ದ್ವಿತೀಯ ಪಿಯುಸಿ ಕನ್ನಡ ಕದಡಿದ ಸಲಿಲಂ ತಿಳಿವಂದದೆ ನೋಟ್ಸ್ ಪ್ರಶ್ನೋತ್ತರಗಳು, 2nd Puc Kannada Kadadida Salilam Tilivandade Notes 2nd Puc Kannada Kadadida Salilam Tilivandade Question and Answer 2nd puc kannada kadadida salilam tilivandade summary ಕದಡಿದ ಸಲಿಲಂ ತಿಳಿವಂದದೆ ಸಾರಾಂಶ pdf ಕದಡಿದ ಸಲಿಲಂ ತಿಳಿವಂದದೆ question and answer kadadida salilam tilivandade summary in kannada kadadida salilam tilivandade poem bhavartha kadadida salilam tilivandade summary in kannada pdf download ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ Kannada 2nd PUC Notes pdf download 2nd puc kannada notes question and answer.
೧. ಕದಡಿದ ಸಲಿಲಂ ತಿಳಿವಂದದೆ
– ನಾಗಚಂದ್ರ

ಕವಿ ಪರಿಚಯ
‘ಅಭಿನವ ಪಂಪ’ ಎಂದೇ ಖ್ಯಾತನಾಗಿರುವ ನಾಗಚಂದ್ರನು ಹನ್ನೊಂದು-ಹನ್ನೆರಡನೆಯ ಶತಮಾನದ ಕಾಲಮಾನದಲ್ಲಿ ಜೀವಿಸಿದ್ದನು. ಇಂದಿನ ವಿಜಯಪುರ (ಬಿಜಾಪುರ) ಈತನ ಸ್ಥಳ. ಬಾಲಚಂದ್ರ ಮೇಘಚಂದ್ರಯತಿಗಳು ನಾಗಚಂದ್ರನ ಗುರುಗಳು. ಈತ ಹತ್ತೊಂಬತ್ತನೆಯ ತೀರ್ಥಂಕರನಾದ ಮಲ್ಲಿನಾಥನ ಕಥೆಯನ್ನು ‘ಮಲ್ಲಿನಾಥ ಪುರಾಣ’ದಲ್ಲಿ ಹೇಳಿರುವನು. ನಾಗಚಂದ್ರನಿಗೆ ಅಪಾರ ಕೀರ್ತಿ ತಂದಿತ್ತ ‘ರಾಮಚಂದ್ರಚರಿತ ಪುರಾಣ’ವು ‘ಪಂಪರಾಮಾಯಣ’ವೆಂದೇ ಖ್ಯಾತವಾಗಿದೆ. ಪಂಪನಂತೆಯೇ ಲೌಕಿಕ-ಅಲೌಕಿಕ ಮಾರ್ಗದಲ್ಲಿ ಕಾವ್ಯರಚನೆ ಮಾಡಿರುವ ನಾಗಚಂದ್ರನಿಗೆ ಭಾರತೀಕರ್ಣಪೂರ, ಕವಿತಾಮನೋಹರ, ಸಾಹಿತ್ಯವಿದ್ಯಾಧರ, ಚತುರಕವಿ, ಜನಸ್ಥಾನರತ್ನ ಪ್ರದೀಪ, ಸೂಕ್ತಿಮುಕ್ತಾವತಂಸ ಇತ್ಯಾದಿ ಬಿರುದುಗಳಿದ್ದವು. ಪ್ರಸ್ತುತ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗವನ್ನು ನಾಗಚಂದ್ರ ಕವಿಯ ‘ರಾಮಚಂದ್ರಚರಿತ ಪುರಾಣ’ದಿಂದ ಆಯ್ದುಕೊಳ್ಳಲಾಗಿದೆ.
ಆಕರ: ‘ರಾಮಚಂದ್ರಚರಿತ ಪುರಾಣ’ (ಪಂಪರಾಮಾಯಣ).
ಕಾವ್ಯಭಾಗದ ಹಿನ್ನೆಲೆ
ಸೀತೆಯನ್ನು ಅಪಹರಿಸಿದ ರಾವಣನು ಅವಳನ್ನು ತನ್ನ ಪ್ರಮದವನದಲ್ಲಿ ಇರಿಸಿರುತ್ತಾನೆ. ಮೂಲತಃ ಒಳ್ಳೆಯ ಗುಣಗಳ ಗಣಿಯಾದ ರಾವಣನು ವಿಧಿನಿಯಮದಂತೆ ಸೀತೆಯಲ್ಲಿ ವ್ಯಾಮೋಹವನ್ನು ತಾಳಿ ಅವಳನ್ನು ಅಪಹರಿಸಿರುತ್ತಾನೆ. ಸೀತೆ ಮಾತ್ರ ರಾವಣನಿಗೆ ಸೋಲದೆ ಸ್ಥಿರಚಿತ್ತೆಯಾಗಿರುತ್ತಾಳೆ. ಏನು ಮಾಡಿದರೂ ಸೀತೆಯನ್ನು ಒಲಿಸಿಕೊಳ್ಳಲು ರಾವಣನಿಗೆ ಅಸಾಧ್ಯ. ವಾಗುತ್ತದೆ. ಇಷ್ಟರಲ್ಲಿ ರಾಮಸೈನ್ಯವು ಲಂಕೆಯನ್ನು ಮುತ್ತಿ ಯುದ್ಧಾರಂಭವಾಗುತ್ತದೆ. ರಾವಣನು ಯುದ್ಧದಲ್ಲಿ ಜಯಗಳಿಸಿಕೊಳ್ಳಲು ‘ಬಹುರೂಪಿಣೀ ವಿದ್ಯೆ’ಯ ಮೊರೆಹೋಗುತ್ತಾನೆ. ಯುದ್ಧಕ್ಕೆ ತೆರಳುವ ಮುನ್ನ ಸೀತೆಯ ಭೇಟಿಗೆ ಪ್ರಮದವನಕ್ಕೆ ಬಂದಾಗ, ಸೀತೆ ಅವನನ್ನು ತೃಣಸಮಾನವಾಗಿ ಕಾಣುತ್ತಾಳೆ. ಮೂರ್ಭೆಹೋಗಿರುವ ಸೀತೆಯನ್ನು ಕಂಡಾಗ ರಾವಣನ ಮನಸ್ಸು ದುರ್ಮೋಹದಿಂದ ಬಿಡುಗಡೆಗೊಂಡು ಪರಿವರ್ತಿತವಾಗುತ್ತದೆ. ವಿರಕ್ತಿಯಿಂದ ಅವನು ಯುದ್ಧಾನಂತರ ಸೀತೆಯನ್ನು ರಾಮನಿಗೊಪ್ಪಿಸುವ ನಿರ್ಧಾರಕ್ಕೆ ಬರುತ್ತಾನೆ. ರಾವಣನು ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಳ್ಳುವ ಸಂದರ್ಭದಿಂದ ಈ ಪದ್ಯಭಾಗವು ಆರಂಭಗೊಳ್ಳುತ್ತದೆ.
ಅಭ್ಯಾಸ
ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು
೧. ಉಳಿದವರಳಿವೆನಗೇವುದು?
‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಆಯ್ದುಕೊಂಡಿರುವ ಈ ಮೇಲಿನ ವಾಕ್ಯವನ್ನು ರಾವಣನು ಬಹುರೂಪಿಣಿ ವಿದ್ಯೆಯನ್ನು ಕುರಿತು ಹೇಳುತ್ತಾನೆ.
ರಾವಣನ ಎದಿರು ಪ್ರತ್ಯಕ್ಷಗೊಂಡ ದೇವತೆಯು ಯುದ್ಧದಲ್ಲಿ ರಾಮ-ಲಕ್ಷ್ಮಣರನ್ನುಳಿದು ಉಳಿದವರನ್ನೆಲ್ಲಾ ಸಂಹರಿಸಲು ಸಹಾಯಮಾಡುವುದಾಗಿ ಹೇಳುತ್ತದೆ. ಆಗ ರಾವಣನು ಉಳಿದವರ ಸಾವಿನಿಂದ ನನಗೇನು ಪ್ರಯೋಜನ? ಎಂದು ದೇವತೆಯನ್ನು ಪ್ರಶ್ನಿಸುವನು. ರಾವಣನಿಗೆ ಬೇಕಿರುವುದು ರಾಮ-ಲಕ್ಷ್ಮಣರ ಅವಸಾನ, ದೇವತೆಯಿಂದ ಈ ಕೆಲಸಕ್ಕೆ ನೆರವು. ಸಿಗದಿದ್ದಾಗ ಅವನು ಅಲ್ಲಿಂದ ಕಾಲೆಗೆಯುವನು.
೨. ಸಮಧಿಕರಾರ್ ಜಗತ್ತ್ರಯದೊಳಿನ್ನೆನಗೆ?
ನಾಗಚಂದ್ರ ಕವಿಯು ರಚಿಸಿರುವ ‘ಪಂಪರಾಮಾಯಣ’ದಿಂದಾಯ್ದ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಲ್ಲಿನ ಈ ಮೇಲಿನ ವಾಕ್ಯವನ್ನು ರಾವಣನು ಅಡುತ್ತಾನೆ.
ಬಹುರೂಪಿಣಿ ವಿದ್ಯೆಯ ಅನುಗ್ರಹವನ್ನು ಪಡೆದ ರಾವಣನು. ವಿದ್ಯೆಯನ್ನೊಮ್ಮೆ ಪರೀಕ್ಷಿಸಿ ನೋಡಿಕೊಳ್ಳುತ್ತಾನೆ. ಆನಂತರ ಅವನಲ್ಲಿ ಆತ್ಮವಿಶ್ವಾಸವು ವೃದ್ಧಿಸಿ ಹೃದಯದಲ್ಲಿ ಸಂತೋಷ ತುಂಬಿಕೊಳ್ಳುತ್ತದೆ. ಆಗ ರಾವಣನು ಮೂರು ಲೋಕದಲ್ಲೂ ತನಗೆ ಸಮಬಲರಾದವರು ಯಾರೂ ಇಲ್ಲ. ಯುದ್ದದಲ್ಲಿ ತನ್ನನ್ನು ಎದುರಿಸಿ ಗೆಲ್ಲುವವರಾರಿಲ್ಲವೆಂದು ಬೀಗುವ ಸಂದರ್ಭವಿದಾಗಿದೆ.
೩. ಏನಂ ಕೇಳ್ದಪೆನೋ…. ಪೊಲ್ಲವಾರ್ತೆಯನ್.
ನಾಗಚಂದ್ರ ಕವಿಯ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದಾಯ್ದ ಈ ಮೇಲಿನ ವಾಕ್ಯವನ್ನು ಸೀತೆಯು ತನಗೆ ತಾನೆ ಹೇಳಿಕೊಳ್ಳುತ್ತಾಳೆ.
ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಂಡು ಸಂತೋಷಭರಿತನಾದ ರಾವಣನು ಸೀತೆಯ ತಾವರೆಯಂತಹ ಮುಖವನ್ನು ನೋಡಲು ವಿಶೇಷ ಕಾತರದಿಂದ ಪ್ರಮದವನಕ್ಕೆ ಆಗಮಿಸುತ್ತಾನೆ. ಅಲ್ಲಿದ್ದ ರಾಕ್ಷಸ ಸ್ತ್ರೀಯರು ಸೀತೆಗೆ ರಾವಣನು ಆಗಮಿಸುತ್ತಿರುವ ಸುದ್ದಿಯನ್ನು ಮುಟ್ಟಿಸುತ್ತಾರೆ. ಆಗ ಸೀತೆಯು ರಾಮ-ಲಕ್ಷ್ಮಣರಿಗೆ ಸಂಬಂಧಿಸಿದಂತೆ ಇನ್ನಾವ ಕೆಟ್ಟ ಸುದ್ದಿಯನ್ನು ಕೇಳಬೇಕಾಗಿದೆಯೋ ಎಂದು ಮನಸ್ಸಿನಲ್ಲಿಯೇ ಕಳವಳಗೊಳ್ಳುವ ಸಂದರ್ಭವನ್ನು ಕವಿ ಇಲ್ಲಿ ವರ್ಣಿಸಿದ್ದಾನೆ.
೪. ಅಸಾಧ್ಯಮಪ್ಪ ಮರುವಕ್ಕಮಿಲ್ಲ.
ನಾಗಚಂದ್ರ ಕವಿಯ ‘ಪಂಪರಾಮಾಯಣ’ದಿಂದಾಯ್ದುಕೊಂಡಿರುವ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಲ್ಲಿನ ಈ ಮೇಲಿನ ಮಾತನ್ನು ರಾವಣನು ಸೀತೆಯನ್ನುದ್ದೇಶಿಸಿ ಆಡುತ್ತಾನೆ.
ಸೀತೆಯ ಬಳಿಬಂದ ರಾವಣನು ತನಗೆ ಬಹುರೂಪಿಣಿ ವಿದ್ಯೆಯು ವಶವಾಗಿರುವುದರಿಂದ ಯುದ್ದದಲ್ಲಿ ನನಗೆ ಅಸಾಧ್ಯ ವಾದ ಎದುರಾಳಿಗಳಿಲ್ಲ. ಆದ್ದರಿಂದ ನೀನು ರಾಮನ ಚಿಂತೆಯನ್ನು ಬಿಟ್ಟು, ತನಗೆ ಒಲಿದು, ಸಾಮ್ರಾಜ್ಯ ಸುಖವನ್ನನುಭವಿಸಿ ಕೊಂಡಿರಬೇಕೆಂದು ಸೀತೆಯನ್ನು ಕುರಿತು ಹೇಳುವ ಸಂದರ್ಭದಲ್ಲಿ ಕವಿಯು ಈ ಮೇಲಿನ ವಾಕ್ಯವನ್ನು ರಚಿಸಿದ್ದಾನೆ.
೫. ರಘುತನೂಜನಾಯು:ಪ್ರಾಣಂ ಬರೆಗಂ ಬಾರದಿರು.
ನಾಗಚಂದ್ರನ ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಲ್ಲಿ ಸೀತೆಯು ರಾವಣನನ್ನು ಉದ್ದೇಶಿಸಿ ಈ ಮೇಲಿನ ವಾಕ್ಯವನ್ನು ಆಡುತ್ತಾಳೆ.
ಬಹುರೂಪಿಣಿ ವಿದ್ಯೆಯನ್ನು ಕೈವಶಮಾಡಿಕೊಂಡಿರುವ ವಿಚಾರವನ್ನು ಸೀತೆಗೆ ತಿಳಿಸಿದ ರಾವಣನು, ಸೀತೆಯು ಇನ್ನಾದರೂ ರಾಮನನ್ನು ಮರೆತು ತನಗೆ ಒಲಿದುಬಂದು ಸಾಮ್ರಾಜ್ಯ ಸುಖವನ್ನನುಭವಿಸಿಕೊಂಡು ಇರಬೇಕೆಂದು ಕೇಳಿಕೊಳ್ಳುತ್ತಾನೆ. ಸೀತೆಯು ಮನದಲ್ಲಿ ದುಃಖವನ್ನನುಭವಿಸುತ್ತಾ ರಾವಣನನ್ನು ಉದ್ದೇಶಿಸಿ “ಯುದ್ದದಲ್ಲಿ ಶ್ರೀರಾಮನ ಆಯುಷ್ಠ-ಪ್ರಾಣಗಳವರೆಗೂ ಬರಬಾರದೆಂದು” ವಿನಂತಿಸಿಕೊಂಡು ಮೂರ್ಛೆತಪ್ಪಿ ನೆಲಕ್ಕೊರಗುವ ಸಂದರ್ಭವನ್ನು ಕವಿ ಇಲ್ಲಿ ಚಿತ್ರಿಸಿರುವನು.
೬. ಕದಡಿದ ಸಲಿಲಂ ತಿಳಿವಂದದೆ.
ಈ ವಾಕ್ಯವನ್ನು ನಾಗಚಂದ್ರನ ‘ಪಂಪರಾಮಾಯಣ’ದಿಂದ ಆಯ್ದುಕೊಂಡಿರುವ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಸ್ವೀಕರಿಸಲಾಗಿದೆ.
ಸೀತೆಯು ಮೂರ್ಛಿತಪ್ಪಿ ನೆಲಕ್ಕುರುಳಿದ್ದನ್ನು ಕಂಡ ರಾವಣನಲ್ಲಿ ಅವಳ ಬಗ್ಗೆ ವ್ಯಾಮೋಹ ದೂರಾಗಿ ವೈರಾಗ್ಯ ಉದಯಿಸುವುದರೊಂದಿಗೆ, ಆಕೆಯ ಬಗ್ಗೆ ಅನುಕಂಪೆ, ಕರುಣೆ ಉಕ್ಕುತ್ತದೆ. ತನ್ನ ಅಕಾರ್ಯದ ಬಗ್ಗೆ ಮರುಕಗೊಳ್ಳುವ ರಾವಣನ ಮನಸ್ಸು ಬದಲಾಗುತ್ತದೆ. ಸೀತೆಯನ್ನು ಅಪಹರಿಸಿದಾಗ ಕದಡಿಹೋಗಿದ್ದ ರಾವಣನ ಮನಸ್ಸೆಂಬ ಕೊಳವು ಈಗ ತನಗೆ ತಾನೆ ತಿಳಿಗೊಂಡು ಅವಳಲ್ಲಿನ ವ್ಯಾಮೋಹದಿಂದ ಬಿಡಿಸಿಕೊಂಡು ನಿರ್ಮಲಗೊಂಡಿತೆಂದು ಕವಿಯು ವರ್ಣಿಸಿದ್ದಾನೆ.
ಇದೊಂದು ಔಚಿತ್ಯಪೂರ್ಣ ನಿರೂಪಣೆಯಾಗಿದೆ.
೭. ಉದಾತ್ತನೊಳ್ ಪುಟ್ಟದಲ್ತೆ ನೀಲೀರಾಗಂ.
ನಾಗಚಂದ್ರ ಕವಿಯು ರಚಿಸಿರುವ ‘ಪಂಪರಾಮಾಯಣ’ದಿಂದ ಆಯ್ದುಕೊಂಡಿರುವ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದ ಈ ಮೇಲಿನ ವಾಕ್ಯವನ್ನು ಕವಿಯೇ ಹೇಳಿರುವನು.
ಸೀತೆಯು ಮೂರ್ಛಿತಪ್ಪಿ ನೆಲದ ಮೇಲೆ ಬಿದ್ದಾಗ ರಾವಣನಲ್ಲಿ ಅವಳ ಬಗ್ಗೆ ಕರುಣೆ-ಅನುಕಂಪ ಮುಂತಾದ ಭಾವಗಳು ಸ್ಪುರಿಸಿ, ವ್ಯಾಮೋಹವು ದೂರಾಗುತ್ತದೆ. ಆತನದು ದೃಢಚಿತ್ತ. ಎಷ್ಟಾದರೂ ಆತ ಉದಾತ್ತ ಚರಿತನೇ ತಾನೆ? ಎಂದು ಪ್ರಶ್ನಿಸಿರುವ ಕವಿಯು ರಾವಣನ ಮನಃಪರಿವರ್ತನೆಯು ಅವನ ಉದಾತ್ತಗುಣಕ್ಕೆ ಸಹಜವಾಗಿಯೇ ಇದೆ ಎಂದಿರುವನು.
೮. ಅಪೇಕ್ಷಿಸುವೆನೇ ಗುಣಹಾನಿಯನನ್ನ ಪಾಪದಿಂ,
‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ಇದು ರಾವಣನು ತನ್ನಲ್ಲೇ ಹೇಳಿಕೊಳ್ಳುವ ಮಾತಾಗಿದೆ.
ಸೀತೆಯು ರಾವಣನಿಗೆ ಒಲಿಯಲಿಲ್ಲ. ಬದಲಿಗೆ, ಅವನ ದಿವ್ಯಭೂಷಣ ವಸ್ತ್ರಗಳನ್ನಾಗಲಿ, ಅವನ ಪ್ರೀತಿಯನ್ನಾಗಲಿ, ರಾಕ್ಷಸ ರಾಜ್ಯಲಕ್ಷ್ಮಿಯ ಒಡತಿಯಾಗುವ ವೈಭವವನ್ನಾಗಲಿ ಬಯಸದೆ ಅವುಗಳನ್ನು ತೃಣಸಮಾನವಾಗಿ ಕಂಡಳು. ಇದನ್ನರಿತ ರಾವಣನು ಪ್ರಣಯ ಪೌರುಷದಿಂದ ನಾನು ಪಾಪಗೈದು ಈಕೆಯನ್ನು ಬಯಸಬಾರದೆಂದು ತನ್ನಲ್ಲೇ ಯೋಚಿಸುವ ಸಂದರ್ಭವನ್ನು ಕವಿ ಈ ಮೇಲಿನ ವಾಕ್ಯದಲ್ಲಿ ವಿವರಿಸಿದ್ದಾನೆ.
