ದ್ವಿತೀಯ ಪಿಯುಸಿ ಕನ್ನಡ ಗಾದೆ ವಿಸ್ತರಣೆ, 2nd Puc Kannada Gaade Vistarane 2nd Puc Kannada Grammer 2nd puc kannada gaade vistarane in kannada 2nd puc kannada gaade vistarane in kannada pdf download ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ pdf Gadegalu in kannada with explanation Kannada gadegalu pdf gadegalu in kannada with explanation ಗಾದೆ ಮಾತುಗಳು 50 ಗಾದೆಗಳು ವಿವರಣೆ ಗಾದೆ ಮಾತುಗಳ ಅರ್ಥ gadhe mathugalu in kannada 2nd puc kannada important gadegalu2nd puc kannada gade mathu important questions
೧೨. ಗಾದೆ ವಿಸ್ತರಣೆ

೧. ಹಾಸಿಗೆ ಇದ್ದಷ್ಟು ಕಾಲು ಚಾಚು.
ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಮಿತಿಯನ್ನು ಅರಿತು ಬಾಳು’ ಎಂಬ ಉಪದೇಶವನ್ನು ನೀಡುತ್ತದೆ. “ಆಸೆಯೇ ದುಃಖಕ್ಕೆ ಕಾರಣ’ ಎನ್ನುವ ಮಾತನ್ನೂ ಆಸೆಯೇ ಪ್ರಗತಿಗೆ ಮೂಲ’ ಎನ್ನುವ ಮಾತನ್ನೂ ನಾವು ಕೇಳಿದ್ದೇವೆ. ಇವೆರಡೂ ಪರಸ್ಪರ ವಿರುದ್ಧವಾಗಿ ಕಂಡರೂ, ಈ ಎರಡನ್ನೂ ಹೊಂದಿಸಿ, “ಆಸೆಯಿರಬೇಕು, ಆಸೆಗೆ ಮಿತಿಯಿರಬೇಕು” ಎಂದು ಹೇಳಬಹುದು. ಯಾವುದೇ ಕೆಲಸಕ್ಕೆ ಕೈ ಹಾಕಬೇಕಾದರೂ ನಮ್ಮ ಶಕ್ತಿ ಸಾಮರ್ಥ್ಯ, ಸೌಕರ್ಯಗಳನ್ನು ಗಮನಿಸಬೇಕು. ಶಕ್ತಿ ಮೀರಿ ಕೈ ಚಾಚುವುದಕ್ಕೆ ಹೋದರೆ ಅಥವಾ ಹಾಸಿಗೆಯನ್ನು ಮೀರಿ ಕಾಲು ಚಾಚಿದರೆ ಅಪಾಯ, ತೊಂದರೆ ತಪ್ಪಿದ್ದಲ್ಲ.
ಒಬ್ಬ ಬಡವ ತನ್ನ ಹೊಲ, ಗದ್ದೆ, ಮನೆ ಎಲ್ಲವನ್ನೂ ಮಾರಿ ಸಂಭ್ರಮದಿಂದ ತನ್ನ ಮಗಳ ಮದುವೆ ಮಾಡಲು ಸಿದ್ಧನಿದ್ದ. ಅವನ ಹಿತ್ಯಷಿಯೊಬ್ಬನು “ಹೀಗೆಲ್ಲಾ ಮಾಡಬೇಡ, ಇದ್ದಬದ್ದುದನ್ನೆಲ್ಲಾ ಮಾರಿ, ಮದುವೆ ಮಾಡಬೇಡ, ನಿನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೇ ಖರ್ಚು ಮಾಡು ಶಕ್ತಿಮೀರಿ ಖರ್ಚು ಬೇಡ, ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂದು ಹಿತನುಡಿದನು. ಹಾಗೆಯೇ ನಡೆದ ಬಡವ ಮುಂದೆ ಜೀವನದಲ್ಲಿ ಕಷ್ಟಪಡಲಿಲ್ಲ, ಈ ಮಾತು ಎಲ್ಲರಿಗೂ ಅನ್ವಯಿಸುವುದು.
೨. ಕೂತು ಉಂಡರೆ ಕುಡಿಕೆ ಹೊನ್ನು ಸಾಲದು.
ಸೋಮಾರಿಗಳಾಗಿರುವುದೇ ದಾರಿದ್ರ್ಯಕ್ಕೆ ಅವಕಾಶ ಮಾಡಿಕೊಟ್ಟಂತೆ, ಅಲಸ್ಯವೇ ಬಡತನಕ್ಕೆ ಕಾರಣ ಎನ್ನುವುದನ್ನು ‘ಕೂತು ಉಂಡರೆ, ಕುಡಿಕೆ ಹೊನ್ನು ಸಾಲದು ಗಾದೆ ಸಮರ್ಥಿಸುತ್ತದೆ.
ಹಿರಿಯರು ಮಾಡಿಟ್ಟ ಆಸ್ತಿ ಇದೆ, ಹಣವಿದೆ ಎಂದು ಯಾವ ಕೆಲಸವನ್ನು ಮಾಡದೆ ಸುಖೋಪಭೋಗದಲ್ಲಿ ತೊಡಗಿದರೆ ಅಸ್ತಿ, ಹಣ ಬಹಳ ಬೇಗ ಕರಗಿ ಹೋಗುತ್ತದೆ. ಹಣವನ್ನು ಹಾಳು ಮಾಡಲು ಹಲವು ಮಾರ್ಗಗಳಿವೆ. ಹಾಗೆ ಹಾಳು ಮಾಡುವವನಿಗೆ ದಾರಿತಪ್ಪಿಸಲು ಸಿಹಿಗೆ ನೊಣಗಳು ಮುತ್ತುವಂತೆ ಹಲವರು ಸ್ನೇಹಿತರಾಗುತ್ತಾರೆ. ಅವನೊಂದಿಗೆ ಅವರೂ ಸುಖಿಸುತ್ತಾರೆ. ವೆಚ್ಚಮಾಡಲು ಅವನಲ್ಲಿ ಕಾಸಿಲ್ಲದಂತಾದಾಗ ಅವರೆಲ್ಲರೂ ಕಣ್ಮರೆಯಾಗುತ್ತಾರೆ. ಸಿರಿವಂತ ಭಿಕಾರಿಯಾಗಿರುತ್ತಾನೆ. ಹಣವು ‘ಹತ್ತು ನಿನ್ನಿಂದ ಮತ್ತೆ ನನ್ನಿಂದ’ ಎನ್ನುವುದಂತೆ ಕಣಕಣದಂತೆ ವಿದ್ಯೆಯನ್ನೂ ಹಣವನ್ನೂ ಕ್ಷಣಕ್ಷಣವೂ ಗಳಿಸಬೇಕೆಂಬ ಮಾತು ಸುಭಾಷಿತದಲ್ಲಿದೆ ಕೂಡಿಟ್ಟ ಹೊನ್ನನ್ನು ಕರಗಿಸುವ ಬದಲು ಅದಕ್ಕೆ ಮತ್ತಷ್ಟನ್ನು ಸೇರಿಸಲು ಪ್ರಯತ್ನಿಸಬೇಕು. ಸೋಮಾರಿಯಾಗದೇ ದುಡಿಮೆಯ ಯಾವುದಾದರೂ ಒಂದು ದಾರಿಯನ್ನು ಕಂಡುಕೊಳ್ಳಬೇಕು. ಆ ಮೂಲಕ ಸ್ವಹಿತ ಪರಹಿತ ಹಾಗೂ ದೇಶದ ಹಿತವನ್ನು ಕಾಣಬೇಕು ಎಂದು ಈ ಗಾದೆಯು ಎಚ್ಚರಿಸುತ್ತದೆ.
೩. ದೇಶ ಸುತ್ತಬೇಕು, ಕೋಶ ಓದಬೇಕು.
ಇದು ಒಂದು ಗಾದೆ ಮಾತು ಗಾದೆಗಳನ್ನು ಜೀವನಾನುಭವದ ಸಾರವೆನ್ನುತ್ತಾರೆ. ಈ ಗಾದೆಯು ಆ ಹೇಳಿಕೆಯನ್ನು ಸಮರ್ಥಿಸುವಂತಿದೆ. ಜ್ಞಾನವನ್ನು ಗಳಿಸಬೇಕೆಂದಿರುವವನು ಪುಸ್ತಕಗಳನ್ನು ಓದಿದರಷ್ಟೇ ಸಾಲದು. ಹಲವು ದೇಶಗಳನ್ನು ಸುತ್ತಬೇಕು. ಬೇರೆ ಬೇರೆ ಜನರ ಸಂಪರ್ಕಮಾಡಬೇಕು. ಅವರ ಆಚಾರ, ವ್ಯವಹಾರ, ಆಹಾರ, ಅಭ್ಯಾಸಾದಿಗಳನ್ನು ತಿಳಿಯಲು ಪ್ರಯತ್ನಿಸಬೇಕು. ಆಯಾ ಪ್ರದೇಶಗಳ ಪ್ರಾಕೃತಿಕ ಸಂಪತ್ತು, ಮಳೆ, ಬೆಳೆ, ಹವಾಗುಣ, ಜನಜೀವನದ ರೀತಿನೀತಿಗಳನ್ನು ಅಭ್ಯಸಿಸಬೇಕು. ಆಯಾ ದೇಶಗಳ ಪ್ರದೇಶ ಪರಿಚಯ, ಇತಿಹಾಸಗಳ ಓದುವಿಕೆಯೊಂದಿಗೆ, ಇಂತಹ ಸುತ್ತಾಟ ಮಾಡುವುದರಿಂದ ಕಲಿಕೆಗೆ ಉತ್ತಮ ತಳಹದಿ ಲಭಿಸುತ್ತದೆ. ಅದಕ್ಕಾಗಿ ದೇಶ ಸುತ್ತಬೇಕು.
ಅದರಂತೆಯೇ ನಮ್ಮ ಶಬ್ದ ಸಂಪತ್ತನ್ನು, ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಕೋಶಗಳನ್ನು ಓದಿ ಅರ್ಥಮಾಡಿಕೊಳ್ಳ ಬೇಕು. ಅದು ಶಬ್ದಕೋಶ (ನಿಘಂಟು) ಆಗಬಹುದು, ಇಲ್ಲವೇ ವಿಶ್ವಕೋಶ ಆಗಬಹುದು. ಅವುಗಳ ಓದುವಿಕೆಯಿಂದ ನಮ್ಮ ಜ್ಞಾನಾಭಿವೃದ್ಧಿಯಾಗುತ್ತದೆ. ಹೀಗಾಗಿ ಇದೊಂದು ಮಾರ್ಗದರ್ಶಕ ಗಾದೆಯಾಗಿದೆ.
೪. ಅಜ್ಜಿ ಇಲ್ಲದ ಮನೆ, ಮಜ್ಜಿಗೆ ಇಲ್ಲದ ಊಟ.
ಇದೊಂದು ಒಳ್ಳೆಯ ಗಾದೆ ಮಾತು. ಅಜ್ಜಿ ಮತ್ತು ಮಜ್ಜಿಗೆಯ ಮಹತ್ತ್ವವನ್ನು ಹೇಳುವಂತಹದ್ದು ‘ಅಜ್ಜಿ’ ಎಲ್ಲರಿಗೂ ಪ್ರಿಯಳಾದವಳು ಮನೆಯಲ್ಲಿ ತಂದೆಯ ತಾಯಿಯಾಗಲಿ, ತಾಯಿಯ ತಾಯಿಯಾಗಲಿ ಇದ್ದರೆ ಆ ಮನೆಯ ಸೊಗಸೇ ಬೇರೆ. ಆಕೆ ಮೊಮ್ಮಕ್ಕಳಲ್ಲಿ ಅಕ್ಕರೆ ತೋರುತ್ತಾಳೆ. ಪ್ರತಿ ಸಂದರ್ಭದಲ್ಲಿಯೂ ತನ್ನ ಬದುಕಿನ ಅನುಭವದ ಗಣಿಯಿಂದ ಹಕ್ಕಿ ತೆಗೆದ ಬುದ್ಧಿಮಾತುಗಳಿಂದ ಮನೆಯವರನ್ನು ಪೊರೆಯುತ್ತಾಳೆ. ತನ್ನ ಮಕ್ಕಳ, ಮೊಮ್ಮಕ್ಕಳ ಒಳಿತನ್ನು ಬಯಸುವ ಆಕೆ ಮಮತಾಮಯಿಯಾಗಿರುತ್ತಾಳೆ. ಮೊಮ್ಮಕ್ಕಳ ಪಾಲಿಗಂತೂ ಆಕೆ ಕಥೆ-ಹಾಡುಗಳ ಗಣಿ. ಆದ್ದರಿಂದಲೇ ಸರ್ವಜ್ಞ ಕವಿಯೂ ಕೂಡ ‘ಮನೆಗೊಬ್ಬ ಅಜ್ಜಿ ಲೇಸು’ ಎಂದಿರುವನು.
ಇದೇ ರೀತಿಯಲ್ಲಿ ಊಟಕ್ಕೆ ಮಜ್ಜಿಗೆ ಇಲ್ಲದಿದ್ದರೆ ಸೊಗಸಿರುವುದಿಲ್ಲ. ಕ್ಷೀರೋತ್ಪನ್ನವಾದ ಮಜ್ಜಿಗೆಯಲ್ಲಿ ದೇಹವನ್ನು ತಂಪಾಗಿಸುವ ಗುಣವಿದೆ. ಅಲ್ಲದೆ ಮಜ್ಜಿಗೆಯಲ್ಲಿ ಪ್ರತ್ಯಾಮ್ಮಿಯ ಗುಣವಿರುವುದರಿಂದ ದೇಹದ ಆಮ್ಲತೆಯನ್ನು ಕಡಿಮೆ ಮಾಡಿ ನಮ್ಮ ಗ್ಯಾಸ್ಟ್ರಬಲ್ ಸಮಸ್ಯೆಯನ್ನು ನಿವಾರಿಸುತ್ತದೆ. ಆದ್ದರಿಂದಲೇ ಊಟದಲ್ಲಿ ಮಜ್ಜಿಗೆಯನ್ನು ಕಡ್ಡಾಯವಾಗಿಸಿದ್ದಾರೆ. ತಿಳಿದವರು. ಏನೆಲ್ಲ ಭಕ್ಷ್ಯಭೋಜ್ಯಗಳಿದ್ದರೂ ಕೊನೆಯಲ್ಲಿ ಸ್ವಲ್ಪ ಮಜ್ಜಿಗೆ ಅನ್ನ ತಿಂದರೆ ಊಟ ಪೂರ್ಣಗೊಂಡಂತೆ, ಅದೇ ರೀತಿ ಮನೆಯಲ್ಲಿ ಏನಿರಲಿ ಬಿಡಲಿ ಒಬ್ಬ ಅಜ್ಜಿ ಇರಬೇಕು. ಅಜ್ಜಿ ಇಲ್ಲದ ಮನೆ, ಮಜ್ಜಿಗೆ ಇಲ್ಲದ ಊಟ ಎರಡೂ ಅಪರಿಪೂರ್ಣ ವೆಂಬುದನ್ನು ಈ ಗಾದೆ ಮಾತು ವಿವರಿಸಿ ಹೇಳಿದೆ.
೫. ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಸಾಲದು.
ಗಾದೆಗಳು ಜಾನಪದದ ಅನುಭವದ ಮೂಸೆಯಲ್ಲಿ ಮೂಡಿದ ರಸಗಟ್ಟಿಗಳು ಅಲ್ಲ ವಿಷಯಕ್ಕಾಗಿ ಕಳೆದುಕೊಂಡ ಮಾನವನ್ನು ಆನೆಯಂಥ ಬೃಹತ್ ಗಾತ್ರ ಬಳುವಳಿ ನೀಡಿದರೂ, ಮರಳಿ ಪಡೆಯಲಾಗದು ಎಂಬುದೇ ಪ್ರಸ್ತುತ ಗಾದೆಮಾತಿನ ಅರ್ಥವಾಗಿದೆ.
ಒಮ್ಮೆ ರಾಮಣ್ಣನೆಂಬ ಸಭ್ಯ ಗೃಹಸ್ಥ ತನ್ನ ಗೃಹಕೃತ್ಯದ ವೆಚ್ಚಕ್ಕಾಗಿ ಸ್ವಲ್ಪ ಹಣವನ್ನು ಆ ಊರಿನ ಶ್ರೀಮಂತನಲ್ಲಿ ಸಾಲವಾಗಿ ಪಡೆಯುತ್ತಾನೆ. ಅದನ್ನು ಹಿಂತಿರುಗಿಸುವುದಕ್ಕೆ ಸಾಧ್ಯವಾಗದೆ ಹೋದಾಗ ಶ್ರೀಮಂತನು ಆತನ ಆಸ್ತಿಯನ್ನು ಹರಾಜು ಹಾಕಿಸುತ್ತಾನೆ. ಬಂದ ಹಣದಿಂದ ಅಸಲು ಬಡ್ಡಿಯನ್ನು ತನ್ನದಾಗಿಸಿಕೊಳ್ಳುತ್ತಾನೆ. ಆದರೆ ರಾಮಣ್ಣ ಅವಮಾನವನ್ನು ತಾಳಲಾರದೆ ತುಂಬ ನೊಂದುಕೊಳ್ಳುತ್ತಾನೆ. ಆ ಊರನ್ನೇ ಬಿಟ್ಟುಬಿಡುವ ಪ್ರಯತ್ನ ಮಾಡುತ್ತಾನೆ. ಆಗ ಶ್ರೀಮಂತನು ಬಂದು ರಾಮಣ್ಣನಲ್ಲಿ ಕಳಕಳಿಯಿಂದ ಬೇಡಿಕೊಳ್ಳುತ್ತಾನೆ. ಆತನ ಆಸ್ತಿಯನ್ನೆಲ್ಲ ಹಿಂತಿರುಗಿಸುವುದಾಗಿ ಹೇಳುತ್ತಾನೆ. ಆದರೆ, ಮಾನವಂತನಾದ ರಾಮಣ್ಣನು ಅದೇ ಊರಿನಲ್ಲಿ ತಲೆಯೆತ್ತಿ ತಿರುಗಾಡಲಾಗದೆ ಊರನ್ನು ಬಿಟ್ಟು ಹೋಗುತ್ತಾನೆ. ಹೀಗೆ ಅಡಕೆಗೆ – ಚಿಕ್ಕ ಕಾರಣಕ್ಕೆ ಹೋದ ಮಾನ ಆನೆ ಕೊಟ್ಟರೂ ಆನಂತರ ಎಷ್ಟು ಬಹುಮಾನ ನೀಡಿದರೂ ಬಾರದು ಎಂಬುದು ವಿದಿತವಾಗುತ್ತದೆ.
