. ನಾನು ಆರಂಭದಿಂದಲೂ ಚೆನ್ನಾಗಿ ಓದಿ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಅರ್ಥವಾಗದ ವಿಷಯಗಳನ್ನು ಆಯಾ ಉಪನ್ಯಾಸಕರ ನೆರವಿನಿಂದ ಮನನ ಮಾಡಿಕೊಂಡಿರುವೆ. ಬೆಳಿಗ್ಗೆ 5ರಿಂದ 8ರವರೆಗೆ ಮತ್ತು ಸಂಜೆ 6ರಿಂದ ರಾತ್ರಿ 9ರವರೆಗೆ ಓದುವ, ಬರೆಯುವ, ಪುನರ್‌ಮನನ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಂಡಿರುವೆ. ನಿಗದಿತ ವೇಳಾಪಟ್ಟಿಯನ್ವಯ ಓದುವ ಅಭ್ಯಾಸವನ್ನು ಮುಂದುವರೆಸಿರುವೆ. ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಳಾಗುವ ಭರವಸೆ ಇದೆ. ನಿನ್ನ ತಯಾರಿ ಹೇಗೆ ಸಾಗಿದೆ ತಿಳಿಸು. ಇನ್ನಷ್ಟು ಸಲಹೆಗಳನ್ನು ನೀನು ನೀಡಬಹುದೆಂಬ ಆಶಯ ನನ್ನದಾಗಿದೆ. ನಿನ್ನ ಪತ್ರದ ನಿರೀಕ್ಷೆಯಲ್ಲಿರುವೆ.

ಧನ್ಯವಾದಗಳೊಂದಿಗೆ,

ಸ್ನೇಹದ

ಅ.ಬ.ಕ

ಇವರಿಗೆ:

ಕ.ಬ.ಡ

ನಂ. 1456, ವ್ಯಾಸರಾಯ ಮಠದ ಬೀದಿ

ಕೋಟೆ, ಚನ್ನಪಟ್ಟಣ

ರಾಮನಗರ ಜಿಲ್ಲೆ.

೬. ಮೆಚ್ಚಿದ ಪುಸ್ತಕ/ವ್ಯಕ್ತಿಗಳನ್ನು ಕುರಿತು ಸ್ನೇಹಿತರಿಗೆ ಪತ್ರ ಬರೆಯಿರಿ.

ಮೈಸೂರು

ದಿನಾಂಕ: 1 ಆಗಸ್ಟ್ 2023

ಪ್ರಿಯ ಗೆಳತಿ ಕ.ಬ.ಡ.ಳಿಗೆ ಕ್ಷೇಮದ ಹಾರೈಕೆಗಳು.

ಇಲ್ಲಿ ನಾನು ಕ್ಷೇಮವಾಗಿರುವೆ. ನನ್ನ ಪುಸ್ತಕ ಓದುವ ಅಭಿರುಚಿಯ ಬಗ್ಗೆ ನಿನಗೆ ಅರಿವಿದೆ. ಇತ್ತೀಚೆಗೆ ನಾನು ಓದಿದ ಮೆಚ್ಚಿನ ಪುಸ್ತಕವೊಂದನ್ನು ಕುರಿತು ನಿನಗೆ ವಿವರಿಸುವ ಉದ್ದೇಶದಿಂದ ಈ ಪತ್ರವನ್ನು ಬರೆದಿರುವೆ.

ಪುಸ್ತಕಗಳು ಜ್ಞಾನದ ಭಂಡಾರಗಳು ದಾರಿ ದೀಪಗಳು, ಮನದ ಬೇಸರವನ್ನು ಕಳೆಯುವ, ಉಲ್ಲಾಸವನ್ನು ಉಕ್ಕಿಸುವ ‘ಶಕ್ತಿ ಪುಸ್ತಕಗಳಿಗಿದೆ. ಹಳೆಯ ಪೀಳಿಗೆಯಿಂದ ಹೊಸ ಪೀಳಿಗೆಗೆ ಜ್ಞಾನದ ಗಣಿಯನ್ನು ಒಯ್ಯುವ ವಾಹಕಗಳೇ ಪುಸ್ತಕಗಳು. ಅವು ಗುರುವಿನಂತೆ, ಸ್ನೇಹಿತನಂತೆ, ಮಡದಿಯಂತೆ ಮಾರ್ಗದರ್ಶಕವಾಗಬಲ್ಲವು. ಅಂತಹ ಪುಸ್ತಕಗಳನ್ನೋದುವ ಸಂಸ್ಕೃತಿ ಕಡಿಮೆಯಾಗುತ್ತಿರುವುದು ವಿಷಾದದ ವಿಚಾರವಾಗಿದೆ.

ನಾನು ಕನ್ನಡ ಸಾಹಿತ್ಯದ ವಿದ್ಯಾರ್ಥಿ. ಹೀಗಾಗಿ ಹಳೆಗನ್ನಡ ಹೊಸಗನ್ನಡ ಸಾಹಿತ್ಯಗಳೆರಡೂ ನನಗೆ ಪ್ರಿಯವಾದವೇ ಆಗಿವೆ, ಪಂಪ, ರನ್ನ, ನಾಗಚಂದ್ರ, ಹರಿಹರ, ರಾಘವಾಂಕ, ಕುಮಾರವ್ಯಾಸ, ರತ್ನಾಕರವರ್ಣಿ, ಷಡಕ್ಷರದೇವನಂಥವರ ಕಾವ್ಯಗಳ ಜೊತೆಗೆ ಕಾರಂತ, ಕುವೆಂಪು, ಭೈರಪ್ಪ, ಆಲನಹಳ್ಳಿ ಕೃಷ್ಣ, ಚದುರಂಗ, ಅನಕೃ, ತರಾಸು, ಚಿತ್ತಾಲ, ಜಡಭರತ, ಆನಂದ, ಆನಂದಕಂದ, ಮಾಸ್ತಿ, ಎಂ.ಕೆ. ಇಂದಿರಾ, ಕೆ.ವಿ. ಐಯ್ಯರ್ ಮೊದಲಾದವರ ಕಥೆ-ಕಾದಂಬರಿಗಳನ್ನು ನಾನು ಮೆಚ್ಚಿಕೊಂಡಿದ್ದೇನೆ ಪ್ರಭಾವಿತನಾಗಿದ್ದೇನೆ. ಇವುಗಳಲ್ಲಿ ಹಲವು ಕಾವ್ಯ ನಾಟಕ, ಕಥೆ, ಕಾದಂಬರಿಗಳನ್ನು ನಾನು ಮೆಚ್ಚಿದ್ದೇನೆ; ಎರಡು-ಮೂರು ಬಾರಿ ಓದಿದ್ದೇನೆ. ಇಷ್ಟೆಲ್ಲ ಮೆಚ್ಚಿಕೆಯ ಪುಸ್ತಕಗಳ ನಡುವೆ ನನ್ನನ್ನು ಹೆಚ್ಚು ಆಕರ್ಷಿಸಿರುವ ಪುಸ್ತಕ ಮುದ್ದಣ ಕವಿಯ ‘ಶ್ರೀರಾಮಾಶ್ವಮೇಧಂ’ ಎನ್ನುವ ಗದ್ಯಕಾವ್ಯ.

ಮುದ್ದಣ’ ಎನ್ನುವುದು ನಂದಳಿಕೆ ಲಕ್ಷ್ಮೀನಾರಾಯಣಪ್ಪನ ಕಾವ್ಯನಾಮ ಶೇಷರಾಮಾಯಣ ಅಥವಾ ರಾಮಾಯಣದ ಉತ್ತರಕಾಂಡದಲ್ಲಿರುವ ಕಥೆಯೇ ಈ ಕಾವ್ಯದ ವಸ್ತು, ಕಾವ್ಯವನ್ನು ಆರಂಭಿಸಿರುವ ರೀತಿ. ಬಳಸಿದ ಭಾಷೆ, ಸ್ವಾರಸ್ಯಪೂರ್ಣ ವರ್ಣನೆಗಳು ಇವುಗಳ ಜೊತೆಗೆ ಕೇಳುಗ ಹೇಳುಗರಾಗಿ ಬರುವ ಮನೋರಮೆ ಮುದ್ದಣರ ಸರಸ ಸಂಭಾಷಣೆ ಇವುಗಳಿಂದಾಗಿ ಈ ಕಾವ್ಯ ನನ್ನ ಮೆಚ್ಚುಗೆಗೆ ಪಾತ್ರವಾಗಿದೆ. ಕಾವ್ಯದ ಬೆಳವಣಿಗೆಗೆ, ಜಾಡುತಪ್ಪದಿರಲು ಮನೋರಮೆ ನೆರವು ನೀಡಿದ್ದಾಳೆ. ಆಕೆ ವಿಮರ್ಶಕಿಯಾಗಿದ್ದಾಳೆ. ತೀರ್ಪುಗಾರಳಾಗಿದ್ದಾಳೆ. ಮುಗ್ಧಯಂತೆ ಮುದ್ದಣನ ವಿಡಂಬನೆಗೂ ಆಗರವಾಗಿದ್ದಾಳೆ. ಎಸ್.ವಿ. ರಂಗಣ್ಣನವರು ಈ ಕಾವ್ಯವನ್ನು ವಿಮರ್ಶಿಸುತ್ತಾ ಮುದ್ದಣ-ಮನೋರಮೆಯರ ಸಲ್ಲಾಪವನ್ನು ಪ್ರಸ್ತಾಪಿಸುತ್ತಾ ಅದನ್ನು ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು” ಎಂದಿದ್ದಾರೆ. ಕಾವ್ಯದ ವಸ್ತುವನ್ನು ಬೆಳೆಸಿದ ರೀತಿ ಸಾಮಾನ್ಯ ಬಗೆಯದಾಗಿದ್ದು ಅದಕ್ಕೆ ಮನೋರಮೆ-ಮುದ್ದಣರ ಸರಸ ಸಲ್ಲಾಪದ ಚೌಕಟ್ಟು ಕಟ್ಟಿ ಕಾವ್ಯದ ಸೊಬಗನ್ನು ಕವಿ ಹೆಚ್ಚಿಸಿದ್ದಾನೆ ಎಂಬುದು ಅವರ ಅಭಿಪ್ರಾಯ. ಅವರ ಈ ಹೇಳಿಕೆಗೆ ನನ್ನ ಸಹಮತವಿದೆ. ಈ ಕಾವ್ಯವನ್ನು ಅನೇಕ ಬಾರಿ ಓದಿದ್ದೇನೆ. ಮತ್ತೂ ಓದಬೇಕು ಎನಿಸುತ್ತದೆ. ಇದೇ ಉತ್ತಮ ಗ್ರಂಥದ ಲಕ್ಷಣವೆನಿಸುತ್ತದೆ. ‘ಶ್ರೀರಾಮಶ್ವಮೇಧಂ’ ನನ್ನ ಮೆಚ್ಚುಗೆಯ ಪುಸ್ತಕವೆನಿಸಿದೆ.

ಪತ್ರ ದೀರ್ಘವೆನಿಸಿದರೆ ಕ್ಷಮೆಯಿರಲಿ. ನೀನು ಓದಿದ ಪುಸ್ತಕದ ವಿವರ ತಿಳಿಯಲು ಕಾತರಳಾಗಿರುವೆ. ದಯಮಾಡಿ ಬಿಡುವು ಮಾಡಿಕೊಂಡು ಪತ್ರ ಬರೆ.

