2nd Puc Kannadavannu Kattuva Kelasa Kannada Notes Question and Answer Summery Guide Extract Mcq Pdf Download in Kannada Medium karnataka State syllabus 2025, ದ್ವಿತೀಯ ಪಿಯುಸಿ ಕನ್ನಡವನ್ನು ಕಟ್ಟುವ ಕೆಲಸ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, kannadavannu kattuva kelasa kannada notes 2nd puc, 2nd puc kannada notes, 2nd puc kannada notes kseeb solutions 2nd puc kannada 4th lesson notes 2nd puc kannada notes chapter 4 kannadavannu kattuva kelasa 2nd puc kannada notes with grammar 2nd puc kannada notes question and answer
೪. ಕನ್ನಡವನ್ನು ಕಟ್ಟುವ ಕೆಲಸ
– ಹಾ. ಮಾ. ನಾಯಕ

ಲೇಖಕರ ಪರಿಚಯ:
ಡಾ. ಹಾರೋಗದ್ದೆ ಮಾನಪ್ಪ ನಾಯಕರು ‘ಹಾಮಾನಾ’ ಎಂದೇ ಪರಿಚಿತರು (1930-2001). ಇವರ ಊರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆ. ಮೈಸೂರು ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಗುಲ್ಬರ್ಗಾ ವಿ.ವಿ.ಯ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ‘ಬಾಳ್ನೋಟಗಳು’, ‘ಸೂಲಂಗಿ’, ‘ಸಂಪ್ರತಿ’, ‘ಸಂಪಣ’, ‘ಸಲ್ಲಾಪ’, ‘ಸಂಭ್ರಮ’, ‘ನಮ್ಮ ಮನೆಯ ದೀಪ’ ಮುಂತಾದ ನೂರಾರು ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಅಂಕಣ ಬರಹಕ್ಕಾಗಿ ದೇಶದಲ್ಲೇ ಮೊದಲಬಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ಹಿರಿಮೆ ಇವರದು. ಬೀದರ್‌ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯಿಂದ ಮಾಡಿದ ಭಾಷಣವನ್ನು ಹಾ.ಮಾ.ನಾ. ‘ಕನ್ನಡವನ್ನು ಕಟ್ಟುವ ಕೆಲಸ’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದರು. ಈ ಕೃತಿಯಿಂದ ಪ್ರಸ್ತುತ ಲೇಖನ ಭಾಗವನ್ನು ಸಂಗ್ರಹಿಸಲಾಗಿದೆ.
ಆಕರ: ‘ಕನ್ನಡವನ್ನು ಕಟ್ಟುವ ಕೆಲಸ’.
(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು
೧. ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲಿಯೂ ನೋಡಲಾರಿರಿ.
ಡಾ. ಹಾ.ಮಾ. ನಾಯಕರು ಬರೆದಿರುವ ‘ಕನ್ನಡವನ್ನು ಕಟ್ಟುವ ಕೆಲಸ’ ಎಂಬ ಲೇಖನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಇದು ಎ.ಆರ್. ಕೃಷ್ಣಶಾಸ್ತ್ರಿಗಳು ತಮ್ಮ ಹೈದರಾಬಾದ್ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ನುಡಿಗಳಲ್ಲಿ ಹೇಳಿರುವ ಮಾತಾಗಿದೆ. ಸಂಸ್ಕೃತವು ಇಲ್ಲಿಂದ ಮರೆಯಾದರೆ ಅದು ಇನ್ನೊಂದೆಡೆ ಬಾಳಿ ಬದುಕುತ್ತದೆ. ಆದರೆ ಕನ್ನಡ ಭಾಷೆಯನ್ನು ಇಂಡಿಯ ದೇಶದ ದಕ್ಷಿಣ ಭಾಗದಲ್ಲಿ ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲಿಯೂ ನೋಡಲು ಸಾಧ್ಯವಿಲ್ಲ ವೆಂದು ಕನ್ನಡಿಗರನ್ನು ಎಚ್ಚರಿಸಿರುವ ಕೃಷ್ಣಶಾಸ್ತ್ರಿಗಳು ಕನ್ನಡಿಗರು ಕನ್ನಡವನ್ನು ಅಲಕ್ಷ್ಯ ಮಾಡಿದರೆ, ಮಿಕ್ಕ ಯಾವ ದೇಶದ ಜನರೂ ಅದನ್ನು ಎತ್ತಿಹಿಡಿಯಲಾರರೆಂದಿದ್ದಾರೆ. ಶಾಸ್ತ್ರಿಗಳು ಕನ್ನಡಿಗರ ಜವಾಬ್ದಾರಿಯನ್ನು ಈ ಮೇಲಿನ ವಾಕ್ಯದ ಮೂಲಕ ತಿಳಿಸಿಕೊಟ್ಟಿದ್ದಾರೆ.
೨. ಇಂಗ್ಲಿಷ್, ಹಿಂದಿ ಬಾರದವರು ವಿಮಾನ ಪ್ರಯಾಣ ಮಾಡಬಾರದೆ?
ಡಾ. ಹಾ.ಮಾ. ನಾಯಕರು ತಮ್ಮ ‘ಕನ್ನಡವನ್ನು ಕಟ್ಟುವ ಕೆಲಸ’ ಎಂಬ ಲೇಖನದಲ್ಲಿ ಈ ಮೇಲಿನಂತೆ ಪ್ರಶ್ನಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ಸೂಚನೆಗಳಿರದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಲೇಖಕರು ಕೇಂದ್ರ ಸರ್ಕಾರವು ಕನ್ನಡಕ್ಕೆ ತೋರಿಸಿರುವ ಮರ್ಯಾದೆಯಿದೆಂದು ವ್ಯಂಗ್ಯವಾಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ಸೂಚನೆಗಳಿಲ್ಲದಿದ್ದರೆ, ಇನ್ನು ಯಾವ ಕಡೆ ಇರುವುದು ಸಾಧ್ಯ? ಎಂದು ಪ್ರಶ್ನಿಸಿರುವ ಲೇಖಕರು ವಿಮಾನ ನಿಲ್ದಾಣದ ಎಲ್ಲ ಪ್ರಕಟಣೆಗಳೂ ಪ್ರಾದೇಶಿಕ ಭಾಷೆಗಳಲ್ಲಿರುವುದು ಆಗತ್ಯವೆಂದಿದ್ದಾರೆ. ಬರೀ ಇಂಗ್ಲಿಷ್-ಹಿಂದಿಗಳಲ್ಲಿ ಮಾತ್ರವೇ ಸೂಚನೆಗಳಿರುವುದಾದರೆ ಇಂಗ್ಲಿಷ್-ಹಿಂದಿ ಬಾರದವರು ಈ ದೇಶದಲ್ಲಿ ವಿಮಾನ ಪ್ರಯಾಣ ಮಾಡಬಾರದೆ? ಎಂದು ಕೇಳಿದ್ದಾರೆ. ಕೇಂದ್ರ ಸರ್ಕಾರವು ಪ್ರಾದೇಶಿಕ ಭಾಷೆಗಳನ್ನು ಗೌರವಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
೩. ನಾವು ಪರದೇಶಿಗಳೆಂಬ ಭಾವನೆ ಬರುತ್ತದೆ.
ಡಾ. ಹಾ.ಮಾ. ನಾಯಕರು ರಚಿಸಿರುವ ‘ಕನ್ನಡವನ್ನು ಕಟ್ಟುವ ಕೆಲಸ’ ಎಂಬ ಲೇಖನದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು,
ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ವಿವರಿಸುತ್ತಾ ಲೇಖಕರು ಈ ಮೇಲಿನ ಮಾತನ್ನಾಡಿದ್ದಾರೆ. ರೈಲ್ವೇ ಅಂಚೆ ಮತ್ತು ತಂತಿ ಇಲಾಖೆಗಳಲ್ಲಿ ಕನ್ನಡದ ವಾತಾವರಣವೇ ಇರುವುದಿಲ್ಲ. ಕನ್ನಡ ನಾಡಿನ ಸಣ್ಣಪುಟ್ಟ ಊರುಗಳಲ್ಲಿರುವ ರೈಲ್ವೇ ಸ್ಟೇಷನ್ನುಗಳಲ್ಲಿಯೂ ಹಿಂದಿ-ಇಂಗ್ಲಿಷ್‌ಗಳೇ ರಾರಾಜಿಸಿದರೆ ನಾವು ನಮ್ಮ ದೇಶದಲ್ಲಿದ್ದೇವೆಂಬ ಭಾವನೆ ಯಾರಿಗೂ ಬಾರದೆನ್ನುವ ಲೇಖಕರು ತಮ್ಮ ವಿಚಾರವನ್ನು ಮುಂದುವರೆಸುತ್ತಾ ಲೈಫ್ ಇನ್‌ಶೂರೆನ್ಸ್ ಕಾರ್ಪೊರೇಷನ್ನಿನಂಥ ಸಂಸ್ಥೆಗಳು, ಬ್ಯಾಂಕುಗಳು ಹೀಗೆ ಕೇಂದ್ರಾಡಳಿತದ ಯಾವ ಸಂಸ್ಥೆಗಳಿಗೆ ಹೋದರೂ ನಾವು ಪರದೇಶಿಗಳೆಂಬ ಭಾವನೆ ಬರುತ್ತದೆ ಎಂದಿದ್ದಾರೆ. ಈ ಸಂಸ್ಥೆಗಳಲ್ಲಿ ನಮ್ಮದೇ ಭಾಷೆಗಳ ಬಳಕೆಯಾಗದಿದ್ದರೆ ಆ ಸಂಸ್ಥೆಗಳು ಜನಜೀವನದಿಂದ ಹೊರಗೇ ಉಳಿಯುತ್ತವೆಂದು ಎಚ್ಚರಿಸಿದ್ದಾರೆ.
೪. ನಮ್ಮ ಭಾಷೆಯಲ್ಲಿ ಓದಿದ್ದೇ ಮೈಗೆ ಹತ್ತುವುದು.