೬. ಆಳಾಗಿ ದುಡಿ, ಅರಸಾಗಿ ಉಣ್ಣು
ಗಾದೆಗಳು ಗ್ರಾಮೀಣ ಜನರ ಅನುಭವದ ದಾರಿದೀಪಗಳು, ಯಾರು ಆಳು ಮಾಡುವ ಕೆಲಸವನ್ನು ಬಲ್ಲನೋ ಆತನು ಅರಸಾಗಿ ಯಶಸ್ವಿಯಾಗಿ ದುಡಿಯಬಲ್ಲನು ಮತ್ತು ಉತ್ತಮಫಲ ಅನುಭವಿಸಬಲ್ಲನು ಎಂಬುದು ಈ ಗಾದೆಯ ಮಾತಿನ ಅರ್ಥವೆನಿಸಿದೆ.
‘ಶ್ರಮ ಏವ ಜಯತೆ’ ಎಂಬ ಹೇಳಿಕೆಯಂತೆ ರೈತನಾದವನು ವರ್ಷದ ಪ್ರಾರಂಭದಿಂದಲೇ ನಿರಂತರವಾಗಿ ವ್ಯವಸಾಯದ ಕೆಲಸವನ್ನು ಆಳಿನಂತೆ ದುಡಿಯುತ್ತಾ ಬಂದು, ಕಾಲಕಾಲಕ್ಕೆ ಬೆಳೆಯ ನಡುವಿನ ಕಳೆಯನ್ನು ತೆಗೆದು, ಉತ್ತಮ ಗೊಬ್ಬರವನ್ನು ನೀಡುತ್ತಾ, ಅವಶ್ಯಕತೆ ಇದ್ದಲ್ಲಿ ಕ್ರಿಮಿನಾಶಕಗಳನ್ನು ಸಿಂಪಡಿಸುತ್ತಾ ವರ್ಷವಿಡೀ ದುಡಿಯುತ್ತಾ ಬಂದರೆ ಆತನಿಗೆ ವರ್ಷದ ಕೊನೆಯಲ್ಲಿ ಉತ್ತಮ ಫಸಲು ಕೈಗೆಟುಕುವುದು. ಆಗ ಆತನು ಧಾನ್ಯವನ್ನು ಮುಂದಿನ ವರ್ಷವಿಡೀ ತನ್ನ ಕುಟುಂಬದ ನಿರ್ವಹಣೆಗೆ ಬಳಸಬಲ್ಲ. ತಾನೂ ಸುಖವಾಗಿ ಉಣಬಲ್ಲ ಮತ್ತು ತನ್ನವರಿಗೂ ಸುಖವಾಗಿ ಉಣಿಸಿ ನೀಡಬಲ್ಲ ಹಾಗೂ ಸಂತೋಷದ ಜೀವನ ನಡೆಸಬಲ್ಲ.
೭. ಬೆಳೆಯುವ ಸಿರಿ ಮೊಳಕೆಯಲ್ಲಿ
ಮಹಾತ್ಮರ ಜೀವನ ಚರಿತ್ರೆಯನ್ನು ಓದಿದಾಗ, ಅವರ ಬಾಲ್ಯದ ಘಟನೆಗಳು ರೋಮಾಂಚಕರವಾಗಿರುತ್ತವೆ ಗಾಂಧೀಜಿ ಒಂದು ಸುಳ್ಳು ಹೇಳಿದರು. ತನ್ನ ತಂದೆಯ ಬಳಿ ಹೋಗಿ ತಪ್ಪಾಯ್ತು ಎಂದು ತಪ್ರೊಪ್ಪಿಗೆ ಪತ್ರ ಬರೆದುಕೊಟ್ಟರು. ಮುಂದೆ ಎಂದಿಗೂ ಅವರು ಸುಳ್ಳು ಹೇಳಲಿಲ್ಲ, ಸತ್ಯಕ್ಕಾಗಿಯೇ ಹೋರಾಡಿದರು. ಚಿಕ್ಕಂದಿನಿಂದಲೇ ಅವರಲ್ಲಿ ಸತ್ಯಕ್ಕಾಗಿ ಹೋರಾಡುವ ಬುದ್ದಿ ಇತ್ತು, ಅವರು ದೊಡ್ಡವರಾದಂತೆ ಅದು ಬೆಳೆಯಿತು. ಆ ಪ್ರಸಂಗದಲ್ಲಿ ಹೊಳೆಯುವ ಗಾದೆ. “ಬೆಳೆಯುವ ಪೈರು ಮೊಳಕೆಯಲ್ಲೇ ಕಾಣುತ್ತದೆ”.
ಹೌದು, ಮೊಳಕೆಯಲ್ಲಿಯೇ ಕೊಳೆತ ಪೈರು ದೊಡ್ಡದಾಗಿ ಬೆಳೆಯಲಾರದು. ಚಿಕ್ಕಂದಿನಲ್ಲಿ ಪುಷ್ಪವಾಗಿ ಬೆಳೆದ ಮೊಳಕೆ, ಚೆನ್ನಾಗಿಯೇ ಬೆಳೆದು ಒಳ್ಳೆಯ ಬೆಳೆಯನ್ನು ಕೊಡುತ್ತದೆ. “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?” ಈ ಮಾತು ಮಕ್ಕಳಿಗೆ ಒಳ್ಳೆಯ ಅಭ್ಯಾಸ, ಹವ್ಯಾಸಗಳನ್ನು ಚಿಕ್ಕಂದಿನಿಂದಲೇ ಹೇಳಿಕೊಡಬೇಕೆಂಬ ಪ್ರಾಯೋಗಿಕ ಸಲಹೆಯನ್ನು ನೀಡುತ್ತದೆ.
ಮೊದಲು ಚೆನ್ನಾಗಿದ್ದರೆ, ಕೊನೆಯೂ ಚೆನ್ನಾಗಿರುತ್ತದೆ ಎಂಬ ಅರ್ಥ ಬರುವ ಸಂದರ್ಭಗಳಲ್ಲಿ ಮಾತ್ರ ಈ ಗಾದೆಯನ್ನು ಬಳಸಬಹುದು. ಇದೇ ಅರ್ಥಕ್ಕೆ ವಿರುದ್ಧವಾಗಿ ಅರ್ಥಕೊಡುವ ಗಾದೆಯಿದೆ. “ಅಗಸ ಮೊದಲಲ್ಲಿ ಗೋಣಿಯನ್ನು ಎತ್ತೆತ್ತಿ ಒಗೆದ” ಮೊದಮೊದಲಲ್ಲಿ ಹೆಚ್ಚಿನ ಉತ್ಸಾಹದಿಂದ ಚೆನ್ನಾಗಿ ಕೆಲಸ ಮಾಡುತ್ತಾರೆ, ಬರಬರುತ್ತಾ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ‘ರಾಯರ ಕುದುರೆ ಕತ್ತೆಯಾಯ್ತು’, ‘ಹೊಸ ಪೊರಕೆ ಚೆನ್ನಾಗಿ ಗುಡಿಸುತ್ತದೆ’, ಮಂತಾದ ಮಾತುಗಳು ಮೂಲದ ಗಾದೆಯ ತಾತ್ಪರ್ಯಕ್ಕೆ ವಿರುದ್ಧವಾಗಿದೆ. ಮೊದಲು ಚೆನ್ನಾಗಿದ್ದ ಮಾತ್ರಕ್ಕೆ ಅದು ಕೊನೆಯವರೆಗೂ ಚೆನ್ನಾಗಿರುತ್ತದೆ ಎಂದು ಹೇಳಲು ಆಗದು. ಈ ಗಾದೆಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸುವುದು ನಮ್ಮ ಜಾಣ್ಮೆ.
೮. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು.
ಸ್ವಂತ ಕಣ್ಣುಗಳಿಂದ ನೋಡಿದರೂ ಅದು ನಿಜವೋ ಭ್ರಾಂತಿಯೋ ಎಂದು ಮತ್ತೊಮ್ಮೆ ಪರಿಶೀಲಿಸಬೇಕು. ಹಾಗೆ ಪರೀಕ್ಷಿಸದೇ ಕಂಡುದನ್ನು ಒಮ್ಮೆಗೇ ನಂಬಬಾರದು – ಎಂದು ಈ ಗಾದೆ ಎಚ್ಚರಿಸುತ್ತದೆ.
ಯಾವುದೇ ಯೋಚನೆಯಲ್ಲೋ, ಮಾತನಾಡುತ್ತಲೋ ನಡೆಯುತ್ತಿರುವಾಗ ಹಾದಿಯಲ್ಲಿ ಬಿದ್ದಿರುವ ಹಗ್ಗವನ್ನು ಕಂಡು ಹಾವೆಂದು ಹೆದರುವುದಿದೆ. ಅದನ್ನು ಪರೀಕ್ಷಿಸಿದಾಗಲೇ ಅದು ಹಗ್ಗವೆಂದು ತಿಳಿದು ಹೆದರಿಕೆ ಹೋಗುತ್ತದೆ. ಮರಳುಗಾಡಿನಲ್ಲಿ ದಾರಿ ಸಾಗುವಾಗ, ಬಾಯಾರಿಕೆಯಾಗಿ ನೀರನ್ನು ಬಯಸಿದಾಗ, ದೂರದಲ್ಲೆಲ್ಲೋ ನೀರಿನ ನೆಲೆ ಕಂಡಂತಾಗಿ, ಮುಂದೆ ಮುಂದೆ ಹೋದಂತೆಲ್ಲಾ ಅದೂ ಇನ್ನಷ್ಟು ಮುಂದಿರುವಂತೆ ತೋರುವ ಭ್ರಮೆಗೆ ಒಳಗಾಗುವುದಿದೆ. ಹೀಗೆ ನೋಡಿದ್ದು ಸುಳ್ಳಾಗುವಂತೆ ಹೇಳಿದ್ದು, ಕೇಳಿದ್ದು ಸುಳ್ಳಾಗಬಹುದು. ಅದುದರಿಂದ ನೋಡಿದುದನ್ನು ಬೇರೆಯವರು ಹೇಳಿದುದನ್ನು ಬೇರೆಯವರಿಂದ ಕೇಳಿದುದನ್ನು ಪರಿಶೀಲಿಸದೇ, ಪರೀಕ್ಷಿಸದೇ ಒಮ್ಮೆಲೇ ನಂಬಬಾರದು.
ಕೆಲವು ಸಂದರ್ಭಗಳಲ್ಲಿ ಕೇಳಿದ ಸುದ್ದಿಯೂ ಸುಳ್ಳಾಗಿರುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಎಲ್ಲೋ ಹುಟ್ಟಿದ ಯಾವುದೋ ಸುದ್ದಿ ಅಂತೆ-ಕಂತೆಗಳು ಸೇರಿ ಇನ್ನೇನೂ ಆಗಿರುತ್ತದೆ. ಇಲಿ ಹೋಯಿತು ಎನ್ನುವುದು ಹುಲಿಯೇ ಹೋಯಿತು ಎನ್ನುವಂತೆ ದೊಡ್ಡ ಸುದ್ದಿಯಾಗಿ ಹಬ್ಬುತ್ತದೆ.
ಹಿತ್ತಾಳೆಯ ಗಟ್ಟಿಗಳನ್ನು ತೋರಿಸಿ. ಚಿನ್ನವೆಂದು ಹೇಳಿ ಮೋಸಗೊಳಿಸುವವರಿದ್ದಾರೆ. ನಕಲಿ ನೋಟುಗಳಂತೂ ನಿಜವಾದ ನೋಟುಗಳ ತಲೆಯ ಮೇಲೆ ಹೊಡೆಯುವಂತೆ ಚಲಾವಣೆಯಾಗುತ್ತಿವೆ. ಬೆಲೆಬಾಳುವ, ಮಾರುಕಟ್ಟೆಯಲ್ಲಿ ಜನಪ್ರಿಯವಾದ ಯಾವುದೇ ವಸ್ತುವನ್ನಾದರೂ ನೋಡಲು ಅದರಂತೆಯೇ ಕಾಣಿಸುವ ಹಾಗೆ ನಕಲಿವಸ್ತುಗಳನ್ನು ತಯಾರಿಸಿ ಗ್ರಾಹಕರನ್ನು ಮೋಸಪಡಿಸುವ ನಿಪುಣರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಮಾತಿನಲ್ಲಿ ಮೋಸ ಮಾಡುವ ಹೊಸಹೊಸ ತಂತ್ರಗಳನ್ನು ವಂಚಕರು ಇತ್ತೀಚೆಗೆ ಅನ್ವೇಷಿಸುತ್ತಿದ್ದಾರೆ. ಪೊಲೀಸರ ವೇಷದಲ್ಲಿ ಬಂದು ದೇವಾಲಯಕ್ಕೋ, ಅಂಗಡಿಗೋ ಹೋಗಿ ಬರುತ್ತಿರುವ ಮಹಿಳೆಯರಿಗೆ, ಅವರು ಹೋಗುವ ದಾರಿಯಲ್ಲಿ ಕೊಲೆಯಾಗಿದೆಯೆಂದು ಹೆದರಿಕೆ ಹುಟ್ಟಿಸುವುದು, ಅವರು ತೊಟ್ಟಿ ಆಭರಣಗಳನ್ನು ಕಳಚುವಂತೆ ಮಾಡಿ, ಪೊಟ್ಟಣ ಕಟ್ಟಿ, ಅವರ ಕೈಚೀಲಕ್ಕೆ ಹಾಕಿದಂತೆ ತೋರಿಸಿ, ಉಪಕಾರ ಮಾಡಿದಂತೆ ನಟಿಸುವುದು ನಗರದಲ್ಲಿ ಆಗಾಗ ನಡೆಯುತ್ತಲೇ ಇದೆ. ಮನೆಗೆ ಹೋದ ಮಹಿಳೆ ಪೊಟ್ಟಣ ತೆರೆದಾಗ ಅದರಲ್ಲಿ ಆಭರಣಗಳ ಬದಲು ಕಲ್ಲುಚೂರುಗಳಿರುವುದನ್ನು ಕಂಡು ದುಃಖ, ಗಾಬರಿಗೊಳಗಾಗಿ ಪೊಲೀಸರಿಗೆ ದೂರು ಕೊಡುತ್ತಿರುವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ಹಾಗಿದ್ದರೂ ಮಹಿಳೆಯರು ಮೋಸಹೋಗುತ್ತಲೇ ಇದ್ದಾರೆ. ಕೇಳಿದುದನ್ನು ಹೇಳಿದುದನ್ನು ನೋಡಿದುದನ್ನು ಪ್ರಮಾಣಿಸದಿರುವುದರಿಂದಲೇ ಹೀಗಾಗುತ್ತಿರುತ್ತದೆ.
೯. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ.
ಪ್ರಪಂಚದ ಪ್ರೇಮವನ್ನೇ ಗೆದ್ದಿರುವವಳು ತಾಯಿ; ಪ್ರೇಮ ಜಗತ್ತಿನ ಸಾಕಾರ ಮೂರ್ತಿ ತಾಯಿಯಿಲ್ಲದ ಮಗುವಿಗೆ ತಬ್ಬಲಿ ಎನ್ನುವ ಪದ ಹೊಂದುವಂತೆ ತಂದೆಯಿಲ್ಲದ ಮಗುವಿಗೆ ಹೊಂದುವುದಿಲ್ಲ, ಬೇರೆ ಎಷ್ಟೇ ನೆಂಟರಿದ್ದರೂ, ಆಸ್ತಿಪಾಸ್ತಿ ಹಣವಿದ್ದರೂ ಮಗುವಿಗೆ ತಾಯಿಯಿದ್ದಂತೆ ಸಮಾಧಾನವಿರುವುದಿಲ್ಲ, ಬೇರೆ ಯಾವ ಸಂಬಂಧಿಕರನ್ನಾದರೂ ಎಷ್ಟು ಜನರನ್ನಾದರೂ ಪಡೆಯಬಹುದು. ಆದರೆ ತಾಯಿಯನ್ನು ಮಾತ್ರ ಒಂದು ಜನ್ಮದಲ್ಲಿ ಒಂದೇ ಸಲ ನಾವು ಪಡೆಯುವುದು ಸಾಧ್ಯ.
ಉಪ್ಪು ಇಲ್ಲದ ಅಡುಗೆ ಬೇರೆ ಯಾವ ವ್ಯಂಜನದಿಂದಲೂ ರುಚಿಸುವುದಿಲ್ಲ. ಬೇರೆ ವ್ಯಂಜನ ಪದಾರ್ಥಗಳ ಸಹಾಯವಿಲ್ಲದೆ ಕೇವಲ ಉಪ್ಪೊಂದಿದ್ದರೆ ಎಷ್ಟು ದಿನ ಬೇಕಾದರೂ ಆ ಅಡುಗೆಯಲ್ಲಿ ಜೀವನ ತಳ್ಳಬಹುದು. ಅಂತೆಯೇ ತಾಯಿಯೊಬ್ಬಳಿದ್ದರೆ ಇಡೀ ಜಗತ್ತನ್ನೇ ವಿರೋಧಿಸಿ ನಿಲ್ಲಬಹುದು. ಆ ಬಂಧುವಿಗಿಂತ ಬೇರೆ ಬಂಧು ನಮಗೆ ದೊರೆಯಲಾರದು. ತಾಯಿಯನ್ನು ಉಪ್ಪು ಅಲ್ಲದೆ, ನೀರಿಗೆ ಅಥವಾ ಗಾಳಿಗೆ ಮಾತ್ರ ಹೋಲಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಗಾದೆಯೆಂದರೆ ತಾಯಿಗಿಂತ ಮಿಗಿಲಾದ ದೇವರಿಲ್ಲ. ಪ್ರಪಂಚದಲ್ಲಿ ಕೆಟ್ಟ ಮಗ ಇರಬಹುದು, ಆದರೆ ಕೆಟ್ಟ ತಾಯಿ ಮಾತ್ರ ಇರುವುದೇ ಇಲ್ಲ ಎಂದು ಶಂಕರಾಚಾರ್ಯರು ಹೇಳಿದ್ದಾರೆ.
೧೦. ಉತ್ಸಾಹವೇ ಯೌವನ, ಚಿಂತೆಯೇ ಮುಪ್ಪು.