೯. ಕಂದರ್ಪ ವಿಮೋಹದಿಂದಗಲ್ಚಿದೆ.
ನಾಗಚಂದ್ರ ಕವಿಯು ರಚಿಸಿರುವ ‘ರಾಮಚಂದ್ರಚರಿತ ಪುರಾಣ’ದಿಂದ ಸ್ವೀಕರಿಸಲಾದ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಂಡಿದೆ.
ಸೀತೆಯು ಮೂರ್ಛಿ ಹೋಗಿರುವುದನ್ನು ಕಂಡ ರಾವಣನು ಅವಳ ಬಗ್ಗೆ ಮರುಕದಿಂದ ಚಿಂತಿಸುತ್ತಾನೆ. ಸೀತಾಪಹರಣ ಮಾಡಿದ್ದಕ್ಕಾಗಿ ಅವನಲ್ಲಿ ಪಶ್ಚಾತ್ತಾಪ ಮೂಡಿದೆ. ಪ್ರಾಣಪ್ರಿಯರಾದ ರಾಮ-ಸೀತೆಯರನ್ನು ತಾನು ತನ್ನ ಕರ್ಮವಶದ ನೆವದಿಂದ ಕಾಮಮೋಹಿತನಾಗಿ ಆಗಲಿಸಿದೆ. ಇದರಿಂದಾಗಿ ತನ್ನ ಕುಲದ ಹಿರಿಮೆ ಅಳಿಯಿತು. ಎಂತಹ ಅವಿವೇಕಿ ತಾನೆಂದು ರಾವಣನು ಯೋಚಿಸುತ್ತಾನೆ. ಆ ಸಂದರ್ಭದಲ್ಲಿ ಈ ಮೇಲಿನ ವಾಕ್ಯ ಬಂದಿದೆ.
೧೦. ರಣಾಗ್ರದೊಳ್ ಪಿಡಿದು ತಂದಾಂ ಕೊಟ್ಟಪೆಂ.
ನಾಗಚಂದ್ರ ಕವಿಯು ರಚಿಸಿರುವ ‘ರಾಮಚಂದ್ರಚರಿತ ಪುರಾಣ’ದಿಂದ ಸ್ವೀಕರಿಸಿರುವ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು. ರಾವಣನು ಹೇಳುವ ಮಾತಿದು.
ರಾವಣನು ಸೀತಾಪಹರಣ ಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟು ಅವಳನ್ನು ರಾಮನಿಗೆ ಹಿಂದಿರುಗಿಸುವ ನಿರ್ಧಾರಕ್ಕೆ ಬರುತ್ತಾನೆ. ಆದರೆ ಅವನು ಆ ಕೂಡಲೇ ಆಕೆಯನ್ನು ರಾಮನಿಗೊಪ್ಪಿಸದೆ, ಯುದ್ಧಮಾಡಿ, ಯುದ್ದದಲ್ಲಿ ರಾಮನನ್ನು ಸೋಲಿಸಿ, ಸೆರೆಹಿಡಿದು ತಂದು, ಆ ನಂತರ ಅವನಿಗೆ ಸೀತೆಯನ್ನು ಒಪ್ಪಿಸಬೇಕೆಂದು ಯೋಚಿಸುತ್ತಾನೆ. ಅವನ ಆ ಯೋಚನೆಯು ಈ ಮೇಲಿನ ವಾಕ್ಯದ ಮೂಲಕ ವ್ಯಕ್ತಗೊಂಡಿದೆ.
ಹೆಚ್ಚುವರಿ ಪ್ರಶ್ನೆಗಳು:
೧೧. “ಮಾನಿನಿಗಿನಿತು ದುಃಖಮಂ ಪುಟ್ಟಿಸಿದೆಂ”.
‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಲ್ಲಿ ಈ ಮೇಲಿನ ವಾಕ್ಯವನ್ನು ರಾವಣನು ಸ್ವಗತದಲ್ಲಿ ಹೇಳಿಕೊಳ್ಳುತ್ತಾನೆ.
ಶ್ರೀರಾಮನಿಂದ ಅಗಲಿಸಿ ಸೀತೆಯನ್ನು ಕರೆತಂದುದಕ್ಕೆ ರಾವಣನಲ್ಲಿ ಅಪಾರವಾದ ಮರುಕವಿದೆ. “ರಾಮನಿಂದ ಅಗಲಿಸಿ ಇವಳನ್ನು ಹೊತ್ತು ತಂದುದರಿಂದ ಈಕೆಗೆ ತುಂಬಾ ದುಃಖವನ್ನುಂಟುಮಾಡಿದೆ” ನೆಂದು ಆತ ಯೋಚಿಸುತ್ತಾನೆ. ಕಾಮವಶನಾಗಿ ತಾನು ಈ ಅಪಚಾರ ಮಾಡಿದ್ದಕ್ಕೆ ಅವನಿಗೆ ಪಶ್ಚಾತ್ತಾಪವಾಗಿದೆ.
೧೨. ಹಿತಾಹಿತ ಚಿಂತೆಯನೇಕೆ ಮಾಡುವಂ.
ನಾಗಚಂದ್ರ ಕವಿಯು ರಚಿಸಿರುವ ‘ಪಂಪರಾಮಾಯಣ’ದಿಂದ ಆಯ್ದುಕೊಂಡಿರುವ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ರಾವಣನು ತನ್ನಲ್ಲಿಯೇ ಹೇಳಿಕೊಳ್ಳುವ ಮಾತಿದಾಗಿದೆ.
ವಿಭಿಷಣನು ರಾವಣನಿಗೆ ಹಿತವನ್ನೇ ಹೇಳಿರುತ್ತಾನೆ. ಆದರೆ ಅದನ್ನು ಲಕ್ಷಿಸದ ರಾವಣನು ವಿಭೀಷಣನನ್ನೇ ಬೈಯು ಓಡಿಸಿರುತ್ತಾನೆ. ಈಗ ಪಶ್ಚಾತ್ತಾಪದ ಸಂದರ್ಭದಲ್ಲಿ ರಾವಣನಿಗೆ ತನ್ನ ತಮ್ಮನ ಹಿತದ ಮಾತುಗಳು ನೆನಪಾಗುತ್ತದೆ. ವ್ಯಸನಕ್ಕೆ ಬಲಿಯಾದುದರಿಂದ ವಿಭೀಷಣನ ಮಾತು ಆಗ ರಾವಣನಿಗೆ ರುಚಿಸಿರಲಿಲ್ಲ. ಈಗ ಅದೆಲ್ಲಾ ನೆನಪಾಗಿ, ವ್ಯಸನಕ್ಕೆ ಬಲಿಯಾದವನು ಯಾವ ಹಿತ-ಅಹಿತದ ಚಿಂತನೆಯನ್ನು ಮಾಡುವುದಿಲ್ಲವಲ್ಲವೆ ಎಂದು ರಾವಣ ಈಗ ಯೋಚಿಸುವ ಸಂದರ್ಭವಿದಾಗಿದೆ.
೧೩. ಆರಲಂಬುಗಳಿಲ್ಲದ ಕಾಮನೆಂಬಿನಂ.
‘ಅಭಿನವಪಂಪ’ನೆಂದೇ ಖ್ಯಾತನಾಗಿರುವ ನಾಗಚಂದ್ರ ಕವಿಯು ಬರೆದಿರುವ ‘ಪಂಪ ರಾಮಾಯಣ’ದಿಂದಾಯ್ದ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಕವಿಯು ಈ ಮಾತನ್ನು ಹೇಳಿದ್ದಾನೆ.
ಬಹುರೂಪಿಣಿ ವಿದ್ಯೆಯ ಪ್ರಭಾವವನ್ನು ಪರೀಕ್ಷಿಸಿಕೊಂಡ ನಂತರ ರಾವಣನಿಗೆ ಮೂರು ಲೋಕದಲ್ಲಿಯೂ ತನ್ನ ಸಮಬಲರಾದವರು ಯಾರೂ ಇಲ್ಲವೆಂದೂ ಹೆಮ್ಮೆ ಮೂಡುತ್ತದೆ. ಆ ಕ್ಷಣವೇ ಅವನಿಗೆ ಸೀತೆಯ ಕಮಲದಂತಹ ಮುಖವನ್ನು ಕಾಣಬೇಕೆಂಬ ಕಾತರ ಹೆಚ್ಚುತ್ತದೆ. ಆತ ಸೀತೆಯನ್ನಿರಿಸಿದ್ದ ಪ್ರಮದವನದತ್ತ ಹೆಜ್ಜೆ ಹಾಕುತ್ತಾನೆ. ಈ ಸಂದರ್ಭವನ್ನು ವಿವರಿಸುತ್ತ ಕವಿಯು ರಾವಣನು ಹೂಬಾಣಗಳಿಲ್ಲದ ಕಾಮನಂತೆ ಬಂದನೆಂದು ವರ್ಣಿಸಿದ್ದಾನೆ. ರಾವಣ ಈಗಲೂ ಸೀತೆಯನ್ನು ಒಲಿಸಿಕೊಳ್ಳುವುದು ಅಸಾಧ್ಯ. ಅವನದು ವ್ಯರ್ಥ ಪ್ರಯತ್ನವೆಂಬುದು ಕವಿಯ ಭಾವವಾಗಿದೆ.
೧೪. ನೋಡಿದಂ ಮಯತನೂಜೆಯ ಬಾಡಿದ ವಕ್ತ್ರಪದ್ಮಮಂ.
ನಾಗಚಂದ್ರ ಕವಿಯು ರಚಿಸಿರುವ ‘ಪಂಪ ರಾಮಾಯಣ’ದಿಂದಾಯ್ದ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ರಾವಣನು ಬಹುರೂಪಿಣಿ ವಿದ್ಯೆಯನ್ನು ಸಾಧಿಸಿಕೊಂಡ ನಂತರ ನೇರವಾಗಿ ಅಂತಃಪುರಕ್ಕೆ ಧಾವಿಸಿ ಬರುತ್ತಾನೆ. ಅಂಗದಾದಿಗಳು ಅಷ್ಟರಲ್ಲಿ ಅಲ್ಲಿಂದ ಕಾಲ್ತೆಗೆದಿರುತ್ತಾರೆ. ಅಂತಃಪುರದ ಸ್ತ್ರೀಯರನ್ನು ಕಾಡಿಸಿದವರನ್ನು ಶಿಕ್ಷಿಸುವ ಉದ್ವೇಗದಲ್ಲಿ ಕೆರಳಿದ ಸಿಂಹದಂತೆ ಗರ್ಜಿಸುತ್ತ ಬಂದ ರಾವಣನಿಗೆ ಅಂತಃಪುರದಲ್ಲಿ ಕಾಣಸಿಕ್ಕಿದ್ದು ಮಯತನೂಜೆಯ ಬಾಡಿದ ಮುಖಕಮಲ ಮಾತ್ರ. ತನ್ನ ಹೆಂಡತಿಯಾದ ಮಂಡೋದರಿಯ ಬಾಡಿದ ಮುಖವನ್ನು ಕಂಡು ರಾವಣನ ಮನದಲ್ಲಿ ವಿಷಾದ ಆವರಿಸುತ್ತದೆ. ಆನಂತರ ಆತ ಮಂಡೋದರಿ ಹಾಗೂ ಇತರ ಅಂತಃಪುರದ ಸ್ತ್ರೀಯರನ್ನು ಸಂತೈಸುವ ಸಂದರ್ಭವಿದಾಗಿದೆ.
೧೫. ಬೆಸನಿಗಳಾರುಮೆತ್ತಲರಿವರ್.
ಕವಿ ನಾಗಚಂದ್ರನ ‘ಪಂಪ ರಾಮಾಯಣ’ದಿಂದಾಯ್ದ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದ್ದು ರಾವಣನು ತನ್ನ ಮನದಲ್ಲಿಯೇ ಈ ಮಾತನ್ನು ಹೇಳಿಕೊಳ್ಳುತ್ತಾನೆ.
ಕಾಮದ ವ್ಯಸನಕ್ಕೆ ಬಲಿಯಾದವನಿಗೆ ತನ್ನ ಕೀರ್ತಿಗೆ ಮಸಿ ಹತ್ತುತ್ತದೆಂಬುದಾಗಲೀ, ಸೋಲಿನ ಅಪಮಾನವಾಗಲೀ, ಮನದ ಕೇಡಾಗಲೀ, ಉನ್ನತಿಯ ನಾಶವಾಗಲೀ, ಗೆಳೆಯರಿಗಾಗುವ ಬೇಸರವಾಗಲೀ, ಜನರಿಂದ ಬರುವ ಅಪವಾದದ ಚಿಂತೆಯಾಗಲಿ ಯಾವುದೂ ಕಾಡುವುದಿಲ್ಲ. ವ್ಯಸನಕ್ಕೆ ಬಲಿಯಾದವನಿಗೆ ಯಾವುದೊಂದರ ಪರಿವೆಯೂ ಇರುವುದಿಲ್ಲ ಎಂದು ರಾವಣನು ಯೋಚಿಸುವ ಸಂದರ್ಭವಿದು.
ಆ) ಒಂದು ವಾಕ್ಯದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ).
೧. ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು?
ಬಹುರೂಪಿಣಿ ವಿದ್ಯೆ
೨. ಯಾರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು?
ರಾಮಲಕ್ಷ್ಮಣ
೩. ಮಯತನೂಜೆ ಎಂದರೆ ಯಾರು?
ಮಂಡೋದರಿ
೪. ರಾವಣನು ಸೀತೆಯನ್ನು ಎಲ್ಲಿರಿಸಿದ್ದನು?
ಪ್ರಮದವನದಲ್ಲಿ
೫. ರಾವಣನ ಆಗಮನವನ್ನು ಸೀತೆಗೆ ತೋರಿದವರು ಯಾರು?
ರಾಕ್ಷಸ ಸ್ತ್ರೀಯರು
೬. ಸೀತೆ ಯಾವುದನ್ನು ಹುಲ್ಲಿಗೆ ಸಮಾನ ಎಂದು ಭಾವಿಸಿದಳು?
ರಾವಣನ ರೂಪ
೭. ಸೀತೆ ರಾವಣನನ್ನು ಏನೆಂದು ಬೇಡಿಕೊಂಡಳು?
ಯುದ್ಧದಲ್ಲಿ ರಘುರಾಮನ ಆಯುಃಪ್ರಾಣದವರೆಗೂ ಬರಬೇಡ
೮. ರಾವಣನಿಗೆ ಯಾರ ಬಗ್ಗೆ ವೈರಾಗ್ಯ ಮೂಡಿತು?
ಸೀತೆ
೮. ವಿಭೀಷಣ ಯಾರು?
ರಾವಣನ ಸಹೋದರ/ತಮ್ಮ
೧೦. ಸೌಮಿತ್ರಿ ಎಂದರೆ ಯಾರು?
ಲಕ್ಷ್ಮಣ
ಹೆಚ್ಚುವರಿ ಪ್ರಶ್ನೆ
೧೧. “ಇನ್ನು ಅಸಾಧ್ಯಮಪ್ಪ ಮಯಿವಕ್ಕಮಿಲ್ಲ” ಎಂದು ಸೀತೆಗೆ ರಾವಣನು ಹೇಳಲು ಕಾರಣ
ಬಹುರೂಪಿಣಿ ವಿದ್ಯಾಬಲದಿಂದ
೧೨. ಪೊಸಗಾರ ಸಿಡಿಲ ಮಸಕಮನಸಕಟೆದು ಕೃತಾಂತಜಿಹೈ ಪೊಡಕರಿಸುವವೋಲ್” ಎಂಬ ವಾಕ್ಯದಲ್ಲಿ ‘ಪೊಸಗಾರ’ ಎಂದರೆ ಏನು?
ಮುಂಗಾರಿನ
೧೩. ರಾವಣನಿಗೆ ಹಿತವನ್ನು ಹೇಳಿದವರು ಯಾರು?
ವಿಭೀಷಣ
೧೪. ಪೌರುಷಪ್ರಣಯಿ ಯಾರು?
ರಾವಣ
೧೫. ಸೀತೆಯನ್ನು ರಾವಣ ಯಾರಿಂದ ಬೇರ್ಪಡಿಸಿದ್ದನು?
ರಾಮನಿಂದ
೧೬. ಪ್ರಾಣಪ್ರಿಯರು ಯಾರು?
ರಾಮ – ಸೀತೆಯರು
೧೭. ತನ್ನಿಂದ ತಾನೇ ತಿಳಿಯಾಗುವುದು ಯಾವುದು?
ಕದಡಿಹೋದ ನೀರು ( ಸಲಿಲ)
೧೮. ಸೀತೆಯ ಬಗ್ಗೆ ಅನುಕಂಪ’ ಹುಟ್ಟಿದ್ದು ಯಾರಲ್ಲಿ?
ರಾವಣ
೧೯. ರಾವಣನ ಮಾತು ಕೇಳಿ ಮೂರ್ಛೆ ಹೋದವರು ಯಾರು?
ಸೀತೆ
೨೦. ವಿಯಚ್ಛರಾಧಿಪ ಎಂದರೆ ಯಾರು?
ರಾವಣ
೨೧. ರಾವಣನು ಮಹಾಪೂಜೆಯನ್ನು ಎಲ್ಲಿ ಮಾಡಿಸಿದ?
ಶಾಂತಿಜಿನಭವನ
೨೨. ರಾವಣನ ಅಂತಃಪುರದವರನ್ನು ಹಿಂಸಿಸಿದವರು ಯಾರು?
ಅಂಗದಾದಿಗಳು
೨೩. ಲಕ್ಷ್ಮೀಧರ ಎಂದರೆ ಯಾರು?
ಲಕ್ಷ್ಮಣ
ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):
೧. ಬಹುರೂಪಿಣಿ ವಿದ್ಯೆ ರಾವಣನಿಗೆ ಏನೆಂದು ಆಶ್ವಾಸನೆಯಿತ್ತಿತ್ತು?
ಬಹುರೂಪಿಣಿ ವಿದ್ಯೆಯು “ಚಕ್ರಧಾರಿಯಾದ ಲಕ್ಷ್ಮಣ ಹಾಗೂ ಚರಮದೇಹಧಾರಿಯಾದ ರಾಮ ಇವರಿಬ್ಬರನ್ನುಳಿದು ಮಿಕ್ಕೆಲ್ಲರನ್ನು ನಾಶಗೊಳಿಸುತ್ತೇನೆ” ಎಂದು ಆಶ್ವಾಸನೆಯಿತ್ತಿತು.
೨. ರಾವಣನು ತನ್ನ ಅಂತಃಪುರದ ಸ್ತ್ರೀಯರನ್ನು ಹೇಗೆ ಸಂತೈಸಿದನು?
ರಾವಣನು “ಮಂಡೋದರಿ ಮತ್ತು ಇತರ ಸ್ತ್ರೀಯರಿಗೆ ಭಂಗವನ್ನು ಮಾಡಿದ ಅಂಗದಾದಿಗಳನ್ನು ಭೂಭ್ರಂಗ ಮಾತ್ರದಲ್ಲಿ ಸೆರೆಗೈದು ತಂದು ಬಹುಪ್ರಕಾರವಾಗಿ ದಂಡಿಸುವೆನು” ಎಂದು ತನ್ನ ಅಂತಃಪುರದ ಸ್ತ್ರೀಯರನ್ನು ಸಂತೈಸಿದನು.
೩. ಸೀತೆಯ ತಲ್ಲಣಕ್ಕೆ ಕಾರಣವೇನು?
ರಾವಣನ ಆಗಮನದ ಸುದ್ದಿ ತಿಳಿದ ಸೀತೆಯು, ರಾಮ-ಲಕ್ಷ್ಮಣರಿಗೆ ಸಂಬಂಧಿಸಿದಂತೆ ಇನ್ಯಾವ ಕೆಟ್ಟವಾರ್ತೆಯನ್ನು ಕೇಳಬೇಕಾಗಿದೆಯೋ ಎಂದು ತಲ್ಲಣಗೊಂಡಳು.
೪. ರಾವಣನು ಸೊಕ್ಕಿನಿಂದ ಸೀತೆಯನ್ನುದ್ದೇಶಿಸಿ ಆಡಿದ ಮಾತುಗಳಾವುವು?
ರಾವಣನು ಸೀತೆಯನ್ನುದ್ದೇಶಿಸಿ “ಬಹುರೂಪಿಣಿ ವಿದ್ಯೆಯು ವಶವಾಗಿರುವುದರಿಂದ ತನಗೆ ಸಮಬಲರಾದವರು ಮೂರು ಲೋಕದಲ್ಲಿ ಯಾರೂ ಇಲ್ಲ. ಯುದ್ದದಲ್ಲಿ ತನಗೆ ಅಸಾಧ್ಯವಾದ ಪ್ರತಿಪಕ್ಷವಿಲ್ಲ. ಇನ್ನಾದರೂ ನೀನು (ಸೀತೆಯು) ರಾಮನ ವ್ಯಾಮೋಹವನ್ನು ಬಿಟ್ಟು, ತನಗೆ ಒಲಿದು ಸಾಮ್ರಾಜ್ಯ ಸುಖವನ್ನು ಅನುಭವಿಸಬೇಕೆಂದು” ಸೊಕ್ಕಿನಿಂದ ನುಡಿದನು.