ಡಾ. ಹಾ.ಮಾ. ನಾಯಕರು ಬರೆದಿರುವ ‘ಕನ್ನಡವನ್ನು ಕಟ್ಟುವ ಕೆಲಸ’ ಎಂಬ ಲೇಖನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಕಲಿಕೆಯ ಮಾಧ್ಯಮದ ವಿಚಾರ ಬಂದಾಗ ನಾಯಕರು ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸಿ, ವಿಷಯಗಳನ್ನು ನಮ್ಮ ಭಾಷೆಗಳಲ್ಲಿಯೇ ಕಲಿಸಬೇಕೆಂದು ಪ್ರತಿಪಾದಿಸಿದ್ದಾರೆ. ಕನ್ನಡ ಮಾಧ್ಯಮವಾಗಬೇಕು ಎಂದರೆ ಇಂಗ್ಲಿಷನ್ನು ಕಲಿಸಬಾರದು ಎಂದು ಅವರು ಹೇಳುತ್ತಿಲ್ಲ. ನಮ್ಮ ಭಾಷೆಯಲ್ಲಿ ಓದಿದ್ದೇ ಮೈಗೆ ಹತ್ತುತ್ತದೆ. ಆಧುನಿಕ ವಿಜ್ಞಾನವನ್ನು ನಮ್ಮ ಭಾಷೆಯಲ್ಲಿ ಕಲಿಸಲಾಗದು ಎಂಬುದು ಮೂಢನಂಬಿಕೆ ಎನ್ನುವ ನಾಯಕರು, ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿ ಎನಿಸಿರುವ ಡಾ. ಸಿ.ಎನ್.ಆರ್. ರಾವ್ ಅವರ ಉದಾಹರಣೆ ನೀಡಿದ್ದಾರೆ. ಇಂಗ್ಲಿಷ್ ಪ್ರತಿಷ್ಠೆಯ ಸಂಕೇತವೆಂದು ಭಾವಿಸುವುದನ್ನು ಬಿಟ್ಟು ನಮ್ಮ ಭಾಷೆಯಲ್ಲಿ ಕಲಿಸಬೇಕೆಂದು ಲೇಖಕರು ವಾದಿಸುತ್ತಾರೆ.
೫. ಒಂದೊಂದು ಭಾಷೆಯ ಒಂದೊಂದು ವರ.
ಡಾ. ಹಾ.ಮಾ. ನಾಯಕರು ಬರೆದಿರುವ ‘ಕನ್ನಡವನ್ನು ಕಟ್ಟುವ ಕೆಲಸ’ ಎಂಬ ಲೇಖನದಲ್ಲಿ ಈ ಮೇಲಿನ ವಾಕ್ಯವಿದೆ.
ಇಂಗ್ಲಿಷ್ ಭಾಷೆ ನಮಗೆ ಬೇಕೆಂದು ಒಪ್ಪುವ ಲೇಖಕರು ಅದು ನಮ್ಮ ಭಾಷೆಯ ಬದಲಿಗೆ ಅಲ್ಲವೆಂದಿದ್ದಾರೆ. ನಮಗೆ ಇಂಗ್ಲಿಷ್ ಮಾತ್ರವಲ್ಲ ಇನ್ನೂ ಹಲವು ಭಾಷೆಗಳು ಬೇಕು. ಒಂದೊಂದು ಭಾಷೆಯೂ ಒಂದೊಂದು ವರ, ಒಂದೊಂದು ಜಗತ್ತು. ಆದರೆ ಯಾವ ಭಾಷೆ ಬೇಕೆಂಬುದು ನಮ್ಮ ಅಗತ್ಯಕ್ಕೆ ಸಂಬಂಧಿಸಿದ್ದು, ಹೊರ ಜಗತ್ತಿನ ಸಂಪರ್ಕಕ್ಕಾಗಿ ನಮಗೆ ಇಂಗ್ಲಿಷ್ ಬೇಕು. ಆದರೆ ಅದೇ ಸರ್ವಸ್ವವಾಗಿ ಅಲ್ಲ ಎಂದು ಡಾ. ಹಾ.ಮಾ. ನಾ. ಸ್ಪಷ್ಟಪಡಿಸಿದ್ದಾರೆ.
೬. ನಾವು ಯಾವ ಪತ್ರಿಕೆಗಳನ್ನು ಓದುತ್ತಿದ್ದೇವೆ?
ಡಾ. ಹಾ.ಮಾ. ನಾಯಕರು ಬರೆದಿರುವ ‘ಕನ್ನಡವನ್ನು ಕಟ್ಟುವ ಕೆಲಸ’ ಎಂಬ ಲೇಖನದಲ್ಲಿ ಈ ಪ್ರಶ್ನೆಯನ್ನು ಲೇಖಕರೇ ಕೇಳಿದ್ದಾರೆ.
ಕನ್ನಡ ಕನ್ನಡ ಎಂದು ಮಾತನಾಡುವ ನಾವು ಎಷ್ಟು ಕನ್ನಡವನ್ನು ಅನುಸರಿಸುತ್ತಿದ್ದೇವೆ? ಎಂದು ಪ್ರಶ್ನಿಸಿರುವ ಲೇಖಕರು ನಾವು ಓದುವ ಪತ್ರಿಕೆಗಳು ಕನ್ನಡ ಭಾಷೆಯದ್ದೇ? ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕೆಂದಿದ್ದಾರೆ. ಇಂಗ್ಲಿಷ್ ಮತ್ತಿತರ ಭಾಷೆಯ ಪತ್ರಿಕೆಗಳನ್ನು ಓದುವ ನಾವು ಕನ್ನಡದ ಬಗ್ಗೆ ಮಾತಾಡಲು ಅರ್ಹರಲ್ಲವೆಂಬ ಭಾವನೆ ನಾಯಕರದ್ದಾಗಿದೆ. ಕನ್ನಡ ಅನುಸರಿಸುವುದಕ್ಕೆ ಎಂಬುದು ನಮ್ಮ ಜೀವನಕ್ರಮದ ಭಾಗವಾಗಬೇಕೆಂದು ಅವರು ತಿಳಿಸಿರುವ ಸಂದರ್ಭವಿದಾಗಿದೆ.
೭. ಕನ್ನಡಿಗರು ಮೊದಲು ಕನ್ನಡಿಗರಾಗಬೇಕು.
ಡಾ. ಹಾ.ಮಾ. ನಾಯಕರು ಬರೆದಿರುವ ‘ಕನ್ನಡವನ್ನು ಕಟ್ಟುವ ಕೆಲಸ’ ಎಂಬ ವಿಚಾರಪೂರ್ಣ ಲೇಖನದ ಕೊನೆಯ ವಾಕ್ಯವಿದು.
ಪ್ರತಿಯೊಬ್ಬ ಕನ್ನಡಿಗನೂ ಪ್ರತಿಯೊಂದು ಅಂಗುಲದಲ್ಲಿಯೂ ಕನ್ನಡಿಗನಾದಾಗ ಮಾತ್ರ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುವುದೆಂದು ಹೇಳುವ ಹಾ.ಮಾ.ನಾ. ಕನ್ನಡ ಹೇಳುವುದಕ್ಕೆ ಮಾತ್ರವಲ್ಲ, ಅನುಸರಿಸುವುದಕ್ಕೂ ಕೂಡ ಎಂಬುದನ್ನು ಜನ ಮೊದಲು ಅರಿಯಬೇಕೆಂದಿದ್ದಾರೆ. ನಮ್ಮ ಮಕ್ಕಳು ಓದುವ ಶಾಲೆ, ನಾವು ಓದುವ ಪತ್ರಿಕೆ, ನಾವು ನೋಡುವ ಸಿನಿಮಾ, ನಮ್ಮ ಮನೆಯ ಬೋರ್ಡು, ನಮ್ಮಲೆಟರ್‌ಹೆಡ್‌ಗಳು, ಬ್ಯಾಂಕಿಗೆ ಬರೆಯುವ ಚಿಕ್ಕುಗಳು, ಕಾಗದಪತ್ರಗಳು – ಎಲ್ಲದರಲ್ಲಿಯೂ ಕನ್ನಡಕ್ಕೆ ಆದ್ಯತೆ ಸಲ್ಲಬೇಕು. ಹೀಗೆ ಬಳಕೆಯಲ್ಲಿ ಕನ್ನಡವನ್ನು ತಂದಾಗ ನಾವು ನಿಜವಾದ ಕನ್ನಡದವರಾಗುತ್ತೇವೆ. ಇಲ್ಲವೇ ಬರಿ ಹೆಸರಿಗಷ್ಟೇ ಕನ್ನಡಿಗರಾಗುತ್ತೇವೆ ಎಂದು ಲೇಖಕರು ವಿಚಾರ ಮಾಡಿದ್ದಾರೆ.
ಹೆಚ್ಚುವರಿ ಪ್ರಶ್ನೆಗಳು:
೮. ಇಲ್ಲಿ ಸವತಿ ಮಾತ್ಸರ್ಯಕ್ಕೆ ಎಡೆಯಿಲ್ಲ.
ಡಾ. ಹಾ.ಮಾ. ನಾಯಕರು ಬರೆದಿರುವ ‘ಕನ್ನಡವನ್ನು ಕಟ್ಟುವ ಕೆಲಸ’ ಎಂಬ ಲೇಖನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಲೇಖನದ ಆರಂಭದಲ್ಲಿಯೇ ಡಾ. ಹಾ.ಮಾ. ನಾಯಕರು ತಮ್ಮ ಕನ್ನಡ ಪ್ರೀತಿಯನ್ನು ಕುರಿತು ಹೇಳುತ್ತಾ ಈ ಮೇಲಿನ ಮಾತನ್ನು ಹೇಳಿದ್ದಾರೆ. ಲೇಖಕರಿಗೆ ‘ಕನ್ನಡ’ ಎಂದರೆ ಮೊದಲ ಪ್ರೀತಿಯಂತೆ. ಹಾಗಾದರೆ ಎರಡನೇ ಪ್ರೀತಿ ಯಾವುದೆಂದು ಪ್ರಶ್ನೆ ಮಾಡಬಹುದಲ್ಲವೇ? ಅದಕ್ಕೆ ಲೇಖಕರು ಮೊದಲು ಪ್ರೀತಿಯೂ ಕನ್ನಡ, ಎರಡನೇ ಪ್ರೀತಿಯೂ ಕನ್ನಡವೇ. ಇಲ್ಲಿ ಸವತಿ ಮಾತ್ಸರಕ್ಕೆ ಅವಕಾಶವಿಲ್ಲ – ಎಂದಿದ್ದಾರೆ. ಕನ್ನಡವೇ ನನ್ನ ಮೊದಲ ಆದ್ಯತೆ ಎಂಬಲ್ಲಿ ಲೇಖಕರ ಹೃದಯದಲ್ಲಿ ಕನ್ನಡಕ್ಕಿರುವ ಸ್ಥಾನ ಎಂತಹದ್ದೆಂಬುದನ್ನು ಈ ಮೇಲಿನ ಮಾತು ದೃಢಪಡಿಸುತ್ತದೆ.
(ಆ) ಕೆಳಗಿನ ಪ್ರಶ್ನೆಗಳಿಗೆ ನೀಡಿರುವ ಉತ್ತರಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ:
೧. ಎ.ಆರ್. ಕೃಷ್ಣಶಾಸ್ತ್ರಿಗಳು ಎಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?