ಧನ್ಯವಾದಗಳೊಂದಿಗೆ,

ಸ್ನೇಹದ

ಅ.ಬ.ಕ

ಕ.ಬ.ಡ

237, ನಾಲ್ಕನೇ ಮುಖ್ಯರಸ್ತೆ

ಬಸವೇಶ್ವರ ನಗರ

ಬೆಂಗಳೂರು-560 017.

೭. ಕಾಲೇಜಿನ ವಾರ್ಷಿಕೋತ್ಸವ/ಕ್ರೀಡಾ ಚಟುವಟಿಕೆಗಳನ್ನು ವಿವರಿಸಿ ಸ್ನೇಹಿತರಿಗೆ/ಸಂಬಂಧಿಕರಿಗೆ ಪತ್ರ ಬರೆಯಿರಿ.

ಅಲ್ದೂರು, ಚಿಕ್ಕಮಗಳೂರು ಜಿಲ್ಲೆ

ದಿನಾಂಕ: ಡಿಸೆಂಬರ್ 30, 2023

ಪ್ರೀತಿಯ ಗೆಳೆಯ ಕ.ಬ.ಡ.ನಿಗೆ,

ಸಸ್ನೇಹಪೂರ್ವಕ ನಮಸ್ಕಾರಗಳು, ನಾನು ಕ್ಷೇಮದಿಂದಿರುವೆ. ನಿನ್ನ ಆರೋಗ್ಯಕ್ಕೆ ಪತ್ರ ಬರೆಯುವೆಯೆಂದು ನಂಬಿರುತ್ತೇನೆ.

ಜನವರಿ 9ರಂದು ನಮ್ಮ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ. ಈಗಿನಿಂದಲೇ ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ನಾವೆಲ್ಲರೂ ಲಂಕೇಶರ ‘ಸಂಕ್ರಾಂತಿ’ ನಾಟಕವನ್ನು ಅಂದು ಪ್ರದರ್ಶಿಸುವ ಸಲುವಾಗಿ ಪೂರ್ವ ತಯಾರಿ ನಡೆಸುತ್ತಿದ್ದೇವೆ. ನೀನು ಖಂಡಿತಾ ಆ ದಿನ ಇಲ್ಲಿಗೆ ಬರಬೇಕು. ನಮ್ಮ ನಾಡಿನ ಶ್ರೇಷ್ಠ ಕಥೆಗಾರ ನಾ. ಡಿಸೋಜ ಅವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿರುತ್ತೇವೆ. ನೀನು ಈ ಸಮಾರಂಭಕ್ಕೆ ತಪ್ಪದೆ ಬರಬೇಕೆಂದು ನನ್ನ ಪ್ರೀತಿಪೂರ್ವಕ ಆಹ್ವಾನವಿದು. ನೀನು ಬರುವ ಬಗ್ಗೆ ಪತ್ರ ಬರೆದು ತಿಳಿಸು.

ನಮಸ್ಕಾರಗಳೊಂದಿಗೆ,

ಸ್ನೇಹದ

ಅ.ಬ.ಕ

ಇವರಿಗೆ:

ಕ.ಬ.ಡ

ಆಶ್ರಯ ಸ್ವತಂತ್ರ ಪದವಿಪೂರ್ವ ಕಾಲೇಜು

ಮೂಡಿಗೆರೆ

ಚಿಕ್ಕಮಗಳೂರು ಜಿಲ್ಲೆ,

೮. ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ/ನಾಡಹಬ್ಬಗಳ ವಿವರ ನೀಡಿ ಗೆಳೆಯ/ಗೆಳತಿಗೆ ಪತ್ರ ಬರೆಯಿರಿ.

ರಾಷ್ಟ್ರೀಯ ಹಬ್ಬ:

ಬೆಂಗಳೂರು

ದಿನಾಂಕ: 26 ಆಗಸ್ಟ್ 2023

ಪ್ರೀತಿಯ ಗೆಳೆಯ ಕ.ಬ.ಡ.ನಿಗೆ, ಆ.ಬ.ಕ.ನ ಸಸ್ನೇಹ ಪ್ರಣಾಮಗಳು,

ನಿನ್ನ ಪತ್ರ ತಲುಪಿವೆ. ಕೂಡಲೇ ಉತ್ತರ ಬರೆಯಲಾಗಲಿಲ್ಲ. ಬೇಸರ ಮಾಡಿಕೊಳ್ಳಬೇಡ.

ಈ ತಿಂಗಳ ದಿನಾಂಕ 15ರಂದು ನಮ್ಮ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವೈಭವದಿಂದ ಆಚರಿಸಿದೆವು. ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಪ್ರಾಚಾರ್ಯರು ಎಲ್ಲರೂ ಅಂದು ಬೆಳಿಗ್ಗೆ ಏಳು ಘಂಟೆಗೆ ರಾಷ್ಟ್ರಧ್ವಜವನ್ನು ಹಿಡಿದು ಶಿವನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಹೋಗಿ ಎಂಟು ಗಂಟೆಗೆ ಹಿಂದಿರುಗಿದೆವು. ಸ್ಥಳೀಯ ಶಾಸಕರು ಧ್ವಜಾರೋಹಣ ಮಾಡಿದರು. ಆನಂತರ ಕಾಲೇಜಿನ ಸಭಾಂಗಣದಲ್ಲಿ ಎಲ್ಲರೂ ಸೇರಿದೆವು. ಸ್ವಾತಂತ್ರ್ಯ ಹೋರಾಟಗಾರರೂ ಗಾಂಧೀವಾದಿಗಳೂ ಆಗಿರುವ ಶ್ರೀ ಎಚ್.ಎಸ್. ದೊರೆಸ್ವಾಮಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ಆರಂಭವಾದವು. ಕಾಲೇಜಿನ ಪ್ರಾಚಾರ್ಯರು ಎಲ್ಲರನ್ನೂ ಸ್ವಾಗತಿಸಿದ ನಂತರ, ಮುಖ್ಯ ಅತಿಥಿಗಳಾದ ಶಾಸಕರು ಆ ದಿನದ ಮಹತ್ತ್ವವನ್ನು ವಿವರಿಸಿದರು. ಕಾಲೇಜಿನ ಇತಿಹಾಸದ ಅಧ್ಯಾಪಕರಾದ ಶ್ರೀ ನಾಗರಾಜ್ ಅವರು ಸ್ವಾತಂತ್ರ್ಯ ಮತ್ತು ಪಾರತಂತ್ರ್ಯಗಳೆಂದರೇನು, ಪ್ರಜಾಪ್ರಭುತ್ವ ಮತ್ತು ಅದರ ಅಗತ್ಯ- ಈ ವಿಚಾರಗಳನ್ನು ಕುರಿತು ಮಾತನಾಡಿದರು. ಅಧ್ಯಕ್ಷರು ತಮ್ಮ ಭಾಷಣದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಸಮಗ್ರ ಚರಿತ್ರೆಯನ್ನು ಮನಮುಟ್ಟುವಂತೆ ವಿವರಿಸುತ್ತಾ ಅದನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಹೊಣೆ ಏನೆಂಬುದನ್ನು ವಿಶದಪಡಿಸಿದರು.

ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಗಳನ್ನು ಹಾಡಿದರು. ‘ಸಂಗೊಳ್ಳಿ ರಾಯಣ್ಣ’ ನಾಟಕದ ಹಲವು ದೃಶ್ಯಗಳನ್ನು ಅಭಿನಯಿಸಿದರು.

ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಲ್ಲರಿಗೂ ಧನ್ಯವಾದಗಳನ್ನರ್ಪಿಸಿದರು. ಸಿಹಿ ಹಂಚಿಕೆಯೊಡನೆ ಅಂದಿನ ಕಾರ್ಯಕ್ರಮ ಮುಗಿಯಿತು.

ಅಧ್ಯಕ್ಷರ ಭಾಷಣದ ಮುಖ್ಯಾಂಶಗಳನ್ನು ಬರೆದಿಟ್ಟುಕೊಂಡಿದ್ದೇನೆ. ಮುಂದೊಂದು ದಿನ ಅದನ್ನು ನಿನಗೆ ಕಳುಹಿಸುತ್ತೇನೆ. ಮನೆಯಲ್ಲಿ ಎಲ್ಲರಿಗೂ ನನ್ನ ಸವಿನೆನಪುಗಳನ್ನು ತಿಳಿಸು. ಉಳಿದ ವಿಚಾರ ಇನ್ನೊಮ್ಮೆ ಬರೆಯುತ್ತೇನೆ. ನಿನ್ನ ಉತ್ತರವನ್ನು ನಿರೀಕ್ಷಿಸುತ್ತೇನೆ.

ಇಂತೀ ಸಸ್ನೇಹ ಪ್ರಣಾಮಗಳೊಡನೆ

ಅ.ಬ.ಕ

ಇವರಿಗೆ:

ಕ.ಬ.ಡ

ದ್ವಿತೀಯ ಪಿಯುಸಿ

ಪೂರ್ಣಪ್ರಜ್ಞ ವಿದ್ಯಾಲಯ,

ಮೈಸೂರು.

ನಾಡಹಬ್ಬ:

ಚಿಕ್ಕಮಗಳೂರು

ದಿನಾಂಕ: 11 ನವೆಂಬರ್ 2023

ಪ್ರೀತಿಯ ಗೆಳತಿಗೆ ಶುಭಾಶಯಗಳು.

ಇಲ್ಲಿ ನಾನು ಮತ್ತು ಮನೆಯವರೆಲ್ಲರೂ ಕ್ಷೇಮದಿಂದ ಇದ್ದೇವೆ. ನೀನು ಮತ್ತು ನಿನ್ನ ಕುಟುಂಬದವರೆಲ್ಲರೂ ಕ್ಷೇಮವೆಂದು ಭಾವಿಸಿರುತ್ತೇನೆ.

ಈಗ ದಸರಾ ಹಬ್ಬದ ಕಾಲ. ನಮ್ಮ ನಾಡಹಬ್ಬವನ್ನು ಒಂದು ಸಪ್ತಾಹದಂತೆ ನಾವು ಆಚರಿಸಿದೆವು. ಊರಿಗೆಲ್ಲ ಗೊಂಬೆ ಹಬ್ಬವಾದರೆ ನಮ್ಮಕಾಲೇಜಿನಲ್ಲಿ ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸುಗ್ಗಿ. ನಾಡು-ನುಡಿ-ಸಂಸ್ಕೃತಿಯನ್ನು ಬಿಂಬಿಸುವ ಚಲನಚಿತ್ರ ಪ್ರದರ್ಶನ, ವೇಷಭೂಷಣಗಳ ಸ್ಪರ್ಧೆ, ಸಮೂಹ ಗೀತೆಗಳು ಮುಂತಾದ ಕಾಠ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಪ್ರತಿದಿನವೂ ಸಾಹಿತಿಯೊಬ್ಬರನ್ನು ಆಹ್ವಾನಿಸಿ ಅದರಿಂದ ನಾಡಹಬ್ಬ ಕುರಿತು ಉಪನ್ಯಾಸಗಳನ್ನು ಏರ್ಪಡಿಸಿದ್ದು ಉಪಯುಕ್ತ ವಾಗಿತ್ತು. ನಾಡಹಬ್ಬವು ಪರಂಪರೆಯ ಬಗ್ಗೆ ನಮಗಿರುವ ಗೌರವವನ್ನು ಇಮ್ಮಡಿಸಿತೆನ್ನಬಹುದು. ನಿಮ್ಮ ಕಾಲೇಜಿನಲ್ಲಿ ಈ ಬಗೆಯ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರೆ ಆ ಬಗ್ಗೆ ಮುಂದಿನ ಪತ್ರದಲ್ಲಿ ವಿವರವಾಗಿ ಬರೆದು ತಿಳಿಸು.