ಇದೊಂದು ಅನುಭವದ ನುಡಿ. ಯೌವನ ಮತ್ತು ಮುಪ್ಪುಗಳೆರಡೂ ನಮ್ಮ ಜೀವನದಲ್ಲಿ ಹಾದುಹೋಗುವ ಮುಖ್ಯ ಘಟ್ಟಗಳು, ಯೌವನ ಎಲ್ಲರಿಗೂ ಪ್ರಿಯವಾದುದು, ಮುಪ್ಪು ಯಾರಿಗೂ ಬೇಡವಾದುದು. ನಾವು ಚಿಕ್ಕವರೆಂದು ಗುರುತಿಸಿ ಕೊಳ್ಳಲು ಒದ್ದಾಡುತ್ತಿರುತ್ತೇವೆಯೇ ಹೊರತು, ವಯೋವೃದ್ಧರೆಂದು ತೋರಿಸಿಕೊಳ್ಳಲು ಬಯಸುವುದಿಲ್ಲ. ಇದು ರಾಷ್ಟ್ರ ಸೌಂದಯ್ಯದ ಮಾತಾಯಿತು. ಆದರೆ ಕ್ರಿಯಾಶೀಲತೆಗೆ ಸಂಬಂಧಿಸಿದಂತೆ ಹೇಳುವುದಾದರೆ ಎಲ್ಲಿಯ ತನಕ ನಾವು ಜೀವನೋ ತೂಹದಿಂದ ಬದುಕುತ್ತಿರುತ್ತೇವೆಯೋ ಅಲ್ಲಿಯವರೆಗೆ ನಾವು ಯೌವನಿಗರೆ, ಅದು ನಮ್ಮ ನಡತೆಯಲ್ಲಿ, ಚಟುವಟಿಕೆಯಲ್ಲಿ ಕ್ರಿಯೆಯಲ್ಲಿ ಎದ್ದು ಕಾಣುತ್ತಿರುತ್ತದೆ. ಗಾಂಧೀಜಿ ಮುದುಕರಾದರೂ ತಾವು ಯುವಕರೆಂದೇ ಕರೆದುಕೊಳ್ಳಲು ಕಾರಣ ಅವರಿಗಿದ್ದ ‘ಯುವಮನಸ್ಸು’. ಇದು ಉತ್ಸಾಹಕ್ಕೆ ವಯಸ್ಸಿನ ಎಲ್ಲೆ-ಅಂತರಗಳಿಲ್ಲವೆಂಬುದನ್ನು ಸೂಚಿಸುತ್ತದೆ. ಚಿಂತೆಯು ಮನುಷ್ಯನನ್ನು ಮುಪ್ಪಿಗೆ ದೂಡುತ್ತದೆ. ಯೌವನಿಗರಾಗಿದ್ದು ಚಿಂತೆಯಲ್ಲಿ ಮುಳುಗಿದವರಿಗೆ ಮುಪ್ಪು ಬಾಧಿಸುತ್ತದೆ. ಬದುಕಿರುವಷ್ಟು ಕಾಲ ಸಂತೋಷದಿಂದ, ಜೀವನೋತ್ಸಾಹದಿಂದ ಬದುಕುವುದೇ ಮುಖ್ಯವೆಂಬುದನ್ನು ಜಾನಪದರು “ಉತ್ಸಾಹವೇ ಯೌವನ, ಚಿಂತೆಯೇ ಮುಪ್ಪು” ಎಂಬುದರ ಮೂಲಕ ವಿವರಿಸಿದ್ದಾರೆ.
೧೧. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ.
ಸಾಕಷ್ಟು ಸಮಯ ಬಳಸಿ ಶ್ರಮವಹಿಸಿ ಮಾಡಿದ ಕೆಲಸವನ್ನು ಹಾಳು ಮಾಡಲು ಕೆಲವೇ ಕ್ಷಣಗಳು ಸಾಕು ಎನ್ನುವುದನ್ನು ಈ ಗಾದೆ ಕುಂಬಾರ, ದೊಣ್ಣೆಗಳ ಉದಾಹರಣೆಯ ಮೂಲಕ ನಿರೂಪಿಸುತ್ತದೆ.
ಮಡಿಕೆ ಮಾಡಲು ಕುಂಬಾರ ತುಂಬ ಶ್ರಮಪಡಬೇಕು. ಎರೆಮಣ್ಣನ್ನು ತಂದು, ಅದರಲ್ಲಿರುವ ಮರಳು – ಕಲ್ಲುಗಳನ್ನು ಬೇರ್ಪಡಿಸಿ ಹುಡಿ ಮಾಡಬೇಕು. ನೀರು ಹಾಕಿ ತುಳಿದು ಹದ ಮಾಡಬೇಕು. ಕೈಕಾಲುಗಳಿಗೆ ಕೆಸರು ಮೆತ್ತಿಸಿಕೊಳ್ಳಬೇಕು. ಹದವಾದ ಮಣ್ಣನ್ನು ತಿಗುರಿಯ ಮೇಲಿಟ್ಟು ತಿರುಗಿಸಿ, ಆಕಾರ ಕೊಡಬೇಕು. ನೀರಿನ ಪಸೆ ಆರಿದ ಮೇಲೆ ಅದನ್ನು ತಟ್ಟಿತಟ್ಟಿ ಬೇಕಾದ ರೂಪಕೊಟ್ಟು ಬಿಸಿಲಿನಲ್ಲಿ ಒಣಗಲು ಬಿಡಬೇಕು. ಆಮೇಲೆ ಆವಿಗೆಯಲ್ಲಿ ವ್ಯವಸ್ಥಿತವಾಗಿ ಕೂಡಿಟ್ಟು ಸುಡಬೇಕು. ಹದವಾಗಿ ಸುಟ್ಟು ಬಿಸಿ ಆರಿದ ಗಡಿಗೆ – ಮಡಿಕೆಗಳನ್ನು ಎಚ್ಚರದಿಂದ ಹೊರತೆಗೆದು ಜೋಡಿಸಿಡಬೇಕು. ಇಷ್ಟೆಲ್ಲ ಕಷ್ಟಪಟ್ಟು ಕುಂಬಾರ ತಯಾರಿಸಿದ ಗಡಿಗೆಯನ್ನು ಪುಡಿಮಾಡಲು ದೊಣ್ಣೆಗೆ ಒಂದು ನಿಮಿಷವೂ ಬೇಕಾಗುವುದಿಲ್ಲ. ಒಂದೇ ಏಟು ಜೋಡಿಸಿಟ್ಟಿ ಗಡಿಗೆಗಳನ್ನೆಲ್ಲ ಹಾಳುಮಾಡಲು ಸಾಕು.
ಯಾವುದನ್ನಾದರೂ ಹಾಳುಗೆಡಿಸುವುದು ಸುಲಭ, ರೂಪಿಸುವುದು ಕಷ್ಟ, ಹಾಳುಮಾಡುವ ಬುದ್ದಿ ಒಳ್ಳೆಯದಲ್ಲವೆಂದು ಈ ಗಾದೆ ಎಚ್ಚರಿಸುತ್ತದೆ.
೧೨. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು.
‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ – ಎಂಬ ಗಾದೆಯನ್ನು ಕಿವಿಯಲ್ಲಿ ಕೇಳುತ್ತಿದ್ದಂತೆ ‘ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಗಾದೆಯ ನೆನಪೂ ಆಗುತ್ತದೆ. ಈ ಎರಡು ಗಾದೆಗಳೂ ನಮ್ಮ ನುಡಿ ಮತ್ತು ನಡೆಯ ಬಗ್ಗೆ ಎಚ್ಚರಿಕೆಯನ್ನು ನೀಡುತ್ತವೆ. ನಾವು ಮಾತನಾಡುವಾಗ ತುಂಬ ಎಚ್ಚರಿಕೆಯಿಂದಿರಬೇಕೆಂದು ತಿಳಿಸುವುದು ಈ ಗಾದೆಯ ಉದ್ದೇಶವಾಗಿದೆ. ನಾವು ಬದುಕಿನಲ್ಲಿ ತಪ್ಪು ಲೆಕ್ಕಚಾರ ಹಾಕಿ ಹಣವನ್ನು ಕಳೆದುಕೊಳ್ಳಬಹುದು ಆದರೆ ಒಮ್ಮೆ ಆಡಿದ ಮಾತನ್ನು ಹಿಂದಕ್ಕೆ ಪಡೆಯಲು ಸಾಧ್ಯವೇ ಇಲ್ಲ. ಅದರಲ್ಲೂ ಕೆಟ್ಟ ಮಾತುಗಳನ್ನಾಡಿದರೆ ಅದನ್ನು ಕೇಳಿಸಿಕೊಂಡವರು ಬದುಕಿರುವತನಕ ಮರೆಯಲಾರರು. ಎಷ್ಟೋ ಜನ ಆಡಬಾರದ ಮಾತನ್ನಾಡಿ, “ಕ್ಷಮಿಸಿ – ಎಕ್ಸಕ್ಯೂಸ್ ಮಿ – ಸಾರಿ” ಎಂದು ಹೇಳುವುದುಂಟು. ತಪ್ಪು ಮಾಡಿ ಕ್ಷಮೆ ಕೋರಿಕೊಳ್ಳುವುದಕ್ಕಿಂತ ತಪ್ಪನ್ನೇ ಮಾಡದಿದ್ದರೆ ಹೆಚ್ಚು ಗೌರವವಲ್ಲವೆ? ಮುತ್ತು ಒಂದು ಬೆಲೆಯುಳ್ಳ ರತ್ನ, ಇದು ಒಡೆದರೆ ಅಪಾರ ನಷ್ಟವಾಗುವುದಲ್ಲದೆ ಒಡೆದು ಹೋದ ಮುತ್ತಿನಿಂದ ಮತ್ತೊಂದು ಮುತ್ತನ್ನು ತಯಾರಿಸಲಾಗುವುದಿಲ್ಲ. ಇದರಂತೆ ಎಚ್ಚರಿಕೆ ತಪ್ಪಿ ಮಾಡಿದ ಮಾತಿನಿಂದುಂಟಾಗುವ ಪ್ರಭಾವವನ್ನು ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬಸವಣ್ಣನವರು ಹೇಳಿದಂತೆ ನಮ್ಮ ಮಾತು’ “ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ಆಹುದು ಆಹುದು ಎನಬೇಕು” ಎನ್ನುವುದನ್ನು ಮರೆಯಬಾರದು.
೧೩. ಉಪಾಯ ಬಲ್ಲವನಿಗೆ ಆಪಾಯವಿಲ್ಲ/ಅಪಾಯ ಬಂದಾಗ ಉಪಾಯದಿಂದ ಗೆಲ್ಲಬೇಕು.
ಉಪಾಯವನ್ನು ಅರಿತ ನಿಪುಣರು ಎಂತಹ ಅಪಾಯದಿಂದಾದರೂ ಪಾರಾಗಬಲ್ಲರು ಎಂದು ಈ ಗಾದೆ ಹೇಳುತ್ತದೆ. ಎಲ್ಲರೂ ಉಪಾಯಬಲ್ಲವರಾಗಿರುವುದಿಲ್ಲ. ಅತಿ ಚಾಣಾಕ್ಷರೂ, ಸಮಯಸ್ಪೂರ್ತಿಯುಳ್ಳವರು ಮಾತ್ರ ಉಪಾಯ ಮಾಡಬಲ್ಲವರೆನಿಸುತ್ತಾರೆ. ಹಿಂದೆ ರಾಜರು ತಮ್ಮ ಆಸ್ಥಾನಗಳಲ್ಲಿ ಇಂತಹ ಉಪಾಯ ಬಲ್ಲವರನ್ನು ತಂತ್ರಜ್ಞರನ್ನು ಸಹಾಯಕರಾಗಿ ನೇಮಿಸಿಕೊಂಡಿರುತ್ತಿದ್ದರು. ಬೀರಬಲ್, ತೆನಾಲಿರಾಮ ಇಂತಹ ಸಮಯಸ್ಫೂರ್ತಿಯುಳ್ಳ ಉಪಾಯ ಗಾರರೆಂದು ಪ್ರಸಿದ್ಧರಾಗಿದ್ದಾರೆ. ರಾಜ ನೀತಿಯಲ್ಲಿ ಉಪಾಯಕ್ಕೆ ಅಗ್ರಸ್ಥಾನವಿದೆ. ಭೇದ, ಪರೀಕ್ಷೆ, ವಿಶ್ವಾಸ, ವಂಚನೆ, ಮಿತ್ರಕಾರ -ಈ ವಿಚಾರಗಳಲ್ಲಿ ಬಳಸುವ ಉಪಾಯಗಳನ್ನು ಪಂಚತಂತ್ರವೆನ್ನುತ್ತಾರೆ.
ಕಳ್ಳರು, ಸುಳ್ಳರು, ವಂಚಕರು, ಮೋಸಗಾರರು, ರಾಜಕೀಯ ಧುರೀಣರು, ವ್ಯಾಪಾರಿಗಳು, ಜಾಹೀರಾತುದಾರರು – ಮೊದಲಾದವರೂ ನಾಗರೀಕರನ್ನು ವಂಚಿಸಲು ನಾನಾ ಬಗೆಯ ಉಪಾಯಗಳನ್ನು ಮಾಡುತ್ತಾರೆ. ಹೀಗೆ ಉಪಾಯವೆನ್ನುವುದು ಕೇವಲ ಅಪಾಯದಿಂದ ತಪ್ಪಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿಲ್ಲ. ಅದರ ದುರುಪಯೋಗವೂ ಆಗುತ್ತಿದೆ. ಜನಸಾಮಾನ್ಯರು ಅನುದಿನವೂ ಇಂಥವರ ಕುಟಿಲೋಪಾಯಗಳಿಗೆ ಮಾರುಹೋಗಿ ಮೋಸಹೋಗುತ್ತಿದ್ದಾರೆ. ಉಪಾಯದ ಸದುಪಯೋಗ ವಾಗಬೇಕಲ್ಲದೆ ದುರುಪಯೋಗವಾಗಬಾರದು. ಉಪಾಯ ಮಾಡಿ ತಾನು ಅಪಾಯದಿಂದ ಪಾರಾಗಬೇಕಲ್ಲದೆ, ಬೇರೆಯವರನ್ನು ಅಪಾಯಕ್ಕೆ ಸಿಕ್ಕಿಸಬಾರದು. ಉಪಾಯ ಬಲ್ಲವರಲ್ಲಿ ಈ ಭಾವನೆ-ಎಚ್ಚರವಿದ್ದರೆ, ಸಮಾಜಕ್ಕೆ ಒಳ್ಳೆಯದಾಗುತ್ತದೆ. ಅಪಾಯದಿಂದ ತಪ್ಪಿಸಿಕೊಳ್ಳಲು ಸಮಯಸ್ಪೂರ್ತಿ ಬೇಕು. ಆ ಕಾಲಕ್ಕೆ ತಕ್ಕ ಉಪಾಯ ಮಾಡಬೇಕು.
೧೪. ತಾಳಿದವನು ಬಾಳಿಯಾನು.
ಮನುಷ್ಯನ ಮನಸ್ಸು ಯಾವಾಗಲೂ ಅರಿಷಡ್ವರ್ಗಗಳ ಪ್ರಭಾವದಿಂದ ನಲುಗುತ್ತಿರುತ್ತದೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನೇ ಅರಿಷಡ್ವರ್ಗಗಳು – ಮನಸ್ಸಿನ ಆರು ಶತ್ರುಗಳು ಎಂದು ಕರೆಯುವರು. ಕೋಪದ ವಿರುದ್ಧ ಭಾವವೇ ತಾಳ್ಮೆ ಕೋಪ ಬರುವಂತಹ ಸನ್ನಿವೇಶಗಳು ಜೀವನದಲ್ಲಿ ಪ್ರತಿನಿತ್ಯ ಹಲವಾರು ಬಾರಿ ಬರುತ್ತಿರುತ್ತವೆ. ಆದರೆ ಕೋಪಾವೇಶದಿಂದ ಆಡುವ ಮಾತು, ಮಾಡುವ ಕ್ರಿಯೆಗಳಿಂದ ಅನಾಹುತ-ಹಾನಿಯಾಗುವ ಸಂಭವವುಂಟು. ಆದ್ದರಿಂದ ತಾಳ್ಮೆಯಿಂದಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ಗಾದೆಯು ತಾಳ್ಮೆಯನ್ನು ಬೆಳೆಸಿಕೊಂಡವನು ಬದುಕುತ್ತಾನೆಂದು ಹೇಳಿರುವುದು ಯುಕ್ತವಾಗಿದೆ.
ಹರಿದಾಸರೊಬ್ಬರು “ತಾಳುವಿಕೆಗಿಂತ ತವವಿಲ್ಲ” ಎಂದಿದ್ದಾರೆ. ತಾಳ್ಮೆಯೇ ತಪಸ್ಸು ಎಂದಿದ್ದಾರೆ. ಏಕೆಂದರೆ ತಾಳ್ಮೆಯಿಂದ ಬಾಳುವುದು ಬಹುಕಷ್ಟ, ‘ಕೋಪ ಪಾಪದ – ತಾಪದ ನೆಲೆಗಟ್ಟು’ ಎಂದಿದ್ದಾರೆ. ಏಕೆಂದರೆ ಕೋಪದ ಭರದಲ್ಲಿ ಮಾಡಬಾರದ ಅಕೃತ್ಯವನ್ನೆಸಗುವಂತಾಗುತ್ತದೆ. ‘ಕೋಪವೆಂಬುದು ಆನರ್ಥ ಸಾಧನ’ ಎಂದೇ ವಾಕ್ಯವುಂಟು. ಕೋಪದಲ್ಲಿ ಮೂಗು ಕೊಯ್ದು ಕೊಂಡವರು – ಎಂದರೆ ತಮ್ಮನ್ನು ತಾವೇ ಹಿಂಸಿಸಿಕೊಂಡವರುಂಟೆಂಬುದು ವಾಸ್ತವ ಸಂಗತಿಯಾಗಿದೆ. ಗೌತಮ ಮಹರ್ಷಿ ಅಹಲ್ಯೆ ತಪ್ಪು ಮಾಡಿದಳೋ? ಇಲ್ಲವೋ? ಎಂಬುದನ್ನು ತಿಳಿಯುವ ಮುನ್ನ ‘ಕಲ್ಲಾಗು’ ಎಂದು ಶಾಪಕೊಟ್ಟು ತನ್ನ ಹೆಂಡತಿಯನ್ನು ತಾನೇ ಕಳೆದುಕೊಂಡನು – ಒಂಟಿಯಾಗಿ ನೂರಾರು ವರ್ಷ ಬಳಲುವಂತಾಯಿತು. ಆದ್ದರಿಂದ ‘ತಾಳಿದವನು ಬಾಳಿಯಾನು’ ಎಂಬ ಗಾದೆ ಬದುಕಿಗೆ ದಾರಿದೀಪವಾಗಿದೆ.