೫. ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿದ ಸಂದರ್ಭವನ್ನು ವಿವರಿಸಿ.
ಸೀತೆಯು ರಾವಣನ ಕಣ್ಣೆದುರಲ್ಲೇ ಮೂರ್ಛೆತಪ್ಪಿ ನೆಲಕ್ಕೆ ಒರಗಿದಾಗ ರಾವಣನಿಗೆ ಸೀತೆಯಲ್ಲಿ ವೈರಾಗ್ಯ ಮೂಡಿತು. ಕದಡಿಹೋದ ನೀರು ತನಗೆ ತಾನೆ ತಿಳಿಯಾಗುವಂತೆ, ರಾವಣನಲ್ಲಿ ಸೀತೆಯ ಮೇಲಿನ ವ್ಯಾಮೋಹ ದೂರಾಗಿ ವೈರಾಗ್ಯ ಮೂಡಿತು.
೬. ರಾವಣನು ತನ್ನ ಆಪ್ತರನ್ನು ಕುರಿತು ಏನೆಂದು ಹೇಳಿದನು?
ರಾವಣನು ತನ್ನ ಆಪ್ತರಿಗೆ ‘ತನ್ನ ನಿಶ್ಚಲಗುಣದಿಂದ ಸೀತೆಯು ನನ್ನ ಬಗ್ಗೆ ಗಮನಹರಿಸಲಿಲ್ಲ. ನನ್ನ ದಿವ್ಯಭೂಷಣ ವಸನಗಳನ್ನಾಗಲೀ, ಖೇಚರ ರಾಜ್ಯವನ್ನಾಗಲೀ ಬಯಸದೆ ಅವನ್ನು ತೃಣ ಸಮಾನವಾಗಿ ಕಂಡಳು. ಹೀಗಾಗಿ ಪೌರುಷ ಪ್ರಣಯಿಯಾದ ನಾನು ಪಾಪಗೈದು ಇವಳನ್ನು ಬಯಸುತ್ತೇನೆಯೇ?” ಎಂದು ಹೇಳಿದನು.
೭. ಈಗಲೇ ಸೀತೆಯನ್ನು ರಾಮನಿಗೊಪ್ಪಿಸಲು ರಾವಣ ಬಯಸಲಿಲ್ಲವೇಕೆ?
ಈಗಲೇ ಸೀತೆಯನ್ನು ರಾಮನಿಗೊಪ್ಪಿಸಿಬಿಟ್ಟರೆ, ಇದುವರೆಗೆ ತಾನು ತೋರಿದ ಪರಾಕ್ರಮ ಮತ್ತು ಅಧಿಕ ಸಾಮರ್ಥ್ಯಗಳು ಹಾಗೂ ಬಿರುದುಗಳು ವ್ಯರ್ಥಗೊಳ್ಳುತ್ತವೆ. ಹಾಗಾಗಬಾರದೆಂದು ರಾವಣನು ಬಯಸಿದನು.
೮. ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ?
ರಾವಣನು ಅಂತಿಮವಾಗಿ ಎರಡೂ ಕಡೆಯ ಸೇನೆಗಳು ತನ್ನ ತೋಳ್ಬಲವನ್ನು ಹೊಗಳುವಂತೆ ಯುದ್ದಗೈದು, ಸೌಮಿತ್ರಿ-ರಾಘವರನ್ನು ವಿರಥರನ್ನಾಗಿಸಿ (ಸೋಲಿಸಿ) ಸೆರೆಗೈದು ತಂದು ಆನಂತರ ಸೀತೆಯನ್ನು ರಾಮನಿಗೆ ಒಪ್ಪಿಸುತ್ತೇನೆ ಎಂಬ ನಿರ್ಧಾರಕ್ಕೆ ಬಂದನು.
ಹೆಚ್ಚುವರಿ ಪ್ರಶ್ನೆಗಳು:
೯. ರಾವಣ ಜಾನಕಿಯನ್ನು ನೋಡಲು ಎಲ್ಲಿಗೆ, ಯಾರು ಬರುವಂತೆ ಬಂದನು?
ರಾವಣನು ಜಾನಕಿಯನ್ನು ನೋಡಲು ಆಕೆಯನ್ನಿರಿಸಿದ್ದ ಪ್ರಮದವನಕ್ಕೆ, ಹೂಬಾಣಗಳಿಲ್ಲದ ಕಾಮದೇವನಂತೆ ಬಂದನು.
೧೦. ರವಿಗೂ-ರಾವಣನಿಗೂ ಇರುವ ಸಂಬಂಧವನ್ನು ಕವಿ ಹೇಗೆ ಹೋಲಿಸಿದ್ದಾನೆ?
ರವಿಯು (ಸೂರ್ಯನು) ತನಗೆ ಹತ್ತಿದ ಸಂಧ್ಯಾರಾಗ(ಕತ್ತಲಿನಿಂದ)ದಿಂದ ಬಿಡಿಸಿಕೊಳ್ಳುವಂತೆ, ರಾವಣನೂ ತನ್ನ ಒಳ್ಳೆಯ ನಡೆವಳಿಕೆಯಿಂದ ತನ್ನನ್ನು ಮೆತ್ತಿಕೊಂಡಿರುವ ಅಪಕೀರ್ತಿಯನ್ನು ತೊಡೆದುಕೊಳ್ಳುತ್ತಾನೆಂದು ಹೇಳುವ ಮೂಲಕ ಕವಿಯು ರಾವಣ ಮತ್ತು ರವಿ(ಸೂರ್ಯ)ಯನ್ನು ಹೋಲಿಸಿದ್ದಾನೆ.
೧೧. ಬಹುರೂಪಿಣಿ ವಿದ್ಯೆಯನ್ನು ರಾವಣ ಹೇಗೆ ಸಾಧಿಸಿದ?
ಮನಸ್ಸು ಪ್ರಕ್ಷುಬ್ಧಗೊಂಡಿದ್ದರೂ ರಾವಣನು ಧ್ರುವಮಂಡಲದಂತೆ ಚಲಿಸದೆ ಸ್ಥಿರವಾಗಿ ಕುಳಿತು. ಮನಸ್ಸನ್ನು ನಿಯಂತ್ರಿಸಿಕೊಂಡು ದಿವ್ಯ ಮಂತ್ರಗಳಿಂದ ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಂಡನು.
೧೨. ವ್ಯಸನಿಗಳು ಏನೇನೆಲ್ಲವನ್ನು ನಿರ್ಲಕ್ಷಿಸುತ್ತಾರೆ?
ತಮ್ಮ ಕೀರ್ತಿಗೆ ಮಸಿ ಹತ್ತುವುದನ್ನಾಗಲೀ, ಸೋಲಿನಿಂದ ಆಗುವ ಅಪಮಾನವನ್ನಾಗಲೀ, ಮನಸ್ಸಿನ ಕೇಡನ್ನಾಗಲೀ, ಉನ್ನತಿಯ ನಾಶವನ್ನಾಗಲೀ, ಗೆಳೆಯರಿಗಾಗುವ ಬೇಸರವಾಗಲೀ, ಜನರಿಂದ ಬರುವ ಅಪವಾದವಾಗಲೀ – ಈ ಎಲ್ಲವನ್ನು ವ್ಯಸನಿಗಳು ನಿರ್ಲಕ್ಷಿಸುತ್ತಾರೆ.
೧೩. ರಾವಣ ತನ್ನನ್ನು ‘ಅವಿವೇಕಿ’ ಎಂದು ಏಕೆ ಕರೆದುಕೊಂಡ?
ಪ್ರಾಣಪ್ರಿಯರಾದ ರಾಮ-ಸೀತೆಯರನ್ನು ಕಾರಣವಿಲ್ಲದೆ ಕಾಮಾಸಕ್ತಿಯಿಂದ ಅಗಲಿಸಿದ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟುಕೊಳ್ಳುವ ರಾವಣನು ತನ್ನನ್ನು ತಾನೇ ‘ಅವಿವೇಕಿ’ ಎಂದು ನಿಂದಿಸಿಕೊಳ್ಳುತ್ತಾನೆ.
ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):
೧. ರಾವಣನು ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಂಡ ಸಂದರ್ಭವನ್ನು ವಿವರವಾಗಿ ಬರೆಯಿರಿ.
ರಾವಣನು ಶಾಂತಿಜಿನಭವನದೊಳಗೆ ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಳ್ಳಲು ಧ್ಯಾನ ಮಾಡುತ್ತಿದ್ದಾಗ ಅಂಗದಾದಿಗಳು ಅವನ ಅಂತಃಪುರಕ್ಕೆ ಬಂದು ಮಂಡೋದರಿ ಮತ್ತಿತರ ಸ್ತ್ರೀಯರಿಗೆ ಅನೇಕ ಬಗೆಯ ತೊಂದರೆ ನೀಡಿದರು. ರಕ್ಷಣೆಗಾಗಿ ಅಂತಃಪುರದ ಸ್ತ್ರೀಯರು ಕಿರುಚಿದರೂ ರಾವಣನು ಧ್ರುವಮಂಡಲದಂತೆ ಚಲಿಸದೆ ಚಿತ್ರನಿರೋಧಗೈದು, ಬಹುರೂಪಿಣಿ ವಿದ್ಯೆಯನ್ನು ಕೈವಶಮಾಡಿಕೊಂಡನು. ಮುಂಗಾರಿನ ಸಿಡಿಲಿನಂತೆ ಪ್ರತ್ಯಕ್ಷವಾದ ದೇವತೆಯು ರಾವಣನೆದುರು ನಿಂತು ಯಮನ ನಾಲಗೆಯೇ ನುಡಿಯುತ್ತಿರುವಂತೆ ‘ಬೆಸಸು ಬೆಸಸು’ ಎಂದು ಕೇಳಿತು. ರಾವಣನ ಮನೋಭಿಲಾಷೆಯನ್ನು ಅರಿತ ನಂತರ “ಚಕ್ರಧಾರಿಯಾದ ಲಕ್ಷ್ಮಣ ಹಾಗೂ ಚರಮದೇಹಧಾರಿಯಾದ ರಾಮಸ್ವಾಮಿ ಇವರಿಬ್ಬರನ್ನು ಉಳಿದು ಮಿಕ್ಕೆಲ್ಲರನ್ನು ನಾಶಗೊಳಿಸುತ್ತೇನೆ” ಎಂದು ಆಶ್ವಾಸನೆಯಿತ್ತಿತು. ಆಗ ರಾವಣನು “ಮಿಕ್ಕೆಲ್ಲರ ಸಾವಿನಿಂದ ನನಗೇನು ಪ್ರಯೋಜನ?” ಎನ್ನುತ್ತಾ ದೇವತೆಗೆ ನಮಸ್ಕರಿಸಿ, ಶಾಂತಿಜಿನಭವನವನ್ನು ಮೂರುಭಾರಿ ಪ್ರದಕ್ಷಿಣೆ ಬಂದು ಅಲ್ಲಿಂದ ಹೊರಬರುವನು. ರಾಮ-ಲಕ್ಷ್ಮಣರನ್ನು ತನ್ನಿಂದ ಕೊಲ್ಲಲಾಗದೆಂದು ದೇವತೆ ಹೇಳಿದ ನಂತರವೂ ರಾವಣ ಯುದ್ಧ ಸನ್ನದ್ದನಾಗುವುದು ಅವನ ವಿನಾಶ ಬುದ್ದಿಯನ್ನು ಸಂಕೇತಿಸುವಂತಿದೆ.
೨. ಪ್ರಮದವನದಲ್ಲಿ ರಾವಣ-ಸೀತೆಯರ ನಡುವೆ ನಡೆದ ಸಂಭಾಷಣೆಯನ್ನು ವಿವರಿಸಿ.
ಪ್ರಮದವನಕ್ಕೆ ಬಂದ ರಾವಣನನ್ನು ನೋಡಿದ ಸೀತೆಗೆ ಅವನ ರೂಪವು ತೃಣಸಮಾನವೆನಿಸಿತು. ರಾಮ-ಲಕ್ಷ್ಮಣರ ಬಗ್ಗೆ ಏನು ಕೆಟ್ಟ ಸುದ್ದಿ ತಂದಿರುವನೋ ಎಂದಾಕೆ ತಲ್ಲಣಗೊಂಡಳು. ಅವಳ ಸಮೀಪಕ್ಕೆ ಬಂದ ರಾವಣನು “ಬಹುರೂಪಿಣಿ ವಿದ್ಯೆಯು ನನಗೆ ಸಿದ್ದಿಸಿದೆ. ಆದ್ದರಿಂದ ಈಗ ನನಗೆ ಅಸಾಧ್ಯವಾದ ಕೆಲಸವಾವುದೂ ಇಲ್ಲ. ಹಾಗಾಗಿ ನೀನು ರಾಮನ ಗೊಡವೆ ಬಿಟ್ಟು ನನ್ನನ್ನು ಒಪ್ಪಿಕೊಂಡು, ಸಾಮ್ರಾಜ್ಯ ಸುಖವನ್ನು ಅನುಭವಿಸು” ಎಂದು ಸೊಕ್ಕಿನಿಂದ ನುಡಿದನು. ಮನದಲ್ಲೇ ದುಃಖಿತಗೊಂಡ ಸೀತೆಯು “ನನ್ನ ಮೇಲೆ ಕರುಣೆ ತೋರುವುದಾದರೆ ದಶಕಂಧರನೇ, ಯುದ್ಧದಲ್ಲಿ ರಘುತನೂಜನ ಆಯಸ್ಸು ಪ್ರಾಣದವರೆಗೂ ಬರಬೇಡ” ಎಂದು ಹೇಳಿ, ಮೂರ್ಛಿತಪ್ಪಿ ಧರೆಗುರುಳಿದಳು. ಇವನ್ನು ಕಂಡ ರಾವಣನಿಗೆ ಸೀತೆಯ ಬಗ್ಗೆ ವ್ಯಾಮೋಹ ದೂರಾಗಿ, ಅನುಕಂಪ ಮೂಡಿತು.
೩. ರಾವಣನ ಮನಃಪರಿವರ್ತನೆಯ ಸಂದರ್ಭವನ್ನು ಕವಿ ಹೇಗೆ ಚಿತ್ರಿಸಿದ್ದಾನೆ?
ರಾವಣನ ಮನಃಪರಿವರ್ತನೆಯು ‘ಕದಡಿದ ಸಲಿಲಂ ತಿಳಿವಂದದೆ’ ಕಾವ್ಯಭಾಗದ ಅತ್ಯಂತ ಪ್ರಮುಖ ಘಟ್ಟವೆನ್ನಬಹುದು. ಸೀತೆಯು ಮೂರ್ಛಿತಪ್ಪಿ ನೆಲಕ್ಕುರುಳಿದಾಗ, ಅದನ್ನು ಕಂಡ ರಾವಣನಿಗೆ ಅವಳ ಬಗ್ಗೆ ಅನುಕಂಪ ಮೂಡಿತು. ಮಾತ್ರವಲ್ಲ. ಸೀತೆಯ ಈ ಸ್ಥಿತಿಗೆ ತಾನೇ ಕಾರಣವೆಂದು ತನ್ನನ್ನು ತಾನೇ ಹಳಿದುಕೊಂಡನು. ಕದಡಿಹೋಗಿ ಬಗ್ಗಡಗೊಂಡಿದ್ದ ನೀರು ತನಗೆ ತಾನೇ ತಿಳಿಯಾಗಿ ನಿರ್ಮಲಗೊಳ್ಳುವಂತೆ ರಾವಣನ ಮನಸ್ಪೂ ತಿಳಿಯಾಯಿತು. ಸೀತೆಯ ಬಗೆಗೆ ವೈರಾಗ್ಯ ಮೂಡಿತು. ರಾವಣನು ತನ್ನ ಉದಾತ್ತಗುಣವನ್ನು ತೋರಿದನು. ತನಗೆ ಹತ್ತಿದ ಸಂಧ್ಯಾರಾಗವನ್ನು ಸೂರ್ಯನು ಕಳೆದುಕೊಳ್ಳುವಂತೆ, ರಾವಣನಲ್ಲಿ ಮೂಡಿದ ಕಾರುಣ್ಯರಸವು ಸೀತೆಯ ಮೇಲಿನ ಅನುರಕ್ತಿಯನ್ನು ತೊಳೆದುಬಿಟ್ಟಿತೆಂದು ಹೇಳಿರುವ ಕವಿಯು ರಾವಣನ ಮನಃಪರಿವರ್ತನೆಯ ಸಂದರ್ಭವನ್ನು ಸೊಗಸಾಗಿ ಚಿತ್ರಿಸಿದ್ದಾನೆನ್ನಬಹುದು.
೪. ರಾವಣನಲ್ಲಿ ಕಂಡುಬರುವ ಪಶ್ಚಾತ್ತಾಪವನ್ನು ಕವಿ ಹೇಗೆ ನಿರೂಪಿಸಿದ್ದಾನೆ?
ಸೀತೆಯ ಬಗ್ಗೆ ರಾವಣನಲ್ಲಿ ವ್ಯಾಮೋಹ ಅಳಿದು ಕರುಣೆ-ಅನುಕಂಪಗಳು ನೆಲೆಸಿದ ಮೇಲೆ ರಾವಣನ ಮನಸ್ಸು ಪರಿವರ್ತನೆಗೊಂಡು ತಾನು ಮಾಡಿದ ಸೀತಾಪಹರಣದಂತಹ ಅಕಾರ್ಯಕ್ಕಾಗಿ ಪಶ್ಚಾತ್ತಾಪ ಹೊಂದುವುದನ್ನು ಕವಿಯು ಇಲ್ಲಿ ಸೊಗಸಾಗಿ ಚಿತ್ರಿಸಿದ್ದಾನೆ. ಪ್ರಾಣಪ್ರಿಯರಾದ ರಾಮ-ಸೀತೆಯರನ್ನು ಕರ್ಮವಶದ ನೆವದಿಂದ ಕಾಮಮೋಹಿತನಾದ ತಾನು ಅಗಲಿಸಿದೆ ಎಂದು ಆತ ಯೋಚಿಸುತ್ತಾನೆ. ಅಲ್ಲದೆ, ಅವಿವೇಕಿಯಾದ ತನ್ನಿಂದ ಕುಲದ ಹಿರಿಮೆ ನಾಶವಾಯಿತೆಂದು ಪರಿತಾಪಗೊಳ್ಳುತ್ತಾನೆ. ಕಾಮಪೀಡಿತನಾಗಿ ರಾಮನಿಂದ ಸೀತೆಯನ್ನು ಬೇರ್ಪಡಿಸಿ ಅವಳಿಗೆ ದುಃಖವನ್ನುಂಟುಮಾಡಿದೆನೆಂದು ಪರಿತಪಿಸುತ್ತಾನೆ. ತನ್ನ ಈ ಕೆಲಸದಿಂದಾಗಿ ಕೆಟ್ಟ ಕೆಲಸದ ಕೀರ್ತಿ ಎಲ್ಲೆಡೆ ತುಂಬಿಕೊಂಡಿತಲ್ಲ ಎಂಬ ಪಶ್ಚಾತ್ತಾಪ ಅವನನ್ನು ಸುಡುತ್ತದೆ. ವಿಭೀಷಣ ಹಿತವನ್ನೇ ನುಡಿದರೂ ಅದಕ್ಕೆ ಕಿವಿಗೊಡದೆ, ವಿನಯವಂತನಾದ ಅವನನ್ನು ಗದರಿಸಿ ದೂರಸರಿಸಿದ ದುರ್ವ್ಯಸನಿ ತಾನು ಎಂಬ ಪಾಪಪ್ರಜ್ಞೆಯಲ್ಲಿ ರಾವಣ ನರಳುವುದನ್ನು ನಾವು ಗಮನಿಸಬಹುದಾಗಿದೆ.
೫. ‘ಕದಡಿದ ಸಲಿಲಂ ತಿಳಿವಂದದೆ’ ಕಾವ್ಯಭಾಗದಲ್ಲಿ ಬರುವ ರಾವಣನ ವ್ಯಕ್ತಿತ್ವವನ್ನು ವಿಮರ್ಶಿಸಿ, ನಿಮ್ಮ ಮಾತುಗಳಲ್ಲಿ ಉತ್ತರಿಸಿ.