ನಿರೀಕ್ಷೆಯಲ್ಲಿರುತ್ತೇವೆ.

ಇಂತಿ ಸ್ನೇಹದ

ಅ.ಬ.ಕ

ಇವರಿಗೆ:

ಕ.ಬ.ಡ

ʼಹೊಂಗನಸುʼ

ಶಂಕರಪುರ ಬಡಾವಣೆ

ಹಾಸನ

೯. ತಾವು ಮಾಡಿರುವ ಪ್ರವಾಸಾನುಭವವನ್ನು ತಿಳಿಸಿ ಗೆಳೆಯ/ಗೆಳತಿಗೆ ಪತ್ರ ಬರೆಯಿರಿ.

ಅಥವಾ

ನಿಮ್ಮ ಶೈಕ್ಷಣಿಕ ಪ್ರವಾಸದ ಅನುಭವವನ್ನು ಕುರಿತು ನಿಮ್ಮ ಗೆಳೆಯನಿಗೆ ಪತ್ರ ಬರೆಯಿರಿ.

ನರಸಿಂಹರಾಜಪುರ

ದಿನಾಂಕ: 9 ಜನವರಿ 2024

ಗೆಳೆಯ ಕ.ಬ.ಡ.ನಿಗೆ

ನನ್ನ ಪ್ರೀತಿಯ ಮಿತ್ರನಿಗೆ ಕ್ಷೇಮದ ಹಾರೈಕೆಗಳೊಡನೆ ಹೃತ್ಪೂರ್ವಕ ವಂದನೆಗಳು. ಇಲ್ಲಿ ನಾನು ನಿನ್ನಂಥ ಸ್ನೇಹಿತರ ಹಾರೈಕೆಯ ಫಲದಿಂದ ಕ್ಷೇಮವಾಗಿರುವೆ. ನಿನ್ನ ಹಾಗೂ ನಿನ್ನ ಮನೆಯವರೆಲ್ಲರ ಕ್ಷೇಮವನ್ನು ತಿಳಿಸುವುದು.

ನಮ್ಮ ಕಾಲೇಜಿನಲ್ಲಿ ಏರ್ಪಡಿಸಿದ್ದ ಈ ಬಾರಿಯ ಶೈಕ್ಷಣಿಕ ಪ್ರವಾಸದಲ್ಲಿ ಕೆಲವು ಸ್ಥಳಗಳಿಗೆ ಹೋಗಿ ಬಂದಿದ್ದರ ಅನುಭವಗಳನ್ನು ನಿನಗೆ ತಿಳಿಸಲು ಸಂತೋಷವೆನಿಸುತ್ತಿದೆ. ಕಲಾ ಸೃಷ್ಟಿಯ ಸೊಬಗನ್ನು ಕಣ್ಣನಗಳಿಂದ ಸವಿಯಲು, ಸಂಸ್ಕೃತಿ-ಜನಜೀವನಗಳನ್ನು ತಿಳಿದು ಸ್ಫೂರ್ತಿ ಪಡೆಯಲು ಪ್ರವಾಸ ಎಷ್ಟು ಮಹತ್ವದ್ದೆಂಬುದನ್ನು ನಿನಗೆ ವಿವರಿಸುವ ಅಗತ್ಯವಿಲ್ಲ.

ಮೊದಲು ನಾವು ಜೋಗದ ಜಲಪಾತವನ್ನು ನೋಡಿ, ಅನಂತರ ಕೆಮ್ಮಣ್ಣುಗುಂಡಿ, ಕುದುರೆಮುಖ ಇತ್ಯಾದಿ ರಮ್ಯ ತಾಣಗಳನ್ನು ನೋಡಿದೆವು. ಜೋಗವನ್ನು ಕುರಿತು ನಾನು ಓದಿ ಕಲ್ಪಿಸಿಕೊಂಡಿದ್ದಕ್ಕಿಂತಲೂ ಹೆಚ್ಚಿನ ಭವ್ಯಾನುಭವ ಅದನ್ನು ಕಣ್ಣಾರೆ ಕಂಡಾಗ ನನಗಾಯಿತು. ಕೆಮ್ಮಣ್ಣುಗುಂಡಿಯ ರಮ್ಮ ತಾಣ, ಕುದುರೆಮುಖದ ನಿಸರ್ಗ ಸೌಂದರ್ಯದ ಮಡುವಿನಲ್ಲಿರುವ ಕಬ್ಬಿಣದ ಕಾರ್ಖಾನೆಯ ಭೇಟಿಗಳೆಲ್ಲವೂ ಹೊಸ ಬಗೆಯ ಅನುಭವವನ್ನು ನಮಗೆ ನೀಡಿತು.

ಓತಪ್ರೋತವಾಗಿ, ಧಾರೆಧಾರೆಯಾಗಿ, ಮಧುರ ಮಂಜುಳ ನಿನಾದದಿಂದ ಹರಿವ ಜೋಗದ ಜಲಪಾತವನ್ನು ನೋಡಿ ಭಾವಪರವಶನಾದೆ. ಗಿರಿಧಾಮಗಳ ನಿಸರ್ಗ ಸೌಂದರ್ಯವನ್ನು ನೋಡಿ ಮೂಕವಿಸ್ಮಿತನಾದೆ. ಆಧುನಿಕ ಮಾನವನ ದೇಗುಲಗಳೆನಿಸಿರುವ ಕಾರ್ಖಾನೆಯನ್ನು ದರ್ಶಿಸಿ ಅಚ್ಚರಿಗೊಂಡೆ. ನಿರಂತರವಾದ ಓದಿನ ಏಕತಾನತೆಯಿಂದ ನರಳಿದ್ದ ನನಗೆ ಈ ಪ್ರವಾಸ ಹೊಸಬಗೆಯ ಜೀವನೋತ್ಸಾಹವನ್ನು ತುಂಬಿತು. ನೀನೂ ಒಮ್ಮೆ ಇವನ್ನೆಲ್ಲಾ ನೋಡಿಬರುವುದು ತೀರ ಅವಶ್ಯ.

ಈ ರೀತಿಯ ಪ್ರವಾಸದಿಂದ ನಮ್ಮ ಸಾಹಸ, ಉತ್ಸಾಹ, ಕಲಾಭಿರುಚಿಗಳ ಅಭಿವ್ಯಕ್ತಿಗಳಿಗೆ ಒಳ್ಳೆಯ ಅವಕಾಶ ದೊರೆತು ಭಾವವಿಕಾಸಗೊಳ್ಳುತ್ತದೆ.

ವಂದನೆಗಳೊಂದಿಗೆ,

ಆದರದ

ಅ.ಬ.ಕ

ಕ.ಡ.ಬ

ಮುರುಗನ್ ಹಾಲಿನ ಕೇಂದ್ರದ ಪಕ್ಕ

ಚಾಮುಂಡಿಪುರಂ, ಮೈಸೂರು.

೧೦. ನಿಮ್ಮೂರಿನಲ್ಲಿ ನಡೆಯುವ ಜಾತ್ರೆಗೆ ಆಹ್ವಾನಿಸಿ ನಿಮ್ಮ ಮಿತ್ರನಿಗೆ ಪತ್ರ ಬರೆಯಿರಿ.

ಶಿರಸಿ

ದಿನಾಂಕ: ಮಾರ್ಚ್‌ 25,2024

ಪ್ರೀತಿಯ ಗೆಳೆಯ ಕ.ಬ.ಡ.ನಿಗೆ.

ನಮಸ್ಕಾರಗಳು, ನೀನು ಮತ್ತು ಮನೆಯವರೆಲ್ಲರೂ ಕ್ಷೇಮದಿಂದಿರುವಿರೆಂದು ಭಾವಿಸಿದ್ದೇನೆ. ಇಲ್ಲಿ ನಾವೆಲ್ಲರೂ ಕ್ಷೇಮ. ಈ ಪತ್ರ ಬರೆದ ಉದ್ದೇಶವೆಂದರೆ, ನಿನಗೆ ಯಾವಾಗಲೂ ನಮ್ಮ ಶಿರಸಿಯಲ್ಲಿ ನಡೆಯುವ ಮಾರಿಕಾಂಬ ಜಾತ್ರೆಯ ವಿಚಾರ ಹೇಳುತ್ತಿದ್ದೆನಲ್ಲವೆ? ಈ ಬಾರಿಯ ಜಾತ್ರೆಯನ್ನು ನಿನಗೆ ತೋರಿಸುವ ಉದ್ದೇಶದಿಂದ ಈ ಪತ್ರ ಬರೆಯುತ್ತಿದ್ದೇನೆ. ದಿನಾಂಕ 8 ಏಪ್ರಿಲ್, 2023ರಿಂದ 10 ಏಪ್ರಿಲ್ 2023ರವರೆಗೆ ಮೂರು ದಿನಗಳ ಕಾಲ ಜಾತ್ರೆ ನಡೆಯಲಿದೆ. ನೀನು ಸಾಧ್ಯವಾದರೆ ಮನೆಯವರನ್ನೂ ಕರೆದುಕೊಂಡು ಮೂರು ದಿನಗಳ ಕಾಲವೂ ಈ ಜಾತ್ರೆಯ ವೈಶಿಷ್ಟ್ಯವನ್ನು ನೋಡಿ ಸಂತೋಷಪಡಬೇಕೆಂದು ಅಹ್ವಾನಿಸುತ್ತಿದ್ದೇನೆ. ಬಿಡುವು ಮಾಡಿಕೊಂಡು ಬರಲೆಂದು ಒಂದು ತಿಂಗಳು ಮೊದಲೇ ತಿಳಿಸುತ್ತಿರುವೆ.

ವಂದನೆಗಳೊಂದಿಗೆ,

ನಿನ್ನ ಸ್ನೇಹದ

ಅ.ಬ.ಕ

ಕ.ಬ.ಡ.

ನಂ. 47, 3ನೇ ತಿರುವು

ಅರವಿಂದನಗರ

ಕಲುಬುರ್ಗಿ,

೧೧. ವರ್ಗಾವಣೆ ಪ್ರಮಾಣ ಪತ್ರ ಮತ್ತು ಅಂತಪಟ್ಟಿ ಕೋರಿ ಕಾಲೇಜಿನ ಪ್ರಾಚಾರ್ಯರಿಗೆ ಪತ್ರ ಬರೆಯಿರಿ.