೧೫. ಹಣಕ್ಕಿಂತ ಗುಣ ಮುಖ್ಯ.
‘ಹಣವಿಲ್ಲದವನ ಬಾಳು ಹೆಣದ ಹಾಗೆ’, ‘ಕಾಸಿದ್ರೆ ಕೈಲಾಸ’, ‘ದುಡ್ಡೇ ದೊಡ್ಡಪ್ಪ’ ಮೊದಲಾದ ಹೇಳಿಕೆಗಳು ಹಣದ ಗುಣವನ್ನು ಸಾರಿಹೇಳುತ್ತವೆ. ‘ಹಣವೇ, ನಿನ್ನಯ ಗುಣವೆಷ್ಟು ವರ್ಣಿಸಲಿ’ ಎಂದು ದಾಸರು ಹಾಡಿದ್ದಾರೆ. ‘ಸರ್ವೆ ಗುಣಾಃ ಕಾಂಚನ ಮಾಶ್ರಯಂತಿ’ – ಎಲ್ಲ ಗುಣಗಳೂ ಚಿನ್ನವನ್ನೇ ಎಂದರೆ ಹಣವನ್ನೇ ಆಶ್ರಯಿಸುತ್ತವೆ ಎಂದು ಸುಭಾಷಿತವು ಹೇಳುತ್ತದೆ.
ಹಣವುಳ್ಳವರ ಅವಗುಣಗಳೆಲ್ಲವೂ ಮರೆಯಾಗುತ್ತವೆ ಹಣವುಳ್ಳ ವ್ಯಕ್ತಿ ಗೌರವಕ್ಕೆ ಪಾತ್ರನಾಗುತ್ತಾನೆ. ಹಣವಿದ್ದರೆ ಸಕಲ ಸುಖಸೌಲಭ್ಯಗಳನ್ನು ಪಡೆಯಬಹುದೆಂಬ ನಂಬಿಕೆಯೂ ಇದೆ. ಹೀಗೆ ಹಣದ ಗುಣವನ್ನು ವರ್ಣಿಸಲು ಸಾಕಷ್ಟು ಕಾರಣಗಳಿವೆ.
ಹಣವಿರುವವರಿಗೆ ಸ್ನೇಹಿತರಿರುತ್ತಾರೆ. ಅವರಿಗೆ ಸಮೀಪ ಬಂಧುಗಳಿರುತ್ತಾರೆ. ಪ್ರಪಂಚದಲ್ಲಿ ಅವರೇ ನಿಜವಾದ ಮನುಷ್ಯರೆನಿಸುತ್ತಾರೆ. ಅವರು ಗೌರವದಿಂದ ಜೀವಿಸುತ್ತಾರೆ. ಹೀಗೆ ಹಣಕ್ಕೆ ವಿಶೇಷವಾದ ಶಕ್ತಿ ಇದೆ.
ಆದರೆ ಈ ಗಾದೆಯಲ್ಲಿ ಹಣಕ್ಕಿಂತ ಗುಣವೇ ಶ್ರೇಷ್ಠವೆಂದು ಹೇಳಲಾಗಿದೆ. ಹಣವು ‘ಹತ್ತು ನಿನ್ನಿಂದ ಮತ್ತೆ ನನ್ನಿಂದ ಎಂದು ಪ್ರೇರಿಸುವುದಂತೆ, ಹತ್ತು ರೂಪಾಯಿಗಳನ್ನು ಉಳಿಸಿದವನಿಗೆ ಮತ್ತೆ ಹತ್ತು ರೂಪಾಯಿಗಳನ್ನು ಉಳಿಸಿ ಆದರೊಂದಿಗೆ ಕೂಡಿಡುವ ಮನಸ್ಸಾಗುವುದಂತೆ, ಹಾಗೆ ಮನಸ್ಸು ಹುಟ್ಟಿದಾಗ ಹೊಟ್ಟೆಬಟ್ಟೆಗಳನ್ನು ಕಟ್ಟಿ ಜಿಪುಣತನದಿಂದ ಹಣವನ್ನು ಉಳಿಸಲು ತೊಡಗುತ್ತಾನೆ. ಆಗ ಅವನಿಗೆ ಹಣವೇ ಮುಖ್ಯವಾಗಿ ತೋರುತ್ತದೆ. ನೆಂಟರು, ಇಷ್ಟರು ಯಾರೂ ಬೇಕೆನಿಸುವುದಿಲ್ಲ. ಹಣ ಸೇರಿದಂತೆ ಅಹಂಕಾರ ತಲೆಗೇರುತ್ತದೆ. ಹಣವಿಲ್ಲದವರನ್ನು ಬಡವರನ್ನು ತಾತ್ಸಾರದಿಂದ ನೋಡುತ್ತಾನೆ. ತನ್ನನ್ನು ಹೊಗಳುವವರು ಮಾತ್ರ ಅವನಿಗೆ ಗೆಳೆಯರು, ಆಪ್ತರು ಎನಿಸುತ್ತಾರೆ.
ನೂರುಳ್ಳವನು ಸಾವಿರವನ್ನೂ ಸಾವಿರವುಳ್ಳವನು ಲಕ್ಷವನ್ನೂ ಲಕ್ಷಾಧಿಪನು ರಾಜ್ಯವನ್ನೂ, ರಾಜ್ಯವುಳ್ಳವನು ಸ್ವರ್ಗವನ್ನೂ ಒಂದಾದ ಮೇಲೆ ಒಂದರಂತೆ ಬಯಸುತ್ತಲೇ ಇರುತ್ತಾನೆ.
ಹಣಕ್ಕೆ ದಾನ, ಭೋಗ, ನಾಶವೆಂಬ ಮೂರು ಗತಿಗಳಿವೆ. ಯಾರು ದಾನ ಮಾಡದೇ, ಅನುಭವಿಸದೇ ಇರುವನೋ, ಅವನ ಹಣಕ್ಕೆ ಮೂರನೆಯ ಗತಿ ಎಂದರೆ ನಾಶವೇ ದಾರಿಯಾಗುತ್ತದೆ. ಹಣವಿದ್ದಾಗ ದೊರೆಯುತ್ತಿದ್ದ ಗೌರವಾದರಗಳು ಹಣ ದೊಂದಿಗೇ ಹೋಗುತ್ತವೆ.
ಗುಣವಂತರಲ್ಲಿ ಹಣವಿದ್ದರೆ ಅದು ಪರೋಪಕಾರಕ್ಕಾಗಿಯೇ ವಿನಾ ಸ್ವಾರ್ಥಕ್ಕಾಗಿಯಲ್ಲ, ಅವರಿಗೆ ‘ದಾನಾಯ ಲಕ್ಷ್ಮೀಃ’ – ದಾನ ಮಾಡಲೆಂದೇ ಸಂಪತ್ತು. ಯಾರಿಗೂ ತಿಳಿಯದಂತೆ ದಾನಮಾಡುವುದು, ಉಪಕಾರಮಾಡುವುದು, ಕ್ಷಮಾ ಗುಣ, ಬಡವರಿಗೆ ಕೇಳುವುದಕ್ಕೆ ಮುಂಚೆಯೇ ನೀಡುವುದು, ಒಳ್ಳೆಯದನ್ನೇ ಯೋಚಿಸುವುದು ಗುಣವಂತರ ಲಕ್ಷಣಗಳಾಗಿವೆ.
ದುರ್ಜನರಲ್ಲಿ ಹಣ ಸೇರಿದಾಗ ದುರ್ಗುಣಗಳೇ ಬೆಳೆಯುತ್ತವೆ. ಸಜ್ಜನರಲ್ಲಿ, ಗುಣವಂತರಲ್ಲಿರುವ ಹಣ ಸದ್ವಿನಿಯೋಗವಾಗುತ್ತದೆ. ಹಣದಿಂದಾಗಿ ಅವರ ಗುಣಗಳು ಅವಗುಣಗಳಾಗುವುದಿಲ್ಲ. ಆದ್ದರಿಂದ ಹಣಕ್ಕಿಂತ ಗುಣವೇ ಮೇಲು ಎನಿಸುತ್ತದೆ.
೧೬. ಕೋಣನಿಗೆ ದೊಣ್ಣೆಯ ಪೆಟ್ಟು, ಜಾಣನಿಗೆ ಮಾತಿನ ಪೆಟ್ಟು.
ಜಗತ್ತಿನಲ್ಲಿರುವ ಜನರೆಲ್ಲರೂ ಒಂದೇ ರೀತಿಯವರಾಗಿರುವುದಿಲ್ಲ. ಅವರನ್ನು ಸರಿದಾರಿಗೆ ತರಲು, ಅವರಿಂದ ಕೆಲಸ ಮಾಡಿಸಿಕೊಳ್ಳಲು, ವಿಭಿನ್ನ ಮಾರ್ಗಗಳನ್ನೇ ಅನುಸರಿಸಬೇಕಾಗುತ್ತದೆ. ಮೇಲಿನ ಗಾದೆಯಲ್ಲಿ ಈ ಸಂದೇಶ ಅಡಗಿದೆ.
ಪ್ರಾಣಿಗಳಲ್ಲೆಲ್ಲ ಕತ್ತೆಯನ್ನು ಅತಿ ದಡ್ಡ ಪ್ರಾಣಿಯೆಂದು ತಿಳಿಯಲಾಗಿದೆ. ಆಗಸನು ಬಟ್ಟೆಗಳ ಹೊರೆಯನ್ನು ಹೊರಲು ಅದನ್ನು ಬಳಸಿಕೊಳ್ಳುತ್ತಾನೆ. ಇನ್ನು ಕೆಲವರು ಮರಳಿನ ಮೂಟೆಗಳನ್ನೋ, ಭಾರವಾದ ವಸ್ತುಗಳನ್ನೋ ಸಾಗಿಸಲು ಬಳಸುತ್ತಾರೆ. ಹೊರೆಹೊತ್ತ ಕತ್ತೆಯನ್ನು ಸರಿದಾರಿಯಲ್ಲಿ ನಡೆಸಲು ಅದಕ್ಕೆ ಹೊಡೆಯುತ್ತಾರೆ. ಏಟುಗಳನ್ನು ತಿನ್ನುತ್ತಲೇ ಅದು ದುಡಿಯುತ್ತದೆ. ಅದರ ದುಡಿಮೆಗೆ ಸಿಗುವ ಪ್ರತಿಫಲವೆಂದರೆ ಬರಿಯ ಲತ್ತೆಗಳು, ಅದೊಂದು ಮಂದಬುದ್ದಿಯ ಕಷ್ಟಜೀವಿ. ಯಜಮಾನನು ಸೂಚಿಸಿದಂತೆ ದುಡಿಯುವುದಷ್ಟೇ ಅದಕ್ಕೆ ಗೊತ್ತು.
ಕತ್ತೆಯ ಸ್ವಭಾವದವರು ಮನುಷ್ಯರಲ್ಲೂ ಇದ್ದಾರೆ. ಇವರನ್ನು ಕೋಣರೆಂದೂ ಕರೆಯುತ್ತಾರೆ. ದಡ್ಡ ಪ್ರಕೃತಿಯವರಲ್ಲಿ ಮೊಂಡಾಟ ಹೆಚ್ಚು, ಅಂಥ ಕೆಲವರಲ್ಲಿ ದೈತ್ಯಶಕ್ತಿಯೂ ಇರುತ್ತದೆ. ಅದು ಅವರಿಗೆ ತಿಳಿದಿರುವುದಿಲ್ಲ. ಬೇರೆಯವರು ಹೇಳಿದುದನ್ನು ಅರ್ಥಮಾಡಿಕೊಳ್ಳುವ, ಪಾಲಿಸುವ ಬುದ್ದಿಯೂ ಅವರಲ್ಲಿ ಇರುವುದಿಲ್ಲ. ಅಂಥವರಿಗೆ ಬುದ್ದಿವಾದ ಕೆಲಸ ಮಾಡುವುದಿಲ್ಲ. ಬಾರಿಸಿಯೋ, ಬೈದೋ ಅವರಿಂದ ಹೇಳಿದ ಕೆಲಸ ಮಾಡಿಸಬೇಕಾಗುತ್ತದೆ.
ಮೂರ್ಖರಿಗೆ ಉಪದೇಶಮಾಡುವುದು ಅವರನ್ನು ರೇಗಿಸಲು ಕಾರಣವಾಗುತ್ತದೆಯೇ ಹೊರತು ಸಮಾಧಾನ ಪಡಿಸುವುದಿಲ್ಲ. ಸರ್ವಗಳಿಗೆ ಹಾಲನ್ನು ಕುಡಿಸುವುದರಿಂದ ಅವುಗಳ ವಿಷವೇ ಹೆಚ್ಚಾಗುತ್ತದೆ – ಹೀಗೆಂದಿದೆ ಒಂದು ಸುಭಾಷಿತ.
ಮೂರ್ಖರಾದವರಿಗೆ ಎಷ್ಟು ವರ್ಷ ಬುದ್ದಿವಾದ ಹೇಳಿದರೂ ಅದು ಹೆಬ್ಬಂಡೆಯ ಮೇಲೆ ಮಳೆ ಸುರಿದ ಹಾಗೆ. ಬಂಡೆಯ ಒಳಗೆ ಮಳೆಯ ನೀರು ಇಳಿಯುವುದಿಲ್ಲ, ಮೂರ್ಖನಿಗೆ ಬುದ್ದಿವಾದ ನಾಟುವುದಿಲ್ಲ – ಎಂದಿದ್ದಾನೆ ಸರ್ವಜ್ಞ
ಬುದ್ದಿವಂತರಿಗೆ, ವಿವೇಕಿಗಳಿಗೆ, ಜಾಣರಿಗೆ ಅವರು ಮಾಡಿದ ತಪ್ಪನ್ನೇ ಎತ್ತಿಹಿಡಿದರೆ ಸಾಕು, ಅವರು ಎಚ್ಚೆತ್ತು ಕೊಳ್ಳುತ್ತಾರೆ. ಮತ್ತೆಂದೂ ಅವರು ಅಂತಹ ಪ್ರಮಾದಗಳನ್ನು ಮಾಡುವುದಿಲ್ಲ. ಅವರಿಗೆ ಮಾತಿನ ಪೆಟ್ಟೇ ಸಾಕು. ಚಾಟಿ ಏಟಿನ ಅಗತ್ಯವಿಲ್ಲ.
‘ಸಹಜಸುಂದರವಾದ ವಸ್ತುವಿಗೆ ಮತ್ತೆ ಸಂಸ್ಕಾರವೇನೂ ಬೇಕಾಗುವುದಿಲ್ಲ. ಮುತ್ತನ್ನು ಸಾಣೆಕಲ್ಲಿನಲ್ಲಿ ಉಜ್ಜುವುದು ಅನವಶ್ಯಕ’ವೆಂಬ ಸುಭಾಷಿತದ ಹೇಳಿಕೆ ಜಾಣರ ವಿಚಾರದಲ್ಲಿ ಯುಕ್ತಿಯುಕ್ತವಾಗಿದೆ.
೧೭. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು.
ಇದು ಬೇಸಾಯದ ಹಿರಿಮೆಯನ್ನು ವಿವರಿಸುವ ಗಾದೆ. ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ವಿದ್ಯೆಗಳಿವೆ. ಅವುಗಳಲ್ಲೆಲ್ಲ ಮೇಟಿ ವಿದ್ಯೆ ಎಂದರೆ ಭೂಮಿಯನ್ನು ಉತ್ತು ಬಿತ್ತಿ ಬೆಳೆ ಬೆಳೆಯುವ ರೈತನ ವಿದ್ಯೆಯೇ ಶ್ರೇಷ್ಠವಾದುದು ಎಂದು ಈ ಗಾದೆ ಸಾರುತ್ತದೆ.
ಪ್ರಪಂಚದಲ್ಲಿ ಅಧ್ಯಯನ ಮಾಡಲು ಅನೇಕಾನೇಕ ವಿದ್ಯೆಗಳಿವೆ. ಹಿಂದಿನ ಕಾಲದಲ್ಲಿದ್ದ ವಿದ್ಯೆಗಳಲ್ಲದೆ, ಹೊಸಹೊಸ ವಿದ್ಯೆಗಳೂ ಸೃಷ್ಟಿಯಾಗುತ್ತಿವೆ. ಹಲವರು ಹಲವು ವಿದ್ಯೆಗಳನ್ನು ಕಲಿಯುತ್ತಾರೆ. ವಿದ್ಯೆಗೆ ಅನುಗುಣವಾಗಿ ಉದ್ಯೋಗಗಳನ್ನು ಪಡೆಯುತ್ತಾರೆ. ಜೀವನ ಸಾಗಿಸುತ್ತಾರೆ. ಈ ಬಗೆಯ ಉದ್ಯೋಗದಿಂದ ಅವರು ಹಣವನ್ನು ಗಳಿಸುತ್ತಾರೆ. ಆ ಹಣದಿಂದ ಆಹಾರ ಪದಾರ್ಥಗಳನ್ನು ಕೊಳ್ಳುತ್ತಾರೆ. ಉಂಡು ಬದುಕುತ್ತಾರೆ. ಅವರು ಪಡೆದ ವಿದ್ಯೆಯಿಂದ ಹಣವನ್ನು ಸಂಪಾದಿಸುತ್ತಾರೆ. ಆ ಮೂಲಕ ಆಹಾರ. ಆದರೆ ಅವರು ಕಲಿತ ವಿದ್ಯೆಯಿಂದ ಆಹಾರವನ್ನು ಬೆಳೆಯಲಾಗುವುದಿಲ್ಲ.