ಹೈದರಾಬಾದ್
೨. ನಮ್ಮ ದೇಶದಲ್ಲಿ ಖಿಲವಾಗಿ ಹೋದ ಧರ್ಮ ಯಾವುದು?
ಬೌದ್ಧ
೩. ಪ್ರಾಂತೀಯ ಭಾಷೆಗಳ ಸ್ಥಾನವನ್ನು ಆಕ್ರಮಿಸುತ್ತಿರುವ ಭಾಷೆಗಳಾವುವು?
ಹಿಂದಿ ಮತ್ತು ಇಂಗ್ಲಿಷ್
೪. ಯಾವ ಮರ್ಯಾದೆಯನ್ನು ನಾವು ಮೀರಬಾರದು?
ಯಾವ ಯಾವ ಭಾಷೆಗೆ ಯಾವ ಸ್ಥಾನವಿರಬೇಕೆನ್ನುವ
೫. ಸ್ಥಳೀಯ ಭಾಷೆ ಕಲಿಯದ ಅನ್ಯಭಾಷಿಕರು ಏನಾಗುತ್ತಾರೆ?
ದ್ವೀಪಜೀವಿ
೬. ಯಾವುದು ನಮ್ಮ ಮೈಗೆ ಹತ್ತುವುದು?
ನಮ್ಮ ಭಾಷೆಯಲ್ಲಿ ಕಲಿತಿದ್ದು
೭. ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿಯಾದವರು ಯಾರು?
ಡಾ. ಸಿ.ಎನ್.ಆರ್. ರಾವ್
೮. ತಮ್ಮ ರಾಜ್ಯದಲ್ಲಿ ತಾವೇ ತಬ್ಬಲಿಗಳಾಗುತ್ತಿರುವವರು ಯಾರು?
ಕನ್ನಡಿಗರು
೯. ಬದುಕು ಯಾವುದನ್ನು ಬಿಟ್ಟು ಇರುವುದಿಲ್ಲ?
ಸಮುದಾಯ
೧೦. ಕನ್ನಡದ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ನಾವು ಏನು ಮಾಡಬೇಕು?
ಅಂಗುಲ ಅಂಗುಲದಲ್ಲಿಯೂ ಕನ್ನಡವರಾಗಬೇಕು.
ಹೆಚ್ಚುವರಿ ಪ್ರಶ್ನೆಗಳು:
೧೧. ಹಾ.ಮಾ. ನಾಯಕರ ಮೊದಲ ಪ್ರೀತಿ ಯಾವುದು?
ಕನ್ನಡ
೧೨. ವಿಮಾನ ನಿಲ್ದಾಣದ ಎಲ್ಲ ಪ್ರಕಟಣೆಗಳೂ ಯಾವ ಭಾಷೆಗಳಲ್ಲಿರುವುದು ಆಗತ್ಯ?
ಪ್ರಾದೇಶಿಕ ಭಾಷೆ
೧೩. ಭಾಷೆ ಯಾವುದಕ್ಕಿಂತ ದೊಡ್ಡದು?
ಬದುಕಿಗಿಂತ
೧೪. ಕರ್ನಾಟಕದ ಅನೇಕ ಕಡೆ ಯಾರು ಅಲ್ಪಸಂಖ್ಯಾತರಾಗುತ್ತಿದ್ದಾರೆ?
ಕನ್ನಡಿಗರು
೧೫. ಹಾ.ಮಾ. ನಾಯಕರಿಗೆ ಯಾವಾಗ ಹೈದರಾಬಾದ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಕೈಗೆ ಸಿಕ್ಕಿತು?
ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾಗ
೧೬. ಹೊರಜಗತ್ತಿನ ಸಂಪರ್ಕಕ್ಕಾಗಿ ನಮಗೆ ಯಾವ ಭಾಷೆ ಬೇಕು?
ಇಂಗ್ಲಿಷ್
೧೭. “ಅದು ಹೋದರೆ ಹೋಗಲಿ ಎನ್ನುವ ಹಾಗಿದ್ದರೆ ಈ ಕಡೆ ಬಂಗಾಳಕೊಲ್ಲಿ ಇದೆ. ಆ ಕಡೆ ಅರಬ್ಬಿ ಸಮುದ್ರ ಇದೆ; ಗುಡಿಸಿ ಹಾಕಿಬಿಡಿ”- ಇಲ್ಲಿ ಎ.ಆರ್. ಕೃಷ್ಣಶಾಸ್ತ್ರಿಗಳು ಯಾವ ಭಾಷೆಯನ್ನುದ್ದೇಶಿಸಿ ಹೇಳಿದ್ದಾರೆ
ಕನ್ನಡ
೧೮. ಪ್ರಾದೇಶಿಕ ಭಾಷೆಯಲ್ಲಿ ಕಡ್ಡಾಯ ಶಿಕ್ಷಣ ಕೊಡುವುದು ಯಾರ ಕರ್ತವ್ಯವಾಗಿರುತ್ತದೆ?
ಸರ್ಕಾರ
(ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):
೧. ಹಾ.ಮಾ. ನಾಯಕರಲ್ಲಿ ಕನ್ನಡ ಪ್ರೀತಿ ಸ್ಪುರಿಸಿದ್ದು ಹೇಗೆ?
ಲೇಖಕರಲ್ಲಿ ಕನ್ನಡದ ಪ್ರೀತಿಯು ಮಾಸ್ತಿ, ಕುವೆಂಪು, ತೀನಂಶ್ರೀ ಅವರ ಪದ್ಯಗಳನ್ನು ಪಠ್ಯಪುಸ್ತಕಗಳಲ್ಲಿ ಓದಿದಾಗ ಸ್ಪುರಿಸಿತು.
೨. ಎ.ಆರ್. ಕೃಷ್ಣಶಾಸ್ತ್ರಿಗಳ ಭಾಷಣ ಓದಿ ಹಾ.ಮಾ. ನಾಯಕರಲ್ಲಿ ಮೂಡಿದ ಭಾವನೆಗಳಾವುವು?
ಎ.ಆರ್. ಕೃಷ್ಣಶಾಸ್ತ್ರಿಗಳ ಭಾಷಣವನ್ನು ಓದಿದಾಗ ಲೇಖಕರ ಮನದಲ್ಲಿ ಖೇದ, ಭಯ, ಅಸಹಾಯಕತೆ ಮತ್ತು ಕ್ರೋಧ ಭಾವಗಳು ಆವರಿಸಿಕೊಂಡವು. ಅಂದೇ ಕನ್ನಡದ ಕಾರಣಕ್ಕಾಗಿ ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದಾಗಿ ಲೇಖಕರು ಹೇಳಿದ್ದಾರೆ.
೩. ಕರ್ನಾಟಕದಲ್ಲಿ ಕನ್ನಡಕ್ಕೆ ಯಾವ ಸ್ಥಾನವಿರಬೇಕೆಂದು ಹಾಮಾನಾ ಅಪೇಕ್ಷಿಸಿದ್ದಾರೆ?
ಕರ್ನಾಟಕದಲ್ಲಿ ಕನ್ನಡವೇ ಪ್ರಥಮ, ಪ್ರಧಾನ, ರಾಜ, ರಾಣಿ, ರಾಜಕುಮಾರ ಎಲ್ಲವೂ ಆಗಿರಬೇಕು. ಮಿಕ್ಕ ಯಾವ ಭಾಷೆಯಾದರೂ ಇಲ್ಲಿ ಸೇವಕ ಸ್ಥಾನದಲ್ಲಿರಬೇಕು ಎಂದು ಹಾ.ಮಾ.ನಾ. ಅಪೇಕ್ಷಿಸಿದ್ದಾರೆ.
೪. ಕೇಂದ್ರದ ರೈಲ್ವೇ, ಅಂಚೆ ಇಲಾಖೆಗಳು ಯಾವ ಧೋರಣೆ ಬೆಳೆಸಿಕೊಂಡಿವೆ?
ಕೇಂದ್ರ ಸರ್ಕಾರದ ರೈಲ್ವೇ ಇಲಾಖೆ ಹಾಗೂ ಅಂಚೆ ಮತ್ತು ತಂತಿ ಇಲಾಖೆಗಳ ಪ್ರಾದೇಶಿಕ ಭಾಷೆಗಳ ಮೇಲೆ ಮಲತಾಯಿ ಧೋರಣೆ ಬೆಳೆಸಿಕೊಂಡಿವೆ.
೫. ತ್ರಿಭಾಷಾ ಸೂತ್ರದ ಬಳಕೆ ಹೇಗಿರಬೇಕು?
ಕೇಂದ್ರ ಸರ್ಕಾರದ ಕಛೇರಿಗಳ ಎಲ್ಲ ಸೂಚನೆಗಳು, ಎಲ್ಲ ಫಾರಂಗಳು, ಎಲ್ಲ ಬರವಣಿಗೆಯ ವ್ಯವಹಾರಗಳು ಕ್ರಮವಾಗಿ ಪ್ರಾದೇಶಿಕ ಭಾಷೆ, ಹಿಂದಿ ಮತ್ತು ಇಂಗ್ಲಿಷ್‌ಗಳಲ್ಲಿರಬೇಕು. ಇದೇ ತ್ರಿಭಾಷಾ ಸೂತ್ರದ ಬಳಕೆ.
೬. ನಮ್ಮ ಸಾರ್ವಜನಿಕ ಶಾಲೆಯ ಬಗ್ಗೆ ಹಾ. ಮಾ ನಾಯಕರ ಅಭಿಪ್ರಾಯವೇನು?
ನಮ್ಮ ಸಾರ್ವಜನಿಕ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಆದ್ದರಿಂದ ಸಾರ್ವಜನಿಕರು ಅನಿವಾರ್ಯವಾಗಿ ಖಾಸಗಿ ಉದ್ಯಮವಾದ ಇಂಗ್ಲಿಷ್ ಶಾಲೆಗಳ ಕಡೆ ಹೋಗುತ್ತಾರೆ. ಎಲ್ಲಿಯವರೆಗೆ ನಮ್ಮ ಸಾರ್ವಜನಿಕ ಶಾಲೆಗಳ ಸ್ಥಿತಿಗತಿಗಳು ಉತ್ತಮವಾಗುವುದಿಲ್ಲವೋ ಅಲ್ಲಿಯವರೆಗೆ ಶಿಕ್ಷಣದಲ್ಲಿ ಕನ್ನಡ ಆಕರ್ಷಕವೆನ್ನಿಸುವುದಿಲ್ಲವೆಂದು ಹಾ.ಮಾ.ನಾ. ಅಭಿಪ್ರಾಯಪಟ್ಟಿದ್ದಾರೆ.