ದಿನಾಂಕ: ಜೂನ್ 15, 2023

ಇವರಿಂದ:

ಅ.ಬ.ಕ

“ಚಾರುಮನೆ”

ಕೆ.ಆರ್. ನಗರ,

ಮೈಸೂರು ಜಿಲ್ಲೆ

ಇವರಿಗೆ:

ಪ್ರಾಚಾರ್ಯರು

ಸರ್ಕಾರಿ ಪದವಿ ಪೂರ್ವ ಕಾಲೇಜು

ಕೆ.ಆರ್. ನಗರ

ಮೈಸೂರು ಜಿಲ್ಲೆ.

ಮಾನ್ಯರೆ,

ವಿಷಯ: ವರ್ಗಾವಣೆ ಪತ್ರ ಪಡೆಯುವ ಬಗ್ಗೆ.

ಈ ಮೇಲ್ಕಂಡ ವಿಷಯವನ್ನು ಕುರಿತು, ನಾನು ತಮ್ಮ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ನನ್ನ ಪಿಯುಸಿ ವ್ಯಾಸಂಗವು ಈಗ ಪೂರ್ಣಗೊಂಡಿರುತ್ತದೆ. ನನ್ನ ಮುಂದಿನ ವ್ಯಾಸಂಗಕ್ಕೆ ತಾವು ವರ್ಗಾವಣೆ ಪತ್ರ ನೀಡಿ ಉಪಕರಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ನನ್ನ ದಾಖಲಾತಿ ವಿವರವನ್ನು ಈ ಪತ್ರದೊಂದಿಗೆ ಲಗತ್ತಿಸಿರುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಧೇಯ ವಿದ್ಯಾರ್ಥಿ

ಅ.ಬ.ಕ

೧೨. ನಾಲ್ಕು ದಿನಗಳ ರಜೆ ಕೋರಿ ನಿಮ್ಮ ತರಗತಿ ಉಪನ್ಯಾಸಕರಿಗೆ ಪತ್ರ ಬರೆಯಿರಿ.

ದಿನಾಂಕ: ಆಗಸ್ಟ್ 1, 2023

ಇವರಿಂದ:

ಅ.ಬ.ಕ

ಚಂದಗಾಲು

ಎಡತೊರೆ ಅಂಚಿ

ಮೈಸೂರು.

ಇವರಿಗೆ:

ಪ್ರಾಚಾರ್ಯರು/ತರಗತಿ ಉಪನ್ಯಾಸಕರು

ಸರ್ಕಾರಿ ಪದವಿ ಪೂರ್ವ ಕಾಲೇಜು

ಎಡತೊರೆ, ಮೈಸೂರು ಜಿಲ್ಲೆ.

ಮಾನ್ಯರೆ,

ವಿಷಯ: ನಾಲ್ಕು ದಿನಗಳ ರಜೆ ಕೋರಿ ಅರ್ಜಿ,

ನಾನು ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ನನ್ನ ಮನವಿಯೆಂದರೆ, ನನ್ನ ತಾತನವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅವರ ಉಪಚಾರಕ್ಕಾಗಿ ನಾನು ಆಸ್ಪತ್ರೆಯಲ್ಲಿರಬೇಕಾಗಿದೆ. ಆದ್ದರಿಂದ ನಾಲ್ಕು ದಿನಗಳ ಕಾಲ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲವಾದ್ದರಿಂದ ತಾವು ದಯಮಾಡಿ ಆಗಸ್ಟ್ 3ರಿಂದ ಆಗಸ್ಟ್ 6 ರವರೆಗೆ ನಾಲ್ಕು ದಿನಗಳ ಕಾಲ ರಜೆ ಪಡೆಯಲು ಅವಕಾಶ ನೀಡಬೇಕೆಂದು ಈ ಮೂಲಕ ಕೋರಿಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ,

ತಮ್ಮ ವಿಧೇಯ ವಿದ್ಯಾರ್ಥಿ

ಅ.ಬ.ಕ

೧೩. ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯಲು ಕೋರಿ ಸಂಬಂಧಪಟ್ಟ ಬ್ಯಾಂಕಿನ ವ್ಯವಸ್ಥಾಪಕರಿಗೆ ಪತ್ರ ಬರೆಯಿರಿ.

ದಿನಾಂಕ: ಜುಲೈ 03, 2023

ಇವರಿಂದ:

ಅ.ಬ.ಕ

“ವಿಘ್ನೇಶ್”, ಪೊಲೀಸ್ ಚೌಕಿಯ ಸಮೀಪ

ವಿನೋಬನಗರ ಶಿವಮೊಗ್ಗ.

ಇವರಿಗೆ:

ವ್ಯವಸ್ಥಾಪಕರು

ಕೆನರಾ ಬ್ಯಾಂಕ್

ದುರ್ಗಿಗುಡಿ ಶಾಖೆ

ಶಿವಮೊಗ್ಗ.

ಮಾನ್ಯರೆ,

ವಿಷಯ: ತಮ್ಮ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯುವ ಬಗ್ಗೆ.

ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುವ ನಾನು ತಮ್ಮ ಬ್ಯಾಂಕಿನ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಬಯಸಿರುತ್ತೇನೆ. ನಿಗದಿತ ಅರ್ಜಿನಮೂನೆಯೊಂದಿಗೆ ಅಗತ್ಯದಾಖಲಾತಿಗಳನ್ನು ಸಲ್ಲಿಸಿರುತ್ತೇನೆ. ತಾವು ಉಳಿತಾಯಖಾತೆಯನ್ನು ತೆರೆಯಲು ಅನುಕೂಲ ಮಾಡಿಕೊಡುವಿರೆಂದು ಭಾವಿಸಿರುತ್ತೇನೆ. ಆರಂಭಿಕ ಠೇವಣಿಯ ಹಣವನ್ನು ಚಲನ್ ಮೂಲಕ ಪಾವತಿಸಿರುತ್ತೇನೆ.

ಧನ್ಯವಾದಗಳೊಂದಿಗೆ,

ತಮ್ಮ ವಿಶ್ವಾಸಿ

ಅ.ಬ.ಕ

೧೪. ಶೈಕ್ಷಣಿಕ ಸಾಲ ಸೌಲಭ್ಯವನ್ನು ಕೋರಿ ಸಂಬಂಧಪಟ್ಟ ಬ್ಯಾಂಕಿನ ವ್ಯವಸ್ಥಾಪಕರಿಗೆ ಪತ್ರ ಬರೆಯಿರಿ.

ದಿನಾಂಕ: ನವೆಂಬರ್ 2,2023

ಇವರಿಂದ:

ಅ.ಬ.ಕ.

ಬೈಪಾಸ್ ರಸ್ತೆ

ಚಿಕ್ಕಮಗಳೂರು.

ಇವರಿಗೆ:

ವ್ಯವಸ್ಥಾಪಕರು

ಭಾರತೀಯ ಸ್ಟೇಟ್ ಬ್ಯಾಂಕ್

ಹೊಸಮನೆ ಬಡಾವಣೆ

ಚಿಕ್ಕಮಗಳೂರು.

ಮಾನ್ಯರೆ,

ವಿಷಯ: ಶೈಕ್ಷಣಿಕ ಸಾಲಸೌಲಭ್ಯ ಪಡೆಯುವ ಕುರಿತು.

ಮೇಲ್ಕಂಡ ವಿಷಯವನ್ನು ಕುರಿತು ನನ್ನ ಮನವಿಯೆಂದರೆ, ನಾನು ದ್ವಿತೀಯ ಪಿ.ಯು.ಸಿ. ವ್ಯಾಸಂಗವನ್ನು ಪೂರೈಸಿದ್ದು ಮುಂದಿನ ನನ್ನ ಉನ್ನತ ವ್ಯಾಸಂಗಕ್ಕೆ ಹಣಕಾಸಿನ ಅಗತ್ಯಕ್ಕಾಗಿ ನಾನು ತಮ್ಮ ಶಾಖೆಯಿಂದ ಶೈಕ್ಷಣಿಕ ಸಾಲಸೌಲಭ್ಯ ಪಡೆಯಲು ಬಯಸಿರುತ್ತೇನೆ. ಈ ಸಾಲ ಸೌಲಭ್ಯ ಪಡೆಯಲು ಬ್ಯಾಂಕ್ ವಿಧಿಸುವ ಷರತ್ತುಗಳಿಗೆ ನಾನು ಬದ್ಧಳಾಗಿರುತ್ತೇನೆ. ಸೂಕ್ತ ದಾಖಲಾತಿಗಳನ್ನು ನಿಗದಿತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಿರುತ್ತೇನೆ. ತಾವು ಕೃಪೆಯಿಟ್ಟು ಶೈಕ್ಷಣಿಕ ಸಾಲವನ್ನು ಮಂಜೂರು ಮಾಡಿ ಸಹಕರಿಸುವಿರಾಗಿ ನಂಬುತ್ತೇನೆ.

ಧನ್ಯವಾದಗಳೊಂದಿಗೆ,

ತಮ್ಮ ವಿಶ್ವಾಸಿ,

ಅ.ಬ.ಕ

೧೫. ಸೂಕ್ತ ಬಸ್ ಸಂಪರ್ಕ ವ್ಯವಸ್ಥೆಯನ್ನು ಕೋರಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆಯಿರಿ.

ದಿನಾಂಕ: 6‌ ಜೂನ್, 2023

ಇವರಿಂದ:

ಅ.ಬ.ಕ

ಬೆಮೆಲ್ ಲೇಔಟ್, ತೂಬರಹಳ್ಳಿ

ಬೆಂಗಳೂರು ಗ್ರಾಮೀಣ

ಇವರಿಗೆ:

ವ್ಯವಸ್ಥಾಪಕರು

ಬಿಎಂಟಿಸಿ ಮುಖ್ಯ ಕಛೇರಿ

ಶಾಂತಿನಗರ

ಬೆಂಗಳೂರು ಗ್ರಾಮೀಣ

ಮಾನ್ಯರೆ,

ವಿಷಯ: ಸೂಕ್ತ ಬಸ್ ಸಂಪರ್ಕ ವ್ಯವಸ್ಥೆಗಾಗಿ ಮನವಿ.

ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುವ ನಮಗೆ ಸೂಕ್ತ ಬಸ್ ಸಂಪರ್ಕ ವ್ಯವಸ್ಥೆ ಇರುವುದಿಲ್ಲ. ಶಾಲಾ-ಕಾಲೇಜುಗಳಿಗೆ, ಕೆಲಸ ಮಾಡುವ ಕಛೇರಿಗಳಿಗೆ, ಆಸ್ಪತ್ರೆ, ಮಾರುಕಟ್ಟೆ ಮುಂತಾದ ದಿನನಿತ್ಯದ ಓಡಾಟಕ್ಕೆ ನಾವೆಲ್ಲರೂ ಎರಡು ಕಿಲೋಮೀಟ‌ರ್ ನಡೆದು ಅಲ್ಲಿಂದ ಬಸ್ಸಿನಲ್ಲಿ ಸಂಚರಿಸಬೇಕಾಗಿದೆ. ತಾವು ದಯಮಾಡಿ ನಮ್ಮ ಬಡಾವಣೆಯಿಂದ ಇತರ ಮುಖ್ಯ ಕೇಂದ್ರಗಳಿಗೆ ಬಸ್‌ರೂಟನ್ನು ಮಂಜೂರು ಮಾಡಿ ಸೂಕ್ತ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ,

ತಮ್ಮ ವಿಶ್ವಾಸಿ,

ಅ.ಬ.ಕ

ಮತ್ತು ಇತರೆ ನಾಗರೀಕರು

೧೬. ನಿಮ್ಮ ಕಾಲೇಜಿನಲ್ಲಿ ಆಚರಿಸಿದ ಕನ್ನಡ ರಾಜ್ಯೋತ್ಸವವನ್ನು ಕುರಿತು ಗೆಳೆಯ/ಗೆಳತಿಗೆ ಪತ್ರ ಬರೆಯಿರಿ.