‘ಕದಡಿದ ಸಲಿಲಂ ತಿಳಿವಂದದೆ’ ಕಾವ್ಯಭಾಗದಲ್ಲಿ ರಾವಣನು ಆರಂಭದಲ್ಲಿ ರಾಮ-ಲಕ್ಷ್ಮಣರ ವಿರುದ್ಧದ ಯುದ್ಧದಲ್ಲಿ ಗೆಲುವನ್ನು ಹೊಂದಲು ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಳ್ಳುವುದನ್ನು ನೋಡುತ್ತೇವೆ. ರಾಮ-ಲಕ್ಷ್ಮಣರನ್ನು ತಾನು ಕೊಲ್ಲಲಾಗದೆಂದು ವಿದ್ಯಾದೇವತೆ ಹೇಳಿದ ನಂತರವೂ ಯುದ್ಧೋತ್ಸಾಹದಿಂದ ವರ್ತಿಸುವ ರಾವಣನ ವ್ಯಕ್ತಿತ್ವದ ಚಿತ್ರಣ ಈ ಭಾಗದಲ್ಲಿದೆ. ಸೀತೆಯಿದ್ದ ಪ್ರಮದವನಕ್ಕೆ ಬಂದಾಗಲೂ ಆತ ಸೀತೆಗೆ ರಾಮನನ್ನು ಮರೆತು ತನ್ನ ಸಾಮ್ರಾಜ್ಯ ಸುಖವನ್ನನುಭವಿಸಿಕೊಂಡಿರಬೇಕೆಂದೇ ಹೇಳುತ್ತಾನೆ. ಬಹುರೂಪಿಣಿ ವಿದ್ಯೆಯ ಬಲವಿರುವುದರಿಂದ ಮೂರುಲೋಕ ದಲ್ಲಿಯೇ ತನಗೆ ಸರಿಸಾಟಿಯಾದ ವೀರರಿಲ್ಲ. ಪ್ರತಿಪಕ್ಷವಿಲ್ಲವೆಂದು ಆಗ ಬೀಗುತ್ತಾನೆ. ಆದರೆ ಸೀತೆ ಮೂರ್ಛಿಗೆ ಸಂದಾಗ ಮಾತ್ರ ವ್ಯಾಮೋಹ ದೂರಾಗಿ, ಅವಳ ವಿಚಾರದಲ್ಲಿ ಅನುಕಂಪ-ಕರುಣೆಗಳು ಉಕ್ಕಿಹರಿಯುತ್ತವೆ. ಅವನ ಉದಾತ್ತಗುಣ ಅನಾವರಣಗೊಂಡಿರುವುದು ಈ ಸಂದರ್ಭದಲ್ಲಿಯೇ, ತನ್ನ ತಪ್ಪಿಗಾಗಿ ಪಶ್ಚಾತ್ತಾಪದಿಂದ ಬೇಗುದಿಗೊಳ್ಳುವ ರಾವಣನ ವ್ಯಕ್ತಿತ್ವವನ್ನು ಇಲ್ಲಿ ಕವಿ ಸುಂದರವಾಗಿ ಚಿತ್ರಿಸಿದ್ದಾನೆ. ಸೀತೆಯನ್ನು ರಾಮನಿಗೊಪ್ಪಿಸುವ ನಿರ್ಧಾರಕ್ಕೆ ಬರುವನಾದರೂ ತಕ್ಷಣವೇ ಒಪ್ಪಿಸದೆ ಯುದ್ಧದಲ್ಲಿ ರಾಮ-ಲಕ್ಷ್ಮಣರನ್ನು ಸೆರೆಹಿಡಿದು ತಂದು ವಿರಥರನ್ನಾಗಿಸಿ. ಅನಂತರವೇ ಸೀತೆಯನ್ನು ಒಪ್ಪಿಸಬೇಕೆಂದು ಆತ ಯೋಚಿಸುವಲ್ಲಿ ಅವನ ಸಾಹಸಪ್ರಿಯ ಶೌರ್ಯದ ವ್ಯಕ್ತಿತ್ವವನ್ನು ನಾವು ಮನಗಾಣಬಹುದಾಗಿದೆ.
ಹೆಚ್ಚುವರಿ ಪ್ರಶ್ನೆಗಳು:
೬. ವಿಭೀಷಣನ ಬಗೆಗೆ ರಾವಣನ ಪಶ್ಚಾತ್ತಾಪವನ್ನು ವಿವರಿಸಿ.
ರಾವಣನು ಸೀತೆಯನ್ನು ಅಪಹರಿಸಿ ತಂದಾಗ ತಮ್ಮನಾದ ವಿಭೀಷಣನು ರಾವಣನ ಕೃತ್ಯವನ್ನು ಖಂಡಿಸಿ ಬುದ್ದಿಮಾತು ಹೇಳಿರುತ್ತಾನೆ. ಆದರೆ ರಾವಣನು ನಿರ್ಲಕ್ಷಿಸಿ, ಬೈದು ಓಡಿಸಿರುತ್ತಾನೆ. ಆ ಬಗ್ಗೆ ಚಿಂತಿಸುತ್ತಾ ರಾವಣನು “ವಿಭೀಷಣನು ನನಗೆ ಪ್ರೀತಿಯಿಂದ ಹಿತವನ್ನೇ ನುಡಿದರೂ ನಾನು ಅದಕ್ಕೆ ಕಿವಿಗೊಡಲಿಲ್ಲ. ಬದಲಿಗೆ, ಒಡಹುಟ್ಟಿದವನೂ ವಿನಯವಂತನೂ ಆಗಿದ್ದ ಅವನನ್ನೇ ಗದರಿ, ಓಡಿಸಿ ದೂರಮಾಡಿಕೊಂಡ ದುರ್ವ್ಯಸನಿ ತಾನು” ಎಂದು ಪಶ್ಚಾತ್ತಾಪ ಪಡುತ್ತಾನೆ. ಇಲ್ಲಿ ವಿಭೀಷಣ ನೇರವಾಗಿ ಕಾಣಿಸಿಕೊಳ್ಳದಿದ್ದರೂ ರಾವಣನ ಪಶ್ಚಾತ್ತಾಪದ ನುಡಿಗಳ ಮೂಲಕವೇ ವಿಭೀಷಣನ ವ್ಯಕ್ತಿತ್ವವನ್ನು ಕವಿಯು ಚಿತ್ರಿಸಿದ್ದಾನೆ. ರಾವಣನು ಅನುಭವಿಸುವ ಪಶ್ಚಾತ್ತಾಪದ ಭಾಗವಾಗಿ ವಿಭೀಷಣನ ವ್ಯಕ್ತಿತ್ವ ಅನಾವರಣಗೊಂಡಿದೆ.
ಭಾಷಾಭ್ಯಾಸ
೧. ಸೂಳ್, ಕರ, ರಾಗ, ಕಳ, ಬಗೆ, ದೊರೆ, ಗಂಡ – ಇವುಗಳ ನಾನಾರ್ಥ ಪದಗಳನ್ನು ಬರೆಯಿರಿ.

೨) ಜಸ, ಬನ್ನ, ಬೀರ, ಮೊಗ, ಪರಿಕಿಸು – ಇವುಗಳ ತತ್ಸಮ ರೂಪಗಳನ್ನು ತಿಳಿಸಿರಿ.
- ಜಸ – ಯಶ
- ಬನ್ನ – ಭಂಗ
- ಬೀರ – ವೀರ
- ಮೊಗ – ಮುಖ
- ಪರಿಕಿಸು – ಪರೀಕ್ಷಿಸು
೩) ಪ್ರಮೋದ, ಸಲಿಲ, ವಕ್ತ್ರ, ನೀಲೀರಾಗ, ಪರಾಭವ, ಕಡುಪು – ಇವುಗಳಿಗೆ ಎರಡೆರಡು ಸಮಾನಾರ್ಥಕಗಳನ್ನು ಬರೆಯಿರಿ.
- ಪ್ರಮೋದ – ಸಂತೋಷ, ಆನಂದ
- ಸಲಿಲ – ನೀರು, ಜಲ, ತೋಯ, ಅಂಬು, ವಾರಿ
- ವಕ್ರ – ಮೊಗ, ಮುಖ, ವದನ, ಆನನ
- ನೀಲೀರಾಗ – ಸ್ಥಿರಪ್ರೀತಿ, ಗಾಢಸ್ನೇಹ
- ಪರಾಭವ – ಸೋಲು, ಅಪಜಯ
- ಕಡುಪು – ಪರಾಕ್ರಮ, ತೋಳ್ಳಲ.
೪) ಪ್ರಸ್ತುತ ಕಾವ್ಯಭಾಗದಲ್ಲಿ ಬಂದಿರುವ ನಾಮಪದಗಳನ್ನು ಪಟ್ಟಿಮಾಡಿ.
ರಾವಣ, ಧ್ರುವ, ಕೃತಾಂತ, ವಿದ್ಯೆ, ಲಕ್ಷ್ಮೀಧರ, ರಾಮಸ್ವಾಮಿ, ಶಾಂತಿಜಿನ, ಅಂಗದ, ಶೃಂಗ, ಇಭ, ಮಯ, ಪದ್ಮ ಅಂತಃಪುರ, ಬಹುರೂಪಿಣಿ, ಪ್ರಮದವನ, ಜಾನಕಿ, ಖಚರ, ಸೀತಾದೇವಿ, ತೃಣ, ರಘುಸೂನು, ಲಕ್ಷ್ಮಣ, ನಳಿನ, ದಶಾನನ, ಮಾನಿನಿ, ಧುರ, ಧರಿತ್ರಿ, ಸಲಿಲ, ಉದಾತ್ತ, ನೀಲಿ, ರವಿ, ಸಂಧ್ಯೆ ಖೇಚರ, ರಾಜ್ಯ, ಲಕ್ಷ್ಮಿ ವಿಭೀಷಣ, ಸೌಮಿತ್ರಿ, ರಣ, ರಥ -ಇತ್ಯಾದಿ.
ಕೆಳಗಿನ ಪದ್ಯಗಳ ಭಾವಾರ್ಥವನ್ನು ಬರೆಯಿರಿ:
೧. ಸಮಧಿಕರಾರ್ ಜಗತ್ತಯದೊಳಿನ್ನೆನಗೆನ್ನೊಳಿದಿರ್ಚುವನ್ನರಾರ್
ಸಮರದೊಳೆಂದು ತನ್ನ ಭುಜದಂಡಮನೀಕ್ಷಿಸಿ ಜಾನಕೀಮುಖಾ
ಬ್ಜಮನವಲೋಕಿಸಲ್ ಕರಮೆ ಕಾತರನಾಗಿ ವಿಯಚ್ಚರಾಧಿಪಂ
ಪ್ರಮದವನಕ್ಕೆ ಬಂದನರಲಂಬುಗಳಿಲ್ಲದ ಕಾಮನೆಂಬಿನಂ
ನಾಗಚಂದ್ರನು ರಚಿಸಿರುವ ‘ಶ್ರೀರಾಮಚಂದ್ರಚರಿತ ಪುರಾಣ’ದಿಂದ ಆಯ್ದುಕೊಳ್ಳಲಾಗಿರುವ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಸ್ವೀಕರಿಸಲಾಗಿದೆ.
ರಾವಣನು ಚಿತ್ತನಿರೋಧವನ್ನು ಮಾಡಿ ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಳ್ಳುತ್ತಾನೆ. ನಿಯಮಾನುಸಾರ ಪೂಜೆ, ಅಮೃತಾಹಾರವನ್ನು ಸೇವಿಸಿದ ನಂತರ ರಾವಣನು ಬಹುರೂಪಿಣಿ ವಿದ್ಯೆಯ ಪ್ರಭಾವವನ್ನು ಪರೀಕ್ಷಿಸಿಕೊಂಡ ನಂತರದ ಮನೋಭಾವವನ್ನು ಕವಿಯು ಈ ಪದ್ಯದಲ್ಲಿ ಚಿತ್ರಿಸಿದ್ದಾನೆ.
ವಿದ್ಯಾದೇವತೆಯ ಪ್ರಭಾವವನ್ನು ಪರೀಕ್ಷಿಸಿಕೊಂಡ ರಾವಣನು “ಮೂರು ಲೋಕಗಳಲ್ಲಿಯೂ ನನಗೆ ಸರಿಸಮಾನರು ಯಾರಿದ್ದಾರೆ? ಸಮರದಲ್ಲಿ ನನ್ನನ್ನು ಎದುರಿಸುವವರು ಯಾರಿದ್ದಾರೆ?” ಎಂದುಕೊಂಡು ತನ್ನ ಭುಜದಂಡವನ್ನು ನೋಡಿಕೊಳ್ಳುವನು. ಆ ಕ್ಷಣ ಅವನಲ್ಲಿ ಸೀತೆಯ ಕಮಲದಂತಹ ಮುಖವನ್ನು ವೀಕ್ಷಿಸಬೇಕೆಂಬ ಬಯಕೆ ಮೂಡಿತು. ಅವಳನ್ನು ಕಾಣುವ ಕಾತರಗೊಂಡ ಆತ ಹೂಬಾಣಗಳಿಲ್ಲದ ಕಾಮನಂತೆ ಸೀತೆಯು ಇದ್ದ ಪ್ರಮದವನಕ್ಕೆ ಬರುತ್ತಾನೆ. ಯುದ್ಧ ಸನ್ನದ್ದನಾಗಿರುವಾಗಲೂ ಆತನಲ್ಲಿ ಸೀತೆಯ ವ್ಯಾಮೋಹ ಕಾಡುವುದನ್ನು ಇಲ್ಲಿ ಗಮನಿಸಬಹುದಾಗಿದೆ.
೨. ರಾವಣನ ರೂಪು ಸೀತಾ
ದೇವಿಗೆ ತೃಣಕಲ್ಲಮಾಯ್ತು ಪತಿಭಕ್ತಿಯೊಳಾ
ರೀ ವನಿತೆಯ ತೆಱದಿಂ ಸ
ದ್ವಾವಮನೊಳಕೊಂಡ ಪುಣ್ಯವತಿಯರ್ ಸತಿಯರ್
ನಾಗಚಂದ್ರನು ಬರೆದಿರುವ ‘ಪಂಪ ರಾಮಾಯಣ’ ದಿಂದಾಯ್ದ ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಆಯ್ದುಕೊಳ್ಳಲಾಗಿದೆ.
ಸೀತಾದೇವಿಯು ರಾವಣನ ರೂಪನ್ನು ಹೇಗೆ ಪರಿಭಾವಿಸಿದಳು ಎಂಬುದನ್ನು ವಿವರಿಸುವ ಸಂದರ್ಭದಲ್ಲಿ ಕವಿಯು ಈ ಪದ್ಯವನ್ನು ರಚಿಸಿರುವನು. ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಂಡಾದ ಮೇಲೆ ರಾವಣನಿಗೆ ತಕ್ಷಣವೇ ಸೀತೆಯ ಮುಖ ಕಮಲವನ್ನು ನೋಡಬೇಕೆಂಬ ಬಯಕೆ ಬಲವಾಗುತ್ತದೆ. ಕಾತುರದಿಂದ ಆತ ಸೀತೆಯಿದ್ದ ಪ್ರಮದವನಕ್ಕೆ ಬರುತ್ತಾನೆ. ಹಾಗೆ ಬರುತ್ತಿರುವ ರಾವಣನ ಪೌರುಷದ ಬೆಡಗನ್ನು ಸಮೀಪದಲ್ಲಿ ಖಚರ ಕಾಂತೆಯರು ಸೀತೆಗೆ ತೋರುತ್ತಾರೆ. ಅದಕ್ಕೆ ಸೀತೆಯ ಮನಸ್ಸಿನ ಪ್ರತಿಕ್ರಿಯೆ ಹೇಗಿತ್ತೆಂಬುದನ್ನು ಕವಿಯು ಇಲ್ಲಿ ವಿವರಿಸಿದ್ದಾನೆ.
“ರಾವಣನ ರೂಪವು ಸೀತಾದೇವಿಯ ಪಾಲಿಗೆ ಹುಲ್ಲುಕಡ್ಡಿಗೆ ಸಮವೆನಿಸಿತು. ಪತಿಭಕ್ತಿಯಲ್ಲಿ ಈ ಹೆಣ್ಣಿನಂತೆ ಸದ್ಭಾವವನ್ನುಳ್ಳ ಪುಣ್ಯವತಿಯರು, ಸತಿಯರು ಯಾರಿದ್ದಾರೆ?” ಎಂಬುದಾಗಿ ಕವಿಯು ಸೀತೆಯನ್ನು ಕುರಿತು ಹೇಳಿದ್ದಾನೆ. ರಾಮನಲ್ಲಿ ಸೀತೆಗೆ ಅಪಾರವಾದ ಭಕ್ತಿ-ಗೌರವ, ಪ್ರೀತಿ ಇವೆ. ಆತನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಸೀತೆಗೆ ರಾವಣನ ರೂಪವು ಹುಲ್ಲುಕಡ್ಡಿಗೆ ಸಮಾನವಾಗಿ ಕಾಣುವುದು ಸಹಜವಾಗಿದೆ. ಕವಿಯು ಹೀಗೇ ಭಾವಿಸುವುದರಿಂದ ಸೀತೆಯಂತಹ ಪುಣ್ಯವತಿಯಾದ ಸತಿಯರು ಬೇರೆ ಯಾರಿದ್ದಾರೆ? ಎಂದಾತ ಪ್ರಶ್ನಿಸಿರುವುದು ಸೂಕ್ತವಾಗಿದೆ.
೩. ಕರುಣಿಸುವೊಡೆನಗೆ ದಶಕಂ
ಧರ ಧುರದೊಳ್ ರಘುತನೂಜನಾಯುಃಪ್ರಾಣಂ
ಬರೆಗಂ ಬಾರದಿರೆನುತುಂ
ಧರಿತ್ರಿಯೊಳ್ ಮೈಯನೊಕ್ಕು ಮೂರ್ಛೆಗೆ ಸಂದಳ್
ಅಭಿನವ ಪಂಪನೆಂಬ ಖ್ಯಾತಿಗೆ ಪಾತ್ರನಾಗಿರುವ ನಾಗಚಂದ್ರ ಕವಿಯು ರಚಿಸಿರುವ ‘ಶ್ರೀರಾಮಚಂದ್ರಚರಿತ ಪುರಾಣ’ ದಿಂದಾಯ್ದ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಸ್ವೀಕರಿಸಲಾಗಿದೆ.
ರಾವಣನು ಪ್ರಮದವನಕ್ಕೆ ಬಂದವನು ಸೀತೆಯನ್ನುದ್ದೇಶಿಸಿ “ನನಗೆ ಬಹುರೂಪಿಣಿ ವಿದ್ಯೆ ಸಾಧಿತವಾಗಿದೆ. ನನ್ನನ್ನು ವಿರೋಧಿಸುವ ಪ್ರತಿಪಕ್ಷ ಯಾವುದೂ ಇಲ್ಲ. ನೀನು ರಾಮನ ಗೊಡವೆಯನ್ನು ಬಿಟ್ಟು ನನ್ನನ್ನು ಒಪ್ಪಿಕೊಂಡು, ಸಾಮ್ರಾಜ್ಯ ಸುಖವನ್ನು ಅನುಭವಿಸು” ಎಂದು ಹೇಳಿದಾಗ ಸೀತೆಯು ರಾವಣನಿಗೆ ಉತ್ತರಿಸುವ ಸಂದರ್ಭವಿದಾಗಿದೆ.
“ರಾವಣನೇ ನನ್ನ ಮೇಲೆ ಕರುಣೆ ತೋರಿಸುವುದಾದರೆ ರಘುರಾಮನ ಆಯು:ಪ್ರಾಣದವರೆಗೂ ಬರಬೇಡ ಎಂದೆನ್ನುತ್ತಾ ಭೂಮಿಯ ಮೇಲೆ ಮೈಯನ್ನು ಚೆಲ್ಲಿ ಮೂರ್ಛಿಗೆ ಸಲ್ಲುತ್ತಾಳೆ”, ರಾವಣನ ರೂಪಿಗಾಗಲೀ, ಸಾಮ್ರಾಜ್ಯ-ಪೌರುಷಗಳಿಗಾಗಲೀ ಮನಸೋಲದೆ ಸ್ಥಿರಚಿತ್ತಳಾಗಿರುವ ಸೀತೆಗೆ ರಾಮನ ಆಯಸ್ಸಿನ ಚಿಂತೆ ಮಾತ್ರ ಅವರಿಸಿದೆ. ಆದ್ದರಿಂದಲೇ ಆಕೆ ರಾಮನ ಆಯಸ್ಸು ಮುಗಿಯುವವರೆಗೂ ಬದುಕಲು ಬಿಡು ಎಂದು ಕೇಳುತ್ತಾಳೆ. ಅಲ್ಲದೆ ರಾಮನ ಆಯಸ್ಸಿನ ಬಗ್ಗೆ ಮಾತಾಡಿದೊಡನೆ ಅವಳು ಮೂರ್ಛಿತಪ್ಪಿ ಬೀಳುವುದು ರಾಮನಲ್ಲಿ ಅವಳಿಗಿರುವ ಪ್ರೀತಿಯ ದ್ಯೋತಕವಾಗಿದೆ ಎನ್ನಬಹುದು.