೭. ಕನ್ನಡದ ಸಮಸ್ಯೆಗಳು ಎಲ್ಲಿಯವರೆಗೂ ಇದ್ದೇ ಇರುತ್ತವೆ?
ಪ್ರತಿಯೊಬ್ಬ ಕನ್ನಡಿಗನೂ ಪ್ರತಿಯೊಂದು ಅಂಗುಲದಲ್ಲಿಯೂ ಕನ್ನಡಿಗನಾಗಬೇಕು. ಆಗ ಮಾತ್ರ ಕನ್ನಡದ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಕನ್ನಡಿಗರು ನಿಜವಾದ ಕನ್ನಡಿಗರಾಗದ ಹೊರತು ಕನ್ನಡದ ಸಮಸ್ಯೆಗಳು ಸಮಸ್ಯೆ ಗಳಾಗಿಯೇ ಉಳಿಯುತ್ತವೆ.
೮. ಕನ್ನಡದ ಬಗ್ಗೆ ಮಾತನಾಡಲು ನಾವು ಯೋಗ್ಯತೆ ಗಳಿಸುವುದು ಯಾವಾಗ?
ನಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ? ನಾವು ಬರೆಯುವ ಚೆಕ್, ಕಾಗದ ಪತ್ರಗಳು, ಓದುವ ಪತ್ರಿಕೆಗಳು ಕನ್ನಡದಲ್ಲಿವೆಯೇ? ಎಂಬ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕು. ಅವುಗಳ ಉತ್ತರಗಳು ನಮ್ಮನ್ನು ಚುಚ್ಚದಿದ್ದಾಗ ಮಾತ್ರ ನಾವು ಕನ್ನಡದ ಬಗ್ಗೆ ಮಾತನಾಡುವ ಯೋಗ್ಯತೆ ಗಳಿಸುತ್ತೇವೆಂದು ಹಾ.ಮಾ. ನಾಯಕರು ಹೇಳಿದ್ದಾರೆ.
ಹೆಚ್ಚುವರಿ ಪ್ರಶ್ನೆಗಳು:
೯. ಹಾ.ಮಾ. ನಾಯಕರು ತಿಳಿಸಿದ ರಾಜಮನ್ನಾರ್ ಸಮಿತಿಯ ವರದಿ ಏನು?
ಕೇಂದ್ರ ಸರ್ಕಾರದ ಕಚೇರಿ ಯಾವ ರಾಜ್ಯದಲ್ಲಿರುತ್ತದೋ ಆ ರಾಜ್ಯದ ಭಾಷೆಯನ್ನು ಅದು ಅಲ್ಲಿನ ಜನರೊಂದಿಗೆ ಮತ್ತು ಸರ್ಕಾರದೊಂದಿಗೆ ಬಳಸಬೇಕು. ಆ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ನೌಕರರು ಆ ರಾಜ್ಯದ ಭಾಷೆಯನ್ನು ಬಲ್ಲವರಾಗಿರಬೇಕು ಎಂದು ರಾಜಮನ್ನಾರ್ ಸಮಿತಿ ಹೇಳಿದೆಯೆಂದು ಹಾ.ಮಾ. ನಾಯಕರು ತಿಳಿಸಿದ್ದಾರೆ.
೧೦. ಎಲ್ಲೆಲ್ಲಿ ಹೋದಾಗ ನಾವು ಪರದೇಶಿಗಳೆಂಬ ಭಾವನೆ ಬರುತ್ತದೆ?
ಲೈಫ್ ಇನ್‌ಶೂರೆನ್ಸ್ ಕಾರ್ಪೋರೇಷನ್ನಿನಂಥ ಸಂಸ್ಥೆಗಳು, ಬ್ಯಾಂಕುಗಳು ಹೀಗೆ ಕೇಂದ್ರಾಡಳಿತದ ಯಾವ ಸಂಸ್ಥೆಗಳಿಗೆ ಹೋದರೂ ನಾವು ಪರದೇಶಿಗಳೆಂಬ ಭಾವನೆ ಬರುತ್ತದೆ.
೧೧. ಶಿಕ್ಷಣ ತಜ್ಞರೆನ್ನಿಸಿಕೊಂಡವರಿಗೂ ಅನೇಕ ಸಲ ತಿಳಿಯದಿರುವ ವಿಚಾರ ಯಾವುದು?
ಭಾಷೆಯನ್ನು ಕಲಿಸುವುದು, ಭಾಷೆಯ ಮೂಲಕ ಕಲಿಸುವುದು – ಇವುಗಳ ನಡುವಿನ ಅಂತರ ಶಿಕ್ಷಣ ತಜ್ಞರೆನ್ನಿಸಿಕೊಂಡವರಿಗೂ ಅನೇಕ ಸಲ ತಿಳಿಯದಿರುವ ಸಂಗತಿಯಾಗಿದೆ.
೧೨. ಇಂಗ್ಲಿಷ್ ಮೂಲಕವಾದ ಶಿಕ್ಷಣ ಹೇಗಿರುತ್ತದೆ?
ಇಂಗ್ಲಿಷ್ ಮೂಲಕವಾದ ಶಿಕ್ಷಣ ಕುಂಡದಲ್ಲಿ ನೆಟ್ಟ ಗಿಡಗಳಂತೆ, ಬೇರು ನೆಲಕ್ಕೆ ಇಳಿಯುವುದಿಲ್ಲ. ಭೂಮಿಯ ಸಾರವನ್ನು ಅವು ಗ್ರಹಿಸುವುದಿಲ್ಲ, ಹಾಕಿದ ಹಿಡಿ ಗೊಬ್ಬರದಲ್ಲೇ ಅದು ಜೀವಮಾನವನ್ನು ಕಳೆಯಬೇಕು.
ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):
೧. ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡತನವಿಲ್ಲದಿರುವ ಬಗ್ಗೆ ಹಾಮಾನಾ ಹೇಗೆ ಟೀಕಿಸಿದ್ದಾರೆ?
ಡಾ. ಹಾ.ಮಾ. ನಾಯಕರು ‘ಕನ್ನಡವನ್ನು ಕಟ್ಟುವ ಕೆಲಸ’ ಎಂಬ ತಮ್ಮ ವಿಚಾರಪೂರ್ಣ ಲೇಖನದಲ್ಲಿ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡ ಬಳಕೆಯಿಲ್ಲದಿರುವ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ. ಈ ರಾಷ್ಟ್ರದಲ್ಲಿ ಐಕ್ಯತೆ ಇರಬೇಕಾದರೆ ಎಲ್ಲ ಭಾಷೆಗಳ ಸಮಾನ ಬಳಕೆ ಅಗತ್ಯ. ಆದರೆ ಕೇಂದ್ರ ಸರ್ಕಾರವು ಕನ್ನಡದಂತಹ ಪ್ರಾದೇಶಿಕ ಭಾಷೆಗಳ ವಿಚಾರದಲ್ಲಿ ಮಲತಾಯಿ ಧೋರಣೆ ತಳಿದಿದೆಯೆಂದು ಹಾ.ಮಾ.ನಾ. ಅಭಿಪ್ರಾಯಪಟ್ಟಿದ್ದಾರೆ. ವಿಮಾನ ನಿಲ್ದಾಣದ ಸೂಚನೆಗಳಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ. ಇನ್ನು ರೈಲ್ವೇ, ಅಂಚೆ ಮತ್ತು ತಂತಿ ಇಲಾಖೆಗಳ ಧೋರಣೆಯೂ ಭಿನ್ನವಲ್ಲ. ಕನ್ನಡನಾಡಿನ ಸಣ್ಣಪುಟ್ಟ ಊರುಗಳಲ್ಲಿರುವ ರೈಲ್ವೆ ಸ್ಟೇಷನ್ನುಗಳಲ್ಲಿಯೂ ಹಿಂದಿ-ಇಂಗ್ಲಿಷ್‌ಗಳೇ ರಾರಾಜಿಸಿದರೆ ನಾವು ನಮ್ಮ ದೇಶ ದಲ್ಲಿದ್ದೇವೆಂಬ ಭಾವನೆ ಯಾರಲ್ಲೂ ಮೂಡುವುದಿಲ್ಲವೆಂದು ನಾಯಕರು ಹೇಳಿದ್ದಾರೆ. ಜೀವವಿಮೆ, ಬ್ಯಾಂಕು ಹೀಗೆ ಯಾವ ಕೇಂದ್ರಾಡಳಿತ ಸಂಸ್ಥೆಗಳಿಗೆ ಹೋದರೂ ನಾವು ಪರದೇಶಿಗಳೆಂಬ ಭಾವನೆ ಬರುತ್ತವೆ. ಎಲ್ಲಿಯವರೆಗೆ ಈ ಸಂಸ್ಥೆಗಳಲ್ಲಿ ನಮ್ಮದೇ ಭಾಷೆಗಳು, ಬಳಕೆಯಾಗುವುದಿಲ್ಲವೋ ಅಲ್ಲಿಯವರೆಗೂ ಈ ಸಂಸ್ಥೆಗಳು ಜನಜೀವನದಿಂದ ಹೊರಗೇ ಉಳಿಯುತ್ತದೆಂದು ಹಾ.ಮಾ.ನಾ. ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರಾಡಳಿತದ ಕಚೇರಿಗಳ ಎಲ್ಲ ಸೂಚನೆಗಳು, ಫಾರಂಗಳು, ಎಲ್ಲ ಬರವಣಿಗೆಗಳು ಕ್ರಮವಾಗಿ ಪ್ರಾದೇಶಿಕ, ಹಿಂದಿ ಮತ್ತು ಇಂಗ್ಲಿಷ್‌ಗಳಲ್ಲಿರುವಂತೆ ತ್ರಿಭಾಷಾ ಸೂತ್ರವು ಸಮರ್ಥವಾಗಿ ಜಾರಿಯಾಗಬೇಕೆಂದು ಅವರು ಸಲಹೆ ನೀಡುತ್ತಾರೆ.
೨. ಹೊರನಾಡಿನಿಂದ ಬಂದು ಕನ್ನಡ ನಾಡಿನಲ್ಲಿ ನೆಲೆಸಿರುವವರ ಜವಾಬ್ದಾರಿಗಳನ್ನು ಹಾಮಾನಾ ಹೇಗೆ ವಿವರಿಸಿದ್ದಾರೆ?