ಚಿತ್ರದುರ್ಗ

ದಿನಾಂಕ: ನವೆಂಬರ್‌ 14, 2023

ಪ್ರೀತಿಯ ಗೆಳೆಯನಾದ ಕ.ಬ.ಡ.ನಿಗೆ ನಿನ್ನ ಗೆಳೆಯನಾದ ಆ.ಬ.ಕ. ಮಾಡುವ ಶುಭಹಾರೈಕೆಗಳು.

ನಾನು ಇಲ್ಲಿ ಆರೋಗ್ಯವಾಗಿದ್ದೇನೆ. ನೀನೂ ಸಹ ಆರೋಗ್ಯವಾಗಿದ್ದೀಯಾ ಎಂದು ಭಾವಿಸಿದ್ದೇನೆ. ದಿನಾಂಕ 01-11-2023ರಂದು ನಮ್ಮ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದವು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣಕ್ಕೆ ಆಗಮಿಸಿ ಮೆರಗನ್ನು ತಂದುಕೊಟ್ಟರು. ಖ್ಯಾತ ಬರಹಗಾರರಾದ ರಾಜಶೇಖರ್‌ರವರು ಧ್ವಜಾರೋಹಣ ಕಾಠ್ಯಕ್ರಮವನ್ನು ನೆರವೇರಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಮಾತುಗಳು ವಿದ್ಯಾರ್ಥಿಗಳನ್ನು ಹುರಿದುಂಬಿಸುವಂತಿದ್ದವು ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿಯನ್ನು ಹಂಚುವುದರ ಮೂಲಕ, ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದರ ಮೂಲಕ ಕನ್ನಡ ರಾಜ್ಯೋತ್ಸವವು ಅದ್ದೂರಿಯಾಗಿ ನೆರವೇರಿತು. ನೀನೂ ಸಹ ನಿಮ್ಮ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವವನ್ನು ಕುರಿತು ಪತ್ರವನ್ನು ಬರೆಯುತ್ತೀಯಾ ಎಂದು ಆಶಿಸುತ್ತೇನೆ.

ನಮಸ್ಕಾರಗಳೊಂದಿಗೆ.

ಇಂತಿ ನಿನ್ನ ಗೆಳೆಯ

ಅ.ಬ.ಕ

ಇವರಿಗೆ:

ಕ.ಬ.ಡ.

ದ್ವಿತೀಯ ಪಿಯುಸಿ

ಮಹಾರಾಜ ಪಿಯು ಕಾಲೇಜು

ಮೈಸೂರು.

೧೭. ನಿಮ್ಮ ಊರಿಗೆ ಗ್ರಂಥಾಲಯ ಸೌಲಭ್ಯವನ್ನು ಒದಗಿಸುವಂತೆ ಕೋರಿ ಮುಖ್ಯ ಗ್ರಂಥಪಾಲಕರಿಗೆ ಪತ್ರ ಬರೆಯಿರಿ.

ದಿನಾಂಕ: 13 ನವೆಂಬರ್ 2023

ಇವರಿಂದ:

ಅ.ಬ.ಕ

ಆಂಜನೇಯ ಬಡಾವಣೆ

ತುಮಕೂರು.

ಇವರಿಗೆ:

ಮುಖ್ಯ ಗ್ರಂಥಪಾಲಕರು

ತುಮಕೂರು ಜಿಲ್ಲಾ ಗ್ರಂಥಾಲಯ

ತುಮಕೂರು,

ಮಾನ್ಯರೆ,

ವಿಷಯ: ನಮ್ಮ ಬಡಾವಣೆಯಲ್ಲಿ ಗ್ರಂಥಾಲಯವನ್ನು ಆರಂಭಿಸುವ ಕುರಿತು.

ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುವ ನಾನು ನಾಗರಿಕರ ಪರವಾಗಿ ಈ ಅರ್ಜಿಯನ್ನು ತಮಗೆ ಸಲ್ಲಿಸುತ್ತಿದ್ದೇನೆ. ನಮ್ಮ ಬಡಾವಣೆಯ ನಿವಾಸಿಗಳಲ್ಲಿ ಬಹುತೇಕರು ವಿದ್ಯಾವಂತರು. ಆದರೆ ದಿನಪತ್ರಿಕೆ, ವಾರಪತ್ರಿಕೆ, ಮತ್ತಿತರ ಸಾಹಿತ್ಯ ಕೃತಿಗಳ ಅಧ್ಯಯನಕ್ಕೆ ಗ್ರಂಥಾಲಯ ಸೌಲಭ್ಯವಿಲ್ಲವಾಗಿದೆ. ತಾವು ನಮ್ಮ ವಾಚನಾಭಿರುಚಿಯನ್ನು ವೃದ್ಧಿಸಲು ನಮ್ಮ ಬಡಾವಣೆಯಲ್ಲಿ ಗ್ರಂಥಾಲಯವೊಂದನ್ನು ಆರಂಭಿಸಿದಲ್ಲಿ ವ್ಯಾಸಂಗಾಸಕ್ತರಿಗೆ ತುಂಬಾ ಉಪಕಾರ ಮಾಡಿದಂತಾಗುತ್ತದೆ. ನಮ್ಮ ಈ ಮನವಿಯನ್ನು ಪುರಸ್ಕರಿಸಿ ಈ ಕೂಡಲೇ ಕ್ರಮಕೈಗೊಳ್ಳುವಿರಾಗಿ ನಂಬಿದ್ದೇನೆ.

ವಂದನೆಗಳೊಂದಿಗೆ,

ತಮ್ಮ ನ೦ಬುಗೆಯ

ಅ.ಬ.ಕ

ಮತ್ತಿತರ ನಾಗರಿಕರು

೧೮. ಕನ್ನಡ ನಾಡುನುಡಿಯ ಅಭಿಮಾನವನ್ನು ಕುರಿತು ನಿಮ್ಮ ಗೆಳೆಯರಿಗೊಂದು ಪತ್ರ ಬರೆಯಿರಿ.

ಬೆಂಗಳೂರು

ದಿನಾಂಕ: ಮಾರ್ಚ್ 24, 2024

ಪ್ರೀತಿಯ ಗೆಳೆಯ ಕ.ಬ.ಡ.,

ನಮಸ್ಕಾರಗಳು ಮತ್ತು ಕ್ಷೇಮದ ಹಾರೈಕೆಗಳು. ನಾನು ಮತ್ತು ನಮ್ಮ ಮನೆಯವರೆಲ್ಲರೂ ಕ್ಷೇಮವಾಗಿದ್ದೇವೆ. ನಿಮ್ಮೆಲ್ಲರ ಆರೋಗ್ಯದ ವಿಚಾರವನ್ನು ನಿನ್ನ ಪತ್ರದಲ್ಲಿ ತಿಳಿಸುವಿಯೆಂದು ನಿರೀಕ್ಷಿಸುತ್ತೇನೆ.

ಈ ಪತ್ರ ಬರೆದ ಉದ್ದೇಶವೆಂದರೆ ನಮ್ಮ ಕನ್ನಡ ನಾಡು-ನುಡಿಯ ಬಗೆಗೆ ಕೆಲವು ವಿಚಾರಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಬೇಕೆಂದು ಬಯಕೆಯಾಗಿದೆ. ನಾವು ವಾಸಿಸುವ ಬೆಂಗಳೂರಿನಲ್ಲಿ ದಿನೇ ದಿನೇ ಕನ್ನಡದ ವಾತಾವರಣವೇ ಕಣ್ಮರೆಯಾಗುತ್ತಿದೆ. ಎಲ್ಲಿಗೇ ಹೋದರೂ ಕಿವಿಗೆ ಕೇಳಿಸುವುದು ಇಂಗ್ಲಿಷ್-ಹಿಂದಿ ಮತ್ತಿತರ ಭಾಷೆಗಳೇ, ನಮ್ಮ ನಾಡಿನ ಬಗ್ಗೆ, ಕನ್ನಡ ನುಡಿಯ ಬಗ್ಗೆ ಜನರಲ್ಲಿ ಅಭಿಮಾನವು ಕಡಿಮೆಯಾಗುತ್ತಿರುವುದು ನನ್ನಲ್ಲಿ ಕಳವಳವನ್ನುಂಟು ಮಾಡಿದೆ. ನಮ್ಮ ನಾಡು-ನುಡಿಗಳು ನಮ್ಮೆಲ್ಲರ ತಾಯಿ ಇದ್ದಂತೆ, ಈ ತಾಯಿಯನ್ನು ಅನಾದರದಿಂದ ಕಂಡರೆ ಹೇಗೆ? ಎಂಥ ಭವ್ಯ ಪರಂಪರೆಯ ಭಾಷೆ ನಮ್ಮದು. ಯಾಕೆ ಈ ವಿಚಾರದಲ್ಲಿ ನಾವು ಪ್ರೀತಿಯಿಂದ ನಡೆದುಕೊಳ್ಳುತ್ತಿಲ್ಲ? ನಮ್ಮ ಕಣ್ಣೆದುರೇ ನಮ್ಮ ನಾಡು-ನುಡಿ ಹೀಗೆ ಮರೆಯಾಗಿ ಹೋದರೆ ನಾಳಿನ ತಲೆಮಾರಿನವರಲ್ಲಿ ನಾಡು-ನುಡಿಯ ಅಭಿಮಾನ ನಿರೀಕ್ಷಿಸುವುದಾದರೂ ಹೇಗೆ?

ಆದ್ದರಿಂದ ನಾವೆಲ್ಲರೂ ನಮ್ಮ ನಾಡಿನ ಬಗ್ಗೆ ಅಭಿಮಾನದಿಂದ ವರ್ತಿಸುವುದರ ಜೊತೆಗೆ, ದಿನನಿತ್ಯದ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುವ ಸಂಕಲ್ಪ ತೋರಬೇಕಾಗಿದೆ. ನಮ್ಮ ಅಭಿಮಾನವನ್ನು ಕ್ರಿಯೆಯಲ್ಲಿ ತೋರಿಸಬೇಕಿದೆ. ನಾನಂತೂ ಎಲ್ಲೇ ವ್ಯವಹರಿಸಿದರೂ ಕನ್ನಡವನ್ನೇ ಬಳಸುವ ದೃಢ ನಿರ್ಧಾರ ಮಾಡಿರುವೆ ಇದರ ಬಗ್ಗೆ ನಿನ್ನ ಅಭಿಪ್ರಾಯಗಳನ್ನು ಬರೆದು ತಿಳಿಸುವಿಯೆಂದು ಭಾವಿಸುತ್ತೇನೆ.