೪. ಇವರಂ ಪ್ರಾಣಪ್ರಿಯರಂ
ನೆವಮಿಲ್ಲದೆ ಕರ್ಮವಶಮೆ ನವಮನೆ ಕಂದ
ರ್ಪವಿಮೋಹದಿಂದಗಲ್ಚಿದೆ
ನವಿವೇಕಿಯೆನೆನ್ನ ಕುಲದ ಪೆಂಪಅವಿನೆಗಂ
ನಾಗಚಂದ್ರನು ರಚಿಸಿರುವ ‘ಪಂಪ ರಾಮಾಯಣ’ದಿಂದಾಯ್ದ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಆಯ್ದುಕೊಳ್ಳಲಾಗಿದೆ.
ಸೀತೆಯು ಮೂರ್ಛಿಗೆ ಸಂದೊಡನೆ ರಾವಣನಲ್ಲಿ ಪಶ್ಚಾತ್ತಾಪವು ಮೂಡುತ್ತದೆ. ತನ್ನ ತಪ್ಪಿನ ಅರಿವಿನಿಂದ ರಾವಣನಾಡುವ ಮಾತುಗಳು ಈ ಮೇಲಿನ ಪದ್ಯದಲ್ಲಿವೆ. ಅವನ ಪಶ್ಚಾತ್ತಾಪದಿಂದಾಡುವ ಹಲವು ಮಾತುಗಳಲ್ಲಿ ಕೆಲವನ್ನು ಇಲ್ಲಿ ಗಮನಿಸಬಹುದಾಗಿದೆ.
“ಸೀತೆ ಮತ್ತು ರಾಮರನ್ನು, ಪ್ರಾಣಪ್ರಿಯರನ್ನು ಯಾವ ಕಾರಣವಿರದಿದ್ದರೂ ಪರಸ್ಪರ ಅಗಲುವಂತೆ ಮಾಡಿದೆ. ಇದು ನಾನು ಕರ್ಮವಶದಿಂದ ಮಾಡಿದ ಕೆಲಸವಲ್ಲದೆ ಬೇರೇನಲ್ಲ. ಅತಿಯಾದ ವ್ಯಾಮೋಹದಿಂದ ಇವರಿಬ್ಬರನ್ನು ಅಗಲಿಸುವ ಮೂಲಕ ಅವಿವೇಕಿಯಾದ ನಾನು ನನ್ನ ಕುಲದ ಹಿರಿಮೆಗೆ ಭಂಗ ತಂದೆ” ಎಂಬುದಾಗಿ ರಾವಣನು ಯೋಚಿಸುತ್ತಾನೆ.
ಸೀತೆಯು ಮೂರ್ಛಿಗೆ ಸಂದಾಗ ರಾವಣನಲ್ಲಿ ಅವಳ ಬಗೆಗಿದ್ದ ವ್ಯಾಮೋಹ ದೂರಾಗಿ ಅನುಕಂಪ ಆವರಿಸಿದೆ. ಜೊತೆಗೆ ತನ್ನ ತಪ್ಪಿನ ಅರಿವಾಗಿದೆ. ಇದನ್ನು ಆತನಾಡುವ ಈ ಮೇಲಿನ ಮಾತುಗಳ ಮೂಲಕ ತಿಳಿಯಬಹುದು. ಲೋಕದಲ್ಲಿ ಪಶ್ಚಾತ್ತಾಪಕ್ಕಿಂತ ದೊಡ್ಡದು ಯಾವುದಿದೆ?
೫. ರಾಮನಿನಗಲ್ಲಿ ತಂದಾ
ನೀ ಮಾನಿನಿಗಿನಿತು ದುಃಖಮಂ ಪುಟ್ಟಿಸಿದೆಂ
ಕಾಮವ್ಯಾಮೋಹದಿನಾ
ಶಾಮುಖಮಂ ಪುದಿಯೆ ದುರ್ಯಶಃಪಟಹರವಂ
ನಾಗಚಂದ್ರ ಕವಿಯು ಬರೆದಿರುವ ‘ಪಂಪ ರಾಮಾಯಣ’ದಿಂದ ಆಯ್ದುಕೊಳ್ಳಲಾಗಿರುವ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಸ್ವೀಕರಿಸಲಾಗಿದೆ.
ಸೀತೆಯ ಬಗ್ಗೆ ವ್ಯಾಮೋಹವನ್ನು ಕಳೆದುಕೊಂಡಿರುವ ರಾವಣನು ಪಶ್ಚಾತ್ತಾಪ ಪಡುತ್ತಿರುವ ಸನ್ನಿವೇಶವನ್ನು ಕವಿಯು ಈ ಪದ್ಯದಲ್ಲಿ ಚಿತ್ರಿಸಿದ್ದಾನೆ.
ಕರ್ಮವಶದ ನೆವದಿಂದ ಕಾಮಮೋಹಿತನಾದ ತನ್ನಿಂದಾಗಿ ತನ್ನ ಕುಲದ ಪೆಂಪು ಅಳಿಯಿತು ಎಂದು ಪರಿತಾಪಗೊಂಡ ರಾವಣನು ‘ಕಾಮಪೀಡಿತನಾಗಿ ತಾನು ಈ ಮಾನಿನಿಯನ್ನು ರಾಮನಿಂದ ಬೇರ್ಪಡಿಸಿದೆ. ಬೇರ್ಪಡಿಸಿ ಇಲ್ಲಿಗೆ ಕರೆ ತಂದು ಅಪಾರ ದುಃಖಕ್ಕೆ ಈಡು ಮಾಡಿದೆ. ಇದರಿಂದಾಗಿ ದುರ್ಯಶಃಪಟಹರವ ಎಲ್ಲೆಡೆ ತುಂಬಿಕೊಂಡಿತಲ್ಲ” ಎಂದು ಪಶ್ಚಾತ್ತಾಪ ಪಡುವನು. ತಾನು ಮಾಡಿದ ಅಕಾರ್ಯಕ್ಕಾಗಿ ದುಃಖಿಸುವ ರಾವಣನ ಮನಸ್ಸು ಪರಿವರ್ತನೆಗೊಂಡಿರುವುದಕ್ಕೆ ಅವನ ಈ ಆತ್ಮನಿರೀಕ್ಷಣೆಯ ನುಡಿಗಳು ಸಾಕ್ಷಿಯಾಗಿವೆ.
೬. ಕದಡಿದ ಸಲಿಲಂ ತಿಳಿವಂ
ದದೆ ತನ್ನಿಂ ತಾನೆ ತಿಳಿದ ದಶವದನಂಗಾ
ದುದು ವೈರಾಗ್ಯಂ ಸೀತೆಯೊ
ಳುದಾತ್ತನೊಳ್ ಪುಟ್ಟದ
‘ಅಭಿನವ ಪಂಪ’ನೆಂದೇ ಪ್ರಸಿದ್ದನಾಗಿರುವ ಕವಿ ನಾಗಚಂದ್ರನು ರಚಿಸಿರುವ ‘ಶ್ರೀರಾಮಚಂದ್ರ ಚರಿತ ಪುರಾಣ’ ವೆಂಬ ಚಂಪೂಕಾವ್ಯದಿಂದ ಸ್ವೀಕರಿಸಿರುವ ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನುಆಯ್ದುಕೊಳ್ಳಲಾಗಿದೆ.
ರಾವಣನಿಗೆ ಸೀತೆಯ ಮೇಲಿನ ವ್ಯಾಮೋಹವು ದೂರಾಗಿ, ಅವಳಲ್ಲಿ ವೈರಾಗ್ಯಭಾವವು ಮೂಡಿದ ಸಂದರ್ಭವನ್ನು ಕವಿಯು ಈ ಪದ್ಯದಲ್ಲಿ ಚಿತ್ರಿಸಿದ್ದಾನೆ.
‘ಕದಡಿದ ನೀರು ತನಗೆ ತಾನೇ ತಿಳಿಯಾಗುವಂತೆ ರಾವಣನಿಗೆ ಸೀತೆಯಲ್ಲಿದ್ದ ಮೋಹವು ಕಡಿಮೆಯಾಗಿ, ವೈರಾಗ್ಯವು ಉದಯಿಸಿತು. ಉದಾತ್ತರಾದವರಲ್ಲಿ ಸ್ಥಿರವ್ಯಾಮೋಹವು ನೆಲೆಸುವುದಿಲ್ಲ ಅಲ್ಲವೇ?’ ಎಂಬುದು ಈ ಪದ್ಯದ ಭಾವಾರ್ಥ ವಾಗಿದೆ.
ನೀರನ್ನು ಬೇರೆಯವರು ಕದಡಬಹುದೇ ಹೊರತು, ಮತ್ತದನ್ನು ತಿಳಿಯಾಗಿ ಮಾಡಲು ಬೇರೆಯವರಿಂದ ಸಾಧ್ಯವಿಲ್ಲ. ಕದಡಿದ ನೀರು ತನಗೆ ತಾನೇ ತಿಳಿಯಾಗಬೇಕು. ಅದರಂತೆ ಸೀತೆಯಲ್ಲಿ ವ್ಯಾಮೋಹ ಹೊಂದಿದ್ದ, ಕದಡಿಹೋಗಿ ರಾಡಿಗೊಂಡಿದ್ದ ರಾವಣನ ಮನಸ್ಸು ತನಗೆ ತಾನೇ ವ್ಯಾಮೋಹದಿಂದ ದೂರಾಗಿ, ವ್ಯಾಮೋಹವಿದ್ದ ಸ್ಥಳದಲ್ಲಿ ವೈರಾಗ್ಯವು ನೆಲೆಗೊಂಡಿತು. ಉದಾತ್ತನಾದ ರಾವಣನಲ್ಲಿ ಮೋಹವೆಂಬುದು ಸ್ಥಿರವಾಗಿ ನೆಲೆಸಲು ಸಾಧ್ಯವಿಲ್ಲವೆಂಬುದನ್ನು ಕವಿಯು ಇಲ್ಲಿ ಸೊಗಸಾಗಿ ವರ್ಣಿಸಿದ್ದಾನೆ. ರಾವಣನ ಮನಸ್ಸು ತನ್ನ ಮೂಲಸ್ವರೂಪವನ್ನು ಕಾಯ್ದುಕೊಂಡ ಬಗೆಯನ್ನು ಕದಡಿದ ನೀರು ತಿಳಿಯಾಗುವುದಕ್ಕೆ ಹೋಲಿಸಿರುವುದು ಇಲ್ಲಿನ ಸ್ವಾರಸ್ಯವಾಗಿದೆ.
೭. ಇರದುಯ್ಲಿಗಳೆ ಕೊಟ್ರೊಡೆನ್ನ ಕಡುಪುಂ ಕಟ್ಟಾಯಮುಂ ಬೀರಮುಂ
ಬಿರುದುಂ ಬೀಸರಮಕ್ಕುಮೋಸರಿಸಿದಂತಾಗಿರ್ಕುಮಂತಾಗದಂ
ತಿರೆ ದೋರ್ಗವ್ರಮನಿರ್ವಲಂ ಪೊಗಳ್ವೆನಂ ಸೌಮಿತ್ರಿಯಂ ರಾಮನಂ
ವಿರಥರ್ಮಾಡಿ ರಣಾಗ್ರದೊಳ್ ಪಿಡಿದು ತಂದಾಂ ಕೊಟ್ಟಪೆಂ ಸೀತೆಯಂ
ಭಾರತೀಕರ್ಣಪೂರ, ಕವಿತಾಮನೋಹರ ಮುಂತಾದ ಬಿರುದುಗಳನ್ನು ಹೊಂದಿದ್ದ ಕವಿ ನಾಗಚಂದ್ರನು ರಚಿಸಿರುವ ‘ರಾಮಚಂದ್ರ ಚರಿತ ಪುರಾಣ’ವೆಂಬ ಚಂಪೂಕಾವ್ಯದಿಂದ ಆಯ್ದುಕೊಳ್ಳಲಾಗಿರುವ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಸ್ವೀಕರಿಸಲಾಗಿದೆ.
ಸೀತೆಯನ್ನು ರಾಮನಿಗೊಪ್ಪಿಸುವುದಾಗಿ ರಾವಣನು ನಿರ್ಧರಿಸಿದರೂ, ಆಕೆಯನ್ನು ತಕ್ಷಣವೇ ಒಪ್ಪಿಸಲು ಬಯಸದೆ, ಯಾವಾಗ ಹಿಂದಿರುಗಿಸಬೇಕೆಂಬುದನ್ನು ತನ್ನ ಮನದೊಳಗೇ ಯೋಚಿಸುತ್ತಾನೆ. ಅವನ ಆತ್ಮಗತವನ್ನು ಕವಿಯು ಈ ಪದ್ಯದಲ್ಲಿ ವಿವರಿಸಿದ್ದಾನೆ.
‘ಈಗಲೇ ಸೀತೆಯನ್ನು ರಾಮನಿಗೊಪ್ಪಿಸಿದರೆ ನನ್ನ ಪರಾಕ್ರಮ, ಅಧಿಕ ಸಾಮರ್ಥ್ಯ, ವೀರ ಬಿರುದು, ಮುಂತಾದವುಗಳು ವ್ಯರ್ಥವಾಗಿ ಹೋಗುತ್ತವೆ. ಹಾಗಾಗದಂತಿರಬೇಕಾದರೆ ಯುದ್ದದಲ್ಲಿ ಎರಡೂ ಕಡೆಯ ಸೈನ್ಯಕ್ಕೆ ತನ್ನ ಬಾಹುಬಲದ ಹಮ್ಮನ್ನು ತೋರಿಸಿ, ರಾಮಲಕ್ಷ್ಮಣರನ್ನು ಸೋಲಿಸಿ. ಸೆರೆಹಿಡಿದು ತಂದು ಅವರಿಗೆ ಸೀತೆಯನ್ನು ಉಡುಗೊರೆಯಾಗಿ ಕೊಡಬೇಕು’ ಎಂಬುದಾಗಿ ರಾವಣನು ಮನದಲ್ಲಿ ಯೋಚಿಸುತ್ತಾನೆ. ಇದು ಈ ಪದ್ಯದ ಭಾವಾರ್ಥವಾಗಿದೆ.
ಸೀತೆಯನ್ನು ಹಿಂದಿರುಗಿಸಲು ನಿರ್ಧರಿಸಿದರೂ ಅದನ್ನು ತಕ್ಷಣವೇ ಜಾರಿಗೆ ತರದೆ ಯುದ್ದದಲ್ಲಿ ತನ್ನ ಪರಾಕ್ರಮವನ್ನು ಮೆರೆಯಲು ಯೋಚಿಸುವ ರಾವಣನ ನಿರ್ಧಾರವು ಆತನ ವೀರೋಚಿತ ವ್ಯಕ್ತಿತ್ವಕ್ಕೆ ತಕ್ಕುದಾಗಿಯೇ ಇದೆ. ರಾವಣನ ಆತ್ಮಪ್ರತಿಷ್ಠೆಯು ಈ ಪದ್ಯದಲ್ಲಿ ಅನಾವರಣಗೊಂಡಿರುವುದು ಇಲ್ಲಿನ ಸ್ವಾರಸ್ಯವಾಗಿದೆ.
೮. ಪತ್ತುವಿಡದಿರ್ದನೇ ರವಿ
ಪತ್ತಿದ ಸಂಧ್ಯಾನುರಾಗಮಂ ಮನದಳಿಪಿಂ
ದೆತ್ತಾನುಂ ಪೊಲ್ಲೆನಿಪುದ
ನುತ್ತಮನಾಚರಿಸಿ ಪತ್ತುವಿಡದಿರ್ದಪನೇ
ಸುಪ್ರಸಿದ್ಧ ಕವಿಯಾದ ನಾಗಚಂದ್ರನು ರಚಿಸಿರುವ ‘ಶ್ರೀರಾಮಚಂದ್ರ ಚರಿತ ಪುರಾಣ’ದಿಂದಾಯ್ದ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಆಯ್ಕೆಮಾಡಿಕೊಂಡಿದೆ.
ರಾವಣನು ತನಗೆ ಮೆತ್ತಿಕೊಂಡಿರುವ ಅಪವಾದದಿಂದ ಹೇಗೆ ಬಿಡಿಸಿಕೊಳ್ಳಬಹುದೆಂಬುದನ್ನು ವಿವರಿಸುವ ಸಂದರ್ಭವಿದಾಗಿದೆ.
‘ಸೂರ್ಯನು ತನ್ನನ್ನು ಕವಿದಿರುವ ಕತ್ತಲಿನಿಂದ ಹೊರಗೆ ಬರದಿರುತ್ತಾನೆಯೇ? ಅದೇ ರೀತಿ ರಾವಣನೂ ಕೂಡ ಸೀತೆಯ ಮೋಹಕ್ಕೆ ಸಿಲುಕಿದ ಕೆಟ್ಟ ನಡೆವಳಿಕೆಯೆಂಬ ಕತ್ತಲನ್ನು ಅಥವಾ ಅಪವಾದವನ್ನು ಉತ್ತಮವಾದ ನಡೆವಳಿಕೆಯನ್ನು ಆಚರಿಸಿ ತೋರುವ ಮೂಲಕ ದೂರಮಾಡಿಕೊಳ್ಳುತ್ತಾನೆ’ ಎಂಬುದು ಈ ಪದ್ಯದ ಭಾವಾರ್ಥವಾಗಿದೆ.
ರಾವಣನ ಸದ್ಯದ ಪರಿಸ್ಥಿತಿಯನ್ನು ಕತ್ತಲು ಆವರಿಸಿರುವ ಸೂರ್ಯನಿಗೆ ಹೋಲಿಸಿರುವಲ್ಲಿ ಕವಿಯ ಔಚಿತ್ಯ ಎದ್ದುಕಾಣುತ್ತದೆ. ಇದು ತಾತ್ಕಾಲಿಕ ಸ್ಥಿತಿ ಮಾತ್ರ. ಸೂರ್ಯ ಕತ್ತಲಿನಿಂದ ಹೊರಬರುವ ರೀತಿಯಲ್ಲಿ ರಾವಣನೂ ಅಪವಾದ ಮುಕ್ತನಾಗಿ ಬೆಳಗುತ್ತಾನೆಂಬುದನ್ನು ಅರ್ಥಪೂರ್ಣವಾದ ರೂಪಕದ ಮೂಲಕ ಕವಿ ಇಲ್ಲಿ ತಿಳಿಸಿರುವುದು ಈ ಪದ್ಯದ ವಿಶೇಷಾಂಶವಾಗಿದೆ ಎನ್ನಬಹುದು.
೯. ಗುಣಪರಿಪಾಲನಾರ್ಥಮೆನಗಂ ಬಗೆದೋದಳಿಲ್ಲ ದಿವ್ಯಭೂ
ಷಣವಸನಾಂಗರಾಗಮುಮನೊಲ್ಲದೆ ಖೇಚರರಾಜ್ಯಲಕ್ಷ್ಮಿಯಂ
ತೃಣಸಮನಾಗೆ ಭಾವಿಸಿದಳೀ ಸತಿಯುಂ ಮೊದಲಾಗೆ
ಪೌರುಷ ಪ್ರಣಯಿಯನಿಂತಪೇಕ್ಷಿಸುವೆನೇ ಗುಣಹಾನಿಯನೆನ್ನ ಪಾಪದಿಂ
ನಾಗಚಂದ್ರನು ರಚಿಸಿರುವ ‘ಶ್ರೀರಾಮಚಂದ್ರಚರಿತ ಪುರಾಣ’ದಿಂದ ಆಯ್ದುಕೊಳ್ಳಲಾಗಿರುವ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಸ್ವೀಕರಿಸಲಾಗಿದೆ.
ರಾವಣನು ತನ್ನ ಆಪ್ತವರ್ಗದವರೊಂದಿಗೆ ಆಡುವ ಮಾತುಗಳು ಈ ಪದ್ಯಭಾಗದಲ್ಲಿದೆ. ಸೀತೆಯು ತನ್ನ ನಿಶ್ಚಲ ಗುಣದಿಂದ ನನ್ನ ಬಗೆಗೆ ಗಮನಹರಿಸಲಿಲ್ಲ. ನನ್ನ ದಿವ್ಯ ಭೂಷಣ ವಸನಗಳನ್ನಾಗಲೀ ಖೇಚರ ರಾಜ್ಯವನ್ನಾಗಲೀ ಆಕೆ ತೃಣ ಸಮಾನವಾಗಿ ಕಂಡಳು. ಹೀಗಾಗಿ ಪೌರುಷ ಪ್ರಣಯಿಯಂತೆ ನಾನು ಪಾಪಗೈದು ಇವಳನ್ನು ಬಯಸುತ್ತೇನೆಯೇ ಎಂಬ ರಾವಣನ ಈ ಮಾತುಗಳಲ್ಲಿ ಅವನ ಮನಃಪರಿವರ್ತನೆಯ ಛಾಯೆಯನ್ನು ಗುರುತಿಸಬಹುದು.