ನೇಗಿಲಿನಿಂದ ಭೂಮಿಯನ್ನು ಉಳಬೇಕು. ನೇಗಿಲಿನ ಹಿಂಭಾಗದಲ್ಲಿರುವ ಹಿಡಿಕೆಯನ್ನು ಮೇಟಿಯೆಂದು ಕರೆಯುತ್ತಾರೆ. ನೇಗಿಲಿನಿಂದ ಮುಂದೆ ಚಾಚಿರುವ ಈಸಿನ ಮರಕ್ಕೆ ನೊಗವನ್ನು ಕಟ್ಟಿ. ಅದಕ್ಕೆ ಎತ್ತುಗಳನ್ನು ಹೂಡಿ, ಮೇಟಿಯನ್ನು ಹಿಡಿದ ರೈತ ಹದವರಿತು ಭೂಮಿಯನ್ನು ಉಳುಮೆ ಮಾಡುತ್ತಾನೆ. ಮಣ್ಣನ್ನು ಹುಡಿಯಾಗಿಸುತ್ತಾನೆ. ಮಣ್ಣಿನೊಡನೆ ಗೊಬ್ಬರವನ್ನು ಸೇರಿಸುತ್ತಾನೆ. ಬೀಜವನ್ನು ಬಿತ್ತುತ್ತಾನೆ. ಸಸಿಗಳಿಗೆ ನೀರೊಡುವುದು, ಸಮಯಕ್ಕೆ ಸರಿಯಾಗಿ ಗೊಬ್ಬರ ಹಾಕುವುದು, ಕಳೆಕೀಳುವುದು, ರೋಗವನ್ನು ನಿಯಂತ್ರಿಸುವುದು, ಬೆಳೆದ ಬೆಳೆಯನ್ನು ಸಕಾಲದಲ್ಲಿ ಕೊಯ್ದು ಒಕ್ಕಣೆ ಮಾಡಿ, ಹುಲ್ಲು ನೆಲ್ಲು ಬೇರ್ಪಡಿಸುವುದು. ಇವೆಲ್ಲವೂ ಮೇಟಿ ವಿದ್ಯೆಯ ಮುಖ್ಯಾಂಶಗಳಾಗಿವೆ. ರೈತನಾದವನು ಅನುಭವದಿಂದಲೇ ಇದನ್ನು ಕಲಿತಿರುತ್ತಾನೆ. ಈಗ ಈ ವಿದ್ಯೆಯನ್ನು ಕಲಿಸುವ ವಿಶ್ವವಿದ್ಯಾನಿಲಯಗಳೂ ಇವೆ. ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದವರಿಗಿಂತ ಸ್ವಾನುಭವ ಹೊಂದಿದ ರೈತನೇ ಮೇಲು ಎನ್ನುವಂತಾಗಿದೆ.
ಈ ಮೇಟಿ ವಿದ್ಯೆಯನ್ನು ಮರೆತರೆ, ಕೈಬಿಟ್ಟರೆ ಹೊಟ್ಟೆಗೆ ಹಿಟ್ಟಿಲ್ಲದಂತಾಗುತ್ತದೆ. ಆಹಾರವಿಲ್ಲದೆ ಜನರು ಸಾಯುವ ಸ್ಥಿತಿ ಬರುತ್ತದೆ. ಆದ್ದರಿಂದ ಎಲ್ಲ ವಿದ್ಯೆಗಳಿಗಿಂತ ಮೇಟಿ ವಿದ್ಯೆಯೇ ಮೇಲಾದುದಾಗಿದೆ. ಆದರೆ ಈಗೀಗ ಜನರು ಅದನ್ನು ಕಡೆಗಣಿಸು ತ್ತಿದ್ದಾರೆ. ಕೃಷಿಭೂಮಿಯನ್ನು ಕಾರ್ಖಾನೆಗಳಿಗೆ, ವಸತಿ ಸೌಕರ್ಯಗಳಿಗೆ ಬಳಸಲಾಗುತ್ತಿದೆ. ರೈತರು ಬೇರೆ ಉದ್ಯೋಗವನ್ನರಸಿ ನಗರಗಳತ್ತ ವಲಸೆಹೋಗುತ್ತಿದ್ದಾರೆ. ಇದರ ಪರಿಣಾಮವನ್ನು ಅನುಭವಿಸುವ ಸಮಯ ಹೆಚ್ಚು ದೂರದಲ್ಲಿಲ್ಲವೆನಿಸುತ್ತಿದೆ.
ಕಾಲಮೀರುವ ಮೊದಲು ಜನರು ಮೇಟಿ ವಿದ್ಯೆಯ ಹಿರಿಮೆಯನ್ನು ಅರಿಯುವುದು ಒಳ್ಳೆಯದು.̇
೧೮. ಆಕಳು ಕಪ್ಪಾದರೆ ಹಾಲು ಕಪ್ಪೆ?
ಸಾಮಾನ್ಯವಾಗಿ ಜನರು ಮುಖವನ್ನು, ದೇಹದ ಗಾತ್ರ-ಎತ್ತರ-ದಪ್ಪ-ಬಣ್ಣಗಳನ್ನು ನೋಡಿ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಂಡುಬಿಡುತ್ತಾರೆ. ಈ ರೀತಿ ವ್ಯಕ್ತಿಯ ಬಣ್ಣ – ಮುಖ ನೋಡಿ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ವ್ಯಕ್ತಿಯ ಗುಣ ಎಂತಹುದೆಂಬುದನ್ನು ಸರಿಯಾಗಿ ಪರೀಕ್ಷಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಈ ಗಾದೆ ಮಾರ್ಗದರ್ಶನ ಮಾಡುತ್ತಿದೆ. ‘ಬೆಳ್ಳಗಿರುವುದೆಲ್ಲ ಹಾಲಲ್ಲ’ ಎಂಬ ಗಾದೆಯೂ ಇದೇ ರೀತಿ ನಮಗೆ ಎಚ್ಚರಿಕೆಯನ್ನು ನೀಡುತ್ತದೆ.
ಆಕಳು ಎಂದರೆ ಹಸು, ಎಷ್ಟೋ ಹಸುಗಳು ನೋಡಲು ಕಪ್ಪು; ಕಪ್ಪು-ಬಿಳಿ-ಕೆಂದು ಬಣ್ಣಗಳನ್ನು ಹೊಂದಿರುತ್ತವೆ. ಆದರೆ ಅದು ಕೊಡುವ ಹಾಲು ಬೆಳ್ಳಗಿರುತ್ತದೆ. ಹಾಲಿನ ಬಣ್ಣ ಹಸುವಿನ ಬಣ್ಣವನ್ನು ಅವಲಂಬಿಸಿರುವುದಿಲ್ಲ. ಒಳ್ಳೆಯ ಚಿನ್ನದಂತೆ ಮಿನುಗುವ ಹಳದಿ-ಕೆಂಪು ಮಿಶ್ರಿತವಾದ ಲಕಲಕ ಹೊಳೆಯುವ ಬಣ್ಣವನ್ನು ಹೊಂದಿರುವ ಜನರೆಲ್ಲರ ಮನಸ್ಸು ಅಷ್ಟೇ ಶುಭ್ರವಾಗಿರುವುದಿಲ್ಲ. ಶುಭ್ರ – ಶ್ವೇತ ವರ್ಣಿಯರು ಮಹಾ ಕೊರಮರು ಆಗಿರಬಹುದು. ಇದರಂತೆ ನೋಡಲು ವಿಕಾರವಾಗಿ, ಕಪ್ಪಾಗಿರುವ ಜನರ ಮನಸ್ಸು ಅತ್ಯಂತ ಮೃದುವಾಗಿಯೂ, ಸಹಾನುಭೂತಿ, ಸಹಕಾರ, ಸಹಾಯಪರಾದಿ ಉತ್ತಮ ಗುಣಗಳನ್ನು ರೂಢಿಸಿಕೊಂಡಿರಬಹುದು. ವ್ಯಕ್ತಿಯ ವ್ಯಕ್ತಿತ್ವಕ್ಕೂ ಅವನ ಮೈಯ ಬಣ್ಣಕ್ಕೂ ಯಾವ ಸಂಬಂಧವೂ ಇರುವುದಿಲ್ಲವೆಂದು ಈ ಗಾದೆ ಅರ್ಥವತ್ತಾಗಿ ಹೇಳುತ್ತಿದೆ.
೧೯. ಪಟ್ಣ ಆಳುವ ದೊರೆಗಿಂತ ಕೊಟ್ಣ ಕುಟ್ಟುವ ತಾಯಿ ಲೇಸು.
ಜಾನಪದರು ‘ತಾಯಿ’ಯ ಮಹತ್ವವನ್ನು ಈ ಗಾದೆಮಾತಿನ ಮೂಲಕ ವಿವರಿಸಿದ್ದಾರೆ. ಕೆಲವರಿಗೆ ದೊರೆಯ ಕಣ್ಣಿಗೆ ಬೀಳುವ ಹುಚ್ಚು, ಸದಾ ಅಧಿಕಾರದಲ್ಲಿರುವವರ ಹಿಂದೆ-ಮುಂದೆ ಬಾಲಗಳಂತೆ ಸುಳಿದಾಡುತ್ತಿರುತ್ತಾರೆ. ಅಧಿಕಾರಿಯಾದವನು ಅಥವಾ ದೊರೆಯಾದವನು ತನ್ನ ಕೆಲಸ-ಕಾರ್ಯಗಳಿಗೆ ಇಂತಹ ಹಿಂಬಾಲಕರನ್ನು ಬಳಸಿಕೊಂಡು ಶೋಷಿಸುವುದು ಅರಿವಿಗೆ ಬರುವುದಿಲ್ಲ. ಅಲ್ಲದೆ ಯಾವಾಗ ಬೇಕಾದರೂ ದೊರೆಯ ಕೆಂಗಣ್ಣು ತನ್ನ ಮುಂದಿರುವವರ ಮೇಲೆ ಹರಿಹಾಯಬಹುದು.
ಆದ್ದರಿಂದ ದೊರೆಯ ಕಣ್ಣಿನಿಂದ ಸಾಧ್ಯವಾದಷ್ಟು ದೂರವಿರುವುದು ಮೇಲು ತಾಯಿ ಹಾಗಲ್ಲ. ಎಂತಹ ಕಷ್ಟದಲ್ಲಿ ತಾನು ಕೊರಗುತ್ತಿದ್ದರೂ ಮಕ್ಕಳಿಗೆ ಒಳಿತನ್ನೇ ಬಯಸುತ್ತಾಳೆ. ಸದಾ ಅವರ ಕ್ಷೇಮಕ್ಕಾಗಿ ಶ್ರಮಿಸುತ್ತಾಳೆ. ಮಕ್ಕಳ ಎಲ್ಲ ತಪ್ಪುಗಳನ್ನೂ ಹೊಟ್ಟೆಗೆ ಹಾಕಿಕೊಂಡು ಕ್ಷಮಿಸಿಬಿಡುವ ಕ್ಷಮಯಾಧರಿತ್ರಿ ಆಕೆ. ಆದರೆ ಪಟ್ಟಣವನ್ನು ಆಳುವ ದೊರೆಯ ಕೈಗೆ ತಪ್ಪು ಮಾಡಿದವನು ಸಿಕ್ಕಿದರೆ ಶಿಕ್ಷಿಸದೆ ಬಿಡುವುದಿಲ್ಲ. ತಾಯಿಗಾದರೆ ತನ್ನ ಕರುಳಿನ ಕುಡಿಗಳೆಂಬ ಮಮತೆಯಲ್ಲಿ ಯಾವುದೂ ದೊಡ್ಡ ತಪ್ಪಾಗಿ ತೋರುವುದಿಲ್ಲ, ದೊರೆಗೆ ಎಲ್ಲರೂ ಒಂದೇ. ಆತನ ವಿಶ್ವಾಸ-ಸ್ನೇಹ ಎಂದಿಗೂ ಶಾಶ್ವತವಲ್ಲ. ನಿರಂತರವಾಗಿ ವಾತ್ಸಲ್ಯವನ್ನು ತೋರುವ ತಾಯಿ ಕೊಟ್ಟಣ ಕುಟ್ಟಿ ಬದುಕುವಳಾದರೂ ತನ್ನ ಮಕ್ಕಳನ್ನು ಕಡೆಗಣಿಸುವುದಿಲ್ಲವಾದ್ದರಿಂದ ಪಟ್ಟಣ ಆಳುವ ದೊರೆಗಿಂತ, ಕೊಟ್ಟಣ ಕುಟ್ಟುವ ತಾಯಿ ಲೇಸೆಂದು ಜಾನಪದರು ನೀತಿ ಹೇಳಿದ್ದಾರೆ.
೨೦. ಹಣ್ಣಿಗೆ ತುಪ್ಪದ ಆಸೆ, ಹಾಲಿಗೆ ಸಕ್ಕರೆ ಆಸೆ.
ಇದೊಂದು ಅವರೂಪದ ಗಾದೆಮಾತು. ಹಣ್ಣು ಸರಾ ತುಪ್ಪದ ಸಹವಾಸವನ್ನು ಬಯಸುತ್ತದೆ. ಅಂತೆಯೇ ಹಾಲು ಸಕ್ಕರೆಯನ್ನು ಬಯಸುತ್ತದೆ. ಹಣ್ಣು ತಾನೇ ಸ್ವತಃ ಸವಿರುಚಿಯನ್ನು ಪೌಷ್ಠಿಕತೆಯನ್ನು ಹೊಂದಿರುತ್ತದೆ, ತುಪ್ಪಕ್ಕೂ ಅದರದೇ ಆದ ರುಚಿ, ಪುಷ್ಟಿ ಎಲ್ಲವೂ ಇರುತ್ತದೆ. ಹಣ್ಣು ತುಪ್ಪಗಳನ್ನು ಒಂದರೊಡನೊಂದು ಬೆರೆಸಿದಾಗ ಅವುಗಳ ಸವಿರುಚಿಗಳು ಇಮ್ಮಡಿಸುತ್ತವೆ. ತಿಂದವರಿಗೂ ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಲಭಿಸುತ್ತವೆ. ದೇವರಿಗೂ ಕೂಡ ಶ್ರೇಷ್ಠ ನೈವೇದ್ಯವೆಂದೇ ಹೆಣ್ಣು-ತುಪ್ಪ ಇಡುವುದನ್ನು ನಾವು ನೋಡಿದ್ದೇವೆ.
ಇದೇ ರೀತಿ ಸಕ್ಕರೆ-ಹಾಲುಗಳಲ್ಲೂ ವಿಭಿನ್ನವಾದ ರುಚಿ-ಪೌಷ್ಠಿಕತೆಗಳಿದ್ದರೂ ಒಂದರೊಡನೊಂದು ಹಿತಮಿತವಾಗಿ ಬೆರೆತಾಗದೇ ಸವಿಸೊಗಸು ವೃದ್ಧಿಸುವುದು. ಹಾಲು ಸಕ್ಕರೆಯೊಂದಿಗೆ ಬೆರೆತಾಗ ಸಿಗುವ ರುಚಿ ಇನ್ನಾವುದರ ಜೊತೆ ಬೆರೆತಾಗಲೂ ಸಿಗುವುದಿಲ್ಲ. ಈ ಎರಡೂ ಉದಾಹರಣೆಗಳ ಮೂಲಕ ಜಾನಪದರು ಒಳ್ಳೆಯ ಗುಣಸ್ವಭಾವದ ಮನುಷ್ಯರು ಒಳ್ಳೆಯವರ ಸಹವಾಸವನ್ನೇ ಬಯಸುತ್ತಾರೆಂಬುದನ್ನು ಧ್ವನಿಸಿದ್ದಾರೆ. ಮಹತ್ತು ಮಹತ್ತನ್ನು ಅರಸುವಂತೆ, ಒಳ್ಳಿತು ಒಳ್ಳತನ್ನೇ ಬಯಸುತ್ತದೆ. ಎಂದಿಗೂ ಕೆಟ್ಟಿದ್ದನ್ನು ಬಯಸುವುದಿಲ್ಲ. ತುಂಬಾ ಒಳ್ಳೆಯ ಗುಣಗಳುಳ್ಳ ವ್ಯಕ್ತಿ ಮಷ್ಟನ ಸಹವಾಸವನ್ನು ಇಷ್ಟಪಡುವುದಿಲ್ಲ. ಅಹಿಂಸಾವ್ರತಧಾರಿ ಹಿಂಸಾಪ್ರವೃತ್ತಿಯವನಿಂದ ದೂರವಿರುತ್ತಾನೆ. ತನಗೆ ಅನುರೂಪವಾದುದರ ಜೊತೆ ಹಣ್ಣು-ಹಾಲುಗಳು ಕೂಡಿಕೊಳ್ಳುವಂತೆ ನಮಗೆ ಹೊಂದಿಕೆಯಾಗುವವರ ಜೊತೆಯನ್ನು ಬಯಸಬೇಕೆಂಬ ನೀತಿ ಈ ಗಾದೆ ಮಾತಿನಲ್ಲಿದೆ.
೨೧. ಹಡಗಿನ ವ್ಯಾಪಾರ, ಉಪ್ಪಿಗೆ ಬರ.
ಈ ಗಾದೆ ಮಾತು ಪರಸ್ಪರ ವೈರುದ್ಧವನ್ನು ನಿರೂಪಿಸುತ್ತದೆ. ಹಡಗಿನ ವ್ಯಾಪಾರವು ಸದಾಕಾಲ ಸಮುದ್ರದ ಉಪ್ಪು ನೀರಿನ ಸನ್ನಿಧಿಯಲ್ಲೇ ನೆರವೇರುವಂತಹದ್ದು, ಆದರೆ ಅಲ್ಲೇ ಉಪ್ಪಿಗೆ ಬರೆ ಎಂದರೆ? ದರ್ಜಯೊಬ್ಬ ಸದಾಕಾಲ ಊರವರ ತೊಡುವ ಬಟ್ಟೆಗಳನ್ನು ಹೊಲಿದು ಕೊಡುತ್ತಾನೆ. ಆದರೆ ಅವನ ಹೆಂಡತಿ ಮಕ್ಕಳು ಸದಾ ಬೆತ್ತಲೆ ಎಂಬ ಮಾತನ್ನು ಈ ಗಾದೆ ಮಾತು ನೆನಪಿಸುವಂತಿದೆ. ಸಮುದ್ರ ಲವಣಾಂಶಗಳಿಂದ ಕೂಡಿದ ಉಪ್ಪು ನೀರಿನ ಆಗರವಾಗಿರುತ್ತದೆ. ಇಲ್ಲಿ ಸದಾಕಾಲ ಹಡಗಿನ ವ್ಯಾಪಾರ ಮಾಡುವವನಿಗೆ ಉಪ್ಪು ಸಿಗುವುದಿಲ್ಲ. ಸಮೃದ್ಧತೆಯಲ್ಲೂ ತೋರುವ ದುರ್ಭಿಕ್ಷ ಗುಣವನ್ನು ಇಲ್ಲಿ ಅರ್ಥಮಾಡಿಕೊಳ್ಳಬೇಕು. ಸಮುದ್ರ ಉಪ್ಪಿನಿಂದ ತುಂಬಿದ್ದರೂ ನಮಗೆ ಬೇಕಾದ ಅಡುಗೆ ಉಪ್ಪಿನ ರೂಪ ಅಲ್ಲಿ ಸಿಗುವುದಿಲ್ಲ. ಹಾಗೆಯೇ ಮೇಲ್ನೋಟಕ್ಕೆ ಯಾವುದರ ಕೊರತೆ ಇಲ್ಲದವರಂತೆ ಕಾಣುವವರಲ್ಲಿ ಊಹಿಸಲಾಗದ ಕಷ್ಟಗಳಿರುತ್ತವೆ. ಇದನ್ನು ಹಡಗಿನ ವ್ಯಾಪಾರಿಗೆ ಉಪ್ಪಿಗೆ ಬರಬಂದ ಸ್ಥಿತಿಯ ಮೂಲಕ ವಿವರಿಸಲಾಗಿದೆ. ಹಡಗಿನ ವ್ಯಾಪಾರವನ್ನು ಅತಿ ಶ್ರೀಮಂತರು ಮಾತ್ರ ಮಾಡಲು ಸಾಧ್ಯ ಬಡವರ ಕೈಗೆ ಹಡಗಿನ ವ್ಯಾಪಾರ ಎಟುಕುವುದಿಲ್ಲ. ಉಪ್ಪು ಬಹಳ ದುಭಾರಿ ವಸ್ತುವಲ್ಲ. ಆದರೆ ಉಪ್ಪಿಗೂ ಬರ ಬಂದಂತಹ ವೈರುಧ್ಯವನ್ನು ಈ ಗಾದೆ ವಿವರಿಸಿದೆ.