ಧನ್ಯವಾದಗಳೊಂದಿಗೆ,

ನಿನ್ನ ಗೆಳೆಯ

ಅ.ಬ.ಕ

ಇವರಿಗೆ:

ಕ.ಡ.ಬ

ಮನೆ ನಂ. 234, ಎರಡನೇ ತಿರುವು

ರವೀಂದ್ರ ನಗರ, ಚಿಕ್ಕಮಗಳೂರು.

೧೯. ನಿಮ್ಮ ಭವಿಷ್ಯದ ಬಗೆಗಿನ ಕನಸನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಬಗೆಗೆ ಒಂದು ಪತ್ರ ಬರೆಯಿರಿ.

ಮೈಸೂರು

ದಿನಾಂಕ: ಜನವರಿ 26, 2024

ಪ್ರೀತಿಯ ಗೆಳತಿ ಕ.ಬ.ಡ.,

ನಾನು ಇಲ್ಲಿ ಕ್ಷೇಮವಾಗಿರುವೆ. ಮನೆಯವರೆಲ್ಲರೂ ಸೌಖ್ಯದಿಂದ ಇದ್ದಾರೆ. ಅಲ್ಲಿ ನಿಮ್ಮೆಲ್ಲರ ಕ್ಷೇಮ ಸಮಾಚಾರವನ್ನು ಪತ್ರದ ಮುಖೇನ ಬರೆದು ತಿಳಿಸು.

ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮುಗಿದ ನಂತರ ಮುಂದೇನು ಎಂಬ ಪ್ರಶ್ನೆ ಮೂಡುವುದು ಸಹಜ. ನಿನ್ನಲ್ಲೂ ಈ ಬಗೆಯ ಪ್ರಶ್ನೆಗಳು ಉದ್ಭವಿಸಿರಬಹುದು. ನನಗೆ ನನ್ನ ಭವಿಷ್ಯದ ಬಗ್ಗೆ ತುಂಬಾ ಕನಸುಗಳಿವೆ. ಅವುಗಳನ್ನೆಲ್ಲ ಹಂತಹಂತವಾಗಿ ಸಾಕಾರಗೊಳಿಸಬೇಕಿದೆ. ಮುಖ್ಯವಾದ ಕನಸೆಂದರೆ ನಾನೊಬ್ಬ ಸಮಾಜಸೇವಕನಾಗಬೇಕೆಂಬುದು ವಿದ್ಯಾವಂತರಾದವರಿಗೆ ಸಮಾಜಸೇವೆ ಮಾಡುವ ಹಲವು ದಾರಿಗಳು ತೆರೆದಿರುತ್ತವೆ. ಅದರಂತೆ ನಾನೂ ಕೂಡ ಯಾವುದಾದರೊಂದು ಬಗೆಯಲ್ಲಿ ಸಮಾಜಸೇವೆ ಮಾಡಿ, ಈ ಸಮಾಜದ ಋಣವನ್ನು ತೀರಿಸಿ, ನನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂಬ ಬಯಕೆ ಇದೆ. ಈ ಹಂತ ತಲುಪಲು ಮೊದಲು ಚೆನ್ನಾಗಿ ಓದಿ ಜ್ಞಾನ ಸಂಪಾದಿಸಿಕೊಳ್ಳಬೇಕು. ಈ ಜ್ಞಾನವೇ ಸೇವೆಯ ದಾರಿಗಳನ್ನು ತೆರೆದು ತೋರುತ್ತದೆ ಎಂಬುದು ನನ್ನ ಬಲವಾದ ನಂಬಿಕೆ. ಈಗ ಆಸೆ-ಕನಸುಗಳಿವೆ. ಇನ್ನಷ್ಟು ಪ್ರಬುದ್ಧನಾದ ಮೇಲೆ ಯಾವ ರೀತಿಯ ಸಮಾಜಸೇವೆ ಮುಖ್ಯ ಎಂಬುದನ್ನು ತೀರ್ಮಾನಿಸುವೆ. ನಿನ್ನ ಭವಿಷ್ಯದ ಕನಸುಗಳನ್ನು ನನ್ನೊಂದಿಗೆ ಹಂಚಿಕೊಳ್ಳಬಾರದೇಕೆ? ಖಂಡಿತಾ ಪತ್ರ ಬರೆ.

ವಂದನೆಗಳೊಂದಿಗೆ,

ನಿನ್ನ ಸ್ನೇಹದ

ಅ.ಬ.ಕ

ಇವರಿಗೆ:

ಕ.ಡ.ಬ

ನಂ. 127, ಗೋಕುಲಂ

ಎಂ.ಜಿ. ರಸ್ತೆ

ಹಾಸನ

೨೦. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿ ನಿಮ್ಮ ಗೆಳೆಯ/ಗೆಳತಿಗೆ ಪತ್ರ ಬರೆಯಿರಿ.

ಕಳಸಾಪುರ

ದಿನಾಂಕ: 12 ನವೆಂಬರ್, 2023

ಪ್ರಿಯ ಗೆಳೆಯ ಕ.ಬ.ಡ.,

ನಮಸ್ಕಾರಗಳು ಮತ್ತು ಕ್ಷೇಮದ ಹಾರೈಕೆಗಳು, ಇಲ್ಲಿ ನಾನು ಮತ್ತು ನಮ್ಮ ಮನೆಯವರು ಆರೋಗ್ಯದಿಂದ ಇದ್ದೇವೆ. ಬರಲಿರುವ ಪರೀಕ್ಷೆಗಾಗಿ ನಾನು ಚೆನ್ನಾಗಿ ತಯಾರಿ ನಡೆಸುತ್ತಿದ್ದೇನೆ. ನಿನ್ನ ತಯಾರಿ ಹಾಗೂ ಆರೋಗ್ಯದ ಬಗ್ಗೆ ಪತ್ರ ಬರೆದು ತಿಳಿಸು.

ನಿನಗೆ ಈ ಪತ್ರವನ್ನು ಬರೆದ ಮುಖ್ಯ ಉದ್ದೇಶವೆಂದರೆ ಈ ಭಾರಿ ಎಂಬತ್ತೈದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ನಡೆಯಲಿದೆ. ಜನವರಿ ತಿಂಗಳ ಮೊದಲವಾರದಲ್ಲಿ ನಡೆಯಲಿರುವ ಈ ಸಮ್ಮೇಳನಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರರು ಅಧ್ಯಕ್ಷರಾಗಿದ್ದಾರೆ. ಮೂರು ದಿನಗಳ ಕಾಲ ಇಲ್ಲಿ ನಮ್ಮ ನಾಡು-ನುಡಿಗೆ ಸಂಬಂಧಿಸಿದ ಸಾಹಿತ್ಯ ಚರ್ಚೆಗಳು ನಡೆಯಲಿವೆ. ಎಷ್ಟೊಂದು ಜನ ಲೇಖಕರನ್ನು ಸಮೀಪದಿಂದ ಕಾಣುವ, ಮಾತನಾಡುವ ಸಂದರ್ಭವಿದು. ಸಾವಿರಾರು ಜನ ಪಾಲ್ಗೊಳ್ಳುವ ಈ ನುಡಿಜಾತ್ರೆಗೆ ನಾವಿಬ್ಬರೂ ಹೋಗಿ ಬರೋಣ ಎಂಬ ಆಸೆ ನನ್ನದು. ಆದ್ದರಿಂದ ಮುಂಚಿತವಾಗಿ ಈ ಪತ್ರ ಬರೆದು ತಿಳಿಸುತ್ತಿದ್ದೇನೆ. ಬಿಡುವು ಮಾಡಿಕೊಂಡು ನೀನು ಬರಲೇಬೇಕೆಂದು ಈ ಮೂಲಕ ಆಹ್ವಾನಿಸುತ್ತಿದ್ದೇನೆ. ಖಂಡಿತಾ ಬರಬೇಕೆಂದು ಸ್ನೇಹಪೂರ್ವಕವಾಗಿ ಆಗ್ರಹಿಸುತ್ತಿದ್ದೇನೆ. ನಿನ್ನ ಪತ್ರವನ್ನೇ ಎದುರುನೋಡುತ್ತಿರುವೆ.

ವಂದನೆಗಳೊಂದಿಗೆ,

ಇಂತಿ ನಿನ್ನ ಸ್ನೇಹದ

ಅ.ಬ.ಕ

ಇವರಿಗೆ:

ಕ.ಡ.ಬ

ದ್ವಿತೀಯ ಪಿ.ಯು.ಸಿ. ಕಲಾ ವಿಭಾಗ

ವೆಂಕಟೇಶ್ವರ ಪದವಿ ಪೂರ್ವ ಕಾಲೇಜು

ಮಂಡ್ಯ.

೨೧. ನಿಮ್ಮೂರಿನಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೊಂದು ಪತ್ರ ಬರೆಯಿರಿ.

ದಿನಾಂಕ: 21 ಅಕ್ಟೋಬರ್ 2023

ಇವರಿಂದ:

ಅ.ಬ.ಕ

ನಂ. 314, ಸಾಧನಕೇರಿ

ಧಾರವಾಡ

ಇವರಿಗೆ:

ಆಯುಕ್ತರು

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

ಧಾರವಾಡ

ಮಾನ್ಯರೆ,

ವಿಷಯ: ತ್ಯಾಜ್ಯ ವಿಲೇವಾರಿ ಮಾಡುವ ಕುರಿತು.

ಈ ಮೇಲ್ಕಂಡ ವಿಷಯವನ್ನು ಕುರಿತು ನನ್ನ ಮನವಿಯೆಂದರೆ, ಕಳೆದ ಕೆಲವು ತಿಂಗಳಿನಿಂದ ಧಾರವಾಡದ ಸಾಧನಕೇರಿಯಲ್ಲಿ ತ್ಯಾಜ್ಯ ವಿಲೇವಾರಿಯ ಸಮಸ್ಯೆ ಎದುರಾಗಿದ್ದು ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಮನೆಮನೆಯ ಬಾಗಿಲಿಗೆ ಬಂದು ತ್ಯಾಜ್ಯ ಸಂಗ್ರಹಿಸುತ್ತಿದ್ದರೂ, ನಾಗರೀಕರು ಎಲ್ಲೆಂದರಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿಯುವುದು ಮಾಮೂಲಾಗಿದೆ. ಅಲ್ಲದೆ ಮಹಾನಗರ ಪಾಲಿಕೆಯ ಸಿಬ್ಬಂದಿ, ಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ನಮ್ಮ ಬಡಾವಣೆಯ ಸಮೀಪದ ಖಾಲಿ ಜಾಗದಲ್ಲಿ ಸುರಿಯುತ್ತಿರುವುದರಿಂದ ಪ್ರತಿನಿತ್ಯ ಅದರ ದುರ್ವಾಸನೆಯನ್ನು ಸಹಿಸುವುದು ಅಸಾಧ್ಯ ವಾಗಿದೆ. ತಾವು ಈ ಕೂಡಲೇ ಸೂಕ್ತ ಕ್ರಮಕೈಗೊಂಡು ಸರಿಯಾದ ರೀತಿಯ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ವ್ಯವಸ್ಥೆ ಮಾಡಬೇಕೆಂದು ಈ ಮೂಲಕ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇವೆ.