ಹೊರಗಿನಿಂದ ಬಂದು ಒಂದು ರಾಜ್ಯದಲ್ಲಿ ನೆಲೆಸಿರುವ ಅನ್ಯಭಾಷಿಕರು ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಕಲಿಯಲೇ ಬೇಕೆಂಬುದು ಹಾ.ಮಾ.ನಾ. ಅವರ ಅಭಿಪ್ರಾಯ, ಇಂತಹ ವಾತಾವರಣವನ್ನು ಸರ್ಕಾರವೇ ರೂಪಿಸಬೇಕೆಂದು ಅವರು ಹೇಳಿದ್ದಾರೆ. ಸ್ಥಳೀಯ ಭಾಷೆಯನ್ನು ಕಲಿಯದೆ ಹೋದರೆ ಹೊರಗಿನಿಂದ ಬಂದವರು ದ್ವೀಪಜೀವಿಗಳಾಗಿ ಉಳಿಯ ಬೇಕಾಗುತ್ತದೆ. ಆ ರಾಜ್ಯದ ಜನರೊಂದಿಗೆ ಬೆರೆಯುವುದು ಸಾಧ್ಯವಾಗುವುದಿಲ್ಲ. ಒಂದು ರಾಜ್ಯದ ಎಲ್ಲ ಸೌಲಭ್ಯಗಳನ್ನೂ ಬಳಸಿಕೊಂಡು ಬದುಕುವ ಜನ ಅಲ್ಲಿನ ಭಾಷೆಯನ್ನು ಅನಿವಾರವಾಗಿ ಬಳಸಲೇಬೇಕು. ಅವೆರಡೂ ಪೂರಕವಾದಾಗಲೇ ಮನೆ ಮತ್ತು ಆವರಣಗಳ ಪರಿಚಯ ಸ್ಪಷ್ಟವಾಗುವುದೆಂದು ಲೇಖಕರು ಅಭಿಪ್ರಾಯಪಟ್ಟಿರುವರು.
೩. ನಮಗೆ ಬೇಕಾಗಿರುವ ಕನ್ನಡ ಮಾಧ್ಯಮ ಶಿಕ್ಷಣ ಮತ್ತು ಇಂಗ್ಲೀಷ್ ಭಾಷೆಯ ಸಂಬಂಧ ಯಾವ ಸ್ವರೂಪದ್ದಾಗಿರಬೇಕೆಂದು ಹಾಮಾನಾ ಹೇಳಿದ್ದಾರೆ?
ಹಾ.ಮಾ. ನಾಯಕರು ನಮಗೆ ಬೇಕಾಗಿರುವ ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಸಂಬಂಧಗಳ ವಿಚಾರದಲ್ಲಿ ಅತ್ಯಂತ ಸ್ಪಷ್ಟವಾದ ನಿಲುವು ತಳೆದಿದ್ದಾರೆ. ಇಂಗ್ಲಿಷ್ ನಮಗೆ ಹೊರಪ್ರಪಂಚವನ್ನು ತೋರಿಸುವ ಕಿಟಕಿ ಎಂಬುದನ್ನು ಒಪ್ಪಿಕೊಳ್ಳುವ ನಾಯಕರು ಹಾಗೆಂದು ಅದನ್ನೇ ತಲೆಯ ಮೇಲೆ ಹೊತ್ತು ಮೆರೆಸಬೇಕಾಗಿಲ್ಲ ಎಂಬುದನ್ನೂ ಬಲ್ಲವರಾಗಿದ್ದಾರೆ. ಇಂಗ್ಲಿಷ್ ಮೂಲಕ ಶಿಕ್ಷಣ ಪಡೆಯುವುದು ಪ್ರತಿಷ್ಠೆ ಎಂಬ ಭಾವನೆ ಜನರಲ್ಲಿದೆ. ಇಂಗ್ಲಿಷ್ ನಮಗೆ ಬೇಕು, ಆದರೆ ಎಷ್ಟು ಬೇಕು? ಹೇಗೆ ಬೇಕೆಂಬುದನ್ನು ನಾವು ಯೋಚಿಸುತ್ತಿಲ್ಲ. ಕನ್ನಡದ ಮೂಲಕ ಓದಿದ್ದೇ ನಮ್ಮ ಮೈಗೆ ಹತ್ತುವುದು. ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕು ಮತ್ತು ಉಳಿದ ವಿಷಯಗಳನ್ನು ಮಾತೃಭಾಷೆಯ ಮೂಲಕವೇ ಕಲಿಸಬೇಕೆಂಬ ನಿಲುವು ನಾಯಕರದು. ಆಧುನಿಕ ವಿಜ್ಞಾನವನ್ನು ಕನ್ನಡದ ಮೂಲಕ ಕಲಿಯಲು ಸಾಧ್ಯವಿದೆ ಎಂಬುದಕ್ಕೆ ಡಾ. ಸಿ.ಎನ್.ಆರ್. ರಾವ್ ಜ್ವಲಂತ ಸಾಕ್ಷಿಯಾಗಿದ್ದಾರೆ. ಕನ್ನಡ ಬಿಟ್ಟು ಜನರಿಗೆ ಇಂಗ್ಲಿಷ್ ವ್ಯಾಮೋಹ ಬೆಳೆಯಲು ಅವರ ಪೊಳ್ಳು ಪ್ರತಿಷ್ಠೆಯೇ ಕಾರಣವೆಂಬುದು ಲೇಖಕರ ಅಭಿಪ್ರಾಯವಾಗಿದೆ.
೪. ಪೋಷಕರು ಖಾಸಗಿ ಶಾಲೆಗಳ ಕಡೆ ಹೊರಳಲು/ಒಲವು ತೋರಲು ಹಾಮಾನಾ ಯಾವ ಕಾರಣಗಳನ್ನು ಉದಾಹರಿಸುತ್ತಾರೆ?
ಪೋಷಕರು ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಲು ಮುಂದಾಗುವ ಪ್ರವೃತ್ತಿಗೆ ನಮ್ಮ ಸರ್ಕಾರಿ ಶಾಲೆಗಳ ದುಃಸ್ಥಿತಿಯೇ ಕಾರಣವೆಂದು ಹಾ.ಮಾ. ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬ ತಂದೆ-ತಾಯಿಗಳೂ ತಮ್ಮ ಮಕ್ಕಳು ಒಳ್ಳೆಯ ಶಾಲೆಯಲ್ಲಿ ಓದಬೇಕು, ಒಳ್ಳೆಯ ಶಿಕ್ಷಣ ಪಡೆದು ಉಜ್ವಲ ಭವಿಷ್ಯದ ವಾರಸುದಾರರಾಗ ಬೇಕೆಂಬ ಅಪೇಕ್ಷೆಯುಳ್ಳವರಾಗಿರುತ್ತಾರೆ. ಆದ್ದರಿಂದ ಅವರು ನ್ಯಾಯವಾಗಿಯೇ ಸಾರ್ವಜನಿಕ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಲು ಇಷ್ಟಪಡುವುದಿಲ್ಲ. ಕುಸಿದು ಬೀಳುತ್ತಿರುವ ಕಟ್ಟಡಗಳು, ದೊಡ್ಡಿಯಾದ ತರಗತಿಗಳು, ಅಧ್ಯಾಪಕರಿಲ್ಲದ ತರಗತಿಗಳು, ಪಾಠ ಹೇಳದ ಅನರ್ಹ ಅಧ್ಯಾಪಕರು, ಶಿಸ್ತಿಲ್ಲದ ವ್ಯವಸ್ಥೆ, ಮೂತ್ರದ ವಾಸನೆಯ ಪರಿಸರ – ಇದು ನಮ್ಮ ಬಹಳಷ್ಟು ಶಾಲೆಗಳ ಪರಿಸ್ಥಿತಿಯಾಗಿರುವುದರಿಂದ ಸಾರ್ವಜನಿಕರು ಅನಿವಾರವಾಗಿ ಖಾಸಗಿ ಉದ್ಯಮವಾದ ಇಂಗ್ಲಿಷ್ ಶಾಲೆಗಳತ್ತ ಮುಖ ಮಾಡುತ್ತಾರೆ. ಎಲ್ಲಿಯವರೆಗೆ ನಮ್ಮ ಸಾರ್ವಜನಿಕ ಶಾಲೆಗಳ ಸ್ಥಿತಿಗತಿಗಳು ಉತ್ತಮವಾಗುವುದಿಲ್ಲವೋ ಅಲ್ಲಿಯವರೆಗೆ ಶಿಕ್ಷಣದಲ್ಲಿ ಕನ್ನಡ ಆಕರ್ಷಕವೆನಿಸುವುದಿಲ್ಲ ಎಂಬ ನಿಲುವನ್ನು ಡಾ. ಹಾ.ಮಾ. ನಾಯಕರು ತಳೆದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
ಹೆಚ್ಚುವರಿ ಪ್ರಶ್ನೆಗಳು:
೫. ಕನ್ನಡಿಗರ ಉದ್ಯೋಗದ ತೀವ್ರತರ ಸಮಸ್ಯೆಗೆ ಸಂಬಂಧಿಸಿದ ಹಾ.ಮಾ. ನಾಯಕರ ಅಭಿಪ್ರಾಯಗಳನ್ನು ತಿಳಿಸಿ.
ಡಾ. ಹಾ.ಮಾ. ನಾಯಕರು ಕನ್ನಡಿಗರ ಉದ್ಯೋಗ ಸಮಸ್ಯೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಲೇಖನದಲ್ಲಿ ಮಂಡಿಸಿದ್ದಾರೆ. ರಾಜ್ಯದಲ್ಲಿ ಸ್ಥಾಪಿತವಾಗುವ ಕೇಂದ್ರದ ಉದ್ಯಮಗಳಲ್ಲಿ ಕನ್ನಡಿಗರಿಗೆ ದೊರೆಯಬೇಕಾದ ಪಾಲು ದೊರೆಯುತ್ತಿಲ್ಲ. ಒಂದು ಹಂತದವರೆಗಿನ ನೇಮಕಾತಿಯಲ್ಲಿ ಸ್ಥಳೀಯರನ್ನೇ ಪರಿಗಣಿಸಬೇಕಾದ ಅಗತ್ಯವಿದ್ದರೂ ಇಲ್ಲಿ ಹಾಗಾಗುತ್ತಿಲ್ಲ. ರಾಜ್ಯ ಸರ್ಕಾರದ ಉದ್ಯಮಗಳನ್ನೂ, ಉದ್ಯೋಗಗಳನ್ನೂ ನೆರೆಹೊರೆಯವರು ಆಕ್ರಮಿಸಿಬಿಡುತ್ತಿದ್ದಾರೆ. ಈ ಎಲ್ಲ ಸಂಗತಿಗಳಿಂದ ಕನ್ನಡಿಗರೇ ಕನ್ನಡ ನಾಡಿನಲ್ಲಿ ಅಲ್ಪಸಂಖ್ಯಾತರೆನಿಸಿ, ಉದ್ಯೋಗದ ವಿಚಾರದಲ್ಲಿ ಭೀತಿಗೊಳ್ಳುವ ಸಂದರ್ಭ ಎದುರಾಗಿದೆ – ಇವೇ ಮುಂತಾದ ಸಂಗತಿಗಳನ್ನು ಹಾ.ಮಾ. ನಾಯಕರು ತಮ್ಮ ಅಭಿಪ್ರಾಯದಲ್ಲಿ ಮಂಡಿಸಿದ್ದಾರೆ.