೧೦. ಪೊಸಗಾರ ಸಿಡಿಲ ಮಸಕಮ
ನಸಕಟೆದು ಕೃತಾಂತಜಿಹೈ ಪೊಡಕರಿಸುವವೋಲ್
ಬೆಸಸು ಬೆಸಸೆಂದು ಕರಮ
ರ್ವಿಸಿ ಸನ್ನಿದವಾಯ್ತು ವಿದ್ಯೆ ರಾವಣನಿದಿರೊಳ್
ನಾಗಚಂದ್ರನು ರಚಿಸಿರುವ ‘ಶ್ರೀರಾಮಚಂದ್ರಚರಿತ ಪುರಾಣ’ದಿಂದ ಆಯ್ದುಕೊಳ್ಳಲಾಗಿರುವ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಸ್ವೀಕರಿಸಲಾಗಿದೆ.
ರಾವಣನು ಯುದ್ಧ ಸನ್ನದ್ದನಾಗುವ ಮುನ್ನ ಶಾಂತಿಜಿನಭವನವನ್ನು ತಲುಪಿ ಅನನ್ಯ ಭಕ್ತಿಯಿಂದ ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಅವನು ಧ್ರುವಮಂಡಲದಂತಹ ನಿಶ್ಚಲ ಭಕ್ತಿಯಿಂದ, ದಿವ್ಯಮಂತ್ರಗಳಿಂದ ವಿದ್ಯೆಯನ್ನು ಒಲಿಸಿಕೊಂಡ ಸಂದರ್ಭದ ಚಿತ್ರಣವಿದು.
ಮುಂಗಾರಿನ ಮಳೆಯ ಸಂದರ್ಭದಲ್ಲಿ ಸಿಡಿಲಿನ ಆವೇಶ, ಆರ್ಭಟಗಳು ಗಗನದಲ್ಲಿ ಉಂಟುಮಾಡುವ ದೃಶ್ಯವನ್ನು ಮೀರಿಸುವಂತೆ ಬಹುರೂಪಿಣಿ ವಿದ್ಯೆಯು ಯಮನ ನಾಲಗೆಯೆ ನುಡಿಯುವಂತೆ ‘ಆಜ್ಞಾಪಿಸು ಆಜ್ಞಾಪಿಸು’ ಎಂದು ಕೈಗಳನ್ನು ಚಾಚಿ ರಾವಣನಿಗೆ ಪ್ರತ್ಯಕ್ಷವಾಗಿ ಎದಿರುಗೊಂಡು ಹೇಳಿತು. ಯುದ್ಧ ಸನ್ನದ್ದ ರಾವಣನು ಒಲಿಸಿಕೊಂಡ ವಿದ್ಯೆಯು ಪ್ರಾಕೃತಿಕ ಶಕ್ತಿಯನ್ನೂ ಮೀರಿಸಿದ. ಯಮಸದೃಶ ಶಕ್ತಿಗೆ ಸಮಾನವಾದುದಾಗಿತ್ತು ಎಂಬುದನ್ನು ಕವಿ ಅದ್ಭುತವಾಗಿ ವರ್ಣಿಸಿದ್ದಾನೆ.
ಕಾವ್ಯಭಾಗದ ಸಾರಾಂಶ ಮತ್ತು ವಿಮರ್ಶೆ
ರಾವಣನು ರಾಮಸೈನ್ಯದ ಮೇಲೆ ಯುದ್ದಕ್ಕೆ ತೆರಳುವ ಮುನ್ನ ಶಾಂತಿಜಿನಭವನವನ್ನು ಪ್ರವೇಶಿಸಿ ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಳ್ಳಲು ಪ್ರಾರ್ಥಿಸುವ ಸಂದರ್ಭ ಇದಾಗಿದೆ.
ವಚನ: ರಾವಣಂ ಧ್ರುವಮಂಡಲದಂತೆ ಚಲಿಯಿಸದೆ ಚಿತ್ತನಿರೋಧಂಗೆಯ್ದು ದಿವ್ಯಮಂತ್ರದಿಂ ವಿದ್ಯೆಯಂ ಸಾಧಿಸುವುದುಂ
ಮನಸ್ಸು ಪ್ರಕ್ಷುಬ್ಧಗೊಂಡಿದ್ದರೂ ರಾವಣನು ಧ್ರುವಮಂಡಲದಂತೆ ಚಲಿಸದೆ ಸ್ಥಿರವಾಗಿ ಕುಳಿತು ಮನಸ್ಸನ್ನು ನಿಯಂತ್ರಿಸಿಕೊಂಡು ದಿವ್ಯಮಂತ್ರಗಳಿಂದ ವಿದ್ಯೆಯನ್ನು ಒಲಿಸಿಕೊಂಡನು.
ಶಬ್ದಾರ್ಥ: ಚಿತ್ತನಿರೋಧ-ಮನಸ್ಸನ್ನು ನಿಗ್ರಹಿಸುವುದು.
೧) ಪೊಸಗಾರ ಸಿಡಿಲ ಮಸಕಮ
ನಸಕಟೆದು ಕೃತಾಂತಜಿಹೈ ಪೊಡಕರಿಸುವವೋಲ್
ಬೆಸಸು ಬೆಸಸೆಂದು ಕರಮ
ರ್ವಿಸಿ ಸನ್ನಿದವಾಯ್ತು ವಿದ್ಯೆ ರಾವಣನಿದಿರೊಳ್
ರಾವಣನ ಎದುರು ಬಹುರೂಪಿಣಿ ವಿದ್ಯಾದೇವತೆಯು ಪ್ರತ್ಯಕ್ಷವಾದ ಬಗೆಯನ್ನು ಕವಿ ಈ ಪದ್ಯದಲ್ಲಿ ಚಿತ್ರಿಸಿದ್ದಾನೆ. ಇದ್ದಕ್ಕಿದ್ದಂತೆ ಗಗನದಲ್ಲಿ ದರ್ಶನಗೊಳ್ಳುವ ಮುಂಗಾರಿನ ಸಿಡಿಲಿನಂತೆ ವಿದ್ಯಾದೇವತೆಯು ರಾವಣನ ಎದುರಿಗೆ ಪ್ರತ್ಯಕ್ಷವಾಗಿ, ಯಮನ ನಾಲಗೆಯೇ ನುಡಿಯುತ್ತಿದೆಯೇನೋ ಎಂಬಂತೆ, ರಾವಣನನ್ನು ಉದ್ದೇಶಿಸಿ “ಬೆಸಸು ಬೆಸಸು” ಎಂದು ಕೇಳಿತು.
ಶಬ್ದಾರ್ಥ: ಪೊಸಗಾರ-ಮುಂಗಾರು ಮಳೆಯ: ಮಸಕ-ಆವೇಶ ಮತ್ತು ಆರ್ಭಟಗಳು; ಕೃತಾಂತ-ಯಮ; ಕೃತಾಂತಜಿಹ್ವೆ-ಯಮನ ನಾಲಗೆ; ಪೊಡಕರಿಸು-ಚಲಿಸು, ಅಲ್ಲಾಡು, ಸ್ಪುರಿಸು, ಕಾಣು; ಬೆಸಸು-ಆಜ್ಞಾಪಿಸು; ಕರಂ-ಕೈಯನ್ನು; ಅರ್ವಿಸಿ-ವ್ಯಾಪಿಸಿ, ಹರಡಿ, ಚಾಚಿ; ಸನ್ನಿದ-ಸಮೀಪ, ಪ್ರತ್ಯಕ್ಷ; ಸನ್ನಿದವಾಯ್ತು-ಸಮೀಪಿಸಿತು.
ವಚನ: ಅಂತು ಸನ್ನಿಹಿತೆಯಾಗಿ ಚಕ್ರಧರನಪ್ಪ ಲಕ್ಷ್ಮಿ ಧರನುಂ ಚರಮದೇಹ ಧಾರಿಯಪ್ಪ ರಾಮಸ್ವಾಮಿಯು ಮುಟೆಯಲುಟೆದರನುಟೆಯಲೀಯನೆನೆ ರಾವಣನುಟೆದವರವನಗೇವುದೆಂದು ವಿದ್ಯಾದೇವತೆಗೆ ಪೊಡೆವಟ್ಟು ಶಾಂತಿಜಿನ ಭವನಮಂ ಮೂರು ಸೂಟ್ ಬಲಗೊಂಡು ಬರ್ಪನ್ನೆಗಮಂಗದಾದಿಗಳ್ ಪೊಮಟ್ಟು ಪೋಗಿ ತಮ್ಮ ಬೀಡಂ ಪುಗುವುದುಂ
ರಾವಣನ ಎದಿರು ಪ್ರತ್ಯಕ್ಷವಾದ ದೇವತೆಯು ತಾನು ಯುದ್ಧದಲ್ಲಿ “ಚಕ್ರಧಾರಿಯಾದ ಲಕ್ಷ್ಮಣ ಮತ್ತು ಚರಮ ದೇಹಧಾರಿಯಾದ ರಾಮ – ಈ ಇಬ್ಬರನ್ನುಳಿದು ಮಿಕ್ಕೆಲ್ಲರನ್ನೂ ನಾಶಗೊಳಿಸುತ್ತೇನೆ’ ಎಂದು ರಾವಣನಿಗೆ ಹೇಳಿತು. ಆಗ ರಾವಣನು “ಮಿಕ್ಕೆಲ್ಲರ ಸಾವಿನಿಂದ ನನಗೇನು ಪ್ರಯೋಜನ?” ಎಂದು ಪ್ರಶ್ನಿಸಿ, ದೇವತೆಗೆ ನಮಸ್ಕರಿಸಿ, ಶಾಂತಿಜಿನಭವನವನ್ನು ಮೂರುಬಾರಿ ಪ್ರದಕ್ಷಿಣೆ ಮಾಡಿ ಹೊರನಡೆದನು. ಅಷ್ಟರಲ್ಲಿ ಅಂಗದಾದಿಗಳು ಅಲ್ಲಿಂದ ತಮ್ಮ ಬೀಡಿಗೆ ಹಿಂದಿರುಗಿದ್ದರು.
ಶಬ್ದಾರ್ಥ: ಸನ್ನಿಹಿತೆಯಾಗಿ-ಪ್ರತ್ಯಕ್ಷಗೊಂಡು: ಲಕ್ಷ್ಮೀ ಧರ-ಲಕ್ಷ ಣ: ರಾಮಸ್ವಾಮಿ-ರಾಮ: ಚರಮದೇಹಧಾರಿ-ಕೊನೆಯ ಜನ್ಮದಲ್ಲಿರುವವ; ಉಟೆಯಲೀಯೆ-ಬದುಕಲು ಬಿಡೆನು; ಅಳಿವು-ನಾಶ; ಏವುದು-ಏತಕ್ಕೆ? ಏನು ಪ್ರಯೋಜನ?; ಪೊಡೆವಟ್ಟು-ನಮಸ್ಕರಿಸಿ: ಮೂಜು ಸೂಚ್-ಮೂರುಬಾರಿ: ಪೊಣಮಟ್ಟು-ಹೊರಬಂದು; ಬೀಡು-ಪಾಳೆಯ: ಪುಗುವುದುಂ-ಪ್ರವೇಶಿಸಿದರು.
೨) ಇತ್ತ ದಶಾನನಂ ನಿಜವಧೂಜನಮಂ ಕೊಜಚಾಡಿ ಕಾಡಿದು
ದ್ವತ್ತವಿರೋಧಿ ಖೇಚರರನಿಕ್ಕುವ ಬಲ್ಮುಳಿಸಿಂದೆ ಬಂದು ಪೊ
ಯ್ವೆತ್ತಿಭವೈರಿಯಂತೊದು ಕೆಂಗಲೆ ಮೂಡಿದ ಭಂಗಮಾಲೆ ನೀ
ಳ್ದೆತ್ತನೆ ನೋಡಿದಂ ಮಯತನೂಜೆಯ ಬಾಡಿದ ವಕ್ತ್ರಪದ್ಮಮಂ
ರಾವಣನು ಶಾಂತಿಜಿನಭವನದಿಂದ ಹೊರಬರುವಷ್ಟರಲ್ಲಿ ಅವನ ಅಂತಃಪುರದ ಸ್ತ್ರೀಯರನ್ನು ಕಾಡಿಸಿ, ನೋಯಿಸಿ, ಕಿರುಚಾಡಿಸಿ ಅಂಗದಾದಿಗಳು ಅಲ್ಲಿಂದ ಕಾಲ್ತೆಗೆದಿದ್ದರು. ತನ್ನ ಅಂತ:ಪುರದ ಸ್ತ್ರೀಯರನ್ನು ನಿಂದಿಸಿದ ಸೊಕ್ಕಿದವರಾದ ಅಂಗದಾದಿಗಳನ್ನು ಇಕ್ಕುವ ಕೋಪದಿಂದ ಏಟುತಿಂದ ಸಿಂಹದಂತೆ ಬಂದ ರಾವಣನ ಕೈಗೆ ಅಂಗದಾದಿಗಳು ಸಿಗಲಿಲ್ಲ. ಅವನಿಗೆ ಕಾಣಿಸಿದ್ದು ಮುಖಬಾಡಿ ನಿಂತಿರುವ ಮಯತನೂಜೆಯಾದ ತನ್ನ ಪತ್ನಿ ಮಂಡೋದರಿ ಮಾತ್ರ.
ಶಬ್ದಾರ್ಥ: ಆನನ-ಮುಖ; ನಿಜವಧೂಜನ-ಅಂತಃಪುರದ ಸ್ತ್ರೀಯರು; ಕೊಲಿಚಾಡು-ನಿಂದಿಸು, ಕೀಳುಮಾಡು; ಉದ್ಭತ್ತ-ಸೊಕ್ಕಿದ, ಕೊಬ್ಬಿದ; ವಿರೋಧಿಖೇಚರ-ರಾವಣನ ವೈರಿಗಳಾದ ಅಂಗದ, ಹನುಮಂತ ಇತ್ಯಾದಿ ವಾನರರು; ಪೊಯ್ವೆತ್ತ-ಏಟುತಿಂದ; ಇಭವೈರಿ-ಸಿಂಹ; ಮುಳಿಸು-ಕೋಪ; ಕೆಂಗರಿ ಮೂಡಿದ ಭೃಂಗಮಾಲೆ-ಕೋಪದಿಂದ ಕೆಂಪಾದ ರಾವಣನ ಕಣ್ಣುಗಳು; ಮಯತನೂಜೆ-ಮಯಪುತ್ರಿಯಾದ ಮಂಡೋದರಿ: ವಕ್ತ್ರ -ಮುಖ: ವಕ್ತ್ರಪದ್ಮ-ತಾವರೆಯಂತಹ ಮುಖ.
ವಚನ: ಅಂತಾಕೆವೆರಸು ಸಮಸ್ತಾಂತಃಪುರಮಂ ನೋಡಿ ನಿಮಗಿನಿತು ಭಂಗಮಂ ಮಾಡಿದಂಗದಾದಿಗಳಂ ಭೂಭಂಗಮಾತ್ರದೊಳೆ ಸೆಜೆಗೆಯ್ದು ತಂದು ನಿಮ್ಮ ಮುಂದೆ ಬಹು ಪ್ರಕಾರದಿಂದ ಪರಿಭವಿಸಿದಪ್ಪೆನೆಂದು ಸಂತೈಸಿ ಶಾಂತಿಜಿನಭವನದೊಳ್ ಮಹಾಪೂಜೆಯಂ ಮಾಡಿಸಿ ನಿರ್ವತಿ್ರತನಿಯಮನಮೃತಾಹಾರವನಾರೋಗಿಸಿ ತದನಂತರಂ ಬಹುರೂಪಿಣಿ ವಿದ್ಯಾಪ್ರಭಾವಮಂ ಪರೀಕ್ಷಿಸಿ ಪ್ರಮೋದಮುದಿತಹೃದಯನಾಗಿ.
ರಾವಣನು ಅಂಗದಾದಿಗಳ ಉಪಟಳಕ್ಕೆ ಸಿಲುಕಿ ನೊಂದಿರುವ ಮಂಡೋದರಿಯನ್ನೂ, ಇತರ ಅಂತಃಪುರ ಸ್ತ್ರೀಯರನ್ನೂ ನೋಯಿಸಿದ ಅಪಮಾನ ಮಾಡಿದ ಅಂಗದಾದಿಗಳನ್ನು ಸೆರೆಹಿಡಿದು ತರುತ್ತೇನೆಂದು ಸಂತೈಸಿದನು. ಶಾಂತಿಜಿನಭವನದಲ್ಲಿ ಮಹಾಪೂಜೆಯನ್ನು ಮಾಡಿಸಿ, ತಾನು ನಿಯಮಾನುಸಾರ ಅಮೃತಾಹಾರವನ್ನು ಸೇವಿಸಿದನು. ತನಗೆ ವಶವಾಗಿದ್ದ ಬಹುರೂಪಿಣಿ ವಿದ್ಯೆಯ ಪ್ರಭಾವವನ್ನು ಪರೀಕ್ಷೆ ಮಾಡಿ ನೋಡಿಕೊಂಡು, ಹೃದಯದಲ್ಲಿ ಸಂತೋಷವನ್ನು ತುಂಬಿಕೊಂಡು ಬೀಗಿದನು.
ಶಬ್ದಾರ್ಥ: ಭಂಗ-ತೊಂದರೆ; ಭೂಭಂಗ-ಹುಬ್ಬುಗಂಟಿಕ್ಕು; ಬಹುಪ್ರಕಾರದಿಂ-ಹಲವು ಬಗೆಯಿಂದ; ಪರಿಭವಿಸು-ತಿರಸ್ಕರಿಸು, ಅವಮಾನಿಸು, ಸೋಲಿಸು: ನಿರ್ವರ್ತಿತ-ಪೂರೈಸಿದ; ಆರೋಗಿಸು-ಸೇವಿಸು; ಬಹುರೂಪಿಣಿ – ಹಲವು ರೂಪಗಳನ್ನು ತಳೆಯಬಲ್ಲ ಒಂದು ವಿದ್ಯೆ, ವಿದ್ಯಾದೇವತೆ; ವಿದ್ಯಾಪ್ರಭಾವಮಂ-ವಿದ್ಯೆಯ ಶಕ್ತಿಯನ್ನು; ಪ್ರಮೋದಮುದಿತಹೃದಯಿ-ಸಂತೋಷವನ್ನು ಹೃದಯದಲ್ಲಿ ತುಂಬಿಕೊಂಡವನು.
೩) ಸಮಧಿಕರಾರ್ ಜಗತ್ತಯದೊಳಿನ್ನೆನಗೆನ್ನೊಳಿದಿರ್ಚುವನ್ನರಾರ್
ಸಮರದೊಳೆಂದು ತನ್ನ ಭುಜದಂಡಮನೀಕ್ಷಿಸಿ ಜಾನಕೀಮುಖಾ
ಬೃಮನವಲೋಕಿಸಲ್ ಕರಮೆ ಕಾತರನಾಗಿ ವಿಯಚ್ಚರಾಧಿಪಂ
ಪ್ರಮದವನಕ್ಕೆ ಬಂದನರಲಂಬುಗಳಿಲ್ಲದ ಕಾಮನೆಂಬಿನಂ
ಬಹುರೂಪಿಣಿ ವಿದ್ಯೆಯ ಬಲವನ್ನು ಪರೀಕ್ಷಿಸಿದ ರಾವಣನು “ಇನ್ನು ನನಗೆ ಸರಿಸಾಟಿಯಾದವರು ಯಾರಿದ್ದಾರೆ? ಯುದ್ಧದಲ್ಲಿ ನನ್ನನ್ನು ಎದುರಿಸಿ ನಿಲ್ಲಬಲ್ಲವರು ಯಾರಿದ್ದಾರೆ?” ಎಂದು ಹೆಮ್ಮೆಯಿಂದ ಬೀಗುತ್ತ ತನ್ನ ಭುಜದಂಡವನ್ನು ನೋಡಿಕೊಂಡನು. ಆಗ ಅವನಿಗೆ ಸೀತೆಯ ತಾವರೆಯಂತಹ ಮುಖವನ್ನು ಕಾಣಬೇಕೆಂಬ ಕಾತರವುಂಟಾಯಿತು. ಹೂಬಾಣಗಳಿಲ್ಲದ ಕಾಮನಂತಿದ್ದ ರಾವಣನು ಸೀತೆಯನ್ನು ಕಾಣಲು ಪ್ರಮದವನಕ್ಕೆ ಬಂದನು.
ಶಬ್ದಾರ್ಥ: ಸಮಧಿಕರಾರ್-ಸರಿಸಾಟಿ ಯಾರು?; ಜಗತ್ತಯದೊಳ್-ಮೂರು ಲೋಕಗಳಲ್ಲಿ; ಇದಿರ್ಚು-ಎದುರಿಸು; ಸಮರ-ಯುದ್ಧ; ಭುಜದಂಡ-ನೀಳ ಬಾಹುಗಳು: ಜಾನಕಿ-ಸೀತೆ: ಮುಖಾಬ್ಜ-ತಾವರೆಯಂತಹ ಮುಖ: ಅವಲೋಕಿಸು-ಕಾಣಲು, ನೋಡಲು; ಕರಮೆ-ತುಂಬ, ವಿಶೇಷ; ಕಾತರ-ತವಕ; ವಿಯಚ್ಚರಾಧಿಪ-(ವಿಯಚ್ಚರ + ಅಧಿಪ) (ಆಕಾಶಗಾಮಿಗಳ ರಾಜ) ರಾವಣ: ಪ್ರಮದವನ-ಸೀತೆಯನ್ನಿರಿಸಿದ್ದ ಉದ್ಯಾನವನ: ಅರಲಂಬು-ಪುಷ್ಪಬಾಣ: ಕಾಮನೆಂಬಿನಂ-ಮನ್ಮಥನಂತೆ.