ವಂದನೆಗಳೊಂದಿಗೆ,

ಇಂತಿ ತಮ್ಮ ವಿಶ್ವಾಸಿ

ಅ.ಬ.ಕ

ಸಾಧನಕೇರಿ ನಿವಾಸಿಗಳ ಪರವಾಗಿ

೨೨. ನಿಮ್ಮ ಕಾಲೇಜಿನಲ್ಲಿ ಜರುಗಿದ ಪರಿಸರ ಕೂಟ (ಇಕೋ ಕ್ಲಬ್)ದ ಆರಂಭ ಸಮಾರಂಭದ ಕುರಿತು ನಿಮ್ಮ ಗೆಳೆಯ/ಗೆಳತಿಗೆ ಪತ್ರ ಬರೆಯಿರಿ.

ಬಸವನಹಳ್ಳಿ (ಚಿಕ್ಕಮಗಳೂರು)

ದಿನಾಂಕ: 18 ಜೂನ್ 2023

ಪ್ರಿಯ ಗೆಳತಿ ಕ.ಬ.ಡ.ಳಿಗೆ,

ಇಲ್ಲಿ ನಾನು ಕ್ಷೇಮದಿಂದ ಇದ್ದೇನೆ. ಈ ವರ್ಷದ ಪಠನ – ಪಠ್ಯೇತರ ಚಟುವಟಿಕೆಗಳೆಲ್ಲಾ ಆರಂಭವಾಗಿ ಕಾಲೇಜು ತುಂಬಾ ಕ್ರಿಯಾಶೀಲವಾಗಿದೆ ಎನ್ನಿಸುತ್ತಿದೆ. ಮೊನ್ನೆ ತಾನೇ ನಮ್ಮ ಕಾಲೇಜಿನ ಪರಿಸರ ಕೂಟ (ಇಕೋ ಕ್ಲಬ್) ಉದ್ಘಾಟಿತವಾಯಿತು. ಖ್ಯಾತ ಪರಿಸರತಜ್ಞ ಶ್ರೀ ನಾಗೇಶ ಹೆಗಡೆಯವರು ಈ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ನಮ್ಮ ಈ ಕ್ಲಬ್ಬನ್ನು ಉದ್ಘಾಟಿಸಿದರು. ಪರಿಸರ ಸಂರಕ್ಷಣೆಯಲ್ಲಿ ನಮ್ಮ ಪಾತ್ರವೇನೆಂಬುದನ್ನು ವಿದ್ಯಾರ್ಥಿ ದೆಸೆಯಲ್ಲಿ ಅರಿತುಕೊಳ್ಳಲು ಇಂತಹ ಪರಿಸರ ಕೂಟಿಗಳು ನೆರವಿಗೆ ಬರುತ್ತವೆಂದು ಹೇಳಿದರಲ್ಲದೆ, ಕಾಲೇಜಿನಲ್ಲಿ ಈ ಕೂಟದ ಮೂಲಕ ನಾವು ಮಾಡಬಹುದಾದ ಚಟುವಟಿಕೆಗಳತ್ತ ಗಮನ ಸೆಳೆದರು. ಕಾಲೇಜಿನ ಪ್ರಾಚಾರ್ಯರು ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಪರಿಸರ ಕೂಟದ ಚಟುವಟಿಕೆಗೆ ಬೇಕಾದ ಎಲ್ಲಾ ಬಗೆಯ ನೆರವು ನೀಡುವುದಾಗಿ ಹೇಳಿದರು. ಇದೊಂದು ಅರ್ಥಪೂರ್ಣ ಸಮಾರಂಭವಾಗಿತ್ತು.

ನಿಮ್ಮ ಕಾಲೇಜಿನಲ್ಲೂ ಈ ಬಗೆಯ ಕೂಟವಿದೆಯೆ? ಅಲ್ಲಿ ನಿನ್ನ ಓದು ಹೇಗೆ ಸಾಗಿದೆ? ಎಲ್ಲವನ್ನೂ ನಿನ್ನ ಪತ್ರದಲ್ಲಿ ವಿವರವಾಗಿ ಬರೆದು ತಿಳಿಸು, ನಿರೀಕ್ಷೆಯಲ್ಲಿರುತ್ತೇನೆ.

ಧನ್ಯವಾದಗಳೊಂದಿಗೆ,

ಸ್ನೇಹದ

ಅ.ಬ.ಕ

ಇವರಿಗೆ:

ಕ.ಬ.ಡ.

ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗ

ಸರ್ಕಾರಿ ಪದವಿ ಪೂರ್ವ ಕಾಲೇಜು

ಜಾವಗಲ್, ಹಾಸನ ಜಿಲ್ಲೆ.

೨೩. ನಿಮ್ಮ ಅಣ್ಣನ ಮದುವೆಗೆ ನಾಲ್ಕು ದಿನ ರಜೆ ಕೋರಿ ನಿಮ್ಮ ಪ್ರಾಚಾರ್ಯರಿಗೆ ಪತ್ರವನ್ನು ಬರೆಯಿರಿ.

ದಿನಾಂಕ: ಫೆಬ್ರವರಿ 8, 2024

ಇವರಿಂದ:

ಅ.ಬ.ಕ

ದ್ವಿತೀಯ ಪಿಯುಸಿ ‘ಎ’ ವಿಭಾಗ

ಜ್ಞಾನೋದಯ ಪದವಿ ಪೂರ್ವ ಕಾಲೇಜು

ಶಂಕರಮಠ ರಸ್ತೆ, ಚಾಮರಾಜಪೇಟೆ

ಬೆಂಗಳೂರು-18.

ಇವರಿಗೆ:

ಪ್ರಾಚಾರ್ಯರು

ಜ್ಞಾನೋದಯ ಪದವಿ ಪೂರ್ವ ಕಾಲೇಜು

ಶಂಕರಮಠ ರಸ್ತೆ, ಚಾಮರಾಜಪೇಟೆ

ಬೆಂಗಳೂರು-18.

ಮಾನ್ಯರೆ,

ವಿಷಯ: ಅಣ್ಣನ ಮದುವೆಗೆ ರಜೆ ಕೋರಿ ಪತ್ರ.

ಈ ಮೇಲ್ಕಂಡ ವಿಷಯವನ್ನು ಕುರಿತು ನನ್ನ ಮನವಿಯೆಂದರೆ, ನಮ್ಮ ಅಣ್ಣನ ಮದುವೆಯು 14 ಫೆಬ್ರವರಿ, 2024ರಂದು ಹಾಸನದಲ್ಲಿ ನಡೆಯಲಿದೆ. ನಮ್ಮ ಕುಟುಂಬವು ಈ ಸಮಾರಂಭಕ್ಕೆ ತೆರಳಬೇಕಿರುವುದರಿಂದ ತಾವು ದಯಮಾಡಿ 12-02-24 ರಿಂದ 15-02-24ರ ವರೆಗೆ ನಾಲ್ಕು ದಿನಗಳ ಕಾಲ ರಜೆ ನೀಡಿ ಉಪಕರಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಆಹ್ವಾನ ಪತ್ರಿಕೆಯನ್ನು ತಮ್ಮ ಅವಗಾಹನೆಗಾಗಿ ಈ ಪತ್ರದೊಂದಿಗಿರಿಸಿದ್ದೇನೆ.

ಧನ್ಯವಾದಗಳೊಂದಿಗೆ,

ತಮ್ಮ ವಿಧೇಯ ವಿದ್ಯಾರ್ಥಿ

ಅ.ಬ.ಕ

೨೪. ಶಿಕ್ಷಕರ ದಿನಾಚರಣೆಯ ಮಹತ್ವ ಕುರಿತು ಗೆಳೆಯ/ಗೆಳತಿಗೊಂದು ಪತ್ರ ಬರೆಯಿರಿ.

ಅಥವಾ

ನಿಮ್ಮ ಕಾಲೇಜಿನಲ್ಲಿ ಆಚರಿಸಿದ ಶಿಕ್ಷಕರ ದಿನಾಚರಣೆ ಕುರಿತು ಗೆಳೆಯ/ಗೆಳತಿಗೆ ಪತ್ರ ಬರೆಯಿರಿ.

ಸಾಗರ

ದಿನಾಂಕ: 12 ಸೆಪ್ಟೆಂಬರ್ 2023

ಪ್ರೀತಿಯ ಗೆಳೆಯನಾದ ಕ.ಬ.ಡ.ನಿಗೆ ಅ.ಬ.ಕ. ಮಾಡುವ ಸಸ್ನೇಹ ಪ್ರಣಾಮಗಳು.

ನಿಮ್ಮ ಮನೆಯಲ್ಲಿ ಎಲ್ಲರೂ ಆರೋಗ್ಯವೆಂದು ಭಾವಿಸಿದ್ದೇನೆ. ಇಲ್ಲಿ ನಾವೆಲ್ಲರೂ ಕ್ಷೇಮ. ನಿನ್ನ ಓದು ಹೇಗೆ ನಡೆದಿದೆ? ಇತ್ತೀಚೆಗೆ ನಿನ್ನಿಂದ ಪತ್ರವೇ ಇಲ್ಲ. ಬಹುಶಃ ಓದಿನಲ್ಲಿ ಮಗ್ನನಾಗಿದ್ದೀ ಎಂದು ತೋರುತ್ತದೆ. ನಾನೂ ಪ್ರತಿದಿನ ಅಂದಿನ ಪಾಠವನ್ನು ಓದಿಕೊಳ್ಳುತ್ತಿದ್ದೇನೆ.

ಇದೇ ತಿಂಗಳ 5ನೇ ತಾರೀಖಿನಂದು ನಮ್ಮ ಕಾಲೇಜಿನಲ್ಲಿ ನಾವು, ಎಂದರೆ ವಿದ್ಯಾರ್ಥಿಗಳು, ‘ಶಿಕ್ಷಕರ ದಿನಾಚರಣೆ’ಯನ್ನು ಸಡಗರದಿಂದ ಆಚರಿಸಿದೆವು. ಅಂದು ನಮ್ಮೆಲ್ಲ ಅಧ್ಯಾಪಕರನ್ನು ವೇದಿಕೆಯ ಮೇಲೆ ಕೂಡಿಸಿ ಹಾರ, ಶಾಲು ಹಾಗೂ ಸ್ಮರಣಿಕೆಗಳೊಂದಿಗೆ ಗೌರವಿಸಿದೆವು, ಅಂದು ನಾನು ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಕುರಿತು ಮಾತನಾಡಿದೆ. ಅದರ ಒಂದೆರಡು ಪ್ರಮುಖ ಅಂಶಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಬಯಸುತ್ತೇನೆ.