೬. ಕನ್ನಡಿಗರೆನ್ನಿಸಿಕೊಳ್ಳಲು ಯಾವ ಯೋಗ್ಯತೆಯ ಪ್ರಶ್ನೆಗಳು ನಮ್ಮನ್ನು ಚುಚ್ಚಬೇಕು?
ಕನ್ನಡದ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸ ಬೇಕೆನ್ನುವ ಹಾ.ಮಾ.ನಾ. ಪ್ರತಿಯೊಬ್ಬ ಕನ್ನಡಿಗನೂ ಪ್ರತಿಯೊಂದು ಅಂಗುಲದಲ್ಲಿಯೂ ಕನ್ನಡಿಗರಾದಾಗ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದಿದ್ದಾರೆ. ಕನ್ನಡ ಕನ್ನಡ ಎನ್ನುವ ನಾವು ನಮ್ಮನ್ನೇ ಪ್ರಶ್ನಿಸಿಕೊಳ್ಳುವುದು ತೀರಾ ಅಗತ್ಯವೆಂದ ಲೇಖಕರು, ಕನ್ನಡ ಹೇಳುವುದಕ್ಕೆ ಮಾತ್ರವಲ್ಲ, ಅನುಸರಿಸುವುದಕ್ಕೆ ಕೂಡ ಎಂಬುದನ್ನು ಮನದಟ್ಟು ಮಾಡಿದ್ದಾರೆ. ನಾವು ನಮ್ಮ ಮಕ್ಕಳನ್ನು ಯಾವ ಶಾಲೆಗಳಲ್ಲಿ ಓದಿಸುತ್ತಿದ್ದೇವೆ? ನಾವು ಯಾವ ಪತ್ರಿಕೆಗಳನ್ನು ಓದುತ್ತಿದ್ದೇವೆ? ನಾವು ನೋಡುವುದು ಯಾವ ಸಿನಿಮಾಗಳನ್ನು? ನಮ್ಮ ಮನೆಯ ಬೋರ್ಡು ಯಾವ ಭಾಷೆಯಲ್ಲಿದೆ? ನಮ್ಮ ಲೇಟರ್‌ಹೆಡ್ಗಳು ಅಚ್ಚಾಗಿರುವುದು, ಲಗ್ನಪತ್ರಿಕೆಗಳು ಅಚ್ಚಾಗಿರುವುದು ಯಾವ ಭಾಷೆಯಲ್ಲಿ? ನಾವು ಬ್ಯಾಂಕುಗಳಿಗೆ ಚಿಕ್ಕು ಬರೆಯುವುದು ಕನ್ನಡದಲ್ಲೇ? ನಾವು ಬರೆಯುವ ಕಾಗದ ಪತ್ರಗಳಲ್ಲಿ ಎಷ್ಟು ಭಾಗ ಕನ್ನಡ? ಇಂಥ ನೂರು ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕು. ಅವುಗಳ ಉತ್ತರ ನಮ್ಮನ್ನು ಚುಚ್ಚದಿದ್ದರೆ ಮಾತ್ರ ನಾವು ಕನ್ನಡವನ್ನು ಕುರಿತು ಮಾತಾಡಲು ಯೋಗ್ಯತೆ ಗಳಿಸಿಕೊಂಡಿದ್ದೇವೆ ಎಂದು ಅರ್ಥ ಎಂದು ವಿವರಿಸುವ ಹಾ.ಮಾ.ನಾ. ಕನ್ನಡಿಗರು ಮೊದಲು ಕನ್ನಡದವರಾಗಬೇಕು ಎಂದು ಆಶಿಸಿದ್ದಾರೆ.
ಭಾಷಾಭ್ಯಾಸ
೧) ಸ್ಪುರಿಸು, ಸಮುದ್ರ, ಕರ್ತವ್ಯ, ಭೂಮಿ, ತಾಳ್ಮೆ – ಇವುಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ.
ಸ್ಪುರಿಸು – ಉದಯಿಸು, ಮೂಡು, ಬುದ್ದಿಗೆ ಹೊಳೆ
ಸಮುದ್ರ – ಸಾಗರ, ಕಡಲು, ಅಬ್ಬಿ
ಕರ್ತವ್ಯ – ಕೆಲಸ, ಕಾಯಕ
ಭೂಮಿ – ಇಳೆ, ವಸುಧೆ, ಧಾರಿಣಿ, ವಸುಂಧರಾ, ಭೂವಿ
ತಾಳ್ಮೆ – ಸಹನೆ, ಸಮಾಧಾನ.
೨) ಎಡೆ, ಗುಡಿ, ಕಲಿ, ಮರ್ಯಾದೆ, ಕೊನೆ – ಇವುಗಳಿಗೆ ನಾನಾರ್ಥಗಳನ್ನು ಬರೆಯಿರಿ.
ಎಡೆ – ಅವಕಾಶ, ನೈವೇದ್ಯ
ಗುಡಿ – ದೇವಾಲಯ, ಮನೆ, ಬಾವುಟ
ಕಲಿ – ವೀರ, ಆರಿತುಕೋ, ಯುಗ
ಮರ್ಯಾದೆ – ಗೌರವ, ಮಿತಿ, ಗಡಿ
ಕೊನೆ – ತುದಿ, ಗೊಂಚಲು
೩) ಪರದೇಶಿ, ಮೈಗೆ ಹತ್ತು, ತಲೆಮೇಲೆ ಮೆರಸು – ಈ ನುಡಿಗಟ್ಟುಗಳ ಅರ್ಥ ಬರೆದು, ಸ್ವಂತ ವಾಕ್ಯಗಳಲ್ಲಿ ಅವುಗಳನ್ನು ಬರೆಯಿರಿ.
ಪರದೇಶಿ = ತಬ್ಬಲಿತನ
ಸ್ವಂತ ವಾಕ್ಯ – ಕನ್ನಡನಾಡಿನಲ್ಲಿ ಕನ್ನಡಿಗರೇ ಪರದೇಶಿಗಳಾಗಿದ್ದಾರೆ.
ಮೈಗೆಹತ್ತು = ಅರ್ಥವಾಗು
ಸ್ವಂತ ವಾಕ್ಯ – ಮಾತೃಭಾಷೆಯ ಶಿಕ್ಷಣದಲ್ಲಿ ವಿಚಾರಗಳು ಚೆನ್ನಾಗಿ ಮೈಗೆಹತ್ತುವುವು.
ತಲೆಮೇಲೆ ಮೆರೆಸು = ಶ್ರೇಷ್ಠವೆಂದು ತಿಳಿ
ಸ್ವಂತ ವಾಕ್ಯ – ಇಂಗ್ಲಿಷನ್ನು ತಲೆಮೇಲೆ ಮೆರೆಸುವುದು ಕನ್ನಡಕ್ಕೆ ಎಸಗುವ ದ್ರೋಹ.
ಲೇಖನದ ಸಾರಾಂಶ ಮತ್ತು ವಿಮರ್ಶೆ
ಡಾ. ಹಾ.ಮಾ.ನಾಯಕ ಅವರ ‘ಕನ್ನಡವನ್ನು ಕಟ್ಟುವ ಕೆಲಸ’ ಎಂಬ ಈ ಲೇಖನ ಅವರು ಬೀದರ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಪದವಿಯಿಂದ ಮಾಡಿದ ಭಾಷಣದ ಸಂಗ್ರಹದ ರೂಪವಾಗಿದ್ದು ಐದು ಭಾಗಗಳಲ್ಲಿ ಇದನ್ನು ಸಂಕಲಿಸಲಾಗಿದೆ.
ಆರಂಭದಲ್ಲಿ ಲೇಖಕರು ತನ್ನ ಕನ್ನಡ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಕನ್ನಡ ಅವರ ಮೊದಲ ಪ್ರೀತಿ. ಅದು ಅವರಿಗೆ ಎಳವೆಯಿಂದಲೇ ಬಂದುದು. ಅವರ ಕನ್ನಡದ ಪ್ರೀತಿ ಮಾಸ್ತಿ, ಕುವೆಂಪು, ತೀನಂಶ್ರೀ ಅವರ ಕವಿತೆಗಳಿಂದ, ಬಿಎಂಶ್ರೀ, ಮುದವೀಡು, ಆಲೂರರ ಮಾತುಗಳಿಂದ, ಎ.ಆರ್. ಕೃಷ್ಣಶಾಸ್ತ್ರಿ, ಅನಕೃ ವಿಚಾರಗಳಿಂದ ರೂಪುಗೊಂಡು, ಗಾಂಧಿ-ವಿನೋಬಾರ ಚಿಂತನೆಗಳಿಂದ ಹರಳುಗೊಂಡಿತಂತೆ. ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ಎ.ಆರ್. ಕೃಷ್ಣಶಾಸ್ತ್ರಿಗಳ ಹೈದರಾಬಾದ್ ಸಮ್ಮೇಳದ ಅಧ್ಯಕ್ಷೀಯ ಭಾಷಣವನ್ನು ಓದಿ ಕನ್ನಡದ ಕಾರಣಕ್ಕಾಗಿ ಲೇಖಕರು ತಮ್ಮನ್ನು ಮುಡಿಪಾಗಿರಿಸಿ ಕೊಂಡರು. ಶಾಸ್ತ್ರಿಗಳ ಭಾಷಣದಲ್ಲಿ ಹೇಳಿದ ಮಾತುಗಳು ಲೇಖಕರಿಗೆ ಕನ್ನಡದ ಸ್ಥಿತಿಯನ್ನು ಚೆನ್ನಾಗಿ ಮನದಟ್ಟು ಮಾಡಿಕೊಟ್ಟಿತು.