೨೨. ಸಜ್ಜನರ ದುಃಖ, ದುರ್ಜನರ ಸಿರಿ ಶಾಶ್ವತವಲ್ಲ.
ಪ್ರಸ್ತುತ ಗಾದೆಯಲ್ಲಿ ಸಜ್ಜನಿಕೆ ಮತ್ತು ದುಷ್ಟ ಸ್ವಭಾವಗಳ ವಿಶ್ಲೇಷಣೆ ಮಾಡಲಾಗಿದೆ. ಸಜ್ಜನರೆಂದರೆ ಯಾರಿಗೂ ಕೆಡುಕನ್ನು ಮಾಡದೆ, ಕೆಟ್ಟದನ್ನು ಬಯಸದೆ, ತನ್ನ ಪಾಡಿಗೆ ತಾನು ಬದುಕುವ, ಸಾಧ್ಯವಾದರೆ ಇತರರಿಗೆ ಒಳ್ಳೆಯದನ್ನು ಉಪಕಾರವನ್ನು ಮಾಡುವವರು. ಇಂತಹವರಿಗೆ ಮುಖ ಒದಗಿದಾಗ ಅದು ಶಾಶ್ವತವಾಗಿರದೆ ಬೇಗ ಅಂತ್ಯ ಕಾಣುತ್ತದೆ. ತಮ್ಮ ಒಳ್ಳೆಯತನದಿಂದ ದುಃಖವನ್ನು, ಕಷ್ಟವನ್ನು ದಾಟಿ ಸಂತೋಷ-ಸಮಾಧಾನಗಳಿಂದ ಬದುಕುವ ಶಕ್ತಿ ಅವರಲ್ಲಿರುತ್ತದೆ. ಹೀಗಾಗಿ ಸಜ್ಜನರಿಗೆ ಒದಗಿಬರುವ ದುಖ ಸ್ಥಿರ-ಶಾಶ್ವತವಾಗಿ ಉಳಿಯದ ತಾತ್ಕಾಲಿಕವಾಗಿರುತ್ತದೆ. ಅದನ್ನವರು ತಮ್ಮ ಸಜ್ಜನಿಕೆಗೆ ಎದುರಾದ ಪರೀಕ್ಷೆಯೆಂಬಂತ ಜಯಿಸುತ್ತಾರೆ. ಇನ್ನು ದುರ್ಜನರೆಂದರೆ ಕೆಟ್ಟವರು. ಅವರು ಹಣವನ್ನು ಸಂಪಾದಿಸುವ ರೀತಿಯೂ ಕೆಟ್ಟದ್ದೇ. ಹಣ ಸಂಪಾದನೆಗಾಗಿ ಅವರಿವರಿಗೆ ಮೋಸ ಮಾಡುತ್ತಾರೆ. ಕಳ್ಳತನ, ವಂಚನೆ, ದರೋಡೆ, ಕೊಲೆ-ಸುಲಿಗೆ ಮುಂತಾದ ದುಷ್ಕೃತ್ಯಗಳನ್ನು ಮಾಡಿ ಹಣವನ್ನು ಲೂಟಿ ಮಾಡಿಕೊಳ್ಳುತ್ತಾರೆ. ಆದರೆ ಅನ್ಯಾಯದಿಂದ ಸಂಪಾದಿಸಿದ ಹಣ ಅವರ ಬಳಿ ಶಾಶ್ವತವಾಗಿ ಉಳಿಯುವುದಿಲ್ಲ ನ್ಯಾಯಮಾರ್ಗದಲ್ಲಿ ಸಂಪಾದಿಸಿದ ಹಣಕ್ಕೆ ಬೆಲೆ ಇರುತ್ತದೆ, ಅದು ಉಳಿಯುತ್ತದೆ. ಅಕ್ರಮವಾಗಿ ಸಂಪಾದಿಸಿದ ಹಣಕ್ಕೆ ಬೆಲೆಯಿಲ್ಲ. ಅದು ಸ್ಥಿರವೂ ಅಲ್ಲ. ಆದ್ದರಿಂದ ಸಜ್ಜನರಿಗೆ ದುಃಖ, ದುರ್ಜನರ ಹಣ ಎರಡೂ ಸ್ಥಿರವಲ್ಲ, ಅಶಾಶ್ವತ ಎಂದು ಸಜ್ಜನಿಕೆಯ ಅಗತ್ಯವನ್ನು ಅನುಭವಿಗಳು ಒತ್ತಿ ಹೇಳಿದ್ದಾರೆ.
೨೩. ಆಪತ್ತಿಗಾದವನೆ ನೆಂಟ, ತಾಪತ್ರೆಗೆ ಬಂದವನೇ ಬಂಟ
ನಮ್ಮ ಕಷ್ಟಕಾಲದಲ್ಲ ನೆರವು ನೀಡುವವನೇ ನಮಗೆ ನೆಂಟ, ಕಡುಕಷ್ಟದಲ್ಲಿ ಜೊತೆಯಲ್ಲಿ ಉಳಿಯುವವನೇ ನಿಜವಾದ ಸ್ನೇಹಿತನೆಂಬ ಸತ್ಯವನ್ನು ಈ ಗಾದೆ ಮಾತು ವಿವರಿಸುತ್ತಿದೆ. ನಾವು ರಕ್ತ ಸಂಬಂಧಿಗಳನ್ನು ದೂರದ ಬಂಧುಗಳನ್ನು ನಮ್ಮ ನೆಂಟರೆಂದು ಹೇಳಿಕೊಳ್ಳುತ್ತೇವೆ. ಇದು ಸಂಬಂಧದ ಎಳೆ ಮಾತ್ರ. ಆದರೆ ಯಾರು ನಮ್ಮ ಆವತ್ತಿನ ಕಾಲದಲ್ಲಿ ನೆರವಿಗೆ ಬರುತ್ತಾರೋ ಅವರನ್ನು ನಮ್ಮ ನೆಂಟರೆಂದು ಭಾವಿಸಬೇಕು. ಅವರು ಯಾವ ಜಾತಿಯವರಾಗಿರಲಿ, ಧರ್ಮದವ ರಾಗಿರಲಿ, ಬಡವರಾಗಿರಲಿ ಅದು ಮುಖ್ಯವಲ್ಲ, ನಮ್ಮ ಆಪತ್ತಿನ ಕಾಲದಲ್ಲಿ ಕಾಪಾಡಿದವರು ನಿಜವಾದ ನೆಂಟರು. ಹೀಗಲ್ಲದೆ ಸುಮ್ಮನೇ ನೆಂಟರೆಂದು ನಾವು ಹೇಳಿಕೊಳ್ಳುವವರು ನಿಜವಾದ ನೆಂಟರಲ್ಲ. ಅವರು ನಮ್ಮ ಕಷ್ಟಗಳನ್ನು ನೋಡಿ ಒಳಗೊಳಗೆ ಖುಷಿಪಡುತ್ತಾರೆ. ನಮ್ಮ ಬಳೆಯನ್ನು ಕಂಡು ಮಾತ್ರರ ಪಡುತ್ತಾರೆ. ನಾವು ಬದುಕಿನಲ್ಲಿ ಎಡವಿದಾಗ ಆಡಿಕೊಂಡು ನಗುತ್ತಾರೆ. ಇಂತಹವರು ನಮಗೆ ನೆಂಟರಲ್ಲ. ಅದೇ ರೀತಿಯಲ್ಲಿ ಬಂಟ ಅಥವಾ ಗೆಳೆಯರು ಕಡುಕಷ್ಟದಲ್ಲಿ ಜೊತೆಗಿರುತ್ತಾರೆ. ನಾವು ಸುಖವಾಗಿದ್ದಾಗ ಮಾತ್ರ ಜೊತೆಗಿರುವ ಸ್ವಾರ್ಥಿಗಳು ನಮಗೆ ಬಂಟರಲ್ಲ. ನಿಜವಾದ ಗೆಳೆಯರು ಕಷ್ಟಕಾಲದಲ್ಲಿ ಜೊತೆಗಿರುತ್ತಾರೆ. ನಾವು ಸುಖವಾಗಿದ್ದಾಗ ಮಾತ್ರ ಜೊತೆಗಿರುವ ಸ್ವಾರ್ಥಿಗಳು ನಮಗೆ ಬಂಟರಲ್ಲ. ನಿಜವಾದ ಗೆಳೆಯರು ಕಷ್ಟಕಾಲದಲ್ಲಿ ಸಹಾಯಹಸ್ತ ಚಾಚುತ್ತಾರೆ. ಆದ್ದರಿಂದ ಎಲ್ಲರನ್ನೂ ನೆಂಟರೆಂದು ಬಂಟರೆಂದು ನಂಬಿ ಮೋಸಹೋಗದೆ, ಕಷ್ಟಕಾಲದಲ್ಲಿ ಜೊತೆಗಿರುವವರನ್ನು ನಂಬಿ ಬದುಕಬೇಕೆಂಬುದನ್ನು ಜಾನಪದರು ಈ ಗಾದೆಯಲ್ಲಿ ತಿಳಿಸಿ ಹೇಳಿದ್ದಾರೆ.
೨೪. ಊರು ಉಪಕಾರವರಿಯದು, ಹೆಣ ಶೃಂಗಾರವರಿಯದು.
ಜನಸೇವೆಯೇ ಜನಾರ್ದನನ ಸೇವೆ, ಆದ್ದರಿಂದ ಜನಸೇವೆ ಮಾಡಿರೆಂದು ಒಂದು ಗಾದೆ ಹೇಳಿದರೂ ಮತ್ತೊಂದು ಗಾದೆ ಊರು ಉಪಕಾರ ಅರಿಯದು, ಹೆಣ ಸಿಂಗಾರವರಿಯದು ಎಂದು ಹೇಳಿ ಊರನ್ನು ಹೆಣಕ್ಕೆ ಹೋಲಿಸಿದೆ. ಏಕೆಂದರೆ ಉಪಕಾರ ಮಾಡಿದವರು ಪ್ರತಿಉಪಕಾರವನ್ನು ಬಯಸಬಾರದೆಂದು ಸೂಚಿಸುವ ನಿಮಿತ್ತ ಎನ್ನಬಹುದು.
ಒಂದು ಊರಿಗೆ ನೀರಿನ ಸೌಕಯ್ಯವನ್ನುಂಟುಮಾಡಲು ಲಕ್ಷಾಂತರ ರೂಪಾಯಿ ಹಣವನ್ನು ಒಬ್ಬ ದಾನಿ ಖರ್ಚು ಮಾಡಿದರೂ ಆ ದಾನಿಯ ಔದಾಯವನ್ನಾಗಲೀ, ಆತ ಕೆರೆ ಕಟ್ಟಿಸಲು ವಹಿಸಿದ ಶ್ರಮವನ್ನಾಗಲೀ ಎಲ್ಲರೂ ಗುರುತಿಸಿ ಅವನನ್ನು ಹೊಗಳುವುದಿಲ್ಲ. ಊರಿನಲ್ಲಿ ನೂರಾರು ವಿವಿಧ ಧೋರಣೆಯುಳ್ಳ ಜನರಿರುವುದರಿಂದ ಅವರು ತಮ್ಮದೇ ಆದ ರೀತಿಯಲ್ಲಿ ಇತರರನ್ನು ಟೀಕಿಸುತ್ತಾರೆ. ಉದಾಸೀನದಿಂದಲೂ ಇರುತ್ತಾರೆ. ಆದ್ದರಿಂದ ಊರಿಗೆ ಉಪಕರಿಸಿ “ನಾನು ಮಹಾತ್ಮ” ಎಂದು ಬೀಗಿ ಊರಿನಿಂದ ಪ್ರತಿಮರ್ಯಾದೆಯನ್ನು ಬಯಸಿದರೆ ಹತಾಶೆ ತಪ್ಪಿದ್ದಲ್ಲ. ಹೆಣಕ್ಕೂ ಶೃಂಗಾರ ಮಾಡುವುದು ಶೃಂಗಾರ ಮಾಡುವವರಿಗೆ ಆ ದೇಹದಲ್ಲಿನ ಜೀವಿಯ ಮೇಲಿನ ಗೌರವದಿಂದ ಹೆಣದಿಂದ ನಾವು ಯಾವ ಪ್ರತ್ಯುಪಕಾರ-ಹೊಗಳಿಕೆಯನ್ನು ಬಯಸದಿರುವ ಹಾಗೆ ಊರಿಗೆ ಉಪಕರಿಸಿ ಪ್ರತಿಫಲಾಪೇಕ್ಷೆಯನ್ನು ಹೊಂದಬಾರದೆಂದು ಈ ಗಾದೆ ಸೂಚಿಸಿದೆ.
೨೫. ದುಷ್ಪರನ್ನು ಕಂಡರೆ ದೂರವಿರು.
ಈ ಗಾದೆ ಮಾತನ್ನು ಸದಾ ನಾವೆಲ್ಲರೂ ಬಳಸುತ್ತಲೇ ಇರುತ್ತೇವೆ. ಇದಕ್ಕೆ ಕಾರಣ ‘ದುಷ್ಟತನ’ವನ್ನು ಎಲ್ಲರೂ ದೂರವಿಡುವುದು, ಒಳ್ಳೆಯದಾಗಲಿ, ಒಳ್ಳೆಯವರಾಗು ಎಂದು ಇತರರಿಗೆ ಆಶಿಸುತ್ತೇವೆಯೇ ಹೊರತು ದುಷ್ಟನಾಗು. ದುಷ್ಟರ ಸಹವಾಸ ಮಾಡೆಂದು ಯಾರನ್ನೂ ಯಾರೂ ಆಶೀರ್ವದಿಸುವುದಿಲ್ಲ. ಮಷ್ಟತನ ಅದು ಯಾವ ಸ್ವರೂಪದ್ದೇ ಇರಲಿ, ಅದು ಸಮಾಜಘಾತುಕ ಶಕ್ತಿಯಾಗಿರುತ್ತದೆ. ಅಂಥವರ ಸಹವಾಸದಿಂದ ಒಂದೋ ತೊಂದರೆಗೆ ಸಿಲುಕಿಕೊಳ್ಳುತ್ತೇವೆ ಇಲ್ಲವೇ ನಾವೂ ದುಷ್ಟರಾಗಿ ಪರಿವರ್ತನೆಗೊಳ್ಳುತ್ತೇವೆ. ಆದ್ದರಿಂದ ದುಷ್ಟರನ್ನು ಕಂಡರೆ ದೂರವಿರು ಎಂಬ ಮಾತು ಚಾಲ್ತಿಯಲ್ಲಿರುವುದು.
ಒಳ್ಳೆಯವರಿಂದ ದೂರವಿರು ಎಂದು ಯಾರೂ ಹೇಳುವುದಿಲ್ಲ. ಒಳ್ಳೆಯವರ ಅಂದರೆ ಶಿಷ್ಟರ ಸಹವಾಸ ನಮಗೆ ದೊರಕಿದರೆ ಅವರ ಒಳ್ಳೆಯತನದ ಅಂಶಗಳು ನಮ್ಮ ವ್ಯಕ್ತಿತ್ವವನ್ನು ಅವರಿಸಿಕೊಂಡು ನಾವೂ ಒಳ್ಳೆಯವರಾಗುತ್ತೇವೆ. ಆದರೆ ಒಳ್ಳೆಯವರಿಗಿಂತ ದುಷ್ಟರ ಪ್ರಭಾವ ಅಧಿಕ. ಬೇಗ ಕೆಟ್ಟತನದ ಕಡೆಗೆ ಮನಸ್ಸು ಜಾರಿ ಕೆಡುಕನ್ನು ವ್ಯಕ್ತಿತ್ವದಲ್ಲಿ ತುಂಬಿಕೊಳ್ಳುತ್ತೇವೆ. ಹೀಗೆ ಮಾಡಿ ಬದುಕನ್ನು ಹಾಳು ಮಾಡಿಕೊಳ್ಳುವ ಮುನ್ನ ಎಚ್ಚರವಹಿಸಿ ದುಷ್ಟರಿಂದ ದೂರವಿರುವುದು ಕ್ಷೇಮ. ನಾವು ಕೋಟ್ಯಧಿಪತಿ ಗಳಾಗದಿದ್ದರೂ ಚಿಂತೆಯಿಲ್ಲ, ಒಳ್ಳೆಯವರೆನ್ನಿಸಿಕೊಂಡು ಬದುಕಿದರೆ ಸಾಕೆಂಬ ಆಶಯ ನಮ್ಮ ಹಿರಿಯರದಾದ್ದರಿಂದ ಅವರು ದುಷ್ಪರಿಂದ ದೂರವಿರಬೇಕೆಂದು ತಿಳಿಸಿದ್ದಾರೆ. ಇದೊಂದು ಸಾಮಾಜಿಕ ಮೌಲ್ಯದ ಕಳಕಳಿಯುಳ್ಳ ಗಾದೆ ಮಾತಾಗಿದೆ.
೨೬. ಬುದ್ಧಿವಂತ ಬರೀತಾನೆ, ವಿವೇಕಿ ಆರಿತಾನೆ.