ವಚನ: ಅಂತು ಭೋಂಕನೆ ಬರ್ಪ ರಾವಣನ ಗಂಡಗಾಡಿಯಂ ಕೆಲದೊಳಿರ್ದ ಖಚರ ಕಾಂತೆಯರ್ ಸೀತಾದೇವಿಗೆ ತೋರ್ಪುದುಂ
ರಾವಣನು ಇದ್ದಕ್ಕಿದಂತೆ ಪ್ರಮದವನಕ್ಕೆ ಬರುತ್ತಿರುವ ಪೌರುಷದ ಬೆಡಗನ್ನು ಅಲ್ಲಿದ್ದ ರಾಕ್ಷಸ ಸ್ತ್ರೀಯರು ಸೀತಾದೇವಿಗೆ ತೋರಿದರು.
ಶಬ್ದಾರ್ಥ: ಭೋಂಕನೆ-ಒಮ್ಮೆಲೆ, ಕೂಡಲೆ; ಬರ್ಪ-ಬರುತ್ತಿರುವ; ಗಂಡಗಾಡಿ-ಪೌರುಷದ ಬೆಡಗು; ಕೆಲ-ಪಕ್ಕ; ಖಚರ ಕಾಂತೆಯರ್-ರಾಕ್ಷಸ ಪತ್ನಿಯರು ಅಥವಾ ಸೀತೆಯ ಕಾವಲಿಗಿದ್ದ ರಾಕ್ಷಸ ಸ್ತ್ರೀಯರು.
೪) ರಾವಣನ ರೂಪು ಸೀತಾ
ದೇವಿಗೆ ತೃಣಕಲ್ಪಮಾಯ್ತು ಪತಿಭಕ್ತಿಯೊಳಾ
ರೀ ವನಿತೆಯ ತೆರದಿಂ ಸ
ದ್ಭಾವಮನೊಳಕೊಂಡ ಪುಣ್ಯವತಿಯರ್ ಸತಿಯರ್
ರಾವಣನ ರೂಪವು ಸೀತೆಯ ಪಾಲಿಗೆ ತೃಣಸಮಾನವೆನಿಸತು. ಆದ್ದರಿಂದ ಕವಿಯು “ಪತಿಭಕ್ತಿಯಲ್ಲಿ ಸೀತೆಗೆ ಸರಿಸಮಾನರಾದ ಸ್ತ್ರೀಯರು ಯಾರಿದ್ದಾರೆ? ಅವಳಂತೆ ಸದ್ಭಾವಗಳನ್ನು ಒಳಗೊಂಡಿರುವ ಪುಣ್ಯವತಿಯರಾದ ಸತಿಯರು ಯಾರಿದ್ದಾರೆ?” ಎಂದು ರಾವಣನ ರೂಪವನ್ನು ತೃಣವಾಗಿ ಕಂಡ ಸೀತೆಯನ್ನು ಹೊಗಳಿರುವನು.
ಶಬ್ದಾರ್ಥ: ತೃಣಕಲ್ಪ-ಹುಲ್ಲಿಗೆ ಸಮಾನ: ಸದ್ಭಾವ-ಒಳ್ಳೆಯ ಭಾವನೆ, ಅಭಿಪ್ರಾಯ: ಒಳಕೊಂಡಪುಣ್ಯವತಿ-ಸೀತೆ.
೫) ಏನಂ ಕೇಳಪೆನೋ ರಘು
ಸೂನುವ ಲಕ್ಷ್ಮಣನ ಪೊಲ್ಲವಾರ್ತೆಯನಿನ್ನೆಂ
ದಾ ನಳಿನಾನನೆ ಬರ್ಪದ
ಶಾನನನಂ ಕಂಡು ತಾಳಿದಳ್ ತಲ್ಲಮಂ
ರಾವಣನು ಬರತ್ತಿರುವುದನ್ನು ಕಂಡು ಸೀತಾದೇವಿಯು “ರಾಮ-ಲಕ್ಷ್ಮಣರಿಗೆ ಸಂಬಂಧಿಸಿದ ಯಾವ ಕೆಟ್ಟ ವಾರ್ತೆ ಯನ್ನು ಇವನಿಂದ ತಾನು ಕೇಳಬೇಕಾಗಿದೆಯೋ” ಎಂದು, ತಾವರೆಯಂತಹ ಮುಖವುಳ್ಳ ಆಕೆ ದಶಾನನ ಆಗಮನದಿಂದ ತಲ್ಲಣಗೊಂಡಳು. ಪತಿ-ಮೈದುನರ ಕ್ಷೇಮಕ್ಕಾಗಿ ಕಾತರಿಸುವ ಸೀತೆಯ ಮನೋಭಾವ ಇಲ್ಲಿ ವ್ಯಕ್ತವಾಗಿದೆ.
ಶಬ್ದಾರ್ಥ: ಪೊಲ್ಲವಾರ್ತೆ-ಕೆಟ್ಟಸುದ್ದಿ: ನಳಿನಾನನೆ(ನಳಿನ+ಆನನೆ)-ತಾವರೆಯಂತಹ ಮುಖವುಳ್ಳವಳು, ಸೀತೆ; ತಲ್ಲಲಿಮಂ – ತಲ್ಲಣವನ್ನು.
ವಚನ: ಅಂತುತಲ್ಲಸುತಿರ್ದಮಾನಿನಿಯನೆಯ್ದೆಂದು ದಶಾನನನಿಂತೆಂದಂ ಬಹುರೂಪಿಣೀವಿದ್ಯೆ ಸಾಧ್ಯಮಾದುದಿನ್ನ ಸಾಧ್ಯಮಪ್ಪ ಮಡುವಕ್ಕಮಿಲ್ಲ ನಿನ್ನ ನಚ್ಚಿನ ರಾಮನ ದೆಸೆಯಂ ಬಿಟ್ಟೆನಗೊಡಂಬಟ್ಟು ಸಾಮ್ರಾಜ್ಯಸುಖಮನನುಭವಿಸೆನೆ ಸೀತೆ ವಿಹ್ವಲೀಭೂತಚಿತ್ತೆಯಾಗಿ
ತಲ್ಲಣಗೊಂಡಿರುವ ಸೀತೆಯನ್ನು ಸಮೀಪಿಸಿದ ರಾವಣನು “ನಾನು ಬಹುರೂಪಿಣಿ ವಿದ್ಯೆಯನ್ನು ಸಾಧಿಸಿಕೊಂಡಿದ್ದೇನೆ. ಈಗ ನನಗೆ ಅಸಾಧ್ಯವಾದ ಪ್ರತಿಪಕ್ಷ ಯಾವುದೂ ಇಲ್ಲ. ಹಾಗಾಗಿ ನೀನು ರಾಮನ ಗೊಡವೆ ಬಿಟ್ಟು. ನನ್ನನ್ನು ಒಪ್ಪಿಕೊಂಡು ಸಾಮ್ರಾಜ್ಯ ಸುಖವನ್ನು ಅನುಭವಿಸು” ಎಂದು ಸೊಕ್ಕಿನಿಂದ ನುಡಿದನು. ಇದರಿಂದ ಸೀತೆಯ ಮನದಲ್ಲಿ ವ್ಯಾಕುಲ ತುಂಬಿತು.
ಶಬ್ದಾರ್ಥ: ಮಾನಿನಿ-ಹೆಣ್ಣು, ಸೀತೆ; ಎಯ್ದೆವಂದು-ಸಮೀಪಿಸಿ; ಮನುವಕ್ಕೆ-ಪ್ರತಿಪಕ್ಷ; ಒಡಂಬಟ್ಟು-ಒಪ್ಪಿಕೊಂಡು; ವಿಶ್ವಲ-ದುಃಖ; ಚಿತ್ತ-ಮನಸ್ಸು.
೬) ಕರುಣಿಸುವೊಡೆನಗೆ ದಶಕಂ
ಧರ ಧುರದೊಳ್ ರಘುತನೂಜನಾಯು:ಪ್ರಾಣಂ
ಬರೆಗಂ ಬಾರದಿರೆನುತುಂ
ಧರಿತ್ರಿಯೊಳ್ ಮೈಯನೊಕ್ಕು ಮೂರ್ಛಿಗೆ ಸಂದಳ್
ಸೀತೆಯು ರಾವಣನನ್ನು ಉದ್ದೇಶಿಸಿ “ನನ್ನ ಮೇಲೆ ಕರುಣೆ ತೋರಿಸುವೆಯಾದರೆ, ಎಲೈ ರಾವಣನೇ, ಯುದ್ಧದಲ್ಲಿ ರಘುತನೂಜನ ಆಯಸ್ಸು ಪ್ರಾಣದವರೆಗೂ ಬರಬೇಡ” ಎಂದು ಹೇಳುತ್ತಲೇ ಮೂರ್ಛಿಗೊಂಡು ಭೂಮಿಯ ಮೇಲೆ ಬಿದ್ದಳು.
ಶಬ್ದಾರ್ಥ: ಧುರ-ಯುದ್ಧ; ಆಯುಃಪ್ರಾಣಂ-ಆಯುಷ್ಕ ಮತ್ತು ಪ್ರಾಣ: ಧರಿತ್ರಿ-ಭೂಮಿ: ಮೈಯನೊಕ್ಕು-ಮೈ ಚೆಲ್ಲಿ.
೭) ಜಾನಕಿ ಮೂರ್ಛಿತೆಯಾಗೆ ದ
ಶಾನನನುಕಂಪೆ ಪುಟ್ಟಿ ಕರುಣಿಸಿ ತನ್ನಂ
ತಾನೆ ಪಡೆದುಟೆದು ಕರ್ಮಾ
ಧೀನಸಮುತ್ಪನ್ನದುರಘದುಷ್ಪರಿಣತಿಯಂ
ಸೀತೆಯ ಮೂರ್ಛಿತಳಾಗಿ ಧರೆಗುರುಳಿದನ್ನು ಕಂಡ ರಾವಣನಿಗೆ ಅವಳಲ್ಲಿ ಅಪಾರವಾದ ಕರುಣೆ ಮತ್ತು ಅನುಕಂಪ ಭಾವಗಳು ಉದಯಿಸಿದವು. ಅವನು ತನ್ನ ಕರ್ಮಾಧೀನದ ಫಲವಾಗಿ ಇಂತಹ ಪಾಪದ ಕೆಲಸವನ್ನು ತಾನು ಮಾಡಬೇಕಾಯಿತೆಂದು ತನ್ನನ್ನು ತಾನೇ ಹಳಿದುಕೊಂಡನು.
ಶಬ್ದಾರ್ಥ: ಅನುಕಂಪೆ-ಕರುಣೆ: ಕರ್ಮಾಧೀನ ಸಮುತ್ಪನ್ನ-ಕರ್ಮವಶದಿಂದ ಉತ್ಪನ್ನವಾಗುವ; ದುರಘ-ಕೆಟ್ಟಪಾಪ.
೮) ಕದಡಿದ ಸಲಿಲಂ ತಿಳಿವಂ
ದದೆ ತನ್ನಿಂ ತಾನೆ ತಿಳಿದ ದಶವದನಂಗಾ
ದುದು ವೈರಾಗ್ಯಂ ಸೀತೆಯೊ
ಳುದಾತ್ತನೊಳ್ ಪುಟ್ಟದಲ್ಲೆ ನೀಲೀರಾಗಂ
ಸೀತೆಯ ವಿಚಾರದಲ್ಲಿ ರಾವಣನ ಮನಸ್ಸು ಕದಡಿದ ಕೊಳದಂತಾಗಿತ್ತು. ಅವಳ ಬಗ್ಗೆ ಮೋಹ ದೂರಾಗಿ, ಕರುಣೆ-ಅನುಕಂಪಗಳು ಉದಯಿಸಿದಾಗ ಕದಡಿ ಹೋದ ನೀರು ತನಗೆ ತಾನೇ ತಿಳಿಯಾಗುವಂತೆ ರಾವಣನ ಮನಸ್ಸು ತಿಳಿಗೊಂಡು ಸೀತೆಯ ವಿಚಾರದಲ್ಲಿ ವೈರಾಗ್ಯವು ಉದಯಿಸಿತು. “ಉದಾತ್ತರಾದವರಲ್ಲಿ ಮಾತ್ರವೇ ಸ್ಥಿರಪ್ರೀತಿ ಹೊಮ್ಮುವು ದಲ್ಲವೇ?” ಎಂದು ಪ್ರಶ್ನಿಸುವ ಮೂಲಕ ಕವಿ ಇಲ್ಲಿ ರಾವಣನ ಉದಾತ್ತ ಗುಣವನ್ನು ಸಂಕೇತಿಸಿದ್ದಾನೆ.
ಶಬ್ದಾರ್ಥ: ಕದಡಿದ-ಕಲಕಿಹೋದ; ಸಲಿಲ-ನೀರು; ತಿಳಿವಂದದೆ-ತಿಳಿಯಾಗುವಂತೆ; ಉದಾತ್ತನೊಳ್-ಶ್ರೇಷ್ಠರಾದವರಲ್ಲಿ; ಪುಟ್ಟದಲ್ಲೆ-ಹುಟ್ಟಿದಲ್ಲವೇ?: ನೀಲೀರಾಗಂ-ಹುಸಿ ಪ್ರೀತಿ ಅಥವಾ ಭಾವ (ನೀಲಿಬಣ್ಣದ ಆಕಾಶದಷ್ಟು ವಿಶಾಲವಾದ ಮನಸ್ಸು).
೯) ಪತ್ತುವಿಡದಿರ್ದನೇ ರವಿ
ಪತ್ತಿದ ಸಂಧ್ಯಾನುರಾಗಮಂ ಮನದಳಿಪಿಂ
ದೆತ್ತಾನುಂ ಪೊಲ್ಲೆನಿಪುದ
ನುತ್ತಮನಾಚರಿಸಿ ಪತ್ತುವಿಡದಿರ್ದಪನೇ
ರಾವಣನು ತನ್ನ ಸೀತೆಯ ವ್ಯಾಮೋಹದಿಂದ ಬಿಡಿಸಿಕೊಂಡ ಬಗೆಯನ್ನು ಕವಿಯು ಇಲ್ಲಿ ವಿವರಿಸುತ್ತಿದ್ದಾನೆ. “ಸೂರ್ಯನು ತನಗೆ ಹತ್ತಿದ ಸಂಧ್ಯಾರಾಗದಿಂದ ಬಿಡಿಸಿಕೊಳ್ಳುವುದಿಲ್ಲವೇ? ಹಾಗೆ, ರಾವಣನಲ್ಲಿ ಮೂಡಿದ ಕಾರುಣ್ಯರಸವು ಸೀತೆಯ ಬಗೆಗಿನ ವ್ಯಾಮೋಹವನ್ನು ತೊಳೆದುಬಿಟ್ಟಿತು” ಎಂದು ಕವಿಯು ವಿವರಿಸಿದ್ದಾನೆ. ರಾವಣನು ಒಳ್ಳೆಯ ನಡತೆಯಿಂದ ತನಗೆ ಮೆತ್ತಿಕೊಂಡ ಅಪಕೀರ್ತಿಯನ್ನು ತೊಡೆದುಕೊಳ್ಳುವನೆಂಬುದು ಇಲ್ಲಿಯ ಭಾವ.
ಶಬ್ದಾರ್ಥ: ಪತ್ತುವಿಡು-ಕಳಚಿಕೊಳ್ಳು: ಪತ್ತು-ಅಂಚು, ಸೇರು: ಆಳಿಪು-ಮೋಹಕ್ಕೆ ಸಿಲುಕು: ಪೊಲ್ಲೆನಿಪುದು-ಕೆಟ್ಟಿದ್ದೆನಿಸುವುದು; ಉತ್ತಮನಾಚರಿಸಿ-ಒಳ್ಳೆಯದನ್ನು ಆಚರಿಸಿ.
ವಚನ: ಅಂತು ಮನದೊಳೊಗೆದ ಕಾರುಣ್ಯರಸಮೆ ಸೀತೆಯೊಳಾದನುರಕ್ತತೆಯಂ ಕರ್ಚಿಕಳೆವುದುಂ ಸ್ವಭಾವಪರಿಣತಿಯೊಳ್ ನಿಂದು ಸ್ವಕೀಯಾಪ್ತಪುರುಷಪರಿಷಜ್ಜನಕ್ಕಿಂತೆಂದಂ
ಹೀಗೆ ರಾವಣನ ಮನದಲ್ಲಿ ಮೂಡಿದ ಕಾರುಣ್ಯರಸವು ಸೀತೆಯ ಬಗೆಗಿನ ಅನುರಕ್ತಿಯನ್ನು ತೊಡೆದುಹಾಕಲು, ಅವನು ತನ್ನ ಮುನ್ನಿನ ಸ್ವಭಾವದಂತೆಯೇ ತನ್ನ ಆಪ್ತವರ್ಗಕ್ಕೆ ಹೀಗೆಂದು ನುಡಿದನು.
ಶಬ್ದಾರ್ಥ: ಅನುರಕ್ತಿ-ಪ್ರೀತಿ: ಕರ್ಚಿಕಳೆ-ತೊಳೆದು ಹಾಕು; ಸ್ವಕೀಯ-ತನ್ನ; ಪರಿಷಜ್ಜನ-ಆಪ್ತವರ್ಗದವರಿಗೆ.
೧೦) ಗುಣಪರಿಪಾಲನಾರ್ಥಮೆನಗಂ ಬಗೆದೋಜ್‌ದಳಿಲ್ಲ ದಿವ್ಯಭೂ
ಷಣವಸನಾಂಗರಾಗಮುಮನೊಲ್ಲದೆ ಖೇಚರರಾಜ್ಯಲಕ್ಷ್ಮಿಯಂ
ತೃಣಸಮನಾಗೆ ಭಾವಿಸಿದಳೇ ಸತಿಯುಂ ಮೊದಲಾಗೆ ಪೌರುಷ
ಪ್ರಣಯಿಯನಿಂತಪೇಕ್ಷಿಸುವನೇ ಗುಣಹಾನಿಯನೆನ್ನ ಪಾಪದಿಂ
ರಾವಣನು ತನ್ನ ಆಪ್ತ ವರ್ಗದವರೊಂದಿಗೆ ಆಡುವ ಮಾತುಗಳು ಈ ಪದ್ಯದಲ್ಲಿವೆ. “ಸೀತೆಯು ತನ್ನ ನಿಶ್ಚಲಗುಣದಿಂದ ನನ್ನ ಬಗೆಗೆ ಗಮನಹರಿಸಲಿಲ್ಲ. ನನ್ನ ದಿವ್ಯಭೂಷಣ ವಸನಗಳನ್ನಾಗಲೀ, ಖೇಚರ ರಾಜ್ಯವನ್ನಾಗಲೀ ಆಕೆ ತೃಣಸಮಾನವಾಗಿ ಕಂಡಳು. ಹೀಗಾಗಿ ಪೌರುಷ ಪ್ರಣಯಿಯಂತೆ ನಾನು ಪಾಪಗೈದು ಇವಳನ್ನು ಬಯಸುತ್ತೇನೆಯೇ?” ಎಂದು ರಾವಣನು ಆಡುವ ಮಾತುಗಳಲ್ಲಿ ಅವನ ಮನಃಪರಿವರ್ತನೆಯ ಛಾಯೆಯನ್ನು ಗುರುತಿಸಬಹುದು.
ಶಬ್ದಾರ್ಥ: ದಿವ್ಯಭೂಷಣವಸನಾಂಗರಾಗಮುಮನ್-ಶ್ರೇಷ್ಠವಾದ ಆಭರಣ, ವಸ್ತ್ರ, ದೇಹ ಪ್ರೀತಿ (ಮೈಕಾಂತಿ)ಗಳನ್ನು; ಒಲ್ಲದೆ-ಬಯಸದೆ; ಅಪೇಕ್ಷಿಸುವೆನೇ-ಬಯಸುವೆನೇ?
೧೧) ಇವರಂ ಪ್ರಾಣಪ್ರಿಯರಂ
ನೆವಮಿಲ್ಲದೆ ಕರ್ಮವಶಮೆ ನೆವಮೆನೆ ಕಂದ
ರ್ಪವಿಮೋಹದಿಂದಗಲ್ಚಿದೆ
ನವಿವೇಕಿಯೆನೆನ್ನ ಕುಲದ ಪೆಂಪಟೆವನೆಗಂ
ಸೀತಾಪಹರಣಗೈದುದಕ್ಕೆ ರಾವಣನಿಗೆ ಪಶ್ಚಾತ್ತಾಪವಾಗಿರುವುದನ್ನು ಕವಿ ಈ ಪದ್ಯದಲ್ಲಿ ವಿವರಿಸಿದ್ದಾನೆ.