ಎರಡನೆಯ ಭಾಗದಲ್ಲಿ ಲೇಖಕರು ಹಿಂದಿ-ಇಂಗ್ಲಿಷ್‌ಗಳು ನಮ್ಮದೇಶದ ಪ್ರಾಂತೀಯ ಭಾಷೆಗಳ ಸ್ಥಾನವನ್ನು ಆಕ್ರಮಿಸಿ ಕೊಳ್ಳುತ್ತಿರುವುದರ ಬಗ್ಗೆ ಗಮನಸೆಳೆದಿದ್ದಾರೆ. ಅವರ ಅಭಿಪ್ರಾಯದಲ್ಲಿ ಕರ್ನಾಟಕದಲ್ಲಿ ಕನ್ನಡವೇ ಪ್ರಥಮ, ಪ್ರಧಾನ, ರಾಜ ಸ್ಥಾನದಲ್ಲಿರಬೇಕು. ಉಳಿದೆಲ್ಲ ಭಾಷೆಗಳು ಸೇವಕ ಸ್ಥಾನದಲ್ಲಿರಬೇಕು. ಹಿಂದಿಯೇತರ ರಾಜ್ಯದಲ್ಲಿ ಕೇಂದ್ರಾಡಳಿತ ಸಂಸ್ಥೆಗಳು ಆಯಾ ಪ್ರಾದೇಶಿಕ ಭಾಷೆಗಳನ್ನು ಬಳಸದಿದ್ದರೆ ದ್ವೀಪಜೀವಿಗಳಾಗಿ ಉಳಿಯಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಕನ್ನಡದ ಬರವಣಿಗೆಗಳು ಕಾಣದಿರುವ ಬಗ್ಗೆ, ವಿಮಾನದೊಳಗೆ ಮತ್ತು ನಿಲ್ದಾಣದಲ್ಲಿ ನೀಡುವ ಸೂಚನೆಗಳು ಕನ್ನಡದಲ್ಲಿರದಿರುವುದರ ಬಗ್ಗೆ ಲೇಖಕರು ಬೇಸರ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಕಛೇರಿಗಳು ಇರುವ ರಾಜ್ಯದ ಭಾಷೆಯನ್ನು ಜನರೊಂದಿಗೆ ಬಳಸುವುದು ಕೇಂದ್ರ-ರಾಜ್ಯಗಳ ಸಂಬಂಧದ ವಿಚಾರದಲ್ಲಿ ಬಹುಮುಖ್ಯವೆಂದು ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ. ರೈಲ್ವೆ, ಅಂಚೆ ಮತ್ತು ತಂತಿ, ಲೈಫ್ ಇನ್ಸುರೆನ್ಸ್ ನಂತಹ ಇಲಾಖೆಗಳು ಪ್ರಾದೇಶಿಕ ಭಾಷೆಗಳ ವಿಚಾರದಲ್ಲಿ ಮಲತಾಯಿ ಧೋರಣೆ ಬೆಳೆಸಿಕೊಂಡಿರುವುದನ್ನು ಲೇಖಕರು ಆಕ್ಷೇಪಿಸಿದ್ದಾರೆ. ಎಲ್ಲಿಯವರೆಗೆ ಈ ಸಂಸ್ಥೆಗಳಲ್ಲಿ ನಮ್ಮದೇ ಭಾಷೆಯ ಬಳಕೆ ಯಾಗುವುದಿಲ್ಲವೋ ಅಲ್ಲಿಯವರೆಗೂ ಈ ಸಂಸ್ಥೆಗಳು ಜನಜೀವನದಿಂದ ದೂರ ಉಳಿಯುತ್ತದೆಂದು ಎಚ್ಚರಿಸುವ ಹಾ.ಮಾ. ನಾಯಕರು ಈ ಕಛೇರಿಗಳಲ್ಲಿ ತ್ರಿಭಾಷಾ ಸೂತ್ರ ಬಳಕೆಯಾಗಬೇಕಾದರೆ ಎಲ್ಲ ಸೂಚನೆಗಳು, ಫಾರಂಗಳು, ಎಲ್ಲ ಬರವಣಿಗೆಯ ವ್ಯವಹಾರಗಳು ಕ್ರಮವಾಗಿ ಪ್ರಾದೇಶಿಕ ಭಾಷೆ, ಹಿಂದಿ ಮತ್ತು ಇಂಗ್ಲಿಷ್‌ಗಳಲ್ಲಿರಬೇಕೆಂದಿದ್ದಾರೆ.
ಮೂರನೆಯ ಭಾಗದಲ್ಲಿ ಲೇಖಕರು ಕಲಿಕೆಯ ಭಾಷಾ ಮಾಧ್ಯಮ ಯಾವುದಿರಬೇಕೆಂಬುದನ್ನು ಚರ್ಚಿಸಿದ್ದಾರೆ. ಎಲ್ಲ ಭಾಷೆಗಳು ನಮಗೆ ಬೇಕೆಂಬುದು ಸರಿಯಾದರೂ ಒಂದು ಹಂತದವರೆಗೆ ಮಾತೃಭಾಷೆಯಲ್ಲಿ ಕಲಿತು, ಆ ಹಂತ ದಾಟಿದ ಮೇಲೆ ಬೇಕಾದ ಭಾಷೆಯಲ್ಲಿ ಕಲಿಯುವ ಅವಕಾಶವಿರಬೇಕೆಂದಿದ್ದಾರೆ. ಒಂದು ರಾಜ್ಯದಲ್ಲಿ ನೆಲೆಸಿದವರು ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಕಲಿಯುವಂತಾಗುವ ಶಿಕ್ಷಣ ಕ್ರಮವಿರಬೇಕು ಎಂಬುದು ಹಾ.ಮಾ.ನಾ. ಅವರ ಅಭಿಪ್ರಾಯ. ಪ್ರದೇಶ ಭಾಷೆಯ ಕಲಿಕೆಯು ಮಾತೃಭಾಷೆ ಕಲಿಕೆಯ ವಿರೋಧಿಯಲ್ಲ. ಇವೆರಡೂ ಪೂರಕವಾದವೆಂಬುದು ಅವರ ನಿಲುವು.
ಇಂಗ್ಲಿಷ್ ಹೊರ ಪ್ರಪಂಚವನ್ನು ನೋಡಲು ನಮಗೆ ಬೇಕು. ಆದರೆ ಅದನ್ನು ತಲೆಯ ಮೇಲೆ ಹೊತ್ತುಕೊಳ್ಳುವುದು ತಪ್ಪೆಂದು ವಾದಿಸುವ ಲೇಖಕರು ಇಂಗ್ಲಿಷ್ ಇಂದು ಸಾರ್ಥಕ ಕಲಿಕೆಯ ಭಾಷೆಯಾಗದೆ, ಪ್ರತಿಷ್ಠೆಯ ಸಂಕೇತವಾಗಿರುವುದನ್ನು ವಿವರಿಸಿ ಕಾನ್ವೆಂಟಿನ ಇಂಗ್ಲಿಷ್ ಶಿಕ್ಷಣ ನಮ್ಮ ಮಕ್ಕಳಲ್ಲಿ ಕೃತಕ ವ್ಯಕ್ತಿತ್ವವನ್ನು ಬೆಳೆಸುತ್ತಿದೆಯೆಂದು ವಿಷಾದಿಸಿದ್ದಾರೆ. ಇಂಗ್ಲಿಷನ್ನು ಭಾಷೆಯಾಗಿ ಕಲಿಸಿ, ಉಳಿದ ವಿಷಯಗಳನ್ನು ಮಾತೃಭಾಷೆಯಲ್ಲೇ ಕಲಿಯಬೇಕೆಂಬುದು ಹಾ.ಮಾ.ನಾ. ಅವರ ಅಭಿಪ್ರಾಯವಾಗಿದೆ. ಕನ್ನಡದ ಮೂಲಕ ಕಲಿತೂ ಶ್ರೇಷ್ಠ ವಿಜ್ಞಾನಿಯಾಗಿರುವ ಡಾ।। ಸಿ.ಎನ್.ಆರ್. ರಾವ್ ಅವರ ಉದಾಹರಣೆಯನ್ನು ಲೇಖಕರು ನೀಡಿದ್ದಾರೆ.
ಅಲ್ಲದೆ ಪ್ರತಿಯೊಬ್ಬ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಓದಿಸಲು ಖಾಸಗಿ ಶಾಲೆಗಳತ್ತ ಹೊರಳುವುದಕ್ಕೆ ಮುಖ್ಯ ಕಾರಣ ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿ ಎಂದಿರುವ ಲೇಖಕರು ಕುಸಿದು ಬೀಳುತ್ತಿರುವ ಕಟ್ಟಡಗಳು, ದೊಡ್ಡಿಯಂತಹ ತರಗತಿಗಳು, ಅಧ್ಯಾಪಕರಿಲ್ಲದ ತರಗತಿಗಳು, ಶಿಸ್ತಿಲ್ಲದ ವ್ಯವಸ್ಥೆ, ಮೂತ್ರದ ವಾಸನೆಯಿಂದ ಕೂಡಿರುವ ಸರ್ಕಾರಿ ಶಾಲೆಗಳತ್ತ ತಿರುಗಿ ನೋಡದೆ ಪೋಷಕರು ಖಾಸಗಿ ಶಾಲೆಗಳಿಗೆ ಹೋಗುತ್ತಿರುವುದು ನ್ಯಾಯವಾಗಿಯೇ ಇದೆ ಎಂದು ಸರ್ಕಾರವನ್ನು ಕುಟುಕಿದ್ದಾರೆ. ಈ ಸ್ಥಿತಿ ಉತ್ತಮಗೊಳ್ಳುವವರೆಗೂ ಕನ್ನಡ ಆಕರ್ಷಕವೆನಿಸುವುದಿಲ್ಲ. ಇಂಗ್ಲಿಷ್ ಮೂಲಕವಾದ ಶಿಕ್ಷಣಕ್ರಮವು ಮಕ್ಕಳನ್ನು ಕುಂಡದ ಗಿಡಗಳನ್ನಾಗಿಸುತ್ತದೆಂದು ವಿವರಿಸಿದ್ದಾರೆ.
ಹಾ.ಮಾ. ನಾಯಕರು ಈ ಲೇಖನದ ನಾಲ್ಕನೆಯ ಭಾಗದಲ್ಲಿ ರಾಜ್ಯದಲ್ಲಿ ಸ್ಥಾಪಿತವಾಗುವ ಉದ್ಯಮಗಳಲ್ಲಿ ಕೆಲಸ ಸಿಗದಿರುವ ಬಗ್ಗೆ ಪ್ರಸ್ತಾಪಿಸಿ, ಕನ್ನಡ ನಾಡಿನಲ್ಲಿ ಕನ್ನಡಿಗರೇ ತಬ್ಬಲಿಗಳಾಗುತ್ತಿದ್ದಾರೆಂದಿದ್ದಾರೆ. ಒಂದು ಹಂತದವರೆಗಿನ ಉದ್ಯೋಗಾವಕಾಶಗಳನ್ನು ಸ್ಥಳೀಯರಿಗೇ ನೀಡಬೇಕೆಂಬ ನಿಯಮವನ್ನು ಗಾಳಿಗೆ ತೂರಿರುವ ಉದ್ಯಮಗಳು ಉದ್ಯೋಗ ನೀಡಲು ವಿಫಲವಾಗುವುದಾದರೆ ಏಕೆ ಸ್ಥಾಪಿತಗೊಳ್ಳಬೇಕೆಂದು ಅವರು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರದ ಉದ್ಯೋಗಗಳನ್ನು ಖಾಸಗಿ ಉದ್ಯಮದ ಉದ್ಯೋಗಗಳನ್ನು ನೆರೆಯವರು ಆಕ್ರಮಿಸಿಕೊಳ್ಳುತ್ತಿರುವುದರಿಂದ ಕನ್ನಡಿಗರು ಆತಂತ್ರ ಸ್ಥಿತಿ ತಲುಪಿದ್ದಾರೆ. ಕನ್ನಡಿಗರ ತಾಳ್ಮೆಗೂ ಒಂದು ಮಿತಿಯಿದೆ. ಅದನ್ನು ಯಾರೂ ಪ್ರಶ್ನಿಸಬಾರದೆಂದು ಲೇಖಕರು ಹೇಳಿದ್ದಾರೆ.