ಈ ಗಾದೆ ಮಾತು ಬರೆಯುವ ಮತ್ತು ಓದುವ ಸದಭಿರುಚಿಯ ಹವ್ಯಾಸವನ್ನು ವಿವರಿಸಿದೆ. ‘ಬುದ್ದಿವಂತ ಬರೀತಾನೆ’ ಎಂಬ ಮಾತು ಬರವಣಿಗೆಯು ಎಲ್ಲರಿಂದಲೂ ಸಾಧ್ಯವಿಲ್ಲವೆಂಬುದನ್ನು ದೃಢಪಡಿಸುತ್ತದೆ. ಬುದ್ಧಿವಂತನಾದವನು ತನ್ನ ಅನುಭವವನ್ನು ಜ್ಞಾನವನ್ನು ಕಲಾತ್ಮಕವಾಗಿ ಬರಹರೂಪಕ್ಕಿಳಿಸಿ ಕೃತಿ ರಚಿಸುತ್ತಾನೆ. ಆ ಅನುಭವ-ಜ್ಞಾನ ಇತರರಿಗೆ ದಾರಿದೀಪವಾಗಲಿ ಎಂಬ ಸದುದ್ದೇಶವು ಕೃತಿ ರಚನೆಯ ಹಿಂದೆ ಅಡಕವಾಗಿರುತ್ತದೆ. ಅದನ್ನು ಕೊಂಡು ಓದಬೇಕಾದುದು ವಿವೇಕಿಯ ಕರ್ತವ್ಯ ಅವಿವೇಕಿಗಳಿಗೆ ಪುಸ್ತಕದ ಮಹತ್ತ್ವ ತಿಳಿಯುವುದಿಲ್ಲ. ನಮಗೆ ಅರಿವಿರದ ಎಷ್ಟೋ ಸಂಗತಿಗಳನ್ನು ನಾವು ಪುಸ್ತಕ ಓದುವುದರ ಮೂಲಕ ಅರಿತುಕೊಳ್ಳಬಹುದು. ಬುದ್ಧಿವಂತೆ ಬರೆದಿರುವುದನ್ನು ಸರಿಯಾಗಿ ಅರಿತುಕೊಳ್ಳುವುದು ಮುಖ್ಯ ತಪ್ಪಾಗಿ ಅರ್ಥೈಸಿಕೊಳ್ಳುವುದು ಅವಿವೇಕದ ಕೆಲಸ, ಆದ್ದರಿಂದಲೇ ಸರ್ವಜ್ಞ ಒಂದು ಕಡೆ ‘ಓದಿದ ಓದೆಲ್ಲ ಮೇದ ಕಬ್ಬಿನ ಹಿಪ್ಪೆ, ಓದಿದ ಓದಿನರಿತರೆ ಹಿಪ್ಪೆಯೇ ಆದ ಕಬ್ಬಂತೆ” ಎಂದಿದ್ದಾನೆ. ಪುಸ್ತಕಗಳಿರುವುದು ನಮ್ಮ ಆಜ್ಞಾನವನ್ನು ನಿವಾರಿಸಿ, ಜ್ಞಾನದ ಬೆಳಕನ್ನು ತುಂಬಲು, ವಿವೇಕಿಯು ತನ್ನ ಓದನ್ನು ಸರಿಯಾಗಿ ಅರಿತು ಬದುಕನ್ನು ಬೆಳಗಿಸಿಕೊಳ್ಳುತ್ತಾನೆ. ಓದುಗಾರಿಕೆ ಮನುಷ್ಯನನ್ನು ವಜ್ರವಾಗಿಸುತ್ತದೆ. ಬೆಳಕು ಅಲ್ಲಿ ಪ್ರತಿಫಲಿಸುತ್ತದೆ. ಆದ್ದರಿಂದಲೇ ಬುದ್ದಿವಂತ ಬರೆಯುತ್ತಾನೆ, ವಿವೇಕಿ ಆರಿಯುತ್ತಾನೆಂಬ ಈ ಗಾದೆ ಮಾತು ಹುಟ್ಟಿಕೊಂಡಿದೆ.
೨೭. ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದಂತೆ.
ಇದೊಂದು ಅರ್ಥಪೂರ್ಣವಾದ, ಜನಪ್ರಿಯವಾದ ಗಾದೆಮಾತಾಗಿದೆ. ‘ಅವಸರದ ಸಿದ್ಧತೆ’ ಎಂಬುದು ಈ ಗಾದೆಮಾತಿನ ಅರ್ಥವಾಗಿದೆ. ಅವಸರದ ಸಿದ್ದತೆಯಿಂದ ಯಾವ ಪ್ರಯೋಜನವೂ ಇಲ್ಲ. ವಾರದಲ್ಲಿ ಒಂದು ದಿನ ಸಂತೆ ನಡೆಯುತ್ತದೆಂದು ಮೊದಲೇ ನಿಗದಿಯಾಗಿರುತ್ತದೆ. ಸಂತೆಯಲ್ಲಿ ವ್ಯಾಪಾರ ಮಾಡಬೇಕೆಂಬುವವರು ಮೊದಲೇ ಬಟ್ಟೆಯನ್ನು ಚೆನ್ನಾಗಿ ನೇಯ್ದು, ಸಂತೆಗೆ ಕೊಂಡೊಯ್ದರೆ ಅಲ್ಲಿ ಅದಕ್ಕೆ ಸೂಕ್ತ ಬೆಲೆ ಬರುತ್ತದೆ, ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ. ಅದು ಬಿಟ್ಟು ಸಂತೆಯ ದಿನ ಅವಸರವಸರವಾಗಿ ಮೂರು ಮೊಳದಷ್ಟು ನೇಯ್ದು ಮಾರಾಟಮಾಡಲು ಹೋದರೆ ಅದು ಗಿರಾಕಿಗಳನ್ನು ಆಕರ್ಷಿಸುವುದಿಲ್ಲ, ಬೆಲೆಯೂ ದೊರಕುವುದಿಲ್ಲ.
ಇದೇ ರೀತಿಯಲ್ಲಿ ಒಬ್ಬ ವಿದ್ಯಾರ್ಥಿಗೆ ‘ಪರೀಕ್ಷೆ’ ಯಾವಾಗ ನಡೆಯುತ್ತದೆಂಬುದು ಮೊದಲೇ ತಿಳಿದಿರುತ್ತದೆ. ಅಂದಂದಿನ ಪಾಠಪ್ರವಚನಗಳನ್ನು ಅಂದಂದೆ ಓದಿ ಮನನ ಮಾಡಿಕೊಂಡು ಬರಲಿರುವ ಪರೀಕ್ಷೆಗೆ ತಕ್ಕನಾದ ಸಿದ್ದತೆ ಮಾಡಿಕೊಂಡಿರಬೇಕು. ಓದಿ-ಉತ್ತೀರ್ಣರಾಗುವುದೇ ತಮ್ಮ ಗುರಿ ಎಂಬುದು ವಿದ್ಯಾರ್ಥಿಗೆ ತಿಳಿದಿರಬೇಕು. ಅದನ್ನು ಬಿಟ್ಟು ವರ್ಷಪೂರ್ತಿ ಸಮಯ ಹಾಳುಮಾಡಿಕೊಂಡು ಪರೀಕ್ಷೆ ತೀರ ಸಮೀಪವಿರುವಾಗ ಓದಲು ತೊಡಗಿದರೆ ಯಾವ ವಿಷಯವನ್ನೂ ಪೂರ್ತಿ ಓದಲಾಗದು. ಓದದೇ ಪರೀಕ್ಷೆ ಎದುರಿಸಲು ಬಂದ ವಿದ್ಯಾರ್ಥಿಯ ಸ್ಥಿತಿ ಸಂತೆ ಹೊತ್ತಿಗೆ ಮೂರು ಮೊಳ ನೇಯ್ದವನ ಸ್ಥಿತಿಯಂತೆಯೇ ನಿಷ್ಟ್ರಯೋಜಕವಾಗಿರುತ್ತದೆ. ಇದನ್ನೇ “ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ” ಎಂಬ ಮಾತನ್ನು ಬಳಸುವ ಮೂಲಕವೂ ಹೇಳುತ್ತೇವೆ. ಒಟ್ಟಾರೆ ಅವಸರದ ಸಿದ್ದತೆಯಿಂದ ಏನೂ ಉಪಯೋಗವಿಲ್ಲ ಎಂಬುದನ್ನು ಈ ಮೇಲಿನ ಮಾತು ಬಹು ಪರಿಣಾಮಕಾರಿಯಾಗಿ ಹೇಳಿದೆ ಎನ್ನಬಹುದು.
೨೮. ತುಂಬಿದ ಕೊಡ ತುಳುಕುವುದಿಲ್ಲ.
ಬಹಳ ಪ್ರಸಿದ್ಧವಾದ ಗಾದೆ ಮಾತಿದು. ನಮ್ಮ ನಡೆವಳಿಕೆಯನ್ನು ವಿಶ್ಲೇಷಿಸುವಾಗ ಈ ಮೇಲಿನ ಗಾದೆಮಾತನ್ನು ಉಪಯೋಗಿಸುತ್ತೇವೆ. ಬಾವಿಯಿಂದ ಮನೆಗೆ, ನಲ್ಲಿಯಿಂದ ಹೂಗಿಡಕ್ಕೆ ನೀರನ್ನು ಸಾಗಿಸಲು ಕೊಡಪಾನವನ್ನು ಬಳಸುತ್ತೇವೆ. ಹೆಂಗಸರು ಸಾಮಾನ್ಯವಾಗಿ ಸೊಂಟದ ಮೇಲೆ ಕೊಡಪಾನ ಇರಿಸಿಕೊಂಡು, ತೋಳಿನಿಂದ ಅದರ ಕಂಠವನ್ನು ಬಿಗಿಯಾಗಿ ಹಿಡಿದು ನಡೆಯುತ್ತಾರೆ. ಕೊಡಪಾನವು ತುಂಬಿರುವಾಗ ಹೊತ್ತೊಯ್ದರೆ ತುಳುಕುವುದಿಲ್ಲ, ಆದರೆ ಅರ್ಧ ತುಂಬಿರುವ ಕೊಡಪಾನವನ್ನು ಹಾಗೆ ಹೊತ್ತೊಯ್ಯುವುದು ತುಂಬಾ ಕಷ್ಟ, ಏಕೆಂದರೆ ನೀರೆಲ್ಲಾ ತುಳುಕಿ, ಹೊತ್ತವರ ಮೈಯೆಲ್ಲಾ ಒದ್ದೆಯಾಗುತ್ತದೆ. ಅರ್ಧ ತುಂಬಿದ ಕೊಡದಲ್ಲಿ ತುಳುಕಾಟ ಜಾಸ್ತಿ. ಇದು ಎಲ್ಲರ ಅನುಭವ. ಈ ಅನುಭವವನ್ನು ಹೇಳುವುದಷ್ಟೇ ಗಾದೆಯ ಉದ್ದೇಶವಲ್ಲ. ಗಾದೆಯ ಗುರಿ ಇನ್ನೂ ವಿಶಾಲವಾದ ಕ್ಷೇತ್ರವನ್ನು ವ್ಯಾಪಿಸುತ್ತದೆ.
ಇದನ್ನು ಮನುಷ್ಯರಿಗೆ ಅನ್ವಯಿಸಿ ಹೇಳುವುದಾದರೆ, ಯಾವುದೇ ವಿಚಾರವನ್ನು ಪೂರ್ತಿ ತಿಳಿದುಕೊಂಡಿರುವವರು ತುಂಬಿದ ಕೊಡದಂತೆ ತುಳುಕದೆ, ಶಬ್ದ ಮಾಡದೆ ಸಮಾಧಾನದಿಂದ, ಮೌನವಾಗಿ ಇರುತ್ತಾರೆ. ಅರ್ಧಂಬರ್ಧ ತಿಳಿದುಕೊಂಡವರು ತಾನೇ ಮಹಾಜ್ಞಾನಿಗಳೆಂಬಂತೆ ಬೀಗುತ್ತಿರುತ್ತಾರೆ. ತಮ್ಮ ಜ್ಞಾನದ ಸೀಮಿತದ ಅರಿವಿಲ್ಲದೆ ಎಲ್ಲ ವಿಚಾರವೂ ತಮಗೇ ಗೊತ್ತೆಂಬಂತೆ ಮಾತನಾಡಿ ನಗೆಪಾಟಲಿಗೀಡಾಗುತ್ತಾರೆ. ಇಂತಹವರನ್ನು ಅರ್ಥಕೊಡ, ತುಳುಕಾಟ ಜಾಸ್ತಿ ಎಂದು ಕರೆಯಲಾಗುತ್ತದೆ. ನಿಜವಾದ ಜ್ಞಾನವುಳ್ಳವನು, ಅರ್ಹತೆ ಹೊಂದಿದವನು ಹಾಗೆಲ್ಲ ಚೇಷ್ಟೆ ಮಾಡುವುದಿಲ್ಲ. ಒಂದು ದೇವಾಲಯಕ್ಕೋ, ವಿದ್ಯಾಲಯಕ್ಕೋ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟ ದಾನಿ ತನ್ನ ಹೆಸರನ್ನು ಹೇಳುವುದಕ್ಕೆ ಬಿಡದೆ ಭಕ್ತನ/ನಾಗರಿಕನ ಕಾಣಿಕೆ ಎಂದು ಹೇಳಿ ಸುಮ್ಮನಾಗಬಹುದು. ಆದರೆ ನೂರೊಂದು ರೂಪಾಯಿ ಕೊಟ್ಟವನು ತನ್ನ ಹೆಸರನ್ನು ದಪ್ಪಕ್ಷರದಲ್ಲಿ ಬರೆಸಿಹಾಕಬೇಕೆಂದು ಆಸೆ ಪಡಬಹುದು. ಆಗ ಹೇಳುತ್ತೇವೆ, “ಲಕ್ಷ ಕೊಟ್ಟವನು ಸುಮ್ಮನಿದ್ದಾನೆ. ನೂರು ಕೊಟ್ಟವನು ಮಾತನಾಡುತ್ತಾನೆ”.
ಯಾವುದೇ ವಿಷಯದಲ್ಲಿ ಪೂರ್ಣ ಜ್ಞಾನ ಪಡೆಯಬೇಕು. ಅರ್ಧ ಬೆಂದ ಇಟ್ಟಿಗೆ ಆಗಬಾರದು ಎನ್ನುವುದು ಈ ಗಾದೆಯು ನೀಡುವ ಎಚ್ಚರಿಕೆ. ತುಳುಕುವುದು ತುಂಬದ ಕೊಡವೇ, ಹಾಗೆಯೇ ಥಳುಕು-ಬಳುಕು ಮಾಡುತ್ತಾ ಮೆರೆದಾಡುವುದು ಅಲ್ಪತನವನ್ನು ಮುಚ್ಚಿಡುವ ಒಂದು ಸೋಗು ಆಗುತ್ತದೆಯೇ ಹೊರತು ದೊಡ್ಡತನದ ಲಕ್ಷಣವಲ್ಲ. ಇಂತಹ ಸೋಗಿನ ಜನರಿಂದ ನಾವು ದೂರವಿರುವುದು ಒಳ್ಳೆಯದು. ಜ್ಞಾನಿಯಾದವರು ತುಂಬಿದ ಕೊಡದಂತಿರಬೇಕು ಎಂಬ ನೀತಿ ಈ ಗಾದೆಯಲ್ಲಿದೆ.
೨೯. ಮನಸ್ಸಿದ್ದರೆ ಮಾರ್ಗ.
ಯಾವುದೇ ಕೆಲಸ ಮಾಡುವಾಗ ಅದರ ಸಾಧನೆಗೆ ಎರಡು ಅಂಶಗಳು ಮುಖ್ಯ – ಒಂದು, ಕೆಲಸವನ್ನು ಮಾಡುವ ಸಾಮರ್ಥ್ಯ, ಇನ್ನೊಂದು ಮನಸ್ಸಿಟ್ಟು ಆ ಕೆಲಸ ಮಾಡಿ ಮುಗಿಸುವ ಪ್ರಯತ್ನ, ಸಾಮರ್ಥ್ಯ-ಪ್ರಯತ್ನಗಳು ಒಟ್ಟು ಸೇರಿದಾಗ ಕಾರ್ಯಸಾಧನೆ ಕಟ್ಟಿಟ್ಟ ಬುತ್ತಿ. ಸಾಮರ್ಥ್ಯ-ಕ್ಷಮತೆಗಳಿದ್ದರೂ ಮನಸ್ಸು ಪ್ರಯತ್ನಗಳಿರದಿದ್ದರೆ ಕೆಲಸ ಹೇಗೆ ಸಾಧ್ಯವಾದೀತು? ಶಿವ ಕೊಟ್ಟ ಜೋಳಿಗೆಯನ್ನು ಒಂದು ಗೂಟಕ್ಕೆ ತೂಗುಹಾಕಿದರೆ ಅದು ತುಂಬುತ್ತದೆಯೇ? ಮನೆ-ಮನೆ ಅಲೆಯಬೇಕು, ಪ್ರಯತ್ನ ಪಡಬೇಕು. ಒಂದು ಕೆಲಸ ಆಗದೇ ಇರುವುದಕ್ಕೆ ಸಾಮರ್ಥ್ಯ ಅಥವಾ ಪ್ರಯತ್ನದ ಕೊರತೆಯೇ ಕಾರಣ. ಆದರೆ ಹೆಚ್ಚಾಗಿ ನೋಡಿದರೆ ಪ್ರಯತ್ನದ ಅಭಾವವೇ ಕಂಡುಬರುತ್ತದೆ. ನಮ್ಮ ಅನೇಕ ವಿದ್ಯಾರ್ಥಿಗಳು ಬುದ್ಧಿವಂತ ರಾಗಿದ್ದರೂ, ಮನಸ್ಸಿಟ್ಟು ಪ್ರಯತ್ನಿಸದೇ ಇರುವುದರಿಂದ ಪರೀಕ್ಷೆಯಲ್ಲಿ ಉತ್ತಮ ಪರಿಣಾಮ ಸಿಗುವುದಿಲ್ಲ, ಓದಬೇಕೆಂಬ ಹಠವಿದ್ದರೆ ಪುಸ್ತಕಗಳನ್ನು ಎಲ್ಲೆಲ್ಲಿಂದಲೋ ಒದಗಿಸಿಕೊಂಡು, ಓದಿ ಪಾಸಾಗಬಹುದು. ಹಲವು ವೇಳೆ ಎಲ್ಲ ಪುಸ್ತಕಗಳನ್ನು ಹೊಂದಿದ್ದರೂ, ಓದಲು ಮನಸ್ಸಿಲ್ಲದೇ ಅನುತ್ತೀರ್ಣವಾಗುವವರೂ ಇದ್ದಾರೆ.