”ಪ್ರಾಣಪ್ರಿಯರಾದ ರಾಮಸೀತೆಯರನ್ನು ಕರ್ಮವಶದ ನೆವದಿಂದ ಕಾಮಮೋಹಿತನಾದ ತಾನು ಅಗಲಿಸಿದೆ; ಅವಿವೇಕಿಯಾದ ತನ್ನಿಂದ ಕುಲದ ಹಿರಿಮೆ ಅಳಿಯಿತು” ಎಂದು ರಾವಣನು ಪರಿತಾಪಗೊಂಡಿರುವುದನ್ನು ಕವಿ ಇಲ್ಲಿ ವಿವರಿಸಿರುವನು.
ಶಬ್ದಾರ್ಥ: ನೆವ-ನೆಪ: ಕಂದರ್ಪವಿಮೋಹ-ಕಾಮಾಸಕ್ತಿ; ಅಗಲ್ಚಿದೆ – ಅಗಲುವಂತೆ ಮಾಡಿದೆ; ಪೆಂಪು-ಹಿರಿಮೆ.
೧೨) ರಾಮನಿನಗಲ್ಚಿ ತಂದಾ
ನೀ ಮಾನಿನಿಗಿನಿತು ದುಃಖಮಂ ಪುಟ್ಟಿಸಿದೆಂ
ಕಾಮವ್ಯಾಮೋಹದಿನಾ
ಶಾಮುಖಮಂ ಪುದಿಯೆ ದುರ್ಯಶಃಪಟಹರವಂ
ಈ ಪದ್ಯದಲ್ಲಿಯೂ ಕೂಡ ರಾವಣನ ಪಶ್ಚಾತ್ತಾಪದ ನುಡಿಗಳು ಮುಂದುವರೆದಿವೆ. ರಾವಣನು “ಕಾಮಪೀಡಿತನಾಗಿ ತಾನು ಈ ಮಾನಿನಿಯನ್ನು ರಾಮನಿಂದ ಬೇರ್ಪಡಿಸಿ ತಂದು ದುಃಖಕ್ಕೀಡುಮಾಡಿದೆ. ಇದರಿಂದಾಗಿ ಕೆಟ್ಟ ಗೆಲುವಿನ ಶಬ್ದವು ಎಲ್ಲೆಡೆ ತುಂಬಿಕೊಂಡಿತಲ್ಲ” ಎಂದು ಪಶ್ಚಾತ್ತಾಪದಿಂದ ಬೇಯುವುದನ್ನು ಇಲ್ಲಿ ಗಮನಿಸಬಹುದು.
ಶಬ್ದಾರ್ಥ: ಅಗಲ್ಚಿ-ಬೇರ್ಪಡಿಸಿ; ಮಾನಿನಿ-ಹೆಣ್ಣು, ಸೀತೆ; ಆಶಾ-ಆಸೆ, ದುರ್-ಕೆಟ್ಟ; ಪಟಹ-ಭೇರಿ; ರವ-ಶಬ್ದ.
೧೩) ಎನಗೆ ವಿಭೀಷಣಂ ಹಿತಮನಾದರದಿಂದಂ ಪೇಟೆಕೇಳದಾ
ತನನವಿನೀತನೆಂ ಗಜಜ್ ಗರ್ಜಿಸಿ ಬೈದನುಜಾತನಂ ವಿನೀ
ತನನಜಯಟ್ಟಿ ದುರ್ವ್ಯಸನಿಯಂ ಕಳೆದೆಂ ವ್ಯಸನಾಭಿಭೂತನಾ
ವನುಮನುರಾಗವೇಗದೆ ಹಿತಾಹಿತಚಿಂತೆಯನೇಕೆ ಮಾಡುವಂ
“ವಿಭೀಷಣನು ತನಗೆ ಹಿತವನ್ನೇ ನುಡಿದರೂ ನಾನು ಅದಕ್ಕೆ ಕಿವಿಗೊಡಲಿಲ್ಲ. ಬದಲಿಗೆ ಒಡಹುಟ್ಟಿದವನೂ ವಿನಯವಂತನೂ ಆದ ಅವನನ್ನು ಗದರಿ ದೂರ ಮಾಡಿಕೊಂಡೆನು. ಎಂಥ ದುರ್ವ್ಯಸನಿ ತಾನು” ಎಂಬ ಪಾಪಪ್ರಜ್ಞೆ ರಾವಣನನ್ನು ಆವರಿಸಿತು. ವ್ಯಸನಿಯಾದವನು ತನ್ನ ಮೂಗಿನ ನೇರಕ್ಕೆ ಚಿಂತಿಸುವನಲ್ಲದೆ ಇತರರು ಹೇಳುವ ಹಿತ-ಅಹಿತಗಳನ್ನು ಚಿಂತಿಸುವುದಿಲ್ಲ. ತಾನೂ ಕೂಡ ಇದೇ ರೀತಿ ನಡೆದುಕೊಂಡೆನಲ್ಲಾ ಎಂದು ರಾವಣನು ಚಿಂತಿಸಿದನು.
ಶಬ್ದಾರ್ಥ: ಗಜಜ್-ಬೆದರಿಸು: ಗರ್ಜಿಸಿ-ಹೆದರಿಸಿ; ಅನುಜಾತ-ಒಡಹುಟ್ಟಿದವನು; ಅವನೀತ-ಸೌಜನ್ಯವಂತ, ವಿಧೇಯಭಾವದ; ಅಜೇಯಟ್ಟು-ಹೊಡೆದೋಡಿಸು: ದುರ್ವ್ಯಸನಿ-ಕೆಟ್ಟ ಚಟಗಾರ; ಅಹಿತ-ಕೆಟ್ಟದ್ದು.
೧೪) ಜಸದವಂ ಪರಾಭವದ ಪತ್ತುಗೆಯಂ ದೊರೆವೆತ್ತ ತಮ್ಮ ಮಾ
ನಸಿಕೆಯ ಕೇಡನುನ್ನತಿಯ ಬನ್ನಮನನ್ಯಭವಾನುಬದ್ದಮ
ಪ್ಪಸುಗತಿಯಂ ಸುಹೃಜ್ಜನದ ಬೇವಸಮಂ ಜನತಾಪವಾದಮಂ
ಬೆಸನಿಗಳಾರುಮೆತ್ತಲವರ್ ವಿಷಯಾಸವಮತ್ತಚೇತಸರ್
ರಾವಣನ ಆತ್ಮವಿಮರ್ಶೆ ಈ ಪದ್ಯದಲ್ಲಿ ಚಿತ್ರಿತಗೊಂಡಿದೆ. ಕಾಮಾಸಕ್ತನಾದವನಿಗೆ ಯಾವುದರ ಪರಿವೆಯೂ ಇರದು. “ಕೀರ್ತಿಗೆ ಮಸಿ ಹತ್ತುವುದಾಗಲೀ, ಸೋಲುಂಟಾಗುವುದಾಗಲೀ, ಮನಸ್ಸಿನ ಕೇಡಾಗಲಿ, ಔನ್ನತ್ಯದ ನಾಶವಾಗಲೀ, ದೂರಸರಿದ ಸುಗತಿಯಾಗಲೀ, ಗೆಳೆಯರಿಗಾದ ಬೇಸರವಾಗಲೀ, ಜನರಿಂದ ಬರುವ ಅಪವಾದದ ಚಿಂತೆಯಾಗಲಿ ವ್ಯಸನಿಯಾದವನು – ವಿಷಯ ಸುಖದಲ್ಲಿ ಮೈಮರೆತಿರುವವನು ಮಾಡುವುದೇ ಇಲ್ಲ” ಎಂದು ರಾವಣನು ಚಿಂತಿಸಿದನು.
ಶಬ್ದಾರ್ಥ: ಜಸ-ಯಶಸ್ಸು; ಪರಾಭವ-ಸೋಲು: ಪತ್ತುಗೆ-ಸಂಪರ್ಕ: ಮಾನಸಿಕೆ-ಮನಃಸ್ಥಿತಿ; ಬನ್ನ-ಭಂಗ; ಬದ್ಧಮಪ್ಪ ಸುಗತಿ-ಸದ್ಗತಿಗೆ ಬದ್ಧವಾದ ನಡೆ; ಸುಹೃಜ್ಜನ-ಸಹೃದಯ ಜನ; ಬೇವಸಮಂ-ಚಿಂತೆ, ದುಃಖ: ಬೆಸನಿ-ಕೆಟ್ಟ ಚಟಗಳನ್ನುಳ್ಳವ; ವಿಷಯಾಸವ-ಇಂದ್ರಿಯಮೋಹವೆಂಬ ಮದ್ಯ; ಮತ್ತಸಚೇತಸರ್-ಮತ್ತರಾಗಿರುವ ಮನಸ್ಸಿನವರು.
ವಚನ: ಎಂದುದ್ವೇಗಪರನಾಗಿ ನುಡಿದಾತ್ಮಗತದೊಳಿಂತೆಂದಂ
ಈ ಮೇಲಿನ ಪದ್ಯದಲ್ಲಿ ವಿವರಿಸಿರುವ ಸಂಗತಿಗಳನ್ನು ಉದ್ವೇಗಪರನಾಗಿ ಚಿಂತಿಸಿದ ರಾವಣನು ತನ್ನ ಮನದಲ್ಲಿ ಈ ಮುಂದಿನಂತೆ ಹೇಳಿಕೊಂಡನು.
ಶಬ್ದಾರ್ಥ: ಉದ್ವೇಗಪರ-ಆವೇಶದಿಂದ, ತಳಮಳದಿಂದ; ಆತ್ಮಗತದೊಳೆ-ಮನಸ್ಸಿನಲ್ಲೇ, ತನಗೆ ತಾನೆ ಹೇಳಿಕೊಳ್ಳುವುದು.
೧೫) ಇರದುಯ್ದೀಗಳೆ ಕೊಟ್ಟೊಡೆನ್ನ ಕಡುಪುಂ ಕಟ್ಟಾಯಮುಂ ಬೀರಮುಂ
ಬಿರುದುಂ ಬೀಸರಮಕ್ಕುಮೋಸರಿಸಿದಂತಾಗಿರ್ಕುಮಂತಾಗದಂ
ತಿರೆ ದೋರ್ಗರ್ವಮನಿರ್ವಲಂ ಪೊಗಳ್ವೆನಂ ಸೌಮಿತ್ರಿಯಂ ರಾಮನಂ
ವಿರಥರ್ಮಾಡಿ ರಣಾಗ್ರದೊಳ್ ಪಿಡಿದು ತಂದಾಂ ಕೊಟ್ಟಪೆಂ ಸೀತೆಯಂ
ಸೀತೆಯನ್ನು ಶ್ರೀರಾಮನಿಗೊಪ್ಪಿಸಬೇಕೆಂಬ ರಾವಣನ ನಿರ್ಧಾರವನ್ನು ಈ ಪದ್ಯ ವಿವರಿಸುತ್ತದೆ. ಆದರೆ ಆ ಕ್ಷಣವೇ ಅವಳನೊಪ್ಪಿಸುವ ಉದ್ದೇಶ ಅವನದಲ್ಲ. ಬದಲಿಗೆ ಆತ “ಈಗಲೇ ಸೀತೆಯನ್ನು ರಾಮನಿಗೊಪ್ಪಿಸಿಬಿಟ್ಟರೆ, ಇದುವರೆಗೆ ತಾನು ತೋರಿದ ಪರಾಕ್ರಮ ಮತ್ತು ಅಧಿಕ ಸಾಮರ್ಥ್ಯ, ವೀರ ಬಿರುದುಗಳು ವ್ಯರ್ಥಗೊಳ್ಳುತ್ತವೆ. ಹಾಗಾಗಬಾರದು. ಆದ್ದರಿಂದ ಎರಡೂ ಕಡೆಯ ಸೈನ್ನ ತನ್ನ ಬಾಹುಬಲದ ಪರಾಕ್ರಮವನ್ನು ಕಂಡು ಹೊಗಳುವಂತೆ ಯುದ್ಧಮಾಡಿ, ರಾಮ-ಲಕ್ಷ್ಮಣರನ್ನು ವಿರಥರನ್ನಾಗಿಸಿ ಸೆರೆಹಿಡಿದು ತಂದು, ಆನಂತರ ರಾಮನಿಗೆ ಸೀತೆಯನ್ನು ಒಪ್ಪಿಸುವೆ” ಎಂದು ಯೋಚಿಸುತ್ತಾನೆ.
ಶಬ್ದಾರ್ಥ: ಉಯ್ದು-ಒಯ್ದು; ಕಡುಪುಂ-ಪರಾಕ್ರಮ; ಕಟ್ಟಾಯ-ಅಧಿಕ ಸಾಮರ್ಥ್ಯ: ಬೀಸರ-ವೃರ್ಥ; ಓಸರಿಸು-ಓರೆ ಯಾಗಿಸು, ಬದಿಗೆ ಸರಿಸು; ದೋರ್ಗರ್ವ-ಬಾಹುಬಲದ ಹಮ್ಮು: ಇರ್ವಲಂ-ಎರಡೂ ಸೈನ್ಯ; ವಿರಥರ್-ರಥವನ್ನು ಕಳೆದುಕೊಂಡವರು.
ವಚನ: ಎಂದು ನಿಶ್ಚಯಿಸಿ ನಿಜನಿವಾಸಕ್ಕೆ ವಂದಂ.
ಹೀಗೆಂದು ನಿಶ್ಚಯಿಸಿದ ರಾವಣನು ತನ್ನ ಅರಮನೆಗೆ ಹಿಂದಿರುಗಿದನು.
ಟಿಪ್ಪಣಿಗಳು:
೧. ಬಹುರೂಪಿಣಿ ವಿದ್ಯೆ:
ರಾವಣನು ಸಾಧಿಸಿ, ಒಲಿಸಿಕೊಂಡ ವಿದ್ಯೆಯಿದು. ಬಯಸಿದ ರೂಪವನ್ನು ಪಡೆಯಬಹುದಾದ ಒಂದು ಮಾಯಾ ವಿದ್ಯೆ. ಅಧಿದೇವತೆ. ರನ್ನನ ಅಜಿತಪುರಾಣದಲ್ಲಿಯೂ ಇದರ ಉಲ್ಲೇಖವಿದೆ. ಈ ವಿದ್ಯೆಯನ್ನು ಪಡೆದುಕೊಂಡ ರಾವಣನು ಮಾಯಾ ವಿಧಾನದಿಂದ ರಾಮ ಲಕ್ಷ್ಮಣರನ್ನು ವಂಚಿಸಿ ಯುದ್ಧದಲ್ಲಿ ಗೆಲ್ಲುವ ಸಂಚನ್ನು ರೂಪಿಸುತ್ತಾನೆ. ರಾಮ ಲಕ್ಷ್ಮಣರನ್ನು ಕೊಲ್ಲಲು ತನ್ನಿಂದ ಆಗದೆಂದು ಬಹುರೂಪಿಣಿ ತಿಳಿಸಿದರೂ ರಾವಣ ಈ ಸಾಹಸಕ್ಕೆ ಮುಂದಾಗುವುದು ಅವನ ಅಪಕ್ವ ನಿರ್ಧಾರವನ್ನು ಸೂಚಿಸುತ್ತದೆ. ಹಿಂದೆ ರಾವಣನು ಅವಲೋಕಿನಿ ವಿದ್ಯೆಯ ನೆರವು ಪಡೆದು ಸೀತೆಯನ್ನು ಅಪಹರಿಸಿರುತ್ತಾನೆ.
೨. ತ್ರಿಷಷ್ಠಿ ಶಲಾಕಾ ಪುರುಷರು:
ಚತುರ್ವಿಂಶತಿ (ಇಪ್ಪತ್ತನಾಲ್ಕು) ತೀರ್ಥಂಕರರು + ದ್ವಾದಶ ಚಕ್ರವರ್ತಿಗಳು + ಒಂಬತ್ತು ಜನ ಬಲದೇವರು (ವಿಜಯ, ಅಚಲ, ಸುಧರ್ಮ, ಸುಪ್ರಭ, ಸುದರ್ಶನ, ನಂದಿ, ನಂದಿಮಿತ್ರ, ರಾಮ, ಪದ್ಮ) + ಒಂಬತ್ತು ಜನ ವಾಸುದೇವರು (ತ್ರಿಪೃಷ್ಠ, ದ್ವಿಪೃಷ್ಠ, ಸ್ವಯಂಭೂ, ಪುರುಷೋತ್ತಮ, ಪುರುಷಸಿಂಹ, ಪುಂಡರೀಕ, ದತ್ತ, ಲಕ್ಷ್ಮಣ, ಕೃಷ್ಣ) + ಒಂಬತ್ತು ಜನ ಪ್ರತಿ ವಾಸುದೇವರು (ಅಶ್ವಗ್ರೀವ, ತಾರಕ, ಮೇರಕ, ಮಧುಕೈಟಭ, ನಿಶುಂಭ, ಬಲಿ, ಪ್ರಹರಣ, ರಾವಣ, ಜರಾಸಂಧ).
೪. ವಿಭೀಷಣ:
ರಾವಣನ ಕಿರಿಯ ಸಹೋದರ. ರಾವಣನು ಸೀತಾಪಹರಣಗೈದಾಗ ಅದು ತಪ್ಪೆಂದು ಹಿತವಚನವನ್ನು ನುಡಿದವನು. ಆದರೆ ರಾವಣ ಅವನ ಹಿತವಚನಕ್ಕೆ ಕಿವಿಗೊಡದೆ ವಿಭೀಷಣನನ್ನೇ ದೂರಮಾಡಿಕೊಳ್ಳುತ್ತಾನೆ.
ಹೊಂದಿಸಿ ಬರೆಯುವುದಕ್ಕೆ ಬೇಕಾದ ಮಾಹಿತಿ:
- ಕದಡಿದ ಸಲಿಲಂ ತಿಳಿವಂದದೆ – ನಾಗಚಂದ್ರ
- ಕದಡಿದ ಸಲಿಲಂ ತಿಳಿವಂದದೆ – ಪಂಪರಾಮಾಯಣ ಸಂಗ್ರಹ
- ನಾಗಚಂದ್ರ – ಅಭಿನವ ಪಂಪ
- ಮಲ್ಲಿನಾಥ ಪುರಾಣ – ನಾಗಚಂದ್ರ
- ರಾಮಚಂದ್ರಚರಿತ ಪುರಾಣ – ನಾಗಚಂದ್ರ
- ರಾಮಚಂದ್ರಚರಿತ ಪುರಾಣ – ಪಂಪರಾಮಾಯಣ
- ಕದಡಿದ ಸಲಿಲಂ ತಿಳಿವಂದದೆ – ಚಂಪೂ
- ನಾಗಚಂದ್ರ – ಭಾರತೀಕರ್ಣಪೂರ
- ನಾಗಚಂದ್ರ – ಕವಿತಾಮನೋಹರ
- ನಾಗಚಂದ್ರ – ಸಾಹಿತ್ಯ ವಿದ್ಯಾಧರ
- ನಾಗಚಂದ್ರ – ಚತುರಕವಿ
- ನಾಗಚಂದ್ರ – ಜನಸ್ಥಾನರತ್ನ ಪ್ರದೀಪ
- ನಾಗಚಂದ್ರ – ಸೂಕ್ತಿಮುಕ್ತಾವತಂಸ
- ಕೃತಾಂತ – ಯಮ
- ಲಕ್ಷ್ಮೀಧರ – ಲಕ್ಷ್ಮಣ
- ರಾಮಸ್ವಾಮಿ – ರಾಮ
- ಮಯತನೂಜೆ – ಮಂಡೋದರಿ
- ಬಹುರೂಪಿಣಿ – ವಿದ್ಯಾದೇವತೆ
- ಜಾನಕಿ – ಸೀತೆ
- ವಿಯಚ್ಚರಾಧಿಪ – ರಾವಣ
- ಖಚರ ಕಾಂತೆಯರ್ – ರಾಕ್ಷಸ ಪತ್ನಿಯರು/ರಾಕ್ಷಸ ಸ್ತ್ರೀಯರು
- ಒಳಕೊಂಡಪುಣ್ಯವತಿ – ಸೀತೆ
- ನಳಿನಾನನೆ – ಸೀತೆ
- ಖಚರ ಚಕ್ರವರ್ತಿ – ರಾವಣ
- ಪೌರುಷಪ್ರಣಯಿ – ರಾವಣ
- ನಾಗಚಂದ್ರ – ಚಂಪೂ ಕವಿ
- ವಿಭೀಷಣ – ರಾವಣನ ತಮ್ಮ
- ಪ್ರಾಣಪ್ರಿಯರು – ರಾಮ-ಸೀತೆಯರು