ಲೇಖನದ ಕೊನೆಯ ಭಾಗದಲ್ಲಿ ಲೇಖಕರು ಕನ್ನಡವು ನಮ್ಮ ಆಡಳಿತದಲ್ಲಿ, ಶಿಕ್ಷಣದಲ್ಲಿ, ಜನಜೀವನದಲ್ಲಿ ಆವರಿಸಿಕೊಳ್ಳಬೇಕೆಂಬ ಕರೆಕೊಟ್ಟಿದ್ದಾರೆ. ಎಲ್ಲ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಹೊರಿಸಿ, ಕನ್ನಡಿಗರು ತಮ್ಮ ಹೊಣೆಯಿಂದ ಜಾರಿಕೊಳ್ಳಬಾರದೆಂದಿದ್ದಾರೆ. ಪ್ರತಿಯೊಬ್ಬ ಕನ್ನಡಿಗರೂ ಕನ್ನಡ ಹೇಳುವುದಕ್ಕೆ ಮಾತ್ರವಲ್ಲ, ಅನುಸರಿಸುವುದಕ್ಕೂ ಇದೆ ಎಂಬುದನ್ನು ಮರೆಯಬಾರದು. ನಮ್ಮ ಮಕ್ಕಳು ಓದುತ್ತಿರುವ ಶಾಲೆ, ನಾವು ಓದುವ ಪತ್ರಿಕೆ, ನಾವು ಬರೆಯುವ ಚೆಕ್, ಕಾಗದ ಪತ್ರಗಳು ಕನ್ನಡ ಭಾಷೆಯಲ್ಲಿವೆಯೇ ಎಂದು ಪ್ರಶ್ನಿಸಿಕೊಳ್ಳಬೇಕೆಂದಿದ್ದಾರೆ. ಅವುಗಳ ಉತ್ತರ ನಮ್ಮನ್ನು ಚುಚ್ಚದಿದ್ದರೆ ಮಾತ್ರ ನಾವು ಕನ್ನಡವನ್ನು ಕುರಿತು ಮಾತಾಡಲು ಯೋಗ್ಯರೆಂದಿರುವ ಹಾ.ಮಾ. ನಾಯಕರು ಕನ್ನಡಿಗರು ಮೊದಲು ಕನ್ನಡದವರಾಗಬೇಕೆಂದಿದ್ದಾರೆ.
ಶಬ್ದಾರ್ಥ: ಸ್ಪುರಿಸು-ಮಿಂಚು, ಬುದ್ದಿಗೆ ಗೋಚರಿಸು; ಖಿಲ-ಪಾಳುಬೀಳು, ಶೂನ್ಯವಾಗು; ಖೇದ – ದುಃಖ; ಕ್ರೋಧ-ಕೋಪ; ಕುತ್ತು-ಅಪಾಯ; ಪರದೇಶಿ-ದಿಕ್ಕಿಲ್ಲದವರು, ಹೊರನಾಡಿನವರು; ದುರ್ದೈವ-ಕೆಟ್ಟ ಅದೃಷ್ಟ, ದೌರ್ಭಾಗ್ಯ; ಪ್ರತಿಷ್ಠೆ-ಘನತೆ, ಗರ್ವ: ಕೃತಕ-ಸಹಜವಲ್ಲದ; ತೀವ್ರತರ-ಹರಿತ, ಉಗ್ರವಾದ; ಅಂಗುಲ-ಒಂದು ಇಂಚು.
ಟಿಪ್ಪಣಿಗಳು
೧. ಡಾ|| ಸಿ.ಎನ್.ಆರ್. ರಾವ್
ತಮ್ಮ ವೈಜ್ಞಾನಿಕ ಸಂಶೋಧನೆಗಳಿಂದ ವಿಶ್ವದ ಗಮನಸೆಳೆದಿರುವ ಕನ್ನಡಿಗ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಕೀರ್ತಿ ಇವರದು. ಭಾರತ ಸರ್ಕಾರದಿಂದ ಪದ್ಮವಿಭೂಷಣ ಮತ್ತು ದೇಶದ ಅತ್ಯುಚ್ಚ ಗೌರವವಾದ ‘ಭಾರತರತ್ನ’ ಪುರಸ್ಕಾರ ಪಡೆದಿರುವ ಹೆಮ್ಮೆಯ ಸುಪುತ್ರರು.
೨. ರಾಜಮನ್ನಾರ್ ಸಮಿತಿ:
ಕೇಂದ್ರ ಮತ್ತು ರಾಜ್ಯಗಳ ಸಂಯುಕ್ತ ವ್ಯವಸ್ಥೆಯ ಸಂಬಂಧ ನಿಷ್ಕರ್ಷೆಗಾಗಿ ತಮಿಳುನಾಡು ಸರ್ಕಾರವು 1969ರ ಸೆಪ್ಟೆಂಬರ್‌ನಲ್ಲಿ ಡಾ|| ಪಿ.ವಿ. ರಾಜಮನ್ನಾರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ನೇಮಿಸಿತು. ಭಾಷೆಯನ್ನು ಒಳಗೊಂಡಂತೆ ಇಪ್ಪತ್ತಕ್ಕೂ ಹೆಚ್ಚಿನ ಅಂಶಗಳನ್ನಾಧರಿಸಿ ಸಮಿತಿಯು ಮೇ. 1971ರಲ್ಲಿ ವರದಿಯನ್ನು ಸಲ್ಲಿಸಿತು ಹಾ.ಮಾ. ನಾಯಕರು ತಮ್ಮ ಲೇಖನದಲ್ಲಿ ಭಾಷಾ ಸಂಬಂಧವನ್ನು ಚರ್ಚಿಸುವಾಗ ಸಾಂದರ್ಭಿಕವಾಗಿ ರಾಜಮನ್ನಾರೆ ಸಮಿತಿಯ ಉಲ್ಲೇಖ ಮಾಡಿರುತ್ತಾರೆ.
೩. ಎ.ಆರ್. ಕೃಷ್ಣಶಾಸ್ತ್ರಿ:
ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆನಿಸಿದ್ದ ಪ್ರೊ. ಎ.ಆರ್. ಕೃಷ್ಣಶಾಸ್ತ್ರಿಗಳು (ಮತ್ತೊಬ್ಬರು ಟಿ.ಎಸ್. ವೆಂಕಣ್ಣಯ್ಯ) ಚಿಕ್ಕಮಗಳೂರು ಸಮೀಪದ ಅಂಬಳೆ ಗ್ರಾಮದವರು. ತಮ್ಮ ಘನವಿದ್ವತ್ತಿಗೆ ಖ್ಯಾತರಾದವರು: ಶ್ರೀಪತಿಯ ಕಥೆಗಳು, ಕಥಾಮೃತ, ವಚನ ಭಾರತ, ನಿರ್ಮಲ ಭಾರತಿ ಮುಂತಾದ ಕೃತಿಗಳನ್ನು ರಚಿಸಿರುವರು. ಹರಿಶ್ಚಂದ್ರ ಕಾವ್ಯ ಸಂಗ್ರಹ, ಕವಿಜಿಹ್ವಾಬಂಧನ, ಕನ್ನಡ ಕೈಪಿಡಿ, ಭಾಸಕವಿ, ಬಂಕಿಮಚಂದ್ರ, ಸರ್ವಜ್ಞ ಕವಿ ಇತ್ಯಾದಿ ಕೃತಿಗಳನ್ನು ಶಾಸ್ತ್ರೀಯ ರೀತಿಯಲ್ಲಿ ಸಂಪಾದಿಸಿಕೊಟ್ಟಿದ್ದಾರೆ. 1941ರಲ್ಲಿ ಹೈದರಾಬಾದ್‌ನಲ್ಲಿ ನಡೆದ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿರಿ:
೧. ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿಯಾದವರು ……………
ಡಾ. ಸಿ.ಎನ್.ಆರ್. ರಾವ್
೨. ನಮ್ಮ ದೇಶದಲ್ಲಿ ಖಿಲವಾಗಿ ಹೋದ ಧರ್ಮ……………
ಬೌದ್ಧ
೩. ಕರ್ನಾಟಕದಲ್ಲಿ ಕನ್ನಡವೇ…………..
ಪ್ರಥಮ
೪. ಬದುಕಿಗಿಂತ ದೊಡ್ಡದು…………..
ಭಾಷೆ
೫. ಕರ್ನಾಟಕದ ಆನೇಕ ಕಡೆ ಅಲ್ಪಸಂಖ್ಯಾತರಾಗುತ್ತಿರುವವರು….…….
ಕನ್ನಡಿಗರು
೬. ……….….. ನಮಗೆ ಪ್ರಪಂಚಕ್ಕಿರುವ ಕಿಟಕಿ.
ಇಂಗ್ಲಿಷ್
೭. ಹಾ.ಮಾ. ನಾಯಕರ ಪ್ರಕಾರ………… ಮೊದಲು ಕನ್ನಡದವರಾಗಬೇಕು.
ಕನ್ನಡಿಗರು
೮. ………….ತಮ್ಮ ರಾಜ್ಯದಲ್ಲಿ ತಾವೇ ತಬ್ಬಲಿಗಳಾಗುತ್ತಿರುವವರು.
ಕನ್ನಡಿಗರು
೯. ಎ.ಆರ್. ಕೃಷ್ಣಶಾಸ್ತ್ರಿಗಳು………. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಹೈದರಾಬಾದ್
೧೦. ಬದುಕು ………….. ಬಿಟ್ಟು ಇರುವುದಿಲ್ಲ.
ಭಾಷೆಯನ್ನು
೧೧. ಸ್ಥಳೀಯ ಭಾಷೆ ಕಲಿಯದ ಅನ್ಯಭಾಷಿಗರು……………ಆಗುತ್ತಾರೆ.
ದ್ವೀಪಜೀವಿ