ಒಂದು ಸೂಕ್ತಿ ಇದೆ – ‘ಹೊರಟರೆ ಇರುವೆಯೂ ನೂರು ಯೋಜನೆ ಹೋಗುತ್ತದೆ, ಹೊರಡದಿದ್ದರೆ ಗರುಡನೂ ಒಂದು ಹೆಜ್ಜೆ ಮುಂದೆ ಹೋಗುವುದಿಲ್ಲ, ಇದ್ದಲ್ಲಿಯೇ ಇರುತ್ತಾನೆ’. ಈ ಸೂಕ್ತಿಯು ಕೆಲಸ ಮಾಡುವುದರಲ್ಲಿ ಮನಸ್ಸಿನ ಪಾತ್ರವೇನು ಎಂಬುದನ್ನು ಹೇಳುತ್ತದೆ. ‘ಮನಸ್ಸಿದ್ದರೆ ಮಹಾದೇವ’ ಎನ್ನುವ ಗಾದೆಯೂ, ಇಂಗ್ಲಿಷಿನ ‘Where there is a will, there is a way’ ಎಂಬ ಗಾದೆಯೂ ಇದೇ ಅರ್ಥದಲ್ಲಿ ಬಳಸಲ್ಪಟ್ಟಿವೆ. ಯಾವುದೇ ಕೆಲಸಕ್ಕೂ ನಾವು ಮನಸ್ಸು ಮಾಡಬೇಕು. ಅದೇ ಮುಖ್ಯ ಮನಸ್ಸು ಮಾಡಿದರೆ ಬೆಟ್ಟವನ್ನೂ ಕುಟ್ಟಿ ಹಿಟ್ಟು ಮಾಡಬಹುದು.
೩೦. ಆಲದ ಮರಕ್ಕೊಂದು ಆಂದ, ಬೇಲದ ಮರಕ್ಕೊಂದು ಚೆಂದ
ಪ್ರಕೃತಿಯು ಪ್ರತಿಯೊಂದು ವಸ್ತುವಿಗೂ ಬೇರೆ ಬೇರೆಯದೇ ಆದ ಸೌಂದರ್ಯವನ್ನು ದಯಪಾಲಿಸಿದೆ. ಈ ವೈವಿಧ್ಯತೆ ಇರುವುದರಿಂದಲೇ ನಮಗೆ ಪ್ರಕೃತಿಯ ದೃಶ್ಯಾವಳಿಗಳು ಸುಂದರವಾಗಿ ಕಾಣುತ್ತವೆ. ಬಣ್ಣದಲ್ಲಿ, ಗಾತ್ರದಲ್ಲಿ, ಆಕಾರದಲ್ಲಿ ಗುಣ-ಸ್ವಭಾವದಲ್ಲಿ ಭಿನ್ನತೆಗಳಿರುವುದು ತೀರಾ ಸಾಮಾನ್ಯ. ಕಾಡಿನಲ್ಲಿ ಬಗೆಬಗೆಯ ಮರಗಳಿರುತ್ತವೆ – ಆಲದ ಮರ, ಬೇಲದ ಮರ, ಮಾವು, ತೆಂಗು, ಕಂಗು, ತೇಗ, ಹೊನ್ನೆ, ಮತ್ತೆ, ಬಸುರಿ, ಮುಂತಾದವು. ಈ ಎಲ್ಲವೂ ಬೇರೆಬೇರೆಯದೇ ಆದ ರೂಪ ವ್ಯತ್ಯಾಸವನ್ನು ಪಡೆದಿರುವುದರಿಂದ ನೋಡಲು ಸುಂದರವಾಗಿ ಕಾಣುತ್ತವೆ. ಎಲ್ಲದಕ್ಕೂ ಒಂದೇ ಬಗೆಯ ರೂಪವಿದ್ದಿದ್ದರೆ ನೋಡಲು ಅದು ಕಾಡಿನಂತಿರದ ತೋಪಿನಂತಿರುತ್ತಿತ್ತು. ನೀಲಗಿರಿ, ಆಕೆಶಿಯಾ ಮುಂತಾದ ತೋವುಗಳನ್ನು ವೈವಿಧ್ಯತೆಯಿಲ್ಲದ ಕಾರಣಕ್ಕೆ ನಾವು ತುಂಬಾ ಹೊತ್ತು ನೋಡಿ ಆನಂದಿಸಲಾರವು. ಆದ್ದರಿಂದಲೇ ಜಾನಪದರು ಆಲದ ಮರಕ್ಕೊಂದು ಆಂದ, ಬೇಲದ ಮರಕ್ಕೊಂದು ಚೆಂದ ಎಂದಿದ್ದಾರೆ. ಆಲದ ಮರ ಎತ್ತರವಾಗಿ, ವಿಸ್ತಾರವಾಗಿ ತನ್ನ ಬಿಳಲುಗಳನ್ನು, ಬೇರುಗಳನ್ನು ಎಲ್ಲೆಡೆ ಹಬ್ಬಿ ಬೆಳೆಯುತ್ತದೆ. ಅದರ ಬುಡದಲ್ಲಿ ಬೇರೇನೂ ಬೆಳೆಯುವುದಕ್ಕೆ ಅವಕಾಶವಿರುವುದಿಲ್ಲ. ಬೇಲದ ಹಣ್ಣು ಬಿಡುವ ಮರ ಅಲದ ಹಾಗಲ್ಲ. ಒಂದರಂತೆ ಇನ್ನೊಂದಿರದಿರುವುದೇ ಇವುಗಳ ವೈಶಿಷ್ಟ್ಯ, ಇದೇ ರೀತಿ ಮನುಷ್ಯರ ದೇಹ, ಪ್ರಕೃತಿ, ಸ್ವಭಾವಗಳಲ್ಲೂ ಭಿನ್ನತೆ ಇರುತ್ತದೆ. ಗುಣದಲ್ಲಿ ಅನನ್ಯತೆ ಇರುತ್ತದೆ. ಎಲ್ಲ ಬಗೆಯ ಸ್ವಭಾವದವರೂ ಸಮಾಜಕ್ಕೆ ಬೇಕು. ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ಇರುವ ಒಳ್ಳೆಯ ಗುಣಗಳನ್ನು ಕಾಣುವ, ಆನಂದಪಡುವ ಮನಸ್ಸು ಮುಖ್ಯ ಎಂಬುದನ್ನು ಈ ಗಾದೆ ಮಾತಿನ ಮೂಲಕ ಹೇಳಲಾಗಿದೆ.
೩೧. ಅತಿ ಆಸೆ ಗತಿಗೇಡು
ನಮ್ಮ ಕನ್ನಡ ಭಾಷೆಯ ಸಾವಿರಾರು ಗಾದೆಗಳು ಕನ್ನಡಿಗರ ಬಾಯಲ್ಲಿ ನಲಿದಾಡುತ್ತಿದ್ದು ಅದರಲ್ಲಿ ಕೆಲವು ಗಾದೆಗಳನ್ನು ಕೇಳದ ಕನ್ನಡಿಗರೇ ಇಲ್ಲವೆಂದು ಹೇಳಬಹುದು. ಅಂತಹ ಸುಪ್ರಸಿದ್ಧ ಗಾದೆಗಳಲ್ಲಿ ಈ ಮೇಲಿನ ಗಾದೆಯೂ ಒಂದಾಗಿದೆ. ಇದು ನೀತಿ ಬೋಧಕವಾದ ಗಾದೆಯೇ ಆಗಿದೆ. ನಮ್ಮ ಭಾರತೀಯ ವೇದಾಂತ ನಮಗೆ ಅತಿ ಆಸೆಯನ್ನು ವರ್ಜಿಸು ಎಂದು ನಾನಾ ರೀತಿಗಳಲ್ಲಿ ತಿಳಿಸುತ್ತಿದೆಯಾದರೂ ವೇದಾಂತವನ್ನು ಬೋಧಿಸುವವರೂ ಅತಿ ಆಸೆಯಿಂದ ಪಾರಾಗಿರುವುದು ಅಪರೂಪ. ಸುತ್ತಮುತ್ತಲಿನ ಜನ ನಮಗಿಂತ ತುಂಬ ಉತ್ತಮ ಜೀವನ ನಡೆಸುವುದನ್ನು ಕಂಡಾಗ ಅವರ ಮಟ್ಟದಲ್ಲಿ ನಾವೂ ಜೀವನ ಮಾಡಬೇಕೆಂಬ ಬಯಕೆಯಾಗುವುದು ತೀರ ಸಹಜವಾಗಿದೆ. ಆದರೆ ಮನಸ್ಸನ್ನು ನಿಯಂತ್ರಿಸಿಕೊಳ್ಳದಿದ್ದರೆ ಹಲವಾರು ಬಗೆಯ ಪರಿತಾಪಗಳನ್ನು ಅನುಭವಿಸಬೇಕಾಗುವುದೆಂಬ ಎಚ್ಚರಿಕೆಯನ್ನು ಈ ಗಾದೆ ಕೊಡುತ್ತಿದೆ.
‘ಅತಿ ಆಸೆ’ ಎಂಬುದು ಐಶ್ವರ್ಯ, ಕೀರ್ತಿ, ಆಹಾರ, ವಾಹನ, ಸುಖ ಎಲ್ಲ ವಿಚಾರಗಳಲ್ಲಿಯೂ ಉಂಟಾಗಲು ಅವಕಾಶವಿದೆ. ಅತ್ಯಂತ ರುಚಿಕಟ್ಟಾದ ಭಕ್ಷ್ಯವನ್ನು ಮಿತಿಯರಿಯದೆ ತಿಂದರೆ ಅಜೀರ್ಣವಾಗಿ, ತಿಂದ ಸುಖವನ್ನು ಕಳೆದುಕೊಳ್ಳಬೇಕಾಗುವುದರಿಂದ ತಿನ್ನುವ ವಿಷಯದಲ್ಲಿ ಅತಿ ಆಸೆಯನ್ನು ನಿಯಂತ್ರಿಸಿಕೊಳ್ಳದಿದ್ದರೆ ಗತಿ ಕೇಡಾಗದಿರುವುದಿಲ್ಲ. ಮತ್ತೊಬ್ಬರ ಐಶ್ವರ್ಯವನ್ನು ಕಂಡು ಅನ್ಯಾಯ ಮಾರ್ಗದಲ್ಲಿ ಹಣ ಸಂಪಾದನೆಗೆ ತೊಡಗಿದರೆ ಕಾರಾಗೃಹವನ್ನು ಸೇರಬೇಕಾದ ಸ್ಥಿತಿ ಒದಗಬಹುದು. ಸತ್ಕೀರ್ತಿಯನ್ನು ಸಂವಾದಿಸಲಾಗದೆ ವಾಮಮಾರ್ಗದಲ್ಲಿ ಪ್ರಸಿದ್ದಿಯಾಗಲು ಯತ್ನಿಸಿ ಸಫಲರಾದರೆ ವಾಸ್ತವ ಸಂಗತಿ ಪ್ರಪಂಚಕ್ಕೆ ತಿಳಿದು ಅದುವರೆಗೆ ಇದ್ದ ಗೌರವ ನಾಶವಾಗಬಹುದು. ಯಾರೋ ದೊಡ್ಡ ಮನೆ ಕಟ್ಟಿಸಿರುವುದನ್ನು ನೋಡಿ ಆ ಆರ್ಥಿಕ ಸಾಮರ್ಥ್ಯವಿಲ್ಲದವರು ಅಂತಹ ಮನೆ ಕಟ್ಟಲು ಯತ್ನಿಸಿ ಮಾಡಿದ ಸಾಲ ತೀರಿಸಲಾಗದೆ ಅರ್ಧ ಕಟ್ಟಿದ ಮನೆಯನ್ನೇ ಮಾರಾಟ ಮಾಡಬೇಕಾಗಬಹುದು. ಆದ್ದರಿಂದ ಮನುಷ್ಯ ಪ್ರತಿಯೊಂದು ವಿಚಾರದಲ್ಲಿಯೂ ತನ್ನ ಮಿತಿಯಲ್ಲಿ ಮನದಾಸೆಗಳನ್ನು ನೆರವೇರಿಸಿಕೊಳ್ಳಬೇಕೇ ವಿನಾ ಅತಿಯಾಸೆಪಟ್ಟು ತನ್ನ ಗತಿಗೆ ಕೇಡನ್ನುಂಟುಮಾಡಿಕೊಳ್ಳಬಾರದು. ಪ್ರಾಜ್ಞರು ಅತಿಯಾಸೆ ಪಡದ ಮನಸ್ಸನ್ನು ನಿಯಂತ್ರಿಸಿಕೊಳ್ಳುತ್ತಾರೆ.
೩೨. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?
‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂದು ಒಂದು ಗಾದೆಯೇ ಇದೆ. ಜೀವನಾನುಭವದಿಂದ ಸಾರ್ವಕಾಲಿಕ, ಸಾರ್ವದರ್ಶಿಕ ಸತ್ಯ ಸಂಗತಿಗಳನ್ನು ಗಾದೆ ತಿಳಿಸಿ ಮನುಷ್ಯನ ನಡವಳಿಕೆಯನ್ನು ನೇರ್ಪಡಿಸುವ ಶಕ್ತಿಯನ್ನು ಹೊಂದಿದೆ. ಒಂದು ಗಿಡವನ್ನು ನಮಗೆ ಇಷ್ಟ ಬಂದ ಕಡೆಗೆ ಬಗ್ಗಿಸಬಹುದು; ಆದರೆ ಅದೇ ಗಿಡವು ಮರವಾದ ಮೇಲೆ ಪ್ರಯತ್ನಿಸಿದರೆ ಆ ಮರ ಮುರಿದು ಹೋಗುವುದೇ ವಿನಾ ಬಗ್ಗಲಾರದು. ಇನ್ನೂ ಚಿಕ್ಕದಾಗಿರುವಾಗಲೇ-ಗಿಡವಾಗಿರುವಾಗಲೇ ನಮ್ಮ ಅಗತ್ಯಾನುಸಾರವಾಗಿ ಬಗ್ಗಿಸಿದರೆ ಗಿಡವು ಬಗ್ಗುವುದರೊಡನೆ ಹಾಗೆಯೇ ಬಲಿಷ್ಠವಾಗುತ್ತದೆ. ಈ ರೀತಿ ಮಾಡಲು ಯೋಜನೆ ಮತ್ತು ಆ ಯೋಜನೆಗೆ ತಕ್ಕಂತೆ ಕಾರಗಳ ಸಾಧನೆ ಅಗತ್ಯ. ಇದರಂತೆ ಮನುಷ್ಯನು ಗುಣವಂತನಾಗಬೇಕಾದರೆ, ಶಿಸ್ತಿನ ಸಿಪಾಯಿಯಾಗಬೇಕಾದರೆ, ವಿದ್ಯಾವಂತನಾಗಬೇಕಾದರೆ ಅದಕ್ಕೆ ಅಗತ್ಯವಾದ ಪರಿಸರ, ಮಾರ್ಗದರ್ಶನ, ಸಹಕಾರ, ಸಹಾಯಗಳನ್ನು ವ್ಯಕ್ತಿಗೆ ಚಿಕ್ಕಂದಿನಿಂದಲೇ ಉಂಟುಮಾಡಬೇಕು. ಬಾಲ್ಯದಿಂದ ಸ್ವೇಚ್ಛೆಯಾಗಿ ಮಗುವನ್ನು ಬೆಳೆಸಿಬಿಟ್ಟರೆ, ಸಕಾಲದಲ್ಲಿ ಶಾಲೆಗೆ ಸೇರಿಸದಿದ್ದರೆ, ಪಾಠ ಪ್ರವಚನಗಳಿಗೆ ಪ್ರತಿನಿತ್ಯವೂ ನಿರ್ದಿಷ್ಟ ಅವಧಿಯನ್ನು ಗೊತ್ತು ಮಾಡಿಕೊಂಡು, ಮಗುವು ನಿತ್ಯ ಅಭ್ಯಸಿಸುವಂತೆ ಮಾಡದಿದ್ದರೆ, ಆ ಮಗುವು ದೊಡ್ಡದಾದ ಮೇಲೆ ವಿದ್ಯೆಯನ್ನು ಗಳಿಸಲು ಸಾಧ್ಯವಿಲ್ಲ. ಆದರ್ಶ ಮೌಲ್ಯ ಪ್ರಜ್ಞೆಯನ್ನು ಮಗುವಿನ ಮನಸ್ಸಿನಲ್ಲಿ ಆ ವಯಸ್ಸಿನಿಂದಲೇ ಬಿತ್ತಿ ಬೆಳೆಸಿದರೆ ಮಾತ್ರ ಮಗು ದೊಡ್ಡದಾಗಿ ಬೆಳೆದಾಗ ಉತ್ತಮ ಚಾರಿತ್ರ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ಮಕ್ಕಳನ್ನು ಸೋಮಾರಿಯಾಗಿ ಬಾಳಲು, ಬೆಳೆಯಲು ಅವಕಾಶ ಕೊಟ್ಟರೆ ಈ ದೋಷವೇ ಹೆಮ್ಮರವಾಗಿ ಬೆಳೆದು ಮಹಾ ಸೋಮಾರಿಯಾಗಿ ಕರ್ತವ್ಯಪ್ರಜ್ಞೆಯನ್ನು ಬೆಳೆಸಿಕೊಳ್ಳದೆ ಅವಮಾನ, ದುಃಖ, ದಾರಿದ್ರಾದಿಗಳನ್ನು ಅನುಭವಿಸುವಂತಾಗುತ್ತದೆ. ಆದ್ದರಿಂದ ಮಕ್ಕಳನ್ನು ಸತ್ಪಜೆಗಳನ್ನಾಗಿಯೂ, ವಿದ್ಯಾವಂತರನ್ನಾಗಿಯೂ, ದೇಶಪ್ರೇಮಿಗಳನ್ನಾಗಿಯೂ ಮಾಡುವ ಪಣತೊಟ್ಟು ಹಿರಿಯರು ಮತ್ತು ಆಧ್ಯಾಪಕರು ಮಕ್ಕಳ ಮನಸ್ಸನ್ನು ಈ ಉತ್ತಮ ಮೌಲ್ಯಗಳ ಕಡೆಗೆ ಬಾಗುವಂತೆ ಮಾರ್ಗದರ್ಶನ ನೀಡಬೇಕೆಂದು ಈ ಗಾದೆ ಸೂಚಿಸುತ್ತಿದೆ.