ಪ್ರತಿವರ್ಷ ಸೆಪ್ಟೆಂಬರ್ 5ರಂದು ನಮ್ಮ ದೇಶದಾದ್ಯಂತ ‘ಶಿಕ್ಷಕರ ದಿನಾಚರಣೆ’ಯನ್ನು ಆಚರಿಸಲಾಗುತ್ತದೆ. ಅಂದು ಭಾರತದ ಎರಡನೆಯ ರಾಷ್ಟ್ರಪತಿಗಳಾಗಿದ್ದ ಡಾ॥ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ. ಅವರೊಬ್ಬ ಮಹಾನ್ ಶಿಕ್ಷಕರಾಗಿದ್ದರು. 1960ರ ದಶಕದಲ್ಲಿ ಅವರ ಸ್ನೇಹಿತರು, ಹಿತೈಷಿಗಳು ಹಾಗೂ ಅಭಿಮಾನಿಗಳು ಅವರ ಜನ್ಮದಿನವನ್ನು ಆಚರಿಸಲು ಅನುಮತಿ ಕೋರಿದಾಗ ಅವರು “ನನ್ನ ಜನ್ಮದಿನವನ್ನು ನೀವೆಲ್ಲ ಶಿಕ್ಷಕರ ದಿನಾಚರಣೆ ಎಂದು ಆಚರಿಸಿದರೆ ನನಗೆ ಸಂತಸವಾಗು ಇದೆ” ಎಂದರಂತೆ. ಹಾಗಾಗಿ 1967ರಿಂದ ರಾಧಾಕೃಷ್ಣನ್‌ರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

ಸಮಾಜ ನಿರ್ಮಾಣದ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಪ್ರಾಥಮಿಕ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೆ ಎಲ್ಲ ಹಂತಗಳಲ್ಲಿಯೂ ವಿದ್ಯಾರ್ಥಿಗಳ ಜೀವನವನ್ನು ಶಿಕ್ಷಕರು ರೂಪಿಸುತ್ತಾರೆ. ಹಾಗಾಗಿಯೇ ಶಿಕ್ಷಕರ ವೃತ್ತಿಯನ್ನು ‘ಅತ್ಯಂತ ಪವಿತ್ರವಾದ ವೃತ್ತಿ’ ಎಂದು ಪರಿಗಣಿಸಲಾಗುತ್ತದೆ. ನಮ್ಮ ಬಾಳನ್ನು ರೂಪಿಸಿದ ಎಲ್ಲ ಶಿಕ್ಷಕ ವರ್ಗದವರಿಗೆ ಕೃತಜ್ಞತೆಗಳನ್ನು ಸಲ್ಲಿಸುವ ಸಲುವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಂದು ಶಿಕ್ಷಕರಿಗಾಗಿಯೇ ಆಟೋಟಗಳು, ಸನ್ಮಾನ ಸಮಾರಂಭಗಳು ಮುಂತಾದವುಗಳನ್ನು ಆಯೋಜಿಸಲಾಗುತ್ತದೆ. ನಿಮ್ಮ ಕಾಲೇಜಿನಲ್ಲಿ ಈ ಆಚರಣೆ ಹೇಗೆ ನಡೆಯಿತು ಎಂಬುದನ್ನು ನಿನ್ನ ಪತ್ರದಲ್ಲಿ ವಿವರಿಸು. ಮನೆಯಲ್ಲಿ ಎಲ್ಲರಿಗೂ ನನ್ನ ಸವಿನೆನಪುಗಳನ್ನು ತಿಳಿಸು.

ಇಂತಿ ಸಸ್ನೇಹ ಪ್ರಣಾಮಗಳೊಡನೆ

ಅ.ಬ.ಕ

ಇವರಿಗೆ:

ಕ.ಬ.ಡ

ದ್ವಿತೀಯ ಪಿಯುಸಿ, ʼಎʼ ವಿಭಾಗ

ಕೆಂಪೇಗೌಡ ಪದವಿ ಪೂರ್ವ ಕಾಲೇಜು,

ಆರ್.‌ ವಿ. ನಗರ, ದಾವಣಗೆರೆ.

೨೫. ಮನೆಯಲ್ಲೇ ಕುಳಿತು ವಿಡಿಯೋ ಪಾಠ (ಆನ್ ಲೈನ್ ಪಾಠ) ನೋಡಿದ ಅನುಭವದ ಕುರಿತು ಗೆಳತಿ/ಗೆಳೆಯನಿಗೊಂದು ಪತ್ರ ಬರೆಯಿರಿ.

ಆನಂದ ನಗರ, ಬೆಳಗಾವಿ

ದಿನಾಂಕ: 12 ನವೆಂಬರ್ 2023

ಪ್ರೀತಿಯ ಕ.ಬ.ಡ.ನಿಗೆ,

ಸಪ್ರೇಮ ವಂದನೆಗಳು. ನೀನು ಹೇಗಿದ್ದೀ? ಮನೆಯಲ್ಲಿ ಎಲ್ಲರೂ ಆರೋಗ್ಯವೆಂದು ಭಾವಿಸಿದ್ದೇನೆ. ನಮ್ಮ ಮನೆಯಲ್ಲಿಯೂ ಎಲ್ಲರೂ ಕ್ಷೇಮ.

ಆಗಸ್ಟ್ ತಿಂಗಳ 16ನೇ ತಾರೀಖಿನಿಂದ ನಮ್ಮ ಕಾಲೇಜಿನಲ್ಲಿ ಆನ್‌ಲೈನ್ ತರಗತಿಗಳನ್ನು ಆರಂಭ ಮಾಡಿದ್ದಾರೆ. ಅಧ್ಯಾಪಕರು ತಮ್ಮ ಮನೆಗಳಲ್ಲಿ ಕುಳಿತೇ ಮೊಬೈಲ್ ಫೋನ್ ಅಥವಾ ಲ್ಯಾಪ್‌ ಟಾಪನ್ನು ಬಳಸಿ ಪಾಠ-ಪ್ರವಚನಗಳನ್ನು ಮಾಡುತ್ತಿದ್ದಾರೆ. ನಾನು ನನ್ನ ಅಣ್ಣನ ಮೊಬೈಲನ್ನು ಬಳಸಿಕೊಂಡು ಈ ತರಗತಿಗಳಿಗೆ ಹಾಜರಾಗುತ್ತಿದ್ದೇನೆ. ಇಷ್ಟು ವರ್ಷಗಳಿಂದ ತರಗತಿಗಳಲ್ಲಿ ಕುಳಿತು ಪಾಠ ಕಲಿಯುತ್ತಿದ್ದ ನಮಗೆ ಇದು ಹೊಸ ಅನುಭವ. ಸ್ನೇಹಿತರೊಂದಿಗೆ ಬೆರೆಯುವ, ಅನುಮಾನ ಬಂದರೆ ಚರ್ಚಿಸುವ, ಬೇಸರವಾದರೆ ಹರಟೆ ಹೊಡೆಯುವ ಯಾವ ಅವಕಾಶವೂ ಇಲ್ಲ! ಅಧ್ಯಾಪಕರು ಎಷ್ಟೇ ಚೆನ್ನಾಗಿ ಪಾಠ ಮಾಡಿದರೂ ಏನೋ ಕೊರತೆ ಎನಿಸುತ್ತಿದೆ. ಕೆಲವೊಮ್ಮೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಪಾಠ ಸರಿಯಾಗಿ ಕೇಳಿಸುವುದಿಲ್ಲ. ನಿಜಕ್ಕೂ ತರಗತಿಗಳಲ್ಲಿ ಕುಳಿತು ಪಾಠ ಕೇಳುವ ಅನುಭವಕ್ಕೆ ಯಾವ ರೀತಿಯಲ್ಲಿಯೂ ಈ ಆನ್‌ಲೈನ್ ಪಾಠ ಸರಿದೂಗಲಾರದು. ಆದರೂ ವಿಧಿಯಿಲ್ಲ. ಪರಿಸ್ಥಿತಿಯ ಒತ್ತಡದಿಂದಾಗಿ ಈ ರೀತಿಯ ಕಲಿಕೆ ಅನಿವಾರ್ಯವಾಗಿದೆ.

ನಿಮ್ಮಲ್ಲೂ ಆನ್‌ಲೈನ್ ತರಗತಿಗಳು ಆರಂಭವಾಗಿದೆಯೆಂದು ಭಾವಿಸಿದ್ದೇನೆ. ನಿನ್ನ ಅನುಭವಗಳನ್ನು ಬರೆದು ತಿಳಿಸು. ಹಿರಿಯರೆಲ್ಲರಿಗೆ ನನ್ನ ನಮಸ್ಕಾರಗಳು.

ನಿನ್ನ ಪ್ರೀತಿಯ

ಅ.ಬ.ಕ

ಇವರಿಗೆ:

ಕ.ಬ.ಡ.

ದ್ವಿತೀಯ ಪಿಯುಸಿ ‘ಸಿ’ ವಿಭಾಗ,

ಜ್ಞಾನದೇಗುಲ ಪದವಿಪೂರ್ವ ಕಾಲೇಜು,

ವಿಠೋಬ ನಗರ, ಗದಗ.

೨೬. ನಿಮ್ಮ ಪ್ರದೇಶದ ಬರಗಾಲವನ್ನು ವಿವರಿಸಿ ಬರಪರಿಹಾರ ನೀಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೊಂದು ಪತ್ರ ಬರೆಯಿರಿ.

ದಿನಾಂಕ: 31 ಮಾರ್ಚ್ 2024

ಇವರಿಂದ:

ಅ.ಬ.ಕ

ಮೂಗೂರು

ಟಿ. ನರಸೀಪುರ ತಾ.

ಮೈಸೂರು ಜಿಲ್ಲೆ.

ಇವರಿಗೆ:

ಜಿಲ್ಲಾಧಿಕಾರಿಗಳು

ಮೈಸೂರು ಜಿಲ್ಲೆ

ಮೈಸೂರು,

ಮಾನ್ಯರೆ,

ವಿಷಯ: ಬರಗಾಲದ ವಿವರ ನೀಡುವ ಕುರಿತು.

ಈ ಮೇಲ್ಕಂಡ ವಿಷಯವನ್ನು ಕುರಿತು. ಈ ವರ್ಷ ನಮ್ಮ ತಾಲ್ಲೂಕಿನಲ್ಲಿ ವಾಡಿಕೆಯಷ್ಟು ಮಳೆಬಾರದ ವಿಷಯ ತಮಗೆ ತಿಳಿದಿದೆಯೆಂದು ಭಾವಿಸುತ್ತೇನೆ. ಇದರ ಪರಿಣಾಮ ಹತ್ತು ಹಲವು ಬಗೆಯದಾಗಿದ್ದು ಬೆಳೆ ಕೈಗೆ ಹತ್ತದೆ ರೈತರು ಕಂಗಾಲಾಗಿದ್ದಾರೆ. ಕೆರೆಗಳೆಲ್ಲಾ ಬತ್ತಿಹೋಗಿ ನೀರಿಗೆ ಪರದಾಡುವಂತಾಗಿದೆ. ಕೆಲಸ ಸಿಗದೆ ಕೂಲಿ ಕಾರ್ಮಿಕರು ಪರಿತಪಿಸುತ್ತಿದ್ದಾರೆ. ಈ ಎಲ್ಲ ವಿಚಾರಗಳೂ ಗಂಭೀರವಾಗಿ ಪರಿಗಣಿಸಿ ತಾವು ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಲು ಪ್ರಯತ್ನಿಸಬೇಕೆಂದೂ, ಒಮ್ಮೆ ‘ಖುದ್ದಾಗಿ ಬಂದು ನಮ್ಮ ತಾಲ್ಲೂಕಿನ ಬರಗಾಲ ಪರಿಸ್ಥಿತಿಯನ್ನು ಪರಿಶೀಲಿಸಬೇಕೆಂದೂ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸದ

ಅ.ಬ.ಕ

(ಗ್ರಾಮಸ್ಥರ ಪರವಾಗಿ)

Leave a Comment